ಶಿಶಿರಕಾಲ
ಶಿಶಿರ್ ಹೆಗಡೆ
ಇಂದಿನ ಜನನ-ಮರಣ ಪ್ರಮಾಣದದ ಬದಲಾವಣೆಯಿಂದಾಗಿ ಇನ್ನು 25 ವರ್ಷದಲ್ಲಿ ಜಗತ್ತಿನ ಜನಸಂಖ್ಯಾ ಮಿಶ್ರಣ ವಿಚಿತ್ರವಾಗಿ ಬದಲಾಗಲಿದೆ. 2050 ಆಗುವಾಗ ಜಗತ್ತಿನಲ್ಲಿ 60 ವಯಸ್ಸು ದಾಟಿದವರ ಸಂಖ್ಯೆ ೧೪ ವರ್ಷಕ್ಕಿಂತ ಚಿಕ್ಕ ವಯಸ್ಸಿನವರ ಸಂಖ್ಯೆಯನ್ನು ಮೀರಲಿದೆ. ಈಗ ಹೇಗೆ ಜನಸಂಖ್ಯೆ ಅತ್ಯಂತ ಹೆಚ್ಚಿದೆಯೋ, ಇಳಿಯುವಾಗ ಮುದುಕರ ಸಂಖ್ಯೆಯ ಅನುಪಾತ ವಿಪರೀತ ಹೆಚ್ಚಲಿದೆ.
ಹೋಮೋ ಸೇಪಿಯನ್ ಎಂಬ ಮನುಷ್ಯನ ಉಗಮ ಮೂರು ಲಕ್ಷ ವರ್ಷದ ಹಿಂದೆ ಎಂಬುದು ಈಗ ನಿರ್ವಿವಾದ. ಹೋಮೋ ಸೇಪಿಯನ್ ಎನ್ನುವುದು ‘ಆಡಮ್-ಈವ್’ರಂತೆ ಹುಟ್ಟಿರುವುದಲ್ಲದ್ದರಿಂದ ಇಂಥದ್ದೇ ವರ್ಷ, ದಿನ, ಗಂಟೆ, ನಿಮಿಷಕ್ಕೆ ಮನುಷ್ಯ ಹುಟ್ಟಿದ ಎಂಬುದಿಲ್ಲ. ಬದಲಿಗೆ ನಾಲ್ಕು ನೂರು ಕೋಟಿ ವರ್ಷದ ಜೀವ ವಿಕಸನದ ದೀರ್ಘಪಥದಲ್ಲಿ ಮನುಷ್ಯ ಇಷ್ಟು ವರ್ಷ ಮೊದಲು ಹುಟ್ಟಿದ ಎನ್ನುವುದು ಮಾರ್ಗಮಧ್ಯ ನಾವಿಟ್ಟುಕೊಂಡ ಕಿಲೋಮೀಟರ್ ಕಲ್ಲಿನಂತೆ.
ಅಷ್ಟೊಂದು ಕೋಟಿ ವರ್ಷಗಳ ಜೀವ ವಿಕಸನದ ಮುಂದೆ, ಮನುಷ್ಯ ರೂಪವನ್ನು ನಾವು ಪಡೆದಾದ ಮೂರು ಲಕ್ಷ
ವರ್ಷದ ಮುಂದೆ ಒಬ್ಬ ಮನುಷ್ಯನ ಜೀವಿತಾವಧಿ ಕಾಲಮಾಪಕದಲ್ಲಿ ನಗಣ್ಯ. ಆದರೆ ಕಳೆದ ಅರ್ಧ ಶತಮಾನದಲ್ಲಿ,
ಅದರಲ್ಲಿಯೂ ಕಳೆದ ಮೂರು ದಶಕದಲ್ಲಿ ಜಗತ್ತು ಬದಲಾದ ರೀತಿ ಅನನ್ಯ.
ಫೋನ್, ವಿಮಾನ, ಇಂಟರ್ನೆಟ್, ಮೊಬೈಲ್, ಕಾರು, ರೈಲು, ಹಡಗು, ಕಾರ್ಖಾನೆಗಳು ಇವೆಲ್ಲ ತಂದ ಬದಲಾವಣೆ ಅಸಾಧಾರಣವಾದದ್ದು. ಭೂಮಿಯ ಗಾತ್ರದೆದುರು ನಗಣ್ಯವಾಗಿರುವ ನಮಗೆಲ್ಲ ಈಗ ಭೂಮಿಯೇ ಚಿಕ್ಕದೆನಿಸಲು ಇವೆಲ್ಲ ಕಾರಣವಾಗಿವೆ. ನಿಮಗೆ ಈಗ 30-35 ವರ್ಷಕ್ಕಿಂತ ಹೆಚ್ಚಿನ ವಯಸ್ಸಾಗಿದೆ ಎಂದರೆ ನೀವು ಪುಣ್ಯವಂತರು. ಏಕೆಂದರೆ ಇಂಥದೊಂದು ಅಭೂತಪೂರ್ವ ಬದಲಾವಣೆಗೆ ನಮ್ಮ ಬದುಕು ಸಾಕ್ಷಿಯಾಗಿದೆ. ಟೆಲಿಗ್ರಾಂ ನಿಂದ ಮೊಬೈಲ್ ವಾಟ್ಸಾಪ್, ಕಾಲ್ನಡಿಗೆಯಿಂದ ಸೂಪರ್ ಫಾಸ್ಟ್ ರೈಲು, ಕಾರು ವಿಮಾನದವರೆಗಿನ ಬದಲಾವಣೆ ಯೋಚಿಸಿದರೆ ರೋಮಾಂಚನ.
ಇದು ಹಿಂದೆಂದೂ ಸಂಭವಿಸದ ಬದಲಾವಣೆ. ಹಿಂದೆ ರಾಜರ ಕಾಲ, ವೇದ ಕಾಲ ಇತ್ಯಾದಿ ಯಾವುದಕ್ಕೂ ಹೋಲಿಸ ಲಾಗದ ಬದಲಾವಣೆ ಇದು. ನೀವು ಇದನ್ನು ಗ್ರಹಿಸಿರಲೂಬಹುದು. ಇತೀಚೆಗೆ ‘ಜನಸಂಖ್ಯಾಸ್ಪೋಟ’ ಎಂಬ ಶಬ್ದದ ಬಳಕೆ ಅಷ್ಟಾಗಿ ಕೇಳಿಬರುವುದಿಲ್ಲ. ನಾವು ಶಾಲೆಗೆ ಹೋಗುವ ಸಮಯದಲ್ಲಿ ವರ್ಷಕ್ಕೆ ಒಂದೋ ಎರಡೋ ಚರ್ಚಾಸ್ಪರ್ಧೆ, ಭಾಷಣ ಸ್ಪರ್ಧೆ ಇತ್ಯಾದಿಗೆ ಇದೇ ವಿಷಯವಾಗಿತ್ತು.
‘ನಾವಿಬ್ಬರು-ನಮಗಿಬ್ಬರು, ನಮಗೊಬ್ಬರು’ ಇತ್ಯಾದಿ ಜಾಹೀರಾತುಗಳು ಕೂಡ ಕ್ರಮೇಣ ನಿಂತಿವೆ. ಹಾಗಾದರೆ ಏನು ಈ ಸ್ಪೋಟ- ಧಮಾಕಾ ಎಲ್ಲಾ ನಿಂತುಬಿಟ್ಟಿತಾ? ಅತ್ತ ನೋಡಿದರೆ ಭಾರತ ಈಗ ಜನಸಂಖ್ಯೆಯಲ್ಲಿ ಮೊದಲ ಸ್ಥಾನ. ನಗರಗಳು ಜನಸಾಗರವಾಗಿದೆ- ಜನಸಂಖ್ಯೆಯ ಒಳಹರಿವೇ ನಿರಂತರವಾಗಿದೆ.
ಅದೇ ಸಮಯದಲ್ಲಿ ಇಂದು ವೈರುಧ್ಯವೂ ಕಾಣಿಸುತ್ತಿದೆ. ನೀವು ಬೆಂಗಳೂರಿನಲ್ಲಿ ವಾಸಿಸುವವರಾದರೆ ಅಥವಾ
ಇತ್ತೀಚೆಗೆ ಹೋದಲ್ಲಿ ಇದನ್ನಂತೂ ಗ್ರಹಿಸಿಯೇ ಇರುತ್ತೀರಿ. ಇಂದು ಬೆಂಗಳೂರಿನಂಥ ಮಹಾನಗರಗಳಲ್ಲಿ ಪ್ರತಿ ಯೊಂದು ಮುಖ್ಯರಸ್ತೆಯಲ್ಲಿಯೂ ಒಂದೊಂದು ಐವಿಎಂ, ಫರ್ಟಿಲಿಟಿ ಸೆಂಟರ್‌ಗಳು ತಲೆಯೆತ್ತುತ್ತಿವೆ.
ಇವು ಏನೋ ಬೇರೆಯ ಕಥೆಯನ್ನೇ ಹೇಳುತ್ತಿವೆ. ಇವೆಲ್ಲ ಬೆಳವಣಿಗೆ ಕೇವಲ ಸಾಫ್ಟ್ ವೇರ್ ಕೆಲಸ ಮಾಡುವವರು- ಕುಳಿತು ಕೆಲಸ ಮಾಡುವವರು, ಪಿಜ್ಜಾ-ಬರ್ಗರ್ ತಿನ್ನುವವರಷ್ಟೇ ಕಾರಣವಾಗಿ ಉಳಿದಿಲ್ಲ. ಭಾರತದಲ್ಲಿ ಇಂದು ಫರ್ಟಿಲಿಟಿ ಸೆಂಟರ್ ವ್ಯವಸ್ಥೆ ‘ನಾಲ್ಕು ಸಾವಿರ ಕೋಟಿ ರುಪಾಯಿ’ ವ್ಯವಹಾರ!
ಇದು ಮುಂದಿನ ಹತ್ತು ವರ್ಷದಲ್ಲಿ ಪ್ರತಿ ವರ್ಷಕ್ಕೆ ಶೇ.20ರಷ್ಟು ಏರಿಕೆಯಾಗಬಹುದೆನ್ನುವುದು ಫೋರ್ಬ್ಸ್ ಲೆಕ್ಕ.
ಹೂಡಿಕೆಗೆ ಹೇಳಿಮಾಡಿಸಿದ ಅವಕಾಶ. ಹಾಗೆ ನೋಡಿದರೆ ಸದ್ಯ ಭಾರತವೇ ವಾಸಿ. ಅದೆಷ್ಟೋ ದೇಶಗಳಲ್ಲಿನ ಸ್ಥಿತಿಯು ಅಲ್ಲಿನ ಸರಕಾರಗಳೇ ತಲೆಕೆಡಿಸಿಕೊಳ್ಳುವಷ್ಟು ಹದಗೆಟ್ಟಿದೆ. ಹಾಗಾದರೆ ಜನಸಂಖ್ಯೆ ಏನಾಗುತ್ತಿದೆ? ಹೆಚ್ಚಾಗುತ್ತಿದೆಯೋ ಕಡಿಮೆಯಾಗುತ್ತಿದೆಯೋ?
ಮನುಷ್ಯ ಸಂತತಿ ಸಂಪೂರ್ಣ ನಶಿಸಿ ಹೋಗುವ ಮಟ್ಟಕ್ಕೆ ಹಲವಾರು ಬಾರಿ ತಲುಪಿದ್ದು ಇತಿಹಾಸ. ಕೇವಲ 75 ಸಾವಿರ ವರ್ಷದ ಹಿಂದೆ ಇಂಡೋನೇಷ್ಯಾದ ಮೌಂಟ್ ಟೋಬಾ ಎಂಬ ಜ್ವಾಲಾಮುಖಿ ಸ್ಪೋಟಗೊಂಡ ನಂತರ ಜಗತ್ತಿನ ಜನಸಂಖ್ಯೆ ಕೆಲವೇ ಸಾವಿರಕ್ಕೆ ಬಂದುಮುಟ್ಟಿತ್ತು. ಜಗತ್ತಿನ ಎಡೆಯ ಜನರ ಜೀನ್‌ಗಳ ವೈವಿಧ್ಯ ಅಭ್ಯಸಿಸಿ ಹಿಂದಕ್ಕೆ ಲೆಕ್ಕ ಹಾಕಿದರೆ 75 ಸಾವಿರ ವರ್ಷದ ಹಿಂದಿನ ಕೆಲವೇ ಸಾವಿರ ಜನರಿಗೆ ಅದು ಹೋಗಿ ನಿಲ್ಲುತ್ತದೆ. ಈ ರೀತಿಯ ಪುರಾವೆಗಳು ಈಗ ಲಭ್ಯವಿರುವುದರಿಂದ ಇವೆಲ್ಲ ಖಾತ್ರಿ ವಿಷಯಗಳು.
ಇವತ್ತು ಭೂಮಿಯ ಮೇಲೆ ಇದರ ಇತಿಹಾಸದಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಇದೆ. 820 ಕೋಟಿ! ಇವೆಲ್ಲವೂ ಹಾಗೆಯೇ. ಬದಲಾಗಲು ಬಹಳ ಸಮಯ ಬೇಕಿಲ್ಲ. ಬಹಳ ಹಿಂದಲ್ಲ- 1980ರಲ್ಲಿ ಜನಸಂಖ್ಯೆ ಈಗಿನ ಅರ್ಧ ದಷ್ಟಿತ್ತು. ಮನುಷ್ಯ 400 ಕೋಟಿಯಿಂದ 800 ಕೋಟಿಯಾಗಲು ತೆಗೆದುಕೊಂಡ ಸಮಯ ಅತ್ಯಂತ ಚಿಕ್ಕದು.
ನಾವು ಹಿಂದೆಂದೂ ಈ ಪ್ರಮಾಣದಲ್ಲಿ ಸಂಖ್ಯಾವೃದ್ಧಿಯಾಗಿರಲಿಲ್ಲ. ಕಳೆದ ಏಳು ಸಾವಿರ ವರ್ಷದಿಂದ ಜನಸಂಖ್ಯೆ
ಹೆಚ್ಚುತ್ತಲೇ ಇದೆ. ಪ್ಲೇಗ್ ಸಮಯದಂದು ಬಿಟ್ಟರೆ ಬಾಕಿಯಾವ ಯುದ್ಧ ಮಹಾಯುದ್ಧಗಳು, ಸಾಂಕ್ರಾಮಿಕಗಳು
ಜನಸಂಖ್ಯೆಯ ಏರಿಕೆಯ ಪ್ರಮಾಣವನ್ನು ತಗ್ಗಿಸಿಲ್ಲ, ಬದಲಿಗೆ ಹೆಚ್ಚಿಸಿವೆ.
ಬೆಳೆಯುವ ನಗರಗಳ ವೇಗವನ್ನು ಕಂಡಾಗಲೆಲ್ಲ, ಕೃಷಿ ಭೂಮಿ, ಕೆರೆಗಳಲ್ಲಿ ಕಟ್ಟಡಗಳು ನಿಂತದ್ದು ಕಂಡಾಗಲೆಲ್ಲ
ಮುಂದೇನಾಗಬಹುದು ಎಂಬ ಪ್ರಶ್ನೆ ನಮ್ಮೆಲ್ಲರಲ್ಲಿ ಏಳುತ್ತದೆ. 820 ಕೋಟಿಯಿದ್ದ ಜನಸಂಖ್ಯೆ ಇನ್ನೊಂದು ಐವತ್ತೋ ನೂರೋ ವರ್ಷದಲ್ಲಿ ಒಂದೂವರೆ ಸಾವಿರ ಕೋಟಿಯಾಗಬಹುದೇನೋ ಎನಿಸುತ್ತದೆ. ಆಮೇಲೆ ಮುಂದೊಂದು ದಿನ ಒಬ್ಬರ ಮೇಲೊಬ್ಬರು ಬದುಕುವ ಸ್ಥಿತಿ ನಿರ್ಮಾಣವಾಗಬಹುದೇನೋ ಎನಿಸುತ್ತದೆ.
ಆದರೆ ಅಸಲಿಗೆ ಹಾಗಾಗುವುದಿಲ್ಲ ಎನ್ನುವ ವಿಚಾರ ಬಹುತೇಕ ಪಕ್ಕಾ ಆಗಿದೆ. ಈಗ ಜನಸಂಖ್ಯೆ ಮಗ್ಗುಲು ಬದಲಿಸು
ತ್ತಿರುವುದು ಸ್ಪಷ್ಟವಾಗಿದೆ. ಹಾಗಂತ 820 ಕೋಟಿಯಿದ್ದ ಜನಸಂಖ್ಯೆ ನಾಳೆಯಿಂದಲೇ ಕಡಿಮೆಯಾಗುತ್ತದೆ ಎಂದಲ್ಲ.
ಅಂದಾಜಿಸುವಂತೆ ಈ ಸಂಖ್ಯೆ ಅತಿಹೆಚ್ಚೆಂದರೆ 900ರಿಂದ ಸಾವಿರ ಕೋಟಿ ಮುಟ್ಟಬಹುದು. ಅದಾದ ಮೇಲೆ ಕ್ರಮೇಣ ಇಳಿಮುಖ ಆರಂಭವಾಗಲಿಕ್ಕಿದೆ. ಆ ಇಳಿಮುಖಕ್ಕೆ ಕಾರಣವಾಗುವ ಪ್ರಕ್ರಿಯೆಗಳು ಈಗ ನಮ್ಮ ನಡುವೆಯೇ
ನಡೆಯುತ್ತಿದೆ! ಹೇಗೆ? ವಿವರಿಸುತ್ತೇನೆ ಓದಿ.
1960ರಿಂದ ಇಲ್ಲಿಯವರೆಗೆ ಈ ಪ್ರಮಾಣದಲ್ಲಿ ಜನಸಂಖ್ಯಾ ವೃದ್ಧಿಯಾಗುತ್ತಿರುವಾಗ, ಅದೇ ಸಮಯದಲ್ಲಿ
ಮನುಷ್ಯ ಫಲವತ್ತತೆ (Fertility) ಮಾತ್ರ ಇಳಿಮುಖವಾಗುತ್ತಿದೆ, ಇವತ್ತಿಗೂ. ಇದರರ್ಥ ಜನಸಂಖ್ಯೆ ಹೆಚ್ಚುತ್ತಿರು ವಾಗಲೇ ಹುಟ್ಟುವ ಜನರು ಮಕ್ಕಳನ್ನು ಹುಟ್ಟಿಸುವ ಪ್ರಮಾಣ ತಗ್ಗುತ್ತಲೇ ಬಂದಿದೆ. ಜಗತ್ತಿನ ಜನಸಂಖ್ಯೆ ಅತ್ಯುಚ್ಚ ವಾಗಿರುವ ಇದೇ ಸಮಯದಲ್ಲಿ ಮನುಷ್ಯ ಎಂಬ ಜೀವ ತಳಿಯ ಪುನರುತ್ಪತ್ತಿಯ ಸಾಮರ್ಥ್ಯ ಇಂದು ತೀರಾ ಕುಗ್ಗಿದೆ. ಸುಮ್ಮನೆ ಅಂದಾಜಿಸಿಕೊಳ್ಳಲಿಕ್ಕೆ ಒಂದಿಷ್ಟು ಲೆಕ್ಕಾಚಾರವನ್ನು ಕೊಡುತ್ತೇನೆ.
ಚೀನಾ ದೇಶ ಈಗ ಜನಸಂಖ್ಯೆಯಲ್ಲಿ ಜಗತ್ತಿನ ಎರಡನೇ ದೊಡ್ಡ ದೇಶ. ಅಲ್ಲಿನ ಈಗಿನ ಸಂತಾನೋತ್ಪತ್ತಿಯ ಪ್ರಮಾಣ ವನ್ನು ತೆಗೆದುಕೊಂಡು ಲೆಕ್ಕಹಾಕಿದರೆ 2100ನೇ ಇಸವಿಯಾಗುವವರೆಗೆ, 140 ಕೋಟಿಯಿರುವ ಈಗಿನ
ಜನಸಂಖ್ಯೆ 70 ಕೋಟಿಗೆ ಇಳಿಯಲಿದೆ. ಇದು ಸದ್ಯದ ಜನನ ಪ್ರಮಾಣವನ್ನು ಇಟ್ಟು ಹಾಕಿದ ಲೆಕ್ಕ. ವರ್ಷ ಕಳೆದಂತೆ ಅದು ಕೂಡ ಇಳಿಮುಖವಾಗುತ್ತಿದೆ. 75 ವರ್ಷದಲ್ಲಿ 70 ಕೋಟಿ ನಿವ್ವಳ ಇಳಿಕೆ!! ದಕ್ಷಿಣ ಕೊರಿಯಾ, ಪೋಲೆಂಡ್, ಜಪಾನ್, ಇಟಲಿ, ಬಹುತೇಕ ಯುರೋಪಿಯನ್ ದೇಶಗಳ ಜನಸಂಖ್ಯೆ ಈಗಿನ ಅರ್ಧವಾಗಲಿದೆ. ಇದು ಊಹೆಯಲ್ಲ- ಖಚಿತ ಲೆಕ್ಕಾಚಾರ. ಇನ್ನುಳಿದಂತೆ ಅಮೆರಿಕ ಮೊದಲಾದ ಮುಂದುವರಿದ ದೇಶಗಳಲ್ಲಿ ಜನನ ಪ್ರಮಾಣ ಈಗಾಗಲೇ
ಗಣನೀಯವಾಗಿ ತಗ್ಗಿದೆ. ಭಾರತದಲ್ಲಿ ಕೂಡ. ಭಾರತದಲ್ಲಿ ಕೆಲಸಕ್ಕೆ ಸೇರಿಕೊಳ್ಳುವವರ ಸಂಖ್ಯೆ ೨೦೧೭ರಿಂದ ಪ್ರತಿ ವರ್ಷ ಇಳಿಮುಖವಾಗುತ್ತಿದೆ!
ಇಂದಿನ ಜನನ-ಮರಣ ಪ್ರಮಾಣದದ ಬದಲಾವಣೆಯಿಂದಾಗಿ ಇನ್ನೊಂದು 25 ವರ್ಷದಲ್ಲಿ ಜಗತ್ತಿನ ಜನಸಂಖ್ಯಾ
ಮಿಶ್ರಣ ವಿಚಿತ್ರವಾಗಿ ಬದಲಾಗಲಿದೆ. 2050 ಆಗುವಾಗ ಜಗತ್ತಿನಲ್ಲಿ 60 ವಯಸ್ಸು ದಾಟಿದವರ ಸಂಖ್ಯೆ 14 ವರ್ಷ ಕ್ಕಿಂತ ಚಿಕ್ಕ ವಯಸ್ಸಿನವರ ಸಂಖ್ಯೆಯನ್ನು ಮೀರಲಿದೆ. ಈಗ ಹೇಗೆ ಜನಸಂಖ್ಯೆ ಅತ್ಯಂತ ಹೆಚ್ಚಿದೆಯೋ, ಇಳಿಯು ವಾಗ ಮುದುಕರ ಸಂಖ್ಯೆಯ ಅನುಪಾತ (ಇಂದಿನ ತಗ್ಗಿದ ಜನನ ಪ್ರಮಾಣದಿಂದಾಗಿ) ವಿಪರೀತ ಹೆಚ್ಚಲಿದೆ. ಈ ಬದಲಾವಣೆಯಿದೆಯಲ್ಲ- ಅದು ಬೆಳೆಯುವ ಇಂದಿನ ಜಗತ್ತಿನ ತಾಳಮೇಳಕ್ಕೆ ಹೊಂದುವುದಿಲ್ಲ.
ಏಕೆಂದರೆ ನಮ್ಮದು ಸದ್ಯ ಏರುಮುಖ ಜನಸಂಖ್ಯೆಗೆ, ಅದಕ್ಕನುಗುಣವಾಗಿ ಪೂರೈಕೆಗೆ ಹೊಂದಿಕೊಂಡ ವ್ಯವಸ್ಥೆ.
ಈಗಿರುವ ವ್ಯವಸ್ಥೆಯಲ್ಲಿ ಇಂದಿನ ದುಡಿಯುವ ವರ್ಗ ದವರು ನಿವೃತ್ತಿ ಹೊಂದಿದವರ ಖರ್ಚನ್ನು ನೋಡಿಕೊಳ್ಳು ತ್ತಾರೆ. ಸೂಕ್ಷ್ಮವಾಗಿ ಗ್ರಹಿಸಿದರೆ, ಇಂದು ಸರಕಾರ ಬಳಸುವ ರಿಟೈರ್‌ಮೆಂಟ್ ಖರ್ಚು ನಿನ್ನೆಯ ಹಣವಲ್ಲ. ಬದಲಿಗೆ ಇಂದಿನ ಯುವಜನ ದುಡಿಯುವುದರಲ್ಲಿ ಪಾಲಾಗಿ ಹಂಚುವುದು ಇಂದಿನ ಪಿಂಚಣಿ ವ್ಯವಸ್ಥೆ. ಹೀಗೆ ವಯೋವೃದ್ಧರ ಸಂಖ್ಯೆ ಹೆಚ್ಚಾಗಿಬಿಟ್ಟರೆ ಅದರ ಹೊರೆ ಹೊರಬೇಕಾದವರು ಆಗಿನ ದುಡಿಯುವ ವಯೋಮಾನದವರು. ಈಗಾಗಲೇ ಯುರೋಪ್ ದೇಶಗಳು ಪಿಂಚಣಿ ಕೊಡಲಾಗದೆ ಕಷ್ಟಪಡುತ್ತಿವೆ.
ಅಲ್ಲಿನ ಬಜೆಟ್‌ನಲ್ಲಿ ಅದುವೇ ದೊಡ್ಡ ಖರ್ಚು. ಏಕೆಂದರೆ ವಯಸ್ಸಾದವರ ಸಂಖ್ಯೆ ಹೆಚ್ಚಿದೆ. ಜತೆಯಲ್ಲಿ ಖಾಸಗೀಕರ
ಣದಿಂದಾಗಿ ಅಮೆರಿಕ ಮೊದಲಾದ ದೇಶಗಳಲ್ಲಿ 70 ವಯಸ್ಸಿನವರೆಗೂ ದುಡಿಯುವುದು ಸಾಮಾನ್ಯವಾಗಿದೆ. ನಿಂತು ದುಡಿಯುವವರಿಗಿಂತ ಕೂತು ತಿನ್ನುವವರ ಸಂಖ್ಯೆಯೇ ಹೆಚ್ಚಿದಾಗ ಆರ್ಥಿಕ ಸ್ಥಿತಿ, ಜಿಡಿಪಿ ಇವೆಲ್ಲವೂ ಹದಗೆಟ್ಟು ಹೋಗುತ್ತದೆ. ಇಲ್ಲಿ ವೃದ್ಧರೆಂದರೆ ಬೇರೆ ಯಾರೋ ಅಲ್ಲ- ಈಗಿನ ಯುವಕರೇ ನಾಳಿನ ವೃದ್ಧರು! ಇಂಥದೊಂದು ಸಂಖ್ಯಾಮಿಶ್ರಣದ ಬದಲಾವಣೆಯಿಂದ ನಾವು ಇಂದು ಮಾಡಿಕೊಂಡ ಏರುಮುಖ ಆರ್ಥಿಕತೆ, ಉತ್ಪಾದನೆ, ವಿತರಣೆ ಈ ಎಲ್ಲ ವ್ಯವಸ್ಥೆಯೂ ಬದಲಾಗಬೇಕಾಗುತ್ತದೆ. ಈಗಿನ ನಮ್ಮ ಆರ್ಥಿಕ ವ್ಯವಸ್ಥೆ ಹೇಗಿದೆಯೆಂದರೆ ಇದು ಬದುಕ ಬೇಕೆಂದರೆ ಜನಸಂಖ್ಯೆ ನಿರಂತರ ಏರುತ್ತಲೇ ಇರಬೇಕು. ಆದರೆ ಹಾಗಾಗದಿರುವಾಗ ಇವೆಲ್ಲವೂ ಬುಡಮೇಲು ಬದಲಾಗಬೇಕಾಗುತ್ತದೆ. ಅಷ್ಟೇ ಅಲ್ಲ. ಹೀಗೆ ಮುಂದುವರಿದು ಮನುಷ್ಯನ ಅವಶ್ಯಕತೆಗಳು ಕಡಿಮೆಯಾಗುತ್ತ ಹೋಗುತ್ತವೆ.
ಇದರಿಂದ ಉತ್ಪಾದನೆ ತಗ್ಗಬೇಕಾಗುತ್ತದೆ. ಉತ್ಪಾದನೆ ಹೆಚ್ಚಿರುವಾಗ ಅವಶ್ಯಕತೆ ಕಡಿಮೆಯಾದರೆ ಅದನ್ನು ಸಂಭಾಳಿಸಲು ಇಂದಿನ ಆರ್ಥಿಕ ವ್ಯವಸ್ಥೆಗೆ ಸಾಧ್ಯವೇ ಇಲ್ಲ. ಅದೆಲ್ಲ ಇನ್ನಷ್ಟು ಆರ್ಥಿಕ ಕಗ್ಗಂಟಿಗೆ ಕಾರಣ ವಾಗುತ್ತದೆ. ಕ್ರಮೇಣ ವಯೋವೃದ್ಧ (ಸರಾಸರಿ ವಯಸ್ಸಿನಲ್ಲಿ ಏರಿಕೆ) ಮತ್ತು ಚಿಕ್ಕ ಜನಸಂಖ್ಯೆಗೆ ಇಡೀ ವ್ಯವಸ್ಥೆ ಬದಲಾಗಬೇಕಾಗುತ್ತದೆ. ಇದು ಆಗಲೇಬೇಕು- ಅದು ಸುಲಭದ ಬದಲಾವಣೆಯಲ್ಲ.
ಕ್ಷೀಣಿಸುತ್ತಿರುವ ವಂಶಾಭಿವೃದ್ಧಿ ಪ್ರಮಾಣದಿಂದಾಗಿ ಹಲವಾರು ದೇಶಗಳು ತಮ್ಮದೇ ಪರಿಹಾರೋಪಾಯದಲ್ಲಿ
ಈಗಾಗಲೇ ತೊಡಗಿಕೊಂಡಂತಿದೆ. ಎರಡು ಮಕ್ಕಳಿಗಿಂತ ಜಾಸ್ತಿ ಮಕ್ಕಳನ್ನು ಮಾಡಿಕೊಂಡಲ್ಲಿ ಸವಲತ್ತನ್ನು
ಕಸಿದುಕೊಳ್ಳುತ್ತಿದ್ದ ಕಾಲ ಮುಗಿದಿದೆ. ಈಗ ಪ್ರಪಂಚದ ಅರ್ಧಕ್ಕರ್ಧ ದೇಶಗಳು ‘ಮಕ್ಕಳನ್ನು ಹೊಂದಿದರೆ ಸವಲತ್ತು’
ಎನ್ನುತ್ತಿವೆ. ಕೆಲವು ದೇಶಗಳಂತೂ ಮಿಲಿಟರಿಗೆ ವ್ಯಯಿಸಿದ್ದಕ್ಕಿಂತ ಜಾಸ್ತಿ ಹಣವನ್ನು ಜನಸಂಖ್ಯೆಯ ವರ್ಧನೆಗೆ ವ್ಯಯಿಸುತ್ತಿವೆ. ದಕ್ಷಿಣ ಕೊರಿಯಾ ಕಳೆದ ಹದಿನೈದು ವರ್ಷದಲ್ಲಿ, ಮಕ್ಕಳನ್ನು ಹೊಂದುವಂತೆ ಅಲ್ಲಿನವರನ್ನು
ಉತ್ತೇಜಿಸಲು 1.7 ಲಕ್ಷ ಕೋಟಿ ರುಪಾಯಿ ಖರ್ಚುಮಾಡಿದೆಯಂತೆ ಎಂದರೆ ಈ ಸಮಸ್ಯೆಯ ಅಗಾಧತೆ ಊಹಿಸಿಕೊಳ್ಳಿ.
ಹತ್ತಿರತ್ತಿರ ಪಾಕಿಸ್ತಾನದಂಥ ದೇಶದ ವಾರ್ಷಿಕ ಬಜೆಟ್ ಹಣ ಅದು! ಅಷ್ಟಾಗಿಯೂ ಹದಿನೈದು ವರ್ಷದ ಹಿಂದೆ ಇದ್ದ ‘ಒಬ್ಬ ಮಹಿಳೆಗೆ ಒಂದು ಮಗು’ ಸರಾಸರಿ ಇವತ್ತಿಗೂ ಹಾಗೆಯೇ ಇದೆ. ಇನ್ನು ಕೆಲವೊಂದಿಷ್ಟು ದೇಶಗಳು ತಮ್ಮಲ್ಲಿ ಜನಸಂಖ್ಯೆ ಸಾಧ್ಯವಾಗದಿದ್ದರೆ ಏನಂತೆ, ಬೇರೆ ದೇಶದಿಂದ ಆಮದುಮಾಡಿಕೊಂಡರಾಯ್ತು ಎಂದು ತಮ್ಮ
ಇಮಿಗ್ರೇಷನ್ ವ್ಯವಸ್ಥೆಯನ್ನೇ ಬದಲಿಸಿಕೊಂಡಿವೆ. ಯುವಜನಾಂಗವನ್ನು ತಮ್ಮತ್ತ ಸೆಳೆಯುತ್ತಿವೆ. ಉದಾಹರಣೆಗೆ,
ಕೆನಡಾದಲ್ಲಿ ಕಳೆದ ಕೆಲವು ವರ್ಷಗಳಿಂದ ಏರುತ್ತಿರುವ ಜನಸಂಖ್ಯೆಯಲ್ಲಿ ಶೇ. 94ರಷ್ಟು ಬೇರೆ ದೇಶದಿಂದ ವಲಸೆ
ಬಂದವರು, ಅದರಲ್ಲೂ ಭಾರತದವರೇ ಜಾಸ್ತಿ!! ಅಂದಹಾಗೆ, ಭಾರತ, ಚೀನಾದದ ಜನಸಂಖ್ಯಾಸೋಟವೇ ಈ
ದೇಶದವರು ಜಗತ್ತಿನಲ್ಲಿ ಈ ಪ್ರಮಾಣದಲ್ಲಿ ಎಲ್ಲ ದೇಶಗಳಲ್ಲಿ ಹೋಗಿ ನೆಲೆಸಲು ಕಾರಣ ಎಂಬುದು ಇನ್ನೊಂದು
ಆಯಾಮ.
ಇದೆಲ್ಲದಕ್ಕೆ ವ್ಯತಿರಿಕ್ತವಾಗಿ ಕೆಲವೊಂದಿಷ್ಟು ದೇಶಗಳು ಇವೆ. ಅವು ಇತ್ತೀಚೆಗೆ ಚಿಗುರಿಕೊಳ್ಳುತ್ತಿರುವ ಆಫ್ರಿಕಾದ ಇಥಿಯೋ ಪಿಯಾ, ನೈಜೀರಿಯಾ, ತಾಂಜೇನಿಯಾ ಮೊದಲಾದವು. ಅಲ್ಲಿ ಇನ್ನೂ ಆಧುನಿಕತೆ ಬಂದಿಲ್ಲ. ಆ ದೇಶಗಳು ಜಗತ್ತಿಗಿಂತ 50-60 ವರ್ಷ ಹಿಂದಿವೆ. ಅಂತೆಯೇ ಆ ದೇಶಗಳವರ ಜನನ ಸಾಮರ್ಥ್ಯ ಕೂಡ ಸದ್ಯ ನಮ್ಮಲ್ಲಿನ ಅರವತ್ತರ ದಶಕದಷ್ಟಿದೆ. ಅದರರ್ಥ ಉಳಿದ ದೇಶಗಳು ಮುದಿಯಾಗುವಾಗ ಈ ದೇಶಗಳು ಪ್ರಾಯಕ್ಕೆ ಬರಲಿವೆ!
ಈ ಜಗತ್ತಿನಲ್ಲಿ ಸದ್ಯ ಎಲ್ಲವೂ ಬೇಡಿಕೆ ಪೂರೈಕೆಯ ಲೆಕ್ಕ.
ಬೇಡಿಕೆ ಇಳಿಮುಖವಾದಂತೆ- ಬದಲಾದಂತೆ ಸಮಾಜ, ವ್ಯವಸ್ಥೆ ಎಲ್ಲವೂ ಬದಲಿಸಿಕೊಳ್ಳಬೇಕು. ಈಗಾಗಲೇ
ಬಹುದೊಡ್ಡ ಪ್ರಮಾಣದಲ್ಲಿ ಯುವಜನತೆ ಪೇಟೆ ಸೇರುವುದರಿಂದ ಹಳ್ಳಿಗಳು ವೃದ್ಧಾಶ್ರಮವಾಗಿವೆ.
ಸ್ಥಿತಿ ಹೇಗಿದೆಯೆಂದರೆ ಒಂದು ವಯಸ್ಸಿನ ನಂತರ ಹಳ್ಳಿಗಳಲ್ಲಿ ನಿವೃತ್ತ ಜೀವನ ನಡೆಸುವುದು ವೈದ್ಯಕೀಯ, ಸಾಂಸಾರಿಕ ಕಾರಣಗಳಿಂದ ಕಷ್ಟವಾಗುತ್ತಿದೆ. ನಿವೃತ್ತರೂ ಪೇಟೆ ಸೇರುವ ಸ್ಥಿತಿ ಈಗಾಗಲೇ ನಮಗೆಲ್ಲರಿಗೂ ಕಾಣಿಸು ತ್ತಿದೆ. ಈ ಸಮಯದಲ್ಲಿ ಭಾರತದಂಥ ದೇಶಗಳಿಗೆ ಬೇಕಿರುವುದು ದೂರದೃಷ್ಟಿತ್ವ. ಸರಾಸರಿ ವಯಸ್ಸು ಹೆಚ್ಚುತ್ತಿದ್ದಂತೆ ಅದಕ್ಕೆ ತಕ್ಕದಾಗಿ ಆಸ್ಪತ್ರೆಯ ವ್ಯವಸ್ಥೆಯಿಂದ ಹಿಡಿದು ವೃದ್ಧಾಶ್ರಮ, ನರ್ಸಿಂಗ್ ಹೋಮ್‌ಗಳು, ಪಿಂಚಣಿ ಇವೆಲ್ಲ ವ್ಯವಸ್ಥೆಯ ಪೂರೈಕೆಯನ್ನೂ ಸಮಾನಾಂತರವಾಗಿ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಹೇಗೆ ಜನಸಂಖ್ಯೆ ವೃದ್ಧಿಸುವಾಗ ಕಷ್ಟಪಟ್ಟೆವೋ ಅದರ ತದ್ವಿರುದ್ಧದ ಸಮಸ್ಯೆಯನ್ನೂ ಇಳಿಯುವಾಗ ಎದುರಿಸಬೇಕಾಗುತ್ತದೆ.
ಇಂದಿನ ರಾಜಕೀಯ ಸ್ಥಿತಿಗತಿ, ಇರುವ ಚಂದವನ್ನು ಕಂಡರೆ ಇದೇ ಜನ್ಮದಲ್ಲಿ ಈ ಜನಸಂಖ್ಯಾಸ್ಪೋಟದ ಜತೆಜತೆಗೆ ಅದರ ಇಳಿಮುಖದ ಕಷ್ಟವನ್ನೂ ಕಾಣುವ ಅದೃಷ್ಟವೂ ನಮಗೊದಗಿ ಬರುತ್ತದೆ! ಅಲ್ಲಿಗೆ ಎಲ್ಲವನ್ನೂ ಕಂಡ ಜನಾಂಗ ನಮ್ಮದಾಗುತ್ತದೆ. ಅದೆಲ್ಲ ಏನೇ ಇರಲಿ- ಪೃಕೃತಿಗೆ, ಭೂಮಿಗೆ ಯಾವ ಸಮಸ್ಯೆಯನ್ನೂ ಪರಿಹರಿಸುವುದು ಗೊತ್ತು ಎನ್ನುವುದು ಸುಳ್ಳಲ್ಲ. ಮನುಷ್ಯ ಇಷ್ಟೆಲ್ಲವನ್ನೂ ಮಾಡಿದ್ದು ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳಬೇಕೆನ್ನುವ ಮೂಲ ಉದ್ದೇಶದಿಂದ. ಅದು ಆಗಾಗ ಮಿತಿ ಮೀರಿದಾಗ ಸಾಂಕ್ರಾಮಿಕವಾಗಿ, ಪೃಕೃತಿ ವಿಕೋಪವಾಗಿ ಪೃಕೃತಿಯೇ ಒಂದು ಹದಕ್ಕೆ ತಂದಿದೆ. ಆದರೆ ಇಂದಿನ ಆಧುನಿಕತೆ ಮಾತ್ರ ಅದನ್ನು ಮೀರಲು ಹೊರಟಿತು.
ಈಗ ನೋಡಿದರೆ ಅದನ್ನೂ ಸೋಲಿಸುವ ವ್ಯವಸ್ಥೆ ನಮ್ಮಲ್ಲಿಯೇ ಸ್ವಾಭಾವಿಕವಾಗಿ ನಿರ್ಮಾಣವಾಗುತ್ತಿದೆ. ಇದಕ್ಕಿಂತ ಭಿನ್ನ ವಿಡಂಬನೆ ಇನ್ಯಾವುದಿದೆ ಹೇಳಿ? ಕೊನೆಯಲ್ಲಿ ತಮಾಷೆಗೊಂದು ಮಾಹಿತಿ: ಈಗ ಅತಿ ಹೆಚ್ಚಾಗಿರುವುದು ಜನಸಂಖ್ಯೆ ಮಾತ್ರವಲ್ಲ- ನಮ್ಮ ಜತೆಯಲ್ಲಿ ಇನ್ನೊಂದಿಷ್ಟು ಜೀವಿಗಳು ಕೂಡ ತಮ್ಮ ಸಂಖ್ಯೆಯನ್ನು ಐತಿಹಾಸಿಕ ವಾಗಿ ಹೆಚ್ಚಿಸಿಕೊಂಡಿವೆ. 150 ಕೋಟಿ ಆಕಳುಗಳು, 3300 ಕೋಟಿ ಕೋಳಿ, 100 ಕೋಟಿ ಹಂದಿ, ಕುರಿ ಮತ್ತು ನಾಯಿ, 60 ಲಕ್ಷ ಬೆಕ್ಕು ಇವೆಲ್ಲ ಅವಶ್ಯಕತೆಯಾಗಿ ನಮ್ಮೊಂದಿಗೆ ಇಂದು ಬದುಕುತ್ತಿವೆ. ಇವುಗಳ ಸಂಖ್ಯೆಯೂ ಯಾವತ್ತೂ ಇಷ್ಟಿದ್ದಿರಲಿಲ್ಲ!! ಜನಸಂಖ್ಯೆ ಇಳಿದಂತೆ ಅವುಗಳ ಸಂಖ್ಯೆಯೂ ಇಳಿಯಲೇಬೇಕಿದೆ!
ಇದನ್ನೂ ಓದಿ: shishirhegdecolumn