Sunday, 24th November 2024

Shishir Hegde Column: ಕೂತಲ್ಲಿ ಕೂರಂಗಿಲ್ಲ, ನಿಂತಲ್ಲಿ ನಿಲ್ಲಂಗಿಲ್ಲ ಇದೆಂಥ ಮಾಯೆ !

ಶಿಶಿರ ಕಾಲ

ಶಿಶಿರ್‌ ಹೆಗಡೆ

ಬರವಣಿಗೆಯಲ್ಲಿ ಆಸಕ್ತಿಯಿರುವ ಓದುಗರು ‘ಲೇಖನ ಬರೆಯುವುದು ಹೇಗೆ, ಅದರ ತಯಾರಿ, ವಿಷಯದ ಆಯ್ಕೆ, ರೂಪರೇಷೆ ಇವೆಲ್ಲ ಹೇಗೆ’ ಎಂದು ಕೇಳುವುದಿದೆ. ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ಒಬ್ಬರು ವಿಶ್ವೇಶ್ವರ ಭಟ್ಟರಿಗೆ ಹೀಗೆ ಪ್ರಶ್ನಿಸಿದ್ದರು. ಅದಕ್ಕೆ ಭಟ್ಟರು, ‘ಲೇಖನ ಬರೆಯಲು ಕಲಿಯಬೇಕೆಂದರೆ ಮೊದಲು 4-5 ತಾಸು ಕೂರುವುದು ಕಲಿಯಬೇಕು’ ಎಂದಿದ್ದರು. ನಾನು ‘ಶಿಶಿರಕಾಲ’ ಅಂಕಣ ಬರೆಯಲು ಆರಂಭಿಸಿ ಇದು ೫ನೇ ವರ್ಷ. ಈಗ ನನಗೆ ಆ ಪ್ರಶ್ನೆ ಕೇಳಿದರೆ ಅದೇ ಸಿದ್ಧ ಉತ್ತರ- ಮೊದಲು ಕೆಲಹೊತ್ತು ಕೂರಲು ಕಲಿಯಬೇಕು.

ಪ್ರತಿವಾರ, ಮಳೆಯಾಗಲಿ, ಚಳಿಯಾಗಲಿ, ಮನೆಯಲ್ಲಿ ನೆಂಟರಿರಲಿ, ನೆಂಟರ ಮನೆಯಲ್ಲಿರಲಿ, ಯಾವುದೇ ಸ್ಥಿತಿಯಲ್ಲಿರಲಿ. ಬರೆಯುವ ಗಳಿಗೆ ಬಂತೆಂದರೆ, ರಾವಣ ಆತ್ಮಲಿಂಗವನ್ನು ಹುಡುಗನ ಕೈಲಿ ಕೊಟ್ಟು ಸಂಧ್ಯಾ ವಂದನೆಗೆ ಕೂರುವಂತೆ, ಎಲ್ಲ ಪಕ್ಕಕ್ಕಿಟ್ಟು ಇದ್ದಲ್ಲಿಯೇ ಕೂರಬೇಕು. ನಂತರದಲ್ಲಿ ಯೋಚಿಸುವುದು, ಬರೆಯುವುದು ಇತ್ಯಾದಿ. ಬದಲಾದ ದಿನಮಾನದಲ್ಲಿ 4-5 ತಾಸು ಏಕಾಗ್ರತೆಯಿಂದ ಒಂದೇ ಕೆಲಸ ಮಾಡುವುದು ಸುಲಭವಲ್ಲ. ಗೆಳೆಯನ ಫೋನ್ ಬರುತ್ತದೆ, ಇನ್ಯಾರದೋ ಮೆಸೇಜ್ ‘ಟಿಂಗ್’ ಎನ್ನುತ್ತದೆ, ಆಫೀಸಿನ ಅಪೂರ್ಣ ಕೆಲಸವೊಂದು ನೆನಪಾಗುತ್ತದೆ, ಬ್ರೇಕಿಂಗ್ ನ್ಯೂಸ್ ಕಾಣಿಸುತ್ತದೆ, ಸಂಬಂಧಿಕರು ಮನೆಗೆ ಬರುತ್ತಾರೆ, ಅದರ ಮಧ್ಯೆ ಮೊಬೈಲ್‌ನಲ್ಲಿನ ಅಪ್ಲಿಕೇಷನ್‌ಗಳಿಂದ ಅಸಂಖ್ಯ ‘ನೋಟಿಫಿಕೇಷನ್’ಗಳು, ನಿಮ್ಮ ಫೊಟೋಗೆ ಯಾರದ್ದೋ ಕಮೆಂಟು, ಯಾರಿಗೆ ಯಾರದ್ದೋ ಕುಹಕ, ಖುಷಿ, ಬೇಸರ, ಸುದ್ದಿ, ಕಂಗ್ರಾಜುಲೇಷನ್ಸ್ ಇತ್ಯಾದಿ.

ಇದೆಲ್ಲ ಪೂರೈಸಿ ಮುಗಿಯಿತು ಎಂಬುದೇ ಇಲ್ಲ. ಸುತ್ತಲೂ ನೂರೆಂಟು ಚಿತ್ತಚಾಂಚಲ್ಯ ಪ್ರಚೋದಕಗಳು. ಬರೆಯಲು ಭಾಷೆ, ಜ್ಞಾನ, ಆಸಕ್ತಿ ಇರುವವರಿಗೆ ಕೂರಲು ಗೊತ್ತಿಲ್ಲವೆಂದರೆ ಅವರು ಬರಹಗಾರರಾಗುವುದಿಲ್ಲ. ಸ್ವರ-ರಾಗ ಪ್ರಜ್ಞೆ ಇರುವವರಿಗೆಲ್ಲ ಸಂಗೀತ ಪೂರ್ಣ ಒಲಿಯುವುದಿಲ್ಲ. ಹೀಗೆ ಅದೆಷ್ಟೋ ಜನರು ಎಲ್ಲ ಇದ್ದೂ ಬಯಸಿದ ಸಾಧನೆ ಸಾಧ್ಯವಾಗುವುದಿಲ್ಲ. ಕಾರಣ, ಅವರು ಕೂರಲು ಕಲಿತಿರುವುದಿಲ್ಲ. ಏನನ್ನೋ ಸಾಧಿಸಬೇಕೇ? ಮೊದಲು ಕೂರಲು ಕಲಿಯಬೇಕು.

ನಿಮಗೆ ಫ್ರೆಂಚ್ ಬರಹಗಾರ ವಿಕ್ಟರ್ ಹುಗೋ ಕಥೆ ಹೇಳಬೇಕು. ಆತ ಫ್ರಾನ್ಸ್‌ನ ಮಟ್ಟಿಗೆ ರವೀಂದ್ರನಾಥ್ ಟ್ಯಾಗೋರ್
ಇದ್ದಂತೆ. ಫ್ರೆಂಚರ ಬ್ಯಾಂಕ್ ನೋಟಿನಲ್ಲಿ ಅವನ ಫೋಟೋವನ್ನು ಕಾಣಬಹುದು ಎಂದರೆ ಅವನೆಷ್ಟು ದೊಡ್ಡ
ಬರಹಗಾರ ಎಂದು ಅಂದಾಜಿಸಿ! ಫ್ರೆಂಚ್ ಸಾಹಿತ್ಯದ ಅತ್ಯುತ್ಕೃಷ್ಟ ಕೃತಿಗಳ ಸಾಲಿನಲ್ಲಿ ಮೊದಲೆರಡು ಕೃತಿಗಳು ಇವನವು.

ಅದು ಹುಗೋ ಬರವಣಿಗೆಯ ಔನ್ನತ್ಯದ ಸಮಯ. ಈಗಾಗಲೇ ಬರೆದ ಒಂದು ಪುಸ್ತಕ ಮಾರಾಟವಾಗಿತ್ತು, ಮುಂದಿನ ದಕ್ಕೆ ಪಬ್ಲಿಷರ್ ಅವನಿಗೆ ಹಣ ಕೊಟ್ಟು ಗಡುವು ನೀಡಿದ್ದರು. ಒಂದೂವರೆ ವರ್ಷ ಕಳೆದರೂ ಹುಗೋನಿಗೆ ಒಂದು ಪುಟ ವನ್ನೂ ಬರೆಯಲಾಗಲಿಲ್ಲ. ಆತ ಖ್ಯಾತನಾಗಿದ್ದುದರಿಂದ ಪಾರ್ಟಿ-ಪ್ರವಾಸ ಹೆಚ್ಚಾಗಿತ್ತು. ಮಿಗಿಲಾಗಿ, ಬರೆಯಲೆಂದು ಕೂರಲು ಆತ ಎಷ್ಟೇ ಯತ್ನಿಸಿದರೂ ಸಾಧ್ಯವಾಗುತ್ತಿರಲಿಲ್ಲ.

ಚಂಚಲ ಮನಸ್ಸು. ಏನು ಮಾಡಿದರೂ ಅರ್ಧ ಗಂಟೆ ಕೂರಲಾಗುತ್ತಿರಲಿಲ್ಲ. ತಿಂಗಳುಗಳು ಕಳೆದರೂ ಒಂದು ಪುಟ
ಬರೆಯಲಾಗಲಿಲ್ಲ. 6 ತಿಂಗಳು ಗಡುವನ್ನು ವಿಸ್ತರಿಸಿದ ಪ್ರಕಾಶಕರು, ಮುಗಿಸಿ ಕೊಡದಿದ್ದರೆ ಮುಂಗಡ ಹಣವನ್ನು
ಮರಳಿಸಬೇಕೆಂದರು. ಹುಗೋ ಅಷ್ಟೂ ಹಣವನ್ನು ಖಾಲಿ ಮಾಡಿಬಿಟ್ಟಿದ್ದ. ಆದರೆ ಅವನಿಗೆ ಬರೆಯಲೆಂದು ಕೂರಲು ಸಾಧ್ಯವಾಗುತ್ತಲೇ ಇಲ್ಲ. ಕೊನೆಗೊಮ್ಮೆ, ಬರೆಯವ ಕೋಣೆ ಹೊಕ್ಕು ಪ್ಯಾಂಟ್ ಬಿಚ್ಚಿ ಬಾಗಿಲಿನಿಂದ ಹೊರಗೆಸೆದ. ಬಾಗಿಲ ಹಿಂದೆ ನಿಂತು ಮನೆಗೆಲಸದವನನ್ನು ಕರೆದು, “ಅಲ್ಲಿ ನನ್ನ ಅಂಡರ್‌ವೇರ್, ಪ್ಯಾಂಟ್ ಎಸೆದಿರುವೆ. ಅದನ್ನು ತೆಗೆದು ಕೊಂಡು ಹೋಗಿ ಎಲ್ಲಾದರೂ ಇಡು.

ಇನ್ನು 6 ತಾಸು ನಾನೆಷ್ಟೇ ಕೇಳಿದರೂ, ಏನೇ ಕಾರಣ ಹೇಳಿದರೂ ಅವನ್ನು ಮರಳಿಸಬಾರದು. ಮರಳಿಸಿದರೆ ನಿನ್ನ ಸಂಬಳ ಕಟ್. ನನ್ನ ಮಾತಿನಂತೆ ನಡೆದುಕೊಂಡರೆ ನಿನಗೆ ತಿಂಗಳ ಬೋನಸ್” ಎಂದ. ಈ ಉಪಾಯ ಫಲಿಸಿತು. ಈ ರೀತಿ ಪ್ರತಿದಿನ ಮಾಡುವುದು ಹುಗೋಗೆ ಅಭ್ಯಾಸವಾಯಿತು. ಪರಿಣಾಮ ಆರೇ ತಿಂಗಳಲ್ಲಿ The Hunchback of NotreDame ಎಂಬ 1000 ಪುಟಗಳ ಕಾದಂಬರಿಯನ್ನು ಮುಗಿಸಿದ. ಅದು ಫ್ರೆಂಚ್ ಸಾಹಿತ್ಯದ ‘ಮಾಸ್ಟರ್ ಪೀಸ್’ ಎನಿಸಿಕೊಂಡಿತು! ಹೆರ್ಮಾನ್ ಮೆಲ್ವಿಲ್ಲೆ ಎಂಬ ಅಮೆರಿಕನ್ ಬರಹಗಾರನಿಗೂ ‘ಕೂತಲ್ಲಿ ಕೂರಲಾಗದ’ ಸಮಸ್ಯೆ. ಹೆಂಡತಿ ಬೆಳಗ್ಗೆ ಕೆಲಸಕ್ಕೆ ಹೋಗುವಾಗ, ತನ್ನ ಕಾಲಿಗೆ ಚೈನ್ ಕಟ್ಟಿ ಹೋಗುವಂತೆ ಆತ ಹೇಳುತ್ತಿದ್ದನಂತೆ. ಬರವಣಿಗೆಯ ಟೇಬಲ್, ಟಾಯ್ಲೆಟ್ ಮುಟ್ಟುವಷ್ಟು ಉದ್ದದ ಚೈನು. ಬರೆಯುವುದೊಂದನ್ನು ಬಿಟ್ಟು ಇನ್ನೇನನ್ನು ಮಾಡಲಿಕ್ಕೂ ಅಸಾಧ್ಯ ಮಾಡಿಕೊಂಡು ಕೂರುವುದು. ‘ಮೊಬಿ ಡಿಕ್’ ಎಂಬ ಪ್ರಸಿದ್ಧ ಕಾದಂಬರಿಯನ್ನು
ಆತ ಬರೆದಿದ್ದು ಹೀಗೆಯೇ!

ನನಗಂತೂ ಇಂಥ ನಡವಳಿಕೆಗಳು ಅತಿ ಎನಿಸುವುದಿಲ್ಲ. ಸೃಜನಶೀಲ ವ್ಯಕ್ತಿಗೆ ಕೂತಲ್ಲಿ ಕೂರುವುದು ಸುಲಭವಲ್ಲ.
ಕೂರುವುದು ಎಂದರೆ ಜಾಡ್ಯವಲ್ಲ, ಒಂದೇ ಕಾರ್ಯದಲ್ಲಿ ಏಕಾಗ್ರತೆಯಿಂದ ಮಗ್ನವಾಗುವುದು, ಪೂರೈಸುವುದು.
ಸಮಸ್ಯೆಯೆಂದರೆ, ಸೃಜನಶೀಲತೆ ಹೆಚ್ಚಿದಂತೆ ಮನಸ್ಸು ಇನ್ನೂ ಮರ್ಕಟವಾಗುತ್ತದೆ. ಅದರಲ್ಲೂ ಮೊಬೈಲ್ ಜತೆಗಿದ್ದರೆ ಏಕಾಗ್ರತೆ ಕಷ್ಟ. ವಿಶ್ವಾಮಿತ್ರನಂತೆ ಕೂರಬೇಕೆಂದುಕೊಂಡರೂ ಇಂಟರ್‌ನೆಟ್, ಸೋಷಿಯಲ್ ಮೀಡಿಯಾ ಎಂಬ ಮೇನಕೆಯರ ಕಾಟ!

ಸ್ವಲ್ಪ ಗ್ರಹಿಸಿದರೆ, ದಿನಗಳೆದಂತೆ ನಮ್ಮೆಲ್ಲರ ಏಕಾಗ್ರತೆ (Attention Span)ಕಡಿಮೆಯಾಗುತ್ತಿರುವುದು ನಮಗೇ
ಗೊತ್ತಾಗುತ್ತದೆ. ನಮ್ಮ ತಾಳ್ಮೆ ಕ್ಷೀಣಿಸುತ್ತಲೇ ಇದೆ. ಕೆಲ ಅಂಕಿ-ಅಂಶಗಳು ಇದನ್ನು ಪುಷ್ಟೀಕರಿಸುತ್ತವೆ. ಅದರಲ್ಲೂ,
ಮೊಬೈಲ್ ಬಳಸುವಾಗಿನ ಮನಸ್ಸಿನ ಚಂಚಲತೆಯನ್ನು, ಅದು ಬೀರುವ ಪರಿಣಾಮವನ್ನು ಗ್ಲೋರಿಯಾ ಮಾರ್ಕ್ ಎಂಬ ಮನಃಶಾಸ್ತ್ರಜ್ಞೆ ಹೀಗೆ ವಿವರಿಸುತ್ತಾಳೆ: “ನಮ್ಮ ಮನಸ್ಸು ಬಿಳಿಯ ಬೋರ್ಡ್ ಇದ್ದಂತೆ, ನೀವೇನು ನೋಡುತ್ತೀರೋ, ಅನುಭವಿಸುತ್ತೀರೋ ಅದು ಆ ಕ್ಷಣಕ್ಕೆ ಚಿತ್ರವಾಗಿ ಮನಸ್ಸಿನಲ್ಲಿ ಮೂಡುತ್ತದೆ.

ತಕ್ಷಣ ಇನ್ನೊಂದು ವಿಷಯಕ್ಕೆ ಗಮನ ತೆರೆದುಕೊಂಡಾಗ ಆ ಹಳೆಯ ಚಿತ್ರ ಅಳಿಸಿ ಹೊಸ ಚಿತ್ರರೂಪಕಗಳು
ಆ ಬೋರ್ಡಿನ ಮೇಲೆ ಮೂಡುತ್ತವೆ. ಇದು ನೀವು ಒಂದು ವಿಡಿಯೋದಿಂದ ಇನ್ನೊಂದಕ್ಕೆ ಹೋದಾಗ, ರೀಲ್ಸ
ನೋಡುವಾಗ ಹೀಗೆ ಪ್ರತಿಬಾರಿ ವಿಷಯಾಂತರವಾದಾಗ ಆ ಬೋರ್ಡ್‌ನ ಮೇಲೆ ಚಿತ್ರ ರೂಪುಗೊಳ್ಳಬೇಕು. ಆದರೆ ಇದರ ವೇಗ ಹೆಚ್ಚಿದಂತೆ ಆ ಬೋರ್ಡ್ ವಿಷಯಾಂತರವಾದಾಗ ಪೂರ್ಣ ಸ್ವಚ್ಛವಾಗುವುದಿಲ್ಲ. ಹಳೆಯ ಚಿತ್ರದ ಅಚ್ಚು ಅಲ್ಲಿ ಇನ್ನೂ ಇರುತ್ತದೆ. ಆ ಅಳಿದುಳಿದ ಚಿತ್ರದ ಮೇಲೆ ಇನೊಂದು ಚಿತ್ರ ಬಿಡಿಸಿದರೆ ಏನಾಗುತ್ತದೆ? ಎರಡೂ ಚಿತ್ರಗಳು ವಿರೂಪ ಗೊಳ್ಳುತ್ತವೆ. ನಮ್ಮ ಮಿದುಳು ಅಷ್ಟೊಂದು ವಿಷಯಾಂತರವನ್ನು ಗ್ರಹಿಸುವಷ್ಟು ಬೆಳೆದಿಲ್ಲ.

ಅದಕ್ಕೆ ಅಷ್ಟೊಂದು ವಿಷಯವನ್ನು ಏಕಕಾಲಕ್ಕೆ ಸಂಸ್ಕರಿಸಿ ಗೊತ್ತಿಲ್ಲ. ಹಾಗಾಗಿ ನಿರಂತರ ಗೊಂದಲದಲ್ಲಿರುತ್ತದೆ. ಇದು ಉಳಿದೆಲ್ಲ ಕಾರ್ಯಗಳಿಗೆ ಕೆಟ್ಟದಾಗಿ ಬಾಧಿಸುತ್ತದೆ”. ಕಾರಣಗಳೇನೇ ಇರಲಿ ಏಕಾಏಕಿ, ಅದರಲ್ಲಿಯೂ ಕೋವಿಡ್ ನಂತರದಲ್ಲಿ ನಮ್ಮೆಲ್ಲರ ಏಕಾಗ್ರತೆ ದಿನಗಳೆದಂತೆ ಕಡಿಮೆಯಾಗುತ್ತಿದೆ. ಇವೆಲ್ಲದಕ್ಕೂ ಸೋಷಿಯಲ್
ಮೀಡಿಯಾ, ಮೊಬೈಲ, ಟಿವಿ ಕಾರಣ ಎಂದೆಲ್ಲ ಪುಕಾರಿದೆ. ಆದರೆ ಇದು ‘ಮೊಟ್ಟೆ ಮೊದಲೋ, ಕೋಳಿ ಮೊದಲೋ?’ ಎಂಬ ಪ್ರಶ್ನೆಯಂತೆ. ಇವುಗಳಿಂದ ನಾವು ಹಾಗೆ ಆಗಿದ್ದೇ ಅಥವಾ ನಮ್ಮ ಚಂಚಲತೆಯ ಅವಶ್ಯಕತೆಗೆ ಪೂರಕವಾಗಿ ಇವೆಲ್ಲ ಹೀಗೆ ಬೆಳೆದು ನಿಂತವೋ? ಸುಮ್ಮನೆ ನಮ್ಮೆಲ್ಲರ ದೈನಂದಿನ ವ್ಯವಹಾರಗಳನ್ನೇ ಗ್ರಹಿಸಿ.

ಇಂದಿನ ಬದುಕಿನಲ್ಲಿ ಏಕಾಗ್ರತೆ ಅದೆಷ್ಟು ಕಷ್ಟವಲ್ಲವೇ? ನಾವು ಇಂದಿನ ಮಕ್ಕಳಿಗೆ ಏಕಾಗ್ರತೆಯೇ ಇಲ್ಲ ಎನ್ನುವು ದಿದೆ. ಆದರೆ ನಮ್ಮಷ್ಟು ಏಕಾಗ್ರತೆ ಉಳಿದುಕೊಂಡಿದೆ? ನಾವು ಹೇಗೆ ಬದಲಾಗುತ್ತೇವೆಯೋ ಅದಕ್ಕನುಗುಣವಾಗಿ ನಮ್ಮ ವ್ಯವಸ್ಥೆಯನ್ನು ಬದಲಿಸಿಕೊಳ್ಳುವ, ಪೂರೈಸಿಕೊಳ್ಳುವ ವಿಶೇಷತೆ ಮನುಷ್ಯ ಸಮಾಜದ್ದು. ಈಗೀಗ ಅಲ್ಪ ಲಕ್ಷ್ಯ, ಚಿತ್ತಚಾಂಚಲ್ಯಕ್ಕೆ ಅನುಗುಣವಾಗಿಯೇ ನಮ್ಮ ಸುತ್ತಲಿನದೆಲ್ಲ ಬದಲಾಗುತ್ತಿದೆ.

ಇಂದಿನ ಪುಸ್ತಕಗಳು ಚಿಕ್ಕದಾಗುತ್ತಿವೆ. ಪುಟಗಟ್ಟಲೆ ಸುದ್ದಿ ಯಾರು ಓದುತ್ತಾರೆ, ಹಾಗಾಗಿಯೇ ಇಂದು ಬೈಟ್‌ ನ್ಯೂಸ್- ಸುದ್ದಿ ತುಣುಕುಗಳು. ಏನನ್ನೋ ಕಲಿಯ ಬೇಕೆಂದರೆ ‘ಮೈಕ್ರೋ ಲರ್ನಿಂಗ್’ ಎಂಬ ಹೊಸತೊಂದು ಪರಿಕಲ್ಪನೆ ಬಂದಿದೆ. ಒಂದೆರಡು ನಿಮಿಷದ ವಿಡಿಯೋ ನೋಡಿ ಏನನ್ನೋ ಕಲಿಯುವುದು. ಯಾರಿಗೂ ಪುರುಸೊತ್ತಿ
ಲ್ಲದ ಕಾರಣ ಇದಕ್ಕೆಲ್ಲ ಸಾಕಷ್ಟು ಗ್ರಾಹಕರು.

ಮೊದಲೆಲ್ಲ ಹೊಸತೊಂದು ಭಾಷೆಯನ್ನು ಕಲಿಯುವುದೆಂದರೆ ಅದಕ್ಕೆ ಯೂನಿವರ್ಸಿಟಿಗೆ ಹೋಗಬೇಕಿತ್ತು, ವರ್ಷಾನುಗಟ್ಟಲೆ ಕಲಿಯಬೇಕಿತ್ತು. ಈಗ ಹಾಗಲ್ಲ- ಭಾಷೆ ಕಲಿಯಲೆಂದೇ ಮೊಬೈಲ್‌ನಲ್ಲಿ ಆಟಗಳಿವೆ. ಇಂದು ಯಾರಿಗೂ ಯಾವುದೇ ರಿಪೋರ್ಟ್ ಓದಿ ಅರ್ಥಮಾಡಿಕೊಳ್ಳುವಷ್ಟು ವ್ಯವಧಾನವಿಲ್ಲ. ಜಾಹೀರಾತುಗಳು ಕೂಡ ಚಿಕ್ಕದಾಗುತ್ತಿವೆ. ಏಕೆಂದರೆ, ಉದ್ದ ವಾದರೆ ಅದು ಕೂಡ ಪರಿಣಾಮ ಬೀರುವುದಿಲ್ಲ. ಚಲನಚಿತ್ರಗಳ ಜಾಗವನ್ನು ಶಾರ್ಟ್ ಫಿಲಂ, ರೀಲ್ಸ ಕಬಳಿಸುತ್ತಿವೆ. ಚಲನಚಿತ್ರದಲ್ಲೂ ಅಷ್ಟೆ. ಮೊದಲೆಲ್ಲ ಯಾವುದೇ ನಟನ ಒಂದೇ ಕೋನದ ಕ್ಲೋಸಪ್, ವಿಡಿಯೋ 30-40 ಸೆಕೆಂಡ್ ಇರುತ್ತಿತ್ತು. ಹಳೆಯ ಚಲನಚಿತ್ರಗಳನ್ನು ನೋಡಿದರೆ ಒಂದೊಂದು ಸೀನ್ 2-3 ನಿಮಿಷ. ಆದರೆ ಈಗ ಹಾಗಲ್ಲ. 3 ತಾಸಿನ ಚಲನಚಿತ್ರ ಎಂದರೆ ಅರ್ಧಕ್ಕರ್ಧ ಜನ ಅದನ್ನು ಕೇಳಿಯೇ ಹೋಗು ವುದಿಲ್ಲ. ಅಷ್ಟೇ ಅಲ್ಲ, ಪ್ರತಿ ಸೀನ್ ಉದ್ದವಿದ್ದರೂ ನಮಗೆ ಚಲನಚಿತ್ರ ರುಚಿಸುವುದಿಲ್ಲ.

ಇಂದಿನ ಯಾವುದೇ ಚಲನಚಿತ್ರದಲ್ಲಿ ಒಂದು ಸೀನ್ ಹೆಚ್ಚೆಂದರೆ 30-40 ಸೆಕೆಂಡ್ ಮಾತ್ರ. ಹಾಲಿವುಡ್‌ನ ಅವೆಂಜರ್, ಸ್ಪೈಡರ್ ಮ್ಯಾನ್ ಮೊದಲಾದ ಅತಿರಂಜಿತ ಸಿನಿಮಾಗಳಲ್ಲಿ ಪ್ರತಿ ಟೇಕ್ 2-3 ಸೆಕೆಂಡ್ ಮಾತ್ರ. ಅಷ್ಟೇ ವೇಗದಲ್ಲಿ ಸ್ಕ್ರೀನ್ ಫ್ರೇಮ್ ಬದಲಾಗುತ್ತಿರುತ್ತದೆ. ಹಾಗಿಲ್ಲವೆಂದರೆ ಚಲನಚಿತ್ರ ಸಪ್ಪೆಯೆನಿಸುತ್ತದೆ, ಬಬಲ್‌ಗಮ್‌ನಂತೆ ಎಳೆದಿದ್ದಾರೆ ಎನಿಸತೊಡಗುತ್ತದೆ.

ಮನುಷ್ಯನ ಮನಸ್ಸು ಅವುದ್ದೀನನ ಭೂತದಂತೆ, ಅದಕ್ಕೆ ಸುಮ್ಮನೆ ಕುಳಿತುಕೊಳ್ಳಲು ಬಿಡುವಂತಿಲ್ಲ. ಬಿಟ್ಟರೆ ಅದು
ನಮ್ಮನ್ನೇ ತಿಂದುಬಿಡುತ್ತದೆ. ಬುದ್ಧಿವಂತ ಮನಸ್ಸು ನಿರಂತರ ಹೊಸತು, ಪ್ರಚೋದನೆ ಬಯಸುತ್ತದೆ. ಮೊಬೈಲ್ ನಿಮಿಷ ಕ್ಕೊಮ್ಮೆ ‘ಟಿಂಗ್’ ಎಂದು ಬಡಿದುಕೊಂಡಾಗಲೆಲ್ಲ ಮನಸ್ಸು ಅತ್ತ ತಿರುಗುತ್ತದೆ ಎಂಬುದು ಪುಕಾರು. ಆದರೆ ಮೊಬೈಲ, ಇಂಟರ್ನೆಟ್ ಮಾತ್ರ ಇದೆಲ್ಲದಕ್ಕೂ ಕಾರಣವೇ? ಮೊಬೈಲ್ ಬಳಕೆ ನಮ್ಮ ಹತೋಟಿಯಲ್ಲಿ ಇದೆಯೇ ಇಲ್ಲವೇ ಎಂದು ತಿಳಿದುಕೊಳ್ಳುವುದು ಹೇಗೆ? ತಿಳಿಯುವುದು ಬಹಳ ಸುಲಭ. ನಾವೊಂದು ಕೆಲಸದಲ್ಲಿ ತೊಡಗಿರು ವಾಗ ಕಾರಣವೇ ಇಲ್ಲದೆ ಮೊಬೈಲ್ ಕೈಗೆತ್ತಿಕೊಳ್ಳುತ್ತಿದ್ದೀರಿ ಎಂದರೆ ನಿಮಗೆ ಮೊಬೈಲ್ ಒಂದು ಸಮಸ್ಯೆ ಎನ್ನುವು ದರಲ್ಲಿ ಸಂದೇಹವೇ ಇಲ್ಲ. ಅಲ್ಲಿ ಯಾರೋ ಸಂದೇಶ ಕಳುಹಿಸಿರಬೇಕಿಲ್ಲ, ಫೋನ್ ಮಾಡಿರ ಬೇಕಿಲ್ಲ.

ಕಾರಣವೇ ಇಲ್ಲದೆ ಮೊಬೈಲ್ ಕೈಸೇರಿ ಕೆಲವು ನಿಮಿಷದ ನಂತರ ಅದರ ಅರಿವು ನಿಮಗೆ ಬರುತ್ತಿದೆ ಎಂದರೆ
ಮೊಬೈಲ್ ನಿಮ್ಮ ಸೃಜನಶೀಲತೆಯನ್ನು ಕೊಲ್ಲುತ್ತಿದೆ ಎಂದರ್ಥ. ಒಮ್ಮೆ ಹೀಗೆ ಅನೈಚ್ಛಿಕವಾಗಿ ಮೊಬೈಲ್ ಹಿಡಿದು
ಕೊಂಡರೆ, ಮಾಡುತ್ತಿದ್ದ ಕೆಲಸಕ್ಕೆ ಮರಳಲು ಸುಮಾರು 27 ನಿಮಿಷ ಬೇಕಾಗುತ್ತದೆಯಂತೆ. ಜತೆಗೆ, ಮರಳಿದ ಮನಸ್ಸು ಮೊದಲಿನಂತಿರುವುದಿಲ್ಲ. ಇಲ್ಲಿ ಮೊಬೈಲ್ ಒಂದು ಮಾಧ್ಯಮ ವಷ್ಟೇ. ಮನಸ್ಸಿನ ಅಮಿತ ಜ್ಞಾನ ಬಯಕೆಗಳಿಗೆ ಮಿತಿಯಿಲ್ಲದ ಮಾಹಿತಿಯ ಲಭ್ಯತೆ. ಅದಕ್ಕೆ ಮೊಬೈಲ್ ಒಂದು ಸಾಧನ ಮಾತ್ರ.

ಈ ಚಂಚಲತೆ ಎಲ್ಲರಿಗೂ ಸಮಸ್ಯೆಯಲ್ಲ. ಆದರೆ ಏನೋ ಸಾಧಿಸಬೇಕು ಎನ್ನುವವರಿಗೆ ಇದು ಖಂಡಿತ ದೊಡ್ಡ ಸಮಸ್ಯೆ. ಇದನ್ನು ಗುರುತಿಸುವುದು ಅವರವರಿಗಷ್ಟೇ ಸಾಧ್ಯ. ಇದನ್ನು ಬೇಗ ಗುರುತಿಸಿದಷ್ಟೂ ಒಳ್ಳೆಯದು. ಏಕೆಂದರೆ ಈ ಅಭ್ಯಾಸ ರೂಢಿಯಾಗಿಬಿಟ್ಟರೆ ಕ್ರಮೇಣ ಆ ತಪ್ಪಿತಸ್ಥ ಭಾವ ಕಾಡುವುದೂ ನಿಂತುಬಿಡುತ್ತದೆ. ನಿಮ್ಮ ಜತೆ ಯಾರೋ ಮಾತಾಡುತ್ತಿದ್ದಾಗ ನೀವು ಅಕಾರಣ ಮೊಬೈಲ್ ಎತ್ತಿಕೊಂಡಿರಿ ಎಂದರೆ ಅದು ಸಮಸ್ಯೆಯ ಸೂಚಕ, ನಮ್ಮನ್ನು ಮೊಬೈಲ್ ನಿಯಂತ್ರಿಸುತ್ತಿದೆ ಎಂದೇ ಅರ್ಥ.

ಸಮಯ, ಸಂಬಂಧ, ವ್ಯವಹಾರ ಇವೆಲ್ಲದಕ್ಕೆ ಮೊಬೈಲ್, ಇಂಟರ್ನೆಟ್ ಇವೆಲ್ಲವೂ ಬೇಕು. ಆದರೆ ಇವೆಲ್ಲವನ್ನು ಹಾಳುಮಾಡಲಿಕ್ಕೂ ಅವಷ್ಟೇ ಸಾಕು. ಪರಿಹಾರಕ್ಕೆ ಒಂದೇ ಮಾರ್ಗ- ಮೊದಲು ಈ ಸಮಸ್ಯೆ ನಮ್ಮಲ್ಲಿದೆಯೇ?
ಮೊಬೈಲ್, ಇಂಟರ್ನೆಟ್ ಇವೆಲ್ಲ ನಮ್ಮನ್ನು ನಿರಂತರ ಕೆರಳಿಸು‌ತ್ತಿವೆಯೇ? ಎಂದು ಪ್ರಶ್ನಿಸಿಕೊಳ್ಳಬೇಕು. ಸಮಸ್ಯೆ ಯನ್ನು ಗ್ರಹಿಸಿದರೆ ಅರ್ಧ ಬಗೆಹರಿಸಿದಂತೆ.

ದಿನಕ್ಕೆ ಒಂದಿಷ್ಟು ಹೊತ್ತಾದರೂ ಯಾವೆಲ್ಲ ಪ್ರಚೋದಕಗಳಿವೆಯೋ ಅದರಿಂದ ದೂರವಿರಬೇಕು. ನಾನಿಲ್ಲದಿ ದ್ದರೂ ಈ ಜಗತ್ತು ಹೀಗೆಯೇ ಇರುತ್ತಿತ್ತು ಎಂದುಕೊಂಡು ಸುಮ್ಮನೆ ಒಂದಿಷ್ಟು ಹೊತ್ತು ವಾಕಿಂಗ್‌ಗೆ ಹೋಗಿಬಿ ಡಬೇಕು, ಪೇಂಟಿಂಗ್ ಮಾಡಬೇಕು, ಹಾಡಬೇಕು, ಧ್ಯಾನದಲ್ಲಿ ತೊಡಗ ಬೇಕು. ಒಬ್ಬರೇ ಒಂದಿಷ್ಟು ಹೊತ್ತು ಏನೋ ಒಂದರಲ್ಲಿ ಅರೆಕ್ಷಣ ವಿಚಲಿತರಾಗದೆ ಮಾಡಬೇಕು. ಇದು ಬದುಕಿನ ಹೊಸ ಆಯಾಮವನ್ನು ತೆರೆಯುತ್ತದೆ. ಆದರೆ ಇದು ಸುಲಭ ವಲ್ಲ, ನಮ್ಮ ಸುತ್ತಲಿನ ಸಮಾಜ, ಸಂಬಂಧ, ವ್ಯವಹಾರ ಇದ್ಯಾವುದೂ ಇದನ್ನು ಒಪ್ಪುವುದಿಲ್ಲ. ಎಲ್ಲರೂ ನೀವು ನಿರಂತರ ಇದೆಲ್ಲದಕ್ಕೆ ಅಂಟಿಕೊಂಡೇ ಇರುತ್ತೀರಿ ಎಂಬಂತೆಯೇ ವ್ಯವಹರಿಸುತ್ತಾರೆ.

ಸೋಷಿಯಲ್ ಮೀಡಿಯಾ ಅಪ್ಲಿಕೇಷನ್ ಅನ್ನು ಡಿಲೀಟ್ ಮಾಡಬಹುದು, ಬೇಕೆನಿಸಿದಾಗಲಷ್ಟೇ ಇನ್ ಸ್ಟಾಲ್ ಮಾಡಿಕೊಳ್ಳಬಹುದು ಅಥವಾ ಹೋಮ್ ಸ್ಕ್ರೀನ್‌ನಿಂದ ಸೋಷಿಯಲ್ ಮೀಡಿಯಾ ಅಪ್ಲಿಕೇಷನ್ ತೆಗೆದು ಕಾಣದಂತೆ ಇಡಬಹುದು, ನೋಟಿಫಿಕೇಷನ್ ಬಾರದಂತೆ ಸೈಲೆಂಟ್ ಮಾಡಬಹುದು- ಹೀಗೆ ನೂರೆಂಟು ಮಾರ್ಗಗಳಿವೆ. ಆದರೆ ಅದೆಲ್ಲದಕ್ಕಿಂತ ಮೊದಲು, ‘ಇದೊಂದು ಸಮಸ್ಯೆ’ ಎಂಬುದು ನಮಗೆ ಮನದಟ್ಟಾಗಬೇಕು. ಆಗ ಮಾತ್ರ ಕೂತಲ್ಲಿ ಕೂರಲು, ನಿಂತಲ್ಲಿ ನಿಲ್ಲಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಬದುಕಿನ ಅರಿವೇ ಆಗದಂತೆ ಬದುಕಲು ಇಂದು ನೂರೆಂಟು ಸಲಕರಣೆ, ಮಾರ್ಗ, ಗದ್ದಲಗಳಿವೆ. ನೋಡನೋಡುತ್ತಲೇ, ‘ಹ್ಯಾಪಿ ದಿವಾಲಿ’, ‘ಹ್ಯಾಪಿ ನ್ಯೂ ಇಯರ್’ ಎನ್ನುತ್ತಲೇ ಬದುಕು ಮುಗಿದುಹೋಗುತ್ತದೆ, ಗೊತ್ತೇ ಆಗುವುದಿಲ್ಲ.

ಇದನ್ನೂ ಓದಿ: Shishir Hegde Column: ಭೂಗತರ ಸುರಂಗ- ಸುಲಭದಲ್ಲಾಗದು ಬಹಿರಂಗ