ಶಿಶಿರಕಾಲ
ಶಿಶಿರ್ ಹೆಗಡೆ
ನಮಗೆಲ್ಲರಿಗೂ ಗೊತ್ತು, ಯಾವುದೇ ಒಂದು ವಸ್ತು ನಮ್ಮದು ಎಂದಾದರೆ ಅದರ ಮಹತ್ವ ಹೆಚ್ಚು, ಬೆಲೆಯೂ ಹೆಚ್ಚು. ವಸ್ತುವಿನ ಮೇಲಿನ ವ್ಯಾಮೋಹ, ಕಳೆದುಕೊಂಡರೆ ವೈಯಕ್ತಿಕ ಲುಕ್ಸಾನು. ಯಾವುದೇ ವಸ್ತುವಿರಲಿ, ಅದು ಕಳೆದುಹೋಯಿತೆಂದರೆ ಅದು ನಮ್ಮಲ್ಲಿ ಇಲ್ಲದಿರು ವಾಗಿನದಕ್ಕಿಂತ ಹೆಚ್ಚಿನ ಕಿರಿಕಿರಿ ಹುಟ್ಟಿಸುತ್ತದೆ. ಇದು ಮನುಷ್ಯ ಸಹಜ ಗುಣ.
ಇಸವಿ 1900ರ ಆಸುಪಾಸು. ಜರ್ಮನಿಯ ಆಲ್ ಫ್ರೆಡ್ ವೆಗೆನರ್ ತನ್ನೆದುರಿನ ಗ್ಲೋಬ್ ಅನ್ನು ಆಚೀಚೆ ತಿರುಗಿಸುತ್ತಿದ್ದ. ಆಗ ಭೂಮಿಯ ಖಂಡಗಳ ಆಕಾರವನ್ನು ನೋಡುವಾಗ ಒಂದು ವಿಚಿತ್ರವನ್ನು ಗ್ರಹಿಸಿದ. ದಕ್ಷಿಣ ಅಮೆರಿಕ ಭೂಖಂಡವನ್ನು ಆಫ್ರಿಕಾ ಖಂಡದ ಪಶ್ಚಿಮಕ್ಕೆ puzzle ರೀತಿಯಲ್ಲಿ ಅಂಟಿಸಬಹುದು ಎಂದು ಅವನಿಗೆ ಅನಿಸಿತು. ಯಾವತ್ತೋ ತುಂಡಾಗಿ ಬೇರಾದಂತೆ ಈ ಖಂಡವನ್ನು ಕರಾರುವಾಕ್ಕಾಗಿ ಜೋಡಿಸ ಬಹುದಿತ್ತು. ಸಾಮಾನ್ಯದವರಾಗಿದ್ದರೆ ಇದೇನೋ ಕಾಕತಾಳೀಯ ಎಂಬಂತೆ ಅದನ್ನು ಅಷ್ಟಕ್ಕೇ ಬಿಡುತ್ತಿದ್ದರು. ಆದರೆ ಆಲ್ ಫ್ರೆಡ್ ಈ ವಿಷಯ ವನ್ನು ವಿಜ್ಞಾನಿಗಳಲ್ಲಿಗೆ ಒಯ್ದ. ಈ ಎಲ್ಲ ಖಂಡಗಳು ಹಿಂದೊಮ್ಮೆ ಒಂದಕ್ಕೊಂದು ಅಂಟಿದ್ದು ಕಾಲಾನುಕ್ರಮದಲ್ಲಿ ಬೇರ್ಪಟ್ಟು ತೇಲಿಕೊಂಡು
ಪರಸ್ಪರ ದೂರವಾಗಿವೆ ಎಂದು ಆತ ಪ್ರತಿಪಾದಿಸಿದ. ಅವನು ಹೇಳಿದ್ದು ಮೇಲ್ನೋಟಕ್ಕೆ ಹೌದು ಎನ್ನುವಂತಿತ್ತು, ಏಕೆಂದರೆ ಈ ಖಂಡಗಳನ್ನು ಅವನು ಹೇಳಿದಂತೆ ಜೋಡಿಸಬಹುದಿತ್ತು.
ಆದರೆ ಅದನ್ನು ನಂಬುವುದು, ಒಪ್ಪುವುದು ಹೇಗೆ? ಎಲ್ಲಿಯ ದಕ್ಷಿಣ ಅಮೆರಿಕ, ಎಲ್ಲಿಯ ಆಫ್ರಿಕಾ! ಅದೆಷ್ಟೋ ಸಾವಿರ ಮೈಲಿಯಷ್ಟು ದೂರ, ನಡುವೆ ಅಟ್ಲಾಂಟಿಕ್ ಸಮುದ್ರ. ಈ ಪುಣ್ಯಾತ್ಮ ಹೇಳಿದಂತೆ ಖಂಡಗಳು ಭೂಮಿಯ ತುಂಡಾಗಿ ತೇಲಾಡುತ್ತಿವೆ ಎಂದರೆ, ಅವೇನಾದರೂ ಇನ್ನು ಕೆಲವೇ
ವರ್ಷಗಳಲ್ಲಿ ಇನ್ನೆಲ್ಲೋ ಹೋಗಿ ಡಿಕ್ಕಿ ಹೊಡೆಯಲಿವೆಯಾ? ವಿಜ್ಞಾನಿಗಳೆಲ್ಲ, ‘ನಿನಗೆ ತಲೆ ಸರಿಯಿಲ್ಲ, ನಮ್ಮ ಸಮಯ ಹಾಳು’ ಎಂದು ಮೂಗು ಮುರಿದರು. ಆದರೆ ಇದನ್ನು ಸುಳ್ಳು ಎನ್ನಲೂ ಏನೂ ಸಾಕ್ಷ್ಯಗಳಿರಲಿಲ್ಲ. ಹಾಗಾಗಿ ಇದೊಂದು ‘ಕಲ್ಪಿತ ಸಿದ್ಧಾಂತ’ವಷ್ಟೇ (Hypothesis)
ಆಗಿ ಕೆಲವು ಕಾಲ ಉಳಿದುಕೊಂಡಿತು.
ಇದಾದ ಸುಮಾರು 50 ವರ್ಷಗಳ ನಂತರ ಅಲ್ಲಲ್ಲಿ ಉತ್ಖನನಗಳು ನಡೆದವು. ಆಗ ಅಲ್ಲೆಲ್ಲ ಸಿಕ್ಕ ಪಳೆಯುಳಿಕೆಗಳಿಂದ ಆಲ್ ಫ್ರೆಡ್ ಹೇಳಿದ್ದು ನಿಜವಿರಬಹುದು ಎನ್ನಿಸತೊಡಗಿತು. ಕ್ಯಾಮರೂನ್, ನೈಜರ್, ಘಾನಾ ಮೊದಲಾದ ಪಶ್ಚಿಮ ಆಫ್ರಿಕಾದ ದೇಶಗಳಲ್ಲಿ ಸಿಕ್ಕ ಪ್ರಾಣಿಗಳ ಪಳೆಯುಳಿಕೆ ಅಷ್ಟೇ ಅಲ್ಲ, ಸಸ್ಯಪ್ರಭೇದಗಳಲ್ಲಿಯೂ ಹೋಲಿಕೆಗಳು ಸ್ಪಷ್ಟವಾದವು. ನಂತರ ಜಗತ್ತು, ‘50 ವರ್ಷದ ಹಿಂದೆ ಆಲ್ ಫ್ರೆಡ್ ಹೇಳಿದ್ದು ಹೌದು’ ಎಂದು ಒಪ್ಪಿಕೊಂಡದ್ದು. ನ್ಯೂಟನ್‌ನ ಉದಾಹರಣೆಯನ್ನು ನಾವೆಲ್ಲಾ ಆಗೀಗ ಹೇಳುವುದಿದೆ- ‘ತಲೆಯ ಮೇಲೆ ಸೇಬು ಹಣ್ಣು ಬಿತ್ತು, ಅದರಿಂದಾಗಿ
ನ್ಯೂಟನ್ ಗುರುತ್ವಾಕರ್ಷಣ ಶಕ್ತಿಯ ಇರುವಿಕೆಯನ್ನು ಕಂಡುಹಿಡಿದ’ ಎಂದು. ಅಸಲಿಗೆ, ನ್ಯೂಟನ್‌ನ ತಲೆಯ ಮೇಲೆ ಸೇಬು ಬಿದ್ದದ್ದು ಬರೀ ಕಟ್ಟುಕಥೆ. ‘ತಲೆಯ ಮೇಲೆ ಸೇಬು ಬಿತ್ತು’ ಅಂತ ಅವನು ಅದೆಲ್ಲಿಯೂ ಹೇಳಿಲ್ಲ. ಉದಾಹರಿಸುವಾಗ, ‘ಮರದ ಮೇಲಿಂದ ಆಪಲ್ ಬಿದ್ದಂತೆ’ ಎಂದಿರಬಹುದೇ ವಿನಾ, ಸೇಬು ತಲೆಯ ಮೇಲೆ ಬಿದ್ದಾಕ್ಷಣ ‘ಯುರೇಕಾ, ಯುರೇಕಾ’ ರೀತಿಯಲ್ಲಿ ಅದು ಅವನ ಗ್ರಹಿಕೆಗೆ ಬಂದದ್ದಲ್ಲ.
ವೈಜ್ಞಾನಿಕ ಗ್ರಹಿಕೆಗಳು ಕೆಲವೊಮ್ಮೆ ಹಾಗೆಯೇ- ಏನೋ ಒಂದು ಚಿಕ್ಕ ವಿಷಯದ ಗ್ರಹಿಕೆಯ ಹಿನ್ನೆಲೆ ಹುಡುಕಿಕೊಂಡು ಹೋದಾಗ ಇನ್ನೊಂದು ಲೋಕವೇ ತೆರೆದುಕೊಳ್ಳುತ್ತದೆ. ನ್ಯೂಟನ್ ಇರಬಹುದು ಅಥವಾ ‘ಖಂಡಗಳು ದೂರಾಗುತ್ತಿವೆ’ ಎಂದ ಆಲ್ ಫ್ರೆಡ್ ಇರಬಹುದು, ಇವರೆಲ್ಲರೂ
ಅದೆಷ್ಟೋ ಕಾಲ ಎಲ್ಲರೂ ಕಂಡದ್ದನ್ನೇ ಕಂಡದ್ದು. ಇವರು ಕಂಡುಹಿಡಿದದ್ದು ಎನ್ನುವುದಕ್ಕಿಂತ, ಇದ್ದದ್ದನ್ನು ಗುರುತಿಸಿದ್ದು. ವಿಷಯ ಇದರ ಇನ್ನೊಂದು ಮಗ್ಗುಲಿನದು. ಹಾಗಾದರೆ ಆಲ್ ಫ್ರೆಡ್ ಹೇಳುವವರೆಗೂ, ಹೀಗೆ ಒಂದು ಕಾಲಕ್ಕೆ ಜೋಡಿಯಾಗಿದ್ದ ಖಂಡಗಳು ಬೇರ್ಪಟ್ಟು ದೂರವಾಗುತ್ತಿವೆ ಎಂಬ ಊಹೆಯು ಯಾರಿಗೂ ಬಂದಿರಲಿಲ್ಲವೇ? ಆಲ್ ಫ್ರೆಡ್ ಗಿಂತ ಮೊದಲು ಇದನ್ನು ಯಾರೂ ಅಂದಾಜಿಸಿರಲೇ
ಇಲ್ಲವೇ? ಅಥವಾ ನ್ಯೂಟನ್ ಹೇಳುವವರೆಗೂ ಸೇಬು ಹಣ್ಣನ್ನೋ ಅಥವಾ ಕಲ್ಲನ್ನೋ ಮೇಲಕ್ಕೆಸೆದರೆ ತಲೆಮೇಲೆ ಬೀಳುತ್ತದೆ ಎಂಬುದೇ ಗೊತ್ತಿರಲಿಲ್ಲವೇ? ಇವರುಗಳು ಗ್ರಹಿಸಿದ್ದು ಯಾವುದೂ ಹೊಸತಲ್ಲ, ಎಲ್ಲರೂ ಕಂಡದ್ದನ್ನೇ ಇವರು ಕಂಡದ್ದು.
ಆದರೆ ಎಲ್ಲರಿಗೂ ಇಷ್ಟು ಸಹಜವಿರುವ ವಿಷಯ ಅಷ್ಟು ಕಾಲ ಗೊತ್ತೇ ಆಗಲಿಲ್ಲವೇ? ಅದು ಹಾಗೆಂದಾದರೆ, ಇಂಥ ಅದೆಷ್ಟು ಚಿಕ್ಕಪುಟ್ಟ ವಿಷಯಗಳು ನಿತ್ಯ ನಮ್ಮರಿವಿಗೆ ಬಾರದೆ ಇರಬಹುದು? ಯಾವುದೋ ದೊಡ್ಡ ವೈಜ್ಞಾನಿಕ ಆವಿಷ್ಕಾರಗಳ ವಿಷಯಗಳಲ್ಲ, ನಿತ್ಯ ಬದುಕಿನ ತಿರುವುಗಳಲ್ಲಿ ಎದುರಾಗುವ ತೀರಾ ಸಾಧಾರಣ ವಿಷಯಗಳಲ್ಲಿ ಕೂಡ ಸಾಮೂಹಿಕ ಕುರುಡುತನ, ಕಣ್ಣಿದ್ದೂ ಕುರುಡು ಇರುವುದಿಲ್ಲವೇ? ಕಣ್ಣೆದುರಿಗೆ ಇದ್ದರೂ ಗ್ರಹಿಸದ ಇಂಥ ಸ್ಥಿತಿಯ ಬಗ್ಗೆ ಮನಃಶಾಸ್ತ್ರಕ್ಕಿಂತ ಅರ್ಥಶಾಸ್ತ್ರದಲ್ಲಿ ಜಾಸ್ತಿ ವಿವರಣೆಗಳಿವೆ.
ಮನುಷ್ಯ ವರ್ತನೆಗಳನ್ನು ಗ್ರಹಿಸುವುದು ಮತ್ತು ಅದನ್ನು ವ್ಯಾಪಾರಕ್ಕೆ ಬಳಸಿಕೊಳ್ಳುವುದು Behavioral Economics. ಗ್ರಾಹಕನ ಕುರುಡುತನ ಗ್ರಹಿಸಿ ವ್ಯಾಪಾರದಲ್ಲಿ ಬಳಸುವುದು ಸುಲಭ. ಹಾಗಾಗಿ Behavioral Economics ಎಂಬುದು ಮನಃಶಾಸ್ತ್ರದ ಅಂಗವೂ ಹೌದು. ಮಾಲುಗಳಲ್ಲಿ, ಅಂಗಡಿಗಳಲ್ಲಿ ಎಲ್ಲೆಡೆ ಇಂದು ಶೇ.50, ಶೇ.70 ರಿಯಾಯಿತಿ ಎಂದಿರುತ್ತದೆ. ಅದನ್ನು ಕಂಡಾಕ್ಷಣ ನಾವು ಗ್ರಾಹಕರು ಅಂಗಡಿಯೊಳಕ್ಕೆ ಹೋಗುತ್ತೇವೆ ಅಲ್ಲವೇ? ನಾವು ಹೀಗೆ ಒಳಹೊಕ್ಕುವಾಗ ಏನಂದುಕೊಂಡಿರುತ್ತೇವೆ? ಅಂಗಡಿಯಲ್ಲಿ ಯಾವುದೋ ಕೆಲಸಕ್ಕೆ ಬಾರದ ಒಂದಿಷ್ಟು ವಸ್ತುಗಳಿಗೆ ಮಾತ್ರ ಅಷ್ಟು ಡಿಸ್ಕೌಂಟ್ ಇರುತ್ತದೆ ಎಂದು ನಮಗೆ ಗೊತ್ತು.
ಇದೆಲ್ಲವೂ ಗ್ರಾಹಕರನ್ನು ಸೆಳೆಯಲು ಎಂಬುದೂ ಗೊತ್ತು. ಆದರೂ ಒಳಹೊಕ್ಕುತ್ತೇವೆ, ‘ನೋಡೋಣ ಏನಿದೆ’ ಎಂದು ಮುಂದಾಗುತ್ತೇವೆ. ಇಲ್ಲಿ ಎರಡು ವಿಷಯಗಳು ಕೆಲಸ ಮಾಡುತ್ತವೆ. ಮೊದಲನೆಯದು, Fear of missing opportunity – ಅವಕಾಶ ತಪ್ಪಿಹೋಗಬಹುದೇನೋ ಎಂಬ ಹೆದರಿಕೆ. ‘ನಾನೇನಾದರೂ ಈ ಅಂಗಡಿಯೊಳಕ್ಕೆ ಹೋಗಲಿಲ್ಲವೆಂದರೆ ಏನೋ ಒಂದು ತಪ್ಪಿಹೋಗಬಹುದು’ ಎಂಬ ಹೆದರಿಕೆ. ಅದನ್ನು ನಮ್ಮಲ್ಲಿ ಹುಟ್ಟು ಹಾಕಿದ್ದು ಯಾವುದು? ಆ ‘ಡಿಸ್ಕೌಂಟ್’ ಎಂಬ ಒಂದು ಆಕರ್ಷಣೆಯ ಬೋರ್ಡ್. ಇದನ್ನು Anchoring Bias- ನಿರ್ದೇಶಿಸುವ ಪ್ರಲೋಭನೆ ಎಂದು ಹೇಳುವುದು. ‘ಏನೋ ಇದೆ, ಅದು ನನಗೆ ತಪ್ಪಿಹೋಗಬಹುದು’ ಎಂಬ ಭಾವವನ್ನು ಹುಟ್ಟುಹಾಕುವುದೇ ಹೆಚ್ಚಿನ ಬಾರಿ ಇಂಥ ಬೋರ್ಡುಗಳ ಕೆಲಸವಾಗಿರುತ್ತದೆ. ಅದಕ್ಕಾಗಿಯೇ ವರ್ಷಪೂರ್ತಿ ಶೇ.50ರ ಡಿಸ್ಕೌಂಟ್ ಎಂಬ ಬೋರ್ಡ್ ಕೆಲವು ಅಂಗಡಿಗಳ ಎದುರು ಸಾಮಾನ್ಯ. ಅಲ್ಲದೆ ಅದೆಷ್ಟೋ ಬಾರಿ ಅದರ ಡಿಸ್ಕೌಂಟ್‌ನ ಅರ್ಧ ಬೆಲೆ, ಅದರ ಅಸಲಿ ಬೆಲೆಗಿಂತ ಹೆಚ್ಚಿಗೆಯದಾಗಿರುತ್ತದೆ. ಇಲ್ಲಿ ಗ್ರಾಹಕರು ಅಂಗಡಿಯೊಳಕ್ಕೆ ಬರುವಂತೆ ಮಾಡುವುದು ಮಾತ್ರ ಬೋರ್ಡಿನ ಕೆಲಸ.
ಅಮೆರಿಕದಲ್ಲಿ ಶೇ.99 ಅಥವಾ ಅದಕ್ಕಿಂತಲೂ ಹೆಚ್ಚಿನ ಖರೀದಿ, ವ್ಯವಹಾರವಾಗುವುದು ಕ್ರೆಡಿಟ್ ಕಾರ್ಡ್‌ನಲ್ಲಿ. ಕ್ರೆಡಿಟ್ ಕಾರ್ಡ್ ವ್ಯಾಪಾರರೀತಿ ಬಹಳ ಸರಳವಾದದ್ದು. ನೀವು ಅಂಗಡಿಗೆ ಹೋಗಿ, ಕ್ರೆಡಿಟ್ ಕಾರ್ಡ್ ಬಳಸಿ 100 ರುಪಾಯಿ ಮೌಲ್ಯದ ವಸ್ತುವನ್ನು ಖರೀದಿಸಿದಿರಿ ಎಂದು ಕೊಳ್ಳಿ, ಆಗ ಕ್ರೆಡಿಟ್ ಕಾರ್ಡ್ ಕಂಪನಿ/ಬ್ಯಾಂಕು ಆ ಅಂಗಡಿಯವನಿಗೆ 95ರಿಂದ 97 ರುಪಾಯಿಯನ್ನಷ್ಟೇ ಕೊಡುತ್ತದೆ. ಶೇ.3ರಿಂದ ಶೇ.5ರಷ್ಟು ಹಣವನ್ನು ಕ್ರೆಡಿಟ್ ಕಾರ್ಡ್ ಸಂಸ್ಥೆ ತನ್ನಲ್ಲಿಯೇ ಇಟ್ಟುಕೊಳ್ಳುತ್ತದೆ. ಇದರಿಂದಾಗಿ ಅಂಗಡಿಯವನಿಗೆ ಅಷ್ಟು ಪ್ರತಿಶತ ಲಾಭ ಕಡಿಮೆಯಾಗುತ್ತದೆ. ಅದಕ್ಕೆಂದೇ ಕೆಲವು ಅಂಗಡಿಯವರು ಕ್ರೆಡಿಟ್ ಕಾರ್ಡ್ ಎಂದರೆ ‘ಸ್ವೀಕರಿಸುವುದಿಲ್ಲ’ ಎನ್ನುವುದು. ಆದರೆ, ಇದೊಂದು ಗ್ರಾಹಕನ ಅವಶ್ಯಕತೆ, ಸೌಲಭ್ಯ. ಈ ಸೌಲಭ್ಯವಿಟ್ಟರಷ್ಟೇ ಗ್ರಾಹಕ ಖರೀದಿಸುತ್ತಾನೆ. ಅಷ್ಟೇ ಅಲ್ಲ, ಇದರಿಂದಾಗಿ ಗ್ರಾಹಕ ಹೆಚ್ಚಿನ ಬೆಲೆಯ ವಸ್ತುವನ್ನು ಖರೀದಿಸುತ್ತಾನೆ. ಗ್ರಾಹಕನಿಗೆ, ಅವನದೇ ದುಡ್ಡಿನಲ್ಲಿ ಮುರಿದುಕೊಂಡ ಹಣದಲ್ಲಿ ಒಂದು ಪ್ರತಿಶತ ಹಣವನ್ನು ‘ಕ್ಯಾಶ್ ಬ್ಯಾಕ್’ ಆಗಿ ವಾಪಸ್ ಕೊಡುತ್ತದೆ. ಇದರಿಂದ ಗ್ರಾಹಕ, ಕ್ರೆಡಿಟ್ ಕಾರ್ಡ್ ಕಂಪನಿ ಮತ್ತು ಅಂಗಡಿಯಾತ ಎಲ್ಲರೂ ಖುಷ್. ಅಸಲಿಗೆ ಕ್ರೆಡಿಟ್ ಕಾರ್ಡ್ ಕಂಪನಿ ವಾಪಸ್ ಕೊಡುತ್ತಿರುವುದು ನಮ್ಮದೇ ಹಣ.
ನಷ್ಟ ತಪ್ಪಿಸಿಕೊಳ್ಳಲು ಅಂಗಡಿಯಾತ ಅಷ್ಟು ಹಣ ಹೆಚ್ಚಿಗೆಗೇ ಮಾರುವುದರಿಂದ, ಆ ನಷ್ಟವು ಪರೋಕ್ಷವಾಗಿ ಗ್ರಾಹಕರಾದ ನಮ್ಮ ಮೇಲೆಯೇ! ಅಷ್ಟೇ ಅಲ್ಲ, ಕ್ರೆಡಿಟ್ ಕಾರ್ಡ್‌ನಿಂದ ಹೆಚ್ಚಿನ ಖರೀದಿ ಮಾಡಿ, ಆಮೇಲೆ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ತುಂಬಲಾಗಲಿಲ್ಲವೆಂದರೆ ತರಹೇವಾರಿ ಬಡ್ಡಿ.
ನಾನಂತೂ ಕಳೆದ ಒಂದೂವರೆ ದಶಕದಿಂದ ನಗದು ಹಣವನ್ನು ಮುಟ್ಟಿದ್ದು ಕಡಿಮೆಯೇ. ಭಿಕ್ಷುಕನಿಗೆ ಹಾಕಬೇಕೆಂದಾಗಲೂ ನನ್ನ ಕಿಸೆಯಲ್ಲಿ ಒಂದೇ ಒಂದು ಡಾಲರ್ ನೋಟು ಇರದಿರುವುದೇ ಜಾಸ್ತಿ. ನಮ್ಮ ಮನೆಯ ಎಲ್ಲ ವ್ಯವಹಾರಗಳೂ ನಡೆಯುವುದು ಕ್ರೆಡಿಟ್ ಕಾರ್ಡಿನಲ್ಲಿಯೇ
(ಅಮೆರಿಕದ ವ್ಯವಸ್ಥೆಗೆ ತಕ್ಕಂತೆ). ಈಗಿತ್ತಲಾಗಿ ನಮ್ಮ ಮನೆಯಲ್ಲೊಂದು ಪ್ರಯೋಗ ಮಾಡಿದೆವು- ನಾವೆಲ್ಲರೂ ಮುಂದಿನ ಒಂದು ತಿಂಗಳು ಅಂಗಡಿಗೆ ಹೋಗುವಾಗ ಕ್ರೆಡಿಟ್ ಕಾರ್ಡ್ ಬದಲಿಗೆ, ಎಟಿಎಂಗೆ ಹೋಗಿ ನಗದನ್ನು ತೆಗೆದು ಹೋಗುವುದು ಅಂತ. ಈ ಪ್ರಯೋಗಕ್ಕೆ ಮನೆಯಲ್ಲಿ
ಮೊದಲು ಎಲ್ಲಿಲ್ಲದ ವಿರೋಧ ವ್ಯಕ್ತವಾಯಿತು- ‘ಇದೆಂಥ ಕೆಲಸವಿಲ್ಲದ ಪ್ರಯೋಗಗಳು, ಎಟಿಎಂಗೆ ಹೋಗಿ ಹಣ ತರಬೇಕಾದರೆ ಅಲ್ಲಿಗೆ ಕಾರನ್ನು ಓಡಿಸಿಕೊಂಡು ಹೋಗಬೇಕಾಗುತ್ತೆ, ಸುಮ್ಮನೇ ಪೆಟ್ರೋಲ್ ಹಾಳು’ ಇತ್ಯಾದಿ. ಜತೆಗೆ ‘ಕ್ಯಾಶ್ ಬ್ಯಾಕ್’ ಬೇರೆ ಬರುವುದಿಲ್ಲ.
ಅದರರ್ಥ ಹೆಚ್ಚಿನ ಹಣ ತೆರದಂತಾಯಿತು. ಮೊದಲೆರಡು ದಿನ ಅಂಗಡಿಗೆ ಹೋಗುವಾಗ ಇದೊಂದು ಕಿರಿಕಿರಿಯೆಂದೇ ಅನ್ನಿಸಿದ್ದು ಸುಳ್ಳಲ್ಲ. ಆದರೂ ನಿರ್ಧರಿಸಿ ಆದದ್ದಕ್ಕೆ ನಗದು ವ್ಯವಹಾರ ಮುಂದುವರಿಯಿತು. ಇದನ್ನು ಕೆಲವು ತಿಂಗಳುಗಳ ಕಾಲ ನಡೆಸಿದಾಗ, ಕೆಲವು ಗ್ರಹಿಕೆಗಳು ಸ್ಪಷ್ಟವಾದವು. ಮೊದಲನೆಯದು, ನಗದಿನ ರೂಪದಲ್ಲಿ ವ್ಯವಹರಿಸಲು ಆರಂಭಿಸಿದಾಗಿನಿಂದ ನಮ್ಮ ತಿಂಗಳ ಖರ್ಚಿನಲ್ಲಿ ಸುಮಾರು ಶೇ.20 ರಷ್ಟು ಇಳಿಕೆಯಾಗಿತ್ತು. ಏಕೆಂದರೆ, ಪ್ರತಿ ಬಾರಿ ನಗದು ನೀಡುವಾಗ, ಹಣ ಖರ್ಚಾದ ಅನುಭವವಾಗುತ್ತಿತ್ತು. ಅದೇ ಕ್ರೆಡಿಟ್ ಕಾರ್ಡ್ ಬಳಸುವಾಗ ಖರ್ಚುಮಾಡುವ ಅನುಭವ ಆಗುತ್ತಲೇ ಇರಲಿಲ್ಲ, ಅದನ್ನು ಬಳಸಿ ವ್ಯವಹರಿಸುವಾಗ ಇಷ್ಟೆಲ್ಲ ಖರ್ಚು ಆಗುತ್ತಿದೆ ಎಂಬುದು ಅರಿವಿಗೇ ಬರುತ್ತಿರಲಿಲ್ಲ. ಇದರಿಂದ ಗ್ರಹಿಕೆಗೆ ಬಂದ ಉಳಿತಾಯವು, ಕ್ರೆಡಿಟ್ ಕಾರ್ಡ್‌ನ ‘ಕ್ಯಾಶ್ ಬ್ಯಾಕ್’ಗಿಂತ ಶೇ.19ರಷ್ಟು ಜಾಸ್ತಿಯಾಗಿತ್ತು. ಫೋನ್ ಪೇ, ಗೂಗಲ್ ಪೇ, ಕ್ರೆಡಿಟ್ ಕಾರ್ಡ್ ಈ ರೀತಿಯ ಅದೆಷ್ಟೋ ಸೌಲಭ್ಯಗಳ ಬಗ್ಗೆ ಯಾವುದೇ ತಕರಾರಿಲ್ಲ. ಆದರೆ ಇಂಥ ಅಸಂಖ್ಯ ಸೌಲಭ್ಯಗಳು ಕಣ್ಣಿದ್ದವನನ್ನೂ ಕುರುಡಾಗಿಸುವುದಂತೂ ಸುಳ್ಳಲ್ಲ.
ಅರ್ಥಶಾಸ್ತ್ರದಲ್ಲಿ Sunk Cost Fallacy ಎಂಬ ಸಿದ್ಧಾಂತವೊಂದಿದೆ. ನಮಗೆಲ್ಲರಿಗೂ ಬಂತು, ಯಾವುದೇ ಒಂದು ವಸ್ತು ನಮ್ಮದು ಎಂದಾದರೆ ಅದರ ಮಹತ್ವ ಹೆಚ್ಚು, ಬೆಲೆಯೂ ಹೆಚ್ಚು. ವಸ್ತುವಿನ ಮೇಲಿನ ವ್ಯಾಮೋಹ, ಕಳೆದುಕೊಂಡರೆ ವೈಯಕ್ತಿಕ ಲುಕ್ಸಾನು. ಯಾವುದೇ ವಸ್ತುವಿರಲಿ,
ಅದು ಕಳೆದುಹೋಯಿತೆಂದರೆ ಅದು ನಮ್ಮಲ್ಲಿ ಇಲ್ಲದಿರುವಾಗಿನದಕ್ಕಿಂತ ಹೆಚ್ಚಿನ ಕಿರಿಕಿರಿ ಹುಟ್ಟಿಸುತ್ತದೆ. ಇದು ಮನುಷ್ಯ ಸಹಜ ಗುಣ- Basic instinct. ನಮ್ಮ ಪೂರ್ವಜರಿಗೆ ಅವರ ಗುಡಿಸಲು/ಗುಹೆ, ಆಹಾರ ಹೀಗೆ ಕೆಲವೇ ಕೆಲವು ಅಸ್ತಿತ್ವಗಳ ಮೇಲೆ ಎಲ್ಲಿಲ್ಲದ ವ್ಯಾಮೋಹ ಇರಲೇ ಬೇಕಿತ್ತು.
ಇದು ದೀರ್ಘ ವಿಕಸನದಲ್ಲಿ ಅತ್ಯವಶ್ಯವಿದ್ದ ಗುಣ. ಪಡೆದಾಗ ಹಿಗ್ಗುವುದಕ್ಕಿಂತ ಕಳೆದುಕೊಂಡಾಗ ಹೆಚ್ಚಿನ ದುಃಖವಾಗ ಬೇಕಾದದ್ದು ಬದುಕುಳಿಯಲು ಅವಶ್ಯವಾಗಿತ್ತು. ನಮ್ಮಲ್ಲಿನ ಈ ಮನುಷ್ಯ ಮೂಲಪ್ರವೃತ್ತಿ ಅದೆಷ್ಟು ಗಟ್ಟಿಯೆಂದರೆ, ಸುಲಭಕ್ಕೆ ಯಾವುದನ್ನೇ ಕಳೆದುಕೊಳ್ಳಲು, ಬಿಟ್ಟುಕೊಡಲು ಮನಸ್ಸಾಗುವುದಿಲ್ಲ. ವಸ್ತುವಷ್ಟೇ ಅಲ್ಲ, ಹಣ, ಸಮಯ ಇವೆಲ್ಲದರ ಮಟ್ಟಿಗೂ ನಮ್ಮದು ಅದೇ ನಡೆ. ನಾವು ವ್ಯಯಿಸಿದ ಹಣ,
ಸಮಯಕ್ಕೆ ಅತಿಯಾದ ಬೆಲೆ. ಕಳೆದದ್ದು ನಿನ್ನದಾದರೆ ಎಂಟಾಣೆ, ನನ್ನದಾದರೆ ರುಪಾಯಿ. ಈ ಗುಣದಿಂದ ಆಗುವ ನಷ್ಟ ಕೂಡ ನಮ್ಮ ಗ್ರಹಿಕೆಗೆ ಬರುವುದಿಲ್ಲ. ಇದಕ್ಕೆ ಅಸಂಖ್ಯ ಉದಾಹರಣೆಗಳು ನಿತ್ಯ ಕಾಣಿಸುತ್ತವೆ.
ಉದಾಹರಣೆಗೆ ಜಿಮ್ ಸದಸ್ಯತ್ವ. ನೀವು ಯಾವುದೇ ಜಿಮ್ ನಲ್ಲಿ ಸದಸ್ಯತ್ವ ಪಡೆಯಬೇಕೆಂದರೆ ಸೇರಿಕೊಳ್ಳುವಾಗ ಮೊದಲು ಒಂದಿಷ್ಟು ಹಣ ತೆರಬೇಕಾಗುತ್ತದೆ, ಅಲ್ಲವೇ? ಅದಾದ ನಂತರ ಮಾಸಿಕ ಇಂತಿಷ್ಟು. ಸಾಮಾನ್ಯವಾಗಿ ಯಾವುದೇ ಜಿಮ್ ಇರಲಿ, ಅಲ್ಲಿಗೆ ಬಂದು ಹೊಸತಾಗಿ
ಸದಸ್ಯತ್ವ ಪಡೆಯುವವರಲ್ಲಿ ಹೆಚ್ಚಿನವರು, ಅದಾದ ನಂತರ ಒಂದೆರಡು ದಿನ ಬಂದು ಮಾಯವಾಗಿಬಿಡುತ್ತಾರೆ. ಇಂಥವರ ಒಂದು ದೊಡ್ಡ ವರ್ಗವೇ ಇರುತ್ತದೆ. ಆದರೆ ಹೀಗೆ ಬರುವುದನ್ನು ನಿಲ್ಲಿಸಿದ ಬಹುತೇಕರು, ಮುಂದಿನ ಮೂರರಿಂದ ಆರು ತಿಂಗಳು ಜಿಮ್‌ಗೆ ಬಾರದಿದ್ದರೂ, ಮಾಸಿಕ ಫೀಸು ಕಟ್ಟುತ್ತಲೇ ಇರುತ್ತಾರಂತೆ. ಏಕೆಂದರೆ, ಈಗಾಗಲೇ ಕಟ್ಟಿದ ಹಣವನ್ನು ಕಳೆದುಕೊಂಡ ಭಾವ ಅವರಲ್ಲಿ ಕಾಡುತ್ತಿರುತ್ತದೆ.
ಹೀಗೆ ಕಳೆದುಕೊಂಡ ಹಣದ ಮೌಲ್ಯವನ್ನು ಹೇಗಾದರೂ ಮಾಡಿ ಪಡೆಯಬೇಕೆಂಬ ಉತ್ಕಟತೆ ಅವರನ್ನು ಇನ್ನಷ್ಟು ನಷ್ಟಕ್ಕೆ ಒಳಗಾಗುವಂತೆ ಮಾಡುತ್ತದೆ. ಈ ರೀತಿ, ‘ನಾಳೆ ಆರಂಭಿಸಿದರಾಯ್ತು’ ಎಂದು ವರ್ಷಗಟ್ಟಲೆ ಜಿಮ್‌ನ ಮಾಸಿಕ ಫೀಸು ಕೊಡುವವರದ್ದು Sunk Cost Fallacy.
ನಿತ್ಯ ನಮ್ಮ ಹಲವು ವ್ಯವಹಾರಗಳಲ್ಲಿ ಈ Sunk Cost Fallacy ಎಂಬುದು ಬಹುವಾಗಿ, ಬಹುಮುಖದಲ್ಲಿ ನಮಗರಿವಿಲ್ಲದಂತೆ ನಮ್ಮನ್ನು ನಿರ್ದೇಶಿಸುತ್ತಿರುತ್ತದೆ. ವಿಶೇಷವಾಗಿ ಸಂಬಂಧಗಳಲ್ಲಿ. ಒಬ್ಬ ಬಹುಕಾಲದ ಸ್ನೇಹಿತನಿರುತ್ತಾನೆ, ಅವನ ಜತೆ ಕಳೆದ ಸವಿನೆನಪುಗಳು ಅಸಂಖ್ಯ. ಆದರೆ ಇದ್ದಕ್ಕಿದ್ದ ಹಾಗೆ ಆ ಸ್ನೇಹ ಯಾವುದೋ ಒಂದು ಕಾರಣಕ್ಕೆ ಹಳಸಿ ಬಿಡುತ್ತದೆ.
ಕೆಲವರು ಅಷ್ಟಕ್ಕೇ ಮೈದಡವಿ ಮುಂದುವರಿದು ಬಿಡುತ್ತಾರೆ. ಆದರೆ ಬಹುತೇಕರು ಹಾಗಲ್ಲ, ಸ್ನೇಹಿತನ ಕಿರಿಕಿರಿಯೆಲ್ಲವನ್ನೂ ತಡೆದುಕೊಳ್ಳುತ್ತಾರೆ. ಅಪಮಾನವನ್ನೂ ಸಹಿಸಿಕೊಂಡುಬಿಡುತ್ತಾರೆ. ಎಷ್ಟೋ ಸಂಬಂಧಗಳು ಅದೆಷ್ಟೇ ಹದಗೆಟ್ಟರೂ ವ್ಯಾಮೋಹ ಮುಂದುವರಿಯುತ್ತದೆ. ಇದಕ್ಕೆ
ಭಾವನಾತ್ಮಕ ಕಾರಣ ಒಂದು ಕಡೆ; ಇನ್ನೊಂದು ಕಡೆ, ಈಗಾಗಲೇ ವ್ಯಯಿಸಿದ ಸಮಯ, ಬಸಿದ ಭಾವ ನಮ್ಮದು. ಅದರ ಬೆಲೆ ಸಂಬಂಧಗಳ ಕಷ್ಟಗಳನ್ನೂ ಮೀರುವಂತೆ ಮಾಡಿಬಿಡುತ್ತದೆ. ಕ್ರಮೇಣ ಗಂಡನ ಹೊಡೆತವನ್ನು ಸಹಿಸುವ ಹೆಂಡತಿಗೆ, ಇನ್ನಷ್ಟು ತಿಂದರೂ ಸರಿ. ಆಸೆಯ ಜತೆಗೆ ಕಳೆದ ಕಷ್ಟಗಳ ಮೇಲೂ ಬಿಡಲಾಗದ ಮೋಹ.
ಇಷ್ಟು ಕಾಲ ಸಹಿಸಿಕೊಂಡಾಗಿದೆ, ಇನ್ನು ಸ್ವಲ್ಪ ಕಾಲ ಸಹಿಸಿಕೊಂಡರಾಯ್ತು- ಅದು Sunk Cost Fallacy. ಬಹುರಾಷ್ಟ್ರೀಯ ಕಂಪನಿಯ ಅದೆಷ್ಟೋ ಪ್ರಾಜೆಕ್ಟುಗಳು ಹೀಗೆಯೇ ಆಗುವುದುಂಟು. ಈಗಾಗಲೇ ಇಷ್ಟು ವ್ಯಯಿಸಿ ಆಗಿದೆ ಎಂಬ ಏಕೈಕ ಕಾರಣಕ್ಕೆ, ಕಷ್ಟವಾದರೂ-ನಷ್ಟ ವಾದರೂ ಮುಂದುವರಿಸಿಕೊಂಡು ಹೋಗುವುದಿದೆ. ಹೊಸ ಪುಸ್ತಕ ಖರೀದಿಸಿ 20 ಪೇಜು ಓದುವಾಗ ಸಾಕೆನಿಸಿದರೂ ದುಡ್ಡು ಕೊಟ್ಟಾಗಿದೆ ಎಂದು ಓದುವುದು, ಆ ಮೂಲಕ ಇನ್ನಷ್ಟು ಸಮಯ, ಶ್ರಮ ವ್ಯಯಿಸುವುದು ಕೂಡ ಇದೇ ಗುಂಪಿಗೆ ಸೇರುವಂಥದ್ದು. ಷೇರುಪೇಟೆಯಲ್ಲಿ ಹೊಸತಾಗಿ ಹಣ ತೊಡಗಿಸುವವರು ಯದ್ವಾತದ್ವಾ ತೊಡಗಿಸಿ ಕಳೆದುಕೊಳ್ಳುವುದು ಸಾಮಾನ್ಯ. ಹಾಗೆ ಕಳೆದುಕೊಂಡ ಹಣವನ್ನು ಮತ್ತೆ ಹಿಂಪಡೆಯಬೇಕೆಂದು ಇನ್ನಷ್ಟು ಹಣವನ್ನು ಕಳೆದುಕೊಳ್ಳುವುದು Sunk Cost Fallacy. ಹೋಟೆಲ್ ನಲ್ಲಿ ‘ಫುಲ್ ಮೀಲ್ಸ್’ಗೆ ಹಣ ಕೊಟ್ಟಿದ್ದೇನೆ ಎಂದು, ಕಷ್ಟವಾದರೂ ಅತಿಯೆನಿಸುವಷ್ಟು ತಿನ್ನುವುದು ಕೂಡ ಇದೇ ಜಾಯಮಾನದ್ದು.
ನಮ್ಮ ನಿತ್ಯದ ಅದೆಷ್ಟೋ ನಿರ್ಧಾರಗಳನ್ನು, ವ್ಯಾಪಾರ-ವ್ಯವಹಾರಗಳನ್ನು, ಸಂಬಂಧಗಳನ್ನು, ಬದುಕನ್ನು ನಮ್ಮ ಅರಿವಿಗೆ ಬಾರದಂತೆ ಅಗೋಚರ ಗುಣಗಳು ನಿರ್ದೇಶಿಸುತ್ತಿರುತ್ತವೆ. ಅವು ನ್ಯೂಟನ್ನನ ಗುರುತ್ವಾಕರ್ಷಣ ನಿಯಮದಂತೆ, ಆಲ್ ಫ್ರೆಡ್‌ನ ತೇಲಾಡುವ ಖಂಡಗಳಂತೆ.
ಒಂದು ಕ್ಷಣ, ಎಲ್ಲ ಬದಿಗಿರಿಸಿ ಗ್ರಹಿಸಿದಲ್ಲಿ, ಚಿಕ್ಕ ಗ್ರಹಿಕೆಗಳನ್ನು ಪರಾಮರ್ಶಿಸಿದಲ್ಲಿ, ವಿವೇಚಿಸಿದಲ್ಲಿ ಮಾತ್ರ ಅವು ಅರಿವಿಗೆ ಬರುತ್ತವೆ. ನಷ್ಟ ತಪ್ಪುತ್ತದೆ.
ಇದನ್ನೂ ಓದಿ: #SanthoshHegde