Friday, 27th September 2024

Shivanand G Hegde Column: ತಾಳಮದ್ದಳೆಯ ಹೆಸರಾಂತ ಅರ್ಥಧಾರಿ

ಸವಿ ನೆನಪು

ಶಿವಾನಂದ ಜಿ ಹೆಗಡೆ

ಹುಳಿಸೇಮಕ್ಕಿ ವೆಂಕಟ್ರಮಣ ಮಾಸ್ತರರಿಗೆ ತಾಳಮದ್ದಳೆಯ ಗೀಳು ತಗುಲಿದ್ದು ಯುವ ವಯಸ್ಸಿನಲ್ಲಿಯೇ. ಇದಕ್ಕೆ ಪ್ರೇರಣೆಯಾದವರು ಅಜ್ಜನ ಮನೆಯ ‘ಮಾವ ಭಾಗವತ’ರು. ನಂತರ ನಿರಂತರವಾಗಿ ತಾಳಮದ್ದಳೆ ಯ ಅರ್ಥ ಗಾರಿಕೆಯಲ್ಲಿ ತೊಡಗಿಸಿಕೊಂಡರು. ವೇದ, ಉಪನಿಷತ್ ಮತ್ತು ಧರ್ಮಗ್ರಂಥಗಳ ಸಾರವನ್ನು ಆಳವಾಗಿ ತಿಳಿದು ಕೊಂಡರು.

1960 ರಿಂದ 2000ನೇ ಇಸವಿಯ ನಡುವಿನ ಅವಧಿಯು ಯಕ್ಷಗಾನ ತಾಳಮದ್ದಳೆಯ ಉತ್ತುಂಗದ ಕಾಲವೆಂದೇ
ಹೇಳಬೇಕು. ಏಕೆಂದರೆ ಹಲವಾರು ದಿಗ್ಗಜ ಪಾತ್ರಧಾರಿಗಳು ಉತ್ಕೃಷ್ಟತೆಯನ್ನು ಮೆರೆದ ಸಮಯವದು. ಶೇಣಿ ಗೋಪಾಲಕೃಷ್ಣ ಭಟ್, ಮಲ್ಪೆ ಸಾಮಗರು, ಕುಂಬ್ಳೆ ಸುಂದರ್ ರಾವ್, ತೆಕ್ಕಟ್ಟೆ ಆನಂದ್ ಮಾಸ್ತರ್, ಗೋವಿಂದ ಭಟ್, ಪೆರ್ಲ ಕೃಷ್ಣಭಟ್, ಡಾ. ಎಂ.ಪ್ರಭಾಕರ್ ಜೋಶಿ ಮುಂತಾದ ಮಹಾನ್ ಅರ್ಥಧಾರಿಗಳು ತಾಳಮದ್ದಳೆಯ ಕಾರ್ಯಕ್ರಮವನ್ನು ಅತ್ಯಂತ ಎತ್ತರದ ಮಟ್ಟಕ್ಕೆ ತಲುಪಿಸಿದ ಕಾಲವದು. ಜನರಿಗೆ ಶ್ರೇಷ್ಠ ಮಟ್ಟದ ಕಲಾಪ್ರದರ್ಶನ
ನೀಡಿದ ಇವರೆಲ್ಲರೂ ದಕ್ಷಿಣಕನ್ನಡದ ಮೂಲದವರು.

ಉತ್ತರಕನ್ನಡದಲ್ಲಿಯೂ ತಾಳಮದ್ದಳೆಯು ಸಾಕಷ್ಟು ಜನಪ್ರಿಯವಾಗಿದ್ದ, ಅರ್ಥಧಾರಿಗಳು ತಮ್ಮ ಸಾಮರ್ಥ್ಯ ವನ್ನು ಒರೆಗೆ ಹಚ್ಚಿದ್ದ ಕಾಲವದು. ಮಾತಿನ ಮೋಡಿಯಲ್ಲಿ ಪಾತ್ರವನ್ನು ಜನಮನ ತಲುಪುವಂತೆ ಪ್ರದರ್ಶಿಸಿದ್ದ ಉತ್ತರಕನ್ನಡದ ಅಂದಿನ ಶ್ರೇಷ್ಠ ಅರ್ಥಧಾರಿಗಳ ಯಾದಿಯಲ್ಲಿ ವೆಂಕಟ್ರಮಣ ಹುಳಿಸೇಮಕ್ಕಿ ಅಗ್ರಗಣ್ಯರು. ‘ಹುಳಿಸೇ ಮಕ್ಕಿ ಮಾಸ್ತರ್’ ಎಂದೇ ಖ್ಯಾತರಾಗಿದ್ದ ಅವರು, ತಾಳಮದ್ದಳೆಯ ಅರ್ಥಧಾರಿತ್ವದಲ್ಲಿ ‘ಮಾಸ್ಟರ್’ ಎಂದೇ ನೆನಪಿನಲ್ಲುಳಿದವರು.

ವೆಂಕಟ್ರಮಣ ಹೆಗಡೆಯವರು ಉತ್ತರಕನ್ನಡದ ಕುಮಟಾ ತಾಲೂಕಿನ ಮೂರೂರಿನವರು. ‘ಮೂರೂರು’ ಹೆಸರು ಬಂದಾಗ ಯಕ್ಷಗಾನ ಮತ್ತು ತಾಳಮದ್ದಳೆ ಕ್ಷೇತ್ರದಲ್ಲಿ ಬೆಳಕಿಗೆ ಬಂದಿರುವ ಹಲವಾರು ‘ಉಲ್ಲೇಖನೀಯ’ ಕಲಾವಿದ ರಿದ್ದಾರೆ. ಯಕ್ಷಗಾನ ಪಾತ್ರಧಾರಿಗಳಾಗಿ ದೇವರು ಹೆಗಡೆ, ಈಶ್ವರ ಹೆಗಡೆ, ಗಜಾನನ ಹೆಗಡೆ ವರ್ಧನ್, ಸತ್ಯ ಭಟ್ಟರು, ವಿಷ್ಣು ಭಟ್, ರಮೇಶ್ ಭಂಡಾರಿ, ಸುಬ್ರಮಣ್ಯ ಹೆಗಡೆ, ಭಾಗವತರಾಗಿ ಸರ್ವೇಶ್ವರ ಹೆಗಡೆ, ಚಂಡೆ-ಮದ್ದಳೆ ವಾದಕ ರಾಗಿ ಗಜಾನನ ಹೆಗಡೆ ಮತ್ತು ನರಸಿಂಹ ಹೆಗಡೆ ಇವರೆಲ್ಲ ಮೂರೂರಿನವರು.

ಇವರೆಲ್ಲ ವ್ಯವಸಾಯಿ ಮೇಳಗಳಲ್ಲಿ ಸೇವೆ ಸಲ್ಲಿಸಿ ಹೆಸರಾದವರು. ತಾಳಮದ್ದಳೆಗಷ್ಟೇ ಸೀಮಿತವಾಗಿ ಹೆಸರಿಸುವು ದಾದರೆ ವೆಂಕಟ್ರಮಣ ಮಾಸ್ತರ್, ಮಧುಕೇಶ್ವರ್ ಆಡ್ಕೊಳಿ, ಗಜಾನನ ಮಾಸ್ತರ್, ಜಿ.ವಿ.ಹೆಗಡೆ ಇವರೆಲ್ಲ ಇದೇ ಊರಿನವರು. ಯಕ್ಷಗಾನ ಕ್ಷೇತ್ರದ ಚಿರಪರಿಚಿತ ಕಲಾವಿದ ಮೂರೂರು ದೇವರು ಹೆಗಡೆ ಯವರ ನಿಜನಾಮವೂ ವೆಂಕಟ್ರಮಣ ಎಂದೇ. ಮೂರೂರು ಗ್ರಾಮವು ಯಕ್ಷಗಾನ ಮತ್ತು ತಾಳಮದ್ದಳೆ ಕ್ಷೇತ್ರಕ್ಕೆ ನೀಡಿದ ಇಬ್ಬರು ಹೆಸರಾಂತ ಕಲಾವಿದರ ಹೆಸರೂ ವೆಂಕಟ್ರಮಣ ಎಂಬುದು ಕುತೂಹಲಕಾರಿ ಸಂಗತಿ!

ಸಮುದ್ರ ತಟದಲ್ಲಿರುವ ಕುಮಟಾ ತಾಲೂಕು ಕೇಂದ್ರದಿಂದ ಸುಮಾರು 6 ಮೈಲು ದೂರವಿದೆ ಮೂರೂರು ಗ್ರಾಮ; ಕುಮಟಾದಿಂದ ಗುಡ್ಡ ಏರಿ ಹೊರಟು ಇನ್ನೊಂದು ಗುಡ್ಡ ಇಳಿದರೆ ಬಂತು ಮೂರೂರು. ಹುಳಿಸೇಮಕ್ಕಿಯು ಮೂರೂರಿನ ಭಾಗವಾಗಿರುವ ಚಿಕ್ಕಹಳ್ಳಿ. ಇಲ್ಲಿ ಗಣಪತಿ ಹೆಗಡೆ ಮತ್ತು ಮಹಾಲಕ್ಷ್ಮಿ ದಂಪತಿಯ ಮಗನಾಗಿ
1927ರಲ್ಲಿ ಜನಿಸಿದವರು ವೆಂಕಟ್ರಮಣ ಹೆಗಡೆ. ವೆಂಕಟ್ರಮಣನಿಗೆ ಎಳೆವಯಸ್ಸಿನಿಂದಲೇ ವಾತಪೀಡಿತ ಪ್ರಕೃತಿ. ಸ್ನಾಯುಸೆಳೆತದ ತೊಂದರೆಗೆ ಅಂದು ಪೂರ್ತಿಯಾಗಿಸುವ ಔಷಧಿ ಇರಲಿಲ್ಲ. ಅಂದಿನ ಬಡತನದ ಕುರಿತು ವಿವರಿಸಬೇಕಿಲ್ಲ. ಅಸಾಮಾನ್ಯ ಕಠಿಣ ಸ್ಥಿತಿಯಲ್ಲಿಯೂ ಅವರಿಗೆ ಒಸಗೆಯಾಗಿ ಬಂದ ಅದ್ಭುತ ಪ್ರತಿಭೆಯ ಜತೆಗೆ ಗಣಪತಿ-ಲಕ್ಷ್ಮಿಯ ವರಪ್ರಸಾದವೂ ಇತ್ತು. ಅವುಗಳ ಬಲದಿಂದ ಅವರು ಗೈದ ಸಾಧನೆ ಮಾತ್ರ ಅದ್ವಿತೀಯ, ಅಚ್ಚರಿ
ಮೂಡಿಸುವಂಥದ್ದು ಎನ್ನಬೇಕು.

ಅಂದಿನ ಕಷ್ಟದ ದಿನಗಳಲ್ಲಿ ಶಾಲೆಗೆ ಹೋಗಿ ವಿದ್ಯಾವಂತರಾದವರು ಅಪರೂಪ. ಅಡಕೆ ತೋಟ, ಗದ್ದೆಯಲ್ಲಿ ಕೆಲಸ ಮಾಡಬೇಕಿದ್ದ, ಹೊಟ್ಟೆಪಾಡಿನ ಪ್ರಾಪ್ತಿಯು ಮುಖ್ಯ ಆದ್ಯತೆಯಾಗಿದ್ದ ದಿನಗಳವು. ವಾತ ಪೀಡೆಯಿಂದಾಗಿ ತೋಟ-ಗದ್ದೆಗಳಲ್ಲಿ ಶ್ರಮಪಡಲು ಸಾಧ್ಯವಾಗದೆಯೋ ಏನೋ ಓದಿನ ಹಾದಿ ಹಿಡಿದ ವೆಂಕಟ್ರಮಣ ಆರನೇ ತರಗತಿಯ
ತನಕ ಮೂರೂರು ಕನ್ನಡ ಶಾಲೆಯಲ್ಲಿ ಓದಿದರು. ಏಳನೇ ತರಗತಿಯನ್ನು ಹೆಗಡೆ ಎಂಬ ಗ್ರಾಮದಲ್ಲಿ ವಾರಾನ್ನ ಉಂಡು ಕಲಿತಿದ್ದು. ನಂತರ ಎಸ್‌ಎಸ್‌ಎಲ್ ಸಿಯನ್ನು ಬಾಹ್ಯ ವಿದ್ಯಾರ್ಥಿಯಾಗಿ ಕಟ್ಟಿ ಪಾಸು ಮಾಡಿಕೊಂಡರು. ಟಿಸಿಎಚ್ ಪಠ್ಯಕ್ರಮವನ್ನು ಕಾರವಾರದಲ್ಲಿ ಮುಗಿಸಿದರು.

ನಂತರ ಶಿಕ್ಷಕರಾಗಿ ಅವರ ಸೇವೆ ಆರಂಭವಾಗಿದ್ದು ಮೂರೂರಿನ ಅಳವಳ್ಳಿ ಎಂಬ ಹಳ್ಳಿಯ ಗ್ರಾಂಟ್ ಶಾಲೆಯಲ್ಲಿ. ಸರಕಾರಿ ಶಿಕ್ಷಕರಾಗಿ ನೇಮಕವಾಗಿದ್ದು 1953ರಲ್ಲಿ. ಅವರು ‘ಹುಳಿಸೇಮಕ್ಕಿ ವೆಂಕಟ್ರಮಣ ಮಾಸ್ತರ್’ ಎಂದು
ಹೆಸರು ಪಡೆದಿದ್ದು ಹೀಗೆ. ಅವರ ಜ್ಞಾನದಾಹ ಅಲ್ಲಿಗೇ ನಿಲ್ಲಲಿಲ್ಲ. ‘ಹಿಂದಿ ರಾಷ್ಟ್ರಭಾಷಾ’ ಅರಗಿಸಿಕೊಂಡು ‘ವಿಶಾರದ’ರಾದರು. ‘ಕನ್ನಡರತ್ನ’ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರತ್ನರೆನಿಸಿಕೊಂಡರು. ಸಂಸ್ಕೃತದಲ್ಲಿಯೂ ಸಾಕಷ್ಟು ಅಧ್ಯಯನ ಮಾಡಿ ಪಾರಂಗತರಾದರು. ಅಂದಿನ ಕಾಲದಲ್ಲಿ ಹೀಗೆ ಪಟ್ಟು ಬಿಡದೆ ಸುಶಿಕ್ಷಿತರಾಗಿದ್ದು, ಅಷ್ಟೆಲ್ಲಾ ಜ್ಞಾನಸಂಪಾದನೆ ಮಾಡಿದ್ದು, ಉತ್ಕಟ ಮತ್ತು ಅಸಾಮಾನ್ಯ ವ್ಯಕ್ತಿತ್ವವೊಂದರ ನಿರೂಪಣೆಗೆ ಕಾರಣ ವಾಯಿತೆಂಬುದನ್ನು ಇಲ್ಲಿ ಗಮನಿಸಬೇಕು.

ಹುಳಿಸೇಮಕ್ಕಿ ವೆಂಕಟ್ರಮಣ ಮಾಸ್ತರರಿಗೆ ತಾಳಮದ್ದಳೆಯ ಗೀಳು ತಗುಲಿದ್ದು ಯುವ ವಯಸ್ಸಿನಲ್ಲಿಯೇ. 16ನೇ ವಯಸ್ಸಿನಲ್ಲಿ ಮೊಟ್ಟಮೊದಲ ತಾಳಮದ್ದಳೆಯಲ್ಲಿ ಪಾತ್ರರಾದರು ವೃಷಸೇನನಾಗಿ. ಇದಕ್ಕೆ ಪ್ರೇರಣೆಯಾದವರು ಅಜ್ಜನ ಮನೆಯ ‘ಮಾವ ಭಾಗವತ’ರು. ನಂತರ ನಿರಂತರವಾಗಿ ತಾಳಮದ್ದಳೆಯ ಅರ್ಥಗಾರಿಕೆಯಲ್ಲಿ ತೊಡಗಿಸಿ ಕೊಂಡರು. ಪೌರಾಣಿಕ ಕಥನಗಳನ್ನಷ್ಟೇ ಅಲ್ಲದೆ ವೇದ, ಉಪನಿಷತ್ ಮತ್ತು ಧರ್ಮಗ್ರಂಥಗಳ ಸಾರವನ್ನು ಆಳವಾಗಿ ತಿಳಿದುಕೊಂಡರು. ಇದರಿಂದಾಗಿ ಪಾತ್ರಗಳನ್ನು ಅಂತರಾಳದಿಂದ ನೋಡುವುದು, ಪ್ರತಿನಿಧಿಸು ರಾಮ, ‘ಕರ್ಣ ಪರ್ವ’ ದಲ್ಲಿ ಕರ್ಣ ಮತ್ತು ಶಲ್ಯ, ‘ಕೃಷ್ಣಾರ್ಜುನ’ದ ಕೃಷ್ಣ ಮತ್ತು ಅರ್ಜುನ, ‘ಸುಧನ್ವಾರ್ಜುನ’ದ ಸುಧನ್ವ ಮತ್ತು ಅರ್ಜುನ, ‘ಪಾದುಕಾ ಪಟ್ಟಾಭಿಷೇಕ’ದ ಭರತ ಮತ್ತು ರಾಮ- ಹೀಗೆ ಬಹುತೇಕ ಪ್ರಸಂಗಗಳಲ್ಲಿ ವಿಮುಖ ಪಾತ್ರ ಗಳನ್ನು ಚಾಣಾಕ್ಷತೆಯಿಂದ ಮತ್ತು ವಿದ್ವತ್ಪೂರ್ಣವಾಗಿ ನಿರ್ವಹಿಸಿದ ಸವ್ಯಸಾಚಿ ಅವರು. ಹುಳಿಸೇಮಕ್ಕಿ ಮಾಸ್ತರರ ವಿದ್ವತ್ಪೂರ್ಣ ತರ್ಕ, ಭಾವ ಭರಿತವಾದ ಮಂಡನೆ, ಪಾತ್ರಗಳನ್ನು ನಿರೂಪಿಸುವ ಬಗೆಯು ಕೇಳುಗರನ್ನು ಪ್ರಸಂಗದ ಪ್ರಸ್ತುತತೆಯಲ್ಲಿ ಸೆರೆಹಿಡಿಯುವುದು ವಾಡಿಕೆಯಾಗಿತ್ತು.

ಪಾಂಡಿತ್ಯ ಮತ್ತು ತರ್ಕಶಕ್ತಿಯ ಜತೆಗೆ ಸೂಕ್ಷ್ಮ ಸಂವಹನ ಕಲೆಯನ್ನು ಅರಗಿಸಿಕೊಂಡಿದ್ದ ಹುಳಿಸೇಮಕ್ಕಿ ಮಾಸ್ತರ್ ಬೇಗನೆ ಪ್ರಸಿದ್ಧಿಗೆ ಬಂದರು. ತಾಳಮದ್ದಳೆ ಕಾರ್ಯಕ್ರಮವೇ ಹಳ್ಳಿಗಳಲ್ಲಿ ಅಂದು ಮನರಂಜನೆಯ ಮುಖ್ಯ ಮಾಧ್ಯಮವಾಗಿತ್ತು ಎನ್ನಬಹುದು. ಶ್ರಾವಣ ಮಾಸದಿಂದ ಶುರುವಾಗುವ ಹಬ್ಬ-ಹರಿದಿನಗಳಲ್ಲಿ ಆಗಾಗ ತಾಳ ಮದ್ದಳೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಅಂಥ ಒಂದು ಸಂದರ್ಭದಲ್ಲಿ, ಅದಾಗಲೇ ಮಾತುಗಾರ ರಾಗಿ ಬೆಳಕಿಗೆ ಬಂದಿದ್ದ ಹುಳಿಸೇಮಕ್ಕಿ ಮಾಸ್ತರರ ಅರ್ಥಗಾರಿಕೆಯನ್ನು ಕೇಳಲು ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಮಾಸ್ತರರು ರಂಗಕ್ಕೆ ಬಂದು ಕುಳಿತಾಗ ಚಪ್ಪಾಳೆಯ ಸ್ವಾಗತ ಸಹಜವಾಗಿತ್ತು. ವಾತದ ತೊಂದರೆ ಯಿಂದಾಗಿ ಮಾತಾಡುವ ಸಮಯದಲ್ಲಿ ಕತ್ತು ಮತ್ತು ಬಾಯಿಯ ಭಾಗವು ಆಗಾಗ ಸ್ನಾಯು ಸೆಳೆತಕ್ಕೆ ಸಿಲುಕು ತ್ತಿದ್ದರೂ, ಮಾಸ್ತರರು ಪದ್ಯವೊಂದಕ್ಕೆ ತಾಸುಗಟ್ಟಲೆ ನಿರರ್ಗಳವಾಗಿ ಆಡಿದ ಮಾತುಗಳನ್ನು ಜನರು ತಲ್ಲೀನರಾಗಿ ಕೇಳಿದ್ದರು.

ಅಂದಿನ ತಾಳಮದ್ದಳೆ ಕಾರ್ಯಕ್ರಮವು ರಾತ್ರಿ ಪೂರ್ತಿ, ಅಂದರೆ ಬೆಳಗಾಗುವ ತನಕ ನಡೆದಿದ್ದರೂ, ಕಲಾಭಿಮಾನಿ ಗಳು ಜಾಗಬಿಟ್ಟು ಕದಲದೇ ಕುಳಿತಿದ್ದು ಅದನ್ನು ಆಸ್ವಾದಿಸಿದ್ದರು. ಇಂದಿನ ದಿನಗಳಲ್ಲಿ ಅಷ್ಟೆಲ್ಲ ದೀರ್ಘವಾದ
ತಾಳಮದ್ದಳೆ ಕಾರ್ಯಕ್ರಮವು ಮರೆಯಾಗಿ ಹೋಗಿರುವುದು ಕಹಿವಾಸ್ತವ.

ಕಟ್ಟೆ ಪರಮೇಶ್ವರ ಭಟ್ಟರು, ಬುಚ್ಚನ್ ನಾರಾಯಣ ಶಾಸ್ತ್ರಿಗಳು, ಎನ್.ಎಸ್.ಭಟ್ ಹೊಲನಗದ್ದೆ, ಕರೆಕೈ ಕೃಷ್ಣ ಭಟ್ಟರು, ಕೆರೆಮನೆ ವೆಂಕಟಾಚಲ ಭಟ್ಟರು, ಬೈಲ್‌ಕೇರಿ ಪರಮೇಶ್ವರ ಭಟ್ಟರು, ಎನ್.ಎಸ್.ಹೆಗಡೆ ಶೀಗೆಮನೆ, ರೋಹಿದಾಸ್ ಭಂಡಾರಿ, ಹೈಗುಂದ ಡಾಕ್ಟರು, ಹೊಸ್ತೋಟ ಮಂಜುನಾಥ ಭಟ್ಟರು- ಹೀಗೆ ಹುಳಿಸೇಮಕ್ಕಿ ಮಾಸ್ತರರ ಜತೆ ತಾಳಮದ್ದಳೆಯಲ್ಲಿ ಭಾಗಿಯಾದವರ ಪಟ್ಟಿ ಬಹಳ ದೊಡ್ಡದು.

ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ಜಿ.ಎಲ್.ಹೆಗಡೆಯವರೂ ಹುಳಿಸೇಮಕ್ಕಿ ಮಾಸ್ತರರ ಜತೆ ತಾಳ ಮದ್ದಳೆಯಲ್ಲಿ ಭಾಗಿಯಾಗಿದ್ದವರೇ. ದಕ್ಷಿಣಕನ್ನಡದ ಹಲವಾರು ಘಟಾನುಘಟಿಗಳ ಜತೆ ತಾಳಮದ್ದಳೆಯ ಪಾತ್ರಧಾರಿಯಾಗಿ ಮಾಸ್ತರರು ಮಾತಿನ ಜಟಾಪಟಿ ನಡೆಸಿದ್ದಿದೆ. ಸುಮಾರು 45 ವರ್ಷಗಳಷ್ಟು ಕಾಲ ನೂರೆಂಟು ಹಳ್ಳಿಗಳಲ್ಲಿ ಸಹಸ್ರಾರು ತಾಳಮದ್ದಳೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಅತ್ಯುತ್ತಮ ಮಾತುಗಾರರಲ್ಲಿ ಪ್ರಮುಖ ರಾಗಿ ಹೆಸರಾದವರು ವೆಂಕಟ್ರಮಣ ಮಾಸ್ತರ್.

ತಾಳಮದ್ದಳೆಯ ಶ್ರೇಷ್ಠ ಅರ್ಥಧಾರಿಯಾಗಿ ಜನಪ್ರಿಯರಾಗಿದ್ದ ಹುಳಿಸೇಮಕ್ಕಿ ಮಾಸ್ತರರು ಅತ್ಯುತ್ತಮ ಶಿಕ್ಷಕ ರೆಂದೂ ಹೆಸರು ಗಳಿಸಿದವರು. ಅಳವಳ್ಳಿ, ಕೆಕ್ಕಾರು, ಮಾರುಕೇರಿ, ಕಲ್ಲಬ್ಬೆ, ಮುಸುಗುಪ್ಪೆ, ಹಟ್ಟಿಕೇರಿ, ಕೂಜಳ್ಳಿ ಶಾಲೆಗಳಲ್ಲಿ ಶಿಕ್ಷಕರಾಗಿದ್ದ ವೆಂಕಟ್ರಮಣ ಮಾಸ್ತರರಿಂದ ಕಲಿತ ವಿದ್ಯಾರ್ಥಿಗಳು, ಅವರು ಹೇಳಿಕೊಟ್ಟ ಪಾಠವನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ತಿಳಿನೀಲಿ ಬಣ್ಣದ ಮೋಟು ಅಂಗಿ ಮತ್ತು ಪಂಚೆ ಧರಿಸುತ್ತಿದ್ದ ಅವರು ಸರಳ-
ಸಜ್ಜನರೆಂದು ಗೌರವಕ್ಕೆ ಪಾತ್ರರಾದವರು. ಪ್ರಸಿದ್ಧ ಜ್ಯೋತಿಷಿಗಳಾಗಿದ್ದ ಭಟ್ಟರಕೇರಿ ನಾರಾಯಣ ಭಟ್ಟರಿಂದ ಶಾಸ ಕಲಿತಿದ್ದ ಹುಳಿಸೇಮಕ್ಕಿ ಮಾಸ್ತರರು, ಬಹಳ ಒಳ್ಳೆಯ ಜ್ಯೋತಿಷಿಗಳಾಗಿದ್ದುದು ಅವರ ಘನ ವ್ಯಕ್ತಿತ್ವದ ಇನ್ನೊಂದು ಮಹತ್ವದ ಆಯಾಮ.

ಬದುಕಿನುದ್ದಕ್ಕೂ ವಾತವ್ಯಾಧಿ ಪೀಡಿತರಾಗಿದ್ದ ಹುಳಿಸೇಮಕ್ಕಿ ವೆಂಕಟ್ರಮಣ ಮಾಸ್ತರ್ ತಮ್ಮ 74ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಪತ್ನಿ, ಇಬ್ಬರು ಗಂಡು ಮಕ್ಕಳು, ಐವರು ಹೆಣ್ಣು ಮಕ್ಕಳು, ಬಹುದೊಡ್ಡ ಅಭಿಮಾನಿ ಬಳಗ ಹಾಗೂ ವಿದ್ಯಾರ್ಥಿ ವೃಂದವನ್ನು ಅಗಲಿದ ಅವರ ನೆನಪು ಮಾತ್ರ ಎಲ್ಲರಲ್ಲಿ ಚಿರಾಯು. ವೆಂಕಟ್ರಮಣ ಮಾಸ್ತರರ ಸುಪುತ್ರ ಜಿ.ವಿ.ಹೆಗಡೆಯವರು ಕೂಡ ತಾಳಮದ್ದಳೆಯ ಉತ್ತಮ ಅರ್ಥಧಾರಿಯಾಗಿದ್ದು, ತಾಳಮದ್ದಳೆ ಕ್ಷೇತ್ರಕ್ಕೆ ಮಾಸ್ತರರು ಕೊಟ್ಟುಹೋದ ಬಹಳ ಒಳ್ಳೆಯ ಕೊಡುಗೆ ಎನಿಸಿಕೊಂಡಿದ್ದಾರೆ.

ಸಂಘ-ಸಂಸ್ಥೆಗಳು ಮತ್ತು ಅಕಾಡೆಮಿ ನೀಡಬಹು ದಾದ ಮರಣೋತ್ತರ ಪ್ರಶಸ್ತಿ ಮತ್ತು ಗೌರವಕ್ಕೆ ಹುಳಿಸೇಮಕ್ಕಿ ಮಾಸ್ತರರು ನಿಜವಾಗಿ ಪರಿಗಣನಾರ್ಹರು.

(ಲೇಖಕರು ಮುಂಬೈನ ಲಾಸಾ ಸೂಪರ್ ಜೆನರಿಕ್ಸ್‌ನ ನಿರ್ದೇಶಕರು)

ಇದನ್ನೂ ಓದಿ: Kolkata Doctor Murder: ʻವೈದ್ಯೆಯರಿಗೆ ಭದ್ರತೆ ಕೊಡುವುದಷ್ಟೇ ನಿಮ್ಮ ಕೆಲಸ…ʼ ದೀದಿ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಫುಲ್‌ ಕ್ಲಾಸ್‌