ತಿಳಿರು ತೋರಣ
ಶ್ರೀವತ್ಸ ಜೋಶಿ
srivathsajoshi@yahoo.com
ಬಹುಶಃ ಗಣೇಶ ಪಂಚರತ್ನ, ಶಿವತಾಂಡವ ಸ್ತೋತ್ರ ಮುಂತಾದುವೆಲ್ಲ ಸಂಸ್ಕೃತದಲ್ಲಿ ಇರುವಂಥವು ನಮ್ಮ ಮನಸ್ಸಿನಲ್ಲಿ ಹೆಚ್ಚು ಅಚ್ಚೊ ತ್ತಿರುವುದರಿಂದಲೋ ಏನೋ ಅವುಗಳಲ್ಲಿರುವ ಲಘು ಗುರು, ಲಘು ಗುರು ವಿನ್ಯಾಸದ ಸೌಂದರ್ಯ ಬೇರೆ ಭಾಷೆಗಳಲ್ಲಿ ಅಷ್ಟು ಪರಿಣಾಮ ಕಾರಿ ಎನಿಸುವುದಿಲ್ಲ. ಇಂಥದೊಂದು ವಿಶಿಷ್ಟ ವಿನ್ಯಾಸದ ಪದ್ಯವನ್ನು ಓದುವುದಕ್ಕೂ ಕೇಳಿಸಿಕೊಳ್ಳುವುದಕ್ಕೂ ರೋಮಾಂಚಕಾರಿಯಾದ ಲಯ ಸಿಗುತ್ತದೆ.
ಅಷ್ಟಾಕ್ಷರೀ ಛಂದಸ್ಸು ಅದು. ಒಂದೊಂದು ಪಾದದಲ್ಲೂ ಎಂಟೆಂಟು ಅಕ್ಷರಗಳು. ಅವುಗಳನ್ನು ಲಘು-ಗುರು ಎಂದು ಗುರುತಿಸಿದರೆ ೮ ಅಕ್ಷರಗಳು ಒಟ್ಟು 256 ಬೇರೆಬೇರೆ ವಿನ್ಯಾಸಗಳನ್ನು ಮಾಡಬಲ್ಲವು! ಅಂತಹ 256 ವಿನ್ಯಾಸಗಳಲ್ಲಿ ನಿರ್ದಿಷ್ಟ ಒಂದರ ಹೆಸರು ‘ಪ್ರಮಾಣಿಕಾ’ ಎಂದು.
ಬೇರೆ ವಿನ್ಯಾಸಗಳಿಗೂ ಪ್ರತ್ಯೇಕ ಹೆಸರುಗಳಿವೆ ಆದರೆ ಈ ಲೇಖನದ ಮಟ್ಟಿಗೆ ನಾವು ಪ್ರಮಾಣಿಕಾ ಮೇಲಷ್ಟೇ ಗಮನ ಹರಿಸೋಣ. ಪ್ರಮಾಣಿಕಾ ವಿನ್ಯಾಸ ಹೇಗೆಂದರೆ ಪಾದದ ಅಕ್ಷರಗಳು ಅನುಕ್ರಮವಾಗಿ ಲಘು, ಗುರು, ಲಘು, ಗುರು, ಲಘು, ಗುರು, ಲಘು, ಗುರು ಈ ರೀತಿ ಇರುತ್ತವೆ. ಸೈನಿಕರು ಲೆಫ್ಟ್ ರೈಟ್ ಲೆಫ್ಟ್ ರೈಟ್… ಎನ್ನುತ್ತ ಪಥ ಸಂಚಲನ ಮಾಡಿದಂತೆ. ಅಥವಾ, ಕಂಪ್ಯೂಟರ್‌ನಲ್ಲಿ ಸೊನ್ನೆ ಒಂದು ಸೊನ್ನೆ ಒಂದು… ದ್ವಿಮಾನ ಪದ್ಧತಿಯ ಅಂಕಿಗಳ ಆವರ್ತನದಂತೆ.
ಇಂಥದೊಂದು ವಿಶಿಷ್ಟ ವಿನ್ಯಾಸದ ಪದ್ಯವನ್ನು ಓದುವುದಕ್ಕೂ ಕೇಳಿಸಿಕೊಳ್ಳುವುದಕ್ಕೂ ರೋಮಾಂಚಕಾರಿ ಯಾದ ಲಯ ಸಿಗುತ್ತದೆ. ಈ ಲೇಖನದಲ್ಲಿ ಮುಂದೆ ಉದಾಹರಿಸಲ್ಪಡುವ ಪದ್ಯಗಳಿಂದ ಇದು ನಿಮಗೆ ಮನ ದಟ್ಟಾಗುಗುತ್ತದೆ. ಪ್ರಮಾಣಿಕಾ ವಿನ್ಯಾಸದ ಎರಡು ಪಾದಗಳನ್ನು ಸೇರಿಸಿ ಹದಿನಾರು ಅಕ್ಷರಗಳ ಒಂದು ಸಾಲು ಬರೆಯುವ ಕ್ರಮ. ಅದನ್ನು ‘ಪಂಚಚಾಮರ ವೃತ್ತ’ ಎನ್ನುತ್ತಾರೆ. ‘ಪ್ರಮಾಣಿಕಾ ಪದದ್ವಯಂ ವದಂತಿ ಪಂಚ ಚಾಮರಂ’ ಎಂದು ಸೂತ್ರ. ಆ ಸೂತ್ರವೂ ಪಂಚಚಾಮರ ವೃತ್ತದಲ್ಲೇ ಇರುವುದು ಯಥಾಪ್ರಕಾರ ಸಂಸ್ಕೃತ ಸೂತ್ರಗಳ ಟಿಪಿಕಲ್ ರೀತಿ. ಅದೂ ಸ್ವಾರಸ್ಯವೇ.
ಪಂಚಚಾಮರಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ‘ಮುದಾಕರಾತ್ತ ಮೋದಕಂ ಸದಾವಿಮುಕ್ತಿಸಾಧಕಂ…’ ಎಂದು ಆರಂಭವಾಗುವ, ಶಂಕರಾಚಾ ರ್ಯರು ರಚಿಸಿದ, ಎಂ. ಎಸ್. ಸುಬ್ಬುಲಕ್ಷ್ಮಿಯವರ ಗಾಯನದಿಂದಾಗಿ ಲೋಕವಿಖ್ಯಾತಿ ಗಳಿಸಿದ, ಗಣೇಶ ಪಂಚರತ್ನ ಸ್ತೋತ್ರ. ಪ್ರಮಾಣಿಕಾ ಮತ್ತು ಪಂಚಚಾಮರಗಳನ್ನು ಸವಿಯುವುದಕ್ಕೆ ಮುನ್ನ ಒಮ್ಮೆ ನಮ್ಮ ಲಘು-ಗುರು ಜ್ಞಾನವನ್ನು ಪುನರುಜ್ಜೀಗೊಳಿಸೋಣ. ಅತ್ಯಂತ ಸರಳವಾಗಿ ಹೇಳುವು ದಾದರೆ: ದೀರ್ಘಾಕ್ಷರಗಳೆಲ್ಲವೂ ಗುರು; ಅನುಸ್ವಾರ ಮತ್ತು ವಿಸರ್ಗಗಳೂ ಗುರು; ಒತ್ತಕ್ಷರದ ಮೊದಲು ಬರುವ ಅಕ್ಷರ ಕೂಡ ಗುರು ಎಂದೇ ಪರಿಗಣನೆ.
ಬೇರೆಲ್ಲವೂ ಲಘು. ಇದಿಷ್ಟನ್ನೇ ನೆನಪಿಟ್ಟುಕೊಂಡರಾಯ್ತು. ಈಗ, ‘ಮುದಾಕರಾತ್ತ ಮೋದಕಂ ಸದಾವಿಮುಕ್ತಿಸಾಧಕಂ’ ಈ ಹದಿನಾರು ಅಕ್ಷರಗಳನ್ನು
ಪರಿಶೀಲಿಸೋಣ. ಮು ಹ್ರಸ್ವಾಕ್ಷರ ಆದ್ದರಿಂದ ಲಘು. ದಾ ದೀರ್ಘಾಕ್ಷರ ಆದ್ದರಿಂದ ಗುರು. ಕ ಹ್ರಸ್ವ ಆದ್ದರಿಂದ ಲಘು. ರಾ ದೀರ್ಘಾಕ್ಷರವೂ ಹೌದು ಒತ್ತಕ್ಷರದ ಹಿಂದಿನ ಅಕ್ಷರವೂ ಹೌದು, ಆದ್ದರಿಂದ ಗುರು. ತ್ತ ಹ್ರಸ್ವ ಆದ್ದರಿಂದ ಲಘು. ಮೋ ದೀರ್ಘಾಕ್ಷರ ಗುರು. ದ ಹ್ರಸ್ವಾಕ್ಷರ ಲಘು. ಕಂ ಅನುಸ್ವಾರ ಗುರು. ಸ ಲಘು, ದಾ ಗುರು, ವಿ ಲಘು. ಮು ಒತ್ತಕ್ಷರದ ಹಿಂದಿನ ಅಕ್ಷರವಾದ್ದರಿಂದ ಗುರು. ಕ್ತಿ ಲಘು. ಸಾ ಗುರು. ಧ ಲಘು. ಕಂ ಅನುಸ್ವಾರ ಗುರು.
ಅಂದರೆ ಇಡೀ ಸಾಲಿನಲ್ಲಿ ಲಘು, ಗುರು, ಲಘು, ಗುರು, ಲಘು, ಗುರು, ಲಘು, ಗುರು… ಎಷ್ಟು ಚಂದವಾಗಿ ಹೆಣೆದುಕೊಂಡಿವೆ ನೋಡಿ! ಥೇಟ್ ಮಾರ್ಚ್ ಪಾಸ್ಟ್ ಮಾಡುತ್ತಿರುವ ಸಿಪಾಯಿಗಳಂತೆ. ತಧಿಂ ತಧಿಂ ತಧಿಂ ತಧಿಂ ನೃತ್ಯದ ಪಟ್ಟುಗಳಿಗೆ ಹೆಜ್ಜೆ ಹಾಕುವ ನರ್ತಕಿಯಂತೆ. ಬ್ರೆಸ್ಟ್ ಸ್ಟ್ರೋಕ್ ಈಜುಗಾರ ನಂತೆ. ತಲೆಯನ್ನು ತುಸುವಷ್ಟೇ ಎಡಕ್ಕೂ ಬಲಕ್ಕೂ ವಾಲಿಸುತ್ತ ಗಂಭೀರವಾಗಿ ನಡೆಯುವ ಆನೆಯಂತೆ! ಅದೇ ಪಂಚಚಾಮರದ ಸೊಬಗು, ಅಥವಾ ಪ್ರಮಾಣಿಕಾದ ಡಬಲ್ ಸೊಬಗು.
‘ಮುದಾಕರಾತ್ತ ಮೋದಕಂ…’ನಷ್ಟೇ ಜನಪ್ರಿಯವಾದ ಇನ್ನೊಂದು ಸ್ತೋತ್ರ ಶಿವತಾಂಡವ ಸ್ತೋತ್ರ. ಇದನ್ನು ಶಿವಭಕ್ತಾಗ್ರೇಸರ ರಾವಣನೇ ರಚಿಸಿದ ನೆಂದು ಪ್ರತೀತಿ. ಆತನಿಗೆ ಶಿವಭಕ್ತಿಯಿಂದಲೇ ಕೊಬ್ಬು ಏರಿತ್ತಂತೆ. ಎಲ್ಲಿಯವರೆಗೆಂದರೆ ಕೈಲಾಸಪರ್ವತವನ್ನೇ ಎತ್ತಿಕೊಂಡು ಬರಬಲ್ಲೆ ಎಂಬ ಭಂಡ
ಧೈರ್ಯದ ಅಹಂಕಾರ ಬರುವಷ್ಟು. ಮನಸ್ಸಿಗೆ ಬಂದದ್ದನ್ನು ಮಾಡಿಯೇ ಬಿಡುವ ಛಲದಂಕಮಲ್ಲ ಆತ. ಕೈಲಾಸಪರ್ವತಕ್ಕೆ ಕೈ ಹಾಕಿಯೇಬಿಟ್ಟ. ಭೋಳೇಶಂಕರನಾದರೋ ತನ್ನ ಭಕ್ತನ ಭಕ್ತಿಯ ಅಮಲಿನಲ್ಲಿ ತೇಲುತ್ತಿದ್ದ. ಕೊನೆಗೂ ಪಾರ್ವತಿ ಎಚ್ಚರಿಸಬೇಕಾಯಿತು.
ಆಗ ಎಚ್ಚೆತ್ತ ಶಿವನು ರೌದ್ರಾವತಾರ ತಾಳಿ ತನ್ನ ಕಾಲಿನ ಅಂಗುಷ್ಠವನ್ನು ಕೈಲಾಸ ಪರ್ವತದ ತುದಿಯಲ್ಲಿಟ್ಟು ಅದುಮಿದಾಗ ರಾವಣನ ಕೈಕಾಲುಗಳೆಲ್ಲ ಅಪ್ಪಚ್ಚಿಯಾದವು. ಗರ್ವಭಂಗವಾಗಿ ಸೋಲೊಪ್ಪಿಕೊಂಡ ರಾವಣ ಆಗ ರಚಿಸಿ ಹಾಡಿದ್ದೇ ಶಿವತಾಂಡವ ಸ್ತೋತ್ರ. ಇದರಲ್ಲಿ ಒಟ್ಟು 14 ಚರಣಗಳು. ಚರಣದ ಒಂದೊಂದು ಪಾದದಲ್ಲೂ ತಲಾ ೧೬ ಅಕ್ಷರಗಳು. ಪ್ರತಿಯೊಂದು ಪಾದದಲ್ಲೂ ಲಘು ಗುರು, ಲಘು ಗುರು ಕ್ರಮಬದ್ಧ ಆವರ್ತನ.