ವರ್ತಮಾನ
maapala@gmail.com
ಹೇಗಾದರೂ ಮಾಡಿ ಈ ಬಾರಿ ಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಆಡಳಿತಾರೂಢ ಬಿಜೆಪಿಮತ್ತು ಪ್ರತಿಪಕ್ಷ ಕಾಂಗ್ರೆಸ್ ಪರಸ್ಪರ ಜಿದ್ದಿಗೆ ಬಿದ್ದು ಹೋರಾಟಕ್ಕಿಳಿದಿವೆ. 2008ರ ಬಳಿಕ ಬಿಜೆಪಿ ಎರಡು ಬಾರಿ ಅಧಿಕಾರಕ್ಕೆ ಬಂತಾದರೂ ಪೂರ್ಣ ಪ್ರಮಾಣದ ಬಹುಮತ ಸಿಗದೇ ಆಪರೇಷನ್ ಕಮಲ ನಡೆಸಬೇಕಾಗಿತ್ತು. ಆದರೆ, ಈ ಬಾರಿ ಯಾರ ಹಂಗೂ ಇಲ್ಲದೆ ಸರಕಾರ ರಚಿಸಬೇಕು ಎಂದು ಪ್ರಯತ್ನಿಸು ತ್ತಿದೆ.
ಅದೇ ರೀತಿ 2013ರಲ್ಲಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದರೂ ೨೦೧೮ರಲ್ಲಿ ಮೈತ್ರಿ ಸರಕಾರ ರಚಿಸಿ ಬಳಿಕ ಮುಖಭಂಗ ಅನುಭವಿಸಿದ್ದ ಕಾಂಗ್ರೆಸ್ ಮತ್ತೆ ಏಕಾಂಗಿಯಾಗಿ ಅಧಿಕಾರಕ್ಕೆ ಬರಲು ಕಸರತ್ತು ನಡೆಸುತ್ತಿದೆ. ಪ್ರಸ್ತುತ ಪರಿಸ್ಥಿತಿ ಯಲ್ಲಿ ಯಾವುದೇ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಲಕ್ಷಣ ಕಾಣಿಸುತ್ತಿಲ್ಲವಾದರೂ ಬಿಜೆಪಿಗಿಂತ ಕಾಂಗ್ರೆಸ್ ಕೊಂಚ ಮೇಲುಗೈ ಸಾಧಿಸಿರುವುದು ಸಮೀಕ್ಷೆಗಳಿಂದ ಕಂಡುಬರುತ್ತದೆ. ಆದರೆ, ಈ ರೀತಿಯ ಜಿದ್ದಾಜಿದ್ದಿನ ಪೈಪೋಟಿ ಕಾಣಿಸಿಕೊಂಡಾಗ ಫಲಿತಾಂಶ ನಿರ್ಧಾರವಾಗುವುದು ಚುನಾವಣೆ ಘೋಷಣೆಯಾದ ಬಳಿಕ ನಡೆಯುವ ಪ್ರಚಾರ, ಪಕ್ಷಗಳು ರೂಪಿಸುವ ತಂತ್ರಗಾರಿಕೆಯ ಮೇಲೆ ಆಗಿರುತ್ತದೆ. ಇದನ್ನು ಪರಿಗಣಿಸಿದಾಗ ಬಿಜೆಪಿ ಮೇಲುಗೈ ಸಾಧಿಸಿದರೆ ಅಚ್ಚರಿಯೇನೂ ಆಗುವುದಿಲ್ಲ.
ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ, ಕೇಂದ್ರ ಸಚಿವ ಅಮಿತ್ ಶಾ ಅವರ ತಂತ್ರಗಾರಿಕೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸಂಘಟನಾ ಶಕ್ತಿ ಬೆಂಬಲವಾಗಿ ನಿಲ್ಲುತ್ತದೆ. ಇದರ ಜತೆಗೆ ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕ ಕಾಂಗ್ರೆಸ್‌ನಿಂದ ಸಾಕಷ್ಟು ಟ್ರೋಲ್‌ಗೆ ಒಳಗಾದ ಬಿ.ಎಸ್.ಯಡಿಯೂರಪ್ಪ ಇದೀಗ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಟೊಂಕ ಕಟ್ಟಿ ನಿಂತಿದ್ದಾರೆ. ಹಾಗೆಂದು ಕಾಂಗ್ರೆಸ್ ಸುಮ್ಮನೆ ಕೂತಿದೆ ಎಂದು ಅರ್ಥವಲ್ಲ. ಪಕ್ಷ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಎಂದೇ ಹೇಳ ಲಾಗುತ್ತಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಅತ್ಯಂತ ಪರಿಣಾಮಕಾರಿ ಯಾಗಿ ಆಡಳಿತಾರೂಢ ಬಿಜೆಪಿ ವಿರುದ್ಧ ಜನಾಭಿ ಪ್ರಾಯ ಮೂಡಿಸುವ ಕೆಲಸವಾಗುತ್ತಿದೆ.
ಬಿಜೆಪಿ ಏನೇ ಕಸರತ್ತು ನಡೆಸುತ್ತಿದ್ದರೂ ಇದರಿಂದ ಹೊರಬರಲು ಪರದಾಡುವಂತಾಗಿದೆ. ಆದರೂ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಮೇಲುಗೈ
ಸಾಽಸಲಿದೆ ಎಂಬ ನಿರೀಕ್ಷೆಗೆ ಕಾರಣ, ಆ ಪಕ್ಷದಲ್ಲಿ ತಂತ್ರಗಾರಿಕೆಗಳನ್ನು ರೂಪಿಸುವ ಚಾಣಾಕ್ಷ ನಾಯಕರು ಮತ್ತು ಅದನ್ನು ಅಷ್ಟೇ ಪರಿಣಾಮಕಾರಿ ಯಾಗಿ ತಳಮಟ್ಟದಿಂದ ಅನುಷ್ಠಾನಕ್ಕೆ ತರುವ ನಿಷ್ಠಾವಂತ ಕಾರ್ಯಕರ್ತರ ಪಡೆ. ಇತ್ತೀಚಿನ ದಿನಗಳಲ್ಲಿ ಪಕ್ಷದ ನಾಯಕತ್ವ, ಸ್ಥಳೀಯ ಜನಪ್ರತಿನಿಧಿ ಗಳ ಕಾರಣದಿಂದ ಈ ನಿಷ್ಠಾವಂತ ಕಾರ್ಯಕರ್ತರು ಕೊಂಚ ಹಿಂದೆ ಸರಿದಿದ್ದಾರಾದರೂ ಅವರನ್ನು ಮತ್ತೆ ಸಮಾಧಾನಪಡಿಸಿದರೆ ಕಾರ್ಯಾಚರಣೆ ಗಿಳಿಯಲಿದ್ದಾರೆ.
ಇವರನ್ನು ಸಮಾಧಾನಗೊಳಿಸಬೇಕಾದರೆ ಚುನಾವಣಾ ಪ್ರಚಾರ ಸಮಿತಿಗಿಂತ ಮುಖ್ಯವಾಗಿ ಚುನಾವಣಾ ನಿರ್ವಹಣಾ ಸಮಿತಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಚುನಾವಣಾ ನಿರ್ವಹಣಾ ಸಮಿತಿ ಮೇಲೆ ಹೆಚ್ಚು ಜವಾಬ್ದಾರಿ ಇದೆ. ರಾಷ್ಟ್ರೀಯ ನಾಯಕರು, ರಾಜ್ಯ ಚುನಾವಣಾ ಉಸ್ತುವಾರಿ ಗಳ ಸಲಹೆಗಳಂತೆ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತಂತ್ರಗಾರಿಕೆಗಳನ್ನು ರೂಪಿಸಿ, ಅದನ್ನು ಕಾರ್ಯಕರ್ತರ ಮೂಲಕ ಅನುಷ್ಠಾನ ಗೊಳಿಸುವ ಕೆಲಸವನ್ನು ಈ ಸಮಿತಿ ನೋಡಿಕೊಳ್ಳುತ್ತದೆ.
ಇದೆಲ್ಲವನ್ನು ಗಮನಿಸಿಯೇ ಬಿಜೆಪಿ ವರಿಷ್ಠರು ರಾಜ್ಯ ವಿಧಾನಸಭೆ ಚುನಾವಣಾ ನಿರ್ವಹಣಾ ಸಮಿತಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಂಚಾಲಕರನ್ನಾಗಿ ನೇಮಿಸಿರುವುದು. ಈಗಾಗಲೇ ಅವರು ಬಿಜೆಪಿ ಕಚೇರಿಯಲ್ಲೇ ಕುಳಿತು ತಮ್ಮ ಕೆಲಸ ಶುರುಮಾಡಿದ್ದಾರೆ. ಶೋಭಾ ಕರಂದ್ಲಾಜೆ ಅವರನ್ನು ಬಿಜೆಪಿಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರನ್ನಾಗಿ ವರಿಷ್ಠರು ನೇಮಿಸಿ ದ್ದರ ಹಿಂದೆ ಹಲವು ಕಾರಣಗಳಿವೆ. ಎಬಿವಿಪಿ ಸಂಘಟನೆ ಮೂಲಕ ವಿದ್ಯಾರ್ಥಿ ಜೀವನದಿಂದಲೇ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿದ್ದ ಅವರು ಆರ್‌ಎಸ್‌ಎಸ್‌ನ ಮಹಿಳಾ ಘಟಕ ದಲ್ಲೂ ಕೆಲಸ ಮಾಡಿದ್ದರು. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಹಲವಾರು ಸೇವಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು.
ರಾಜ್ಯದಲ್ಲಿ ಬಿಜೆಪಿ ಸಂಘಟನೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಿ.ಎಸ್‌ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಚಿವರಾಗಿ ಉತ್ತಮವಾಗಿ ತಮ್ಮ ಖಾತೆಗಳನ್ನು ನಿರ್ವಹಿಸಿದ್ದರು. ಅಷ್ಟೇ ಅಲ್ಲ, ಕೇಂದ್ರದ ನರೇಂದ್ರ ಮೋದಿ ಸರಕಾರದಲ್ಲಿ ಸಚಿವರಾಗಿಯೂ ಅವರ ಕಾರ್ಯ ನಿರ್ವಹಣೆ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೆಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿಯ ಚುನಾವಣಾ ತಂಡದಲ್ಲಿ ಸಕ್ರಿಯವಾಗಿದ್ದಾರೆ. ಕಳೆದ ವರ್ಷ ಉತ್ತರ ಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಶೋಭಾ ಕರಂದ್ಲಾಜೆ ಚುನಾವಣಾ ಸಹ ಪ್ರಭಾರಿಯಾಗಿದ್ದರು.
ಈ ವೇಳೆ ಚುನಾವಣಾ ಪ್ರಭಾರಿಯಾಗಿದ್ದವರು ಪ್ರಸ್ತುತ ರಾಜ್ಯ ವಿಧಾನಸಭೆ ಚುನಾವಣೆಯ ಉಸ್ತುವಾರಿ ವಹಿಸಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರದಾನ್. ಇವರಿಬ್ಬರ ಮಧ್ಯೆ ಹೊಂದಾಣಿಕೆ ಉತ್ತಮವಾಗಿದೆ. ಜತೆಗೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಆಕರ್ಷಿಸುವಲ್ಲಿ
ಶೋಭಾ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯಾದ್ಯಂತ ಓಡಾಡಿ ಸಂಘಟನೆ ಮಾಡಿದ್ದರು. ಹಲವು ತಂತ್ರಗಾರಿಕೆಗಳನ್ನು ರೂಪಿಸಿ ಅದನ್ನು ಯಶಸ್ವಿ ಯಾಗಿ ಅನುಷ್ಠಾನವನ್ನೂ ಮಾಡಿಸಿದ್ದರು. ಅಷ್ಟರ ಮಟ್ಟಿಗೆ ಕಾರ್ಯಕರ್ತರನ್ನು ಒಟ್ಟಾಗಿ ಕರೆ ದೊಯ್ಯುವ ಕೆಲಸ ಮಾಡಿದ್ದರು. ಇನ್ನು ರಾಜ್ಯದ ವಿಷಯಕ್ಕೆ ಬಂದರೆ ಈ ಹಿಂದೆ ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಓಡಾಡಿದ್ದ ಶೋಭಾ ಕರಂದ್ಲಾಜೆ ಅವರಿಗೆ ಎಲ್ಲಾ ಭಾಗದ ರಾಜಕೀಯ ಸ್ಥಿತಿಗತಿ ಗಳ ಅರಿವಿದೆ. ಸಂಘಪರಿವಾರದ ಜತೆಗೆ ಬಿಜೆಪಿ ಸಂಘಟನೆಯನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಸಾಮರ್ಥ್ಯವೂ ಇದೆ. ಮೇಲಾಗಿ ಚುನಾ ವಣಾ ನಿರ್ವಹಣೆಯನ್ನು ಹೊಸದಾಗಿ ಮಾಡುವವರು ರೂಪಿಸುವ ತಂತ್ರಗಾರಿಕೆಗಳ ಬಗ್ಗೆ ಪ್ರತಿಪಕ್ಷಗಳಿಗೆ ತಿಳಿದಿರುವುದಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಚುನಾವಣಾ ಗೆಲುವು ನಿರ್ಧಾರವಾಗುವುದು ಆ ಪಕ್ಷದ ತಂತ್ರಗಾರಿಕೆಯಿಂದ. ಹೀಗಾಗಿ ಒಂದು ಪಕ್ಷವು ಇನ್ನೊಂದು ಪಕ್ಷದ ಕಾರ್ಯತಂತ್ರಗಳ ಮೇಲೆ ಕಣ್ಣಿಟ್ಟಿರುತ್ತವೆ. ಬಹುತೇಕ ಹಿರಿಯ ನಾಯಕರ ತಂತ್ರಗಳ ಕುರಿತು ಅಧ್ಯಯನ ಮಾಡಿ ಅದಕ್ಕೆ ಪ್ರತಿತಂತ್ರಗಳನ್ನು ಹೂಡುತ್ತಾರೆ. ಆದರೆ, ಹೊಸಬರು ಬಂದು ಹೊಸ ರೀತಿಯ ತಂತ್ರಗಳನ್ನು ಮಾಡಿದಾಗ ಅದಕ್ಕೆ ಪ್ರತಿತಂತ್ರ ಹೂಡುವುದು ಕಷ್ಟಸಾಧ್ಯ. ಅದಕ್ಕೆ ಬೇಕಾದ ಸಮಯವೂ ಸಿಗುವುದಿಲ್ಲ. ಈ ಕಾರಣಕ್ಕಾಗಿಯೇ ಬಿಜೆಪಿ ಈ ಬಾರಿ ಶೋಭಾ ಕರಂದ್ಲಾಜೆ ಅವರಿಗೆ ಚುನಾವಣಾ ನಿರ್ವಹಣೆಯ ಜವಾಬ್ದಾರಿ ವಹಿಸಿರುವುದು.
ಬಿಜೆಪಿಯ ಈ ತಂತ್ರಗಾರಿಕೆ ಹಿಂದೆ ಇನ್ನೂ ಒಂದು ಕಾರಣವಿದೆ ಎನ್ನಲಾಗುತ್ತಿದೆ. ಈ ಹಿಂದೆ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಶೋಭಾ ಕರಂದ್ಲಾಜೆ ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಮಾಡಿ ರಾಷ್ಟ್ರ ರಾಜಕಾರಣಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ
ಉತ್ತರ ಕನ್ನಡ ಸಂಸದ ಅನಂತಕುಮಾರ್ ಅವರನ್ನು ರಾಜ್ಯ ರಾಜಕಾರಣಕ್ಕೆ ಕಳುಹಿಸಲು ವರಿಷ್ಠರು ಯೋಚಿಸಿ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದ್ದರು. ಆದರೆ, ಅವರು ಯಶಸ್ಸು ಸಾಧಿಸಿರಲಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎಫ್-2 ರಲ್ಲಿ ಅನಂತ ಕುಮಾರ್ ಅವರನ್ನು ಕೈಬಿಟ್ಟು ಶೋಭಾ ಕರಂದ್ಲಾಜೆಗೆ ಸಚಿವ ಸ್ಥಾನ ನೀಡಲಾಗಿತ್ತು.
ಇದೀಗ ಅವರಿಗೆ ರಾಜ್ಯ ವಿಧಾನಸಭೆ ಚುನಾವಣೆಯ ನಿರ್ವಹಣೆಯ ಜವಾಬ್ದಾರಿ ನೀಡಿರುವುದರಿಂದ ಮುಂದಿನ ದಿನಗಳಲ್ಲಿ ಶೋಭಾ ಅವರನ್ನು ರಾಜ್ಯ ರಾಜಕಾರಣಕ್ಕೆ ಕಳುಹಿಸುವ ಚಿಂತನೆ ಇರುವಂತೆ ಕಾಣಿಸುತ್ತಿದೆ. ರಾಜ್ಯ ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ನಂತರ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ವರಿಷ್ಠರು ಒಂದೆರಡು ಪ್ರಯೋಗಗಳನ್ನು ಮಾಡಿದರಾದರೂ ಅದು ನಿರೀಕ್ಷಿತ ಫಲ ನೀಡಿಲ್ಲ. ಸದ್ಯ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ, ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಯಾದರೂ ಮುಂದೆ ಹೊಸ ನಾಯಕರನ್ನು ಸೃಷ್ಟಿಸುವುದು ಕಷ್ಟಸಾಧ್ಯವಾಗಲಿದೆ.
ಹೀಗಾಗಿ ಈ ಹಿಂದೆ ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದ ಶೋಭಾ ಕರಂದ್ಲಾಜೆ ಅವರನ್ನು ರಾಜ್ಯಕ್ಕೆ ಕಳುಹಿಸಿದರೆ ಉತ್ತಮ ಫಲಿತಾಂಶ
ಸಿಗಬಹುದು ಎಂಬ ವಿಶ್ವಾಸ ರಾಷ್ಟ್ರೀಯ ನಾಯಕರಿಗೆ ಇದ್ದಂತಿದೆ. ಆದರೆ, ಏಕಾಏಕಿ ಈ ನಿರ್ಧಾರ ಕೈಗೊಂಡರೆ ಅದು ಮತ್ತೊಂದು ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ಚುನಾವಣೆ ನಿರ್ವಹಣೆಯ ಜವಾಬ್ದಾರಿಯನ್ನು ಶೋಭಾಗೆ ವಹಿಸುವ ಮೂಲಕ ನಿಧಾನವಾಗಿ ರಾಜ್ಯದಲ್ಲಿ ಪ್ರತಿಷ್ಠಾಪಿಸಿ, ಅವರಿಗೆ ನಾಯಕತ್ವದ ಜವಾಬ್ದಾರಿ ವಹಿಸುವ ಉದ್ದೇಶ ವರಿಷ್ಠರಿಗೆ ಇದ್ದಂತಿದೆ. ಹೀಗಾಗಿ 2024ರ ಲೋಕಸಭೆ ಚುನಾವಣೆ ಬಳಿಕ ಶೋಭಾ ಕರಂದ್ಲಾಜೆ ರಾಜ್ಯ ರಾಜಕಾರಣದಲ್ಲಿ ಕಾಣಿಸಿಕೊಂಡರೆ ಅಚ್ಚರಿ ಏನೂ ಇಲ್ಲ.
ಲಾಸ್ಟ್ ಸಿಪ್: ಕರ್ನಾಟಕದಲ್ಲಿ ರಾಜಕೀಯ ನಾಯಕರು ಹುಟ್ಟುವುದಿಲ್ಲ. ಅವರನ್ನು ಸೃಷ್ಟಿಸಲಾಗುತ್ತದೆ. ಗೆದ್ದವನು ಉಳಿಯುತ್ತಾನೆ, ಸೋತವನು ಅಳಿಯುತ್ತಾನೆ.