ಅಭಿವ್ಯಕ್ತಿ
ಡಾ.ಕೆ.ಪಿ.ಪುತ್ತೂರಾಯ
ಜಾತಸ್ಯ ಮರಣಂ ಧ್ರುವಂ ಎಂಬ ಸೃಷ್ಟಿಯ ನಿಯಮದಂತೆ, ಜನಿಸಿದವರಿಗೆಲ್ಲಾ ಮರಣ ತಪ್ಪಿದ್ದಲ್ಲ. ಆದರೆ, ತಾನು ಎಲ್ಲಿ,
ಹೇಗೆ ಹಾಗೂ ಯಾವಾಗ ಸಾಯುತ್ತೇನೆ ಎಂಬುದು ಯಾರಿಗೂ ತಿಳಿಯದು.
ಕೆಲವರು ಅಕಾಲ ಮೃತ್ಯುವಿಗೆ ಒಳಗಾದರೆ, ಕೆಲವರು ಪೂರ್ಣಾಯುಸ್ಸನ್ನು ಬಾಳಿಯೇ ವಿಧಿವಶರಾಗುತ್ತಾರೆ. ಕೆಲವರು ಎಲ್ಲೆಂದ ರೆಲ್ಲೋ ದುರ್ಮರಣಕ್ಕೆ ಈಡಾಗಿ ಸತ್ತರೆ, ಕೆಲವರು ಮನೆಯಲ್ಲಿ ಮಕ್ಕಳ ತೆಕ್ಕೆಯಲ್ಲೇ ಅಸುವನ್ನು ನೀಗಬಹುದು. ಕೆಲವರು ಕ್ಷಣ ಮಾತ್ರದ ಸುಖಾಂತ್ಯವನ್ನು ಕಂಡರೆ, ಇನ್ನು ಕೆಲವರು ನರಳಿ ನರಳಿ ಸಾಯಬಹುದು, ಸಂತೃಪ್ತಿಯ, ಸಾರ್ಥಕತೆಯ
– ಸಮಾಧಾನದ ಸಾವು ಕೆಲವರದ್ದದಾದರೆ, ಇನ್ನು ಹಲವರು, ಪಶ್ಚಾತ್ತಾಪಗಳ ಪಟ್ಟಿಯೊಂದಿಗೆ ಸಾಯಬಹುದು.
ಹೆಚ್ಚೇನೂ ನರಳದೆ, ಸಂತೋಷವಾಗಿ, ಗೌರವಯುತವಾಗಿ ಸಾಯಬೇಕೆನ್ನುವುದೇ ಎಲ್ಲರ ಆಸೆ – ಅಭಿಲಾಷೆಗಳಾಗಿರಲು,
ಸಾಯುವ ಕಾಲಕ್ಕೆ ಯಾರೂ ಪಶ್ಚಾತ್ತಾಪ, ದುಃಖ ಪಟ್ಟುಕೊಂಡು ಸಾಯುವಂಥ ಪರಿಸ್ಥಿತಿಯನ್ನು ಯಾರೂ ತಂದೊಡ್ಡಿಕೊಳ್ಳ ಬಾರದೆಂಬ ದೃಷ್ಟಿಯಿಂದ ಈ ಚಿಂತನೆ. ಇತ್ತೀಚೆಗಷ್ಟೇ, ಕರೋನಾ ಮಹಾಮಾರಿಯಿಂದಾಗಿ, ಸಾವನ್ನಪ್ಪಿದ ವೃದ್ಧರೊಬ್ಬರು ಸಾಯುವ ಮುನ್ನ ಆಡಿದ ಪಶ್ಚಾತಾಪದ ನುಡಿಗಳೆ (Regrets of dying)ಎಲ್ಲರಿಗೂ ಕಿವಿಮಾತುಗಳಂತಿವೆ.
ತಾನು ಸಾಯುವುದು ಖಚಿತ ವೆಂದಾಗ, ಮಡದಿ ಮಕ್ಕಳ ಮುಂದೆ ಅವರು ತಮ್ಮ ಮನದಾಳದ ಪಶ್ಚಾತಾಪವನ್ನು ಹೀಗೆ ತೋಡಿಕೊಂಡರು. ನಾನು, ನನ್ನನ್ನು ಹೊತ್ತು ಹೆತ್ತು ಸಾಕಿ ಸಲುಹಿದ ನನ್ನ ಹೆತ್ತವರನ್ನು ಮುಖ್ಯವಾಗಿ ಅವರ ವೃದ್ಧಾಪ್ಯದಲ್ಲಿ
ನೋಡಿಕೊಳ್ಳಲಿಲ್ಲ. ಅವರ ಸೇವೆ ಮಾಡಲಿಲ್ಲ. ಮುಂದೆ ಮಾಡಿದರಾಯಿತು ಎನ್ನುತ್ತಾ ಮಾಡಲಾಗದೆ, ಅವರನ್ನು ವೃದ್ಧಾ ಶ್ರಮಕ್ಕೆ ಸೇರಿಸಿ ಬಿಟ್ಟಿದ್ದೆ. ಅಲ್ಲೇ ಅವರು ಮಕ್ಕಳನ್ನು ನೆನೆಯುತ್ತಾ ಕೊನೆಯುಸಿರನ್ನು ಎಳೆದರು.
ಈಗ ಪಶ್ಚಾತ್ತಾಪ ಪಡುತ್ತೀದ್ದೇನೆ. ಆದರೆ, ಏನು ಪ್ರಯೋಜನ? ಜೀವದಲ್ಲಿದ್ದಾಗ, ಹೆತ್ತವರಿಗೆ ತುತ್ತು ಅನ್ನ ಕೊಡದ ಮಕ್ಕಳು ಅವರು ಸತ್ತ ಮೇಲೆ ಊರಿಗೆ ಭೂರಿ ಭೋಜನ ಹಾಕಿದರೆ ಏನು ಪುರುಷಾರ್ಥ? ಅವರುಗಳು ಜೀವದಲ್ಲಿದ್ದಾಗ ತಿರುಗಿ ನೋಡದ ಮಕ್ಕಳು, ಸತ್ತಮೇಲೆ ನಿತ್ಯ ಅವರ ಫೋಟೋಗೆ ಹಾರ ಹಾಕಿ ದೀಪ ಹಚ್ಚಿದರೆ ಏನು ಬಂತು? ಹೆತ್ತವರ ಸೇವೆ ಅದರ ಜೀವಿತ ಕಾಲದಲ್ಲೇ ಮಾಡಬೇಕು, ಅದು ವೃದ್ಧಾಪ್ಯದಲ್ಲಿ!
ಇನ್ನು ಮಡದಿಯ ಮುಂದೆ ಹೀಗೆ ದುಃಖಿಸಿದರು. ನಿನಗೆ ಒಳ್ಳೆಯ ಗಂಡನಾಗಿ ನಾನು ಬಾಳಲಾಗಲಿಲ್ಲ, ಜೀವನವಿಡೀ ನಿನ್ನನ್ನು ದುಡಿಸಿಕೊಂಡು ನನ್ನ ಸ್ವಾರ್ಥವನ್ನು ಮೆರೆದೆ. ನನ್ನಿಂದ ನೀನು ಸೀರೆ, ಚಿನ್ನ ಏನನ್ನೂ ಆಪೇಕ್ಷಿಸದಿದ್ದರೂ, ನಿನಗೇನಾದರೂ ಕೊಡಬೇಕೆಂದು ನನಗೆ ತೋಚಲೇ ಇಲ್ಲ ನೋಡು, ‘ಏನೇ’ ಎಂದು ಕರೆದಾಕ್ಷಣ, ನನ್ನ ಬಳಿ ಬೇಗ ಬೇಗ ಓಡಿಬರುತ್ತಿದ್ದೆ ಹಾಗೂ ನನ್ನ ಎಲ್ಲಾ ಚಾಕರಿ ಮಾಡಿದೆ.
ತವರು ಮನೆಗೆ ಹೋದರೂ ಪಾಪ ಅವರೊಬ್ಬರೇ ಇದ್ದಾರೆ, ಅವರ ಊಟ ತಿಂಡಿಗೆ ತೊಂದರೆಯಾಗಬಹುದು ಎಂದು ಹೇಳುತ್ತಾ ಬೇಗನೇ ಹಿಂತಿರುಗಿ ಬರುತ್ತಿದ್ದೆ. ನಾನು ಕ್ಲಬ್, ಪಾರ್ಟಿ ಎಂದು ಮನೆಗೆ ಎಷ್ಟೇ ತಡವಾಗಿ ಬಂದರೂ, ನನಗಾಗಿ ಕಾಯುತ್ತ ಕುಳಿತ್ತಿದ್ದು, ಏನನ್ನೂ ಪ್ರಶ್ನಿಸದೆ, ನಗುನಗುತಾ ಬಾಗಿಲು ತೆರೆದೆ. ದಿನದ ಕೆಲಸವೆಲ್ಲಾ ಮುಗಿಸಿ ರಾತ್ರಿ ನನ್ನ ಪಕ್ಕ ಮಲಗುವಾಗ ಏಕೊ ಕೊಂಚ ಎದೆ ನೋಯ್ಯುತ್ತಿದೆ ಎಂದು ನೀನು ಹೇಳಿದರೂ, ನಾನದನ್ನು ಕಿವಿಗೆ ಹಾಕಿಕೊಳ್ಳದೆ, ಅದು ನಿನ್ನ Heart ಗೆ ಸಂಬಂಧಿಸಿದ ನೋವು ಎಂದು ತಿಳಿಯುವಷ್ಟರಲ್ಲಿ ತಡವಾಗಿತ್ತು. ಒಟ್ಟಿನಲ್ಲಿ ನಿನಗಾಗಿ ನಾನು ಏನೂ ಮಾಡಲಿಲ್ಲ ಕ್ಷಮಿಸಿಬಿಡು ಎನ್ನುತ್ತಾ ಕಣ್ಣೊರೆಸಿಕೊಂಡರು.
ಮತ್ತೆ ಮಕ್ಕಳನ್ನು ನೋಡಿ, ನಾನು ನಿಮ್ಮ ಜತೆ, ಹೆಚ್ಚಿನ ಸಮಯವನ್ನು ಕಳೆಯಲಿಲ್ಲ. ಹಣ ಸಂಪಾದನೆಯೊಂದೇ ನನ್ನ ಗುರಿಯಾಗಿತ್ತು. ನಿಮಗೆ ನೀಡಬೇಕಾಗಿದ್ದ ಪ್ರೀತಿ ಸಮಯವನ್ನು ನೀಡಲಿಲ್ಲ. ಅದಕ್ಕಾಗಿ ಈಗ ಪಶ್ಚಾತ್ತಾಪ ಪಡುತ್ತಿದ್ದೇನೆ. ಹಣ, ಹೆಸರು ಮಾಡುವ ತವಕದಲ್ಲಿ, ನನ್ನ ಆರೋಗ್ಯದ ಬಗ್ಗೆಯೂ ಗಮನ ಕೊಡಲಿಲ್ಲ.
“In early years of life people waste their health, in search of wealth later, they waste their wealth to regain the lost Health” ಎನ್ನುವಂತಾಯಿತು ನನ್ನ ಸ್ಥಿತಿ. ಅಂತೆಯೇ, ಎಲ್ಲವನ್ನು ನೀಡಿದ ಸಮಾಜಕ್ಕೂ ದೇಶಕ್ಕೂ ನನ್ನಿಂದ ಏನೂ ಮಾಡ ಲಾಗಲಿಲ್ಲ. ಬರೇ ನನಗಾಗಿ ಮಾತ್ರ ಬದುಕಿ ಬಾಳಿದೆ. ಏನೆಲ್ಲ ಎಷ್ಟೆಲ್ಲ ದಾನ – ಧರ್ಮ – ಸತ್ಕಾರ್ಯಗಳನ್ನು ಮಾಡಬಹುದಾಗಿತ್ತು, ಬಡವರಿಗೆ ನೆರವಾಗಬಹುದಾಗಿತ್ತು.
ಏನೂ ಮಾಡದೇ ಈಗ ಪಶ್ಚಾತ್ತಾಪ ಪಡುತ್ತಿದ್ದೇನೆ. ಒಣ ಪ್ರತಿಷ್ಠೆಗಾಗಿ ಸಾಕಷ್ಟು ಕಳಕೊಂಡೆ, ಅನಾವಶ್ಯಕವಾಗಿ ಇತರರ ಜತೆ ತುಲನೆ ಮಾಡಿಕೊಂಡು ದುಃಖ ಪಟ್ಟೆ. ಸಂತೋಷವಾಗಿರೋದು ಹೇಗೆಂಬುದು ನನಗೆ ಕೊನೆವರೆಗೂ ಗೊತ್ತಾಗಲೇ ಇಲ್ಲ.
ವಯಸ್ಸಾಗುತ್ತಿದ್ದಂತೆ, ಅಧ್ಯಾತ್ಮಿಕ ಚಿಂತನೆಗಳು (Spirituality) ಬರಲಾರಂಭಿಸುತ್ತವೆ. ಹೀಗಾಗಲೂ ಜ್ಞಾನದ ಅರಿವು ಒಂದು ಕಾರಣವಾದರೆ, ಮರಣ ಭಯ ಇನ್ನೊಂದು ಕಾರಣ. ಬದಲಾಗಿ ಜೀವನದ ಆರಂಭದಿಂದಲೇ, ಲೌಕಿಕತೆಗೆ ಕೊಂಚ ಅಧ್ಯಾತ್ಮಿಕತೆ ಪ್ರಾಪಂಚಿಕತೆಗೆ ಕೊಂಚ ಪಾರಮಾರ್ಥಿಕತೆಯನ್ನು ಬೆರೆಸಿಕೊಂಡಿದ್ದರೆ, ಚೆನ್ನಾಗಿರುತ್ತಿತ್ತೇನೋ ಎಂದು ಈಗ ಅನಿಸುತ್ತಿದೆ.
ಒಟ್ಟಿನಲ್ಲಿ ದಲೈಲಾಮಾ ಅವರು ಹೇಳಿದಂತೆ, “people live as if they are never going to die, and they die as if they have never lived a happy and good life ಎಂಬ ಸತ್ಯದ ಅರಿವಾಗುತ್ತದೆ. ತಾತ್ಪರ್ಯ ಇಷ್ಟೇ, ಏನೇ ಪಶ್ಚಾತ್ತಾಪ ಗಳಿಲ್ಲದೆ, ಸಂತೋಷ ವಾಗಿ ಸಾಯೋದೇ ನಮ್ಮ ಜೀವನದ ಅಂತ್ಯವಾಗಿರಬೇಕು. ಹೀಗಾಗಬೇಕಾದರೆ; ಆರೋಗ್ಯ ತೀರ ಹದಗೆಟ್ಟು, ನಮಗೂ ಭಾರವಾಗಿ, ಮನೆಯವರಿಗೂ ಹೊರೆಯಾಗಿ ನರಳುತ್ತಾ ದಿನದೂಡುವ ಮುನ್ನ ಪ್ರಾಣ ಪಕ್ಷಿ ಹಾರಿ ಹೋಗಿಬಿಡಬೇಕು.
(ಅನಾಯಾಸೇನ ಮರಣಂ) ಇದಕ್ಕೆ ದೇವರ ಕೃಪೆಯೂ ಬೇಕು. ಇತರರನ್ನು ಕಾಡಿ ಬೇಡಿ ಬಾಳುವ ಜೀವನ ನಮ್ಮದಾಗಬಾರದು (ನಾದೈನ್ಯೇನ ಜೀವನಂ) ಯಾರಿಗೂ ಹೊರೆಭಾರವಾಗದೆ, ನಮಗೆ ಅಸಹ್ಯವಾಗದೆ, ಸಂತೋಷದಿಂದ ಸಾವನ್ನು ಎದುರು ನೋಡುವ ಮನೋಸ್ಥಿತಿ ನಮ್ಮದಾಗಬೇಕು. ಇದನ್ನು ನಾವೇ ಸೃಷ್ಟಿಸಿಕೊಳ್ಳ ಬಹುದು. ಸಾಂಸಾರಿಕವಾಗಿ, ಹೆತ್ತವರ ಸೇವೆ ಮಾಡಿ, ನಮ್ಮ ಕರ್ತವ್ಯ ಜವಾಬ್ದಾರಿಗಳನ್ನು ಪೂರೈಸಿ ಬಂಧನಮುಕ್ತರಾದಾಗ ನೆಮ್ಮದಿಯಿಂದ ಸಾಯಲು ಸುಲಭ ಸಾಧ್ಯ.
ಸಾಮಾಜಿಕವಾಗಿ, ಸಾತ್ಕಾರ್ಯಗಳನ್ನು ಗೈದು, ಸಮಾಜಸೇವೆಯನ್ನು ಮಾಡಿ ಜೀವನವನ್ನು ಸಾರ್ಥಕ ಮಾಡಿಕೊಂಡಾಗಲೂ, ಸುಖಾಂತ್ಯ ಪ್ರಾಪ್ತವಾಗುತ್ತದೆ. ನ್ಯಾಯ, ಧರ್ಮ ಸಮ್ಮತವಾಗಿಯೇ ಸಂಪತ್ತನ್ನ ಸಂಪಾದಿಸಿ, ಎಷ್ಟು ಬೇಕೊ ಅಷ್ಟನ್ನು ಮಾತ್ರ ಉಳಿಸಿ ಮಿಕ್ಕುದನ್ನೆಲ್ಲಾ ಸತ್ಪಾತ್ರರಿಗೆ ವಿತರಿಸಿದಾಗಲೂ ಪಶ್ಚಾತ್ತಾಪ ಪಟ್ಟುಕೊಳ್ಳುವ ಪ್ರಶ್ನೆಯೇ ಉದ್ಭವಿಸೋದಿಲ್ಲ. ಆತ್ಮವಂಚನೆ
ಯನ್ನು ಮಾಡಿಕೊಳ್ಳದೆ, ಮೌಲ್ಯಾಧಾರಿತ ಜೀವನವನ್ನು ನಡೆಸಿದಲ್ಲಿ ಜೀವನದ ಸಂಧ್ಯಾಕಾಲವನ್ನು ಹಾಗೂ ಸಾವನ್ನು
ಎದುರಿಸಲು ಕಷ್ಟಕರವೆನಿಸದು.
ಬಂದಂತೆ ಬದುಕದೆ ಅಂದುಕೊಂಡಂತೆ ಬದುಕಿದಾಗಲೂ, ಸಾಯುವ ಕಾಲದಲ್ಲಿ ನೆಮ್ಮದಿಯ ನಿಟ್ಟುಸಿರನ್ನು ಬಿಡಲು ಸಾಧ್ಯ ವಾಗುತ್ತದೆ. ಆಶ್ರಮ ಧರ್ಮಕ್ಕನುಸಾರವಾಗಿ, ವಾನಪ್ರಸ್ತ ಮತ್ತು ಸನ್ಯಾಸ ಘಟ್ಟದಲ್ಲಿ, ಎಲ್ಲರನ್ನು, ಎಲ್ಲವನ್ನೂ ನಗು ನಗುತಾ ಬಿಟ್ಟು ಹೋಗುವ ವೈರಾಗ್ಯದ ಮನೋಸ್ಥಿತಿಯನ್ನು ನಿರ್ಮಾಣ ಮಾಡಿಕೊಂಡಾಗಲೂ ಮರಣ ಒಂದು ಸಂಭ್ರಮವೆಂಬ ಭಾವನೆ ಬರುತ್ತದೆ. ಕೊನೆಯದಾಗಿ ನಾನು ಈ ಜಗತ್ತನ್ನು ಬರೀ ಕೈಯಲ್ಲಿ ಬಿಟ್ಟು ಹೋಗುತ್ತಿಲ್ಲ ಏನಾನ್ನಾದರೂ ಕೊಟ್ಟು ಹೋಗುತ್ತಿದ್ದೇನೆ.
ಹುಟ್ಟುವಾಗ ನನಗಿತ್ತು ಬರೇ ಉಸಿರು, ಹೆಸರಲ್ಲ; ಈಗ ಸಾಯುವಾಗ ಉಸಿರು ಇರೋದಿಲ್ಲ ಆದರೆ, ಒಳ್ಳೆಯ ಹೆಸರು ಇದೆ ಎಂಬ ಸಂತೃಪ್ತಿಯ ಭಾವನೆ ಸಂಪನ್ನಗೊಂಡಾಗ ಸಂತೋಷವಾಗಿ ಸಾಯಲು ಸುಲಭ ಸಾಧ್ಯವಾಗುತ್ತದೆ. ಇಂತಹ ಸಾವು ಎಲ್ಲರದಾಗಲಿ.