Sunday, 8th September 2024

ಬ್ರಿಟಿಷ್ ರಾಜಮನೆತನದ ಶೋಕೇಸ್ ಗೊಂಬೆಯ ಬದುಕು

ಶಿಶಿರ ಕಾಲ

shishih@gmail.com

ಪ್ರೀತಿಸುವ ಹುಡುಗ ಅದೆಷ್ಟೇ ಬಡವನಾಗಿರಲಿ, ತನ್ನ ಹುಡುಗಿಗೆ ನಿನ್ನನ್ನು ರಾಣಿಯಂತೆ ನೋಡಿಕೊಳ್ಳುತ್ತೇನೆ ಎಂದೇ ಹೇಳುವುದಲ್ಲವೇ? ಅವಳಿಗೆ ಅವನೇ ರಾಜ. ಇಂತಹ ಮಾತುಗಳು ಪ್ರೀತಿಯಲ್ಲಿ ಎಂದಿಗೂ ನಾಟಕೀಯವೆನ್ನಿಸುವುದಿಲ್ಲ. ಬದಲಿಗೆ ಒಂದಿಷ್ಟು ಅಸ್ಪಷ್ಟ ಆಶ್ವಾಸನೆಗಳನ್ನು, ಮುಂದಿನ ಸುಂದರ ಬದುಕಿನ ಕನಸನ್ನು ಹುಟ್ಟುಹಾಕುತ್ತವೆ. ನಾವ್ಯಾರೂ ಅರಮನೆಯ ರಾಜ ವೈಭವವನ್ನು ಕಣ್ಣಾರೆ ಕಂಡವರಲ್ಲ. ಆದರೂ ರಾಜ- ರಾಣಿಯರೆಂಬ ಕಲ್ಪನೆ ನಮ್ಮಲ್ಲಿ ಇಂದಿಗೂ
ರೋಮಾಂಚನವನ್ನು ಸೃಷ್ಟಿಸಬಲ್ಲವು. ಇಂದಿನ ಮಕ್ಕಳಿಗೂ ರಾಜ ರಾಣಿಯರ ಕಥೆ ತಕ್ಷಣಕ್ಕೆ ಒಂದಿಷ್ಟು ಆಸಕ್ತಿಯನ್ನು ಹುಟ್ಟುಹಾಕುತ್ತವೆ.

ಅದೊಂದು ಅಸಾಮಾನ್ಯ ಕಲ್ಪನೆಯ ಸಾಧ್ಯತೆ. ಫೇರಿ ಟೇಲ್. ರಾಜ ರಾಣಿಯರೆಂದರೆ ಮನುಷ್ಯ ಬದುಕಿನ ಪರಮೋಚ್ಚ ಸಾಧ್ಯತೆ. ಅದೇ ಕಾರಣಕ್ಕೆ ಕಥೆ ಗಳಲ್ಲಿಯೂ ರಾಜ ರಾಣಿಯರಿರಬೇಕು. ರಾಜಕಾರಣಿ ಎಷ್ಟೇ ಉನ್ನತ ಸ್ಥಾನ ಪಡೆದರೂ ರಾಜ-ರಾಣಿಯ ಕಲ್ಪನೆಯ ಸ್ಥಾನಕ್ಕೇರಲಾರ. ರಾಜಕಾರಣಿಗೆ ಇರುವ ಯಾವೊಂದು ತೊಡಕೂ ರಾಜ-ರಾಣಿಯರಿಗಿಲ್ಲ. ಅರಮನೆ, ಆಳು-ಕಾಳು, ವೈಭವ, ಸಂಪತ್ತು. ರಾಜನೆಂದರೆ ಅವನ ಮಾತೇ ಕಾನೂನು. ಅವರನ್ನು ಪ್ರಶ್ನಿಸುವ ಪ್ರಶ್ನೆಯೇ ಇಲ್ಲ. ಅವ ನಡೆದದ್ದೇ ದಾರಿ. ಅವನು ಹೇಳಿದ್ದೇ ಅವನ ಇತಿಹಾಸ, ಪರಂಪರೆ. ಯಾವುದೇ ಗುಂಪಿನಲ್ಲಿ ಬದುಕುವ ಪ್ರಾಣಿಗಳನ್ನೇ ತೆಗೆದುಕೊಳ್ಳಿ, ಅವುಗಳಲ್ಲಿಯೇ ಒಂದು ಬಲಿಷ್ಠ ಪ್ರಾಣಿ ಲೀಡರ್ ಆಗಿರುತ್ತದೆ- ಅಧಿಕಾರದಲ್ಲಿರುತ್ತದೆ.

ರಕ್ಷಣೆ, ಮಾರ್ಗದರ್ಶನ, ಇಡೀ ಗುಂಪನ್ನು ನೋಡಿಕೊಂಡು, ನಡೆಸಿಕೊಂಡು ಹೋಗುವ ಜವಾಬ್ದಾರಿ ಅದರದ್ದು. ಗುಂಪಿನ ಬದುಕೆಂದರೆ ಅಬ್ಬಮುಂದಾಳು ಇರಲೇಬೇಕು. ಆ ಯಜಮಾನ ಪ್ರಾಣಿ ಹಳತಾಗುತ್ತಿದ್ದಂತೆ, ದೈಹಿಕವಾಗಿ ದುರ್ಬಲವಾಗುತ್ತಿದ್ದಂತೆ ಇನ್ನೊಂದು ಪ್ರಾಯಕ್ಕೆ ಬಂದ ಪ್ರಾಣಿ ಆ ಯಜಮಾನನ ಮೇಲೆಯೇ ದಾಳಿ ಮಾಡುತ್ತದೆ. ಸಿಂಹ ಮೊದಲಾದ ಜೀವಿಗಳಲ್ಲಿ ಇಂತಹ ಅಧಿಕಾರಕ್ಕೆ ಬೇಕಾದ ಹೊಡೆದಾಟವಾಗುವಾಗ ದೊಡ್ಡ ಕಾಳಗವೇ ನಡೆಯುತ್ತದೆ. ಕಳೆವೊಮ್ಮೆ ಹಳೆಯ ಸಿಂಹವೇ ಗೆದ್ದು ಅಧಿಕಾರ ತನ್ನಲ್ಲಿಯೇ ಇಟ್ಟುಕೊಂಡರೆ, ಇನ್ನು ಕೆಲವೊಮ್ಮೆ ಹೊಸ ಅಧಿಕಾರ ಸ್ಥಾಪನೆಯಾಗುವುದು ಆ ಹಿರಿಯ
ಪ್ರಾಣಿಯ ಹೆಣದ ಮೇಲೆ.

ಬಹುತೇಕ ಪ್ರಾಣಿಗಳಲ್ಲಿ ಅಧಿಕಾರ ಹಸ್ತಾಂತರವಾಗುವುದು ಹೀಗೆ- ಕಾಳಗವಾಗಿ. ವಿಕಸನದಲ್ಲಿ ಮನುಷ್ಯನಿಗೆ ಅತ್ಯಂತ ಹತ್ತಿರವಿರುವ ಸಂಘ ಜೀವಿ ಮಂಗ,
ಗೊರಿ ಇವುಗಳಲ್ಲಿಯೂ ಹಾಗೆಯೇ. ಆದರೆ ಈ ಪ್ರಾಣಿಗಳಲ್ಲಿ ಮುದಿ ಯಜಮಾನ ಪ್ರಾಣಿ ಒಂದು ವಯಸ್ಸಿನ ನಂತರ ಯಾವುದೇ ಕಾಳಗವಿಲ್ಲದೆ ಅಧಿಕಾರದಿಂದ ಕೆಳಕ್ಕಿಳಿದು ಇನ್ನೊಂದಕ್ಕೆ ಬಿಟ್ಟುಕೊಡುವುದಿದೆ. ಬಹುಷಃ ಮನುಷ್ಯ ವಿಕಸನದಲ್ಲಿ ಯಾವತ್ತೋ ಈ ರೀತಿ ಕಾಳಗ ಮಾಡಿ ಅಧಿಕಾರ ವರ್ಗಾಯಿಸಿಕೊಳ್ಳುವ ಪದ್ಧತಿಯನ್ನು ನಿಲ್ಲಿಸಿರಬೇಕು. ಬದಲಿಗೆ ಒಂದು ಕುಟುಂಬಕ್ಕೆ ಆ ಕೆಲಸ ಕೊಟ್ಟು, ಅವರ ತಲಗಳಿಗಳೇ ನಮ್ಮನ್ನು ಮುನ್ನಡೆಸಬೇಕೆಂಬ ಪದ್ಧತಿ ಬಂದಿರಬೇಕು.

ಹೀಗೆ ಹೇಗೋ ಒಂದು ಕುಟುಂಬ ನಮ್ಮನ್ನುನ್ ಆಳುವುದು ಎಂಬ ಮನೆತನದ ಅಽಕಾರ ಪದ್ಧತಿ ಜಾರಿಗೆ ಬಂದಿರಬಹುದು. ಅದೆಷ್ಟೋ ಮಿಲಿಯನ್ ವರ್ಷ ನಮ್ಮ
ಪೂರ್ವಜರು ಬದುಕಿದ್ದು ಈ ರೀತಿ – ವಂಶಪಾರಂಪರ್ಯ ಅಽಕಾರ ಪದ್ಧತಿ. ಇದರಿಂದಾಗಿ ಆಂತರಿಕ ಕಲಹ, ಹತ್ತಾರು ಸಮಸ್ಯೆಗಳು ಅವರಿಗೆ ಬಾಧಿಸುವುದು ತಪ್ಪಿದ್ದಿರಬೇಕು. ಒಟ್ಟಾರೆ ಈ ಪ್ರಜಾಪ್ರಭುತ್ವ ಎನ್ನುವುದು ತೀರಾ ಇತ್ತೀಚಿನದು. ಇದು ಜಾಗ್ರತಕ್ಕೆ ಬಂದದ್ದು ಈಗೊಂದು ಎರಡು ಮೂರು ಶತಮಾನದಿಂದೀಚೆ.
ಇಂದು ರಾಜಮನೆತನವೆಂದರೆ ಅರ್ಥವೇ ಇಲ್ಲದಂತಾದರೂ ಆ ಮನೆತನಗಳೆಡೆಗಿನ ಸೆಳೆತ ನಮ್ಮಿಂದ ಇನ್ನೂ ದೂರವಾಗಿಲ್ಲ.

ಇಂದು ಬಹುತೇಕ ದೇಶ, ರಾಜ್ಯಗಳಲ್ಲಿ ರಾಜ ಮನೆತನವೆಂದರೆ ಶ್ರೀಮಂತ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಕಾರಣಗಳಿಂದಾಗಿ ಮಾತ್ರ ಪ್ರಸ್ತುತ. ಹೆಚ್ಚಿನ ದೇಶಗಳಲ್ಲಿ ಅವು ಹಲ್ಲಿಲ್ಲದ ಹಾವಿನಂತೆ, ಅಽಕಾರವಿಲ್ಲ. ಇನ್ನು ಇಂಗ್ಲೆಂಡಿನಂತಹ ಕೆಲವೆಡೆ ಅಧಿಕಾರದ ಮರ್ಯಾದೆಗಳಷ್ಟೇ ಉಳಿದುಕೊಂಡಿವೆ. ಬಹುಷಃ ಸೌದಿ ಅರೇಬಿಯಾ, ಭೂತಾನ್ ಹೀಗೊಂದಿಷ್ಟು ದೇಶಗಳನ್ನು ಬಿಟ್ಟರೆ ಇನ್ನೆಲ್ಲಿಯೂ ವಂಶಪರಂಪರೆಯ ಅಧಿಕಾರ ಉಳಿದಿಲ್ಲ. ಕಳೆದೊಂದು ನೂರು ವರ್ಷದಲ್ಲಿ ಲೆಕ್ಕ
ವಿಲ್ಲದಷ್ಟು ರಾಜಾಡಳಿತ, ರಾಜ ಮನೆತನದ ಆಳ್ವಿಕೆ ಕೊನೆಯಾಗಿವೆ.

ಈ ಅಧಿಕಾರದಿಂದ ದೂರವಾಗಿ ಹಲ್ಲಿಲ್ಲದಂತಾಗುವ ಪ್ರಕ್ರಿಯೆ ಒಂದು ರಾಜಮನೆತನಕ್ಕೆ ಸುಲಭದ ಬದಲಾವಣೆ ಯಲ್ಲ. ಅದೆಷ್ಟೋ ಕಾಲ ಆ ನೆಲ ಮತ್ತು ಜನರಿಗೆ ಪ್ರಸ್ತುತ ವಾಗಿದ್ದ ಕುಟುಂಬ ಅಪ್ರಸ್ತುತವಾಗುವುದು ಅಲ್ಲಿನ ಸಮಾಜಕ್ಕೂ ಸುಲಭವಲ್ಲ. ಏಕೆಂದರೆ ಆ ನೆಲದ, ಪೂರ್ವಜರ ಪರಂಪರೆ, ಹಿರಿಮೆ ಎಲ್ಲವೂ ಈ ಕುಟುಂಬದ ಮೇಲೆ ಅವಲಂಬಿಸಿದೆ. ಹಾಗಾಗಿ ಪಾರಂಪರಿಕ ಕಾರಣಗಳಿಂದಾಗಿ ಆಯಾ ನೆಲಕ್ಕೆ ಈ ಕುಟುಂಬ ಅವಶ್ಯಕ. ಹಾಗಾಗಿ ಈ ರಾಜಮನೆತನದವರು ಅಧಿಕಾರ ಚಲಾಯಿಸುವುದು ಕಡಿಮೆ ಯಾಗುತ್ತಿದ್ದಂತೆ ಅದೇ ಸಮಾಜ ಆ ಮನೆತನದವರನ್ನು ಬಣ್ಣದ ಬೆದರಿನ ಗೊಂಬೆಯಾಗಿಸುತ್ತವೆ. ಅದಕ್ಕೊಳ್ಳೇ ಉದಾಹರಣೆ – ಬ್ರಿಟಿಷ್ ರಾಯಲ್ ಫ್ಯಾಮಿಲಿ.

ಇಂಗ್ಲೆಂಡಿನ ಕ್ವೀನ್ ಎಲಿಜಬೆತ್ ೨. ಈಗ ಒಂದೂವರೆ ವರ್ಷದ ಹಿಂದೆ ಆಕೆ ಸತ್ತಾಗ ಇಡೀ ಜಗತ್ತಿನಲ್ಲ ಸುದ್ದಿಯಾಯಿತು. ಯಾವಯಾವುದೋ ದೇಶಗಳೆಲ್ಲ ತಮ್ಮ ಧ್ವಜ ವನ್ನು ಅರ್ಧಕ್ಕೆ ಹಾರಿಸಿದವು, ಶೋಕ ಆಚರಿಸಿದವು ಇತ್ಯಾದಿ. ಆಗೆಲ್ಲ ಸುದ್ದಿಯಾಗಿದ್ದು ಎಲಿಜಬೆತ್ ಸೂರ್ಯ ಮುಳುಗದ ನಾಡಾಗಿದ್ದ ಯುನೈಟೆಡ್ ಕಿಂಗ್ಡಂ ಅನ್ನು ಏಳು ದಶಕ ಆಳಿದಳು ಎಂದು.

ಕ್ವೀನ್ ಎಲಿಜಬೆತ್ ರಾಣಿಯಾಗಿ ಅಧಿಕಾರ ವಹಿಸಿ ಕೊಂಡದ್ದು ೧೯೫೨ ರಲ್ಲಿ. ರಾಣಿಯೇನೋ ಆದಳು, ಆದರೆ ಅದಾಗಲೇ ಪಾರ್ಲಿಮೆಂಟರಿ ವ್ಯವಸ್ಥೆ ಇಂಗ್ಲೆಂಡಿನಲ್ಲಿದ್ದು ಬಹಳ ಪ್ರಬಲವಾಗಿತ್ತು. ಈ ವಸಾಹತು ಸ್ಥಾಪಿಸಿದ ಅಧಿಕಾರಿ ಗಳು, ವ್ಯಾಪಾರಸ್ಥರು ಪರೋಕ್ಷವಾಗಿ ಅಲ್ಲಿನ ಆಡಳಿತ ನಡೆಸುತ್ತಿದ್ದರು. ಎಲಿಜಬೆತ್ ಅಧಿಕಾರಕ್ಕೆ ಬರುವಾಗ ಆ ಮನೆತನದ ಅಧಿಕಾರ ವ್ಯಾಪ್ತಿ ಕ್ಷೀಣಿಸಿಯಾಗಿತ್ತು. ಆದರೆ ಈ ಮನೆತನಕ್ಕೆ ಮತ್ತು ಬ್ರಿಟೀಷರಿಗೆ ಪರಸ್ಪರ ಅವಲಂಬನೆ ಇತ್ತು. ಅಲ್ಲಿನ ಪಾರ್ಲಿಮೆಂಟಿಗೆ ಈ ಪಾರಂಪರಿಕ ಕಾರಣದಿಂದ ರಾಜಮನೆ ತನಕ್ಕೆ ಕೊಡಬೇಕಾದ ಮರ್ಯಾದೆ ಕೊಡಬೇಕಿತ್ತು.

ಬ್ರಿಟಿಷ್ ಅಹಂನ ಅವಶ್ಯಕತೆ ಈ ಮನೆತನವಾಗಿತ್ತು. ಆ ಮನೆತನವೇ ಬ್ರಿಟಿಷರ ಪ್ರಾಬಲ್ಯದ ಗುರುತಾಗಿತ್ತು. ಎಲಿಜಬೆತ್ ರಾಣಿಯಾಗಿ ಅಧಿಕಾರ(!) ವಹಿಸಿಕೊಂಡಾಗ ಇಂಗ್ಲೆಂಡ್ ತೀರಾ ಹೀನಾಯ ಸ್ಥಿತಿಯಲ್ಲಿತ್ತು. ಭಾರತ ಸೇರಿದಂತೆ ಜಗತ್ತಿನ ಐದನೇ ಒಂದು ಭಾಗದ ನೆಲದಿಂದ ಲೂಟಿ ಮಾಡಿ ತಂದಿದ್ದ ಸಂಪತ್ತೆಲ್ಲ ಎರಡನೇ ವಿಶ್ವಯುದ್ಧದಲ್ಲಿ ಖಾಲಿ ಯಾಗಿತ್ತು. ದೇಶ ದಿವಾಳಿಯ ಅಂಚಿನಲ್ಲಿತ್ತು. ರೋಗರುಜಿನೆ, ಸಾಂಕ್ರಾಮಿಕ, ಬಡತನ, ಆಹಾರದ ಕೊರತೆ ಇತ್ಯಾದಿ
ಎದುರಾದವು. ಹೀಗಿರುವ ಸಂದರ್ಭದಲ್ಲಿ ಕ್ವೀನ್ ಎಲಿಜಬೆತ್ ರಾಣಿ ಪದವಿಗೆ ಏರಿದ್ದು. ಆಗ ವಯಸ್ಸು ಇಪ್ಪತ್ತೈದು. ಅಲ್ಲಿಂದ ಮುಂದೆ, ಸಾಯುವ ವರೆಗೂ, ಸುಮಾರು ಏಳು ದಶಕ ಅವಳೇ ರಾಣಿ. ಹಾಗಂತ ದೇಶ ಉಳಿಸುವ ಯಾವುದೇ ದೊಡ್ಡ ಘನಂದಾರಿ ಕೆಲಸವನ್ನೇನು ಎಲಿಜಬೆತ್ ಮಾಡಿಲ್ಲ.

ಅವಳ ಸಾಧನೆ ಏನೆಂದರೆ ಹೇಳಿಕೊಳ್ಳುವಂಥದ್ದೇನೂ ಇಲ್ಲ. ಅವಳು ಜೀವನದುದ್ದಕ್ಕೂ ಮಾಡಿದ ಕೆಲಸವೆಂದರೆ ಅವಳಿಗೊಪ್ಪಿಸಿದ ರಾಜಮನೆತನವನ್ನು, ಅದರ ಗಾಂಭೀರ್ಯವನ್ನು ಜತನದಿಂದ ಕಾಪಾಡಿಕೊಂಡು ಬಂದದ್ದು. ನಿಮಗೆ ಬ್ರಿಟೀಷರ ರಾಯಲ್ ಫ್ಯಾಮಿಲಿಯೆಡೆಗಿನ ಹುಚ್ಚುತನ, ಗೀಳಿನ ಬಗ್ಗೆ ಗೊತ್ತೇ ಇರುತ್ತದೆ. ಈ ಕುಟುಂಬದ ಯಾರೇ ಕುಂಡೆ ಕೆರೆದುಕೊಂಡರು ಅಲ್ಲಿ ಜನಪ್ರಿಯ ಸುದ್ದಿಯಾಗುತ್ತದೆ, ಸಾರ್ವಜನಿಕ ಚರ್ಚೆಯಾಗುತ್ತದೆ. ಈ ಗೀಳನ್ನು ಅತ್ಯಂತ ಜತನವಾಗಿ ಅಲ್ಲಿನ ಸರಕಾರ ಮತ್ತು ಈ ಮನೆತನ ಜೊತೆಯಾಗಿ ಕಾಪಾಡಿಕೊಂಡು ಬಂದಿದೆ. ಎಲಿಜಬೆತ್ ರಾಣಿಯಾಗಿದ್ದಳೇನೋ ನಿಜ, ಆದರೆ ಆಕೆಗೆ ಇಂಥದ್ದೊಂದು ಜವಾಬ್ದಾರಿ ಎಂಬುದಿರಲಿಲ್ಲ. ಅವಳು ಮಾತನಾಡುತ್ತಿದ್ದುದು ತೀರಾ ಕಡಿಮೆ. ರಾಷ್ಟ್ರದ ಸಂಕಷ್ಟದ ಸಮಯಗಳಲ್ಲಿ, ಅರಾಜಕತೆಯ ಸಮಯದಲ್ಲಿ ರಾಣಿಯಾಗಿ ಪ್ರತಿಕ್ರಿಯಿಸ ಬೇಕೆಂದು ಇಡೀ ಬ್ರಿಟನ್ ಎದುರುನೋಡಿದರೂ ರಾಣಿ ಮೌನವಾಗಿದ್ದದ್ದೇ ಜಾಸ್ತಿ.

ಅವಳ ಅಭಿಪ್ರಾಯ ಇದಂತೆ, ಆದಂತೆ ಎಂದು ಬೇರೆಯವರು, ಅವರ ಮನೆಯವರು, ರಾಜಕಾರಣಿಗಳು, ಅಲ್ಲಿನ ಪ್ರಧಾನಿ ಹೇಳಿದ್ದೇ ಜಾಸ್ತಿ. ಅವಳಿಗಿದ್ದ ಏಕೈಕ ಆದ್ಯತೆ, ಕರ್ತವ್ಯ ಈ ರಾಜಮನೆತನವನ್ನು ಸರಿಯಾಗಿಟ್ಟು ಪ್ರದರ್ಶನ ಮಾಡುವುದು -ಜಾತ್ರೆಯ ಗೊಂಬೆಗಳಂತೆ. ಈ ರಾಯಲ್ ಕುಟುಂಬದ ಗೀಳು, ಹುಚ್ಚು
ವೈಭವೀಕರಣ ಕೇವಲ ಇಂಗ್ಲೆಂಡಿಗಷ್ಟೇ ಸೀಮಿತವಾಗಿಲ್ಲ. ಅದು ಭಾರತದ ಒಂದು ತಲೆಮಾರಿನವರಲ್ಲಿ ಇಂದಿಗೂ ಅಲ್ಪ-ಸ್ವಲ್ಪ ಇದೆ. ಆದರೆ ಈ ಬ್ರಿಟಿಷ್ ರಾಜಮನೆತನದ ವ್ಯಾಮೋಹ ಇಂದಿಗೂ ನ್ಯೂಝಿಲ್ಯಾಂಡ್, ಆಸ್ಟ್ರೇಲಿಯಾ ಇಲ್ಲ ಅತ್ಯಂತ ಜಾಗೃತವಾಗಿ ಉಳಿದುಬಿಟ್ಟಿದೆ. ಅದರಲ್ಲಿಯೂ ನ್ಯೂಜೀಲ್ಯಾಂಡ್‌ನಲ್ಲಿ ಈ ಬ್ರಿಟಿಷ್ ರಾಜಮನೆತನ ದಲ್ಲಿ ಏನೇ ಬೆಳವಣಿಗೆಯಾದರೂ ಅದು ಅಲ್ಲಿನ ಎಲ್ಲಾ ಪತ್ರಿಕೆಯ ಮುಖಪುಟದ ಸುದ್ದಿ. ಇಂದಿಗೂ ಅಲ್ಲಿನ ಓಫೀಸ್ ಸುದ್ದಿಗಳಾಗುವ ವಿಷಯ ಇದು.

ಬ್ರಿಟನ್ ರಾಜಮನೆತನ ಅಲ್ಲಿನ ಪತ್ರಿಕೆ, ಮಾಧ್ಯಮ, ಮತ್ತು ಜನರ ಸೆನ್ಸೆಷನ್ನಿಗೆ ಅತ್ಯಂತ ಹೆಚ್ಚು ಸೀಮಿತವಾಗಿ ಕೆಲವು ದಶಕಗಳೇ ಕಳೆದಿವೆ. ಯುವರಾಣಿ ಡಯಾನಾ ಸಾವಿನ ವಿಷಯ, ಅದು ಸಂಭವಿಸಿದ ರೀತಿ, ಕಾರಣ ನಿಮಗೆ ಗೊತ್ತಿದ್ದದ್ದೇ. ಅವಳನ್ನು ಫೋಟೋ ಜರ್ನಲಿ ಒಬ್ಬ ಹಿಂಬಾಲಿಸಿಕೊಂಡು ಹೋಗುವಾಗ ಅಪಘಾತ ಸಂಭವಿಸಿತು. ಮಾಧ್ಯಮ ಮತ್ತು ಜನರ ತೀವ್ರಾಸಕ್ತಿಯೇ ಡಯಾನಾಳನ್ನು ಬಲಿತೆಗೆದು ಕೊಂಡದ್ದು. ಅಥವಾ ಆ ಕುಟುಂಬಕ್ಕಿದ್ದ ಏಕೈಕ ಕೆಲಸವಾಗಿದ್ದ
ಅಲಂಕಾರದ ಗೊಂಬೆಯಾಗಿರಬೇಕಿದ್ದ ಕರ್ತವ್ಯವನ್ನು ಮೀರಿದ್ದು ಬಹಿರಂಗವಾಗಬಾರದು ಎಂಬ ಹೆದರಿಕೆಯಿಂದ. ಡಯಾನಾ ಯುವರಾಣಿಯಾಗಿಲ್ಲದಿದ್ದರೆ ಆಕೆಯನ್ನು ಯಾರೂ ಹಿಂಬಾಲಿಸುತ್ತಿರಲಿಲ್ಲ. ಆಕೆ ಇನ್ಯಾವುದೇ ದೇಶದ ಯುವರಾಣಿಯಾಗಿದ್ದರೂ ಹೀಗೆ ಸಾಯುತ್ತಿರಲಿಲ್ಲ.

ಡಿಸೆಂಬರ್ ೨೦೧೨. ತುಂಬು ಗರ್ಭಿಣಿಯಾಗಿದ್ದ ಯುವ ರಾಣಿ ಕ್ಯಾಥರಿನ್ (ಡಯಾನಾಳ ಸೊಸೆ) ಲಂಡನ್ನಿನ ರಾಯಲ್ ಆಸ್ಪತ್ರೆಗೆ ದಾಖಲಾಗಿದ್ದಳು. ಹಿಂದೆ ಹೇಳಿದಂತೆ ಈ ಕುಟುಂಬದೆಡೆಗಿನ ತೀವ್ರಾಸಕ್ತಿ ಲಂಡನ್ನಿನಷ್ಟೇ ಆಸ್ಟ್ರೇಲಿಯಾ ದಲ್ಲಿಯೂ ಇತ್ತು. ಅಲ್ಲಿನ ರೇಡಿಯೋ ಸ್ಟೇಷನ್ನಿನ ಇಬ್ಬರು ಆರ್‌ಜೆಗಳು ಕ್ಯಾಥರಿನ್ ಇದ್ದ ಆಸ್ಪತ್ರೆಗೆ ರಾಣಿಯ ಸ್ವರದಲ್ಲಿ ಕರೆಮಾಡಿದರು. ಅಲ್ಲಿ ಫೋನ್ ಎತ್ತಿಕೊಂಡವಳು ನರ್ಸ್ ಜೆಸಿಂತಾ ಸೆಲ್ಡಾನಾ. ಅವಳು ನಮ್ಮ ಕರ್ನಾಟಕದವಳು, ಕನ್ನಡದವಳು. ಅವಳಿಗೆ ಇದೊಂದು ಫ್ರಾಂಕ್ ಕರೆ ಎಂದು ತಿಳಿಯಲಿಲ್ಲ. ಕರೆಯನ್ನು ಯುವರಾಣಿ ನರ್ಸಿಗೆ ವರ್ಗಾಯಿಸಿದಳು. ಹೀಗೆ ಕ್ಯಾಥರಿನ್‌ಗೆ ಸಂಬಂಧಿಸಿದ ಗೌಪ್ಯ ವಿಷಯಗಳು ಅವಳಿಂದಾಗಿ ಬಹಿರಂಗವಾಗಿಬಿಟ್ಟವು.

ರಾಜಮನೆತನ ಎಂದರೆ ಅದೊಂದು ಪ್ರದರ್ಶನದಂತೆ ನಡೆಸಿಕೊಂಡು, ನೋಡಿಕೊಂಡು ಬಂದವರಿಗೆ ಇದನ್ನು ಸಹಿಸಲಾಗಲಿಲ್ಲ. ಈ ಘಟನೆಯಾದ ನಂತರ, ನಾಲ್ಕೇ ದಿನಕ್ಕೆ ಜೆಸಿಂತಾ ಆತ್ಮಹತ್ಯೆ ಮಾಡಿಕೊಂಡಳು. ಅವಳೇಕೆ ಸತ್ತಳು, ಅವಳಿಗೆ ಖಿನ್ನತೆಯಿತ್ತೇ, ಇದು ಕೊಲೆಯೇ ಇವೆಲ್ಲ ಚರ್ಚಾಸ್ಪದ. ಏನೇ ಇರಲಿ, ಅಲ್ಲಿಗೆ, ಈ ರಾಜಮನೆತನದ ಗುಟ್ಟು ಬಹಿರಂಗಕ್ಕೆ ಕಾರಣವಾದ ಏಕೈಕ ಕಾರಣಕ್ಕೆ, ಈ ಪ್ರದರ್ಶನಕ್ಕೆ ಅಡ್ಡಿಯಾಗಿ ಬಂದ ಜೆಸಿಂತಾ ಹೆಣವಾಗಿ ಭಾರತಕ್ಕೆ ಮರಳಿದಳು, ದಕ್ಷಿಣ ಕನ್ನಡದ ಶಿರ್ವಾದಲ್ಲಿ ಮಣ್ಣಾದಳು.

Royal family must be seen to be believed – ಇದು ರಾಣಿ ಎಲಿಜಬೆತ್‌ನ ಬದುಕಿನುದ್ದಕ್ಕೂ ಧ್ಯೇಯವಾಗಿದ್ದ ವಾಕ್ಯ. ದಕ್ಷಿಣ ಆಫ್ರಿಕಾಕ್ಕೆ ಹೋದಾಗ ಯಾರೋ ಒಬ್ಬ ಅಭಿಮಾನಿಯ ಮೇಲೆ ಎರಗಿದ್ದು, ಹೊಡೆಯಲು ಮುಂದಾಗಿದ್ದು ಇತ್ಯಾದಿ ಕೆಲವೇ ಕೆಲವು ಪ್ರಕರಣ ಗಳನ್ನು ಬಿಟ್ಟರೆ ಎಲಿಜಬೆತ್ ಜೀವನದುದ್ದಕ್ಕೂ ರಾಣಿಯ ಗಾಂಭೀರ್ಯವನ್ನು ಮೀರಿರಲಿಲ್ಲ. ರಾಣಿಯೆಂದರೆ ಹೇಗಿರಬೇಕೆಂದು ಜನರು ಬಯಸುತ್ತಾರೋ ಹಾಗೆಯೇ ವ್ಯವಹರಿಸುವ ನೈಪುಣ್ಯತೆ ಅವಳಲ್ಲಿತ್ತು. ಡಯಾನಾ ಘಟನೆಯಾದ ನಂತರ ಎಲಿಜಬೆತ್‌ಗೆ ಈ ಕುಟುಂಬದ ಮರ್ಯಾದೆ ಕಾಪಾಡಿಕೊಂಡು ಹೋಗುವುದು ಸುಲಭವಾಗಿರಲಿಲ್ಲ.

ಜೆಸಿಂತಾ ಪ್ರಕರಣ ಅವಳಿಗೆ ತಲೆಯೇ ಸರಿಯಿರಲಿಲ್ಲ ಎನ್ನುವ ವರದಿ ಗಳಿಂದ ಅಲ್ಲಿಯೇ ಆರಿಹೋಯಿತು. ಇದೆಲ್ಲ ಶಾಂತವಾಗುತ್ತಿದ್ದಂತೆ ಆಕೆಯ ಎರಡನೇ ಮಗ ಆಂಡ್ರೂ ತನ್ನ ಕಚ್ಛೆ ಹರುಕು ಕೆಲಸದಿಂದಾಗಿ ಅಮೆರಿಕದಲ್ಲಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದುಬಿಟ್ಟ. ಇದನ್ನು ವರದಿ ಮಾಡಿದ್ದು ಬಿಬಿಸಿ. ಈಗ ಮನೆತನದ ಮರ್ಯಾದಿ ಉಳಿಸ್ಕೊಳ್ಳಬೇಕಲ್ಲ – ರಾಣಿ ತಕ್ಷಣ ಅವನಿಗಿದ್ದ ಬಿರುದಾಂಕಿತವನ್ನೆಲ್ಲ ಹಿಂತೆಗೆದುಕೊಂಡಳು. ಅವನ ಮೇಲೆ ಯಾವುದೇ ಪ್ರಕರಣ ದಾಖಲಾಗಲಿಲ್ಲ, ಸಂಪತ್ತನ್ನು ಅವನಿಂದ ಕಸಿದುಕೊಳ್ಳಲಿಲ್ಲ ಇತ್ಯಾದಿ. ಅಸಲಿಗೆ ಆತ ಎರಡನೇ ಮಗ ನಾಗಿದ್ದರಿಂದ ಮನೆತನದ ಅಽಕಾರ ಅವನಿಗೆ ಸಿಗುತ್ತಿರಲಿಲ್ಲ. ರಾಣಿ ಮತ್ತು ಬ್ರಿಟನ್ ಇದಕ್ಕೂ ಸಮರ್ಥವಾಗಿ ತೇಪೆ ಹಚ್ಚಿತು.

ಇದೆಲ್ಲದರ ನಡುವೆ ರಾಜಕುಮಾರ ಹ್ಯಾರಿ ಕಪ್ಪು ವರ್ಣದ ಅಮೆರಿಕದ ನಟಿ ಮೇಘನ್ ಮರ್ಕೆಲ್‌ಳನ್ನು ಮದುವೆಯಾಗಿ ಬಿಟ್ಟ. ಅವಳು ಕಪ್ಪು ವರ್ಣೀಯಳು. ಇದನ್ನು ರಾಣಿ ಸಹಿಸಲಿಲ್ಲ. ಬ್ರಿಟಿಷ್ ವರ್ಣಬೇಧ ಬುದ್ಧಿ ಕಪ್ಪು ವರ್ಣೀಯಲೊಬ್ಬಳು ರಾಣಿಯಾಗುವುದನ್ನು ಒಪ್ಪಲೇ ಇಲ್ಲ. ಮೇಘನ್ ಮರ್ಕೆಲ್ ಈ ಒಂದು ಕಾರಣಕ್ಕೆ ಪಡಬಾರದ ಕಷ್ಟವನ್ನೆಲ್ಲ ಪಟ್ಟಳು. ಕೊನೆಗೆ ಹ್ಯಾರಿ (ಎಲಿಜಬೆತ್ ಮೊಮ್ಮಗ) ಮತ್ತು ಪತ್ನಿ ಮೇಘನ್ ಇಂಗ್ಲೆಂಡ್ ಬಿಟ್ಟು ಅಮೆರಿಕ ಸೇರಿಬೇಕಾಯಿತು. ಈ
ಕುಟುಂಬದ ಅಸಲಿ ಬಣ್ಣವನ್ನು ಬಹಿರಂಗ ಮಾಡಿದ್ದು ಹ್ಯಾರಿ, ತನ್ನ’ಖPಅಉ’ ಎಂಬ ಆತ್ಮಕಥನದಲ್ಲಿ. ಗಾಡಿಯಲ್ಲಿರುವ ಸ್ಪೇರ್ ಟೈರ್‌ನಂತೆ, ರಾಜಕುಮಾರ ವಿಲಿಯಮ್ಸಗೆ ಏನಾದರೂ ಆದರೆ ಇವನಿರಲಿ ಎಂಬಂತೆಯೇ ಹ್ಯಾರಿಯನ್ನು ಬೆಳೆಸಿದ್ದು.

ಅವನ ಆತ್ಮಕಥನ ಓದಿಬಿಟ್ಟರಂತೂ ಈ ಕುಟುಂಬ ಶೋಕೇಸಿನ ಗೊಂಬೆಯಲ್ಲದೆ ಇನ್ನೇನೂ ಅಲ್ಲ, ಈ ಕುಟುಂಬದ ಅಸ್ತಿತ್ವವೇ ಬ್ರಿಟೀಷರ ಅಹಂ ಎಂಬುದು ಇನ್ನಷ್ಟು ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲ, ಹೀಗೊಂದು ತೀರ್ವಾಸಕ್ತಿಯ ನಡುವಿನ ಬದುಕು ಎಷ್ಟು ಕಷ್ಟವೆನ್ನುವುದು ಕೂಡ ತಿಳಿಯುತ್ತದೆ. ಈಗ ರಾಣಿ ಎಲಿಜಬೆತ್ ಇಲ್ಲ. ಈಗಿನ ರಾಜ, ಎಲಿಜಬೆತ್‌ನ ಮಗ ಚಾರ್ಲ್ಸ ಗೆ ಕ್ಯಾನ್ಸರ್. ಚಾಲ್ಸನ ಮಗ ವಿಲಿಯಮ್ಸ ಯುವರಾಜ. ಅವನ ತಮ್ಮ ಹ್ಯಾರಿ ಅಮೆರಿಕ ಸೇರಿದ್ದಷ್ಟೇ ಅಲ್ಲ, ಕುಟುಂಬದ ಎಲ್ಲವನ್ನು ತ್ಯೆಜಿಸಿ ಬಂದಿದ್ದಾನೆ.

ರಾಣಿ ಎಲಿಜಬೆತ್ ತೀರಿಕೊಂಡಾಗ ಅಂತ್ಯಕ್ರಿಯೆಗೆ ಹೋದ ಹ್ಯಾರಿ ಉಳಿದುಕೊಂಡದ್ದು ಲಂಡನ್ನಿನ ಹೋಟೆಲ್ ಒಂದರಲ್ಲಿ. ಯುವರಾಜ ವಿಲಿಯಮ್ಸ ಮತ್ತು ಹ್ಯಾರಿಗೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗಾಗುವುದಿಲ್ಲ. ವಿಲಿಯಮ್ಸ ಹೆಂಡತಿ ತಿಂಗಳಷ್ಟು ಸಮಯ ಆಸ್ಪತ್ರೆಯಲ್ಲಿ ಕಳೆದು ಬಂದಿದ್ದಾಳೆ. ಅವಳಿಗೇನಾಗಿತ್ತು ಎಂಬುದು ಗೌಪ್ಯ. ಇಂತಹ ಸಂದರ್ಭದಲ್ಲಿ ಇಡೀ ರಾಜಮನೆತನ ತನ್ನ ಇರುವಿಕೆಯ ಪ್ರದರ್ಶನಕ್ಕೆ ಕಷ್ಟಪಡುತ್ತಿದೆ. ಈ ನಡುವೆ ರಾಜಮನೆತನದವರು ಏಕೆ ಬೇಕು, ಅವರು ಆದಾಯಕ್ಕೆ ತೆರಿಗೆ ಕಟ್ಟುವುದಿಲ್ಲ ಎಂಬಿತ್ಯಾದಿ ವಿರುದ್ಧದ ಕೂಗುಗಳು ದಿನಗಳೆದಂತೆ ಹೆಚ್ಚುತ್ತಿದೆ. ಇಂಗ್ಲೆಂಡ್‌ನ ಒಂದು ವರ್ಗ ರಾಜಮನೆತನವನ್ನು ಮೀರಿ ದೇಶ ಮುನ್ನಡೆಯಬೇಕಿದೆ ಎಂದರೆ ಇನ್ನೊಂದು ದೊಡ್ಡ ವರ್ಗ ಅದೇ ಓಬಿರಾಯನ ಕಾಲದ ವ್ಯಾಮೋಹವನ್ನು ಇರಿಸಿಕೊಂಡಿದೆ. ಏಕೆಂದರೆ ಈ ರಾಯಲ್ ಮನೆತನವೇ ಬ್ರಿಟೀಷರ ಪರಂಪರೆ, ಇತಿಹಾಸ ಮತ್ತು ಅಹಂಕಾರ.

Leave a Reply

Your email address will not be published. Required fields are marked *

error: Content is protected !!