ಪ್ರಸ್ತುತ
ಗಣೇಶ್ ಭಟ್, ವಾರಣಾಸಿ
ಇತ್ತೀಚೆಗೆ ಬೆಳಕಿಗೆ ಬಂದ ಶ್ರದ್ಧಾ ವಾಲ್ಕರ್ ಹತ್ಯೆಯ ಭೀಕರತೆ ದೇಶದ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚಿಸಲ್ಪಟ್ಟಿದೆ. ಲಿವ್ ಇನ್ ಟುಗೆದರ್ ಸಂಬಂಧವಿಟ್ಟುಕೊಂಡಿದ್ದ ಶ್ರದ್ಧಾಳನ್ನು ಅಫ್ತಾಬ್ ಅಮೀನ್ ಪೂನಾ ವಾಲಾ ಕೊಂದು ಆಕೆಯ ದೇಹವನ್ನು 35 ತುಂಡು ಮಾಡಿ ಫ್ರಿಜ್ ನಲ್ಲಿಟ್ಟು ಪ್ರತೀ ದಿನ ಒಂದೊಂದೇ ತುಂಡನ್ನು ದೆಹಲಿಯ ಕಾಡುಗಳಲ್ಲಿ ಎಸೆದು ಬಂದ ಅಮಾನವೀಯ ವರ್ತನೆ ಎಲ್ಲರಿಗೂ ಗೊತ್ತು.
ಆದರೆ ಅವರಿಬ್ಬರಿಗೆ ಪರಿಚಯ ಆಗಿದ್ದು ಹೇಗೆ? ಇಬ್ಬರೂ ಬೇರೆ ಬೇರೆ ಊರಿನವರು. ಶ್ರದ್ಧಾ ಪಾಲ್ಘಾರ್‌ನವಳಾದರೆ, ಅಫ್ತಾಬ್ ಮುಂಬೈಯವನು. ಇವರು ಕಾಲೇಜು ಸಹಪಾಠಿಗಳಲ್ಲ, ಸಹೋದ್ಯೋಗಿಗಳೂ ಅಲ್ಲ. ಪರಸ್ಪರ ಪರಿಚಿತರಾದದ್ದು ಬಂಬಲ್ ಹೆಸರಿನ ಡೇಟಿಂಗ್ ಆಪ್ ಮೂಲಕ. 2018 ರಲ್ಲಿ ಅಫ್ತಾಬ್ ಈ ಆಪ್ ಮೂಲಕ ಚ್ಯಾಟಿಂಗ್ ನಡೆಸಿ ಶ್ರದ್ಧಾಳನ್ನು ತನ್ನ ಪ್ರೀತಿಯ ಬಲೆಗೆ ಕೆಡವಿಕೊಂಡಿದ್ದ. ಪ್ರೀತಿಯ ಅಮಲಿನಲ್ಲಿದ್ದ ಶ್ರದ್ಧಾ ತನ್ನ ಹೆತ್ತವರ ವಿರೋಧವನ್ನೂ ಲೆಕ್ಕಿಸದೆ ಅಫ್ತಾಬ್ ಜೊತೆಗೆ ಲಿವ್ ಇನ್ ಸಂಬಂಧವನ್ನಿಟ್ಟುಕೊಂಡು ಮೊದಲು ಮುಂಬೈಗೆ ಹಾಗೂ ನಂತರ ದೆಹಲಿಗೆ ತೆರಳುತ್ತಾಳೆ.
ಒಂದು ದಿನ ಶ್ರದ್ಧಾಳಿಂದ ಬಿಡುಗಡೆ ಹೊಂದಲು ಬಯಸಿದ ಅಫ್ತಾಬ್ ಆಕೆಯನ್ನು ಸಾಯಿಸುತ್ತಾನೆ. ವಿಚಿತ್ರವೇನೆಂದರೆ ಶ್ರದ್ಧಾಳ ಶವವು ಫ್ರಿಜ್ ನಲ್ಲಿರುವಾಗಲೇ ಅಫ್ತಾಬ್ ಪುನ: ಆಪ್ ಮೂಲಕ ಬೇರೆ ಮಹಿಳೆಯರನ್ನು ಸಂಪರ್ಕಿಸಿ ಮನೆಗೆ ಕರೆತಂದಿದ್ದನಂತೆ!
ಇಂದಿನ ಇಂಟರ್ನೆಟ್ ಯುಗದಲ್ಲಿ ಸ್ಮಾರ್ಟ್ ಫೋನ್ ಮೂಲಕ ಸಾಕಷ್ಟು ಡೇಟಿಂಗ್ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡಿ ಕೊಳ್ಳಬಹುದು. ಹದಿಹರೆಯದ ಯುವಕ ಯುವತಿಯರು ಇವುಗಳ ಚಟಕ್ಕೆ ಬೀಳುತ್ತಾರೆ.
ಕರೋನಾ ಲಾಕ್ಡೌನ್ ಕಾಲದಲ್ಲಂತೂ ಒಂಟಿತನ ನೀಗಿಕೊಳ್ಳಲು ಜನರು ದೊಡ್ಡ ಪ್ರಮಾಣದಲ್ಲಿ ಇವುಗಳ ಮೊರೆ ಹೋದರು. ಕರೋನಾ ಕಾಲದಲ್ಲಿ ಟಿಂಡರ್ ಹೆಸರಿನ ಡೇಟಿಂಗ್ ಆಪ ದಿನವೊಂದರಲ್ಲಿ ೩೦೦ ಶತಕೋಟಿ ಸಂಖ್ಯೆಯ ಸ್ವೈಪ್‌ಗಳನ್ನು ಕಾಣು ತ್ತಿತ್ತು, ಓಕೆಕ್ಯುಪಿಡ್ ಆಪ್ ನ ಬಳಕೆ ೭೦೦% ಹೆಚ್ಚಾಗಿತ್ತು ಹಾಗೂ ಬಂಬಲ್ ನ ವೀಡಿಯೋ ಕಾಲಿಂಗ್ ಪ್ರಮಾಣ ೭೦% ಹೆಚ್ಚಾಗಿತ್ತು ಎನ್ನುತ್ತದೆ ಅಸೆಂಡಾ ಇಂಟೆಗ್ರೇಟೆಡ್ ಹೆಲ್ತ್ ಮ್ಯಾಗಜಿನ್.
ಇದು ನಡೆಸಿದ ಸರ್ವೇಯು ಡೇಟಿಂಗ್ ಆಪ್‌ಗಳನ್ನು ಬಳಸುವ ಜನರಲ್ಲಿ 49% ಮಂದಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ ಎಂದಿದೆ. ಡೇಟಿಂಗ್ ಆಪ್‌ಗಳನ್ನು ಬಳಸುವವರ ಮಾನಸಿಕ ಒತ್ತಡ ಇತರರಿಗಿಂತ ಮೂರು ಪಾಲು ಹೆಚ್ಚು. ಈ ಚಟಕ್ಕೆ ಬಿದ್ದ ಬಳಕೆದಾರರು ತಮ್ಮ ಬಗ್ಗೆ , ತಮ್ಮ ದೇಹ ರಚನೆಯ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುತ್ತಾರೆ. ಡೇಟಿಂಗ್ ಸಂಗಾತಿಯಿಂದ ತಿರಸ್ಕರಿಸ ಲ್ಪಟ್ಟವರು ಆತ್ಮಹತ್ಯೆಗೆ ಮನಮಾಡುವ ಅಪಾಯವೂ ಇದೆ.
ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಆಪ್‌ಗಳ ಮೂಲಕ ಬಹುದೊಡ್ಡ ಮೋಸದ ಜಾಲವೂ ನಡೆಯುತ್ತಿದೆ. ವಂಚಕರ ತಂಡಗಳು ಡೇಟಿಂಗ್ ಆಪ್‌ಗಳಿಗೆ ಭೇಟಿಕೊಡುವ ಅಮಾಯಕ ಯುವಕರನ್ನು ಪ್ರೀತಿಸುವಂತೆ ನಟಿಸಿ ಅವರಿಂದ ಹಣವನ್ನು ಪೀಕಿಸುವ ವಂಚನೆ ಮಾಡುತ್ತಿವೆ. ತೆಲಂಗಾಣ ಟುಡೇ ಪತ್ರಿಕೆಯ ವರದಿಯಂತೆ ದೆಹಲಿಯ ಅರುಣ್ ಎಂಬಾತ ಗೆಳೆಯರ ಜೊತೆ ಸೇರಿಕೊಂಡು ಕಾಲ್ ಸೆಂಟರ್ ಸ್ಥಾಪಿಸಿ ಗಿಗೋಲೋ ಪ್ಲೇ ಬಾಯ್ ಸರ್ವೀಸಸ್ ಹೆಸರಿನ ಆಪ್ ಆರಂಭಿಸಿ ಅದಕ್ಕೆ ಭೇಟಿ ಕೊಡುವ ಗಂಡಸರಿಗೆ ಕಾಲ್ ಸೆಂಟರ್ ನ ಹುಡುಗಿಯರಿಂದ ಫೋನ್ ಮಾಡಿಸಿ ಗಂಡಸರನ್ನು ಪ್ರೇಮದ/ಕಾಮದ ಬಲೆಗೆ ಬೀಳಿಸಿ ಅವರಿಂದ ತನ್ನ ಬ್ಯಾಂಕ್ ಅಕೌಂಟ್‌ಗಳಿಗೆ ೩೦ ಲಕ್ಷ ರು. ಗಳನ್ನು ವರ್ಗಾಯಿಸಿಕೊಂಡ ಘಟನೆ ನಡೆದಿದೆ.
ಇದೇ ಮೋಸಜಾಲಕ್ಕೆ ಸಿಲುಕಿದ ಹೈದರಾಬಾದಿನ ವ್ಯಕ್ತಿಯೋರ್ವ ಸುಮಾರು 1.53 ಕೋಟಿ ರು. ಕಳೆದುಕೊಂಡಿದ್ದಾನೆ.
ಅಕ್ಟೋಬರ್ ತಿಂಗಳಲ್ಲಿ ತೆಲಂಗಾಣದ ಸೈಬರ್ ಕ್ರೈಂ ಪೊಲೀಸರು ಅರುಣ್‌ನನ್ನು ಬಂಧಿಸಿದ್ದಾರೆ. ಗುರುಗ್ರಾಮದ 27 ವರ್ಷ ವಯಸ್ಸಿನ ಉದ್ಯಮಿಯೂ ಇದೇ ಪ್ರೇಮದಾಟದ ಮೋಸಕ್ಕೆ ಸಿಲುಕಿ 65 ಲಕ್ಷ ರು ಕಳೆದುಕೊಂಡಿದ್ದಾನೆ. ಇಂತಹ ಮೋಸದ ಜಾಲಗಳಲ್ಲಿ ಹುಡುಗರನ್ನು ಅಥವಾ ಹುಡುಗಿಯರನ್ನು ಪ್ರೀತಿಸುವಂತೆ ನಾಟಕ ಮಾಡುವ ವಂಚಕರು ನಯ ಮಾತುಗಳಿಂದ ಮನವೊಲಿಸಿ ಸಂತ್ರಸ್ತರಿಂದ ಲಕ್ಷಾಂತರ ಕೊಳ್ಳೆ ಹೊಡೆಯುತ್ತಾರೆ.
ಮೋಸಕ್ಕೆ ಬಲಿಬೀಳುವ ಸಂತ್ರಸ್ತರನ್ನು ಮೊಬೈಲ್ ಕ್ಯಾಮರಾದ ಮುಂದೆ ನಿಂತು ನಗ್ನರಾಗುವಂತೆ ಪ್ರೇರೇಪಿಸಿ ಅವರ ನಗ್ನ ಫೊಟೋ ಹಾಗೂ ವೀಡಿಯೋಗಳನ್ನು ಚಿತ್ರೀಕರಿಸಿ ಅವುಗಳನ್ನಿಟ್ಟುಕೊಂಡು ಬ್ಲ್ಯಾಕ್‌ಮೈಲ್ ಮಾಡಿ ಹಣ ವಸೂಲಿ ಮಾಡಿದ ಘಟನೆಗಳೂ ಪತ್ರಿಕೆಗಳಲ್ಲಿ ಆಗಾಗ ಪ್ರಕಟವಾಗುತ್ತವೆ. ಡೇಟಿಂಗ್ ಆಪ್‌ಗಳಿಗೆ ಬಲಿಬಿದ್ದು ಎಷ್ಟೋ ಮಂದಿ ಗಂಡ ಹೆಂಡಿರ ನಡುವೆ ವಿಚ್ಛೇದನ ಗಳು ನಡೆದಿವೆ.
ಫೇಸ್ ಬುಕ್, ಇನ್ಸ್ಟಾಗ್ರಾಂ, ಮೆಸೆಂಜರ್ ಗಳಲ್ಲಿ ಲವ್ ಟ್ರಾಪಿಗೆ ಬಿದ್ದು ಜೀವನ ಹಾಳುಮಾಡಿಕೊಂಡವರೆಷ್ಟೋ. ಈ ಸಾಮಾಜಿಕ
ಮಾಧ್ಯಮಗಳಲ್ಲಿ ವಿವಾಹಿತರು ಅವಿವಾಹಿತರಂತೆ ನಟಿಸಿ ಮುಗ್ಧರನ್ನು ಪ್ರೇಮದ ಬಲೆಗೆ ಬೀಳಿಸಿ ಜನರನ್ನು ವಂಚಿಸುತ್ತಾರೆ. ಲೈಂಗಿಕ ದೌರ್ಜನ್ಯವನ್ನೂ ಮಾಡುತ್ತಾರೆ. ಸಾಮಾಜಿಕ ಜಾಲ ತಾಣದ ಮೂಲಕ ಪರಿಚಿತನಾದ ಅಫ್ತಾಬ್‌ನ ಪೂರ್ವಾಪರ ಹಾಗೂ ಸ್ವಭಾವ ಗೊತ್ತಿಲ್ಲದೇ ಇದ್ದರೂ ಶ್ರದ್ಧಾ ಆತನನ್ನು ನಂಬಿ ಆತನ ಜೊತೆಗೆ ತೆರಳಿ ಕೊನೆಗೆ ದಾರುಣವಾಗಿ ಸಾವಿಗೀಡಾದುದು ಡೇಟಿಂಗ್ ಆಪ್‌ಗಳ ದುಷ್ಪರಿಣಾಮಗಳಿಗೆ ಜ್ವಲಂತ ಉದಾಹರಣೆ.
ಇತ್ತೀಚೆಗೆ ಜನರನ್ನು ಸಾಲದ ಬಲೆಗೆ ಕೆಡವಿ ಎಷ್ಟೋ ಪಟ್ಟು ಹೆಚ್ಚು ಹಣವನ್ನು ವಸೂಲಿ ಮಾಡುವ ಕೆಲಸವನ್ನು ಲೋನ್ ಆಪ್‌ಗಳು ಮಾಡುತ್ತಿವೆ. ಇಂದು ನೂರಾರು ಲೋನ್ ಆಪ್‌ಗಳು ಕಾಣಸಿಗುತ್ತವೆ. ಏನೋ ತುರ್ತಿನ ಸಂದರ್ಭದಲ್ಲಿ ಸುಲಭವಾಗಿ ಸಿಗುತ್ತದೆ ಎಂದು ಜನರು ಈ ಆಪ್‌ಗಳಿಂದ ಸಾಲ ಪಡೆಯುತ್ತಾರೆ. ಆದರೆ ಬಹುತೇಕ ಲೋನ್ ಆಪ್‌ಗಳು ಹಣ ಮಾಡುವ ದಂಧೆ ಗಳಾಗಿವೆ. ಇವುಗಳು ವಿಪರೀತವೆನಿಸುವಷ್ಟು ಬಡ್ಡಿ ವಿಧಿಸುತ್ತವೆ. ಬಡ್ಡಿ ದರಗಳು ಹೇಗಿರುತ್ತವೆಯೆಂದರೆ ಸಾಲವನ್ನು ಮುಗಿಸಲು ಅಸಾಧ್ಯವೇನೋ ಅನ್ನುವಷ್ಟು!
ಈ ಆಪ್‌ಗಳನ್ನು ಮೊಬೈಲ್ ಗಳಿಗೆ ಇನ್ಸ್ಟಾಲ್ ಮಾಡುವಾಗಲೇ ಅವುಗಳು ಎಲ್ಲ ಕಾಂಟ್ಯಾಕ್ಟ್ ನಂಬರ್‌ಗಳು, ಫೋಟೋ ಹಾಗೂ ವಿಡಿಯೋ ಗಳ ಮೇಲೆ ನಿಯಂತ್ರಣ ಸಾಧಿಸಿ ಸಂಪೂರ್ಣ ಮಾಹಿತಿ ಗಳನ್ನು ಕೈವಶ ಮಾಡಿಕೊಳ್ಳುತ್ತವೆ. ನಂತರ ಶುರು ಕಿರಿಕಿರಿ.
ಸಾಲದ ಕಂತು ಮುಗಿದರೂ ಹಣ ವಸೂಲಿಯ ಕರೆಗಳು ನಿಲ್ಲುವುದೇ ಇಲ್ಲ. ಮೊಬೈಲ್ ಫೋನ್ ನಲ್ಲಿರುವ ಇತರ ವ್ಯಕ್ತಿಗಳ ಕಾಂಟ್ಯಾಕ್ಟ್ ನಂಬರ್‌ಗಳು ಆಪ್ ನಡೆಸುವವರಿಗೆ ಸಿಕ್ಕಿರುವುದರಿಂದ ಕಾಲ್ ಸೆಂಟರ್ ಗಳಿಂದ ನಿರಂತರವಾಗಿ ಕರೆಗಳು ಅವರಿಗೆ ಹೋಗುತ್ತಲೇ ಇರುತ್ತದೆ.
ಸಂಬಂಧಿಕರು, ಗೆಳೆಯರು, ಸಹೋದ್ಯೋಗಿಗಳು ಇವರೆಲ್ಲರಿಗೂ ಕಾಲ್ ಸೆಂಟರ್‌ಗಳ ವ್ಯಕ್ತಿಗಳು ಫೋನ್ ಮಾಡಿ ಸಾಲ ತೆಗೆದು ಕೊಂಡ ವ್ಯಕ್ತಿ ಸಾಲ ವಂಚನೆ ಮಾಡುತ್ತಿದ್ದಾನೆ ಎಂದು ಹೇಳುತ್ತಿರುತ್ತಾರೆ. ಇದರಿಂದಾಗಿ ಆಪ್ ಲೋನ್ ಪಡೆದವನು ತನ್ನ
ಗೆಳೆಯರು, ಸಹೋದ್ಯೋಗಿಗಳು ಹಾಗೂ ಸಂಬಂಧಿಕರ ನಡುವೆ ತಲೆ ಎತ್ತಲಾರದ ಪರಿಸ್ಥಿತಿ ಬಂದೊದಗುತ್ತದೆ. ಸಾಲ ತೆಗೆದು ಕೊಂಡ ವ್ಯಕ್ತಿಯನ್ನು ಫೋನ್ ನಲ್ಲಿ ಹೀನಾಯವಾಗಿ ನಿಂದಿಸಲಾಗುತ್ತದೆ. ಬೆದರಿಕೆಯ ಕರೆಗಳೂ ಬರುತ್ತವೆ.
ಲೋನ್ ಆಪ್‌ನಿಂದ ಸಾಲ ಪಡೆದಿದ್ದ ಚೆನ್ನೈ ನಗರದ ಟೆಕ್ಕಿ, 23 ವರ್ಷ ವಯಸ್ಸಿನ ಶಿವಕುಮಾರ್ ಆಪ್ ಕಂಪೆನಿಯ ದೌರ್ಜನ್ಯಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳೆದ ತಿಂಗಳು ನಡೆದಿದೆ. ತಿಂಗಳ ಸಾಲ ಮರುಪಾವತಿಯ ಕಂತಾದ 4500 ರುಪಾಯಿ ಗಳನ್ನು ಶಿವ ಕುಮಾರ್ ಪಾವತಿ ಮಾಡಿದ್ದರೂ ಲೋನ್ ಆಪ್ ಕಂಪನಿಯವರು ಆತ ವೇಶ್ಯಾವಾಟಿಕೆಯ ದಲಾಲಿ ಹಾಗೂ ಡ್ರಗ್ ಡೀಲರ್ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುವುದಾಗಿ ಹಾಗೂ ಫೋಟೋಶಾಪ್ ಮೂಲಕ ರಚಿಸಲ್ಪಟ್ಟ ಆತನ ನಗ್ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುವುದಾಗಿ ಬೆದರಿಕೆ ಹಾಕಿದ ಕಾರಣ ಹೆದರಿದ ಆತ ಆತ್ಮಹತ್ಯೆಗೆ ಶರಣಾದನು.
ಇದೇ ರೀತಿ ಸೆಪ್ಟೆಂಬರ್ ತಿಂಗಳಲ್ಲೂ 17 ಲೋನ್ ಆಪ್ ಗಳಿಂದ ಒಟ್ಟು 50000 ರು.ಗಳ ಸಾಲ ಪಡೆದಿದ್ದ ಆಂಧ್ರ ಪ್ರದೇಶದ ದಂಪತಿ ಕೊಲ್ಲಿ ದುರ್ಗಾರಾವ್ ಹಾಗೂ ಆತನ ಪತ್ನಿ ಲಕ್ಷ್ಮೀ ಆಪ್ ಕಂಪೆನಿ ಏಜೆಂಟ್‌ಗಳ ಕಿರುಕುಳ ಹಾಗೂ ಬೆದರಿಕೆಗೆ ಬೇಸತ್ತು
ಆತ್ಮಹತ್ಯೆ ಮಾಡಿಕೊಡಿದ್ದಾರೆ. ಬೆಂಗಳೂರಿನ ಬ್ಯಾಂಕ್ ಉದ್ಯೋಗಿ ೫೫ ವಯಸ್ಸಿನ ನಂದಕುಮಾರ್ ಕೂಡಾ ಸಾಲದ ಆಪ್‌ಗಳ ಏಜೆಂಟರುಗಳ ಕಿರುಕುಳಕ್ಕೆ ಬೆದರಿ ಕೆಂಗೇರಿಯಲ್ಲಿ ರೈಲ್ವೇ ಹಳಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಹುತೇಕ ಲೋನ್ ಆಪ್‌ಗಳು ಚೀನಾ ಮೂಲದವುಗಳಾಗಿವೆ. ಕೇಂದ್ರ ಸರಕಾರ ಇದೀಗ ಈ ಎಲ್ಲಾ ಅನಧಿಕೃತ ಲೋನ್ ಆಪ್ ಗಳನ್ನು ನಿಷೇಧಿಸಿದೆ. ಭಾರತ ಸರಕಾರದ ಕಟ್ಟುನಿಟ್ಟಿನ ಕ್ರಮದ ಫಲವಾಗಿ ಗೂಗಲ್ ಸಂಸ್ಥೆಯು ೨೦೦೦ ಅನಧಿಕೃತ ಲೋನ್ ಆಪ್‌ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದುಹಾಕಿದೆ. ಜಾರಿ ನಿರ್ದೇಶನಾಲಯ (ಇ.ಡಿ) ಚೀನಾದ ಲೋನ್ ಆಪ್‌ಗಳ ಮೇಲೆ ಕ್ರಮ ಕೈಗೊಂಡಿದ್ದು ೪೬.೬೭ ಕೋಟಿ ರು.ಗಳಷ್ಟು ಹಣದ ಚಾಲನೆಯನ್ನು ತಡೆ ಹಿಡಿದಿದೆ.
ಆದರೂ ಪ್ರತೀ ದಿನ ಅಣಬೆಗಳಂತೆ ಹುಟ್ಟಿಕೊಳ್ಳುವ ಲೋನ್ ಆಪ್‌ಗಳಿಗೆ ಬಲಿಬೀಳುವ ಮಂದಿಗೆ ಕೊರತೆಯಿಲ್ಲ. ಇತ್ತೀಚೆಗೆ ಫ್ಯಾಂಟಸಿ ಸ್ಪೋರ್ಟ್ಸ್ ಆಪ್‌ಗಳಿಗೆ ದಾಸರ ಸಂಖ್ಯೆ ಭಾರತದಲ್ಲಿ ಹೆಚ್ಚಿದೆ. ಕ್ರಿಕೆಟ್, ಹಾಕಿ, ಫುಟ್ಬಾಲ್ ನಂತಹ ಕಾಲ್ಪನಿಕ ಕ್ರೀಡಾ ತಂಡಗಳನ್ನು ರಚಿಸಿ ಅವುಗಳ ಮೇಲೆ ಹೂಡಿಕೆ ಮಾಡಿ ಹಣಗಳಿಸುವ ಗೀಳಿಗೆ ಬಿದ್ದವರ ಸಂಖ್ಯೆ ಬಹು ದೊಡ್ಡದು. ಭಾರತದಲ್ಲಿ ಫ್ಯಾಂಟಸಿ ಸ್ಪೋಟ್ ಮಾರುಕಟ್ಟೆ ಅತೀ ವೇಗವಾಗಿ ಬೆಳೆಯುತ್ತಿದ್ದು ಪ್ರಸ್ತುತ 13 ಕೋಟಿ ಭಾರತೀಯರು ಈ ಆಪ್‌ಗಳ ಚಂದಾದಾರ ರಾಗಿದ್ದಾರೆ.
ಈ ಆನ್‌ಲೈನ್ ಗ್ಯಾಂಬ್ಲಿಂಗ್‌ನ ಚಟ ಹತ್ತಿಸಿಕೊಂಡವರು ಸಾವಿರದಿಂದ ಲಕ್ಷ ರು ವರೆಗೆ ಹಣ ಕಳೆದುಕೊಳ್ಳುತ್ತಾರೆ. ಲಾಭವಾದರೆ ಇನ್ನೊಮ್ಮೆ ಬೆಟ್ಟಿಂಗ್ ಮಾಡುವಂತೆ ಹಾಗೂ ನಷ್ಟವಾದರೆ ಆದ ನಷ್ಟವನ್ನು ಭರಿಸಲು ಮಗದೊಮ್ಮೆ ಬೆಟ್ಟಿಂಗ್ ಮಾಡುವಂತೆ ಪ್ರೇರೇಪಿಸುವ ಈ ಫ್ಯಾಂಟಸಿ ಸ್ಪೋರ್ಟ್ಸ್ ಆಪ್‌ಗಳ ಬಗ್ಗೆ ಜನರು ಜಾಗರೂಕರಾಗಬೇಕಾದ ಅವಶ್ಯಕತೆ ಇದೆ.
ದುಪ್ಪಟ್ಟು ಹಣಗಳಿಸುವ ಆಮಿಷಗಳಿಗೆ ಮರುಳಾಗಿ ಲಕ್ಷಾಂತರ ರು.ಗಳನ್ನು ಕಳೆದುಕೊಂಡ ಸಾವಿರಾರು ಪ್ರಕರಣಗಳು ಭಾರತ ದಲ್ಲಿ ನಡೆಯುತ್ತಲೇ ಇರುತ್ತವೆ. ಯಾವುದೋ ಠೇವಣಿ ಮೊತ್ತ ಲಭಿಸುವುದೆಂದು ಹೇಳಿ ಬ್ಯಾಂಕ್ ಅಕೌಂಟ್ ಮಾಹಿತಿ, ಎಟಿಎಂ ಪಿನ್, ಒಟಿಪಿ ಗಳನ್ನು ಕೇಳಿ ಬರುವ ಫೋನ್ ಕರೆಗಳಿಗೆ ಸ್ಪಂದಿಸುವ ಮಂದಿಯ ಬ್ಯಾಂಕ್ ಅಕೌಂಟ್‌ಗಳಿಂದ ಹಣವು ಕ್ಷಣಾರ್ಧ ದಲ್ಲಿ ಮಂಗಮಾಯವಾಗುತ್ತದೆ.
ಸರಕಾರ ಹಾಗೂ ಬ್ಯಾಂಕ್ ಗಳು ಸಾರ್ವಜನಿಕರಿಗೆ ಸದಾ ಎಚ್ಚರಿಕೆ ಕೊಡುತ್ತಲೇ ಇದ್ದರೂ ಕ್ಷಣ ಮಾತ್ರದ ಆಸೆಗೆ ಬಲಿಬಿದ್ದು ಲಕ್ಷ, ಕೋಟಿ ರು ಕಳೆದುಕೊಳ್ಳುತ್ತಿರುವವರ ಸಂಖ್ಯೆಗೇನೂ ಕೊರತೆಯಿಲ್ಲ. ಆನ್‌ಲೈನ್ ಮೋಸಕ್ಕೆ ಭಾರತೀಯರು ಪ್ರತೀ ದಿನ 100
ಕೋಟಿಯಷ್ಟು ಹಣ ಕಳೆದುಕೊಳ್ಳುತ್ತಿದ್ದಾರೆ ಎಂದು ಆರ್ ಬಿಐ ಅಂಕಿಅಂಶಗಳು ಹೇಳುತ್ತವೆ. ಅಂತರ್ಜಾಲ ತಾಣಗಳಿಂದ ಬಹಳಷ್ಟು ಒಳಿತುಗಳು ಇವೆ. ಇಂದಿನ ಸ್ಮಾರ್ಟ್ ಯುಗದಲ್ಲಿ ಅವುಗಳಿಲ್ಲದೆ ಜೀವಿಸುವುದು ಕಷ್ಟವೇ. ಆದರೂ ಜನರು ಈ ಬಗ್ಗೆ ಎಚ್ಚರವಿರಬೇಕಾದ್ದು ಅಗತ್ಯ. ಡೇಟಿಂಗ್ ಆಪ್‌ಗಳ ದುಷ್ಪರಿಣಾಮ, ಅಲ್ಲಿ ನಡೆಯುವ ಮೋಸಗಳ ಬಗ್ಗೆ ಜನರಲ್ಲಿ ಅರಿವು ಮೂಡಿ ಸುವ ಕೆಲಸ ಆಗಬೇಕಾಗಿದೆ.
ಲೋನ್ ಆಪ್‌ಗಳ ತಂಟೆಗೆ ಹೋಗದಿರುವುದೇ ಲೇಸು. ಫ್ಯಾಂಟಸಿ ಸ್ಪೋರ್ಟ್ಸ್ ಆಪ್‌ಗಳ ಚಟದ ಕೆಟ್ಟ ಪರಿಣಾಮಗಳ ಬಗ್ಗೆ ಜಾಗೃತಿ
ಮೂಡಿಸಬೇಕು. ಇಲ್ಲವಾದರೆ ಶ್ರದ್ಧಾಳಂತಹ ಹುಡುಗಿಯರು ಅಫ್ತಾಬ್‌ನಂಥವರ ಕೈಯಲ್ಲಿ ಸಿಲುಕಿ ಸಾಯುವ ಪ್ರಕರಣಗಳು ಹೆಚ್ಚಾಗಬಹುದು, ಲೋನ್ ಆಪ್‌ಗಳ ದೌರ್ಜನ್ಯಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗದು.