Wednesday, 9th October 2024

ಶ್ರಾವಣ ಮಾಸವಲ್ಲವಿದು… ಶ್ರವಣ ಮಾಸ

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ಕರೋನಾ ಇಳಿಮುಖವಾಗುತ್ತಿದ್ದಂತೆಯೇ ಶ್ರಾವಣ ಮಾಸ ಬಂದಿದ್ದು ನಿಜಕ್ಕೂ ಹರ್ಷ ತಂದಿದೆ. ‘ಶ್ರಾವಣ ಮಾಸ ಬಂದಾಗ, ಆನಂದ ತಂದಾಗ, ವಿರಹ ಗೀತೆ ಇನ್ನಿಲ್ಲ, ಪ್ರಣಯ ಗೀತೆ ಬಾಳೆಲ್ಲ’ ಎಂಬ ಹಾಡು ಸಿನಿಮಾದ್ದು, ಆದರೆ ಶ್ರಾವಣ ಮಾಸ ಹಬ್ಬಗಳನ್ನು ಕರೆತರುವ ದೇವರು, ಶ್ರಾವಣದಲ್ಲಿ ಎಲ್ಲ ಮೂಲೆ ಸೇರಿದ್ದ
ದೇವರುಗಳು ಮೈ ಮೇಲೆ ದೇವರು ಬಂದಂತೆ ಹೊರಬರುತ್ತವೆ.

ಅದರಲ್ಲೂ ಕರೋನಾದಲ್ಲಿ ಯಾವ ದೇವರೂ ಕೈ ಹಿಡಿಯಲಿಲ್ಲ, ಕಣ್ಮುಂದೆಯೇ ಸಜ್ಜನರು, ಸ್ನೇಹಿತರು, ಬಂಧು ಗಳು, ಹರೆಯದ ಮಕ್ಕಳು ಕಣ್ಮರೆಯಾಗಿ ಹೋಗಿ ಬಿಟ್ಟರು. ಕರೋನಾ ಭೀಕರ ರೂಪ ತಾಳಿದ್ದ ದಿನಗಳಲ್ಲಿ ಈ ಒಂದು ಸಂದೇಶ ವಾಟ್ಸಪ್‌ಗಳಲ್ಲಿ ಹರಿದಾಡುತ್ತಿತ್ತು. ತಮಾಷೆಯಾಗಿದ್ದರೂ ಅದ್ಭುತ ಸತ್ಯವನ್ನು ಅದು ಹೇಳು ತ್ತಿತ್ತು. ಅದೆಂದರೆ, ಕರೋನಾ ದೇವರಿಗೆ ಹೇಳಿತಂತೆ, ‘ನೋಡಿದೆಯಾ ನನ್ನ ಶಕ್ತಿಯನ್ನು? ದೇವಸ್ಥಾನಗಳ ಬಾಗಿಲನ್ನೇ ಮುಚ್ಚಿಸಿಬಿಟ್ಟೆ, ಹೇಗಿದೆ ನನ್ನ ಪರಾಕ್ರಮ?, ಅದಕ್ಕೆ ದೇವರು ಕೊಟ್ಟ ಉತ್ತರ, ‘ಹೌದು ಹೌದು.. ದೇವಸ್ಥಾನಗಳನ್ನು ಮುಚ್ಚಿಸಿಬಿಟ್ಟೆ ನಿಜವೇ, ಆದರೆ ಪ್ರತಿ ಮನೆಯನ್ನೂ ನನ್ನ ದೇವಸ್ಥಾನ ದಂತೆಯೇ ಮಾಡಿ ಬಿಟ್ಟೆ’ ಎಂಬ ಉತ್ತರ ಅದ್ಭುತ ಸಂದೇಶ ಅಲ್ಲವೇ? ಕೆಟ್ಟವರು ಎಷ್ಟೇ ಪ್ರಬಲವಾಗಿ ಹೆಮ್ಮರವಾಗಿರಲಿ ಅವರು ಒಂಟಿಯೇ.

ಆದರೆ, ಒಂದೇ ಒಂದು ಸಣ್ಣ ಸಣ್ಣ ಸಸಿಗಳು ಅಂಗಳದ ತುಂಬಾ ಬೆಳೆದು ನಿಲ್ಲುವ ಪರಿಯಿದೆಯಲ್ಲಾ ಅದು ಜಗತ್ತಿನ ಸೋಜಿಗ. ಅಧರ್ಮ, ಕ್ರೌರ್ಯ, ಅನ್ಯಾಯ, ಗೂಂಡಾಗಿರಿ, ಭ್ರಷ್ಟತೆ ಅದೆಷ್ಟೇ ಹೆಮ್ಮರವಾಗಿ ಬೆಳೆ ದಿರಲಿ, ಒಂದು ಚಂಡಮಾರುತಕ್ಕೆ, ಒಂದು ಸಿಡಿಲಿಗೆ ಉರಿದು ನೆಲಕ್ಕುರುಳುತ್ತದೆ. ಅದೇ ಸಸಿಗಳು ಬಾಗಿ ಉಳಿದು ಬಿಡುತ್ತವೆ. ನಮ್ಮಲ್ಲಿ ಸರಳತೆ, ಅಚಲತೆ, ಶುದ್ಧತೆ, ಪ್ರಾಮಾಣಿಕತೆ ಇರಬೇಕಷ್ಟೆ. ದೇವರೊಂದಿಗೆ ವ್ಯವಹಾರ ಬೇಡ ಎನ್ನುತ್ತವೆ ಶಾಸ್ತ್ರ, ಪುರಾಣಗಳು. ಈ ಶ್ರಾವಣ ಮಾಸ ಒಂದು ರೀತಿಯಲ್ಲಿ ಕೆಲವರಿಗೆ ವ್ಯವಹಾರಿಕ. ದೈವಭಕ್ತಿ, ದೈವಪ್ರೇಮ. ಉಪವಾಸ, ಬೇಗ ಏಳುವುದು, ನಿತ್ಯ ಸ್ನಾನ, ಒಪ್ಪತ್ತು ಊಟ ಇಲ್ಲವೆ ಬರಿ ದ್ರವಹಾರ, ಕಂಡ ಕಲ್ಲುಗಳಿಂದ ಹಿಡಿದು, ಕೈಲಾಸಪತಿಯವರೆಗೂ ನಮಸ್ಕಾರ.

ಮಾಂಸ,  ಮದ್ಯ, ಮಾನಿನಿಗಳಿಂದ ದೈಹಿಕವಾಗಿ ದೂರ. ಆದರೆ ಮನಸ್ಸಿನಲ್ಲಿ? ‘ಒಂದು ತಿಂಗಳ ಈ ಶ್ರಾವಣ ಕಳೆಯಲಿ ಕಾದಿರು’ ಎಂದು ಅವುಗಳಿಗೆಲ್ಲ ಎಚ್ಚರಿಕೆ ಕೊಡುವುದು ನಡೆದೇ ಇರುತ್ತದೆ ಅಲ್ಲವೇ? ಶಾಸ್ತ್ರ, ಪುರಾಣಗಳು ಇದನ್ನೇ ಹೇಳುತ್ತವೆ. ‘ನಿಷ್ಕಾಮ ಹಾಗೂ ನಿರ್ಮತ್ಸರತೆಯಿಂದ ಕಾಯಾ, ವಾಚಾ, ಮನಸಾ
ಶುದ್ಧವಾಗಿ ಯಾರು ಧರ್ಮಗ್ರಂಥಗಳನ್ನು ಓದುತ್ತಾನೋ, ಕೇಳುತ್ತಾನೋ ಅವನ ಹೃದಯಲ್ಲಿ ಪರಮಾತ್ಮನು ತಾನೇ ಸ್ವ-ಇಚ್ಛೆಯಿಂದ ಬಂಧಿತನಾಗುತ್ತಾನೆ’ ನಾವು ದೇವರ ಭಕ್ತಿ ಮಾಡಬೇಕು, ಆದರೆ ಆ ಭಕ್ತಿಗೆ ಫಲ ಪರಮಾತ್ಮನೇ ಇರಬೇಕೆ ಹೊರತು, ತುಚ್ಛವಾದ ಸಾಂಸಾರಿಕ ವಿಷಯದ ಬೇಡಿಕೆಗಳಲ್ಲ, ಅದಕ್ಕೆ ಶ್ರೀ ವಾದಿರಾಜ ಯತಿಗಳು ಹೇಳುವ ಈ ಮಾತು ‘ದಿಲ್ಲಿ ರಾಜನನ್ನು ಕಂಡು ಹುಲ್ಲುಕಡ್ಡಿ ಕೇಳಿದಂತಾಗಬಾರದು, ಕೇಳಬಾರದು’ ಎನ್ನುತ್ತಾರೆ.

ನಾವು ದೇವರಲ್ಲಿ ಕಾಮ್ಯ ವಸ್ತುಗಳನ್ನು ಬೇಡಿದರೆ, ನಮಗೆ ಅವನಲ್ಲಿ ಪ್ರೇಮ ಕಡಿಮೆಯಾಗುತ್ತಾ ಬರುತ್ತದೆ. ನಿಜವಾದ ಪ್ರೇಮದ ಭಕ್ತಿಯಲ್ಲಿ ಬೇಡಿಕೆಯೂ ಇರುವು ದಿಲ್ಲ. ಅಲ್ಲಿ ನೀಡಿಕೆ ಮಾತ್ರ. ಬೇಡಿಕೆ ಹೆಚ್ಚಿದಂತೆ ನಿಜವಾದ ಪ್ರೇಮ ಅಲ್ಲಿಂದ ಕಾಲು ಕೀಳುತ್ತದೆ. ಭಕ್ತನ ಬೇಡಿಕೆಯನ್ನು ನಿಮ್ಮ ಹರಕೆಯನ್ನು ಪರಮಾತ್ಮನು ಖಂಡಿತ ತೀರಿಸುತ್ತಾನೆ. ಆದರೆ ತಾನು ಮಾತ್ರ ಅವನ ಕೈಯಿಂದ ಜಾರುತ್ತಾನೆ. ಭಕ್ತಿಯೆಂದರೆ ಪರಮಾತ್ಮನಲ್ಲಿಡುವ ಸುದೃಢ ಸ್ನೇಹ. ನಾವು ದೇವರಲ್ಲಿ ಬರೀ ಬೇಡುವುದರಿಂದ ಸ್ನೇಹ, ಗೌರವಕ್ಕೆ ಹಾನಿಯಾಗುತ್ತದೆ. ನಿಷ್ಕಾಮ ಭಕ್ತಿಯೇ ಭಾಗವತರ ಪರಮಧರ್ಮ.

ಆತ್ಮೀಯ ಸ್ನೇಹಿತನನ್ನು ಸದಾ ಸಾಲ ಕೇಳುತ್ತಿದ್ದರೆ, ಪ್ರತಿಯೊಂದಕ್ಕೂ ಅವನನ್ನೇ ಅವಲಂಬಿಸಿದ್ದರೆ ಅವನು ಬೇಸರಿಸಿಕೊಳ್ಳುವುದಿಲ್ಲವೇ? ದೇವರನ್ನು ಸ್ನೇಹಿತ ನೆಂದು ತಿಳಿದರೆ, ಆತ ಸದಾ ನಿಮ್ಮ ಬೆಂಗಾವಲಿಗೆ ಇರುತ್ತಾನೆ. ಆತನನ್ನು ಹಣ ಕೊಡುವ ಎಟಿಎಂ ಮಷಿನ್ ಮಾಡಿಕೊಳ್ಳಬಾರದು. ನೀವು ಕೇಳದಿದ್ದರೂ ಹೇಗೆ ನಿಜ ಸ್ನೇಹಿತ ತನಗೆ ಬೇಕಾದ್ದನ್ನು ನಿಮಗೂ ಕೊಡುತ್ತಾನೆಯೋ, ಹಾಗೆ ಇದು. ಯಾವುದನ್ನಾದರೂ, ಯಾರನ್ನಾದರೂ ಕೇಳುವುದಿದ್ದರೆ ‘ನಿರ್ಮತ್ಸರಾಗಿ ಕೇಳ ಬೇಕು. ನಿರ್ಮತ್ಸರರು, ಸಾಧುಗಳು ಎಂದರೆ ಯಾರು ಎಂಬ ಪ್ರಶ್ನೆಗೆ ಶ್ರೀ ವೇದವ್ಯಾಸರು ಸುಂದರವಾದ ಈ ಶ್ಲೋಕದಲ್ಲಿ ಹೇಳಿದ್ದಾರೆ.

ತಿತಿಕ್ಷವಃ ಕಾರುಣಿಕಾಃ ಸುಹೃದಃ ಸರ್ವದೇಹಿನಾಮ್ |
ಅಜಾತ ಶತ್ರವಃ ಶಾಂತಾಃ ಸಾಧವಃ ಸಾಧುಭೂಷಣಾ |
ಮಯ್ಯ ನನ್ಯೇನ ಭಾವೇನ ಭಕ್ತಿಂ ಕುರ್ವಂತಿ ಯೇ ದೃಢಾಮ್ ||

(ಅರ್ಥ: ಸುಖ ದುಃಖಾದಿ ದ್ವಂದ್ವ ಸಹಿಷ್ಣುಗಳು, ಕರುಣೆ ಉಳ್ಳವರು ಸಕಲ ಯೋಗ್ಯ ಜೀವನ ಸ್ನೇಹಿತರು, ಶತ್ರು ರಹಿತರು, ಪರಮಾತ್ಮನಲ್ಲಿ ನಿಷ್ಠೆ ಉಳ್ಳವರು, ವಿಶೇಷವಾಗಿ ಪರಮಾತ್ಮನಲ್ಲಿ ಅನನ್ಯ ಭಕ್ತಿ ಮಾಡುವವರು ಇವರೇ ಶ್ರೇಷ್ಠ ಸಾಧುಗಳು. ಇವರೇ ನಿರ್ಮತ್ಸರರು) ಎಂದಿದ್ದಾರೆ. ಇನ್ನು ಕಿತವರು ಎಂಬ ಶಬ್ದವೊಂದು ಭಾಗವತದಲ್ಲಿ ಬರುತ್ತದೆ. ಕೈತವರಾಹಿತ್ಯರೇ ಶ್ರೀ ಮದ್ಭಾಗವತ ಶ್ರವಣಕ್ಕೆ ಅರ್ಹರು ಎನ್ನುತ್ತಾರೆ. ಕಿತವ ಎಂದರೆ ಮೋಸವೆಂದು ಅರ್ಥ. ಬಾಯಿ ಯಲ್ಲೊಂದು, ಮನಸ್ಸಿನಲ್ಲೊಂದು ಹೀಗೆ ಎರಡೆರೆಡು ಮಾತುಗಳುಳ್ಳವರು ಎಂಬ ಅರ್ಥ. ಅಂದರೆ ಮನಸ್ಸಿನಲ್ಲಿ ಸ್ವರ್ಗ ಭೋಗಾಪೇಕ್ಷೆ ಇದ್ದು, ಬಾಯಲ್ಲಿ ಮಾತ್ರ ತಾನು ಸರ್ವ ಸಂಗ ಪರಿತ್ಯಾಗಿಗಳಂತೆ ಬಿಂಬಿಸುವವರು, ನಾನು ಕೇವಲ ಭಗವತ್ ಪ್ರೀತಿಗೆ ಈ ಕೆಲಸ ಮಾಡುತ್ತಿರುವೆ, ಇದು ನಿಮಗೆ ನನ್ನ ಸೇವೆ ಸಮಾಜಕ್ಕೆ, ನಾನು ಕೇವಲ ಮೋಕ್ಷಾಪೇಕ್ಷಿ.

‘ಅಲ್ಲಿದೆ ನನ್ನ ಮನೆ, ಇಲ್ಲಿರುವೆ ನಿಮಗಾಗಿ ಸುಮ್ಮನೆ’ ಎಂದು ಪ್ರವಚನ ನೀಡಿ ಕೋಟಿ ಕೋಟಿ ಬೆಲೆಬಾಳುವ ಆಶ್ರಮಗಳನ್ನು ಜಗತ್ತಿನ ಎಲ್ಲ ಪ್ರಮುಖ ನಗರಗಳಲ್ಲಿ ಕಟ್ಟಿಸುವವರು. ಈಗ ನಮ್ಮ ಸುತ್ತಮುತ್ತಲೆಲ್ಲ ಹೆಚ್ಚಿಗೆ ಇವರೇ ಇದ್ದಾರೆ. ಇವರನ್ನೇ ಕಿತವರು ಎನ್ನುತ್ತವೆ ಶಾಸ್ತ್ರಗಳು. ಒಮ್ಮೆ ಕಾಶಿ ಕ್ಷೇತ್ರಕ್ಕೆ ಒಬ್ಬ ಮಹಾ ಸಾಧು ಗಳು ಬಂದಿಳಿದರು. ಅವರನ್ನು ಮಹಾತ್ಮರು, ಅದ್ವಿತೀಯ ಪಂಡಿತರೆಂದು, ಕರ್ಣಾಕರ್ಣಿಯಾಗಿ ಎಲ್ಲೆಲ್ಲೂ ಪ್ರಚಾರವಾಯಿತು. ಈಗಿನಂತೆ ಆಗ ಟಿ.ವಿಗಳಿರದಿದ್ದರೂ ಕೆಟ್ಟವರು, ಡೋಂಗಿಗಳು ಬಹುಬೇಗ ಪ್ರಚಾರಕ್ಕೆ ಬರುತ್ತಾರೆ.

ಕಾಡ್ಗಿಚ್ಚು ಬೇಗ ಹತ್ತಿಕೊಂಡು ನೋಡು ನೋಡುವಷ್ಟರಲ್ಲಿ ವರ್ಷಾನುಗಟ್ಟಲೆ ಬೆಳೆದ ಗಿಡಮರಗಳನ್ನು ಬೂದಿ ಮಾಡುವುದಿಲ್ಲವೇ? ಪ್ರಕೃತಿ ನಿಯಮವೊ, ಭೂ ಭಾರ ಇಳಿಸುವಲ್ಲಿ ದೇವರ ತಂತ್ರವೋ ಇಂದಿಗೂ ಇದು ದೇವರಹಸ್ಯ. ಹೀಗೆ ಪ್ರಚಾರವಾದ ಆ ಮಹಾತ್ಮರನ್ನು ನೋಡಲು ನಮ್ಮ ಜನ ತಂಡೋಪತಂಡ ಅವರು ಇಳಿದುಕೊಂಡಲ್ಲಿಗೆ ಲಗ್ಗೆ ಇಟ್ಟರು. ಇದನ್ನು ಆಗ ಅಲ್ಲಿಯೇ ಇದ್ದ ಕಬೀರದಾಸರಿಗೆ ಯಾರೋ ಈ ವಿಷಯವನ್ನು ಹೇಳಿ ‘ನೀವು ಆ ಮಹಾತ್ಮರ ದರ್ಶನಕ್ಕೆ ಬರಬೇಕು’ ಎಂದು ಹೇಳಿ ಕರೆತಂದರು.

ನಿಜ ವಿರಾಗಿಗಳಾದ ತತ್ವಜ್ಞಾನಿ ಕಬೀರರಿಗೆ ಅವನ ವೇಷಭೂಷಣನ್ನು ನೋಡಿದ ತಕ್ಷಣ ಇವನೊಬ್ಬ ಕಪಟಿ. ಯೋಗಿ ಅಲ್ಲ, ಭೋಗಿ ಎಂದು ಗೊತ್ತಾಗಿ ಹೋಗಿ
ಗಟ್ಟಿಯಾಗಿಯೇ ಹೀಗೆ ಕೂಗಿಬಿಟ್ಟರು. ‘ಥಳಥಳಕೇನೂ ಪರವಾಗಿಲ್ಲ; ಒಳಗಿನ ಗುಟ್ಟು ದೇವರೇ ಬಲ್ಲ’ ಇದರಿಂದ ರೊಚ್ಚಿಗೆದ್ದ ಆ ಸಾಧು ಕೋಪದಿಂದ ಕಬೀರರನ್ನು ಕೆಟ್ಟ ಕೆಟ್ಟ ಬೈಗಳ ಸುರಿಮಳೆಗೈಯ್ಯಲಾರಂಭಿಸಿದನು. ಅದಕ್ಕೂ ನಗುನಗುತ್ತಾ ಕಬೀರರು ‘ಒಳಗಿನ ಗುಟ್ಟು ಹೊರಬಂತಲ್ಲಾ; ತಿಳಿಯೋದೇನೂ ಉಳಿದೇ ಇಲ್ಲ’ ಎಂದು ಅಲ್ಲಿಂದ ಹೊರಟುಬಿಟ್ಟರು. ಇಂತಹ ಒಳಗೊಂದು ಹೊರಗೊಂದು ಇರುವ ವ್ಯಕ್ತಿಗಳನ್ನೆ ಕಿತವರು ಎಂದು ಕರೆಯಲಾಗುತ್ತದೆ.

ಇಂದು ಯಾವ ರಂಗವನ್ನೇ ತೆಗೆದುಕೊಳ್ಳಿ. ಪೂರ್ಣ ಮೀಸಲಾಗಿ ಪೂರ್ಣ ಪಾಂಡಿತ್ಯ ಪಡೆಯುವವರು, ಪಡೆದವರು ಕಾಣುವುದೇ ಇಲ್ಲ. ಎಲ್ಲವೂ ತೋರಿಕೆ,
ನಾಟಕೀಯ, ಶೋ ಆಫ್, ನಿತ್ಯ ಹೊಸದನ್ನು ಹುಡುಕುವ ಪ್ರಯತ್ನದಿಂದಾಗಿ ಎಲ್ಲದಕ್ಕೂ ಹಪಹಪಿ. ಯಾವುದರಲ್ಲೂ ಪಾಂಡಿತ್ಯವಿಲ್ಲ. ಆಳವಾದ ಜ್ಞಾನವಿಲ್ಲ, ಒಬ್ಬ ದೇವನನ್ನು ನಂಬುವುದಿಲ್ಲ. ಒಂದು ತತ್ವ ಹಿಡಿದು ಬಾಳುವುದಿಲ್ಲ, ವಾಹನ ಮಾಡಿಕೊಂಡು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳಿಂದ ಹಿಡಿದು, ಧರ್ಮಸ್ಥಳದ ಶ್ರೀ ಮಂಜುನಾಥನವರೆಗೂ ಒಂದುವಾರ ಪ್ರತಿ ದೇವರ ಭೇಟಿ, ಅವರ ಮುಂದೆ ತಮ್ಮ ಬೇಡಿಕೆ ಇಡುವುದು, ಹೀಗಾಗಿ ಆ ದೇವರುಗಳೂ ತಮ್ಮ ತಮ್ಮಲ್ಲಿ ‘ನಿಮ್ಮಲ್ಲಿ ಬಂದಿದ್ದರಾ ಅವರು? ಅದನ್ನು ಕೇಳಿದರಾ? ಇಲ್ಲಿಯೂ ಬಂದಿದ್ದರು, ಇಲ್ಲಿ ಬೇರೆ ಕೇಳಿದರಲ್ಲಾ? ಎಂದು ಈ ಜಿಲ್ಲಾಧಿಕಾರಿಗಳು, ತಹಸೀಲ್ದಾರರು, ಬಿ.ಡಿ.ಓಗಳು ಮಾತಾಡಿಕೊಳ್ಳುವಂತೆ ಮಾತಾಡಿಕೊಂಡು, ನಮ್ಮ ಕ್ಷೇತ್ರದಲ್ಲೂ ಈಗ ಸೈಟ್ ಇಲ್ಲ, ಖಾಲಿ ಮನೆಯಿಲ್ಲ, ಅವರು ಹಾಕಬೇಕೆಂದಿರೋ ಬಿಜಿನೆಸ್ ಇಲ್ಲಿ ನಡೆಯಲ್ಲ’ ಎಂದೆಲ್ಲ ತಮ್ಮ ತಮ್ಮ ಮೊಬೈಲ್‌ಗಳಲ್ಲಿ ಮಾತಾಡಿಕೊಳ್ಳುತ್ತಾರೋ, ಇ-ಮೇಲ್ ಕಳಿಸುತ್ತಾರೋ, ಫೇಸ್‌ಬುಕ್, ಇನ್ಸ್ಟಾಗ್ರಾಮ್‌ಗಳಿಗೆ ಹರಿಬಿಡುತ್ತಾರೋ
ತಿಳಿಯುತ್ತಿಲ್ಲ ಎನಿಸುತ್ತಿದೆ.

‘ನಿಜ ದೈವಕ್ಕೆ ಭಕ್ತನೊಬ್ಬ, ಪರಮ ಪರಿವ್ರತೆಗೆ ಗಂಡನೊಬ್ಬ” ಎನ್ನುವಂತೆ, ಒಂದೇ ದೇವರು, ಧರ್ಮ, ಜಾತಿ, ನಿಷ್ಠೆ, ನಿಯತ್ತು ಉಳಿದೇ ಇಲ್ಲ. ಏನು ಕೇಳಿದರೂ,
ನೋಡಿದರೂ ‘ಎಲ್ಲ ಗೊತ್ತಿದೆ, ನೋಡಿದ್ದೇನೆ, ಕೇಳಿದ್ದೇನೆ’ ಎಂದು ಪೂರ್ಣ ಕೇಳದೇ ಹೇಳುವವನ ಬಾಯಿ ಮುಚ್ಚಿಸಿ, ತಮ್ಮ ಕಿವಿಗಳನ್ನು ಒಳಗೇ ಲಾಕ್ ಮಾಡಿಸಿ ಕೊಂಡಿರುತ್ತಾರೆ. ಈ ಶ್ರಾವಣ ಮಾಸದಲ್ಲಿ ಇಂದಿಗೂ ಪುರಾಣವೋ, ದಾಸರಿಂದ ಹರಿಕಥೆಯೋ, ಸ್ವಾಮಿಗಳಿಂದ ಉಪನ್ಯಾಸವೋ ಇದ್ದೇ ಇರುತ್ತದೆ. ಜನ ಅಲ್ಲೂ ಪುರಾಣಕ್ಕೆ ಕಿವಿಕೊಟ್ಟು, ಕಣ್ಣುಗಳನ್ನು ತಮ್ಮ ಮೊಬೈಲ್‌ಗೆ ಕೊಟ್ಟು, ಪುರಾಣ ಕೇಳುವವರಿಗೆ ಸುಮ್ಮನೆ ತಲೆ ಲೆಕ್ಕದಲ್ಲಿ ಕುಳಿತಿರುತ್ತಾರೆ. ಒಮ್ಮೆ ಹೀಗೆ ಶ್ರಾವಣದಲ್ಲಿ ಇಡೀ ರಾಮಾಯಣ ಪ್ರವಚನ ಹೇಳಿದ ಶಾಸ್ತ್ರಿಗಳು ಪ್ರತಿನಿತ್ಯ ಬರುತ್ತಿದ್ದ ಒಬ್ಬನನ್ನು ‘ತಾವು ದಿನವೂ ಬಂದು ಕೇಳುತ್ತಿದ್ದೀರಿ, ಏನಾದರೂ ಸಂದೇಹ, ಪ್ರಶ್ನೆಗಳಿದ್ದರೆ ಕೇಳಿ ಎಂದಾಗ ಆತ ‘ಸ್ವಾಮಿ, ನೀವು ಹೇಳಿದ್ದನ್ನೆಲ್ಲಾ ಕೇಳಿದ್ದೇನೆ, ಒಂದು ಸಂದೇಹ ಬಂದಿದೆ. ಕಥೆ ಎಲ್ಲಾ ಗೊತ್ತಾಗಿದೆ.

ಪೂರ್ತಿ ಕೇಳಿದ್ದೇನೆ, ಆದರೂ ದ್ವಂದ್ವಕ್ಕೆ ಸಿಲುಕಿದ್ದೇನೆ’ ಎಂದಾಗ ಶಾಸ್ತ್ರಿಗಳು ಹುರುಪಿನಿಂದ “ಹೌದೇ? ಕೇಳಿ ಕೇಳಿ? ಏನು ಸಂದೇಹ ಎಂದಾಗ ಆತ “ಸ್ವಾಮಿ, ಈ ರಾಮಾಯಣದಲ್ಲಿ ರಾಕ್ಷಸನೆಂದರೆ ಯಾರು ರಾಮನೋ? ರಾವಣನೋ? ಎಂಬುದೇ ತಿಳಿಯದಾಗಿದೆ” ಎಂದಾಗ ಶಾಸ್ತ್ರಿಗಳಿಗೆ ಒಂದು ತಿಂಗಳ ಇರದ ಆಯಾಸ ವೆಲ್ಲವೂ ಒಮ್ಮೆಲೆ ಬಂದಂತಾಗಿ ಕೆಳಗೆ ಕುಸಿದುಬಿದ್ದರಂತೆ. ಬರೀ ಕೇಳಿದರೆ ಯಾವುದೂ ಮನಕ್ಕೆ ನಾಟುವುದಿಲ್ಲ. ಶ್ರವಣ, ಮನನ, ನಂತರ ಧ್ಯಾನಿಸಬೇಕು.

ಶ್ರೋತವ್ಯೋ, ಮಂತವ್ಯೋ, ನಿಧಿಧ್ಯನಿಸಿತವ್ಯೋ” ಎನ್ನುವುದೇ ಇದಕ್ಕೆ. ಹೇಳು ಹೇಳುವ ಮುನ್ನವೇ, ಕೇಳಿದ್ದೇನೆ, ಗೊತ್ತಿದೆ, ಓ! ಅದಾ, ಎಂದುಬಿಟ್ಟರೆ ನೀವು ಏನೂ ಕೇಳಿದಂತಲ್ಲ, ಕಲಿತಂತಲ್ಲ. ಅದಕ್ಕೆ ಶ್ರಾವಣ ಮಾಸದಲ್ಲಿ ಅಧ್ಯಯನ ಶ್ರವಣಗಳಿಗೆ ಫಲ ಜಾಸ್ತಿ.