ಪ್ರಚಲಿತ
ಶ್ಯಾಮಾಚಾರ್ಯ ಬಂಡಿ, ಅಧ್ಯಾಪಕರು, ಪೂರ್ಣಪ್ರಜ್ಞ ವಿದ್ಯಾಪೀಠ
ಪೇಜಾವರ ಸ್ವಾಮಿಗಳೆಂದೇ ಸುವಿಖ್ಯಾತರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಧಾರ್ಮಿಕ ಕ್ಷೇತ್ರದ ಧ್ರುವತಾರೆ. ಹಿಂದೂ ಸಮಾಜ ಕಂಡ ಅತ್ಯುನ್ನತ ಚೇತನ.
ನಿಗಿನಿಗಿ ಕೆಂಡದಂತಹ ಸಂನ್ಯಾಸ ನಿರ್ವಹಿಸಿ ನಮ್ಮ ಸನಾತನ ಧರ್ಮದ ಹಿರಿಮೆಯೆನ್ನು ಸಾರಿದವರು. ಸಮಾಜದ ಏಳಿಗೆ
ಗಾಗಿ ಜೋಳಿಗೆ ಹಿಡಿದ ಶ್ರೀಪಾದರು ಜನಸೇವೆಯೇ ಜನಾರ್ದನ ಸೇವೆಯೆಂಬ ದೃಢವಿಶ್ವಾಸವನ್ನು ತಾಳಿದವರು. ನಮ್ಮ ನೆಲದ ಹೆಮ್ಮೆಯೆನಿಸಿದ ವೇದ-ಉಪನಿಷತ್ತು-ಇತಿಹಾಸ-ಪುರಾಣಗಳ ಸಾರಸರ್ವಸ್ವನ್ನು ಹೀರಿ ಅವುಗಳ ಸಂದೇಶವನ್ನು ತಮ್ಮದೇ ಆದ ಮೋಹಕ ಶೈಲಿಯಲ್ಲಿ ಜನಮಾನಸದಲ್ಲಿ ಬಿತ್ತಿದ ವರು. ಸೀಮಿತವ್ಯಾಪ್ತಿಯ ಧರ್ಮಪೀಠವೊಂದರ ಅಧ್ಯಕ್ಷರಾಗಿಯೂ ಸಾಮಾಜಿಕ ವಾಗಿ -ಧಾರ್ಮಿಕವಾಗಿ ಅವರ ಸಾಧನೆ ಅನನ್ಯ.
ಪೇಜಾವರ ಶ್ರೀಪಾದರು ಭಗವಂತ ಕರುಣಿಸಿದ ಅನರ್ಘ್ಯರತ್ನ. ಅವರ ಜೀವನ, ತುಳಿದಹಾದಿ, ಗೈದ ಸಾಧನೆಗಳು ವಿವರಗಳು ರೋಮಾಂಚಕ ಮತ್ತು ದಾರಿದೀಪ. ಬಾಲ್ಯ, ಸನ್ಯಾಸ, ವಿದ್ಯಾಭ್ಯಾಸ: ಶ್ರೀಪಾದರ ಪೂರ್ವಾಶ್ರಮದ ಹೆಸರು ವೆಂಕಟರಮಣ. ಉಡುಪಿಯಿಂದ ಸುಮಾರು 120 ಕಿ.ಮಿ ದೂರದಲ್ಲಿರುವ ರಾಮಕುಂಜವೆಂಬ ಪುಟ್ಟಹಳ್ಳಿ ಅವರ ಹುಟ್ಟೂರು.
ಶ್ರೀಮಧ್ವಾಚಾರ್ಯರು ನಡೆ ದಾಡಿದ ಪವಿತ್ರಭೂಮಿ. ಅಲ್ಲಿಯೇ ವಾಸವಾಗಿದ್ದ ಪೂಜ್ಯ ಶ್ರೀ ನಾರಾಯಣಾಚಾರ್ಯ ಮತ್ತು ಶ್ರೀಮತಿ ಕಮಲಮ್ಮ ಎಂಬ ದಂಪತಿಗಳ 2ನೇ ಮಗುವಾಗಿ ವೆಂಕಟರಮಣನ ಜನನ. ಪ್ರಜಾಪತಿಸಂವತ್ಸರದ ವೈಶಾಖ ಶುದ್ಧ ದಶಮಿಯಂದು (29-4-31) ಈ ‘ಹಿಂದೂಹೃದಯ ಸಾಮ್ರಾಟ’ನ ಆವಿರ್ಭಾವ. ಭರತಭೂಮಿಯ ಅದರಲ್ಲೂ ವಿಶೇಷವಾಗಿ ಕರುನಾಡಿನ ಪುಣ್ಯದ ಫಲವಾಗಿ ಬಾಲಕ ವೆಂಕಟರಮಣ ಉಡುಪಿಯಲ್ಲಿ ಆಗಣ ಪೇಜಾವರ ಮಠಾಧೀಶರಾಗಿದ್ದ ಶ್ರೀವಿಶ್ವಮಾನ್ಯ
ತೀರ್ಥರ ಕಣ್ಣಿಗೆ ಬಿದ್ದ. ಉಪನೀತನಾಗಿ ಮುಖದಲ್ಲಿ ಅಪೂರ್ವವಾದ ದೈವೀಕಾಂತಿಯನ್ನು ಹೊತ್ತು ನಿಂತಿದ್ದ ಪುಟ್ಟ ಬಾಲಕನ ಕಡೆಗೆ ವಿಶ್ವಮಾನ್ಯರು ಬಹಳ ಆಕರ್ಷಿತರಾದರು.
ಈ ಬಾಲಕನಿಗೆ ಸನ್ಯಾಸದೀಕ್ಷೆಯನ್ನು ನೀಡಿ ಉತ್ತರಾಧಿಕಾರಿಯನ್ನಾಗಿ ಮಾಡಿಕೊಳ್ಳುವ ಸಂಕಲ್ಪವನ್ನು ಮಾಡಿಕೊಂಡರು.
ಅವರ ದೃಢಸಂಕಲ್ಪದ ಫಲವಾಗಿ ಹಂಪಿಯ ಯಂತ್ರೋದ್ಧಾರಕ ಮುಖ್ಯಪ್ರಾಣದೇವರ ಸನ್ನಿಧಿಯಲ್ಲಿ ಆಶ್ರಮದೀಕ್ಷೆ ನೆರವೇರಿತು. ಪುಟ್ಟಹಳ್ಳಿಯ ಮುಗ್ಧಬಾಲಕ ಪೇಜಾವರ ಮಠದ ಅಧೋಕ್ಷಜತೀರ್ಥರ ಸಂಸ್ಥಾನಕ್ಕೆ ಉತ್ತರಾಧಿಕಾರಿಯಾದ. ವೆಂಕಟರಮಣ ವಿಶ್ವೇಶತೀರ್ಥರಾದರು. ಆಚಾರ್ಯರ ವೇದಾಂತಪೀಠ ಧನ್ಯವಾಯಿತು.
ಧಾರ್ಮಿಕ ಜಗತ್ತಿನಲ್ಲಿ ಹೊಸ ಜಾಗೃತಿ: 1952ನೇ ಜನವರಿ 18ರಂದು ಶ್ರೀಪಾದರ ಮೊದಲ ಪರ್ಯಾಯ ಪೀಠಾರೋ
ಹಣ. 20ರ ಹರೆಯದ ಯತಿಸಿಂಹನ ಆಧ್ವರ್ಯದಲ್ಲಿ ಆ ಪರ್ಯಾಯ ಅಭೂತಪೂರ್ವ ಖ್ಯಾತಿಯನ್ನುಗಳಿಸಿತು. ಜ್ಞಾನ
ದಾನ-ಅನ್ನದಾನಗಳಲ್ಲಿ ಹೊಸ ದಾಖಲೆಯನ್ನು ಬರೆಯಿತು. ಈ ಪರ್ಯಾಯದ ಅವಧಿಯಲ್ಲಿಯೇ ಶ್ರೀಪಾದರು ಶ್ರೀ ಕೃಷ್ಣನ ಸನ್ನಿಧಿಯಲ್ಲಿ ತಮ್ಮ ಪ್ರಥಮ ‘ಸುಧಾಮಂಗಳ’ವನ್ನು ನಡೆಸಿದರು. ಈ ಪರ್ಯಾಯದ ಅವಧಿಯಲ್ಲಿಯೇ ಮಾಧ್ವ ಸಂಘಟನೆಯ ಧ್ಯೇಯ ಹೊತ್ತ ‘ಮಾಧ್ವತತ್ವeನ- ಸಮ್ಮೇಳನ’ ಆರಂಭವಾಯಿತು.
ಈ ಸಂದರ್ಭದಲ್ಲಿಯೇ ‘ಅಖಿಲ ಭಾರತ ಮಾಧ್ವ ಮಹಾಮಂಡಳಿ’ ಸ್ಥಾಪನೆಯಾಯಿತು. ಈ ಸಂಸ್ಥೆ ದೇಶದ ನಾನಾಭಾಗಗಳಲ್ಲಿ ಮಾಧ್ವತತ್ವಜ್ಞಾನ ಸಮ್ಮೇಳನಗಳನ್ನು ನಡೆಸುತ್ತ ಶ್ರೀಮಧ್ವಾಚಾರ್ಯರ ಅಮೂಲ್ಯ ಸಂದೇಶಗಳನ್ನು ಇಂದಿಗೂ ಪಸರಿಸುತ್ತಿದೆ.
ಶ್ರೀಪಾದರು ಸನಾತನ ತತ್ವ ಪ್ರಚಾರಕ್ಕಾಗಿ. ‘ತತ್ವವಾದ’ ಎನ್ನುವ ಧಾರ್ಮಿಕ ಮಾಸ ಪತ್ರಿಕೆಯನ್ನೂ ಸ್ಥಾಪಿಸಿದರು.
ಶ್ರೀಪಾದರ ಸಾಧನೆಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಧನೆಯೆಂದರೆ ಬೆಂಗಳೂರು ನಗರದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠದ ಸ್ಥಾಪನೆ. ಪ್ರಾಚೀನ ಶಾಸ್ತ್ರಗಳನ್ನು ಕಲಿಸುವ ಈ ಗುರುಕುಲ ಶ್ರೀಪಾದರ ಅಚ್ಚುಮೆಚ್ಚಿನ ಕೇಂದ್ರವಾಗಿದೆ. ಅವರ ಹೃದಯವಾಗಿದೆ. ಸಾವಿರಾರು ವಿದ್ವಾಂಸರನ್ನು ನಾಡಿಗೆ ಅರ್ಪಿಸಿ ಕರುನಾಡಿನ ಹೆಮ್ಮೆಯ ಆಸ್ತಿಯಾಗಿದೆ. ವಿಶ್ವೇಶತೀರ್ಥ ಶ್ರೀಪಾದರು ಒಂದು ಕಡೆ ಎಲ್ಲಿಯೂ ನಿಂತವರಲ್ಲ. ಅವರು ಹೊತ್ತ ಕನಸುಗಳು ದೊಡ್ಡವು.
ಧರ್ಮಗ್ರಂಥಗಳ ಉಪದೇಶಗಳ ಮೂಲಕ ಭಾರತೀಯ ವ್ಯಕ್ತಿತ್ವವನ್ನು ಸರ್ವಾಂಗಸುಂದರವಾಗಿ ಅರಳಿಸಬೇಕೆನ್ನುವ ಅಪಾರ ವಾದ ತುಡಿತ ಅವರಲ್ಲಿತ್ತು. ಇದರ ಪರಿಣಾಮವಾಗಿ ಅವರು ನಿರಂತರವಾಗಿ ಸಂಚಾರವನ್ನು ಕೈಗೊಂಡರು. ಧರ್ಮದ ಜಾಗೃತಿ ರಭಸವಾಗಿ ನಡೆಯಿತು. ಎಲ್ಲ ಮತದ ಪೀಠಾಧಿಪತಿಗಳು ಶ್ರೀಪಾದರ ಆತ್ಮೀಯತೆಯ ಸವಿಯನ್ನುಂಡಿದ್ದಾರೆ.
ರ್ಮಿಕಶ್ರದ್ಧೆಯಿಲ್ಲದೆ ಜಗತ್ತಿಗೆ ಉಳಿಗಾಲವಿಲ್ಲ ಎನ್ನುವುದು ಶ್ರೀಗಳ ಅಚಲ ವಿಶ್ವಾಸವಾಗಿತ್ತು. ಹಾಗೆಯೇ ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಂಡು ‘ಪರಧರ್ಮ ಸಹಿಷ್ಣುತೆ’ಗೆ ಉದಾಹರಣೆಯಾಗಿ ನಿಂತರು. ಸುಮಾರು ಇಪ್ಪತ್ತರ ಹರೆಯದಲ್ಲಿ ಶುರುವಾದ ಶ್ರೀಗಳ ‘ಧರ್ಮಜಾಗೃತಿ’ಯ ಆಂದೋಲನ ಅವರ ಕಡೆಯ ದಿನದವರೆಗೂ ನಡೆಯಿತು. 99 ವರ್ಷಗಳ ತುಂಬು ಜೀವನದಲ್ಲಿ ಬಂದ ಅವರ 5 ಪರ್ಯಾಯಗಳು ಧರ್ಮದ ಸೇವೆಗೆ ಮೀಸಲಾಗಿದ್ದವು.
ಸಾಮಾಜಿಕ ಕಳಕಳಿ: ಶ್ರೀಗಳು ‘ವಿರಕ್ತಜೀವನ’ಕ್ಕೆ ಹೊಸ ಅರ್ಥ ಕೊಟ್ಟರು. ಸನ್ಯಾಸಿಯೆಂದರೆ ಎಲ್ಲವನ್ನು ಬಿಟ್ಟವನಲ್ಲ.
ಬದಲಾಗಿ ಇಡೀ ವಿಶ್ವವನ್ನೇ ಕುಟುಂಬವನ್ನಾಗಿ ಪಡೆದ ದೊಡ್ಡ ಸಂಸಾರಿ ಎನ್ನುವುದನ್ನು ಸಾರಿ ಹೇಳಿದರು. ಅವರ ಸಾಮಾಜಿಕ
ಕಳಕಳಿ ಬಹುಮುಖಿಯಾದದ್ದು. ಬಡವಿದ್ಯಾರ್ಥಿಗಳಿಗಾಗಿ ರಾಜ್ಯದ ನಾನಾಕಡೆಗಳಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ
zರೆ. ಉಡುಪಿ ಮತ್ತು ಬೆಂಗಳೂರು ನಗರಗಳಲ್ಲಿ ಉಚಿತ ಚಿಕಿತ್ಸಾಲಯಗಳು, ಕಲಬುರಗಿ ನಗರ ಭೀಕರ ಬರಕ್ಕೆ ತುತ್ತಾಗಿದ್ದಾಗ ಪಾದಯಾತ್ರೆಯಿಂದ ಧನಸಂಗ್ರಹಿಸಿ ಪೀಡಿತರಿಗೆ ಅನ್ನ-ವಸಗಳ ವಿತರಣೆ, ಬಿರುಗಾಳಿಯಿಂದ ಪೀಡಿತವಾಗಿದ್ದ ಆಂಧ್ರದ ಹಂಸಲ ದೀವಿಯಲ್ಲಿ ಸಂತ್ರಸ್ತರಿಗೆ ಲಕ್ಷಾಂತರ ರುಪಾಯಿಗಳ ವೆಚ್ಚದಲ್ಲಿ ನಿವೇಶನಗಳ ನಿರ್ಮಾಣ, ಶ್ರೀಮಧ್ವಾಚಾರ್ಯರ ಜನ್ಮಭೂಮಿ ಯಾದ ಪಾಜಕಕ್ಷೇತ್ರದ ಜೀರ್ಣೋದ್ಧಾರ, ಅನೇಕ ಶಿಕ್ಷಣ ಸಂಸ್ಥೆಗಳ ನಿರ್ಮಾಣ ಇತ್ಯಾದಿಗಳೆಲ್ಲ ಅವರ ಸಾಮಾಜಿಕ ತುಡಿತಕ್ಕೆ ಸಾಕ್ಷಿಗಳಾಗಿ ನಿಲ್ಲುತ್ತವೆ. ಅವರ ನಿರಾಡಂಬರ, ನಿಸ್ಪೃಹವ್ಯಕ್ತಿತ್ವಕ್ಕೆ ಸಮಾಜ ತಲೆಬಾಗಿತ್ತು. ಈಗ ಅವರ ಕರೆಗೆ ಓಗೊಟ್ಟು ಬಂದ ಜನತೆಯನ್ನೆಲ್ಲ ಶ್ರೀಪಾದರು ಸಶಕ್ತಸಮಾಜ ನಿರ್ಮಾಣದ ಕೈಂಕರ್ಯಕ್ಕೆ ತೊಡಗಿಸಿದ್ದರು.
ಹಿಂದೂ ಸಂಘಟನೆ: ಜಾತಿಗಳ ಹೆಸರಿನಲ್ಲಿ ಹಿಂದೂ ಸಮಾಜ ವಿಘಟನೆಗೊಳ್ಳುವುದು ಅವರಿಗೆ ಅಪಾರವಾದ ಯಾತನೆ
ಯನ್ನು ತರುತ್ತಿತ್ತು. ಅವರ ದೃಷ್ಟಿಯಲ್ಲಿ ಗುಣಶೀಲಗಳೆ ಶ್ರೇಷ್ಠತೆಗೆ ಮಾನದಂಡಗಳಾಗಿದ್ದವೇ ಹೊರತು ಜಾತಿಗಳಾಗಿರಲಿಲ್ಲ. ಒಂದು ‘ಸಾಮಾಜಿಕ ಶಿಸ್ತಿ’ಗಾಗಿ ಜಾತಿಗಳು ರೂಪುಗೊಂಡಿವೆ ಎನ್ನುವುದನ್ನು ಶ್ರೀಗಳು ಬಲವಾಗಿ ಪ್ರತಿಪಾದಿಸುತ್ತಿದ್ದರು. ‘ಅಸ್ಪೃಶ್ಯತೆ’ ಯಂತೂ ಅವರ ಪಾಲಿಗೆ ದೊಡ್ಡ ಪಿಡುಗಾಗಿತ್ತು. ಅಸ್ಪೃಶ್ಯರೆಂದು ಕಾಣುವುದರಿಂದ ಹಿಂದೂ ಸಮಾಜಕ್ಕೆ ಆಗುವ ಹಾನಿಯನ್ನು ಶ್ರೀಗಳು ಗುರುತಿಸಿದರು.
ಹರಿಜನ ಕೇರಿಗೆ ತೆರಳಿ ಭರವಸೆ ನೀಡಿದರು. ಪಾದಪೂಜೆ ಸ್ವೀಕರಿಸಿದರು. ಆಧ್ಯಾತ್ಮ ಸಂದೇಶವನ್ನು ನೀಡಿ ಅವರನ್ನು ಸಂತೈಸಿ ದರು. ನೊಂದ ಜನ ಮತಾಂತರಕ್ಕೆ ಮುಂದಾದಾಗ ಅವರನ್ನು ಓಲೈಸಿ ಹಿಂದೂಗಳಾಗಿಯೇ ಉಳಿಯುವಂತೆ ಮಾಡಿದರು. ಕರ್ನಾಟಕದಲ್ಲಿ ಮತಾಂತರಗೊಂಡ ನೂರಾರು ಜನ ಶ್ರೀಗಳ ಮಾರ್ಗದರ್ಶನದಲ್ಲಿ ‘ಮಾತೃಧರ್ಮ’ಕ್ಕೆ ಮರಳಿದರು. ಬಹುಮುಖ್ಯ ವಾದ ವಿಚಾರವೇನೆಂದರೆ, ಶ್ರೀಪಾದರ ‘ಹಿಂದೂಸಂಘಟನೆ’ ಪರಮತ ದ್ವೇಷದ ಫಲವಾಗಿರಲಿಲ್ಲ. ಅವರು ಕ್ರೈಸ್ತ-ಮುಸ್ಲಿಂ ಬಾಂಧವರನ್ನೂ ಕೂಡ ಬಹಳ ಅಕ್ಕರೆಯಿಂದ ಕಾಣುತ್ತಿದ್ದರು. ಅವರನ್ನು ಆರಾಧಿಸುವ ದೊಡ್ಡದೊಂದು ಮುಸ್ಲಿಂ ಬಳಗವೇ ಇದೆ. ಮೇಲಾಗಿ ಮುಸ್ಲಿಂ ಬಾಂಧವರಿಗೆ ಕೃಷ್ಣಮಠದಲ್ಲಿ ‘ಇಫ್ತಿಯಾರ್ ಕೂಟ’ವನ್ನು ಏರ್ಪಡಿಸಿದ ಕೀರ್ತಿಯೂ ಪೇಜಾವರ ಶ್ರೀಗಳಿಗೆ ಇದೆ.
ಅದ್ಭುತ ದಾರ್ಶನಿಕ: ಪೇಜಾವರ ಶ್ರೀಪಾದರು ದೇಶದ ಅತ್ಯುತ್ತಮ ವಿದ್ವಾಂಸರಲ್ಲಿ ಒಬ್ಬರು. ಅವರಿಗೆ ಸಂಸ್ಕೃತ ಸಾಹಿತ್ಯದ
ಮೇಲೆ, ವಿವಿಧ ದರ್ಶನಗಳ ಬಗೆಗೆ ಅಪಾರವಾದ ಹಿಡಿತವಿತ್ತು. ಮಾಧ್ವ ದರ್ಶನದಲ್ಲಂತೂ ಸರಿಸಾಟಿಯಿಲ್ಲದ ಪ್ರಭುತ್ವವನ್ನು
ಅವರು ಸಂಪಾದಿಸಿದ್ದರು. ಗೀತೆ, ರಾಮಾಯಣ, ಮಹಾಭಾರತ, ಉತನಿಷತ್ತುಗಳು ಅವರಿಗೆ ರಕ್ತಗತವಾಗಿದ್ದವು. ಅವರಷ್ಟು ಸುಂದರವಾಗಿ ಅವುಗಳನ್ನು ಸಮಕಾಲೀನ ಬದುಕಿಗೆ ಅನ್ವಯಿಸುವವರು ವಿರಳ. ಅಷ್ಟೇ ಮುಖ್ಯವಾಗಿ ಶ್ರೀಪಾದರು ಅದ್ಭುತ ಬರಹಗಾರರು. ಗೀತೆ, ಇತಿಹಾಸ, ಉಪನಿಷತ್ತು ಮುಂತಾದವುಗಳ ಬಗೆಗೆ ರಚಿಸಿದ ಪುಸ್ತಕಗಳು ಬೆಲೆಕಟ್ಟಲಾಗದ ರತ್ನಗಳು.
ತಮ್ಮ ವ್ಯಕ್ತಿತ್ವದ ಮುಂದುವರಿಕೆಯಾಗಿ ಅತ್ಯಂತ ಸಮರ್ಥರಾದ ಶ್ರೀ ವಿಶ್ವ ಪ್ರಸನ್ನತೀರ್ಥರನ್ನು ಈ ದೇಶಕ್ಕೆ ಅವರು ಸಮರ್ಪಿಸಿ ದ್ದಾರೆ. ವೈಶಾಖ ಮಾಸದ ಶುದ್ಧ(ಶುಕ್ಲ) ದಶಮಿಯಂದು ಶ್ರೀಪಾದರ ಜಯಂತಿ. ಅವರನ್ನು ಸ್ಮರಣೆಗೆ ತಂದುಕೊಳ್ಳುವ ಶುಭ ಸಂದರ್ಭ. ಆ ಮಹಾನುಭಾವರ ಸೂರ್ತಿದಾಯಕವಾದ ವ್ಯಕ್ತಿತ್ವದ ಅನುಸಂಧಾನದ ಹಿನ್ನಲೆಯಲ್ಲಿ ಸಶಕ್ತನಾಡನ್ನು ನಿರ್ಮಿಸೋಣ.