Sunday, 13th October 2024

ಮೂರೂ ಪಕ್ಷಗಳಿಗೆ ಇಕ್ಕಟ್ಟಾಗುತ್ತಿರುವ ಸಿದ್ದರಾಮಯ್ಯ ಎಫೆಕ್ಟು

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೀಗ ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳ ಮುಂಚೂಣಿ ನಾಯಕರಿಗೆ ದೊಡ್ಡ
ಸಮಸ್ಯೆಯಾಗಿ ಕಾಡುತ್ತಿದ್ದಾರೆ.

ಆಡಳಿತಾರೂಢ ಬಿಜೆಪಿಗೇ ಇರಬಹುದು, ಜೆಡಿಎಸ್ ಪಾಲಿಗಿರಬಹುದು, ಹಾಗೆಯೇ ಕಾಂಗ್ರೆಸ್ ಪಕ್ಷದ ಕೆಲ ನಾಯಕರಿಗೇ ಇರಬಹುದು. ಹೀಗೆ ಎಲ್ಲ ಪಕ್ಷಗಳ ನಾಯಕರ ಪಾಲಿಗೂ ಸಿದ್ದರಾಮಯ್ಯ ಅವರೀಗ ಒರಿಜಿನಲ್ ಕಣ್ಣುಬೇನೆ. ಕಾಂಗ್ರೆಸ್ ಪಕ್ಷವನ್ನೇ ನೋಡಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಅವರನ್ನು ಅರಗಿಸಿಕೊಳ್ಳುವುದು ಹೇಗೆ?ಎಂಬುದೇ ದೊಡ್ಡ ತಲೆನೋವಾಗಿ ಹೋಗಿದೆ. ಹುಡುಕುತ್ತಾ ಹೋದರೆ ಇದಕ್ಕೆ ಹಲವು ಕಾರಣಗಳು ಸಿಗುತ್ತವೆ.

ಗೋಹತ್ಯೆಯ ವಿಷಯದಲ್ಲಿ ಸಿದ್ದರಾಮಯ್ಯ ನೀಡುತ್ತಿರುವ ಹೇಳಿಕೆಗಳೇ ಇರಬಹುದು, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ದಲ್ಲಿ ನನ್ನ ಸೋಲಿಗೆ ಇಂತಹ ಸಮುದಾಯ ಕಾರಣ ಎಂದಿದ್ದೇ ಇರಬಹುದು, ಹಾಗೆಯೇ ಪುನಃ ಮುಖ್ಯಮಂತ್ರಿಯಾಗುವ ಆಸೆ ನನಗಿದೆ ಎಂದವರು ಬಹಿರಂಗವಾಗಿ ಹೇಳಿಕೆ ಕೊಡುತ್ತಿರುವುದೇ ಇರಬಹುದು.

ಹೀಗೆ ಸಿದ್ದರಾಮಯ್ಯ ಅವರೇನೇ ಹೇಳಿದರೂ ಡಿ.ಕೆ.ಶಿವಕುಮಾರ್ ಅವರ ಪಾಲಿಗೆ ಕಿರಿಕಿರಿಯಾಗುತ್ತಿದೆ. ಗೋಮಾಂಸ
ತಿನ್ನುವುದು, ಬಿಡುವುದು ಅವರವರಿಗೆ ಸೇರಿದ್ದು. ಈಗ ಕೊಡಗಿನವರೂ ಗೋಮಾಂಸ ತಿನ್ನುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದಾಗ ತಲೆ ತಲೆ ಚಚ್ಚಿಕೊಂಡ ಮೊದಲ ನಾಯಕ ಡಿ.ಕೆ.ಶಿವಕುಮಾರ್.

ಅವರಾಡಿದ ಮಾತು ಮುಸ್ಲಿಮೇತರರ ಮತಗಳನ್ನು ಒಂದುಗೂಡಿಸಲು ಬಿಜೆಪಿಗೆ ನೆರವಾಗುತ್ತದೆ ಎಂಬುದು ಡಿ.ಕೆ.ಶಿವಕುಮಾರ್ ಆತಂಕ. ಅದರಲ್ಲಿ ಸುಳ್ಳೇನೂ ಇಲ್ಲ. ಆದರೆ ಹೀಗೆ ಪದೇ ಪದೆ ಮಾತನಾಡಬೇಡಿ ಎಂದು ಸಿದ್ದರಾಮಯ್ಯ ಅವರಿಗೆ ಹೇಳಲೂ ಡಿ.ಕೆ. ಶಿವಕುಮಾರ್ ಅವರಿಗೆ ಆಗುತ್ತಿಲ್ಲ. ಬೇರೆಯವರಾಗಿದ್ದರೆ ಇಷ್ಟೊತ್ತಿಗಾಗಲೇ ಡಿ.ಕೆ.ಶಿವಕುಮಾರ್ ಬಾಯಿ ಬಂದ್ ಮಾಡಿಸುತ್ತಿದ್ದರು. ಆದರೆ ಸಿದ್ದರಾಮಯ್ಯ ಅವರ ಬಾಯಿ ಬಂದ್ ಮಾಡಿಸುವುದಿರಲಿ, ಅವರ ವಿರುದ್ಧ ಹೈಕಮಾಂಡ್ ಬಳಿ ದೂರು ನೀಡುವ ಸ್ಥಿತಿಯಲ್ಲೂ ಅವರಿಲ್ಲ.

ಯಾಕೆಂದರೆ ಮುಖ್ಯಮಂತ್ರಿಯಾಗಿದ್ದಾಗ ಐದು ವರ್ಷಗಳ ಕಾಲ ಕಾಂಗ್ರೆಸ್ ವರಿಷ್ಠರನ್ನು ಬಹುವಿಶ್ವಾಸದಿಂದ ನೋಡಿಕೊಂಡಿ ದ್ದವರು ಸಿದ್ದರಾಮಯ್ಯ. ಅದೇ ರೀತಿ ಇವತ್ತಿಗೂ ಪ್ರಧಾನಿ ನರೇಂದ್ರಮೋದಿ ಅವರ ವಿರುದ್ಧದ ಹೋರಾಟದಲ್ಲಿ ಸಿದ್ದರಾಮಯ್ಯ ಅವರಷ್ಟು ಎಫೆಕ್ಟೀವ್ ಆಗಿ ಹೋರಾಡುವ ನಾಯಕರೂ ಕೈ ಪಾಳೆಯದಲ್ಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಮೋದಿ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತಾರಾದರೂ ನೇರವಾಗಿ ಬೀದಿಗಿಳಿದು ಮೋದಿ ವಿರುದ್ಧ ಗುಡುಗುವ ವಿಷಯದಲ್ಲಿ ಸಿದ್ದರಾಮಯ್ಯ ಅವರೇ ನಂಬರ್ ಒನ್.

ಎಲ್ಲಕ್ಕಿಂತ ಮುಖ್ಯವಾಗಿ ಇವತ್ತಿನ ಕಾಂಗ್ರೆಸ್ ಹೈಕಮಾಂಡ್, ಇತಿಹಾಸದ ಅತ್ಯಂತ ದುರ್ಬಲ ಹೈಕಮಾಂಡ್. ಅದಕ್ಕೀಗ ಶಕ್ತಿಯೂ ಇಲ್ಲ. ಯುಕ್ತಿಯೂ ಇಲ್ಲ. ಇಂತಹ ಸಂದರ್ಭದಲ್ಲಿ ಮೋದಿ ವಿರುದ್ಧ ಪರಿಣಾಮಕಾರಿ ಯಾಗಿ ಹೋರಾಡುತ್ತಿರುವ ಸಿದ್ದರಾಮಯ್ಯ ಅವರ ಮೇಲೆ ಕ್ರಮ ಕೈಗೊಳ್ಳುವುದು ಎಂದರೆ ತಮ್ಮ ಕೈಯ್ಯನ್ನು ತಾವೇ ಕತ್ತರಿಸಿಕೊಂಡಂತೆ ಎಂಬುದು ಹೈಕಮಾಂಡ್ ವರಿಷ್ಠರ ಯೋಚನೆ.

ಇದೇ ಕಾರಣಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರ ವಿಷಯದಲ್ಲಿ ಬಹು ಎಚ್ಚರಿಕೆಯಿಂದ ನಡೆದುಕೊಳ್ಳುತ್ತದೆ.
ಅದರ ಎಚ್ಚರಿಕೆಯ ನಡೆ ಹೇಗಿರುತ್ತದೆ? ಎಂಬುದು ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತು. ಹೀಗಾಗಿ ಅವರು ಸಿದ್ದರಾಮಯ್ಯ ಅವರ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತುವುದಿಲ್ಲ.

ಅದೇ ರೀತಿ ಇತ್ತೀಚಿನ ದಿನಗಳಲ್ಲಿ ತಮ್ಮ ವರಸೆ ಶುರು ಮಾಡಿಕೊಂಡಿರುವ ಸಿದ್ದರಾಮಯ್ಯ: ಮತ್ತೊಮ್ಮೆ ಕರ್ನಾಟಕದ ಮುಖ್ಯ ಮಂತ್ರಿಯಾಗುವ ತಮ್ಮ ಆಸೆಯನ್ನು ಪದೇ ಪದೆ ತೋಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಸಿದ್ದರಾಮಯ್ಯ ಅವರಂತೆ ಮುಖ್ಯಮಂತ್ರಿಯಾಗುವ ತಮ್ಮ ಆಸೆಯನ್ನು ಮುಲಾಜಿಲ್ಲದೆ ತೋಡಿಕೊಂಡವರು ವಿರಳ. ವಸ್ತುಸ್ಥಿತಿ ಎಂದರೆ ಚುನಾವಣೆಯಲ್ಲಿ ಗೆದ್ದ ಮೇಲೆ ಮುಖ್ಯಮಂತ್ರಿ ಕ್ಯಾಂಡಿಡೇಟುಗಳಿಗಾಗಿ ಕೈ ಪಾಳೆಯ ಹುಡಕಾಟ ಆರಂಭಿಸುತ್ತದೆ.

ಶಾಸಕಾಂಗ ಪಕ್ಷದಲ್ಲಿ ನಾಯಕನ ಆಯ್ಕೆಯಾಗಲಿ. ಅಲ್ಲಿಯವರೆಗೆ ಯಾರೂ ಮಾತನಾಡಬಾರದು ಎಂದು ಅದು ಹಿಂದಿ ನಿಂದಲೂ ಹೇಳುತ್ತಲೇ ಬಂದಿದೆ. ಆದರೆ ಈಗ ಸಿದ್ದರಾಮಯ್ಯ ಬಹಿರಂಗವಾಗಿ ತಮ್ಮ ಮನದಿಂಗಿತವನ್ನು ತೋಡಿಕೊಳ್ಳು ತ್ತಿದ್ದರೂ ಅದನ್ನು ನಿಯಂತ್ರಿಸಲು ಕಾಂಗ್ರೆಸ್ ವರಿಷ್ಠರು ಮುಂದಾಗುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಬೆಳೆಸಲು ಹೋರಾಡುತ್ತಿರುವ ಡಿ.ಕೆ.ಶಿವಕುಮಾರ್ ಪಾಲಿಗೆ ಇದೇ ದೊಡ್ಡ ಸಮಸ್ಯೆ.

ವಾಸ್ತವವಾಗಿ ಅವರು ಕೂಡಾ ಮುಖ್ಯಮಂತ್ರಿಯಾಗಬೇಕು ಎಂಬ ಕನಸಿನೊಂದಿಗೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಂದವರು.
ಆದರೆ ಕೆಪಿಸಿಸಿ ಅಧ್ಯಕ್ಷರಾದಂದಿನಿಂದ ಇಲ್ಲಿಯವರೆಗಿನ ಬೆಳವಣಿಗೆ ಅವರಿಗೆ ಸಮಾಧಾನ ತಂದಿಲ್ಲ. ಯಾಕೆಂದರೆ ತಾವು ಪಕ್ಷದ ಸಾರಥ್ಯ ವಹಿಸಿರುವಾಗಲೇ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವ ಆಸೆಯನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ.

ಅಂತವರು ಮುಂದಿನ ದಿನಗಳಲ್ಲಿ ಸುಮ್ಮನಿದ್ದು ಬಿಡುತ್ತಾರೆಯೇ? ಇದು ಡಿ.ಕೆ. ಶಿವಕುಮಾರ್ ಅವರ ಪಾಲಿಗೆ ಬಗೆಹರಿಯದ ಪ್ರಶ್ನೆ. ಹೀಗಾಗಿ 2013ರಲ್ಲಿ ಡಾ.ಜಿ. ಪರಮೇಶ್ವರ್ ಅವರಿಗೆ ಯಾವ ಗತಿ ಬಂತೋ? ಅದೇ ರೀತಿ ತಮ್ಮನ್ನೂ ಮೂಲೆಗುಂಪು ಮಾಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತದೆ ಎಂಬ ಅನುಮಾನ ಅವರಲ್ಲಿದೆ. ಅಂದ ಹಾಗೆ ಪರಮೇಶ್ವರ್ ಅವರಂತೆ ತಮ್ಮ ಕ್ಷೇತ್ರವನ್ನು ಡಿ.ಕೆ.ಶಿವಕುಮಾರ್ ಕಳೆದುಕೊಳ್ಳದೆ ಇರಬಹುದು. ಆದರೆ ಗೆದ್ದ ಶಾಸಕರ ಪೈಕಿ ಹೆಚ್ಚು ಮಂದಿ ಸಿದ್ದರಾಮಯ್ಯ ಅವರ ಪರ ನಿಂತರೆ ಏನು ಮಾಡಬೇಕು? ಎಂಬುದು ಡಿ.ಕೆ. ಶಿವ ಕುಮಾರ್ ಅವರ ಯೋಚನೆ.

ಯಾಕೆಂದರೆ ದಿನ ಕಳೆದಂತೆ ಕಠಿಣವಾಗುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ಕೈ ಪಾಳೆಯವನ್ನು ಕಟ್ಟಲು ಡಿ.ಕೆ.ಶಿವಕುಮಾರ್
ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಜಿ ಮಟ್ಟದಿಂದ ಹಿಡಿದು ಬ್ಲಾಕ್ ಮಟ್ಟದವರೆಗೆ ಪಕ್ಷವನ್ನು ಪರಿಣಾಮಕಾರಿಯಾಗಿ
ಸಂಘಟಿಸುತ್ತಿದ್ದಾರೆ. ಹಿಂದೆ ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕಾಲದಲ್ಲಿ ರಾಜ್ಯ ಕಾಂಗ್ರೆಸ್ ನ ಪದಾಧಿಕಾರಿಗಳನ್ನು ನೇಮಕ ಮಾಡುವ ಕಾರ್ಯವೂ ಆಗಿರಲಿಲ್ಲ.

ಇಂತಹ ಕಾಲದಲ್ಲಿ ಖರ್ಗೆ, ಸಿದ್ದರಾಮಯ್ಯ ಸೇರಿದಂತೆ ಹಲ ಪ್ರಮುಖ ನಾಯಕರ ಮುಂದೆ ಹಠಕ್ಕೆ ಬಿದ್ದ ಪರಮೇಶ್ವರ್ ಅವರು ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದ ಮಧುಸೂಧನ್ ಮಿಸ್ತ್ರಿ ಅವರನ್ನು ಹಿಡಿದುಕೊಂಡು ವರಿಷ್ಠರ ಮನ ಒಲಿಸಿ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿದ್ದರು. ಇದೇ ರೀತಿ ಪಕ್ಷವನ್ನು ಸಂಘಟಿಸುವ ವಿಷಯದಲ್ಲಿ ಹಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದ ಪರಮೇಶ್ವರ್ ಅವರು 2013ರ ವಿಧಾನಸಭಾ ಚುನಾವಣೆ ಎದುರಾದಾಗ ಸಹಜವಾಗಿಯೇ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ಮುಂದಿದ್ದರು. ಆದರೆ ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎಂಬಂತೆ ರಾಜ್ಯವಿಡೀ ಸುತ್ತಾಡಿ ಪಕ್ಷ ಸಂಘಟಿಸಿದ ಪರಮೇಶ್ವರ್ ತಮ್ಮ ಕ್ಷೇತ್ರದ ಸೋತರು. ಸೋತರು ಎನ್ನುವುದಕ್ಕಿಂತ ಸಿಎಂ ಹುದ್ದೆಯ ರೇಸಿ ನಲ್ಲಿದ್ದವರ ಕೈ ಚಳಕವನ್ನು ಅರ್ಥ ಮಾಡಿಕೊಳ್ಳದೆ ಮಕಾಡೆ ಮಲಗಿದರು.

ಮುಂದೆ ಪಕ್ಷ ಅಧಿಕಾರಕ್ಕೆ ಬಂದ ನಂತರ ದಿಗ್ವಿಜಯ್ ಸಿಂಗ್ ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ವಹಿಸಿಕೊಂಡರಲ್ಲ? ಆ ಸಂದರ್ಭ ದಲ್ಲಿ ಒಮ್ಮೆ ತಮಗೆ ಸಿಕ್ಕ ಪರಮೇಶ್ವರ್ ಅವರ ಬಳಿ: ಯಾಕೆ ನೀವಿನ್ನೂ ಉಪಮುಖ್ಯಮಂತ್ರಿಯಾಗಿಲ್ಲ? ನಿಮ್ಮಂತವರು ಇಷ್ಟು ದಿನ ಉಪಮುಖ್ಯಮಂತ್ರಿಯಾಗದೆ ಇರುವುದು ಸರಿಯಲ್ಲ ಎಂದರು.

ದಿಗ್ವಿಜಯ್ ಸಿಂಗ್ ಅವರಾಡಿದ ಮಾತು ಕೇಳಿ ಪರಮೇಶ್ವರ್ ಫುಲ್ ಖುಷ್. ಹೀಗೆ ಅವರು ಹೇಳುತ್ತಿದ್ದಾರೆಂದರೆ ಸದ್ಯದ ತಾವು ಡಿಸಿಎಂ ಆಗುವುದು ಗ್ಯಾರಂಟಿ ಎಂದು ಪರಮೇಶ್ವರ್ ಭಾವಿಸಿದರು. ಆದರೆ ಅವತ್ತೇ ಕೊನೆ. ಮುಂದೆ ದಿಗ್ವಿಜಯ್ ಸಿಂಗ್ ಅವರೇ ಸೋನಿಯಾಗಾಂಧಿ ಅವರ ಬಳಿ: ಡಿಸಿಎಂ ಹುದ್ದೆ ಸೃಷ್ಟಿಸಿದರೆ ಪಕ್ಷದಲ್ಲಿ ಪರ್ಯಾಯ ಶಕ್ತಿ ಕೇಂದ್ರವನ್ನು ಸ್ಥಾಪಿಸಿದಂತಾಗುತ್ತದೆ ಎಂದು ಫಿಟ್ಟಿಂಗ್ ಇಟ್ಟು ಬಿಟ್ಟರು.

ಹೀಗೆ ಫಿಟ್ಟಿಂಗ್ ಇಟ್ಟವರು ನಂತರ ಅಪ್ಪಿ ತಪ್ಪಿಯೂ ಡಿಸಿಎಂ ಹುದ್ದೆಯ ಮಾತನಾಡಲಿಲ್ಲ. ಬದಲಿಗೆ ಬಂದಾಗಲೆಲ್ಲ
ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಪರ ಬ್ಯಾಟಿಂಗ್ ಮಾಡಿ ಹೋಗುತ್ತಿದ್ದರು. ಸಿದ್ದರಾಮಯ್ಯ ಅವರ ರಾಜಕೀಯ ಚಾಣಾಕ್ಷತೆ ಹೇಗಿದೆ? ಎಂಬುದಕ್ಕೆ ಇದೊಂದು ಸಾಕ್ಷಿ ಅಷ್ಟೇ. ಇವತ್ತು ಡಿ.ಕೆ.ಶಿವಕುಮಾರ್ ಅವರಿಗೂ ಸಿದ್ದರಾಮಯ್ಯ ಅವರ ಚಾಣಾಕ್ಷತೆಯ ಎಫೆಕ್ಟಿನ ಬಗ್ಗೆಯೇ ಚಿಂತೆ. ಯಾಕೆಂದರೆ ಸಿದ್ದರಾಮಯ್ಯ ಅವರೇನೇ ಮಾತನಾಡಲಿ, ಹೈಕಮಾಂಡ್ ಅದನ್ನು ತಡೆಯಲು ಮುಂದಾಗುತ್ತಿಲ್ಲ.

ಹೀಗಾಗಿ ಪಕ್ಷವನ್ನು ಕಷ್ಟಪಟ್ಟು ತಾವು ಬೆಳೆಸಿದರೂ ನಿರ್ಣಾಯಕ ಹಂತದಲ್ಲಿ ಸಿದ್ದರಾಮಯ್ಯ ಅವರೇ ಇದರ ಫಲ ಉಣ್ಣಬಹುದು ಎಂಬುದು ಡಿ.ಕೆ. ಶಿವಕುಮಾರ್ ಆತಂಕ. ಹಾಗಂತ ತಮ್ಮ ಆತಂಕವನ್ನು ಅವರು ಬಹಿರಂಗ ವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲೂ ಇಲ್ಲ. ಯಾಕೆಂದರೆ ಇವತ್ತಿಗೂ ರಾಜ್ಯ ಕಾಂಗ್ರೆಸ್ ಮಟ್ಟಿಗೆ ಸಿದ್ದರಾಮಯ್ಯ ಅವರೇ ಪವರ್‌ ಫುಲ್ ಲೀಡರು. ಅಹಿಂದ
ಸಮುದಾಯಗಳ ಮತ ಬ್ಯಾಂಕ್ ಅನ್ನು ದೊಡ್ಡ ಮಟ್ಟದಲ್ಲಿ ಸೆಳೆಯುವ ಶಕ್ತಿ ಇರುವುದೂ ಅವರಿಗೇ.ಹೀಗಿರುವಾಗಿ ಆಕ್ಷೇಪದ
ಮಾತನಾಡಲು ಹೋಗಿ ಇನ್ನೇನೋ ಯಡವಟ್ಟಾಗುವುದು ಅವರಿಗೆ ಬೇಕಿಲ್ಲ.

ಹೀಗಾಗಿಯೇ ಅವರು ಅಸಮಾಧಾನದಿಂದಲೇ ಸಿದ್ದರಾಮಯ್ಯ ಅವರನ್ನು ಗಮನಿಸುತ್ತಿದ್ದಾರೆ. ಕುತೂಹಲದ ಸಂಗತಿ ಎಂದರೆ ಅವರಿಗೆ ಯಾವ,ಯಾವ ವಿಷಯಗಳಲ್ಲಿ ಸಿದ್ದರಾಮಯ್ಯ ಅವರ ಬಗ್ಗೆ ಅಸಮಾಧಾನ ವಿದೆಯೋ? ಅವೆಲ್ಲ ವಿಷಯಗಳ ಬಗ್ಗೆ ಪಕ್ಷದ ಕೆಲ ಕಾರ್ಯಕರ್ತರು ನೀಡಿದ ದೂರುಗಳು ಹೈಕಮಾಂಡ್ ವರಿಷ್ಟರ ಟೇಬಲ್ಲುಗಳ ಮೇಲೆ ಧೂಳು ತಿನ್ನುತ್ತಾ ಕೂತಿವೆ.

ಇದೇ ರೀತಿ ಜೆಡಿಎಸ್ ಪಾಲಿಗೂ ಸಿದ್ದರಾಮಯ್ಯ ಅವರೇ ನಂಬರ್ ಒನ್ ತಲೆನೋವು. ಕಳೆದ ಚುನಾವಣೆಯ ನಂತರ
ಕಾಂಗ್ರೆಸ್ ಜತೆ ಕೈಗೂಡಿಸಿ ಸರಕಾರ ರಚಿಸಿದರೂ ಆ ಸರಕಾರವನ್ನು ಬೀಳಿಸಿದ್ದು ಸಿದ್ದರಾಮಯ್ಯ ಎಂದು ಎಚ್.ಡಿ. ಕುಮಾರ ಸ್ವಾಮಿ ಪದೇ ಪದೆ ದೂರುತ್ತಲೇ ಬಂದಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಅವರು ಮುಂದಿನ ದಿನಗಳಲ್ಲಿ ಜೆಡಿಎಸ್ ಶಕ್ತಿಯನ್ನು ಕುಗ್ಗಿಸಲು ಏನು ಬೇಕಾದರೂ ಮಾಡುತ್ತಾರೆ ಎಂಬುದು ಕುಮಾರಸ್ವಾಮಿ ಅವರ ಯೋಚನೆ.

ತಾವು ಬಿಜೆಪಿ ಜತೆ ಕೈ ಜೋಡಿಸುವ ಮಾತನಾಡಿದ ಬೆನ್ನ ತಮ್ಮ ಪಕ್ಷದ ಹಲ ಶಾಸಕರನ್ನು ಸೆಳೆಯಲು ಸಿದ್ದರಾಮಯ್ಯ ಸ್ಕೆಚ್
ಹಾಕಿದರು ಎಂಬುದು ಕುಮಾರಸ್ವಾಮಿ ಅವರ ಅಸಮಾಧಾನ. ಈ ಪ್ರಯತ್ನವನ್ನು ಸಿದ್ದರಾಮಯ್ಯ ನಿಲ್ಲಿಸುವುದಿಲ್ಲ. ಬದಲಿಗೆ
ವಿಧಾನಸಭಾ ಚುನಾವಣೆ ಹತ್ತಿರ ಬಂದ ಕೂಡಲೇ ದೊಡ್ಡ ಮಟ್ಟದಲ್ಲಿ ಜೆಡಿಎಸ್ ಶಾಸಕರನ್ನು ಸೆಳೆಯುತ್ತಾರೆ ಎಂಬುದು ಅವರ ಆತಂಕ. ಹೀಗಾಗಿ ಸಿದ್ದರಾಮಯ್ಯ ಅವರ ಮೇಲೆ ಎಚ್ಚರಿಕೆಯ ನೋಟವಿಟ್ಟುಕೊಂಡೇ ಜೆಡಿಎಸ್ ಚೌಕಾಬಾರಾ ಆಡುತ್ತಿದೆ.

ಉಳಿದಂತೆ ಆಡಳಿತಾರೂಢ ಬಿಜೆಪಿಯ ಪಾಲಿಗೂ ಸಿದ್ದರಾಮಯ್ಯ ತಲೆನೋವಾಗಿರುವುದು ರಹಸ್ಯವೇನಲ್ಲ.ಆ ಪಕ್ಷದಲ್ಲೀಗ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಮರಳಿ ಸಿದ್ದರಾಮಯ್ಯ ಅವರ ಜತೆ ಹೋಗುವುದು ಗ್ಯಾರಂಟಿ ಎಂಬ ಭಾವನೆ ಕಮಲ ಪಾಳೆಯದಲ್ಲಿದೆ. ಹೀಗಾಗಿ ಅಹಿಂದ ಸಮುದಾಯಗಳಲ್ಲಿ ಸಿದ್ದರಾಮಯ್ಯ
ಅವರಿರುವ ಜನಪ್ರಿಯತೆಯನ್ನು ಕುಗ್ಗಿಸಲು ಬಿಜೆಪಿ ಹಲವು ತಂತ್ರಗಳನ್ನು ರೂಪಿಸಿದೆ. ಗ್ರಾಮೀಣಾಭಿವೃದ್ಧಿ ಸಚಿವ
ಕೆ.ಎಸ್. ಈಶ್ವರಪ್ಪ ಅವರು ಕುರುಬ ಸಮುದಾಯವನ್ನು ಎಸ್.ಟಿ. ಪಂಗಡಕ್ಕೆ ಸೇರಿಸಬೇಕು ಎಂದು ರಾಜ್ಯಾದ್ಯಂತ ಹೋರಾಟ ನಡೆಸಿರುವುದು ಕೂಡಾ ಸಿದ್ದರಾಮಯ್ಯ ಅವರ ಶಕ್ತಿಯನ್ನು ಕುಗ್ಗಿಸುವ ತಂತ್ರ.

ಕುರುಬ ಸಮುದಾಯದಲ್ಲಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕಡಿಮೆ ಮಾಡಿದರೆ ಭವಿಷ್ಯದಲ್ಲಿ ಅದು ಬಿಜೆಪಿಗೆ ಲಾಭ ವಾಗಿ, ಕಾಂಗ್ರೆಸ್ ಪಾಲಿಗೆ ನಷ್ಟದ ಬಾಬ್ತಾಗುತ್ತದೆ ಎಂಬುದು ಅದರ ಲೆಕ್ಕಾಚಾರ. ಹೀಗೆ ಒಬ್ಬ ನಾಯಕ ಕರ್ನಾಟಕದ ಮೂರೂ ರಾಜಕೀಯ ಪಕ್ಷಗಳ ನಾಯಕರಿಗೆ ತಲೆನೋವಾಗಿರುವುದು ಇತ್ತೀಚಿನ ಇತಿಹಾಸದ ಅಪರೂಪ.