Thursday, 12th December 2024

ಸಿದ್ದು ಪ್ಯಾಲೇಸಿಗೆ ಈಗ ಸಿಂಹಾಸನವಷ್ಟೇ ಬಾಕಿ

ಮೂರ್ತಿಪೂಜೆ

ಕಳೆದ ವಾರ ಪಕ್ಷದ ವರಿಷ್ಠರ ಸೂಚನೆಯಂತೆ ದಿಲ್ಲಿಗೆ ಹೋಗಿದ್ದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರಿಗೆ ಒಂದು ಸಂಗತಿಯನ್ನು ವಿವರಿಸಿದರಂತೆ.

ಕರ್ನಾಟಕದಲ್ಲಿ ಮುಂದಿನ ವರ್ಷ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಪಕ್ಷ ಯಾವ ಯಾವ ಕಾರಣಗಳಿಗಾಗಿ ಸ್ವಯಂ ಬಲದ ಮೇಲೆ ಗೆದ್ದು ಅಧಿಕಾರ ಹಿಡಿಯುತ್ತದೆ ಎಂಬುದು ಈ ಸಂಗತಿ. ಅಂದ ಹಾಗೆ ಸಿದ್ದರಾಮಯ್ಯ ಅವರ ಪ್ರಕಾರ, ಕರ್ನಾಟಕ ದಲ್ಲಿ ಆಡಳಿತಾರೂಢ ಬಿಜೆಪಿ ಅಂತಃಕಲಹದಿಂದ ನರಳುತ್ತಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಮೇಲೆ ಪ್ರಬಲ ಲಿಂಗಾಯತ ಸಮುದಾಯ ಬಿಜೆಪಿ ವಿರುದ್ಧ ಕುದಿಯುತ್ತಿದೆ.

ಹೀಗಾಗಿ ಮೋದಿ-ಅಮಿತ್ ಶಾ ಜೋಡಿ ಅದೇನೇ ಪ್ಲಾನು ಮಾಡಿದರೂ ಬಿಜೆಪಿ ಕರ್ನಾಟಕ ದಲ್ಲಿ ಗೆದ್ದು ಅಧಿಕಾರ ಹಿಡಿಯುವುದು ಅಸಾಧ್ಯ. ಎಲ್ಲಕ್ಕಿಂತ ಮುಖ್ಯವಾಗಿ ಕಳೆದ ಮೂರು ದಶಕಗಳಲ್ಲಿ ರಾಜ್ಯದ ಅಧಿಕಾರ ಸೂತ್ರ ಹಿಡಿದ ಯಾವ ಪಕ್ಷವೂ ಸತತವಾಗಿ ಎರಡನೇ ಬಾರಿ ಅಧಿಕಾರ ಗಳಿಸಿಲ್ಲ. ಇದಕ್ಕೆ ಆಡಳಿತ ವಿರೋಧಿ ಅಲೆಗಿಂತ ಮುಖ್ಯವಾದ ಕಾರಣ ಆಡಳಿತ ಪಕ್ಷದ ಅಂತಃಕಲಹ. ಇವತ್ತು ರಾಜ್ಯ ಬಿಜೆಪಿ ಕೂಡಾ ಇದೇ ಸಮಸ್ಯೆಯಿಂದ ಬಳಲುತ್ತಿದೆ.

ಮುಂದಿನ ಚುನಾವಣೆಯ ವೇಳೆಗೆ ಯಡಿಯೂರಪ್ಪ ಅವರು ಬಿಜೆಪಿ ಪಕ್ಷದಲ್ಲಿದ್ದರೂ ಲಿಂಗಾಯತರು ಬಿಜೆಪಿಯ ಜತೆ ನಿಲ್ಲುವು ದಿಲ್ಲ. ಹೀಗಾಗಿ ಅಹಿಂದ ಮತ ಬ್ಯಾಂಕಿನ ಗಣನೀಯ ಷೇರುಗಳ ಜತೆ ಒಕ್ಕಲಿಗ, ಲಿಂಗಾಯತ ಸಮುದಾಯಗಳ ಒಂದಷ್ಟು ಷೇರು ಪಡೆದು ರಾಜ್ಯದಲ್ಲಿ ಪಕ್ಷ ಸರಳ ಬಹುಮತ ಗಳಿಸುತ್ತದೆ. ಇದರಲ್ಲಿ ಯಾವ ಅನುಮಾನವೂ ಇಲ್ಲ ಅಂತ ಸಿದ್ದರಾಮಯ್ಯ ವಿವರಿಸಿ ದಾಗ ರಾಹುಲ್ ಗಾಂಧಿ ಖುಷಿಯಾಗಿ ಹೋದರಂತೆ! ಅಂದ ಹಾಗೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಟವಾಗಿರುವುದು ಅಂತಿದ್ದರೆ ಅದು ಕರ್ನಾಟಕದಲ್ಲಿ.

ಹೀಗಾಗಿ ಮುಂದಿನ ಚುನಾವಣೆಯಲ್ಲಿ ಕರ್ನಾಟಕ ಕೈ ಪಾಳೆಯದ ವಶವಾದರೆ 2024 ರ ಲೋಕಸಭಾ ಚುನಾವಣೆಗೆ ಒಂದಷ್ಟು ಟಾನಿಕ್ಕಾದರೂ ಸಿಗುತ್ತದೆ ಎಂಬುದು ರಾಹುಲ್ ಗಾಂಧಿ ಅವರ ಯೋಚನೆ. ಹೀಗೆ ರಾಹುಲ್ ಗಾಂಧಿ ಅವರ ಎದುರು ಸಿದ್ದರಾ ಮಯ್ಯ ಹೇಳಿ ಬಂದ ವಿಷಯ ಏನಿದೆ? ಅದರಲ್ಲಿ ಸಿದ್ದು ಬೆಂಬಲಿಗರಿಗೆ ಯಾವ ಅನುಮಾನವೂ ಇಲ್ಲ. ಕರ್ನಾಟಕದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಪಕ್ಷ ನೂರಾ ಇಪ್ಪತ್ತಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ.

ಸ್ವಯಂಬಲದ ಮೇಲೆ ಸರಕಾರ ರಚಿಸುತ್ತದೆ ಎಂಬುದು ಈ ಬೆಂಬಲಿಗರ ನಂಬಿಕೆ. ಈ ನಂಬಿಕೆ ಬಲವಾಗಿರುವುದರಿಂದಲೇ ಸಿದ್ದರಾಮಯ್ಯ ಅವರ ಈ ಬೆಂಬಲಿಗರು ಬರುವ ಸರಕಾರದಲ್ಲಿ ನಾವು ಏನೇನಾಗಬೇಕು? ಅಂತ ತಮ್ಮ ತಮ್ಮ ಮಾತನಾಡಿ ಕೊಂಡು ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಅದರ ಪ್ರಕಾರ ಹೆಬ್ಬಾಳ ಕ್ಷೇತ್ರದ ಶಾಸಕ ಭೈರತಿ ಸುರೇಶ್ ಅವರು ನಗರಾಭಿವೃದ್ಧಿ ಸಚಿವರಾಗಲಿದ್ದಾರೆ, ಸಿದ್ದರಾಮಯ್ಯ ಅವರ ಹೆಗಲಿಗೆ ಶಾಲಿನ ತರ ಇರುವ ಅಶೋಕ್ ಪಟ್ಟಣ ಅವರು ಲೋಕೋಪಯೋಗಿ ಸಚಿವರಾಗಲಿದ್ದಾರೆ.

ಇನ್ನು ಸಿದ್ದರಾಮಯ್ಯ ಅವರ ಥಿಂಕ್ ಟ್ಯಾಂಕಿನಲ್ಲಿ ಜಾಗ ಪಡೆದಿರುವ ರಾಥೋಡ್ ಅವರು ಇಂಧನ ಖಾತೆ ಬೇಕ್ಕೇ ಬೇಕ್! ಎಂದಿ
zರಂತೆ. ಇದೆಲ್ಲ ಆಗು ಹೋಗುವ ಮಾತಲ್ಲ ಅಂತ ಯಾರಾದರೂ ಹೇಳಬಹುದು. ಅದು ಬೇರೆ ಮಾತು ಬಿಡಿ. ಆದರೆ ಇಲ್ಲಿ ಗಮನಿಸಬೇಕಿರುವುದು ಕರ್ನಾಟಕದಲ್ಲಿ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದೇ ಗೆಲ್ಲುತ್ತದೆ. ಅದರಲ್ಲೂ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಷಯದಲ್ಲಿ ಈ ಬೆಂಬಲಿಗರಿಗೆ ಯಾವ ಮಟ್ಟದ ನಂಬಿಕೆ ಇದೆ ಎಂಬುದನ್ನು.

ಇದೇ ವಿಶ್ವಾಸದಲ್ಲಿ ಸಿದ್ದರಾಮಯ್ಯ ಅವರಿಗೆ, ಆ ಮೂಲಕ ತಮಗೇ ಬೂಸ್ಟರ್‌ಡೋಸ್ ಕೊಟ್ಟುಕೊಳ್ಳಲು ಈ ಬೆಂಬಲಿಗರು ಅಗ
ತಿಂಗಳ ಮೊದಲ ವಾರ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ. ಈ ಸಮಾವೇಶದ ಕೇಂದ್ರ ಬಿಂದು ಸಹಜವಾಗಿ ಸಿದ್ದರಾಮಯ್ಯ. ಅಗ ಮೂರರಂದು ಸಿದ್ದರಾಮಯ್ಯ ಅವರಿಗೆ ಭರ್ತಿ ಎಪ್ಪತ್ತೈದು ವರ್ಷ ತುಂಬುತ್ತದೆ. ಆ ಸಂದರ್ಭ ದಲ್ಲಿ ಅವರನ್ನು ಗೌರವಿಸುವ ಹೆಸರಿನಲ್ಲಿ ಇಡೀ ಕರ್ನಾಟಕಕ್ಕೆ ಒಂದು ಮೆಸೇಜು ರವಾನಿಸುವುದು ಅವರ ಬೆಂಬಲಿಗರ ಉದ್ದೇಶ.

ಅದು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರಕ್ಕೆ ಬರಲಿದೆ. ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ
ಯಾಗಲಿದ್ದಾರೆ ಎಂಬುದು ಈ ಮೆಸೇಜು.

**
ಅಂದ ಹಾಗೆ ಸಿದ್ದರಾಮಯ್ಯ ಅವರ ಬೆಂಬಲಿಗರ ಉತ್ಸಾಹ ಈ ಮಟ್ಟದಲ್ಲಿದೆಯಾದರೂ ರಾಜ್ಯ ಕಾಂಗ್ರೆಸ್‌ನಲ್ಲಿರುವ ಇತರ
ಶಿಬಿರಗಳಲ್ಲಿ ಬೇರೆಯೇ ಲೆಕ್ಕಾಚಾರ ಇದೆ. ಅದರ ಪ್ರಕಾರ, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವ ದಾರಿ ತುಂಬ ದೂರವಿದೆ.
ಯಾಕೆಂದರೆ ಮೊದಲನೆಯದಾಗಿ ನಾಯಕತ್ವದ ಪ್ರಶ್ನೆಯೇ ಬಗೆ ಹರಿದಿಲ್ಲ. ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುತ್ತಿರುವವನು
ನಾನು, ದೊಡ್ಡ ಮಟ್ಟದ ಬಂಡವಾಳ ಹೂಡುತ್ತಿರುವವನು ನಾನು.

ಅಂದ ಮೇಲೆ ಸಹಜವಾಗಿ ನಾನೇ ಸಿಎಂ ಕ್ಯಾಂಡಿಡೇಟ್ ಎಂಬ ಭಾವನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಲ್ಲಿದೆ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರಕ್ಕೆ ಬರಬೇಕು ಎಂದರೆ ಅಹಿಂದ ಮತ ಬ್ಯಾಂಕು ಕೈ ಜೋಡಿಸಬೇಕು. ಆ ಮತ ಬ್ಯಾಂಕು ನನ್ನ ಜತೆಗಿದೆ. ಹೀಗಿರುವಾಗ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆಗೆ ಸಹಜ ಆಯ್ಕೆ ಅಂತಿದ್ದರೆ ಅದು ನಾನೇ ಎಂಬುದು ಸಿದ್ದರಾಮಯ್ಯ ಅವರ ಯೋಚನೆ.

ಇದರ ಪರಿಣಾಮ? ನಾಯಕತ್ವದ ಪ್ರಶ್ನೆ ಇನ್ನೂ ಬಗೆಹರಿಯದೆ ಉಳಿದಿರುವುದರಿಂದ ಪಕ್ಷದ ಮೇಲೆ ಅಧಿಪತ್ಯ ಸಾಧಿಸಲು
ಸಿದ್ದರಾಮಯ್ಯ ಮತ್ತು ಡಿಕೆಶಿ ತಮ್ಮ ತಮ್ಮ ಮಾರ್ಗಗಳನ್ನು ಹಿಡಿದುಕೊಂಡಿದ್ದಾರೆ. ಅದರ ಪ್ರಕಾರ, ರಾಜ್ಯದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಪಡೆಯಲು ಈ ಇಬ್ಬರೂ ನಾಯಕರ ಬೆಂಬಲಿಗರು ಎದ್ದು ನಿಂತಿದ್ದಾರೆ. ಹೀಗೆ ಎದ್ದು ನಿಂತವರಿಗೆ ಕುಮ್ಮಕ್ಕು ನೀಡಿರುವುದು ಈ ಇಬ್ಬರು ನಾಯಕರೇ ಆದ್ದರಿಂದ ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ ಪಕ್ಷದ ಒಳಜಗಳ ಬೀದಿಗೆ ಬರುತ್ತದೆ.

ಅರ್ಥಾತ್, ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ ಅವಕಾಶ ಮಿಸ್ ಮಾಡಿಕೊಳ್ಳುವವರ ಪೈಕಿ ಬಹುತೇಕರು ಕೈ ಪಾಳೆಯವನ್ನು ತೊರೆದು ಅರವಿಂದ ಕೇಜ್ರೀವಾಲ್ ಅವರ ಅಮ್ ಆದ್ಮಿ ಪಾರ್ಟಿಯನ್ನೋ, ಜೆಡಿಎಸ್ ಪಾಳೆಯವನ್ನೋ ಸೇರಲು ಮುಂದಾಗು ತ್ತಾರೆ. ಇದು ಗೊತ್ತಿರುವುದರಿಂದ ಈಗಲೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಜ್ಯ ಕಾಂಗ್ರೆಸ್‌ನ ಹಲ ಟಿಕೆಟ್ ಆಕಾಂಕ್ಷಿಗಳನ್ನು ನೇರವಾಗಿ ಸಂಪರ್ಕಿಸ ತೊಡಗಿದ್ದಾರೆ.

ಅಂದ ಹಾಗೆ, ಆಮ್ ಆದ್ಮಿ ಪಕ್ಷದ ಮುಂಚೂಣಿಯಲ್ಲಿ ಈ ಹಿಂದೆ ಬೆಂಗಳೂರಿನ ಪೋಲೀಸ್ ಕಮೀಷ್ನರ್ ಆಗಿದ್ದ ಭಾಸ್ಕರ್
ರಾವ್ ಅವರೇ ನಿಂತಿದ್ದಾರಲ್ಲ? ಅವರಿಗೆ ಯಾವ ಯಾವ ಕ್ಷೇತ್ರಗಳಲ್ಲಿ ಯಾರು ಪ್ರಬಲರು ಎಂಬುದು ಗೊತ್ತು. ಹೀಗಾಗಿ ಅವರೇ ಕೇಜ್ರಿವಾಲ್ ಅವರಿಗೆ ವಿವರ ನೀಡಿ ಇಂತಿಂತವರನ್ನು ಪಕ್ಷಕ್ಕೆ ಎಳೆದುಕೊಂಡರೆ ಒಳ್ಳೆಯದು ಎಂದು ಹೇಳುತ್ತಿದ್ದಾರೆ. ಭಾಸ್ಕರ್‌ ರಾವ್ ಅವರು ಕೊಡುತ್ತಿರುವ ಫೀಡ್ ಬ್ಯಾಕು ಅರವಿಂದ ಕೇಜ್ರಿವಾಲ್ ಅವರಿಗೆ ದೊಡ್ಡ ಮಟ್ಟದಲ್ಲಿ ನೆರವಾಗುತ್ತಿದೆಯಷ್ಟೇ
ಅಲ್ಲ, ಮುಂದಿನ ಚುನಾವಣೆಯ ವೇಳೆಗೆ ಅಮ್ ಆದ್ಮಿ ಪಕ್ಷ ಕರ್ನಾಟಕದ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸುವ ವಿಶ್ವಾಸಕ್ಕೆ ಬಂದಿದೆ.

ಅಂದ ಹಾಗೆ ಕಾಂಗ್ರೆಸ್ ಪಕ್ಷ ತೊರೆಯುವವರಿಗೆ ಬಿಜೆಪಿ ಆಯ್ಕೆಯ ಪಕ್ಷವಾಗಿ ಉಳಿದಿಲ್ಲ. ಯಾಕೆಂದರೆ ಅಲ್ಲಿ ಈಗಾಗಲೇ ಹಾಲಿ ಶಾಸಕರ ಪೈಕಿ ಯಾರು, ಯಾರಿಗೆ ಟಿಕೆಟ್ ನೀಡಬಾರದು ಅಂತ ನಿರ್ಧರಿಸಿರುವ ಬಿಜೆಪಿ ವರಿಷ್ಠರು ಈಗಾಗಲೇ ನೂರಾ ಅರವತ್ತು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಿದ್ದಾರಂತೆ. ಅಲ್ಲಿ ಅರವತ್ನಾಲ್ಕು ಸೀಟುಗಳು ಮಾತ್ರ ಉಳಿದಿದೆ. ಆದರೆ ಅಲ್ಲೂ ಹಾಲಿ ಟಿಕೆಟ್ ಆಕಾಂಕ್ಷಿಗಳ ಪೈಕಿ ಒಬ್ಬರನ್ನು ಆರಿಸಲು ಬಿಜೆಪಿ ಹೈಕಮಾಂಡ್ ಒಲವು ತೋರುತ್ತದೆ.

ಹೀಗಾಗಿ ಮುಂದಿನ ಚುನಾವಣೆಯ ಸಂದರ್ಭದಲ್ಲಿ ಕೈ ಪಾಳೆಯ ತೊರೆಯುವ ಬಹುತೇಕರ ಕಣ್ಣ ಮುಂದೆ ಕಾಣುವ ಮೊದಲ ಆಯ್ಕೆ ಅಮ್ ಆದ್ಮಿ ಪಾರ್ಟಿ. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್ ವರಿಷ್ಠರು ಕರ್ನಾಟಕದಲ್ಲಿ ಮುಂದಿನ ಮುಖ್ಯಮಂತ್ರಿ ಕ್ಯಾಂಡಿ ಡೇಟ್ ಯಾರು? ಅಂತ ಮೊದಲು ತೀರ್ಮಾನಿಸಬೇಕು. ಹಾಗೆ ತೀರ್ಮಾನ ಮಾಡದಿದ್ದರೆ ನಾವು ಗೆಲ್ಲುವುದು ಕಷ್ಟ ಎಂಬ ಮಾತು ರಾಜ್ಯ ಕಾಂಗ್ರೆಸ್‌ನ ಬೇರೆ ಶಿಬಿರಗಳಲ್ಲಿದೆ.

**
ಅಂದ ಹಾಗೆ, ಈ ನಾಯಕತ್ವದ ಪ್ರಶ್ನೆಗೆ ಈಗ ದೆಹಲಿ ಮಟ್ಟದಲ್ಲಿ ಮತ್ತೊಂದು ಆಯಾಮವೂ ಬಂದಿದೆ. ಅದೆಂದರೆ, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ‘ತ್ರಿ ಬಾದ್ ಶಹಾ’ ಸೂತ್ರ ಅನುಸರಿಸಬೇಕು ಅಂತ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವರಿಷ್ಠರ ಮುಂದೆ ಪ್ರಪೋಸಲ್ಲು ಇಟ್ಟಿದ್ದಾರೆ.

ಅದರ ಪ್ರಕಾರ, ಪಕ್ಷ ಅಧಿಕಾರಕ್ಕೆ ಬಂದರೆ ಶುರುವಿನ ಎರಡು ವರ್ಷಗಳ ಕಾಲ ನನ್ನನ್ನು ಸಿಎಂ ಮಾಡಿ. ಯಾಕೆಂದರೆ ಸುದೀರ್ಘ
ಕಾಲ ಪಕ್ಷ ನಿಷ್ಟನಾಗಿ ದುಡಿದ ನನಗೆ ಇದು ಕೊನೆಯ ಅವಕಾಶ. ಈ ಅವಕಾಶ ತಪ್ಪಿದರೆ ಇನ್ನೆಂದೂ ನನಗೆ ಸಿಎಂ ಹುದ್ದೆ
ಸಿಗುವುದಿಲ್ಲ ಎಂದು ಖರ್ಗೆ ಹೇಳಿದ್ದಾರಂತೆ. ವಾಸ್ತವವಾಗಿ ಧರ್ಮಸಿಂಗ್ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ
ನಂತರದಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದ ನಂಬರ್ ಒನ್ ನಾಯಕ ಅಂತಿದ್ದವರು ಮಲ್ಲಿಕಾರ್ಜುನ ಖರ್ಗೆ. ಸಹಜವಾಗಿಯೇ ಅವರು ಮುಂದಿನ ಸಿಎಂ ಕ್ಯಾಂಡಿಡೇಟ್ ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು.

ಕಾಂಗ್ರೆಸ್ ಹೈಕಮಾಂಡ್ ಕೂಡಾ ಇದೇ ಲೆಕ್ಕಾಚಾರದ ಮೇಲೆ 2008 ರ ವಿಧಾನಸಭಾ ಚುನಾವಣೆಯ ಸಾರಥ್ಯವನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿತ್ತು. ಆ ಹೊತ್ತಿಗೆ ಕರ್ನಾಟಕದಲ್ಲಿ ಕುಮಾರಸ್ವಾಮಿ ಅವರ ವಚನದ್ರೋಹದ ಎಪಿಸೋಡು ದೊಡ್ಡ ಮಟ್ಟದಲ್ಲಿ ಬಿಜೆಪಿಯ ಯಡಿಯೂರಪ್ಪ ಅವರಿಗೆ ನೆರವಾಗಲಿದೆ ಎಂಬ ಭಾವನೆ ಇದ್ದರೂ, ಖರ್ಗೆ ಕರ್ನಾಟಕದ ಮೊಟ್ಟ ಮೊದಲ ದಲಿತ ಮುಖ್ಯಮಂತ್ರಿಯಾಗುತ್ತಾರೆ ಎಂಬ ನಂಬಿಕೆ ದಲಿತ ಸಮುದಾಯದಲ್ಲಿ ವೈರಲ್ ಆಗಿತ್ತು.

ಇದೇ ಕಾರಣಕ್ಕಾಗಿ ಎಡಗೈ-ಬಲಗೈ ಎಂಬ ಭಿನ್ನಾಭಿಪ್ರಾಯವನ್ನು ಮರೆತು ದಲಿತರು ಒಗ್ಗೂಡುವ ಲಕ್ಷಣಗಳು ಕಂಡು ಬಂದಿದ್ದವು. ಒಂದು ವೇಳೆ ಅದು ನಿಜವೇ ಆಗಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವುದು ಅಸಂಭವವೇನೂ ಆಗಿರಲಿಲ್ಲ. ಆದರೆ ಚುನಾವಣೆಯ ಕಾವು ಏರುತ್ತಿದ್ದಂತೆಯೇ ಒಕ್ಕಲಿಗ ನಾಯಕ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕೂಡಾ ಪ್ರಚಾರದ ರಣಾಂಗಣಕ್ಕಿಳಿದು ಬಿಟ್ಟರು. ಯಾವಾಗ ಕೃಷ್ಣ ಕಣಕ್ಕಿಳಿದರೋ? ಆಗ ದಲಿತ ಸಮುದಾಯ ದಲ್ಲಿ ಅಪನಂಬಿಕೆ ವ್ಯಾಪಕವಾಗಿ ಹರಡತೊಡಗಿತು.

ದಲಿತರ ಮತಗಳನ್ನು ಒಗ್ಗೂಡಿಸಿ ಅಧಿಕಾರಕ್ಕೆ ಬರಲು ತಂತ್ರ ಹೂಡಿರುವ ಕಾಂಗ್ರೆಸ್ ಪಕ್ಷ, ಅಧಿಕಾರ ಹಿಡಿದ ನಂತರ ಮಲ್ಲಿಕಾ ರ್ಜುನ ಖರ್ಗೆ ಅವರಿಗೆ ಕೈ ಕೊಟ್ಟು ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣ ಅವರನ್ನು ಮತ್ತೊಮ್ಮೆ ಸಿಎಂ ಹುದ್ದೆಯ ಮೇಲೆ
ಕೂರಿಸುತ್ತದೆ ಎಂಬುದು ಈ ಅಪನಂಬಿಕೆ. ಪರಿಣಾಮ? ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮುಂದಿಟ್ಟ ದಲಿತ ಸಿಎಂ ನಾಣ್ಯ ಮೌಲ್ಯ ಕಳೆದುಕೊಂಡು, ಯಡಿಯೂರಪ್ಪ ಅವರು ಮುಂದಿಟ್ಟ ಕುಮಾರಸ್ವಾಮಿ ಅವರ ವಚನ ದ್ರೋಹದ ನಾಣ್ಯದ ಮೌಲ್ಯ ಹೆಚ್ಚಾಯಿತು.

ಅಷ್ಟೇ ಅಲ್ಲ, ನೂರಾ ಹತ್ತು ಸೀಟುಗಳೊಂದಿಗೆ ಬಿಜೆಪಿ ಅಧಿಕಾರ ಗದ್ದುಗೆಯ ಮೇಲೆ ಕೂರಲು ಸಜ್ಜಾದರೆ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್ ಎಂಭತ್ತರ ಗಡಿ ತಲುಪುವಷ್ಟಕ್ಕೇ ಸುಸ್ತಾಗಿ ಪ್ರತಿಪಕ್ಷದ ಸ್ಥಾನದಲ್ಲಿ ಕೂರಬೇಕಾಯಿತು. ಇಂತಹ ಸಂದರ್ಭ ದಲ್ಲಿ ಸಿದ್ದರಾಮಯ್ಯ ಮೇಲೆದ್ದು ನಿಂತು ಮಾಡಿದ ಅವಾಂತರಗಳ ಪರಿಣಾಮವಾಗಿ ದಿಲ್ಲಿಯ ಕಾಂಗ್ರೆಸ್ ನಾಯಕರು ಸಿದ್ದು ಇಲ್ಲಿಗೆ, ಖರ್ಗೆ ದಿಲ್ಲಿಗೆ ಎಂಬ ಸೂತ್ರವನ್ನು ರೂಪಿಸಿ ಕೈ ತೊಳೆದುಕೊಂಡರು.

ಹೀಗೆ ಅವತ್ತು ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಹೋದ ಮಲ್ಲಿಕಾರ್ಜುನ ಖರ್ಗೆ ಇವತ್ತೂ ಅ ಉಳಿದಿದ್ದಾರೆ. ಆದರೆ ಒಮ್ಮೆ ಕರ್ನಾಟಕದ ಮುಖ್ಯಮಂತ್ರಿಯಾಗಬೇಕು ಎಂಬ ಅವರ ಆಸೆ ಕಡಿಮೆಯಾಗಿಲ್ಲ. ಹೀಗಾಗಿ ಈ ಸಲ ಅವರೂ ಒಂದು ಪಟ್ಟು ಹಾಕಿzರೆ. ಪಕ್ಷ ಅಧಿಕಾರ ಹಿಡಿದರೆ ಮೊದಲ ಎರಡು ವರ್ಷ ನನ್ನನ್ನು ಸಿಎಂ ಮಾಡಿ, ನಂತರದ ಮೂರು ವರ್ಷಗಳನ್ನು ಅನುಕ್ರಮವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಹಂಚಿಬಿಡಿ ಎಂಬುದು ಖರ್ಗೆ ಪ್ರಪೋಸಲ್ಲು.

ಹೀಗೆ ಖರ್ಗೆ ಅವರ ಪ್ರಪೋಸಲ್ಲು ಬಂದು ಕುಳಿತಿರುವಾಗ ಅರ್ಧ ಅವಧಿ ನಿಮಗೆ, ಇನ್ನರ್ಧ ಅವಧಿ ನಿಮಗೆ ಎಂದು ಸಿದ್ದರಾ ಮಯ್ಯ ಮತ್ತು ಡಿಕೆಶಿಗೆ ಹೇಳುವ ಧೈರ್ಯ ಖುದ್ದು ಕಾಂಗ್ರೆಸ್ ಹೈಕಮಾಂಡ್‌ನಲ್ಲೂ ಇಲ್ಲ ಹೀಗಾಗಿ ಮುಂದಿನ ಚುನಾವಣೆ ಮುಗಿಯುವವರೆಗೆ ನಾಯಕತ್ವದ ಪ್ರಶ್ನೆ ಇತ್ಯರ್ಥವಾಗುವುದು ಕಷ್ಟ. ಹೀಗಾಗಿ ಪಕ್ಷ ಅಧಿಕಾರಕ್ಕೆ ಬರುವುದೂ ಕಷ್ಟ ಎಂಬುದು ಇಂತಹ ಶಿಬಿರಗಳಿಂದ ಕೇಳಿ ಬರುತ್ತಿರುವ ಮಾತು.

**
ಈ ಮಧ್ಯೆ ಕಾಂಗ್ರೆಸ್ಸಿನ ಹಿರಿಯ ರೆಹಮಾನ್ ಖಾನ್ ಅವರು ಒಂದು ದೊಡ್ಡ ಸಮಸ್ಯೆಯನ್ನು ಪಕ್ಷದ ಮುಂದಿಟ್ಟಿದ್ದಾರಂತೆ.
ಇತ್ತೀಚೆಗೆ ನಡೆದ ಪಕ್ಷದ ಚಿಂತನ ಮಂಥನ ಕಾರ್ಯಕ್ರಮದ ಸಂದರ್ಭದಲ್ಲಿ ರೆಹಮಾನ್ ಖಾನ್ ಅವರು: ಮುಂದಿನ ಚುನಾವಣೆ ಯಲ್ಲಿ ಅಲ್ಪಸಂಖ್ಯಾತರು ಸಾರಾಸಗಟಾಗಿ ಕಾಂಗ್ರೆಸ್ ಪಕ್ಷದ ಜತೆ ನಿಲ್ಲುತ್ತಾರೆ ಎಂಬುದನ್ನು ಮರೆತುಬಿಡಿ ಅಂತ
ಹೇಳಿದ್ದಾ ರಂತೆ.

ಅವರ ಪ್ರಕಾರ, ಅಲ್ಪಸಂಖ್ಯಾತರ ಪೈಕಿ ಕ್ರಿಶ್ಚಿಯನ್ನರ ಮೇಜರ್ ಷೇರು ಬಿಜೆಪಿ ಜತೆಗಿದೆ. ಅದೇ ರೀತಿ ಮುಸ್ಲಿಮರ ವೋಟುಗಳು ಈ ಸಲ ನಾಲ್ಕು ದಿಕ್ಕುಗಳಲ್ಲಿ ಹರಿದು ಹೋಗಲಿವೆ. ಈ ಪೈಕಿ ಕಾಂಗ್ರೆಸ್ ಪಕ್ಷ ತೊರೆದ ಸಿ.ಎಂ.ಇಬ್ರಾಹಿಂ ಅವರು ಮುಸ್ಲಿಮರ ಶೇಕಡಾ ಇಪ್ಪತ್ತರಷ್ಟು ವೋಟುಗಳನ್ನು ಜೆಡಿಎಸ್ ಕಡೆ ಸೆಳೆಯುವುದು ಗ್ಯಾರಂಟಿ. ಅದೇ ರೀತಿ ಎಸ್‌ಡಿಪಿಐ ಪಾಲಿಗೆ ಹದಿನೈದು ಪರ್ಸೆಂಟ್ ವೋಟುಗಳು ಹೋಗಲಿವೆ. ಇನ್ನು ಎಂಐಎಂ ಕೂಡಾ ಹತ್ತು ಪರ್ಸೆಂಟ್ ವೋಟುಗಳನ್ನು ಸೆಳೆಯಲಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಮುಸ್ಲಿಮರ ಮತಗಳು ಸಾಲಿಡ್ಡಾಗಿ ತಮಗೆ ಬರಲಿವೆ ಎಂದು ನಂಬಿಕೊಂಡರೆ ಅದು ಭ್ರಮೆ ಅಂತ ರೆಹಮಾನ್ ಖಾನ್ ಹೇಳಿದರಂತೆ.

ಇದು ಅಲ್ಪಸಂಖ್ಯಾತರ ಮತಬ್ಯಾಂಕ್ ಕತೆಯಾದರೆ ಉಳಿದಂತೆ ಕುರುಬರು ಈ ಬಾರಿ ಸಾಲಿಡ್ಡಾಗಿ ಕಾಂಗ್ರೆಸ್ ಜತೆ ನಿಲ್ಲುವುದಿಲ್ಲ. ದಲಿತರ ಪೈಕಿ ಎಡಗೈ ಮತದಾರರು ನಮ್ಮ ಜತೆಗಿಲ್ಲ. ಹೀಗಿರುವಾಗ ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಮತ ಬ್ಯಾಂಕ್ ಯಾವುದು? ಅನ್ನುವುದು ರೆಹಮಾನ್ ಖಾನ್ ಪ್ರಶ್ನೆ. ಈ ಪ್ರಶ್ನೆಗೆ ಇದುವರೆಗೆ ಯಾರೂ ಉತ್ತರ ಕೊಟ್ಟಿಲ್ಲವಂತೆ. ಕುತೂಹಲದ ಸಂಗತಿ ಎಂದರೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ, ಬರುವುದಿಲ್ಲವೋ ಎಂಬ ಅಭಿಪ್ರಾಯಗಳ ನಡುವೆ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಣ ಶೀತಲ ಸಮರ ಬೇರೆ ಬೇರೆ ರೂಪ ಪಡೆಯುತ್ತಿದೆ.

ಅಂದ ಹಾಗೆ, ಸಿದ್ದರಾಮಯ್ಯ ಅವರು ತಮ್ಮ ಹುಟ್ಟುಹಬ್ಬದ ಹೆಸರಿನಲ್ಲಿ ಭರ್ಜರಿ ಸಮಾವೇಶ ನಡೆಸಿ ನಾನೇ ಮುಂದಿನ ಸಿಎಂ
ಅಂತ ಮೆಸೇಜು ಕೊಡಲು ಹವಣಿಸುತ್ತಿದ್ದಾರಲ್ಲ? ಇದಕ್ಕೆ ಸಾಕ್ಷಿಯಾಗಲಿ ಅಂತ ಐದು ಲಕ್ಷ ಜನರನ್ನು ಈ ಸಮಾವೇಶಕ್ಕೆ
ಸೇರಿಸಲು ಅವರ ಬೆಂಬಲಿಗರು ತಯಾರಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಡಿ.ಕೆ.ಶಿವಕುಮಾರ್ ಕೂಡಾ ಬೆಂಗಳೂರಿನಲ್ಲಿ ಹತ್ತು ಲಕ್ಷ ಜನರನ್ನು ಸೇರಿಸಿ ಸಮಾವೇಶ ನಡೆಸಲು ಮತ್ತು ಆ ಮೂಲಕ ನಾನೇ ಮುಂದಿನ ಮುಖ್ಯಮಂತ್ರಿ ಅಂತ ಮೆಸೇಜು ರವಾನಿಸಲು ನೀಲ ನಕ್ಷೆ ತಯಾರಿಸುತ್ತಿದ್ದಾರಂತೆ.

ವಸ್ತುಸ್ಥಿತಿ ಎಂದರೆ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಇಂತಹ  ಬೆಳವಣಿಗೆಗಳಿಂದ ಆಡಳಿತಾರೂಢ ಬಿಜೆಪಿ ಮತ್ತು ದೇವೇಗೌಡ -ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷಗಳು ಫುಲ್ಲು ಖುಷಿಯಾಗಿವೆ.