ಅಭಿವ್ಯಕ್ತಿ
ಬಿ.ಎಸ್.ಶಿವಣ್ಣ, ಅಧ್ಯಕ್ಷರು, ಲೋಹಿಯಾ ವಿಚಾರ ವೇದಿಕೆ
ರಾಜ್ಯದಲ್ಲಿ ಆಪರೇಷನ್ ಕಮಲ ಎಂಬ ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದಲ್ಲಿ ನಿರೀಕ್ಷೆಯಂತೆ ಮತ್ತೆ ಒಳಜಗಳ ಪ್ರಾರಂಭವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವದ ವಿರುದ್ಧ ಸ್ವಪಕ್ಷೀಯರೇ ಆಂತರಿಕ ಕಲಹವನ್ನು ಹುಟ್ಟುಹಾಕಿದ್ದಾರೆ.
ಹೀಗಾಗಿ ರಾಜ್ಯದಲ್ಲಿ ಮತ್ತೆ ರಾಜಕೀಯ ಅಸ್ಥಿರತೆಯ ವಾತಾವರಣ ಸೃಷ್ಟಿ ಯಾಗಿದೆ. ಆಡಳಿತದಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪ ದಿಂದಾಗಿ ಆರ್ಥಿಕ ಶಿಸ್ತು ಮಾಯವಾಗಿದೆ. ಅದೆಲ್ಲದಕ್ಕಿಂತ ಮಿಗಿಲಾಗಿ ಕಳೆದ ಎರಡು ವರ್ಷದಿಂದ ಕಾಡುತ್ತಿರುವ ಕೋವಿಡ್ ಮಹಾಮಾರಿ, ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ ಹಿಂದೆಂದೂ ಕಾಣದಂಥ ವಿಷಣ್ಣ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಹಂತದಲ್ಲಿ ಸಹಜವಾಗಿಯೇ ಜನರು ಕಾಂಗ್ರೆಸ್‌ನತ್ತ ಮತ್ತೊಮ್ಮೆ ದೃಷ್ಟಿ ಹರಿಸುತ್ತಿದ್ದಾರೆ. ಆದರೆ ಈ ಹಂತದಲ್ಲಿ ಪಕ್ಷದ ಆಂತರಿಕ ವರ್ತುಲದಲ್ಲಿ ಸೃಷ್ಟಿಯಾಗಿರುವ ಸಣ್ಣ ಅಸಹನೆಯ ವಾತಾವರಣ ಕಳವಳಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು? ಎಂಬುದನ್ನು ಹೈಕಮಾಂಡ್ ಘೋಷಿಸಿಲ್ಲ. ಚುನಾವಣೆಗೆ ಮುಂಚಿತವಾಗಿಯೇ ಇಂಥವರೇ ಮುಖ್ಯಮಂತ್ರಿ ಎಂದು
ಸಾರುವುದು ಹಾಗೂ ಅವರ ನಾಯಕತ್ವದ ಚುನಾವಣೆ ಎದುರಿಸುವ ಪರಂಪರೆಯನ್ನು ಕಾಂಗ್ರೆಸ್ ಎಂದೂ ಪಾಲಿಸಿಲ್ಲ. ಇನಿದ್ದರೂ ಸಾಮೂಹಿಕ ನಾಯಕತ್ವ.
ಚುನಾವಣೆಯಲ್ಲಿ ಗೆದ್ದ ನಂತರ ಶಾಸಕಾಂಗ ಪಕ್ಷದ ಸಭೆ ನಡೆಸಿ ಶಾಸಕರ ಅಭಿಪ್ರಾಯವನ್ನು ಆಧರಿಸಿ ಯಾರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡ ಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ವಸ್ತುಸ್ಥಿತಿ ಹೀಗಿರುವಾಗ ಭಾವಿಮುಖ್ಯಮಂತ್ರಿ ಯಾರೆಂಬ ವಿಚಾರದಲ್ಲಿ ಸೃಷ್ಟಿಯಾಗಿರುವ ಗೊಂದಲ ಸದ್ಯದ ಮಟ್ಟಿಗೆ ಅನಪೇಕ್ಷಿತ ಎಂಬುದರಲ್ಲಿ ಎರಡು ಮಾತಿಲ್ಲ.
ಅಂದಹಾಗೆ ಈ ಗೊಂದಲ ಸೃಷ್ಟಿಗೆ ಕಾರಣವಾಗಿರುವುದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ನೀಡಿದ ವೈಯಕ್ತಿಕ ಹೇಳಿಕೆಯಿಂದ. ಅದು ಅವರ ಸ್ವಂತ
ಅಭಿಪ್ರಾಯ ಮಾತ್ರ. ಆದರೆ ಈ ಕಾರಣಕ್ಕಾಗಿ ಮಾಜಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಯಾವ ಕಾರಣಕ್ಕೂ ಸಾಧುವಲ್ಲ. ಹಾಗೆ ನೋಡಿದರೆ ಈ ರೀತಿಯ ಅಭಿಪ್ರಾಯವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿಯೇ ಇಲ್ಲ. ಸಿದ್ದರಾಮಯ್ಯ ಜನರ ಚಿತ್ತಭಿತ್ತಿಯಲ್ಲಿ ಸದಾ ಮುಖ್ಯಮಂತ್ರಿಯೇ ! ಐದು ವರ್ಷಗಳ ಕಾಲ ಅವರು ನೀಡಿದ ಹಗರಣರಹಿತ ಆಡಳಿತ, ಆರ್ಥಿಕ ಶಿಸ್ತು, ಕಾನೂನು ಸುವ್ಯವಸ್ಥೆಯ ಗಟ್ಟಿ ಪಾಲನೆ, ಜನಪರ ಕಾರ್ಯಕ್ರಮಗಳು, ಪ್ರಣಾಳಿಕೆಯಲ್ಲಿ ಪಕ್ಷ ನೀಡಿದ ಭರವಸೆಗಳ ಶೇ.೧೦೦ರಷ್ಟು ಪಾಲನೆ, ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರಕ್ಕೆ ಎಳ್ಳಿನಷ್ಟು ಅವಕಾಶ ನೀಡದಿರುವಿಕೆ ಸೇರಿದಂತೆ ಹತ್ತು ಹಲವು ಕಾರಣಗಳಿಗಾಗಿ ಅವರ ಆಡಳಿತ ಇನ್ನೂ ಜನರ ಮನಸಿನಲ್ಲಿ ಹಚ್ಚಹಸುರಾಗಿದೆ.
ಅಧಿಕಾರವಿರಲಿ, ಇಲ್ಲದೇ ಇರಲಿ ಜನರ ಚಿತ್ತಭಿತ್ತಿಯಲ್ಲಿ ಸಿದ್ದರಾಮಯ್ಯ ಶಾಶ್ವತ ಮುಖ್ಯಮಂತ್ರಿ. ಬಹುಶಃ ದೇವರಾಜ್ ಅರಸು, ರಾಮಕೃಷ್ಣ ಹೆಗಡೆಯವರ ಬಳಿಕ ಈ ರೀತಿ ಚಿರಕಾಲ ಉಳಿಯುವಂಥ ಆಡಳಿತವನ್ನು ನೀಡಿದ್ದು ಸಿದ್ದರಾಮಯ್ಯ ಮಾತ್ರ. ಹೀಗಾಗಿ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂದು ಜನರು ಹಾಗೂ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಬಯಸಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅದೇ ರೀತಿ ಜನ ತಮ್ಮನ್ನು ಮತ್ತೆ ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತಿzರೆ ಎಂಬ ಸತ್ಯ ಸಿದ್ದರಾಮಯ್ಯನವರಿಗೂ ಗೊತ್ತು. ಈ ರೀತಿಯ ಸೃಷ್ಟಿಯಾಗುತ್ತಿರುವ ಜನಾಭಿಪ್ರಾಯದ ಕಾರಣಕ್ಕಾಗಿ ಅವರನ್ನು ಅಪರಾಧಿ ಸ್ಥಾನ ದಲ್ಲಿ ನಿಲ್ಲಿಸುವುದೂ ಸರಿಯಲ್ಲ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಅಂತಿಮವಾಗಿ ನಿಲ್ಲುವುದು ಜನಾಭಿಪ್ರಾಯ ಮಾತ್ರವಲ್ಲವೇ? ಹೀಗಾಗಿ ಈ ವಿಚಾರ ದಲ್ಲಿ ಅನಗತ್ಯ ಗೊಂದಲ ನಿರ್ಮಾಣ ಮಾಡುವುದನ್ನು ತಕ್ಷಣ ನಿಲ್ಲಿಸಬೇಕಿದೆ.
ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಜಮೀರ್ ಅಹ್ಮದ್ ನೀಡಿದ ಹೇಳಿಕೆ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ದೊಡ್ಡ ಸಂಗತಿಯಾಗಿ ಬೆಳೆಯುವುದಕ್ಕೆ ಅವಕಾಶ ನೀಡಬಾರದಿತ್ತು. ಏಕೆಂದರೆ ಜಮೀರ್ ಸಿದ್ದರಾಮಯ್ಯ ಅವರ ದೀರ್ಘ ಕಾಲದ ಒಡನಾಡಿಯಲ್ಲ. 2018ರ ವರೆಗೂ ಅವರು ಜೆಡಿಎಸ್ ನಲ್ಲಿದ್ದವರು. ಇತ್ತೀಚೆಗಷ್ಟೇ ಅವರು ಕಾಂಗ್ರೆಸ್ ಸೇರಿ ಸಿದ್ದರಾಮಯ್ಯ ಜತೆ ಗುರುತಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಜತೆಗೆ 30 ವರ್ಷಗಳಿಗೂ ಹೆಚ್ಚು ಕಾಲ ಒಡನಾಟ ಇಟ್ಟುಕೊಂಡು ಅವರ ಜತೆಗೆ ಕಾಂಗ್ರೆಸ್ ಸೇರಿದವರೆಲ್ಲರೂ ಈಗ ಕಾಂಗ್ರೆಸ್ ಸಂಸ್ಕೃತಿಯೊಂದಿಗೆ ಬೆರೆತು ಬಿಟ್ಟಿದ್ದಾರೆ.
ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಽಕಾರವನ್ನೂ ನಡೆಸಿಯಾಗಿದೆ. ಹೀಗಾಗಿ ಅವರನ್ನು ಹಾಗೂ ಅವರ ಜತೆಯಲ್ಲಿ ಕಾಂಗ್ರೆಸಿಗ
ರಾದವರನ್ನು ಈಗ ಅನುಮಾನ ದೃಷ್ಟಿಯಿಂದ ನೋಡುವ ವಾತಾವರಣವೇ ಇಲ್ಲ. ಅಂಥವರ‍್ಯಾರು ಚುನಾವಣೆ ಗೆಲ್ಲುವುದಕ್ಕೆ ಮುನ್ನವೇ ಸಿದ್ದರಾಮಯ್ಯ ಮುಂದಿನ
ಮುಖ್ಯಮಂತ್ರಿ ಎಂಬ ಹೇಳಿಕೆ ನೀಡಿಲ್ಲ. ಹೀಗಾಗಿ ಜಮೀರ್ ಹೇಳಿಕೆ ಒಂದು ದಿನ ಮಾತ್ರ ಮಾಧ್ಯಮದಲ್ಲಿ ಸುದ್ದಿಯಾಗಿ ಅಂತ್ಯ ಕಾಣುವ ವಿಚಾರವಾಗಿತ್ತು.
ಆದಾಗಿಯೂ ಸಿದ್ದರಾಮಯ್ಯನವರ ವಿಚಾರದಲ್ಲಿ ಕಾಂಗ್ರೆಸಿನ ಕೆಲ ನಾಯಕರು ಅನಪೇಕ್ಷಿತ ಆತಂಕಕ್ಕೆ ಒಳಗಾದರು ಎಂದೇ ಹೇಳಬಹುದು.
ಕಾಂಗ್ರೆಸಿನಲ್ಲಿ ನಡೆದ ಈ ಸಣ್ಣ ವಿದ್ಯಮಾನವನ್ನು ತಮ್ಮ ಒಳಜಗಳ ಮುಚ್ಚಿಕೊಳ್ಳುವುದಕ್ಕೆ ಬಿಜೆಪಿ ಬಳಸಿಕೊಳ್ಳುತ್ತಿದೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಬಿಜೆಪಿ ಹಾಗೂ ಜೆಡಿಎಸ್ ಈ ವಿಚಾರದಲ್ಲಿ ಯಶಸ್ವಿಯಾಗುವುದಿಲ್ಲ. ಏಕೆಂದರೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸಿನ ಪ್ರತಿಯೊಬ್ಬರೂ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟಿದ್ದಾರೆ. ಇನ್ನು ಡಿ.ಕೆ. ಶಿವಕುಮಾರ್ ಅವರು ಪಕ್ಷದ ರಾಜ್ಯಾಧ್ಯಕ್ಷರಾದ ದಿನದಿಂದಲೂ ಸಂಘಟನಾ ಕೆಲಸಕ್ಕೆ
ಹೆಚ್ಚಿನ ಬಲ ನೀಡಿದ್ದಾರೆ. ಅವರು ಅಧ್ಯಕ್ಷರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ ದಿನವೇ ಸಾಮೂಹಿಕ ನಾಯಕತ್ವದ ಮಂತ್ರ ಪಠಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕಾಗಿ ನಾನು ವಿಧಾನಸೌಧದ ಮೆಟ್ಟಿಲಾಗುವುದಕ್ಕೆ ಸಿದ್ದ ಎಂದು ಹೇಳಿದ್ದಾರೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮಧ್ಯೆ
ಒಳಜಗಳವಿದೆ ಎಂಬುದು ಒಪ್ಪಲಾಗದು. ಉಪಚುನಾವಣೆ ಸೇರಿದಂತೆ ಹಲವಾರು ವಿಚಾರಗಳಲ್ಲಿ ಇವರಿಬ್ಬರೂ ಜಂಟಿಯಾಗಿಯೇ ತೀರ್ಮಾನ ತೆಗೆದು ಕೊಂಡಿದ್ದಾರೆ. ಹೀಗಿರುವಾಗ ಮೂರನೇ ವ್ಯಕ್ತಿಗಳು ಸೃಷ್ಟಿಸುವ ಗೊಂದಲಕ್ಕೆ ನಾಯಕರ ನಡುವಿನ ನಂಬಿಕೆ’ ಕದಡಿ ಹೋಗುವುದಕ್ಕೆ ಸಾಧ್ಯವೇ? ಖಂಡಿತ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿವಕುಮಾರ್ ಬಂಡೆ’ಯಂತೆ ಅವರ ಬೆನ್ನಿಗೆ ನಿಂತಿದ್ದರು. ಹಾಗೆ ನೋಡಿದರೆ ದೇಶದ ಇತರೆಲ್ಲ ರಾಜ್ಯ ಗಳಿಗಿಂತಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚು ಶಕ್ತಿಶಾಲಿಯಾಗಿದೆ. ಈ ಹಿಂದೆ ಇಂದಿರಾ ಗಾಂಽಯವರ ಕಾಲದಲ್ಲೂ ಕಾಂಗ್ರೆಸ್ ಮರಳಿ ಶಕ್ತಿ ಸಂಚಯ ಮಾಡಿಕೊಂಡಿದ್ದು ಕರ್ನಾಟಕದ. ಆಗಲೂ ರಾಜ್ಯದಲ್ಲಿ ಘಟಾನುಘಟಿ ನಾಯಕರಿದ್ದರು.
ಪ್ರತಿಯೊಬ್ಬರೂ ಮುಖ್ಯಮಂತ್ರಿಯಾಗುವುದಕ್ಕೆ ಬೇಕಾದ ಅರ್ಹತೆ ಹೊಂದಿದವರೇ ಆಗಿದ್ದರು. ಈಗಲೂ ಕಾಂಗ್ರೆಸ್ ಮರಳಿ ಬಲಗಳಿಸಿಕೊಳ್ಳುವುದು ಕರ್ನಾಟಕ ದಿಂದಲೇ ಎಂಬುದರಲ್ಲಿ ಎರಡು ಮಾತಿಲ್ಲ. ನಮ್ಮಲ್ಲಿ ನಾಯಕತ್ವಕ್ಕೆ ಕೊರತೆ ಇಲ್ಲ. ಹೀಗಾಗಿ ಬಿಜೆಪಿಯ ದುರಾಡಳಿತ ಕೊನೆಗಾಣಿಸುವುದಕ್ಕೆ ನಮ್ಮ ಸಂಘಟಿತ ಶಕ್ತಿಯಿಂದ ಖಂಡಿತ ಸಾಧ್ಯವಿದೆ. ಆದರೆ ಒಡಲ ಕಿಚ್ಚು ಕಡಲಿನ ಸ್ವರೂಪ” ಪಡೆಯದಂತೆ ನೋಡಿಕೊಳ್ಳುವುದರ ಜಾಣತನ ಅಡಗಿದೆ.
ಅಂದ ಹಾಗೆ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲನ್ನು ಕೇಳುವುದಕ್ಕೂ ಮುಖ್ಯಮಂತ್ರಿ
ಯಡಿಯೂರಪ್ಪ ಧೈರ್ಯ ಮಾಡುತ್ತಿಲ್ಲ. ಕಳೆದ ವರ್ಷದ ಜಿಎಸ್‌ಟಿ ಪರಿಹಾರವನ್ನು ಸಾಲದ ರೂಪದಲ್ಲಿ ಪಡೆಯುವಂಥ ಸ್ಥಿತಿಯನ್ನು ಬಿಜೆಪಿ ನಿರ್ಮಾಣ
ಮಾಡಿಕೊಂಡಿದೆ. ಅದು ನಮ್ಮ ಹಕ್ಕು. ಆದರೆ ಕೇಂದ್ರದ ಅನುದಾನವನ್ನು ನಾವು ಭಿಕ್ಷೆ ಎಂದು ಸ್ವೀಕರಿಸುವಂತಾಗಿದೆ. ರಾಜ್ಯದಿಂದ 25 ಮಂದಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದರೂ ಕೇಂದ್ರದ ಈ ತಾರತಮ್ಯ ನೀತಿಯನ್ನು ಪ್ರಶ್ನಿಸುತ್ತಿಲ್ಲ. ಪ್ರಧಾನಿ ಮೋದಿ ಯವರ ಎದುರು ಕರ್ನಾಟಕದ ಅಳಲನ್ನು ತೋಡಿಕೊಳ್ಳುವುದಕ್ಕೆ ಯಡಿಯೂರಪ್ಪನವರು ಅಂಜುತ್ತಿದ್ದಾರೆ.
ಕಳೆದ ವರ್ಷ ನಾವು ಅನುಭವಿಸಿದ ಭೀಕರ ಪ್ರವಾಹದಿಂದಾಗಿ ಹಲವರು ಪ್ರಾಣ ಕಳೆದುಕೊಂಡರು. 50 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ಸ್ವತ್ತು
ನಷ್ಟವಾಯಿತು. ಆದರೆ ಕೇಂದ್ರ ಸರಕಾರ ಪ್ರಕೃತಿ ವಿಕೋಪ ನಿಧಿಯ ಮೂಲಕ ಪರಿಹಾರ ನೀಡುವಾಗಲೂ ರಾಜ್ಯಕ್ಕೆ ಅನ್ಯಾಯ ಎಸಗಿತು. ಕೋವಿಡ್ ನಿಯಂತ್ರಣಕ್ಕೆ ಲಸಿಕೆ ವಿತರಣೆಯಲ್ಲೂ ತಾರತಮ್ಯ ಎಸಗಲಾಗುತ್ತಿದೆ. ಉತ್ತರದ ರಾಜ್ಯಕ್ಕೆ ನೀಡಿದ ಆರೋಗ್ಯ ನೆರವಿಗೆ ಹೋಲಿಸಿದರೆ ಕರ್ನಾಟಕಕ್ಕೆ ಸಿಕ್ಕ ಪಾಲು ತೀರಾ ಕಡಿಮೆ. ಆದರೆ ಜಿಎಸ್‌ಟಿ ಸಂಗ್ರಹಣೆಯಲ್ಲಿ ಮಾತ್ರ ನಮ್ಮದು ಸಿಂಹಪಾಲು. ಇಂಥ ಅನ್ಯಾಯಗಳನ್ನು ಪ್ರಶ್ನಿಸುವುದಕ್ಕೆ ಬಿಜೆಪಿಯಲ್ಲಿ ನಾಯಕತ್ವವೇ ಉಳಿದಿಲ್ಲ. ಬಿಜೆಪಿ ಹುಟ್ಟಿನಿಂದಲೂ ವಿರೋಧಿಸಿಕೊಂಡು ಬಂದಿದ್ದ ವಂಶಾಡಳಿತ’ವೇ ಇಂದು ಕರ್ನಾಟಕದಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.
ಮುಖ್ಯಮಂತ್ರಿ ಹಾಗೂ ಸಚಿವರ ಕುಟುಂಬ ವರ್ಗ ಆಡಳಿತದಲ್ಲಿ ನಡೆಸುತ್ತಿರುವ ಹಸ್ತಕ್ಷೇಪ ಸಂವಿಧಾನದ ಆಶಯಗಳನ್ನೇ ಬುಡಮೇಲು ಮಾಡುತ್ತಿದೆ. ರಾಜ್ಯದ
ಬೊಕ್ಕಸ ಬರಿದಾಗಿದೆ. ಇದೆಲ್ಲವನ್ನೂ ಪ್ರಶ್ನೆ ಮಾಡುವ ಶಕ್ತಿ ಹಾಗೂ ನೈತಿಕ ಸ್ಥೆ ರ್ಯ ಇರುವುದು ಸಿದ್ದರಾಮಯ್ಯನವರಲ್ಲಿ ಮಾತ್ರ. ಕಾಂಗ್ರೆಸ್‌ನ ತತ್ತ್ವ ಸಿದ್ಧಾಂತದಲ್ಲಿ ಅಚಲ ನಿಷ್ಠೆ ಹೊಂದಿರುವ ಸಿದ್ದರಾಮಯ್ಯ ಪಕ್ಷದ ವರಿಷ್ಠರ ಸೂಚನೆಗೆ ವಿರುದ್ಧವಾಗಿ ಎಂದು ನಡೆದುಕೊಂಡಿಲ್ಲ, ನಡೆದುಕೊಳ್ಳುವುದೂ ಇಲ್ಲ. ಹೀಗಾಗಿ ಈ ಹಂತದಲ್ಲಿ ಶುಭ್ರ ವ್ಯಕ್ತಿತ್ವದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್, ಬಿಜೆಪಿ ವಿರುದ್ಧ ಆತ್ಯಂತಿಕ ಯುದ್ಧ ಸಾರಬೇಕಿದೆ.
ಭಾವಿ ನಾಯಕತ್ವಕ್ಕಾಗಿನ ಹೋರಾಟದಲ್ಲಿ ರಾಜಕೀಯ ಶತ್ರುಗಳು ಶಕ್ತಿ ಸಂಚಯ ಮಾಡಿಕೊಳ್ಳುವುದಕ್ಕೆ ಖಂಡಿತ ಅವಕಾಶ ನೀಡಬಾರದು. ಈ ಸತ್ಯವನ್ನು ಕಾಂಗ್ರೆಸ್‌ನ ಹೊಸ ಜೋಡೆತ್ತುಗಳಾದ ಸಿದ್ದರಾಮಯ್ಯ- ಶಿವಕುಮಾರ್’ ಈಗಾಗಲೇ ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ನಾಯಕತ್ವದ ಹೆಸರಿನಲ್ಲಿ ಅನ್ಯರು ಸೃಷ್ಟಿಸುವ ಗೊಂದಲ ಯಾವುದೇ ಫಲ ನೀಡುವುದಿಲ್ಲ