ವರ್ತಮಾನ
maapala@gmail.com
ಜನರಿಂದ ಆಯ್ಕೆಯಾಗಿ ಬಂದವರಿಗೆ ಮತದಾರರ ನೆನಪಾಗುವುದು ಮತ್ತೆ ಚುನಾವಣೆ ಬಂದಾಗ ಎಂಬ ಮಾತು ಸತ್ಯವಾಗುತ್ತಿದೆ. ಸುಮಾರು
ನಾಲ್ಕೂವರೆ ವರ್ಷ ರಾಜಧಾನಿ ಬೆಂಗಳೂರಿಗೆ ಸೀಮಿತವಾಗಿದ್ದ ರಾಜಕೀಯ ಪಕ್ಷಗಳ ನಾಯಕರು ಜನರ ಬಳಿ ತೆರಳುತ್ತಿದ್ದಾರೆ.
ಯಾತ್ರೆಗಳ ಪರ್ವವೇ ಆರಂಭವಾಗಿದೆ. ಆಡಳಿತಾರೂಢ ಬಿಜೆಪಿಯ ಜನ ಸಂಕಲ್ಪ ಯಾತ್ರೆ, ಪ್ರತಿಪಕ್ಷಗಳಾದ ಕಾಂಗ್ರೆಸ್ ನಿಂದ ಪ್ರಜಾಧ್ವನಿ ಯಾತ್ರೆ, ಜೆಡಿಎಸ್‌ನಿಂದ ಪಂಚರತ್ನ ಯಾತ್ರೆ ರಾಜ್ಯಾದ್ಯಂತ ನಡೆಯುತ್ತಿದೆ. ಚುನಾವಣೆ ನಡೆಯುವವರೆಗೂ ಈ ಯಾತ್ರೆಗಳು ಮುಂದುವ ರಿಯಲಿದ್ದು, ಇದುವರೆಗೆ ತಮ್ಮ ಪಾಡಿಗೆ ತಾವು ಎಂಬಂತಿದ್ದ ರಾಜಕೀಯ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡು ಊರು ಸುತ್ತುತ್ತಿದ್ದಾರೆ. ಅದರಲ್ಲೂ ಮತ್ತೆ ಅಽಕಾರಕ್ಕೇರುವ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಅಂತೂ ಉಳಿದೆರಡು ಪಕ್ಷಗಳಿಗಿಂತ ಹೆಚ್ಚು ಗಂಭೀರವಾಗಿ ಯಾತ್ರೆಗಳನ್ನು ಮಾಡುತ್ತಿದೆ. ಆ ಮೂಲಕ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ, ಮುಖ್ಯಮಂತ್ರಿ ಪದವಿ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಟ್ಟಾಗಿದ್ದಾರೆ ಎಂದು ಬಿಂಬಿಸಲು ಪ್ರತ್ನಿಸುತ್ತಿದೆ.
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಭಿನ್ನಮತ ಹೊಸದೇನೂ ಅಲ್ಲ. ಜೆಡಿಎಸ್ ತೊರೆದು ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ ದಿನದಿಂದಲೂ ಶುರುವಾಗಿತ್ತು. ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್ ೨೦೧೩ರ ವಿಧಾನಸಭೆ ಚುನಾವಣೆಯಲ್ಲಿ ಯಾವಾಗ ಸೋತು ಸುಣ್ಣವಾದರೋ ಆಗಿನಿಂದ ಇವರಿಬ್ಬರ ನಡುವಿನ ಆಂತರಿಕ ಸಂಘರ್ಷ ತೀವ್ರಗೊಂಡಿತು. ಪರಮೇಶ್ವರ್ ಸೋತಿದ್ದ ರಿಂದ ಸಹಜವಾಗಿಯೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು.
ಹೀಗಾಗಿ ಮುಖ್ಯಮಂತ್ರಿಯಾಗುವ ಉದ್ದೇಶದಿಂದಲೇ ಸಿದ್ದರಾಮಯ್ಯ ಷಡ್ಯಂತ್ರ ನಡೆಸಿ ಪರಮೇಶ್ವರ್ ಅವರನ್ನು ಸೋಲಿಸಿದರು ಎಂಬ ಆರೋಪವೂ ಕೇಳಿಬಂತು. ಅವರಿಬ್ಬರ ನಡುವಿನ ವೈಮನಸ್ಯ ಎಷ್ಟರ ಮಟ್ಟಿಗೆ ಇತ್ತು ಎಂದರೆ ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಶಿವಕುಮಾರ್ ಅವರನ್ನು ಸಚಿವ ಸಂಪುಟಕ್ಕೂ ಸೇರಿಸಿಕೊಳ್ಳಲಿಲ್ಲ. ಕೊನೆಗೆ ಹೈಕಮಾಂಡ್ ಸೂಚನೆ ಮೇರೆಗೆ ಅವರನ್ನು ಸಂಪುಟಕ್ಕೆ ಸೇರಿಸಿ ಕೊಳ್ಳುವ ಅನಿವಾರ್ಯ ಸ್ಥಿತಿ ಬಂತು. ನಂತರ ೨೦೧೮ರ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಎದುರಾದಾಗ ಸಿದ್ದರಾಮಯ್ಯ ಅವರಿಗೆ ಯಾವೊಂದು ಸುಳಿವನ್ನೂ ನೀಡದೆ ಡಿ.ಕೆ.ಶಿವಕುಮಾರ್ ಏಕಾಏಕಿ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರ ಮನೆಗೆ ತೆರಳಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಲು ಮುಂದಾದರು.
ಆಗ ಶಿವಕುಮಾರ್ ಮತ್ತು ಜೆಡಿಎಸ್ ನಾಯಕರ ಮುಂದೆ ಇದ್ದ ಒಂದೇ ಗುರಿ ಎಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗ ಬಾರದು ಎಂದು. ಹೀಗಾಗಿ ಸಿದ್ದರಾಮಯ್ಯ ಅವರ ಆಕ್ಷೇಪದ ಮಧ್ಯೆಯೇ ಕಾಂಗ್ರೆಸ್ ವರಿಷ್ಠರ ಮನವೊಲಿಸಿದ ಡಿ.ಕೆ.ಶಿವಕುಮಾರ್ ಎಚ್.ಡಿ.ಕುಮಾರಸ್ವಾಮಿ ನೇತೃತ್ವ ದಲ್ಲಿ ಮೈತ್ರಿ ಸರಕಾರ ರಚಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮತ್ತೆ ಮುಂದುವರಿಯುವಂತಾಯಿತು. ಒಂದು ವರ್ಷದ ಬಳಿಕ ಈ ಮೈತ್ರಿ ಕೊನೆಗೊಂಡು ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕೆಲ ಶಾಸಕರು ರಾಜೀನಾಮೆ ನೀಡಿ ಸರಕಾರದಿಂದ ಹೊರಬಂದು ಬಿಜೆಪಿ ಅಧಿಕಾರಕ್ಕೆ ಬರುವಂತೆ ನೋಡಿಕೊಂಡರು. ಈ ರೀತಿ ಕಾಂಗ್ರೆಸ್‌ನಿಂದ ಹೊರಬಂದು ಸರಕಾರ ಉರುಳಲು ಕಾರಣ ರಾದ ಬಹುತೇಕರು ಸಿದ್ದರಾಮಯ್ಯ ಆಪ್ತರಾಗಿದ್ದುದರಿಂದ ಸರಕಾರ ಉರುಳಲು ಅವರೇ ಕಾರಣ ಎಂಬ ಆರೋಪಗಳೂ ಆಗ ಕೇಳಿಬಂತು.
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೂ ಇವರಿಬ್ಬರ ಸಂಬಂಧ ಸರಿಹೋಗಲಿಲ್ಲ. ಇನ್ನೇನು ಎಲ್ಲವೂ ಸರಿಯಾಗುತ್ತದೆ ಎನ್ನುವಾಗ ಬೆಂಬಲಿಗರು ಏನಾದರೊಂದು ಹೇಳಿಕೆ ನೀಡಿ ಅದಕ್ಕೆ ಹುಳಿ ಹಿಂಡುತ್ತಿದ್ದರು. ಇಬ್ಬರೂ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳಾಗಿದ್ದರಿಂದ ಅವರ ಬೆಂಬಲಿಗರು ನಮ್ಮವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದರು. ಇದು ಎಷ್ಟರ ಮಟ್ಟಿಗೆ ಹೆಚ್ಚಾಯಿತು ಎಂದರೆ ಯಾವತ್ತೂ ತಮ್ಮ ಜನ್ಮದಿನ ಆಚರಿಸಿಕೊಳ್ಳದ ಸಿದ್ದರಾಮಯ್ಯ, ತಮ್ಮ ಬೆಂಬಲಿಗರ ಮೂಲಕ ‘ಸಿದ್ದರಾಮೋತ್ಸವ’ ಮಾಡಿ ಆ ಮೂಲಕ ಕಾಂಗ್ರೆಸ್ ನಲ್ಲಿ ನಾನೇ ಈಗಲೂ ಅತ್ಯಂತ ಜನಪ್ರಿಯ ನಾಯಕ ಎಂದು ತೋರಿಸಿಕೊಂಡರು.
ಅಷ್ಟೇ ಅಲ್ಲ, ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಆರಂಭಿಸಿದಾಗ ತಾನು ಏಕಾಂಗಿಯಾಗಿ ರಾಜ್ಯಾದ್ಯಂತ ಯಾತ್ರೆ ಕೈಗೊಂಡು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ ಎಂದು ಸಿದ್ದರಾಮಯ್ಯ ಹೊರಟುನಿಂತರು. ಆಗಲೇ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರಿಗೆ ಇವರಿಬ್ಬರ ಆಂತರಿಕ ಭಿನ್ನಮತದ ಬಿಸಿ ಮುಟ್ಟಿದ್ದು. ಒಂದೆಡೆ ಸಿದ್ದರಾಮಯ್ಯ ಅವರನ್ನು ಬಿಡುವಂತೆಯೂ ಇಲ್ಲ, ಮತ್ತೊಂದೆಡೆ ಪಕ್ಷ ರಾಷ್ಟ್ರ ಮಟ್ಟದಲ್ಲಿ ಅಥವಾ ಇತರೆ ರಾಜ್ಯಗಳಲ್ಲಿ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಗಟ್ಟಿಯಾಗಿ ನಿಂತು ಸಮಸ್ಯೆಯಿಂದ ಪಾರು ಮಾಡಿದ ಡಿ.ಕೆ.ಶಿವಕುಮಾರ್ ಅವರನ್ನು ನಿರ್ಲಕ್ಷಿಸುವಂತಿಲ್ಲ.
ಅದಕ್ಕಿಂತಲೂ ಮುಖ್ಯವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಸುಮ್ಮನಿದ್ದರೆ ರಾಜ್ಯದಲ್ಲಿ ಪಕ್ಷ ಸಂಘಟನೆ ಕಷ್ಟ ಎಂಬುದು ಹೈಕಮಾಂಡ್ ನಾಯಕರಿಗೂ ಗೊತ್ತಿತ್ತು. ಪಕ್ಷ ಸಂಘಟನೆ ಮಾಡಬೇಕಾದರೆ ಜನಬೆಂಬಲದ ಜತೆಗೆ ಹಣ ಕಾಸಿನ ಬೆಂಬಲವೂ ಅಗತ್ಯ. ಡಿ.ಕೆ.ಶಿವಕುಮಾರ್ ಮುಂದೆ ಬಾರದೇ ಇದ್ದರೆ ಹಣಕಾಸಿನ ಬೆಂಬಲ ಸಿಗುವುದು ಕಷ್ಟಸಾಧ್ಯ. ಈ ಕಾರಣ ಕ್ಕಾಗಿ ಮಧ್ಯೆಪ್ರವೇಶಿಸಿದ ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಿ ಮೊದಲು ಇಬ್ಬರೂ ಸೇರಿ ಜಂಟಿ ಯಾತ್ರೆ ನಡೆಸುವ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿ ಇದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಿ ಎಂದು ಫರ್ಮಾನು ಹೊರಡಿಸಿದರು. ಪ್ರತ್ಯೇಕ ಯಾತ್ರೆ ನಡೆಸಬೇಡಿ ಎಂದರೆ ಸಿದ್ದರಾಯ್ಯ ಕೇಳುವವರಲ್ಲ. ಅದೇ ರೀತಿ ಸಿದ್ದರಾಮಯ್ಯ ಯಾತ್ರೆ ನಡೆಸಿದರೆ ಶಿವಕುಮಾರ್ ಸುಮ್ಮನಿರುವವರಲ್ಲ ಎಂಬುದು ವರಿಷ್ಠರಿಗೂ ಗೊತ್ತು.
ಈ ಕಾರಣಕ್ಕಾಗಿಯೇ ಮೊದಲು ಜಂಟಿ ಯಾತ್ರೆ, ಬಳಿಕ ಪ್ರತ್ಯೇಕ ಯಾತ್ರೆ ಮಾಡಿ ಎಂದು ಹೇಳಿದರು. ಅದರಂತೆ ಇಬ್ಬರೂ ಜಂಟಿ ಯಾತ್ರೆ ನಡೆಸಿ ಇದೀಗ ಪ್ರತ್ಯೇಕ ಯಾತ್ರೆ ಆರಂಭಿಸಿದ್ದಾರೆ. ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ಯಾತ್ರೆ ಆರಂಭಿಸಿದ್ದರೆ, ಡಿ.ಕೆ.ಶಿವಕುಮಾರ್ ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕದಲ್ಲಿ ಯಾತ್ರೆ ನಡೆಸುತ್ತಿದ್ದಾರೆ. ಕಾಂಗ್ರೆಸ್‌ಗೆ ನಿಜವಾದ ಸಮಸ್ಯೆ ಆರಂಭವಾಗಿರುವುದೇ ಈಗ. ಜಂಟಿ ಯಾತ್ರೆ ಬಳಿಕ ಇಬ್ಬರೂ ಒಬ್ಬಂಟಿಗಳಾಗಿ ಪ್ರತ್ಯೇಕ ಯಾತ್ರೆ ಆರಂಭಿಸಿದ್ದು, ಹಳೆಯ ಸಮಸ್ಯೆ ಮರುಕಳಿಸುತ್ತದೆಯೇ ಎಂಬ ಆತಂಕ ಪಕ್ಷದ ಎಲ್ಲರನ್ನೂ ಕಾಡುತ್ತಿದೆ.
ಏಕೆಂದರೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸುಮ್ಮನಿದ್ದರೂ ಅವರ ಬೆಂಬಲಿಗರು, ಅಭಿಮಾನಿಗಳು ಸುಮ್ಮನಿರುವ ಜಾಯಮಾನ ದವರಲ್ಲ. ಈಗಾಗಲೇ ಕಾಂಗ್ರೆಸ್‌ಗೆ ಅದರ ಅನುಭವವಾಗಿದೆ. ಮೇಲಾಗಿ ಪ್ರತ್ಯೇಕ ಸಮಾರಂಭಗಳಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾವೇ ಮುಖ್ಯಮಂತ್ರಿಯಾಗುವುದಾಗಿ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಮತ್ತೊಂದೆಡೆ ಯಾತ್ರೆಗೆ ಜನ ಸೇರಿಸುವುದು ಇಬ್ಬರಿಗೂ ಪ್ರತಿಷ್ಠೆಯಾಗಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆಗೆ ಹೆಚ್ಚು ಜನ ಸೇರಿದರೆ ಸಹಜವಾಗಿಯೇ
ಅವರು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿತವಾಗುತ್ತದೆ.
ಅದೇ ರೀತಿ ಡಿ.ಕೆ.ಶಿವಕುಮಾರ್ ಯಾತ್ರೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರೆ ಅವರ ಪರ ವಾತಾವರಣ ಸೃಷ್ಟಿಯಾ ಗುತ್ತದೆ. ಇದು ಚುನಾವಣೆ ಮೇಲೆ ಪರಿಣಾಮ ಬೀರುವುದು ಖಚಿತ. ಏಕೆಂದರೆ, ಇಬ್ಬರ ಪೈಕಿ ಯಾರೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಂಡರೂ ಅವರನ್ನು ಮುಖ್ಯಮಂತ್ರಿ ಮಾಡಲು ನಾನೇಕೆ ಶ್ರಮಿಸಬೇಕು ಎಂದು ಇನ್ನೊಬ್ಬರು ಸುಮ್ಮ ನಾಗುವುದು ಖಚಿತ. ಇದರ ಪರಿಣಾಮ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಈ ಮಧ್ಯೆ ಡಿ.ಕೆ.ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ದಾಳಿ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ವಿಚಾರಣೆಗೆ ಜಾರಿ ನಿರ್ದೇಶನಾಲಯ ಮತ್ತೆ ತರಾತುರಿ ತೋರುವ ಸಾಧ್ಯತೆ ಇದೆ.
ಇನ್ನೊಂದೆಡೆ ಸಿ.ಡಿ. ಪ್ರಕರಣದಲ್ಲಿ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಪಟ್ಟು ಹಿಡಿದಿರುವ ರಮೇಶ್ ಜಾರಕಿಹೊಳಿ ಅದಕ್ಕಾಗಿ ಕೇಂದ್ರ ಗೃಹ ಸಚಿವರ ಬೆನ್ನು ಬಿದ್ದಿದ್ದಾರೆ. ಇದರಿಂದ ಡಿ.ಕೆ.ಶಿವಕುಮಾರ್ ಮಾನಸಿಕ ಕಿರಿಕಿರಿ ಅನುಭವಿಸುವುದು ಖಚಿತ. ಅಂತಹ ಸಂದರ್ಭದಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬಿಂಬಿತವಾದರೆ ಶಿವಕುಮಾರ್ ಮತ್ತಷ್ಟು ವ್ಯಗ್ರರಾಗುವುದು ಸಹಜ. ಆಗಲೂ ಕಾಂಗ್ರೆಸ್ ಸಮಸ್ಯೆಗೆ ಸಿಲುಕಿಕೊಳ್ಳಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಹೈಕಮಾಂಡ್ ನಾಯಕರು ಇಬ್ಬರ ಮೇಲೂ ಒಂದು ಕಣ್ಣಿಟ್ಟಿದ್ದಾರೆ. ಯಾತ್ರೆಯ ವೇಳೆ ಗೊಂದಲಕ್ಕೆ ಕಾರಣವಾಗುವ ಹೇಳಿಕೆಗಳನ್ನು ನೀಡದಂತೆ ತಾಕೀತು ಮಾಡಿದ್ದಾರೆ. ಅದೇನೇ ಇದ್ದರೂ ಇಬ್ಬರ ಯಾತ್ರೆಗಳು ಮುಗಿಯುವವರೆಗೆ ಕಾಂಗ್ರೆಸ್‌ಗೆ ಆತಂಕ ಮಾತ್ರ ತಪ್ಪಿದ್ದಲ್ಲ.
ಲಾಸ್ಟ್ ಸಿಪ್: ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯುಸ್ಸು ಎನ್ನುತ್ತಾರೆ. ಆದರೆ, ದೊಣ್ಣೆ ಬೀಸುತ್ತಲೇ ಇದ್ದರೆ….!
Read E-Paper click here