Wednesday, 9th October 2024

ಶೋಷಿತ ವರ್ಗದ ನಿಜದನಿ ಸಿದ್ದರಾಮಯ್ಯ

ಗುಣಗಾನ

ಬಿ.ಎಸ್.ಶಿವಣ್ಣ

ಅರ್ಥವ್ಯವಸ್ಥೆಯನ್ನು ಹಳಿಗೆ ತರುವಲ್ಲಿ ಸಿದ್ದರಾಮಯ್ಯ ಎಷ್ಟು ನಿಷ್ಣಾತರು ಎಂಬುದಿನ್ನೂ ಕೆಲವರಿಗೆ ಅರ್ಥವಾ ದಂತಿಲ್ಲ. ರಾಜ್ಯದ ಅರ್ಥವ್ಯವಸ್ಥೆ ಹದಗೆಟ್ಟಾಗ ಹಣಕಾಸು ಸಚಿವರಾಗಿ ಅವರು ಅತ್ಯಂತ ಪರಿಣಾಮಕಾರಿಯಾಗಿ ‘ವ್ಯಾಟ್’ ತೆರಿಗೆ ಪದ್ಧತಿಯನ್ನು ಜಾರಿ ಮಾಡಿ ದೇಶದ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂಬುದು ಗಮನಾರ್ಹ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರತಿಷ್ಠಿತ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಪ್ರದಾನ ಕಾಯಕ್ರಮ ಹಲವು ದೃಷ್ಟಿಕೋನಗಳಿಂದ ಮಹತ್ವ ಪಡೆದುಕೊಂಡಿತ್ತು. ಹೀಗಾಗಿ ರಾಜಕೀಯ ಆಸಕ್ತರೆಲ್ಲರೂ ಈ ಕಾರ್ಯಕ್ರಮದ ಹಾಗೂ ಪ್ರಧಾನಿ ಮೋದಿಯವರ ಭಾಷಣದ ಬಗ್ಗೆ ವಿಶೇಷ ಲಕ್ಷ್ಯವನ್ನು ಇಟ್ಟಿದ್ದರು. ಆದರೆ ಮೋದಿಯವರು ಈ ವೇದಿಕೆಯನ್ನು ಕರ್ನಾಟಕ ಸರಕಾರದ ಟೀಕೆಗೆ ಬಳಸಿಕೊಂಡು ಬಿಟ್ಟರು.

‘ಕರ್ನಾಟಕದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಸರಕಾರದ ಕೆಲ ಘೋಷಣೆಗಳ ಕೆಟ್ಟ ಪರಿಣಾಮ ಈಗ ಗೊತ್ತಾಗುತ್ತಿದೆ. ಈ ಸರಕಾರ ತನ್ನ ಸ್ವಾರ್ಥಕ್ಕಾಗಿ ರಾಜ್ಯದ ಬೊಕ್ಕಸ ವನ್ನು ಖಾಲಿಮಾಡುತ್ತಿದೆ. ಇದರ ಸಂಕಷ್ಟವನ್ನು ಜನರು ಅನುಭವಿಸಬೇಕಾಗುತ್ತದೆ.
ಜಾಗತಿಕ ಹೂಡಿಕೆದಾರರ ನೆಚ್ಚಿನ ತಾಣವಾದ ಬೆಂಗಳೂರಿನ ಮೇಲೆ ಇದರಿಂದ ಪ್ರತಿ ಕೂಲ ಪರಿಣಾಮವಾಗುತ್ತದೆ’ ಎಂದು ಮೋದಿ ತಮ್ಮ ಭಾಷಣದ ಮೂಲಕ ಷರಾ ಬರೆದರು. ಅವರ ಒಟ್ಟು ಭಾಷಣದ ಗುರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೆ ತಂದ ಜನಪರವಾದ ‘ಗ್ಯಾರಂಟಿ’ ಯೋಜನೆಗಳನ್ನು ದೂಷಿಸುವುದೇ ಆಗಿತ್ತು.

ಆ ಮೂಲಕ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಮಗಾದ ಮುಖಭಂಗವನ್ನು ತೀರಿಸಿಕೊಳ್ಳಲು ಮೋದಿಯವರು  ಯತ್ನಿಸಿ ದರು ಎನ್ನದೇ ವಿಧಿಯಿಲ್ಲ. ಕರ್ನಾಟಕದ ಸೋಲು ಅವರನ್ನು ಎಷ್ಟರಮಟ್ಟಿಗೆ ಕಾಡುತ್ತಿರಬಹುದು ಎಂಬುದು ಇದರಿಂದ ವೇದ್ಯವಾಗುವುದರ ಜತೆಗೆ, ಸದ್ಯದಲ್ಲೇ ಎದುರಾಗುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಜನರು ತಮಗೆ ಯಾವ ರೀತಿ ಪಾಠ ಕಲಿಸಬಹುದೆಂಬ ಆತಂಕ ಅವರ ಭಾಷಣದಲ್ಲಿ ಎದ್ದುಕಾಣುತ್ತಿದ್ದುದು ಅರಿವಾಗುತ್ತದೆ. ಅಷ್ಟರ ಮಟ್ಟಿಗೆ ರಾಜ್ಯ ಸರಕಾರ ಮೋದಿಯವರ ನಿದ್ರೆಗೆಡಿಸಿದೆ ಎಂದರೆ, ಸಿದ್ದರಾಮಯ್ಯನವರು ಜಾರಿಮಾಡುತ್ತಿರುವ ‘ಗ್ಯಾರಂಟಿ’ ಯೋಜನೆಗಳು ಜನರನ್ನು ನೇರವಾಗಿ ತಲುಪುತ್ತಿವೆ ಎಂದೇ ಅರ್ಥವಲ್ಲವೇ? ಕರ್ನಾಟಕದ ಅರ್ಥವ್ಯವಸ್ಥೆಯ ಬಗ್ಗೆ ಆತಂಕ ವ್ಯಕ್ತಪಡಿಸುವ ಮೋದಿಯವರಿಗೆ, ಕೇಂದ್ರದಲ್ಲಿನ ಕಳೆದ ೯ ವರ್ಷಗಳ ತಮ್ಮ ಅಧಿಕಾರದ ಬಳಿಕ ದೇಶದ ಹಣಕಾಸು ಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಎಂಬುದರ ಅರಿವಿಲ್ಲದಂತೆ ತೋರುತ್ತದೆ.

ದೇಶಕ್ಕೆ ಮೋದಿ ಸರಕಾರ ಕೊಟ್ಟ ಬೆಲೆಯೇರಿಕೆಯ ಬಿಸಿಗೆ ಹೈರಾಣಾದ ಜನರು, ಸಿದ್ದರಾಮಯ್ಯನವರ ‘ಜನಪರ ಅರ್ಥ
ವ್ಯವಸ್ಥೆ’ಯಲ್ಲಿ ಪರಿಹಾರ ಕಂಡುಕೊಂಡಿದ್ದಾರೆಂಬುದು ಮೋದಿಯವರಿಗೆ ಅರ್ಥವಾದಂತೆ ಕಾಣುತ್ತಿಲ್ಲ. ಹೀಗಾಗಿಯೇ ಈ ಟೀಕೆ ಮತ್ತು ಅಪಪ್ರಚಾರ. ಸಿದ್ದರಾಮಯ್ಯನವರನ್ನು ಇಷ್ಟೆಲ್ಲ ಟೀಕಿಸುವ ಮೋದಿ ಮತ್ತಿತರ ಬಿಜೆಪಿ ನಾಯಕರಿಗೆ, ಹಣಕಾಸು ವ್ಯವಸ್ಥೆ ಯನ್ನು ಹಳಿಗೆ ತರುವಲ್ಲಿ ಸಿದ್ದರಾಮಯ್ಯ ಎಷ್ಟು ನಿಷ್ಣಾತರು ಎಂಬುದಿನ್ನೂ ಅರ್ಥವಾದಂತಿಲ್ಲ.

ರಾಜ್ಯದ ಅರ್ಥವ್ಯವಸ್ಥೆ ವಿಷಮ ವಾಗಿದ್ದ ಸಂದರ್ಭದಲ್ಲಿ ಹಣಕಾಸು ಸಚಿವರಾಗಿ ಸಿದ್ದರಾಮಯ್ಯ ಅತ್ಯಂತ  ಪರಿಣಾಮಕಾರಿ ಯಾಗಿ ‘ವ್ಯಾಟ್’ ತೆರಿಗೆ ಪದ್ಧತಿಯನ್ನು ಅನುಷ್ಠಾನಗೊಳಿಸಿ ಇಡೀ ದೇಶದ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂಬುದನ್ನು ಮತ್ತೆ ನೆನಪು ಮಾಡಿಕೊಡಬೇಕಾಗಿ ಬಂದಿದೆ. ಯಾರೆಷ್ಟೇ ಟೀಕಿಸಿದರೂ, ಈ ರಾಜ್ಯದ ಅತ್ಯಂತ ಬದ್ಧತೆಯುಳ್ಳ, ಜನಪರ ಹಾಗೂ ಮೌಲ್ಯಾ ಧಾರಿತ ರಾಜಕಾರಣಿ ಸಿದ್ದರಾಮಯ್ಯ ಎಂಬುದನ್ನು ತೆಗೆದುಹಾಕಲಾಗದು.

ಬಿಜೆಪಿಯ ಭ್ರಷ್ಟ ಆಡಳಿತದಿಂದ ಬೇಸತ್ತಿದ್ದ ಜನ ಅವರ ನೇತೃತ್ವದ ಕಾಂಗ್ರೆಸ್‌ಗೆ ಐತಿಹಾಸಿಕ ವಿಜಯ ನೀಡಿದ್ದು ಇದೇ ಕಾರಣ ಕ್ಕಾಗಿ. ಮೋದಿಯವರಂಥ ನಾಯಕರೇ ತಿಂಗಳುಗಟ್ಟಲೆ ಕರ್ನಾಟಕದಲ್ಲಿ ಠಿಕಾಣಿ ಹೂಡಿ ಬಿಜೆಪಿಯ ಪರ ಪ್ರಚಾರ ನಡೆಸಿದ್ದರೂ, ಕಾಂಗ್ರೆಸ್ ಪರ ಫಲಿತಾಂಶ ಬಂದಿದ್ದರ ಹಿಂದಿನ ಸತ್ಯವನ್ನು ಅರ್ಥಮಾಡಿಕೊಂಡರೆ ಕೇಂದ್ರದ ಬಿಜೆಪಿ ಸರಕಾರಕ್ಕೆ ಆತ್ಮಾವ ಲೋಕನ ಮಾಡಿಕೊಳ್ಳುವ ಅರ್ಹತೆ ಲಭಿಸಬಹುದು!

ಈಗಿನ ಬಹುತೇಕ ರಾಜಕಾರಣಿಗಳಂತೆ ಸಿದ್ದರಾಮಯ್ಯ ನೇರವಾಗಿ ವಿಧಾನಸೌಧ ಪ್ರವೇಶಿಸಿದವರಲ್ಲ. ೧೯೭೮ರಲ್ಲಿ ಮೈಸೂರು ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ಶ್ರೀಸಾಮಾನ್ಯರ ಸಮಸ್ಯೆ ಏನೆಂಬುದನ್ನು ತಳಹಂತದಲ್ಲೇ ಮನಗಂಡರು.
೧೯೮೦ ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. ಆದರೆ ಬಾಲ್ಯದಿಂದಲೂ ಛಲಕ್ಕೆ ಹೆಸರಾದ ಅವರು ೧೯೮೩ರಲ್ಲಿ ವಿಧಾನಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು.

ಆಗ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ, ರಾಮಕೃಷ್ಣ ಹೆಗಡೆ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಸಿದ್ದರಾಮಯ್ಯ ಬೆಂಬಲಿಸಿದರು. ಅವರಲ್ಲಿದ್ದ ನಾಯಕತ್ವ ಗುಣವನ್ನು ಗಮನಿಸಿದ ಹೆಗಡೆ, ‘ಕನ್ನಡ ಕಾವಲು ಸಮಿತಿ’ಯ ಅಧ್ಯಕ್ಷರನ್ನಾಗಿ ನೇಮಿಸಿದರು. ಅವಧಿ ಪೂರ್ವ ಚುನಾವಣೆ ಎದುರಾದಾಗ ಮತ್ತೆ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದ ಅವರು ಹೆಗಡೆ ಸಂಪುಟದಲ್ಲಿ ಮೊದಲ ಬಾರಿಗೆ ರೇಷ್ಮೆ ಮತ್ತು ಪಶು ಸಂಗೋಪನಾ ಸಚಿವರಾದರು.

ಮುಂದೆ ಬೊಮ್ಮಾಯಿ ಸಂಪುಟದಲ್ಲಿ ಸಾರಿಗೆ ಸಚಿವರಾಗಿ, ದೇವೇಗೌಡ ಸಂಪುಟದಲ್ಲಿ ಹಣಕಾಸು ಸಚಿವರಾಗಿ, ಜೆ.ಎಚ್. ಪಟೇಲ್ ಸಂಪುಟದಲ್ಲಿ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿ, ಧರ್ಮಸಿಂಗ್ ಸಂಪುಟದಲ್ಲೂ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲೇನೂ ಸಿದ್ದರಾಮಯ್ಯನವರ ರಾಜಕೀಯ ಬದುಕು ಗೆಲುವಿನಿಂದಲೇ ಕೂಡಿರಲಿಲ್ಲ; ಕೊಪ್ಪಳ ದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು.

ದೇವೇಗೌಡರ ಬಣದಲ್ಲಿ ಗುರುತಿಸಿಕೊಂಡಿದ್ದರಿಂದ ‘ಹೆಗಡೆ-ವಿರೋಧಿ’ ಎಂಬ ಟೀಕೆಯೂ ಎದುರಾಗಿತ್ತು. ಆದರೆ ಸಿದ್ದರಾಮಯ್ಯ ನವರಿಗೆ ನೈಜಸವಾಲು ಎದುರಾಗಿದ್ದು ಧರ್ಮಸಿಂಗ್ ಸಂಪುಟದಲ್ಲಿಉಪಮುಖ್ಯಮಂತ್ರಿಯಾಗಿದ್ದಾಗ. ಆಗ ಶೋಷಿತ ಸಮು ದಾಯದ ಪರ ದನಿಯೆತ್ತಿ ‘ಅಹಿಂದ’ ಹೋರಾಟ ಸಂಘಟಿಸಿದ್ದಕ್ಕಾಗಿ ಜಾತ್ಯತೀತ ಜನತಾ ದಳದಿಂದ ಅವರನ್ನು ಉಚ್ಚಾಟಿಸ ಲಾಯಿತು. ಆದರೆ ಈ ಹಿನ್ನಡೆಯಿಂದ ಎದೆಗುಂದದ ಸಿದ್ದರಾಮಯ್ಯ ಅಹಿಂದ ಹೋರಾಟವನ್ನು ಸಂಘಟಿಸಿದರು. ಹಳೇ ಮೈಸೂರು ಭಾಗದಲ್ಲಿ ದೇವೇಗೌಡರಂಥ ರಾಜಕಾರಣಿಗಳನ್ನು ಎದುರುಹಾಕಿಕೊಂಡು ಬೆಳೆಯುವುದು ಸುಲಭವಲ್ಲ.

ಆದರೂ ಅಂಜದ ಸಿದ್ದರಾಮಯ್ಯ ‘ಅಖಿಲ ಭಾರತ ಪ್ರಗತಿಪರ ಜನತಾದಳ’ ಎಂಬ ಪಕ್ಷವನ್ನು ಸ್ಥಾಪಿಸಿದರು. ಆದರೆ ಅವರಲ್ಲಿದ್ದ
ನಾಯಕತ್ವ ಗುಣವನ್ನು ಗಮನಿಸಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಂಗ್ರೆಸ್ಸಿಗೆ ಅವರನ್ನು ಕರೆ ತಂದರು. ಆಗ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ದಲ್ಲಿ ನಡೆದ ಚುನಾವಣೆಯ ಕಥೆ ನಾಡಿಗೇ ಗೊತ್ತು. ಹಣಬಲ, ರಾಜಕೀಯ ಬಲದ ವಿರುದ್ಧ ಸಿದ್ದರಾಮಯ್ಯ ಅವರ ನೈತಿಕಬಲವೇ ಕೊನೆಗೂ ಗೆದ್ದಿತ್ತು. ಮುಂದೆ ವಿಪಕ್ಷ ನಾಯಕರಾಗಿ, ಬಿಜೆಪಿ ಸರಕಾರದ ಭ್ರಷ್ಟಾಚಾರದ ವಿರುದ್ಧ ತೋಳುತಟ್ಟಿ ಹೋರಾಡಿದ ಸಿದ್ದರಾಮಯ್ಯ ಅವರ ಬೆಂಗಳೂರು-ಬಳ್ಳಾರಿ ಪಾದಯಾತ್ರೆ ಈ ಕ್ಷಣಕ್ಕೂ ಐತಿಹಾಸಿಕ ಹೋರಾಟ. ೨೦೧೩ರಲ್ಲಿ ಕಾಂಗ್ರೆಸ್ ಗೆದ್ದು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, ಶೋಷಿತ ವರ್ಗದ, ಸಾಮಾಜಿಕ ನ್ಯಾಯದ ನಿಜದನಿ ಮಾತ್ರವಲ್ಲ, ನಾಡಿನ ಸಾಕ್ಷಿಪ್ರಜ್ಞೆಯಾಗಿಯೂ ಬೆಳೆದಿದ್ದಾರೆ.

ನುಡಿದಂತೆ ನಡೆದರು

ಇಂದು ಬಹುತೇಕ ರಾಜಕೀಯ ಪಕ್ಷಗಳಿಗೆ ಪ್ರಣಾಳಿಕೆ ಎಂಬುದು ಚುನಾವಣಾ ಕಾಲದ ಪ್ರಚಾರದ ಸರಕು. ಆದರೆ ಸಿದ್ದರಾಮಯ್ಯ ಮಾತ್ರ ಈ ಮಾತಿಗೆ ಅಪವಾದ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಅವರು ‘ಅನ್ನಭಾಗ್ಯ’ ಎಂಬ ಜನಪರ ಯೋಜನೆಯನ್ನು ಜಾರಿಗೆ ತಂದರು. ‘ಹಸಿವುಮುಕ್ತ ಕರ್ನಾಟಕ ನಿರ್ಮಾಣ’ ಎಂಬ ಕಾಂಗ್ರೆಸ್ ಪ್ರಣಾಳಿಕೆಯ ಭಾಗ ಇದಾಗಿತ್ತು.

ಬಳಿಕ, ಬಡವರ ಪರವಾದ ಸಿದ್ದರಾಮಯ್ಯ ಅವರ ನಿರ್ಧಾರವು ಕ್ಷೀರಭಾಗ್ಯ, ಕೃಷಿಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಸೇರಿದಂತೆ ಹಲವು ರೂಪದಲ್ಲಿ ಜಾರಿಗೆ ಬಂತು. ಪ್ರಣಾಳಿಕೆಯಲ್ಲಿದ್ದ ೧೬೦ಕ್ಕೂ ಹೆಚ್ಚು ಭರವಸೆಗಳ ಪೈಕಿ ೧೫೮ನ್ನು ಈಡೇರಿಸಿ ‘ನುಡಿದಂತೆ ನಡೆದ’ ರಾಜ್ಯದ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರಿಗೆ ಸಂವಿಧಾನವೇ ಪಂಚಾಂಗ, ಜನಕಲ್ಯಾಣವೇ ಧ್ಯೇಯವಾಗಿತ್ತು.

ಅದಾಗಿಯೂ ವಿರೋಧಿಗಳ ಅಪಪ್ರಚಾರ ಹಾಗೂ ಯೋಜಿತ ಸುಳ್ಳುಗಳಿಂದ ೨೦೧೮ರಲ್ಲಿ ಅವರು ಅಧಿಕಾರ ಕಳೆದುಕೊಂಡಿದ್ದು ಕನ್ನಡಿಗರ ದೌರ್ಭಾಗ್ಯ. ಆದರೆ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕನ್ನಡಿಗರು ಮತ್ತೆ ಅವರ ನಾಯಕತ್ವ ಒಪ್ಪಿಕೊಂಡು
ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದ್ದಾರೆ. ಈ ಬಾರಿಯೂ ಅವರು ನುಡಿದಂತೆ ನಡೆಯುವ ಮೂಲಕ ಮತದಾರರ ಆಶೋತ್ತರಗಳನ್ನು ಈಡೇರಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಬಳಿಕ ನಡೆಸಿದ ಮೊದಲ ಸಂಪುಟ ಸಭೆಯಲ್ಲಿ ೫ ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆಯಿತ್ತು ಈಗ ಯಶಸ್ವಿಯಾಗಿ ಜಾರಿ ಗೊಳಿಸುವ ಹಾದಿಯಲ್ಲಿದ್ದಾರೆ. ನಿಂತುಹೋಗಿದ್ದ ಇಂದಿರಾ ಕ್ಯಾಂಟೀನ್‌ಗೆ ಮರುಜೀವ ನೀಡಿ, ನಗರ ಪ್ರದೇಶದ ಬಡವರ ಹಸಿವನ್ನು ನೀಗಿಸುತ್ತಿದ್ದಾರೆ.

ಇದಲ್ಲವೇ ಒಬ್ಬ ಜನನಾಯಕನಲ್ಲಿ ಇರಬೇಕಾದ ಗುಣ? ಎಲ್ಲಕ್ಕಿಂತ ಮುಖ್ಯವಾಗಿ, ಶೋಷಿತ ಸಮುದಾಯದ ಪರ ಅವರಿಗಿರುವ ಬದ್ಧತೆ ಪ್ರಶ್ನಾತೀತ. ಇತ್ತೀಚೆಗೆ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಪರಿಷತ್ ಸಭೆಯಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾರ್ಯಕ್ರಮಗಳಿಗೆ ೩೪ ಸಾವಿರ ಕೋಟಿ ರು. ಮೊತ್ತದ ಕ್ರಿಯಾಯೋಜನೆಯನ್ನು ಅನುಮೋದಿಸಿದ್ದಾರೆ. ಇದು ರಾಜ್ಯದ ಒಟ್ಟು
ಬಜೆಟ್‌ನ ಶೇ.೨೪ರಷ್ಟಾಗುತ್ತದೆ. ಆ ಮೂಲಕ ತಳ ಸಮುದಾಯದ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ಮೈಲುಗಲ್ಲನ್ನೇ ನೆಟ್ಟಿದ್ದು  ಭವಿಷ್ಯದಲ್ಲಿ ಇದರ ಫಲ ವನ್ನು ನಾವು ಕಾಣಬಹುದಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ೯ ವರ್ಷ ದಲ್ಲಿ ಇಂಥದೊಂದು ಯೋಜನೆಯನ್ನು ರಾಷ್ಟ್ರದ ಜನರಿಗೆ ಕೊಡಲು ಸಾಧ್ಯವಾಗಿದೆಯೇ? ಸಿದ್ದರಾಮಯ್ಯ ನವರ ವಿರುದ್ಧ ಟೀಕಾಸ ಪ್ರಯೋಗಿಸುವ ಮೋದಿ ಈ ನಿಟ್ಟಿನಲ್ಲಿ ಒಮ್ಮೆಯಾದರೂ ಆತ್ಮಶೋಧನೆ ನಡೆಸಿದ್ದಾರೆಯೇ?

ಸ್ವಂತಕ್ಕೆ ಸ್ವಲ್ಪ
ಈಗಿನ ಕಾಲದಲ್ಲಿ ಪುಡಿ ರಾಜಕಾರಣಿಯ ಹೆಸರಿನಲ್ಲೂ ಕೋಟ್ಯಂತರ ರುಪಾಯಿ ನಗದು, ಆಸ್ತಿ ನೋಡಬಹುದು. ಆದರೆ
ಸಿದ್ದರಾಮಯ್ಯ ಇದಕ್ಕೆ ಅಪವಾದ. ಕರ್ನಾಟಕದಲ್ಲಿ‘ವ್ಯಾಮೋಹ’ ಇಲ್ಲದ ರಾಜಕಾರಣಿ ಯಾರಾದರೂ ಇದ್ದರೆ ಅದು ಸಿದ್ದರಾ ಮಯ್ಯ ಮಾತ್ರ. ಏಕೆಂದರೆ, ಈ ಹಿಂದೆ ಅಧಿಕಾರದಲ್ಲಿದ್ದಾಗ ಅವರು ಆಸ್ತಿ-ಅಂತಸ್ತು ಗಳಿಕೆಗೆ ಒತ್ತು ನೀಡಲಿಲ್ಲ, ಈಗಲೂ
ನೀಡುತ್ತಿಲ್ಲ. ಅವರ ಬಳಿ ಭ್ರಷ್ಟಾಚಾರ ಸುಳಿಯದು.

ಖಜಾನೆ ಕಾಯುವ ಕಾಳಿಂಗಸರ್ಪದಂತೆ ರಾಜ್ಯದ ಸಂಪತ್ತನ್ನು ಕಾಯುವ ಅವರ ಬದ್ಧತೆಯೂ ಅನನ್ಯ. ಸಿದ್ದರಾಮಯ್ಯ ಅವರ ಬಳಿ ಈಗಲೂ ಒಂದು ‘ಹೈ ಎಂಡ್’ ಮೊಬೈಲ್ ಫೋನ್ ಇಲ್ಲ ಎಂದರೆ ನಿಮಗಚ್ಚರಿಯಾಗಬಹುದು. ಹಣ, ಆಸ್ತಿ-ಅಂತಸ್ತುಗಳಿಗೆ  ಸೋಲದ ಜನಸಾಮಾನ್ಯರ ಪ್ರತಿನಿಧಿ ಅವರು. ನಡೆ-ನುಡಿಯಲ್ಲಿ ಒರಟಾಗಿ ಕಂಡರೂ ಅವರ ಅಂತಃಕರಣ ಪರಿಶುದ್ಧ.
ಇಂಥ ಜನಪರ ನಾಯಕನಿಗೆ ಈಗ ೭೬ ವರ್ಷ ತುಂಬುತ್ತಿದೆ. ಭ್ರಷ್ಟಾಚಾರರಹಿತ, ಜನಪರ ಆಡಳಿತಕ್ಕಷ್ಟೇ ಆದ್ಯತೆ ನೀಡುವ ಅವರು ನಿಜಕ್ಕೂ ಒಂದು ‘ಅನ್‌ಪಾಲಿಶ್ಡ್ ಡೈಮಂಡ್’.

ಸಾರ್ವಜನಿಕ ಜೀವನದಲ್ಲಿ ಇಷ್ಟೊಂದು ದೀರ್ಘಾವಧಿಗೆ ಚಾರಿತ್ರ್ಯ ಕೆಡಿಸಿಕೊಳ್ಳದೇ ಬದುಕುವುದೇ ದೊಡ್ಡ ಸಾಧನೆ. ಮುಂದಿನ ತಲೆಮಾರಿನ ರಾಜಕಾರಣಿಗಳಿಗೆ, ಆಡಳಿತಗಾರರಿಗೆ, ಯುವಕರಿಗೆ, ಸಾಧಕರಿಗೆ ಪ್ರೇರಣೆ ಮತ್ತು ಮಾದರಿಯಾಗಿರುವ ವ್ಯಕ್ತಿ ಸಿದ್ದರಾಮಯ್ಯ. ಅವರ ನೇತೃತ್ವದ ಕಾಂಗ್ರೆಸ್ ಸರಕಾರವು ಅಸಮಾನತೆ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಇವುಗಳಿಂದ ಮುಕ್ತ
ವಾದ ಆಡಳಿತವನ್ನು ನೀಡುತ್ತಾ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗುವಂಥ ಕೆಲಸ ಮಾಡುತ್ತಿದೆ.

ಪಂಚ ಗ್ಯಾರಂಟಿಗಳು ನಿಜಾರ್ಥದಲ್ಲಿ ಜನರಿಗೆ ಶಕ್ತಿ ನೀಡುತ್ತಿವೆ. ದೇಶಕ್ಕೇ ಮಾದರಿಯಾಗುವ ಆಡಳಿತ ಅವರ ಅನುಭವದ ರಾಜಕಾರಣದಿಂದ ಕರ್ನಾಟಕದ ಜನರಿಗೆ ಲಭಿಸುತ್ತಿದೆ. ಮುಂದಿನ ೫ ವರ್ಷಗಳ ಕಾಲ ರಾಜ್ಯಕ್ಕೆ ಶಾಂತಿ-ಸುಭಿಕ್ಷೆ ನೀಡುವ ಶಕ್ತಿ ಅವರಿಗೆ ಪ್ರಾಪ್ತವಾಗಲಿ ಎಂದು ಅವರ ಜನ್ಮದಿನದಂದು ಆಶಿಸೋಣ.