Sunday, 23rd June 2024

ಸಿದ್ದು ಕಿವಿಗೆ ಬಿದ್ದ ರಹಸ್ಯವೇನು ?

ಮೂರ್ತಿಪೂಜೆ

ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಅಂತ ಕಳೆದ ವಾರ ಉತ್ತರ ಕರ್ನಾಟಕಕ್ಕೆ ಹೋಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತರ ಜತೆ ಹೊಸಪೇಟೆ ಸಮೀಪದ ರೆಸಾರ್ಟ್ ಒಂದರಲ್ಲಿ ಉಳಿದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಚಿವರಾದ ಜಮೀರ್ ಅಹ್ಮದ್, ನಾಗೇಂದ್ರ ಸೇರಿದಂತೆ ಹಲವರ ಜತೆ ಮಾತನಾಡುತ್ತಾ ಕುಳಿತಾಗ ‘ಈ ದಾವಣಗೆರೆಯ ಕತೆ ಏನ್ರಪ್ಪ?’ ಅಂತ ಅವರು ಪ್ರಸ್ತಾಪಿಸಿದರಂತೆ.

ಕಾರಣ? ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಮನೂರು ಶಿವಶಂಕರಪ್ಪ ಅವರ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧಿಸಿದ್ದಾರಲ್ಲ? ಅವರ ಗೆಲುವಿಗೆ ಬಂಡಾಯ ಅಭ್ಯರ್ಥಿ ವಿನಯ್ ಅವರು ಅಡ್ಡಿಯಾಗಲಿದ್ದಾರೆ ಎಂಬುದು ಸಿದ್ದರಾಮಯ್ಯವರಿಗಿರುವ ಮಾಹಿತಿ ಬಿಜೆಪಿಯ ಗಾಯತ್ರಿ ಸಿದ್ಧೇಶ್ವರ್ ಮತ್ತು ಕಾಂಗ್ರೆಸ್ಸಿನ ಪ್ರಭಾ ಮಲ್ಲಿಕಾರ್ಜುನ್ ಅವರ ಮಧ್ಯೆ ನೇರ ಹಣಾಹಣಿ ನಡೆದಿದ್ದರೆ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಗೆಲುವಿನ ಅವಕಾಶ ಹೆಚ್ಚಿರುತ್ತಿತ್ತು. ಆದರೆ ಈಗ ವಿನಯ್ ಅವರ ಸ್ಪರ್ಧೆಯಿಂದ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಅಡ್ಡಿಯಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಕ್ಷೇತ್ರದಲ್ಲಿರುವ ಗಣನೀಯ ಪ್ರಮಾಣದ ಕುರುಬ ಮತಗಳನ್ನು ವಿನಯ್ ಸೆಳೆದರೆ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಕಷ್ಟವಾಗಲಿದೆ ಎಂಬುದು ಸದ್ಯದ ಮಾಹಿತಿ. ಅಂದ ಹಾಗೆ, ಕಾಂಗ್ರೆಸ್ ಪಕ್ಷದವರೇ ಆದ ವಿನಯ್, ದಾವಣಗೆರೆಯಲ್ಲಿ ಸ್ಪರ್ಧಿಸಲು ತಮಗೆ ಟಿಕೆಟ್ ನೀಡುವಂತೆ ಸಿದ್ದರಾಮಯ್ಯ ಅವರನ್ನು ಕೋರಿದ್ದರು. ಮೂಲಗಳ ಪ್ರಕಾರ, ‘ನೋಡೋಣ ಹೋಗ್ರೀ. ಕ್ಷೇತ್ರದಲ್ಲಿ ಕೆಲಸ ಮಾಡ್ರೀ’ ಅಂತ ಸಿದ್ದರಾಮಯ್ಯ ಕೂಡಾ ವಿನಯ್ ಅವರಿಗೆ ಹೇಳಿದ್ದರಂತೆ. ಆದರೆ ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳು ವಿನಯ್ ಅವರಿಗೆ ಟಿಕೆಟ್ ತಪ್ಪುವಂತೆ, ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ದಕ್ಕುವಂತೆ ಮಾಡಿವೆ.

ಹೀಗಾಗಿ ಸಿಟ್ಟಿಗೆದ್ದ ವಿನಯ್ ಬಂಡಾಯವೆದ್ದು ದಾವಣಗೆರೆಯ ಕಣಕ್ಕಿಳಿದಿದ್ದಾರೆ. ಅಷ್ಟೇ ಅಲ್ಲ, ಕ್ಷೇತ್ರದಾದ್ಯಂತ ಗಣಗಣ ತಿರುಗುತ್ತಾ ಕಾಂಗ್ರೆಸ್ ಪಾಳಯದಲ್ಲಿ ನಡುಕ ಹುಟ್ಟಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಅವರು ಪಡೆಯುವ ಮತಗಳು ಕಾಂಗ್ರೆಸ್ಸಿನ ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ಅಡ್ಡಿಯಾಗಿ, ಗಾಯತ್ರಿ ಸಿದ್ಧೇಶ್ವರ್ ಅವರ ಗೆಲುವಿಗೆ ನೆರವಾಗಲಿವೆ ಎಂಬುದು ರಾಜಕೀಯ ವಲಯಗಳ ಲೆಕ್ಕಾಚಾರ. ಈ ಹಿನ್ನೆಲೆಯಲ್ಲೇ ವಿನಯ್ ಮನವೊಲಿಸಿ ಕಣದಿಂದ ಹಿಂದೆ ಸರಿಯುವಂತೆ ನೋಡಿಕೊಳ್ಳಿ ಅಂತ ಹಿರಿಯ ನಾಯಕ ಎಚ್.ಎಂ.ರೇವಣ್ಣ ಮತ್ತು ಜಬ್ಬಾರ್ ಅವರನ್ನು ಸಿದ್ದರಾಮಯ್ಯ ಸಂಧಾನಕ್ಕೆ ಕಳಿಸಿದ್ದರಾದರೂ ಅದು -ಲ ನೀಡಿಲ್ಲ. ಖುದ್ದು
ಕನಕ ಗುರುಪೀಠ ಹೇಳಿದರೂ ವಿನಯ್ ಒಪ್ಪಿಲ್ಲ.

ಈ ಬೆಳವಣಿಗೆಗಳನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡ ಸಿದ್ದರಾಮಯ್ಯ ಅವರು, ಹೊಸಪೇಟೆ ಸಮೀಪದ ರೆಸಾರ್ಟ್‌ನಲ್ಲಿ ಉಳಿದುಕೊಂಡಾಗ ‘ದಾವಣಗೆರೆಯ ಕತೆ ಏನ್ರೀ?’ ಅಂತ ಆಪ್ತರನ್ನು ಪ್ರಶ್ನಿಸಿದ್ದಾರೆ. ಹೀಗೆ ಅವರು ಪ್ರಶ್ನಿಸಿದಾಗ ಜತೆಯಲ್ಲಿದ್ದ ಬಹುತೇಕರು ಮೌನವಾಗಿದ್ದರೆ, ಬಳ್ಳಾರಿಯ ಮಾಜಿ ಶಾಸಕರೊಬ್ಬರು ಮಾತನಾಡತೊಡಗಿದ್ದಾರೆ. ‘ಸರ್, ನಾನು ಆಟೋರಿಕ್ಷಾ ಓಡಿಸುವ ಲೆವೆಲ್ಲಿನಿಂದ ಬಂದವನು. ನನಗೆ ದಾವಣಗೆರೆ ಕ್ಷೇತ್ರದ ಇಂಚಿಂಚೂ ಮಾಹಿತಿ ಗೊತ್ತಿದೆ.
ಇದನ್ನು ಆಧರಿಸಿ ಹೇಳುತ್ತೇನೆ. ಈ ಬಾರಿ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿ ವಿನಯ್ ಪಡೆಯುವ ಮತಗಳು ಕಾಂಗ್ರೆಸ್ಸಿನ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಡ್ಯಾಮೇಜ್ ಮಾಡುತ್ತವೆ ಎಂಬುದು ಸುಳ್ಳು. ಬದಲಿಗೆ ವಿನಯ್ ಅವರು ಪಡೆಯುವ ಮತಗಳು ಬಿಜೆಪಿಯ ಗಾಯತ್ರಿ ಸಿದ್ಧೇಶ್ವರ್ ಅವರಿಗೆ ಡ್ಯಾಮೇಜ್ ಮಾಡಿ ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ದಾರಿ ಮಾಡಿಕೊಡಲಿವೆ’ ಎಂದಿದ್ದಾರೆ.

ಈ ಮಾತುಗಳನ್ನು ಕೇಳಿ ಸಿದ್ದರಾಮಯ್ಯ ಅವರಲ್ಲದೆ ಜಮೀರ್ ಅಹ್ಮದ್, ನಾಗೇಂದ್ರ ಸೇರಿದಂತೆ ಅಲ್ಲಿದ್ದವರೆಲ್ಲ ಬಿಟ್ಟ ಬಾಯಿ ಬಿಟ್ಟಂತೆ ಕುತೂಹಲದಿಂದ ಕೇಳುತ್ತಾ ಕುಳಿತಿದ್ದಾರೆ. ಹೀಗೆ ಎಲ್ಲರೂ ತಳೆದ ಕುತೂಹಲವನ್ನು ನೋಡಿದ ಬಳ್ಳಾರಿ ಜಿಲ್ಲೆಯ ಆ ಮಾಜಿ ಶಾಸಕರು, ‘ಸರ್, ದಾವಣಗೆರೆಯಲ್ಲಿ ಚೆನ್ನಯ್ಯ ಒಡೆಯರ್ ಅವರ ನಂತರದ ದಿನಗಳಲ್ಲಿ ಗಣನೀಯ ಪ್ರಮಾಣದ ಕುರುಬ ಮತಗಳು ಶಾಮನೂರು ಶಿವಶಂಕರಪ್ಪ ಅವರ ಜತೆಗಿಲ್ಲ. ಇದಕ್ಕೆ ಶಾಮನೂರು
ಶಿವಶಂಕರಪ್ಪ ಅವರ ಟಫ್ ಧೋರಣೆ ಕಾರಣ ಎಂಬುದು ನನಗಿರುವ ಮಾಹಿತಿ. ಹೀಗಾಗಿ ೩ ಲಕ್ಷದಷ್ಟಿರುವ ಕುರುಬ ಮತಗಳ ಪೈಕಿ ಗಣನೀಯ ಪ್ರಮಾಣದ ಮತಗಳು ಇತ್ತೀಚೆಗೆ ಬಿಜೆಪಿಗೆ ದಕ್ಕುತ್ತಿವೆ.

ಅರ್ಥಾತ್, ಲೋಕಸಭಾ ಚುನಾವಣೆಯಲ್ಲಿ ಈ ಮತಗಳು ಬಿಜೆಪಿಯ ಜಿ.ಎಂ.ಸಿದ್ಧೇಶ್ವರ್ ಅವರಿಗೆ ದಕ್ಕುತ್ತಿದ್ದವು’ ಎಂದು ವಿವರಿಸಿದ್ದಾರೆ. ‘ಇವತ್ತು ಹಾಗಂತ
ಹೇಳಿದ ತಕ್ಷಣ, ಕಳೆದ ಚುನಾವಣೆಯಲ್ಲಿ ಕುರುಬರು ಶಾಮನೂರು ಶಿವಶಂಕರಪ್ಪ ಮತ್ತು ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮತ ಚಲಾಯಿಸಿಲ್ಲವೇ? ಅಂತ ನೀವು ಕೇಳಬಹುದು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುರುಬರು ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.
ಮಲ್ಲಿಕಾರ್ಜುನ್ ಅವರಿಗೆ ಮತ ಚಲಾಯಿಸಿದ್ದಾರೆ. ಆದರೆ ಅದಕ್ಕೊಂದು ಕಾರಣವಿದೆ. ಅದೆಂದರೆ, ವಿಧಾನಸಭಾ ಚುನಾವಣೆಯ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಭಾವನೆ ದಟ್ಟವಾಗಿದ್ದುದು.

ಇಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಅವರು ಗೆದ್ದರೆ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿಗಿರಿಗೆ ಪ್ಲಸ್ ಆಗುತ್ತದೆ ಎಂಬುದು ಕುರುಬರ ಲೆಕ್ಕಾಚಾರ. ಇದೇ ಕಾರಣಕ್ಕಾಗಿ ಅವರು ಕಳೆದ ವಿಧಾನಸಬಾ ಚುನಾವಣೆಯಲ್ಲಿ ಸಾಲಿಡ್ಡಾಗಿ ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ. ಆದರೆ ಈಗ
ಲೋಕಸಭಾ ಚುನಾವಣೆಯಲ್ಲಿ ಹಾಗಿಲ್ಲ. ಈ ಸಲ ಅವರು ಶಾಮನೂರು ಶಿವಶಂಕರಪ್ಪ ಅವರ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಅವರ ಬೆಂಬಲಕ್ಕೆ ನಿಲ್ಲುವುದಿಲ್ಲ. ಈ ವಿಷಯದಲ್ಲೇ ಇಲ್ಲಿ ಟ್ವಿಸ್ಟ್ ಇರುವುದು. ಯಾಕೆಂದರೆ, ಸಹಜವಾಗಿ ಪ್ರಭಾ ಮಲ್ಲಿಕಾರ್ಜುನ್ ಮತ್ತು ಗಾಯತ್ರಿ ಸಿದ್ಧೇಶ್ವರ್ ಅವರ ಮಧ್ಯೆ ಹಣಾಹಣಿ ಏರ್ಪಟ್ಟಿದ್ದರೆ, ಕುರುಬ ಸಮುದಾಯದ ಗಣನೀಯ ಪ್ರಮಾಣದ ಮತಗಳು ಗಾಯತ್ರಿ ಸಿದ್ಧೇಶ್ವರ್ ಅವರಿಗೆ ದಕ್ಕುತ್ತಿದ್ದವು.

ಆದರೆ ಬದಲಾದ ಪರಿಸ್ಥಿತಿಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ತಮ್ಮ ಸಮುದಾಯದವರೇ ಆದ ವಿನಯ್ ಸ್ಪರ್ಧಿಸಿರುವುದರಿಂದ ಕುರುಬ ಸಮುದಾಯದ ಗಣನೀಯ ಮತಗಳು ವಿನಯ್ ಅವರ ಕಡೆ ವಾಲುತ್ತವೆ. ಅರ್ಥಾತ್, ಇದುವರೆಗೆ ಲೋಕಸಭಾ ಚುನಾವಣೆಯಲ್ಲಿ ಸಿದ್ಧೇಶ್ವರ್ ಅವರ ಗೆಲುವಿಗೆ ಪ್ಲಸ್ ಆಗುತ್ತಿದ್ದ ಕುರುಬರ ಮತಗಳೇನಿವೆ, ಅವು ಈ ಸಲ ವಿನಯ್ ಅವರಿಗೆ ದಕ್ಕುತ್ತವೆ. ಅಲ್ಲಿಗೆ ಬಿಜೆಪಿಯ ಗಾಯತ್ರಿ ಸಿದ್ಧೇಶ್ವರ್ ಅವರಿಗೆ ದಕ್ಕಬೇಕಿದ್ದ ಮತಗಳು ಕಡಿಮೆಯಾಗುತ್ತವೆ. ಅದೇ ಕಾಲಕ್ಕೆ ಶಾಮನೂರು ಕ್ಯಾಂಪಿನಿಂದ ದೂರವಿರುವ ಗಣನೀಯ ಪ್ರಮಾಣದ ಕುರುಬ ಮತಗಳು ವಿನಯ್ ಅವರಿಗೆ ದಕ್ಕುತ್ತವೆ. ಇದು ಕಾಂಗ್ರೆಸ್ಸಿನ ನೇರ ಎದುರಾಳಿ ಗಾಯತ್ರಿ ಸಿದ್ಧೇಶ್ವರ್ ಅವರಿಗಾಗುವ ಹಾನಿಯಾದ್ದರಿಂದ ಅಂತಿಮ ಲಾಭ ಪ್ರಭಾ ಮಲ್ಲಿಕಾರ್ಜುನ್ ಅವರಿಗಾಗುತ್ತದೆ. ಈ ಮಧ್ಯೆ ದಲಿತರು, ಮುಸ್ಲಿಮರ ಸಾಲಿಡ್ಡು ಬೆಂಬಲದೊಂದಿಗೆ ಲಿಂಗಾಯತ ಸಮುದಾಯದ ಗಣನೀಯ ಪ್ರಮಾಣದ ಮತಗಳು ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ದಕ್ಕುವುದರಿಂದ ಅವರು ನಿರಾಯಾಸವಾಗಿ ಗೆಲುವು ಗಳಿಸುತ್ತಾರೆ.

ಈ ವಿಷಯದಲ್ಲಿ ಯಾವ ಅನುಮಾನವೂ ಬೇಡ’ ಅಂತ ಬಳ್ಳಾರಿಯ ಈ ಮಾಜಿ ಶಾಸಕರು ಹೇಳಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅಲ್ಲಿದ್ದ ಎಲ್ಲರೂ ‘ಓ, ಹಾಗಾದ್ರೆ ಒಳ್ಳೇದು’ ಎಂದರಂತೆ. ಇಷ್ಟಾದರೂ ಮೊನ್ನೆ ದಾವಣಗೆರೆಗೆ ಹೋದ ಸಿದ್ದರಾಮಯ್ಯ ಅವರು ಕುರುಬ ಸಮುದಾಯದ ನಾಯಕರ
ಬಳಿ, ಈ ಕ್ಷೇತ್ರದಲ್ಲಿ ಪ್ರಭಾ ಮಲ್ಲಿಕಾರ್ಜುನ್ ಕ್ಯಾಂಡಿಡೇಟ್ ಅಲ್ಲ, ನಾನೇ ಕ್ಯಾಂಡಿಡೇಟ್ ಅಂತ ಹೇಳಿ ಬಂದಿದ್ದಾರೆ. ಅರ್ಥಾತ್, ಇದುವರೆಗೆ ಬಿಜೆಪಿಗೆ ಹೋಗುತ್ತಿದ್ದ ಕುರುಬ ಮತಗಳಲ್ಲಿ ವಿನಯ್ ಅವರಿಗೆ ಮೇಜರ್ ಷೇರು ಹೋದರೂ ಒಂದಷ್ಟು ಪ್ರಮಾಣದ ಮತಗಳು ಕಾಂಗ್ರೆಸ್ಸಿಗೆ ಬಂದರೆ ಪ್ರಭಾ ಮಲ್ಲಿಕಾರ್ಜುನ್ ಗೆಲ್ಲಬಹುದು ಎಂಬುದು ಸಿದ್ದರಾಮಯ್ಯ ಅವರ ಲೆಕ್ಕಾಚಾರ.

ಬಿಜೆಪಿಗೆ ಅನುಮಾನ ಇರುವ ಕ್ಷೇತ್ರಗಳು ಈ ಮಧ್ಯೆ ಮೇ ೭ರ ಮಂಗಳವಾರ ನಡೆಯುವ ಎರಡನೇ ಹಂತದ ಚುನಾವಣೆಯಲ್ಲಿ ಹತ್ತು ಕ್ಷೇತ್ರಗಳಲ್ಲಿ ಗೆಲ್ಲುವುದು
ಬಿಜೆಪಿ ಪಾಳಯದ ನಂಬಿಕೆ. ಉಳಿದಂತೆ ಚಿಕ್ಕೋಡಿ, ದಾವಣಗೆರೆ, ಕೊಪ್ಪಳ ಮತ್ತು ಗುಲ್ಬರ್ಗ ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲು ಹರಸಾಹಸ ಮಾಡಬೇಕು ಎಂಬುದು ಬಿಜೆಪಿ ಪಾಳಯದ ಮಾತು. ಅಂದ ಹಾಗೆ, ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿರುವವರು ಲೋಕೋಪಯೋಗಿ ಸಚಿವ ಸತೀಶ್
ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕ. ಅವರನ್ನು ಗೆಲ್ಲಿಸಲು ಜಾರಕಿಹೊಳಿ ರೂಪಿಸುತ್ತಿರುವ ವ್ಯೂಹಗಳು ತಮ್ಮ ಅಭ್ಯರ್ಥಿ ಅಣ್ಣಾ ಸಾಹೇಬ ಜೊಲ್ಲೆಯವರನ್ನು ಸಂಕಷ್ಟಕ್ಕೆ ಸಿಲುಕಿಸಿವೆ ಎಂಬುದು ಬಿಜೆಪಿಯ ಹಲ ನಾಯಕರ ಅನುಮಾನ. ಇನ್ನು ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ಧೇಶ್ವರ್ ಅವರಿಗೆ ಎದುರಾಳಿಯಾಗಿರುವವರು ಶಾಮನೂರು ಶಿವಶಂಕರಪ್ಪ ಅವರ ಸೊಸೆ ಪ್ರಭಾ ಮಲ್ಲಿಕಾರ್ಜುನ್.

ಶುರುವಿನಲ್ಲಿ ಮೋದಿ ಹವಾದಿಂದ ಗಾಯತ್ರಿ ಸಿದ್ಧೇಶ್ವರ್ ಗೆಲ್ಲುವುದು ಸುಲಭ ಎಂಬ ಭಾವನೆ ಇತ್ತಾದರೂ ದಿನಗಳೆದಂತೆ ಪ್ರಭಾ ಮಲ್ಲಿಕಾರ್ಜುನ್ ಪವರ್-ಲ್ಲಾಗುತ್ತಿರುವಂತೆ ಕಾಣಿಸತೊಡಗಿದೆ ಎಂಬುದು ಅವರಿಗಿರುವ ಮಾಹಿತಿ. ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಟ್ನಾಳ್ ಕೂಡಾ ದಿನಗಳೆದಂತೆ ಪವರ್-ಲ್ಲಾಗುತ್ತಿದ್ದಾರೆ ಮತ್ತು ಗುಲ್ಬರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿರುವವರು ಖರ್ಗೆ ಅಳಿಯ ರಾಧಾಕೃಷ್ಣ. ಕೆಲಸದ ವಿಷಯಕ್ಕೆ ಬಂದರೆ ಕ್ಷೇತ್ರಕ್ಕೆ ಮಲ್ಲಿಕಾರ್ಜುನ
ಖರ್ಗೆ ಅವರಂತೆ ಕೆಲಸ ಮಾಡಲು ಬೇರೆಯವರಿಗೆ ಸಾಧ್ಯವಿಲ್ಲ ಎಂಬ ಮಾತು ದಟ್ಟವಾಗಿರುವುದರಿಂದ ಖರ್ಗೆ ಅಳಿಯ ರಾಧಾಕೃಷ್ಣ ಗೆಲ್ಲಬಹುದು ಎಂಬುದು ಬಿಜೆಪಿ ಯೋಚನೆ.

ಇಷ್ಟನ್ನು ಮೀರಿಯೂ ಈ ಪೈಕಿ ಕೆಲ ಕ್ಷೇತ್ರಗಳಲ್ಲಿ ಮೋದಿ ಪವರ್ ವರ್ಕ್‌ಔಟ್ ಆಗಬಹುದು. ಆದರೆ ಅದೆಷ್ಟರ ಮಟ್ಟಿಗೆ ಎಂಬುದು ಬಿಜೆಪಿ ನಾಯಕರಿಗೂ ಹೊಳೆಯುತ್ತಿಲ್ಲ. ಕಾಂಗ್ರೆಸ್ಸಿಗೆ ಒಂಬತ್ತರ ಕನಸು ಇನ್ನು ಎರಡನೇ ಹಂತದಲ್ಲಿ ಮತದಾನ ನಡೆಯುವ ೧೪ ಕ್ಷೇತ್ರಗಳ ಪೈಕಿ ೯ ಕ್ಷೇತ್ರಗಳಲ್ಲಿ ಗೆಲ್ಲುವುದು ಕಾಂಗ್ರೆಸ್ ಪಾಳ ಯದ ನಂಬಿಕೆ. ಹಾವೇರಿ, ಶಿವಮೊಗ್ಗ, ಬಿಜಾಪುರ, ಧಾರವಾಡ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳು ಗೆಲ್ಲುವುದು ಸುಲಭವಿಲ್ಲ ಎಂಬ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್ ಪಾಳಯದಲ್ಲಿ ದಾವಣಗೆರೆಯ ಬಗ್ಗೆಯೂ ಅನುಮಾನವಿದೆ. ಅಲ್ಲಿ ತಮ್ಮ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸಲು ಸ್ವತಃ ಸಿದ್ದರಾಮಯ್ಯ ಅವರೇ ಹಠ ತೊಟ್ಟಿದ್ದಾರಾದರೂ ಪಕ್ಷೇತರ ಅಭ್ಯರ್ಥಿ ವಿನಯ್ ಮಾಡಲಿರುವ ಕರಾಮತ್ತು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ಧೇಶ್ವರ್ ಅವರಿಗೆ ಪ್ಲಸ್ ಆದರೂ ಅಚ್ಚರಿಯಿಲ್ಲ ಎಂಬುದು ಹಲ ಕಾಂಗ್ರೆಸ್ ನಾಯಕರ ನಂಬಿಕೆ.

ಇದೇ ರೀತಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತರ ಒಡಕು ಕಾಂಗ್ರೆಸ್ಸಿನ ಗೆಲುವಿಗೆ ಕಾರಣವಾಗಬಹುದು ಎಂಬ ಲೆಕ್ಕಾಚಾರ ಇತ್ತಾದರೂ ನೇಹಾ ಕೊಲೆ ಪ್ರಕರಣದ ನಂತರ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರ ಗ್ರಾಫ್ ಇದ್ದಕ್ಕಿದ್ದಂತೆ ಮೇಲೆ ಜಿಗಿದು ಬಿಜೆಪಿಯ ಗೆಲುವನ್ನು ಖಚಿತ ಗೊಳಿಸಿದೆ ಎಂಬುದು ಕೈ ಪಾಳಯದ ಮಾಹಿತಿ.

ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಗೆಲ್ಲಲಿದ್ದು ಕೈ ಪಾಳಯದ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಹಿಂದಿದ್ದಾರೆ. ಈ ಮಧ್ಯೆ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಒಂದೂವರೆ ಲಕ್ಷದಷ್ಟು ಮತಗಳನ್ನು ಪಡೆದರೆ ಗೀತಾ ಶಿವರಾಜ್‌ಕುಮಾರ್ ಅವರಿಗೆ ಗೆಲ್ಲುವ ಅವಕಾಶವಿದೆ. ಆದರೆ ಈಶ್ವರಪ್ಪ ಒಂದೂವರೆ ಲಕ್ಷ ಮತ ಪಡೆಯುವುದು ಕಷ್ಟ ಎಂಬುದು ಕಾಂಗ್ರೆಸ್ ಪಾಳಯದ ಮಾತು.

Leave a Reply

Your email address will not be published. Required fields are marked *

error: Content is protected !!