Saturday, 21st September 2024

ಕೆಲ ಹೇಳಿಕೆಗಳಿಗೆ ಟೀಕೆಗಿಂತ ಮೌನವೇ ಲೇಸು

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hosakere@gmail.com

ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ಹಲವು ವಿದ್ಯಮಾನಗಳು ನಡೆದಿವೆ. ರಾಜಧಾನಿ ಬೆಂಗಳೂರಿನಲ್ಲಿ ಕಟ್ಟಡ ಕುಸಿತವಿರಬಹುದು, ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆ, ರಾಜ್ಯಾದ್ಯಂತ ಭಾರಿ ಮಳೆ ಹಾಗೂ ಉಪಚುನಾವಣೆ ಸೇರಿದಂತೆ ಹಲವು ವಿಷಯಗಳಿದ್ದರೂ, ಓಡುತ್ತಿರುವುದು ಮಾತ್ರ ಮಾಜಿ ಮುಖ್ಯಮಂತ್ರಿ
ಎಚ್.ಡಿ. ಕುಮಾರಸ್ವಾಮಿ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆ ವಿರುದ್ಧ ಹೇಳಿದ್ದ ಒಂದು ಹೇಳಿಕೆ.

ಅವರು ಹೇಳಿದ್ದ ಒಂದು ಹೇಳಿಕೆಗೆ ಬಿಜೆಪಿಯವರು ಹಿಡಿದುಕೊಂಡು, ವಾದಕ್ಕೆ ಪ್ರತಿವಾದ, ಪ್ರತಿವಾದಕ್ಕೆ ಮತ್ತೊಂದು ವಾದ ಹೂಡುತ್ತಾ ಹೋಗುವ ಮೂಲಕ, ಎಂದೋ ಕಸದ ಬುಟ್ಟಿಗೆ ಸೇರಬೇಕಿದ್ದ ವಿಷಯವನ್ನು ಇಲ್ಲಿಯವರೆಗೆ ಜೀವಂತವಾಗಿರಿಸಿಕೊಂಡಿದ್ದಾರೆ. ಅಷ್ಟಕ್ಕೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು
ಜೆಡಿಎಸ್‌ನ ಕಾರ್ಯಗಾರವೊಂದರಲ್ಲಿ ‘ಆರ್‌ಎಸ್‌ಎಸ್‌ನ ನಾಲ್ಕು ಸಾವಿರ ಮಂದಿ ಐಎಎಸ್, ಐಪಿಎಸ್‌ ಗಳಾಗಿದ್ದಾರೆ. ಅವರಿಗೆ ತರಬೇತಿ ನೀಡಲಾಗುತ್ತಿದೆ’ ಎಂದು ಹೇಳಿದ್ದರು. ಈ ವಿಷಯವನ್ನು ಬಿಜೆಪಿ ನಾಯಕರು ಅಷ್ಟಕ್ಕೆ ಸೀಮಿತಗೊಳಿಸಬಹುದಾಗಿತ್ತು. ಅದಕ್ಕೂ ಮೊದಲು ಸಿದ್ದರಾಮಯ್ಯ ಅವರು ‘ಆರ್‌ಎಸ್‌ಎಸ್ ಅನ್ನು ತಾಲಿಬಾನ್’ಗೆ ಹೋಲಿಸಿದ್ದರು. ಈ ಎರಡು ವಿಷಯಗಳನ್ನು ಮೂಲವಾಗಿರಿಸಿಕೊಂಡು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರನ್ನು ಬಿಜೆಪಿಗರು ಟಾರ್ಗೆಟ್ ಮಾಡುತ್ತಾ ಬಂದರು. ಆದರೆ ಈ ವಿಷಯದ ಬಗ್ಗೆ ಇಷ್ಟು ದೊಡ್ಡಮಟ್ಟದಲ್ಲಿ ಮುಗಿಬೀಳುವ ಅಗತ್ಯವೇನಿತ್ತು ಎನ್ನುವುದು ಅನೇಕರ ವಾದವಾಗಿದೆ.

ದೇಶ ಭಕ್ತಿ, ಹಿಂದುತ್ವದ ಸಿದ್ಧಾಂತದ ಮೇಲಿರುವ ಆರ್ ಎಸ್‌ಎಸ್ ಅನ್ನು ತಾಲಿಬಾನ್‌ಗೆ ಹೋಲಿಸಿ ಸಿದ್ದರಾಮಯ್ಯ ಹೇಳಿದ್ದನ್ನು ಖಂಡಿಸಿದ್ದು ಒಂದು ಮಟ್ಟಕ್ಕೆ ಸರಿ ಎನ್ನಬಹುದು. ಏಕೆಂದರೆ ಆರ್‌ಎಸ್‌ಎಸ್‌ನಲ್ಲಿರುವ ಲಕ್ಷಾಂತರ ಕಾರ್ಯಕರ್ತರು ತಮ್ಮ ಸ್ವಹಿತಾಸಕ್ತಿಯನ್ನು ಬದಿಗೊತ್ತಿ ಪೂರ್ಣಾವಧಿ ಕಾರ್ಯಕರ್ತರಾಗಿ ದೇಶದ ಆಪತ್ತಿನ ಸಮಯದಲ್ಲಿ ಜೀವನವನ್ನು ಪಣಕ್ಕಿಟ್ಟು ಹೋರಾಡುತ್ತಾರೆ. ಅಂತಹ ಸಂಸ್ಥೆಯನ್ನು ಉಗ್ರ ಸಂಘಟನೆಗೆ ಹೋಲಿಸಿದಕ್ಕೆ ಆಕ್ಷೇಪ ಎತ್ತುವುದು ಸರಿ. ಆದರೆ ಕುಮಾರಸ್ವಾಮಿ ಅವರು ಆರ್‌ಎಸ್ ಎಸ್ ಬಗ್ಗೆ ನೀಡಿದ ಹೇಳಿಕೆಗೆ ಅಷ್ಟು ಮಹತ್ವ ಕೊಡುವ ಅಗತ್ಯವೇನಿರಲಿಲ್ಲ ಎನಿಸುತ್ತದೆ.

ಏಕೆಂದರೆ ಅವರು ಹೇಳಿದಂತೆ ಐಎಎಸ್, ಐಪಿಎಸ್ ಸೇರಿದಂತೆ ಹಲವು ಸ್ಪಧಾತ್ಮಕ ಪರೀಕ್ಷೆ ಬಡ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದಕ್ಕೆ ಆರ್‌ಎಸ್‌ಎಸ್ ನೇರವಾಗಿ ಅಥವಾ ಪರೋಕ್ಷವಾಗಿ ವಿವಿಧ ಯೋಜನೆಗಳನ್ನು ಹಾಕಿಕೊಂಡಿದೆ. ಈ ರೀತಿ ತರಬೇತಿ ಪಡೆದ ವಿದ್ಯಾರ್ಥಿಗಳು ತೇರ್ಗಡೆಗೊಂಡರೆ ತಪ್ಪೇನು? ಎನ್ನುವುದು ಕೇಳಿದ್ದರೆ ವಾದ ಮುಗಿಯುತ್ತಿತ್ತು. ಇನ್ನು ಮೂಲ ಬಿಜೆಪಿಯ ಹಿರಿಯ ನಾಯಕರೆಲ್ಲರೂ ಸಂಘ ಪರಿವಾರದ ಹಿನ್ನಲೆ ಇರುವುದರಿಂದ, ಉನ್ನತ ಹುದ್ದೆಗೆ ಏರಿದಾಗ ಅವರೆಲ್ಲ ಆರ್‌ಎಸ್‌ಎಸ್ ಮೂಲದವರು ಎನ್ನುವುದು ಸಾಮಾನ್ಯ. ಈ ಹಿಂದೆ ಎಡಪಂಥೀಯರು ಆಡಳಿತ ಮಾಡುವಾಗ, ಕಮ್ಯುನಿಸ್ಟ್ ಹಿನ್ನಲೆ
ಇರುವವರು ಅಧಿಕಾರ ನಡೆಸುತ್ತಿದ್ದರು ಎನ್ನುವುದು ಹೇಗೆ ಒಪ್ಪಿಕೊಳ್ಳಬೇಕೋ ಹಾಗೇ ಇದನ್ನು ಒಪ್ಪಿಕೊಳ್ಳಬೇಕಾಗಿದೆ.

ಅಷ್ಟರ ಮಟ್ಟಿಗೆ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಸೀಮಿತಗೊಳಿಸಬಹುದಾಗಿತ್ತು. ಆದರೆ ಬಿಜೆಪಿಯ ಬಹುತೇಕ ನಾಯಕರು ಎಚ್‌ಡಿಕೆ ವಿರುದ್ಧ ಮಾತ್ರ ವಲ್ಲದೇ, ಜೆಡಿಎಸ್ ಹಾಗೂ ದೇವೇಗೌಡರ ವಿರುದ್ಧ ಮುಗಿಬಿದ್ದರು. ಅದರಲ್ಲಿಯೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಸಚಿವರಾದ ಈಶ್ವರಪ್ಪ, ಅಶ್ವತ್ಥನಾರಾಯಣ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸೇರಿದಂತೆ ಕೆಲವರು ಕಳೆದೊಂದು ವಾರದಿಂದ ಟ್ವೀಟರ್‌ನಲ್ಲಿ, ಫೇಸ್‌ಬುಕ್ ಹಾಗೂ ಮಾಧ್ಯಮಗಳ ಮುಂದೆ ಇದೇ ವಿಷಯವನ್ನು ಇಟ್ಟುಕೊಂಡು ಪ್ರತಿಕ್ರಿಯಿಸುತ್ತಿದ್ದಾರೆ. ಇದರಿಂದ ಹೇಳಿಕೆ
ನೀಡಿದ್ದ ಕುಮಾರಸ್ವಾಮಿ ಅವರು ಪ್ರಚಾರದಲ್ಲಿರುತ್ತಾರೆ. ಈ ಲಾಭದ ಹೊರತಾಗಿ ಇನ್ಯಾವ ಲಾಭವೂ ಇಲ್ಲ ಎನ್ನುವುದು ಬಿಜೆಪಿಗರು ಅರ್ಥೈಸಿಕೊಳ್ಳಬೇಕಿದೆ.
ಇನ್ನು ಕುಮಾರಸ್ವಾಮಿ ಅವರು ಈ ಹೇಳಿಕೆಯನ್ನು ನೀಡಿದ್ದರ ಹಿಂದಿನ contrast ಗಮನಿಸುವುದು ಅತ್ಯಗತ್ಯ.

ರಾಜ್ಯದಲ್ಲಿ ಘೋಷಣೆಯಾಗಿರುವ ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಗೆ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ. ಈ ಎರಡೂ ಕ್ಷೇತ್ರದಲ್ಲಿ
ಮುಸ್ಲಿಂ ಮತಗಳು ಪ್ರಮುಖ ಪಾತ್ರನಿರ್ವಹಿಸುತ್ತದೆ. ಹಾನಗಲ್‌ನಲ್ಲಿ ಒಟ್ಟು 1.61 ಲಕ್ಷ ಚಿಲ್ಲರೆ ಮತಗಳಿದ್ದರೆ, ಲಿಂಗಾಯತರು 42 ಸಾವಿರ ಮತಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 32 ಸಾವಿರ ಮತಗಳೊಂದಿಗೆ ಮುಸ್ಲಿಂ ಮತಗಳು ಎರಡನೇ ಸ್ಥಾನದಲ್ಲಿದೆ. ಇದೇ ರೀತಿ ಸಿಂದಗಿಯಲ್ಲಿರುವ 1.66 ಲಕ್ಷ ಚಿಲ್ಲರೆ ಮತದಾರರ ಪೈಕಿ 20ಸಾವಿರಕ್ಕೂ ಹೆಚ್ಚು ಮುಸ್ಲಿಂ ಮತದಾರರರಿದ್ದಾರೆ. ಈ ಭಾಗದಲ್ಲಿ ಬಿಜೆಪಿ ಪ್ರಾಬಲ್ಯವಿರುವುದರಿಂದ ಲಿಂಗಾಯತರು ಸಹಜವಾಗಿಯೇ ಬಿಜೆಪಿಯ ಅಭ್ಯರ್ಥಿ ಪರ ನಿಲ್ಲುತ್ತಾರೆ.

ಆದರೆ ಅಲ್ಪಸಂಖ್ಯಾತ ಹಾಗೂ ದಲಿತ ಮತಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ವಿಭಜನೆಯಾಗುವುದು ಖಚಿತ. ಆದ್ದರಿಂದ ಮುಸ್ಲಿಂ ಮತಗಳ ಕ್ರೋಢೀ ಕರಣಕ್ಕೆ ಆರ್‌ಎಸ್ ಎಸ್ ವಿರುದ್ಧ ‘ಈ ಚುನಾವಣೆ ಮಟ್ಟಿಗೆ’ ಹೇಳಿಕೆ ನೀಡಿದ್ದರೂ ಅಚ್ಚರಿಯಿಲ್ಲ. ಆದ್ದರಿಂದ ಕುಮಾರಸ್ವಾಮಿ ಅವರು ಈ ದಾಳವನ್ನು ಪ್ರಯೋಗಿಸಿರ ಬಹುದು. ಇದನ್ನು ಬಿಜೆಪಿಗರು ಅರಿತು ಅವರ ಹೇಳಿಕೆಯನ್ನು neglect ಮಾಡಿದ್ದರೆ, ಎಂದೋ ವಿಷಯ ನಿಂತು ಹೋಗುತ್ತಿತ್ತು. ಆದರೆ ಬಿಜೆಪಿಗರು ಸಹ ತಮ್ಮ ವೋಟ್‌ಬ್ಯಾಂಕ್ ಗಿಟ್ಟಿಸಿಗೊಳಿಸಿಕೊಳ್ಳಲು (ಎಲ್ಲರೂ ಅಲ್ಲದಿದ್ದರೂ ಕೆಲ ನಾಯಕರಾದರೂ) ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮುಂದುವರಿಸಿದರು. ಇಲ್ಲೊಂದು ಸೂಕ್ಷ್ಮ ವಿಷಯವನ್ನು ಗಮನಿಸಬೇಕು.

ಕುಮಾರಸ್ವಾಮಿ ಅವರು ನೀಡಿದ ಹೇಳಿಕೆಗೆ ಆರ್ ಎಸ್‌ಎಸ್‌ನ ಯಾರೊಬ್ಬರೂ ಪ್ರತಿಕ್ರಿಯಿಸಲಿಲ್ಲ. ಅವರಷ್ಟೇ ಅಲ್ಲದೇ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಿರಿಯ ನಾಯಕರು ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಏಕೆಂದರೆ, ಪ್ರತಿಕ್ರಿಯೆ ನೀಡಿದಷ್ಟು ಈ ವಿಷಯ ಜಗ್ಗುತ್ತದೆ. ಈ ಒಂದು ಹೇಳಿಕೆಯಿಂದ, ಚುನಾವಣೆಯಲ್ಲಿ ಆಗಬಹುದಾದ ಏರುಪೇರುಗಳನ್ನು ಗಮನಿಸಿ ‘ಮೌನ’ಕ್ಕೆ ಶರಣಾ ದರು.

‘ಮಾತು ಬೆಳ್ಳಿಯಾದರೆ, ಮೌನ ಬಂಗಾರ’ವೆಂದು ಹಿರಿಯರು ಹೇಳಿರುವುದು ಇದೇ ಕಾರಣಕ್ಕೆ. ಕೆಲವೊಮ್ಮೆ ಮಾತಾಡುವುದಕ್ಕಿಂತ, ನಿರ್ಲಕ್ಷ್ಯ ಮಾಡುವುದೇ ಲೇಸು. ಆದರೆ ಸಿ.ಟಿ. ರವಿ ಸೇರಿದಂತೆ ಅನೇಕ ನಾಯಕರು, ಕುಮಾರಸ್ವಾಮಿ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಪ್ರತ್ಯುತ್ತರ ನೀಡುತ್ತಾ ಹೋಗಿದ್ದೇ ಹೆಚ್ಚು ಪ್ರಚಾರಕ್ಕೆ ಕಾರಣವಾಯಿತು. ಹಾಗೆ ನೋಡಿದರೆ, ಕುಮಾರಸ್ವಾಮಿ ಅವರು ಆರ್‌ಎಸ್ ಎಸ್ ಬಗ್ಗೆ ಹೇಳಿದ ಮಾತ್ರಕ್ಕೆ ಅಥವಾ ಇನ್ನೊಬ್ಬರು ಎಡಪಂಥೀಯ ಚಿಂತನೆಗಳನ್ನು ಖಂಡಿಸಿದ ಮಾತ್ರಕ್ಕೆ ಅದನ್ನು ನಂಬಿರುವ ಅಥವಾ ಅದನ್ನು ಆರಾಧಿಸುವವರ (ಈ ರೀತಿ ಆರಾಧಿಸುವವರ ಸಂಖ್ಯೆ ಈ ಕಡಿಮೆ ಯಿದೆ ಎನ್ನುವುದು ಬೇರೆ ಮಾತು) ಭಾವನೆಗೆ ಕಿಂಚಿತ್ತೂ ಧಕ್ಕೆಯಾಗುವುದಿಲ್ಲ ಎನ್ನುವುದು ಗೊತ್ತಿರುವ ವಿಷಯ.

ಕಮ್ಯುನಿಸ್ಟ್ ಚಿಂತನೆ ತಪ್ಪು ಎಂದು ಹೇಳಿದ ಮಾತ್ರಕ್ಕೆ, ಅದನ್ನು ನಂಬಿರುವವರು ಅದರಿಂದ ಹೊರಗೆ ಬರುವುದಿಲ್ಲ. ಅಥವಾ ಆರ್‌ಎಸ್‌ಎಸ್ ನಲ್ಲಿ ಅನೈತಿಕ ತರಬೇತಿ ನೀಡಲಾಗುತ್ತಿದೆ ಎಂದ ಮಾತ್ರಕ್ಕೆ, ಅದರಲ್ಲಿಯೇ ಪೂರ್ಣಾವಧಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರು ಬೇಸರಿಸಿಕೊಳ್ಳುವುದಿಲ್ಲ. ಈ ರೀತಿ ಎರಡೂ ಪಂಥವನ್ನು ಬಲವಾಗಿ ನಂಬಿರುವವರ ನಂತರ ಇರುವ, ಕೆಲವರನ್ನು ಸೆಳೆಯುವುದಕ್ಕೆ ಅಥವಾ ವಿಭಜನೆ ಮಾಡುವುದಕ್ಕೆ ಹೇಳಿಕೆ ಸಾಮಾನ್ಯ. ರಾಜಕೀಯದ ವಾಸನೆಯೇ ಇಲ್ಲದೇ, ಕೇವಲ ತಮ್ಮ ಪಂಥಗಳಿಗೆ ಬದ್ಧವಾಗಿ ಅದನ್ನು ಆರಾಽಸುವವರಿಗೆ ಈ ಆರೋಪ-ಪ್ರತ್ಯಾರೋಪಗಳಾವುದು ಪರಿಣಾಮ ಬೀರುವುದಿಲ್ಲ ಎನ್ನುವುದನ್ನು ಮರೆಯಬಾರದು.

ಪರಿಣಾಮವೇ ಬೀರುವುದಿಲ್ಲ ಎಂದ ಮೇಲೆ, ಅದನ್ನು ಇಟ್ಟುಕೊಂಡು ಪರ-ವಿರೋಧ ಚರ್ಚೆಯೂ ಅಗತ್ಯವಿಲ್ಲ ಎನ್ನುವ ವಾದ ಅನೇಕರದ್ದಾಗಿದೆ. ಕುಮಾರಸ್ವಾಮಿ ಅವರು ಈ ರೀತಿಯ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ಹಿಟ್ ಆಂಡ್ ರನ್ ಮಾಡಿರುವ ಉದಾಹರಣೆಗಳಿವೆ. ಹೀಗಿರು ವಾಗ, ಅವರ ವಿರುದ್ಧ ಅಥವಾ ವೈಯಕ್ತಿಕ ನಿಂದನೆ ಮಾಡಿ, ಜನರಿಗೆ ಅವರ ಮೇಲೆ ‘ಅನುಕಂಪ’ ಸಿಗುವಂತೆ ಮಾಡುವ ಸಾಧ್ಯತೆಯೇ ಹೆಚ್ಚಿದೆ. ಆದ್ದರಿಂದ ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡದೇ, ಬಿಜೆಪಿಗರು ಇರಬೇಕಿತ್ತು.

ಬಿಜೆಪಿಯಲ್ಲಿರುವ ಕೆಲ ನಾಯಕರು ಕೇವಲ ಆರೋಪಕ್ಕೆ ಉತ್ತರ ಕೊಡುವ ಬದಲು ವಿವಾದಾತ್ಮಕ ಹೇಳಿಕೆ ನೀಡುವುದೇ ಹೆಚ್ಚು. ಇದು ಸಹ ಬಿಜೆಪಿಗೆ ಡ್ಯಾಮೇಜ್ ಆಗುತ್ತದೆ ಎನ್ನುವ ಆತಂಕ ಕೆಲವರಲ್ಲಿದೆ. ಹಾಗೆ ನೋಡಿದರೆ ರಾಜ್ಯ ಬಿಜೆಪಿ ನಾಯಕರು ಈ ವಿಷಯದಲ್ಲಿ ಕೇಂದ್ರದ ನಾಯಕರನ್ನು ನೋಡಿ ಕಲಿಯಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ದಿನದಿಂದ ಕಾಂಗ್ರೆಸಿಗರು, ಒಂದಿಲ್ಲೊಂದು ವಿಷಯದಲ್ಲಿ ಮೋದಿ ವಿರುದ್ಧ ವಾಕ್ಸಮರ ನಡೆಸುತ್ತಲೇ ಇದ್ದಾರೆ. ಅದರಲ್ಲಿಯೂ ಕಾಂಗ್ರೆಸ್‌ನಿಂದ ಪ್ರಧಾನಿ ಅಭ್ಯರ್ಥಿಯಾಗಿದ್ದ ರಾಹುಲ್ ಗಾಂಧಿ ಅವರು, ನಿತ್ಯ ಒಂದಿಲ್ಲೊಂದು ಆರೋಪವನ್ನು ಮಾಡುತ್ತಲೇ ಇದ್ದಾರೆ. ಆದರೆ ಈ ಯಾವ ಹೇಳಿಕೆಗಳಿಗೂ ಪ್ರಧಾನಿ ನರೇಂದ್ರ ಮೋದಿ ಅವರಾಗಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಲಿ ಅಥವಾ ಇನ್ಯಾವುದೇ ವರಿಷ್ಠರು ಈ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ.

ಒಂದು ನೀಡುವ ಸಮಯ ಒದಗಿಬಂದರೂ, ಅದನ್ನು ಅಳೆದು- ತೂಗಿ ಟೀಕಿಸುತ್ತಾರೆ. ಆದರೆ ಬಹುತೇಕ ಸಮಯದಲ್ಲಿ  ನಿರ್ಲಕ್ಷ್ಯದ ಮೂಲಕವೇ, ಟೀಕೆಗಳೆಲ್ಲ ಸುಳ್ಳು ಎನ್ನುವುದನ್ನು ಸಾಬೀತು ಮಾಡುವ ಪ್ರಯತ್ನವನ್ನು ಮಾಡುತ್ತಾರೆ. ಕೆಲವು ಉದಾಹರಣೆ ನೋಡುವುದಾದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಸರಕಾರ ರಫೆಲ್ ಯುದ್ಧ ವಿಮಾನ ಖರೀದಿಸಿದ ವಿಷಯವಾಗಿ ಭಾರಿ ಗದ್ದಲವನ್ನೇ ಸೃಷ್ಟಿಸಿದ್ದರು. ಆದರೆ ಮೋದಿ ಈ ಬಗ್ಗೆ ಕೆಲ ಭಾಷಣ ಅಥವಾ ಸಂಸತ್ ಉತ್ತರದ ಹೊರತಾಗಿ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ಇದೇ ರೀತಿ ಕಳೆದ ಏಳೆಂಟು ತಿಂಗಳಿನಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ಬಗ್ಗೆಯೂ ಅಷ್ಟೇ. ಆರಂಭದಲ್ಲಿ ಸಂಧಾನ ಮಾಡುವ ಪ್ರಯತ್ನ ಮಾಡಿದರಾದರೂ, ಬಳಿಕ ದೆಹಲಿಯಲ್ಲಿ ಪ್ರತಿಭಟನೆಯೇ ನಡೆಯುತ್ತಿಲ್ಲ ಎನ್ನುವ
ಹಾಗೇ ಕೇಂದ್ರ ಸರಕಾರ ನಡೆದುಕೊಳ್ಳಲು ಆರಂಭಿಸಿತ್ತು. ಆ ಮೂಲಕ ಆ ಪ್ರತಿಭಟನೆಗೆ ಸಿಗುತ್ತಿದ್ದ ಪ್ರಾಮುಖ್ಯತೆ ಕಡಿಮೆಯಾಗುತ್ತಾ ಹೋಯಿತು.

ಈಗ ಪ್ರತಿಭಟನೆಯಲ್ಲಿ ಭಾಗವಹಿಸಿರುವವರು ಹೊರತುಪಡಿಸಿ, ಇನ್ಯಾರಿಗೂ ಆ ಪ್ರತಿಭಟನೆ ಏನಾಗುತ್ತಿದೆ ಎನ್ನುವುದು ತಿಳಿದಿಲ್ಲ. ವ್ಯವಸ್ಥೆಯಲ್ಲಿ ಜನರಿಗೆ ಯಾವುದೇ ಘಟನೆ, ವಿಷಯದ ಬಗ್ಗೆ ನೆನಪು ಕಡಿಮೆಯಿರುತ್ತದೆ. ಒಂದು ವಿಷಯ ಬಂದಾಗ ಇರುವ ಆಸಕ್ತಿ ಕೆಲ ದಿನಗಳ ಬಳಿ ಇರುವುದಿಲ್ಲ. ಮತ್ತೊಂದು ವಿಷಯ ಬಂದಾಗ ಆ ವಿಷಯದ ಬಗ್ಗೆ ಯೋಚಿಸಿಕೊಂಡು ಹೋಗುವುದು ಸಹಜ. ಈ ವಾಸ್ತವವನ್ನು ರಾಜ್ಯದಲ್ಲಿರುವ ಕೆಲ ಬಿಜೆಪಿಗರು ಅರಿತುಕೊಂಡಿದ್ದರೆ, ಕುಮಾರಸ್ವಾಮಿ
ಅವರು ಆರ್‌ಎಸ್‌ಎಸ್ ವಿರುದ್ಧ ನೀಡಿದ ಹೇಳಿಕೆ ಎಂದೋ ಹಳಸಾಗಿ ಹೋಗುತ್ತಿತ್ತು.

ಇನ್ನು ನಾಲ್ಕು ವರ್ಷ ಕಳೆದರೆ, ಶತಮಾನೋತ್ಸವ ಆಚರಿಸುವ ಸ್ವಯಂ ಸೇವಕ ಸಂಘದ ಬಗ್ಗೆ ಕರ್ನಾಟಕದ ನಾಯಕರು ಸಮರ್ಥಿಸಿಕೊಂಡರೆ ಮಾತ್ರ ಅವರ ಹಿರಿಮೆ, ಗರಿಮೆ ಹೆಚ್ಚಲಿದೆ ಎನ್ನುವ ಮನಸ್ಥಿತಿಯಲ್ಲಿ ಬಿಜೆಪಿ ನಾಯಕರಿದ್ದಾರೆ. ಅಂತಹ ಮನಸ್ಥಿತಿಯಿಂದ ಹೊರಬರುವ ಅಗತ್ಯವಿದೆ. ಪ್ರತಿಪಕ್ಷದವರು ಮಾಡುವ ಪ್ರತಿ ಟೀಕೆಗೂ ಪ್ರತಿಕ್ರಿಯೆ ನೀಡುತ್ತಾ ಹೋಗುವುದರಿಂದ, ಲಾಭಕ್ಕಿಂತ ನಷ್ಟವೇ ಹೆಚ್ಚು. ಆದ್ದರಿಂದ ವಾರದ ಹಿಂದೆ ಕುಮಾರಸ್ವಾಮಿ ಅವರು ನೀಡಿದ ಹೇಳಿಕೆ ಯನ್ನು ಹಿಡಿದು ಜಗ್ಗಾಡುವುದಕ್ಕಿಂತ, ಅದನ್ನು ಕೇಳಿಸಿಕೊಳ್ಳದಯೇ ಬಿಟ್ಟಿದ್ದರೆ ಈ ವೇಳೆಗೆ ಆ ಹೇಳಿಕೆ ‘ಕಸದ ಬುಟ್ಟಿ’ಗೆ ಸೇರಿ ಕಾಲವಾಗಿರುತ್ತಿತ್ತು ಎನ್ನುವುದನ್ನು ಅರಿಯಬೇಕಿದೆ.