Sunday, 15th December 2024

’ಮೌನ’ ವಾಗಿದೆ ಎಂದರೆ ಎಲ್ಲವೂ ಸರಿಹೋಗಿದೆ ಎಂದಲ್ಲ !

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ಕಳೆದೊಂದು ವಾರದಿಂದ ಎಲ್ಲಿ ನೋಡಿದರೂ ಅಫ್ಘಾನಿಸ್ತಾನ, ತಾಲಿಬಾನ್, ಜನರ ರಕ್ಷಣೆ, ರೆಸ್ಕ್ಯೂ ಕಾರ್ಯಾಚರಣೆ, ತಾಲಿಬಾನ್ ಅಲ್ಲಿ ದಾಳಿ ಮಾಡಿದೆ, ಇಲ್ಲಿ ಇಷ್ಟು ಜನರನ್ನು ಕೊಂದಿದೆ ಎನ್ನುವುದೇ ಸುದ್ದಿ. ಈ ಸುದ್ದಿಯ ಗದ್ದಲದಲ್ಲಿ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ಹೆಚ್ಚು ಬ್ರೇಕಿಂಗ್ ಬರುತ್ತಿಲ್ಲ.

ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಎದ್ದಿದ್ದ ಆಂತರಿಕ ತಿಕ್ಕಾಟಗಳು ತಾಲಿಬಾನಿಗಳ ಆರ್ಭಟದಲ್ಲಿ ಹೆಚ್ಚು ಸುದ್ದಿಯಾಗುತ್ತಿಲ್ಲ ಎನ್ನುವುದು ಎಷ್ಟು ಸತ್ಯವೋ, ಬಹುತೇಕ
ನಾಯಕರು ತಮ್ಮ ಅಸಮಾಧಾನವನ್ನು ತಮ್ಮಲ್ಲಿಯೇ ಇಟ್ಟುಕೊಂಡಿದ್ದಾರೆ ಎನ್ನುವುದು ಅಷ್ಟೇ ಸತ್ಯ. ಅಂದ ಮಾತ್ರಕ್ಕೆ ರಾಜ್ಯ ರಾಜಕೀಯದಲ್ಲಿರುವ ಎಲ್ಲ ಸಮಸ್ಯೆಗಳು ಬಗೆಹರಿದವೇ ಎನ್ನುವ ಪ್ರಶ್ನೆಯನ್ನು ಎತ್ತಿದರೆ ಸಿಗುವ ಉತ್ತರ ‘ಇಲ್ಲ’ ಎನ್ನುವುದು.

ಹೌದು, ಬಿಜೆಪಿಯಲ್ಲಿ ಯಡಿಯೂರಪ್ಪ ಅವರು ರಾಜೀನಾಮೆ ನೀಡುವ ಎರಡು ತಿಂಗಳ ಮೊದಲು ಹಾಗೂ ರಾಜೀನಾಮೆ ನೀಡಿದ 15 ದಿನಗಳ ಕಾಲ ನಡೆದ ರಾಜಕೀಯ ಚಟುವಟಿಕೆಗಳು ಭಾರಿ ಗೊಂದಲವನ್ನು ಸೃಷ್ಟಿಸಿತ್ತು. ಒಂದು ಹಂತಕ್ಕೆ ಜನರೆಲ್ಲ, ‘ಈ ರಾಜಕೀಯ ಮೇಲಾಟವನ್ನು ಮಾಡಿಕೊಂಡು ಅರಾಜಕತೆ ಸೃಷ್ಟಿಸಲು ಮೈತ್ರಿ ಸರಕಾರ ಬೀಳಿಸಬೇಕಿತ್ತೇ? ’ ಎಂದು ಪ್ರಶ್ನಿಸಲು ಶುರು ಮಾಡಿದ್ದರು. ಈ ಗೊಂದಲ-ಗೋಜಲು ಆನಂದ್ ಸಿಂಗ್ ಖಾತೆ ಕ್ಯಾತೆಯ ತನಕವೂ ಮುಂದುವರಿದಿತ್ತು.

ಆದರೆ ಇದ್ದಕ್ಕಿದ್ದಂತ ಬಿಜೆಪಿಯಲ್ಲಿ ಎಲ್ಲವೂ ಮೌನ ! ಏನೂ ನಡೆದೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ರಾಜಕೀಯ ಬೆಳವಣಿಗೆಗಳು ನಿಂತಿವೆ. ಈ ರೀತಿ ನಿಂತ ನೀರಾಗಿ, ಬಳಿಕ ಒಮ್ಮೆಲೆ ಸುನಾಮಿಯ ರೀತಿಯಲ್ಲಿ ಸ್ಫೋಟಗೊಳ್ಳುವುದು ಹೊಸದಲ್ಲ. ಬಿಜೆಪಿ ಸರಕಾರಕ್ಕೆ ಬಂದಿದ್ದು ಸಹ ಕ್ಷಿಪ್ರ ರಾಜಕೀಯ ಬೆಳವಣಿಗೆ ಯಿಂದಲೇ ಅಲ್ಲವೇ? ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ, ಆಪರೇಷನ್ ಕಮಲದ ಬಗ್ಗೆ ವಾರಕ್ಕೊಮ್ಮೆ ಸುದ್ದಿ ಬರುತ್ತಿತ್ತು. ಆದರೆ ಅದೆಲ್ಲಾ ಸುಳ್ಳಾಯಿತು. ಕೊನೆಗೆ ನಿಜವಾಗಿಯೂ 14 ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದರೂ, ಅದನ್ನು ಒಪ್ಪುವ ಸ್ಥಿತಿಯಲ್ಲಿ ಕಾಂಗ್ರೆಸ್ -ಜೆಡಿಎಸ್ ಇರಲಿಲ್ಲ. ಆ ಎಲ್ಲರೂ ಮುಂಬೈಗೆ ಹಾರಿದಾಗಲೇ ತಿಳಿದಿದ್ದು, ಅಂದಿನ ಸ್ಥಿತಿಯ ಗಂಭೀರತೆ !

ಮೈತ್ರಿ ಸರಕಾರ ಪತನವಾದ ಉದಾಹರಣೆಯನ್ನು ಪ್ರಾಸಂಗಿಕವಾಗಿ ಉಲ್ಲೇಖ ಮಾಡಿದ್ದಷ್ಟೇ. ಬಿಜೆಪಿಯಲ್ಲಿ ಎಲ್ಲರೂ ಮೌನವಾಗಿರುವುದಕ್ಕೂ ಮೈತ್ರಿ ಸರಕಾರ ದಲ್ಲಿ ಶಾಸಕರು ಮೌನವಾಗಿದಿದ್ದಕ್ಕು ವ್ಯತ್ಯಾಸ ಬಹಳಷ್ಟಿದೆ. ಬಿಜೆಪಿಯಲ್ಲಿ ಅಸಮಾಧಾನವಿದ್ದರೂ ರಾಜೀನಾಮೆ ನೀಡಿ, ಸರಕಾರ ಬೀಳಿಸುವಷ್ಟು ಧೈರ್ಯವನ್ನು ಯಾರು ತೋರಿಸುವುದಿಲ್ಲ. ತೋರಿಸಲು ಮುಂದಾದರೂ, ಬಿಜೆಪಿ ವರಿಷ್ಠರು ಅದನ್ನು ನಿಯಂತ್ರಿಸುವಷ್ಟು ಶಕ್ತರಾಗಿದ್ದಾರೆ. ಆದರೆ ಈ ಸಮಯದಲ್ಲಿ ಹೇಳ ಬೇಕಿರುವುದು ಬಿಜೆಪಿಯಲ್ಲಿರುವ ‘ಬೂದಿ ಮುಚ್ಚಿದ ಕೆಂಡ’ದ ವಿಚಾರ. ಆಂತರಿಕ ಭಿನ್ನಾಭಿಪ್ರಾಯಗಳ ದೊಡ್ಡ ಹೊರೆಯನ್ನು ಹೊತ್ತಿರುವ ಬಿಜೆಪಿಯಲ್ಲಿ ಸದ್ಯಕ್ಕೆ ಎಲ್ಲವೂ ಸರಿಯಾಗಿರುವಂತೆ ಕಾಣಿಸುತ್ತಿದೆ. ಅದರಲ್ಲಿಯೂ ತಾವು ಅಧಿಕಾರದ ಗದ್ದುಗೆ ಹಿಡಿಯಬೇಕೆಂಬ ಕಾರಣಕ್ಕೆ ಯಡಿಯೂರಪ್ಪ ವಿರೋಧ ಕಟ್ಟಿಕೊಂಡು ದೆಹಲಿ-ಬೆಂಗಳೂರು ಪರೇಡ್ ನಡೆಸಿದ್ದ ಸಿ.ಪಿ.ಯೋಗೇಶ್ವರ, ಅರವಿಂದ ಬೆಲ್ಲದ್ ಅವರು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ.

ಕೆಲವೊಮ್ಮೆ ಬಹಿರಂಗ ಹೇಳಿಕೆ ನೀಡುವುದಕ್ಕಿಂತ, ಒಳಗೊಳಗೆ ಮಸಲತ್ತು ನಡೆಸುವುದು ಯಾವುದೇ ಪಕ್ಷಕ್ಕೆ ಆತಂಕಕಾರಿ ಬೆಳವಣಿಗೆ. ಇನ್ನು ಯುದ್ಧವಿಲ್ಲ ದಿದ್ದರೂ, ಗಡಿಯಲ್ಲಿ ಹೇಗೆ ಆಗೊಮ್ಮೆ ಈಗೊಮ್ಮೆ ಗಾಳಿಯಲ್ಲಿ ಗುಂಡು ಹಾರಿಸುತ್ತಾರೋ, ಅದೇ ರೀತಿ ಬಿಜೆಪಿಯ ರೆಬೆಲ್ ಬಣದಲ್ಲಿ ಗುರುತಿಸಿಕೊಂಡಿರುವ
ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸರಕಾರದ ನಿರ್ಣಯದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಈ ರೀತಿಯ ‘ಗಾಳಿಯಲ್ಲಿ ಗುಂಡು’ ಹೊಡೆಯುವ ನೀತಿ ಬಿಜೆಪಿಗೆ ಇಂದಿನ ಮಟ್ಟಿಗೆ ಯಾವುದೇ ಸಮಸ್ಯೆಯನ್ನು ತಂದಿರದಿದ್ದರೂ, ‘ಪಕ್ಷದೊಳಗಿನ ಭಿನ್ನಮತ ಕೊನೆಯಾಗಿಲ್ಲ’ ಎನ್ನುವ ಸಂದೇಶವನ್ನು ಅಂತೂ ಸ್ಪಷ್ಟವಾಗಿ ರವಾನಿಸುತ್ತಲೇ ಇದೆ.

ಇದು ಬಿಜೆಪಿಯ ವಿರುದ್ಧ ಬಹಿರಂಗವಾಗಿ ನಿಂತುಕೊಂಡವರ ವಿಷಯ. ಇನ್ನು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಿನಿಂದ ತಟಸ್ಥ ನೀತಿ ಅನುಸರಿಸಿ,
ಬೊಮ್ಮಾಯಿ ಸಿಎಂ ಆಗುತ್ತಿದ್ದಂತೆ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ರಾಮದಾಸ್, ಎಂ.ಪಿ. ಕುಮಾರಸ್ವಾಮಿ, ಪೂರ್ಣಿಮಾ ಶ್ರೀನಿವಾಸ್‌ರಂತಹ ೧೦ರಿಂದ ೧೫ಕ್ಕೂ ಬಿಜೆಪಿ ಶಾಸಕರು ಇನ್ನೊಂದೆಡೆ. ಈ ಎಲ್ಲರೂ ಸಚಿವ ಸಂಪುಟ ರಚನೆ ವೇಳೆ ತಮಗೆ ಅವಕಾಶ ಸಿಗುತ್ತದೆ ಎನ್ನುವ ಲೆಕ್ಕಾಚಾರ ದಲ್ಲಿದ್ದರು. ಆದರೆ ಅಂತಿಮವಾಗಿ ಕೇವಲ ನಾಲ್ಕೈದು ಜನರನ್ನು ಹೊರತುಪಡಿಸಿ, ಇನ್ನುಳಿದವರೆಲ್ಲ ಯಡಿಯೂರಪ್ಪ ಸರಕಾರದಲ್ಲಿ ಸಚಿವರಾಗಿದ್ದವರೇ ಮುಂದುವರಿದಿದ್ದಾರೆ.

ವರಿಷ್ಠರ ಈ ತೀರ್ಮಾನ ತಟಸ್ಥ ಬಣದಲ್ಲಿದ್ದ ಬಹುತೇಕರಿಗೆ ಬೇಸರ ತರಿಸಿದೆ. ಆದರೆ ಅವರಿಗೆ ಇದನ್ನು ವ್ಯಕ್ತಪಡಿಸುವ ವೇದಿಕೆ ಸಿಗುತ್ತಿಲ್ಲ. ಇದು ಸಚಿವ ಸ್ಥಾನ ಸಿಗದವರ ಕಥೆಯಾದರೆ, ಸಿಕ್ಕವರದ್ದು ಮತ್ತೊಂದು ಕಥೆಯಿದೆ. ‘ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವುದಷ್ಠೆ ನನ್ನ ಗುರಿ’ ಎಂದು ಘೋಷಿಸಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದ ಆನಂದ್ ಸಿಂಗ್ ಅವರ ಪ್ರತ್ಯೇಕ ಜಿಲ್ಲೆಯ ಆಸೆಯನ್ನು ಯಡಿಯೂರಪ್ಪ ಅವರು ಪೂರೈಸುವ ಜತೆಜತೆಗೆ ಅವರನ್ನು ಸಚಿವರನ್ನಾಗಿಯೂ ಮಾಡಿದ್ದರು. ಸಚಿವರಾಗಿದ್ದ ವೇಳೆ ಆಗೊಮ್ಮೆ, ಈಗೊಮ್ಮೆ ವಿಧಾನಸೌಧ ಹಾಗೂ ತಮ್ಮ ಕೊಠಡಿಗೆ ಬರುತ್ತಿದ್ದ ಸಿಂಗ್, ಹೇಳಿ ಕೊಳ್ಳುವ ಸಾಧನೆಯನ್ನು ಏನು ಮಾಡಲಿಲ್ಲ.

ಆದರೂ ಕೊಟ್ಟ ಮಾತು ಉಳಿಸಿಕೊಳ್ಳಲು ಬೊಮ್ಮಾಯಿ ಅವರ ಸರಕಾರದಲ್ಲಿಯೂ ಅವರಿಗೆ ಸಚಿವ ಸ್ಥಾನ ನೀಡಲಾಯಿತು. ಪ್ರವಾಸೋದ್ಯಮ ಖಾತೆಯನ್ನು
ನೀಡಲಾಯಿತು. ಹಾಗೆ ನೋಡಿದರೆ ವಿಜಯನಗರ, ಬಳ್ಳಾರಿ ಜಿಲ್ಲೆಯಲ್ಲಿರುವ ಪ್ರವಾಸೋದ್ಯಮಕ್ಕೆ ವೇಗ ಕೊಡಲು ಇದಕ್ಕಿಂತ ಅತ್ಯುತ್ತಮ ಖಾತೆ ಮತ್ತೊಂದು
ಇರಲಿಲ್ಲ. ಆದರೆ ಅದನ್ನು ಮಾಡದೇ, ತಮಗೆ ನೀಡಿರುವ ಖಾತೆ ಬದಲಾಯಿಸಿ, ಇಲ್ಲದಿದ್ದರೆ ರಾಜೀನಾಮೆ ಕೊಡುತ್ತೇನೆ ಎಂದು ಬೆದರಿಕೆ ಹಾಕಿದರು. ಇದಕ್ಕೆ
ಬಗ್ಗದಿದ್ದಾಗ ಚಕಾರ ಎತ್ತದೇ ಮೌನವಾಗಿರುವುದು ಬಿಜೆಪಿಯಲ್ಲಿರುವ ಮತ್ತೊಂದು ‘ಬಾಂಬ್’ ಯಾವಾಗ ಸ್ಫೋಟವಾಗುತ್ತದೆ ಎನ್ನುವ ಆತಂಕದಲ್ಲಿಯೇ ಇರಬೇಕು.

ಈ ರೀತಿ ಸಾಲು ಸಾಲು ಅಸಮಾಧಾನವನ್ನು ಹೊತ್ತಿರುವ ಬಿಜೆಪಿ ಹೊರಗಡೆ ಏನೂ ಆಗಿಲ್ಲವೆಂದು ಹೇಳಿಕೊಂಡು ಓಡಾಡುತ್ತಿದ್ದರೂ, ಒಡನಾಳದಲ್ಲಿ ‘ಸೆರಗಿ ನಲ್ಲಿರುವ ಕೆಂಡ’ ಎನ್ನುವುದನ್ನು ಮರೆತಿಲ್ಲ. ಹಾಗೆ ನೋಡಿದರೆ, ಇದೇ ಪರಿಸ್ಥಿತಿ ಕಾಂಗ್ರೆಸ್‌ನಲ್ಲಿಯೂ ಮುಂದುವರಿದಿದೆ. ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ಜಗಳ ವಾದರೆ, ಕಾಂಗ್ರೆಸ್‌ನಲ್ಲಿ ‘ಪವರ್ ಸೆಂಟರ್’ಗಾಗಿ ಮುಸುಕಿನ ಗುದ್ದಾಟ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಅಧಿಕಾರ ಸ್ವೀಕರಿಸುವ ತನಕ, ರಾಜ್ಯ ಕಾಂಗ್ರೆಸ್ ಪವರ್ ಸೆಂಟರ್ ಸಿದ್ದರಾಮಯ್ಯ ಅವರೊಬ್ಬರೆ ಆಗಿದ್ದರು. ಡಿಕೆಶಿ ವರಿಷ್ಠರಿಗೆ ಹತ್ತಿರವಾಗಿದ್ದರೂ, ಕೆಪಿಸಿಸಿ ಅಧ್ಯಕ್ಷಗಾದಿಯಲ್ಲಿ ಕೂತಿದ್ದ ಡಾ.ಜಿ. ಪರಮೇಶ್ವರ ಅವರು ಸಿದ್ದರಾಮಯ್ಯ ಅವರೊಂದಿಗೆ ಎಂದಿಗೂ ಗುದ್ದಾಟಕ್ಕೆ ಬೀಳಲಿಲ್ಲ.

ಇನ್ನು ಖರ್ಗೆ ಅವರು ತಮನೂ ರಾಜ್ಯ ರಾಜಕೀಯಕ್ಕೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದರು. ಆದರೀಗ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್, ಪ್ರತಿಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರಿರುವುದರಿಂದ ಎರಡು ಶಕ್ತಿಕೇಂದ್ರಗಳು ರಾಜ್ಯ ಕಾಂಗ್ರೆಸ್‌ನಲ್ಲಿ ಆಗಾಗ್ಗೆ ಭಿನ್ನಮತವನ್ನು ಸೃಷ್ಟಿಸುವ ವೇದಿಕೆಗಳಾಗುತ್ತಿವೆ. ಕೆಲವೊಂದು ವಿಚಾರದಲ್ಲಿ ಸಿದ್ದರಾಮಯ್ಯ ಅವರದ್ದೇ ಒಂದು ನಿಲುವಾಗಿದ್ದರೆ, ಡಿಕೆಶಿ ಅವರದ್ದು ಮತ್ತೊಂದು ನಿಲುವಾಗಿರುತ್ತದೆ. ಈ ಎರಡು ತತ್ವಿರುದ್ಧ ನಿಲುವಿನ ನಡುವೆ ರಾಜ್ಯ ಕಾಂಗ್ರೆಸ್ ದೋಣಿ ನಿಂತಿದೆ.

ಅಂದ ಮಾತ್ರಕ್ಕೆ ಈ ಇಬ್ಬರಲ್ಲಿ ಯಾರನ್ನೂ ಕೈಬಿಡುವ ಸ್ಥಿತಿಯಲ್ಲಿ ಪಕ್ಷದ ವರಿಷ್ಠರಿಲ್ಲ. ಆದ್ದರಿಂದ ಕಾಂಗ್ರೆಸ್‌ನಲ್ಲಿ ನಡೆಯುವ ಕೋಲ್ಡ್ ವಾರ್‌ಗಳು ನಿಲ್ಲುವ ಸಾಧ್ಯತೆ ಗಳಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ಕೆಲ ದಿನಗಳ ಹಿಂದೆ ಕೆಪಿಸಿಸಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಆಗಲಿ, ಅಽಕಾರಕ್ಕೆ ಬರುವ ಮೊದಲೇ, ‘ಮುಂದಿನ ಮುಖ್ಯಮಂತ್ರಿ ಯಾರು?‘ ಎನ್ನುವ ವಿಷಯ ವನ್ನು ನೋಡುವುದಾದರೆ, ಈ ಎರಡೂ ವಿಷಯದಲ್ಲಿ ಎರಡೂ ಬಣದವರು ಸೋಲನ್ನು ಒಪ್ಪಲು ತಯಾರಿರಲಿಲ್ಲ. ಕೊನೆಗೆ ಇಬ್ಬರೂ ದೆಹಲಿಗೆ ಹೋಗಿ, ರಾಹುಲ್ ಗಾಂಧಿ, ಸುರ್ಜೇವಾಲ ಬಳಿ ದೂರು ನೀಡುವ ಮಟ್ಟಿಗೆ ಹೋಗಿತ್ತು. ಯುವ ಮೋರ್ಚಾ ಅಧ್ಯಕ್ಷ ವಿಷಯದಲ್ಲಿ ರಕ್ಷಾ ರಾಮಯ್ಯ ಸಿದ್ದರಾಮಯ್ಯ ಅವರ ಬಣದವರು ಎನ್ನುವ ಏಕೈಕ ಕಾರಣಕ್ಕೆ, ಡಿಕೆಶಿ ತಮ್ಮ ಬೆಂಬಲಿಗ ನಳಪಾಡ್ ವಿರುದ್ಧ ಪಕ್ಷದಲ್ಲಿ, ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧವಿದ್ದರೂ ಪ್ರತಿಷ್ಠೆಗೆ ಬಿದ್ದು ನಳಪಾಡ್ ಪರವಾಗಿ ಬ್ಯಾಟಿಂಗ್ ಮಾಡಿದರು.

ಹಾಗೆ ನೋಡಿದರೆ, ಯುವ ಮೋರ್ಚಾ ಅಧ್ಯಕ್ಷರ ಆಯ್ಕೆಯನ್ನು ಚುನಾವಣೆ ಮೂಲಕ ಮಾಡಿದ್ದರಿಂದ ರಕ್ಷಾ ರಾಮಯ್ಯ ಗೆದ್ದಿದ್ದರು. ಗೆದ್ದರು ಎಂದರೆ, ಅವರಿಗೆ
ಅಽಕಾರ ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ನಿಯಮ. ಆದರೆ ಈ ನಿಯಮವನ್ನು ಮೀರಿ, ವರಿಷ್ಠರ ಮಟ್ಟದಲ್ಲಿ ತಮ್ಮ ಹಠವನ್ನು ಸಾಧಿಸಲು ನಳಪಾಡ್‌ಗೂ
ಸ್ಥಾನ ಸಿಗುವಂತೆ ನೋಡಿಕೊಂಡರು. ಯುವ ಮೋರ್ಚಾ ವಿಷಯದಲ್ಲಿಯೇ ಇಷ್ಟು ತಿಕ್ಕಾಟವಾಗಿದ್ದರೆ, ಮುಂದಿನ ಸೀಟು ಹಂಚಿಕೆ, ಚುನಾವಣಾ ಪ್ರಚಾರದ ವಿಷಯದಲ್ಲಿ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯ ಬಾರದೇ ಇರುವುದಿಲ್ಲ.

ಒಂದು ವೇಳೆ ಸಿದ್ದರಾಮಯ್ಯ ಅವರ ಬಣದವರಿಗೆ ಹೆಚ್ಚು ಟಿಕೆಟ್ ಸಿಕ್ಕರೆ ಡಿಕೆ ಮುನಿಸಿಕೊಳ್ಳುತ್ತಾರೆ. ಡಿಕೆಶಿ ಬಣದವರಿಗೆ ಹೆಚ್ಚು ಸೀಟು ಸಿಕ್ಕರೆ, ಸಿದ್ದರಾಮಯ್ಯ
ಅವರು ಚುನಾವಣಾ ಪ್ರಚಾರದಿಂದ ಸದ್ದಿಲ್ಲದೇ ಹಿಂದಕ್ಕೆ ಹೋಗುತ್ತಾರೆ. ಇದರಿಂದ, ಚುನಾವಣೆಯಲ್ಲಿ ಹೊಡೆತ ಬೀಳುವುದು ಮಾತ್ರ ಪಕ್ಷಕ್ಕೆ. ಈ ಎಲ್ಲ ಗೊತ್ತಿದ್ದರೂ, ಇಬ್ಬರಲ್ಲಿ ಒಬ್ಬರನ್ನು ನಿಯಂತ್ರಿಸುವ ಶಕ್ತಿ ಸದ್ಯಮಟ್ಟಿಗೆ ರಾಷ್ಟ್ರೀಯ ಕಾಂಗ್ರೆಸ್‌ಗೆ ಇಲ್ಲವಾಗಿದೆ. ರಾಷ್ಟ್ರೀಯ ಪಕ್ಷಗಳಲ್ಲಿ ಈ ರೀತಿಯ ಬೂದಿ ಮುಚ್ಚಿದ
ಕೆಂಡದ ಪರಿಸ್ಥಿತಿಯಿದ್ದರೆ, ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್‌ನದ್ದು ವಿಚಿತ್ರ ಸಮಸ್ಯೆ. ಅಲ್ಲಿ ಈ ರೀತಿಯ ಆಂತರಿಕ ಸಂಘರ್ಷಗಳಿಗೆಲ್ಲ ಕಿಮ್ಮತ್ತಿಲ್ಲ.

ಅಷ್ಟಕ್ಕೂ ಅಲ್ಲಿ ಪಕ್ಷದ ವರಿಷ್ಠರ ವಿರುದ್ಧ ಧ್ವನಿ ಎತ್ತುವುದಾದರೂ ಯಾರು? ಆ ಪಕ್ಷ ಚುನಾವಣಾ ಸಮಯ ಮಾತ್ರವಲ್ಲ, ಅದನ್ನು ಹೊರತುಪಡಿಸಿ ಸದಾ ಯೋಚಿಸು ವುದು ಹಳೇ ಮೈಸೂರು ಭಾಗದ 35ರಿಂದ 40 ವಿಧಾನಸಭಾ ಕ್ಷೇತ್ರಗಳು ಮಾತ್ರ. ಆದ್ದರಿಂದ ಕಾಂಗ್ರೆಸ್ ಹಾಗೂ ಬಿಜೆಪಿಗಿರುವ ಸಮಸ್ಯೆ ಈ ಪಕ್ಷದಲ್ಲಿ ಇಲ್ಲ. ಆದರೂ ಈ ಬಾರಿ ಜೆಡಿಎಸ್ ನಾಯಕರು ಬಿಬಿಎಂಪಿ ಚುನಾವಣೆ ಯನ್ನು ಗಮನದಲ್ಲಿರಿಸಿಕೊಂಡು ಈಗಾಗಲೇ ಸಿದ್ಧತೆ ಆರಂಭಿಸಿಕೊಂಡಿದೆ. ಬಿಜೆಪಿ, ಕಾಂಗ್ರೆಸ್ ನಲ್ಲಿರುವ ಒಳ ತಿಕ್ಕಾಟವನ್ನು ಬಳಸಿಕೊಂಡು ಏನಾದರೂ ಲಾಭ ಮಾಡಿಕೊಳ್ಳಬಹುದೇ ಎನ್ನುವ ಲೆಕ್ಕಾಚಾರದಲ್ಲಿ ಜೆಡಿಎಸ್ ಇದೆ ಎಂದರೆ ತಪ್ಪಲ್ಲ.

ಆದರೆ ಜೆಡಿಎಸ್ ಎರಡು ರಾಷ್ಟ್ರೀಯ ಪಕ್ಷಗಳ ಒಳಗಿನ ಆಂತರಿಕ ತಿಕ್ಕಾಟವನ್ನು ತಮ್ಮ ಪರ ವಾಲುವಂತೆ ಮಾಡುವಷ್ಟು ಶಕ್ತಿ ಹಾಗೂ ಬದ್ಧತೆ ಇದೆಯೇ ಎನ್ನುವುದು ಬೇರೆ ಮಾತು. ಮುಂದಿನ ಒಂದೂವರೆ ವರ್ಷದಲ್ಲಿ ಎದುರಾಗಲಿರುವ ವಿಧಾನಸಭೆ, ಲೋಕಸಭೆ ಚುನಾವಣೆ ಅದಕ್ಕೂ ಮೊದಲು ಬರಲಿರುವ ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಹೊತ್ತಿಗೆ ಈ ‘ಬೂದಿ ಮುಚ್ಚಿದ ಕೆಂಡ’ವನ್ನು ಸಂಪೂರ್ಣವಾಗಿ ನಂದಿಸುವ ಕೆಲಸವಾಗದಿದ್ದರೆ, ಕೆಲ ಕ್ಷೇತ್ರ ದಲ್ಲಾದರೂ ಈ ಕೆಂಡ ಪಕ್ಷ ಸಂಘಟನೆಯನ್ನು ಸುಡದೇ ಬಿಡುವುದಿಲ್ಲ. ಅದರಲ್ಲಿಯೂ ಆಡಳಿತ ಪಕ್ಷ ಬಿಜೆಪಿಗೆ ಈ ಸಮಸ್ಯೆ ಇನ್ನಷ್ಟು ಹೆಚ್ಚಾದರೂ ಅಚ್ಚರಿಯಿಲ್ಲ.
ಆದ್ದರಿಂದ ಎರಡು ರಾಷ್ಟ್ರೀಯ ಪಕ್ಷದ ವರಿಷ್ಠರು ಕೆಂಡವಾಗಿರುವುದು ಬೂದಿಯಾಗಿ ಹೋಗಲಿದೆ ಎನ್ನುವ ಬೂದಿ ಮಾಡಿ, ಚುನಾವಣೆಗೆ ಸಂಘಟನೆಯನ್ನು ತಯಾರಿ
ಮಾಡಬೇಕಾಗಿದೆ. ನಿರ್ಲಕ್ಷ್ಯ ಮಾಡಿದರೆ, ಮುಂದೊಂದು ದಿನ ‘ಪಶ್ಚಾತ್ತಾಪ’ ಪಟ್ಟರೆ ‘ಟ್ರೇನ್ ಹೋದ ಮೇಲೆ ಟಿಕೆಟ್ ಪಡೆದಂತಾಗುತ್ತದೆ’.