Thursday, 12th December 2024

’ಆರ್ಯ’ರಿಂದ ನಾಗರಿಕತೆಯನ್ನು ಕಲಿತೆವೆಂಬ ಸುಳ್ಳಿಗೆ ಸಾಕ್ಷಿ ’ಸಿನೌಲಿ’ಯ ಸಮಾಧಿಗಳು

ವೀಕೆಂಡ್ ವಿಥ್ ಮೋಹನ್‌

ಮೋಹನ್‌ ವಿಶ್ವ

ಪಶ್ಚಿಮದಿಂದ ಬಂದಂಥ ಆರ್ಯರು ಭಾರತದ ಮೇಲೆ ದಾಳಿ ಮಾಡಿದರು, ಭಾರತಕ್ಕೆ ಅವರ ಆಗಮನದಿಂದ ನಾಗರಿಕತೆಯು ಹರಿದು ಬಂತೆಂದು ನಾವೆಲ್ಲರೂ ಶಾಲಾ ಪಠ್ಯ ಪುಸ್ತಕಗಳಲ್ಲಿ ಓದಿದ್ದೆವು. ಶಾಲಾ ಪಠ್ಯಗಳಲ್ಲಿ ತುಂಬಿದ ಇತಿಹಾಸವು ಇಂದಿಗೂ ನಮ್ಮ ತಲೆಯಲ್ಲಿ ಹಾಸು ಹೊಕ್ಕಾಗಿ ಹೋಗಿದೆ. ಸಣ್ಣ ವಯಸ್ಸಿನಲ್ಲಿ ಶಾಲೆಗಳಲ್ಲಿ ತಲೆಯಲ್ಲಿ ತುಂಬಿದ ವಿಷಯಗಳು ದೊಡ್ಡವ ರಾದ ಮೇಲೆ ಅಷ್ಟು ಸುಲಭವಾಗಿ ಸುಳ್ಳೆಂದು ಹೇಳಲು ಸಾಧ್ಯವಿಲ್ಲ.

ಕಮ್ಯುನಿಸ್ಟರಿಗೆ ಶಾಲಾ ಪಠ್ಯಗಳನ್ನು ರಚಿಸುವ ಜವಾಬ್ದಾರಿಯನ್ನು ನೆಹರು ಕಾಲದಲ್ಲಿ ನೀಡಲಾಯಿತು, ‘ರುಮೇಲ ಥಾಪರ್’ ಎಂಬ ಕಮ್ಯುನಿಸ್ಟ್ ಪ್ರಾಧ್ಯಾಪಕಿ ನಾವು ನೀವುಗಳು ಓದಿದ ಶಾಲಾ ಪಠ್ಯಪುಸ್ತಕಗಳ ರೂವಾರಿ. ಕಮ್ಯುನಿಸ್ಟರಿಗೆ ಭವ್ಯ ಭಾರತದ ಪ್ರಾಚೀನ ಇತಿಹಾಸವನ್ನು ಭಾರತೀಯರಿಗೆ ಪರಿಚಯಿಸಲು ಇಷ್ಟವಿರಲಿಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಸತ್ತು ಹೋದಂತಹ ಕಾರ್ಲ್ ಮಾರ್ಕ್ಸ್ ಸಿದ್ದಾಂತವನ್ನು ಭಾರತದಲ್ಲಿ ಸ್ಥಾಪಿಸಬೇಕೆಂಬುದು ಅವರ ಇಚ್ಛೆಯಾಗಿತ್ತು, ಇದರ ಸಲುವಾಗಿ ಭವ್ಯ ಭಾರತದ
ಇತಿಹಾಸವನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಮುಚ್ಚಿ ಹಾಕಿ ಭಾರತೀಯರ ನಾಗರಿಕತೆಯನ್ನು ಪಾಶ್ಚಿಮಾತ್ಯರಿಂದ ಕಲಿಯಲಾಯಿ ತೆಂಬ ಹಸಿ ಸುಳ್ಳನ್ನು ಪಠ್ಯಗಳಲ್ಲಿ ಹೇಳಿದರು.

ಇವರ ಬಹುದೊಡ್ಡ ಸುಳ್ಳುಗಳಂದು ಭಾರತಕ್ಕೆ ‘ಆರ್ಯರ’ ಆಗಮನ. ಮಹಾಭಾರತ, ರಾಮಾಯಣದಂಥ ಇತಿಹಾಸ ಪ್ರಸಿದ್ಧ ಘಟನೆಗಳಿಗೆ ಹಲವಾರು ಸಾಕ್ಷಿಗಳು ದೊರೆತಿದ್ದರೂ ಸಹ, ಅವೆಲ್ಲವೂ ಕಟ್ಟುಕತೆಯೆಂದು ಹೇಳುವ ಮೂಲಕ ಇತಿಹಾಸವನ್ನು ತಿರುಚಿದರು. ಭಾರತೀಯ ನಾಗರಿಕತೆಯ ಬೆಳವಣಿಗೆಯು ಯುಗ ಯುಗಾಂತರಗಳಿಂದ ನಡೆದುಕೊಂಡು ಬಂದಿದೆ. ಯಾವ ಪಾಶ್ಚಿಮಾತ್ಯರು ನಮಗೆ ನಾಗರಿಕತೆಯ ಪಾಠವನ್ನು ಹೇಳಿಕೊಡಲಿಲ್ಲ, ಬದಲಿಗೆ ನಮ್ಮಲ್ಲಿನ ನಾಗರಿಕತೆಯನ್ನು ಅವರು ಕಲಿತು ಇಲ್ಲಿನ ನಾಗರಿಕತೆಯ ಮೇಲೆ ದಾಳಿ ಮಾಡಿ ನಾಶ ಮಾಡಿದ್ದಾರೆಂಬ ಸತ್ಯವನ್ನು ಶಾಲಾ ಪಠ್ಯಗಳಲ್ಲಿ ಹೇಳಲಿಲ್ಲ.

ಶ್ರೀಕೃಷ್ಣನ ದ್ವಾರಕೆಯ ಕುರುಹುಗಳು ಸಮುದ್ರದಾಳದಲ್ಲಿ ಸಿಕ್ಕರೂ ಸಹ ಅದನ್ನು ಸುಳ್ಳೆಂದು ಹೇಳುವ ಮೂಲಕ ಆರ್ಯರ ಸುಳ್ಳು ಇತಿಹಾಸವನ್ನು ನಮಗೆಲ್ಲ ಹೇಳಿದ್ದರು, ಆದರೆ ಇತ್ತೀಚಿನ ಹಲವು ’ಉತ್ಖನನ’ಗಳು ಕಮ್ಯುನಿಸ್ಟರು ಪಠ್ಯಗಳಲ್ಲಿ ಬರೆದ
ಸುಳ್ಳುಗಳನ್ನು ಎಳೆಎಳೆಯಾಗಿ ಬಯಲಿಗೆಳೆಯತೊಡಗಿವೆ. ದೆಹಲಿಯಿಂದ ಸುಮಾರು 67 ಕಿಲೋ ಮೀಟರು ದೂರದ ಉತ್ತರ ಪ್ರದೇಶದಲ್ಲಿನ ‘ಸಿನೌಲಿ’ಯೆಂಬ ಪುಟ್ಟ ಗ್ರಾಮದಲ್ಲಿ 2006ರಲ್ಲಿ ರೈತನೊಬ್ಬ ತನ್ನ ಜಮೀನಲ್ಲಿ ಕೆಲಸಮಾಡುತ್ತಿದ್ದಾಗ ಹಳೆಯ ಕಾಲದ ಕೆಲವು ಪಾತ್ರೆಗಳು, ತಾಮ್ರದ ವಸ್ತುಗಳು, ಚಿನ್ನದ ಬಳೆಗಳು ಸಿಕ್ಕವು.

ತಮ್ಮ ಜಮೀನಿನಲ್ಲಿ ಸಿಕ್ಕಂತಹ ವಸ್ತುಗಳನ್ನು ಯಾರಿಗೂ ತಿಳಿಸದೇ ಅಲ್ಲಿನ ರೈತರು ಸ್ವಂತಕ್ಕಾಗಿ ಬಳಸಿಕೊಂಡರು. ಈ ವಿಷಯವು ಪುರಾತತ್ವ ಇಲಾಖೆಯ ಕಿವಿಗೆ ಬಿದ್ದಾಕ್ಷಣ ಆ ಜಾಗದಲ್ಲಿ ಸಣ್ಣದೊಂದು ಉತ್ಖನನವನ್ನು ಶುರುಮಾಡಿತ್ತು. ಉತ್ಖನನದಲ್ಲಿ ಸಾವಿರಾರು ವರ್ಷ ಹಳೆಯ ಹಲವು ಗೃಹೋಪಯೋಗಿ ವಸ್ತುಗಳು ಸಿಕ್ಕವು. ಒಂದು ಮಟ್ಟದ ಉತ್ಖನನವು ಮುಗಿದ ಮೇಲೆ ಪುರಾತತ್ವ ಇಲಾಖೆಯು ತನ್ನ ಕೆಲಸವನ್ನು ಅಲ್ಲಿಗೆ ನಿಲ್ಲಿಸಿತ್ತು. ಪುರಾತತ್ವ ಇಲಾಖೆಯು ಅದ್ಯಾಕೆ ತನ್ನ ಕೆಲಸವನ್ನು ಅರ್ಧದಲ್ಲಿ
ನಿಲ್ಲಿಸಿತು, ಯಾರು ಅವರನ್ನು ನಿಲ್ಲಿಸಲು ಹೇಳಿದರೆಂಬ ವಿಷಯ ಇದುವರೆಗೂ ತಿಳಿದುಬಂದಿಲ್ಲ.

2018 ಅಂದರೆ ಸುಮಾರು 12 ವರ್ಷಗಳ ನಂತರ ಮತ್ತೊಮ್ಮೆ ಪುರಾತತ್ವ ಇಲಾಖೆಯು ಅದೇ ಜಾಗದಲ್ಲಿ ‘ಉತ್ಖನನ’ವನ್ನು ಶುರು ಮಾಡಿತು. ಮೊದಮೊದಲು ಆ ಜಾಗದಲ್ಲಿ ಯಾವುದೊ ಒಂದು ಮನೆಯಿದ್ದಿರಬೇಕೆಂದು ಅಂದುಕೊಂಡಿದ್ದ ಪುರಾತತ್ವ
ಇಲಾಖೆಗೆ ಶಾಕ್ ಕಾದಿತ್ತು, ಅಲ್ಲಿದ್ದದ್ದು ಮನೆಯಲ್ಲ ಸುಮಾರು 116 ಸಮಾಧಿಗಳು. ಪುರಾತತ್ವ ಇಲಾಖೆಯು ನಿಧಾನವಾಗಿ ಒಂದೊಂದೇ ಸಮಾಧಿಯನ್ನು ಉತ್ಖನನ ಮಾಡಲು ಶುರುಮಾಡಿತು.

ಕೆಲವು ಸಮಾಧಿಗಳಲ್ಲಿ ತಾಮ್ರದ ವಸ್ತುಗಳು, ಪಾತ್ರೆಗಳು, ಬಳೆಗಳು ಬಿಟ್ಟು ಬೇರೇನೂ ಸಿಗಲಿಲ್ಲ, ಮತ್ತೆ ಕೆಲವು ಸಮಾಧಿಗಳಲ್ಲಿ ಮನುಷ್ಯರ ಅಸ್ತಿ ಪಂಜರಗಳ ಜೊತೆಗೆ ಮತ್ತದೇ ತಾಮ್ರದ ವಸ್ತುಗಳು, ಪಾತ್ರೆಗಳು, ಅಲಂಕಾರಿಕ ವಸ್ತುಗಳು ಸಿಗತೊಡಗಿದವು. ಈ
ವಸ್ತುಗಳೆಲ್ಲವೂ ಸುಮಾರು 4500 ವರ್ಷಗಳ ಹಿಂದಿನವೆಂಬ ವಿಷಯವು ಪುರಾತತ್ವ ಇಲಾಖೆಗೆ ತಿಳಿಯಿತು. ಸಿಂಧೂ ಬಯಲಿನ ನಾಗರಿಕತೆಯು ನಶಿಸಿ ಹೋದಮೇಲೆ ವಲಸೆಬಂದಂತಹ ಜನರ ವಾಸಸ್ಥಳವಿದಿರಬಹುದೆಂಬ ಅನುಮಾನವೂ ಪುರಾತತ್ವ ಇಲಾಖೆಗೆ ಕಾಡತೊಡಗಿತು. ಆದರೆ ‘ಸಿನೌಲಿ’ಯಲ್ಲಿ ಸಿಕ್ಕ ವಸ್ತುಗಳು ಸಿಂಧು ಬಯಲಿನ ನಾಗರಿಕತೆಗಿಂತಲೂ ಮುಂದುವರೆದ ನಾಗರಿಕತೆಯೆಂಬ ಸಾಕ್ಷಿಯನ್ನು ಹೇಳುತ್ತಿದ್ದವು.

ವೇದ, ಪುರಾಣಗಳಲ್ಲಿ ಹೇಳಿರುವ ರೀತಿಯಲ್ಲಿ ಅಂತ್ಯಕ್ರಿಯೆಯನ್ನು ನಡೆಸಿರುವ ಹಲವು ಸಾಕ್ಷಿಗಳು ಇಲ್ಲಿ ದೊರೆತವು. ಅಂತ್ಯಕ್ರಿಯೆಯ ವೇಳೆ ಬಟ್ಟಲುಗಳಲ್ಲಿ ಇಡಬೇಕಾದ ಮೊಸರು, ತುಪ್ಪ ಇಟ್ಟಿರುವ ದೊಡ್ಡ ದೊಡ್ಡ ಪಾತ್ರೆಗಳು ಕಂಡುಬಂದವು, ಸಮಾಧಿಯ ಒಳಗೆ ತಾಮ್ರದಿಂದ ಸುತ್ತಿದ ಹಿಡಿಯಿರುವ ಕತ್ತಿಗಳು ಕಂಡುಬಂದವು, ಸಣ್ಣ ಸಣ್ಣ ತಾಮ್ರದ ಚಾಕುಗಳು ಕಂಡು ಬಂದವು. 4500 ವರ್ಷಗಳಾದರೂ ಅವುಗಳ ಕುರುಹುಗಳು ಅಷ್ಟು ಸ್ಪಷ್ಟವಾಗಿ ಕಾಣಲು ಸಾಧ್ಯವಾದದ್ದು ಅವುಗಳ ಮೇಲಿದ್ದಂತಹ ತಾಮ್ರದ ಲೇಪನ ಹಾಗು ತಾಮ್ರದ ತಂತಿಗಳು.

ತಾಮ್ರದ ಲೇಪನದ ಚಿತ್ತಾರಮಯ ಆಕೃತಿಗಳು ಕತ್ತಿಗಳ ಮೇಲಿದ್ದವು. ಸಿಂಧೂ ಬಯಲಿನ ನಾಗರಿಕತೆಯಲ್ಲಿ ಈ ಮಟ್ಟದ ‘ಶಸ್ತ್ರ’ಗಳು ಕಂಡುಬಂದಿರಲಿಲ್ಲ, ಅಲ್ಲಿ ಸುಸ್ಸಜ್ಜಿತವಾದಂತಹ ಒಂದು ಪಟ್ಟಣದ ಯೋಜನೆಯ ಪುರಾವೆಗಳು ಕಂಡುಬಂದಿದ್ದವು. ‘ಸಿನೌಲಿ’ಯಲ್ಲಿ ಖಡ್ಗ ಹಿಡಿದು ಹೋರಾಡಿದ ಪುರಾತನ ಭಾರತೀಯರ ಸಂಸ್ಕೃತಿಯು ಈ ಸಮಾದಿಗಳಲ್ಲಿ ಕಾಣುತ್ತಿತ್ತು. ‘ಉತ್ಖನ’ ನವು ಮತ್ತಷ್ಟು ಆಳಕ್ಕೆ ಇಳಿದಂತೆ 4500 ವರ್ಷಗಳ ಪುರಾತನ ನಾಗರಿಕತೆಯ ಮತ್ತಷ್ಟು ಸಾಕ್ಷಿಗಳು ದೊರಕ ತೊಡಗಿದವು.

ಸಮಾಧಿಗಳಲ್ಲಿ ಸತ್ತ ವ್ಯಕ್ತಿಯನ್ನು ಒಂದು ‘ಶವಪೆಟ್ಟಿಗೆ’ಯ ಮೇಲೆ ಮಲಗಿಸಿ ಅಂತ್ಯಕ್ರಿಯೆಯನ್ನು ಸನಾತನ ಧರ್ಮದ ರೀತಿಯಲ್ಲಿ ನಡೆಸಿ ಹೂಳಿರುವ ಸಾಕ್ಷಿಗಳು ದೊರಕಿದವು. ಶವಪೆಟ್ಟಿಗೆಯ ಮೇಲೆ ತಾಮ್ರದಿಂದ ಮಾಡಿದ ಚಿತ್ತಾರದ ಕುರುಹುಗಳು ಕಂಡುಬಂದವು. ಈ ಚಿತ್ತಾರಗಳು ಅದೆಷ್ಟು ಚೆಂದವಿದ್ದವೆಂದರೆ, ನೀವು ಕೇಳಿರುವ ಯಾವ ವಾಸ್ತುಶಿಲ್ಪಕ್ಕೂ ಈ ಚಿತ್ತಾರಗಳು ಕಡಿಮೆಯಿರಲಿಲ್ಲ.

4500 ವರ್ಷಗಳ ಹಿಂದೆಯೇ ಭಾರತೀಯರು ಹಿಂದೂ ಸಾಂಪ್ರದಾಯಿಕವಾಗಿ ಅಂತ್ಯಸಂಸ್ಕಾರವನ್ನು ಮಾಡುತ್ತಿದ್ದರೆಂದರೆ ನಮ್ಮ ನಾಗರಿಕತೆಯು ಅದೆಷ್ಟು ಮುಂದುವರೆದ ನಾಗರಿಕತೆಯಾಗಿತ್ತೆಂದು ಊಹಿಸಿಕೊಳ್ಳಿ. ಸುಂದರವಾದಂತಹ ‘ಶವ ಪೆಟ್ಟಿಗೆ’, ಅದರ ನಾಲ್ಕು ಕಾಲುಗಳ ಮೇಲೆ ತಾಮ್ರದಿಂದ ಮೂಡಿಬಂದಿರುವಂತಹ ಬಗೆ ಬಗೆಯ ಚಿತ್ತಾರ, ಅದರ ಮುಚ್ಚಳದ ಮೇಲೆ ಕೆತ್ತಿರುವ ಬಗೆ ಬಗೆಯ ಚಿತ್ತಾರ, ಶವ ಪೆಟ್ಟಿಗೆಯ ಅಗಲ, ಉದ್ದ ಇವೆಲ್ಲವೂ ಇಂದಿನ ನಾಗರಿಕತೆಗೂ ನಾಚುವಂತೆ ಕೆತ್ತಲಾಗಿದೆ.

ಶವಪೆಟ್ಟಿಗೆಯ ಸುತ್ತಲೂ ಸಿಕ್ಕಿರುವ ಕತ್ತಿಗಳನ್ನು ನೋಡಿದರೆ ಅಲ್ಲಿನ ಜನರು ಯುದ್ಧ ಮಾಡುತ್ತಿದಂತಹ ‘ಯೋಧ’ರೆಂಬುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಕೇವಲ ಬೇಟೆಗಾಗಿ ಬಳಸುತ್ತಿದಂಥ ಆಯುಧಗಳಾದರೆ ತಾಮ್ರದ ಕೆತ್ತನೆಗಳು, ತಾಮ್ರದ ಹಿಡಿಗಳು ಈ ಆಯುಧಗಳ ಮೇಲೆ ಇರುತ್ತಿರಲಿಲ್ಲ. ಅಂತ್ಯಕ್ರಿಯೆಯ ವೇಳೆ ಈ ಆಯುಧಗಳನ್ನು ಅವರ ಸಮಾಧಿಯಲ್ಲಿಯೇ ಇಟ್ಟು ಹೂತಿರುವು ದನ್ನು ನೋಡಿದರೆ ಬಹುಷ್ಯ ಆ ಆಯುಧಗಳು ಆ ವ್ಯಕ್ತಿ ಉಪಯೋಗಿಸುತ್ತಿದಂತಹ ಆಯುಧಗಳೆಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಈಗಿನ ಕಾಲದ ಅಂತ್ಯಕ್ರಿಯೆಯಲ್ಲಿ ಮೈ ಮೇಲಿನ ಬಟ್ಟೆಯನ್ನೂ ಸಹ ಬಿಡದೆ ಎಲ್ಲವನ್ನೂ ತೆಗೆದು ಹಾಕಿಯೇ ಮಣ್ಣಿನಲ್ಲಿ ಹೂಳುತ್ತಾರೆ. ಅಂದಿನ ನಾಗರಿಕತೆಯು ಸತ್ತ ವ್ಯಕ್ತಿಯ ಜೊತೆಗೆ ಅವನ ನೆನಪುಗಳನ್ನೂ ಸಹ ಕಳುಹಿಸಿಕೊಡುತ್ತಿತೆಂದರೆ ಅವರ ಆಚರಣೆಗಳು ಅದೆಷ್ಟು ಆಳವಾದದ್ದೆಂಬುದನ್ನು ಅರಿಯಬೇಕು. ಉತ್ಖನನದ ಸಮಯದಲ್ಲಿ ದೊರೆತಂಥ ಮತ್ತೊಂದು ಸಮಾಧಿಯಲ್ಲಿ ಹೆಣ್ಣಿನ ಪಳೆಯುಳಿಕೆಯೊಂದು ಸಿಕ್ಕಿದೆ, ಈ ಸಮಾಧಿಯಲ್ಲಿ ಆಕೆಯ ತೋಳುಗಳಲ್ಲಿ ಚಿನ್ನದಲ್ಲಿ ಮಾಡಿದ ಅಲಂಕಾರಿಕ ವಸ್ತುಗಳು ಸಿಕ್ಕಿವೆ, ಕೈಯಲ್ಲಿ ಚಿನ್ನದಿಂದ ಮಾಡಿದ ಬಳೆಗಳು ಅಸ್ಥಿಪಂಜರದ ಮೇಲೆ ಹಾಗೆಯೆ ಇವೆ, ಕುತ್ತಿಗೆಯಲ್ಲಿ
ಹಾಕಿರುವ ಅಲಂಕಾರಿಕ ಹಾರದ ಕುರುಹುಗಳು ಸಿಕ್ಕಿವೆ.

ಆಶ್ಚರ್ಯವೆಂಬಂತೆ ಒಂದು ಸಮಾಧಿಯಲ್ಲಿ ಯುದ್ಧ ಮಾಡಲು ಬಳಸುತ್ತಿದಂತಹ ತಾಮ್ರದ ಹಿಡಿಯಿರುವ ‘ಕತ್ತಿ’ಗಳೂ ಸಿಕ್ಕಿವೆ. ಈ ಕತ್ತಿಗಳು ಆಕೆಯು ಉಪಯೋಗಿಸುತ್ತಿದ್ದಂಥ ಕತ್ತಿಗಳಾಗಿದ್ದರೆ, 4500 ವರ್ಷಗಳ ಕೆಳಗೆ ಭಾರತೀಯ ಹೆಣ್ಣುಮಕ್ಕಳು ಯುದ್ಧ ಮಾಡಲು ಹೋಗುತ್ತಿದ್ದರೆಂಬುದಕ್ಕೆ ಸಾಕ್ಷಿ ಸಿಕ್ಕಂತಾಯಿತಲ್ಲ. ಪಾಶಿಮಾತ್ಯ ದೇಶಗಳಿಂದ ‘ಮಹಿಳಾ ಸಬಲೀಕರಣ’ವನ್ನು
ಕಲಿಯಬೇಕೆಂದು ಬುದ್ದಿ ಹೇಳುವವರಿಗೆ ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಹಿಂದೆಯೇ ಗಂಡು ಹೆಣ್ಣಿನ ಸಮಾನತೆ  ಯನ್ನು ಸಮಾಜದಲ್ಲಿರಿಸಿದರೆಂಬುದಕ್ಕೆ ಈ ಸಮಾಧಿಯು ಸಾಕ್ಷಿಯಾಗಿದೆ. ‘ಕತ್ತಿ’ಗಳನ್ನು ಸಮಾಧಿ ಪಕ್ಕದಲ್ಲಿ ನಿಲ್ಲಿಸಲಾಗಿದೆ, ಅಂದರೆ ಇದರರ್ಥ ಹೆಣ್ಣು ಮಕ್ಕಳು ಯುದ್ದೋತ್ಸಾಹದಲ್ಲಿದ್ದರೆಂಬುದಲ್ಲದೆ ಮತ್ತೇನು? ಒಂದು ಗಂಡಿಗೆ ಸರಿಸಮಾನವಾಗಿ ಒಂದು ಹೆಣ್ಣಿನ ಅಂತ್ಯಕ್ರಿಯೆಯನ್ನು ನಡೆಸಿದ್ದಾರೆಂದರೆ ನಮ್ಮ ನಾಗರಿಕ ಸಮಾಜ 4500 ವರ್ಷಗಳ ಹಿಂದೆ ಅದೆಷ್ಟು ಮುಂದಿತ್ತೆಂಬು ದನ್ನು ಯೋಚಿಸಿ ನೋಡಿ.

ಈ ಉತ್ಖನನದಲ್ಲಿ ದೊರೆತ ಮತ್ತೊಂದು ಮುಖ್ಯವಾದ ವಸ್ತುವಿನ ಬಗ್ಗೆ ಹೇಳಲೇ ಬೇಕು. ಒಂದು ಸಮಾಧಿಯಲ್ಲಿ ಸತ್ತ ವ್ಯಕ್ತಿಯ ದೇಹದ ಪಕ್ಕದಲ್ಲಿ ‘ರಥ’ವೊಂದನ್ನು ಇಟ್ಟು ಮುಚ್ಚಲಾಗಿದೆ. 4500 ವರ್ಷಗಳ ಹಿಂದೆ ನಮ್ಮಲ್ಲಿ ರಥವಿತ್ತೆಂಬುದು ಅತ್ಯಂತ ಹೆಮ್ಮೆಯ ಸಂಗತಿ. ಮಹಾಭಾರತ ಹಾಗೂ ರಾಮಾಯಣ ಸುಳ್ಳೆಂದು ಹೇಳುವ ‘ಕಮ್ಯುನಿಸ್ಟ’ರಿಗೆ ಈ ರಥವನ್ನು ತೋರಿಸಿ ಯಾವುದರಲ್ಲಿ ಹೊಡೆಯಬೇಕೆಂದು ನೀವೇ ತೀರ್ಮಾನಿಸಿಬಿಡಿ. ಈ ರಥವು ಒಬ್ಬ ಅಥವಾ ಇಬ್ಬರು ನಿಂತುಕೊಂಡು ಓಡಿಸಬಹು ದಾದಂಥ ರಥವಾಗಿದೆ. ಈ ರಥದ ಚಕ್ರದ ಮೇಲೆ ಚಕ್ರಾಕಾರದಲ್ಲಿ ಮೂರು ಪದರಗಳನ್ನು ಮಾಡಲಾಗಿದೆ.

ಒಂದೊಂದು ಪದರದ ಮೇಲು ತಾಮ್ರದಿಂದ ಮಾಡಿದ ಅದ್ಭುತ ಕೆತ್ತನೆಗಳಿವೆ. ಒಂದು ಪದರದ ಮೇಲೆ ತ್ರಿಕೋನಾಕಾರದ ಕೆತ್ತನೆ ಗಳಿದ್ದರೆ, ಮತ್ತೊಂದು ಪದರದ ಮೇಲೆ ಚಕ್ರಾಕಾರದ ಕೆತ್ತನೆಗಳಿವೆ. ಇದು ಕೇವಲ ಎತ್ತಿನ ಗಾಡಿಯಾಗಿದ್ದರೆ ಇಷ್ಟೊಂದು
ಚಿಕ್ಕ ದಾಗಿರುತ್ತಿರಲಿಲ್ಲ ಹಾಗು ಈ ಮಾದರಿಯ ಕೆತ್ತನೆಗಳು ಎತ್ತಿನ ಗಾಡಿಯ ಮೇಲೆ ಯಾರು ಮಾಡುವುದಿಲ್ಲ. ರಥದ ಮುಂಭಾಗ ದಲ್ಲಿ ಕುದುರೆಯನ್ನು ಕಟ್ಟಿ, ಎಳೆಯಲು ಬೇಕಾದಂತಹ ಸಾಧನಗಳೂ ಸಹ ಸ್ಪಷ್ಟವಾಗಿ ಕಾಣಸಿಕ್ಕಿವೆ.

ಒಬ್ಬ ವ್ಯಕ್ತಿಯು ಬಳಸುತ್ತಿದಂತಹ ರಥವನ್ನೂ ಸಹ ಅವನು ಸತ್ತ ನಂತರ ಅವನ ಸಮಾಧಿಯಲ್ಲಿ ಹೂಳಿದ್ದಾರೆ. ಈ  ಸಮಾಧಿ ಯಲ್ಲಿ ರಥವೊಂದು ಸಿಕ್ಕಿರುವ ಕಾರಣ ಈತ ಸಾಮಾನ್ಯ ಮನುಷ್ಯನಾಗಿರಲಿಕ್ಕಿಲ್ಲವೆಂಬುದು ಪುರಾತತ್ವ ಇಲಾಖೆಯ ಅಧಿಕಾರಿಗಳ ವಿಶ್ಲೇಷಣೆ. ಈತನೊಬ್ಬ ಪ್ರಮುಖ ಸೈನಿಕನಾಗಿರಬೇಕು ಅಥವಾ ಸೈನ್ಯದ ಮುಖಂಡನಾಗಿರಬೇಕು. ಈ ರಥದ ವಿನ್ಯಾಸವನ್ನು ನೋಡಿದರೆ ಕುದುರೆಗಳನ್ನು ಬಳಸಿಕೊಂಡು ಓಡಿಸುವ ರಥವೆಂಬುದು ಸ್ಪಷ್ಟವಾಗುತ್ತದೆ.

ಕಮ್ಯುನಿಸ್ಟ್ ಇತಿಹಾಸ ತಜ್ಞರು ಕುದುರೆಯ ವಿಚಾರದಲ್ಲಿ ಬಹುದೊಡ್ಡ ಸುಳ್ಳನ್ನು ಹೇಳಿದ್ದರು, ಭಾರತದಲ್ಲಿ ಕುದುರೆಗಳೇ ಇರಲಿಲ್ಲವಂತೆ ಆರ್ಯರು ಭಾರತದ ಮೇಲೆ ಆಕ್ರಮಣ ಮಾಡಿದಾಗ ಭಾರತಕ್ಕೆ ಕುದುರೆಯನ್ನು ಪರಿಚಯಿಸಿದರರೆಂದು ಸುಳ್ಳು
ಇತಿಹಾಸವನ್ನು ಎಲ್ಲರಿಗೂ ಹೇಳಿದ್ದರು. ‘ಸಿನೌಲಿ’ಯಲ್ಲಿ ಸಿಕ್ಕಿರುವ ಈ ರಥವು ಇವರ ಸುಳ್ಳು ಇತಿಹಾಸವನ್ನು ಬಯಲಿಗೆಳೆದಿದೆ. ಭಾರತದ ಹಲವು ಕಡೆಗಳಲ್ಲಿ ಕುದುರೆಗಳ ಮೂಳೆಗಳು ಉತ್ಖನನದ ಸಮಯದಲ್ಲಿ ಸಿಕ್ಕಿವೆ. ಇವುಗಳು ಆರ್ಯರ ಸುಳ್ಳು ದಾಳಿಯ ಸಮಯದ ಹಿಂದಿನ ವರ್ಷಗಳಿದ್ದವೆಂಬುದಕ್ಕೆ ಹಲವು ಸಾಕ್ಷಿಗಳೂ ದೊರೆತಿವೆ.

4500 ವರ್ಷಗಳ ಹಿಂದೆಯೇ ನಮ್ಮ ನಾಗರಿಕರು ಕುದುರೆಯನ್ನು ಬಳಸುತ್ತಿದ್ದರೆಂದ ಮೇಲೆ, ಯಾವ ಪಾಶ್ಚಿಮಾತ್ಯರು ನಮಗೆ ನಾಗರಿಕತೆಯ ಪಾಠ ಹೇಳಿಕೊಟ್ಟಿಲ್ಲ, ಬದಲಿಗೆ ನಮ್ಮ ನಾಗರಿಕತೆಯನ್ನು ಅವರು ಕಲಿತು ನಮ್ಮ ಇತಿಹಾಸವನ್ನು ಮುಚ್ಚಿ ಹಾಕಿದ್ದಾರೆ. ‘ಸಿನೌಲಿ’ ಉತ್ಕನನದ ಸಮಯದಲ್ಲಿ ದೊರೆತ ಮತ್ತೊಂದು ಸಮಾಧಿಯಲ್ಲಿ ‘ಬಿಲ್ಲು’ ಹಾಗೂ ‘ಬಾಣ’ದ ಗುರುತಿರುವ
ಕುರುಹೊಂದು ಹೆಣ್ಣಿನ ಶವ ಪೆಟ್ಟಿಗೆಯ ತಲೆಯ ಭಾಗದಲ್ಲಿ ಕಾಣಿಸಿದೆ. ಆಗಲೇ ಹೇಳಿದ ಹಾಗೆ 4500 ವರ್ಷದ ಹಿಂದೆಯೇ ಹೆಣ್ಣು ಯುದ್ಧಕ್ಕೆ ಹೋಗುತ್ತಿದ್ದಳೆಂಬುದಕ್ಕೆ ಮತ್ತೊಂದು ಸಾಕ್ಷಿ ಈ ‘ಬಿಲ್ಲು ಹಾಗೂ ಬಾಣ’. ವ್ಯಕ್ತಿಯೊಬ್ಬ ಬಳಸುತ್ತಿದ್ದಂತಹ ವಸ್ತು ಗಳೆಲ್ಲವನ್ನೂ ಸಮಾಧಿಯೊಳಗೆ ಅವನ ದೇಹದ ಸುತ್ತಲೂ ಇತ್ತ ಮೇಲೆ ಆಕೆಯು ಬಳಸುತ್ತಿದ್ದಂಥ ‘ಬಿಲ್ಲು ಬಾಣ’ವನ್ನೂ ಸಹ ಇಟ್ಟಿರಬೇಕಲ್ಲವೇ? ಬಿಲ್ಲು ಬಾಣವನ್ನು ಯುದ್ಧಕ್ಕಾದರೂ ಬಳಸಿರಬಹುದು ಅಥವಾ ಬೇಟೆಯಾಡಲಾದರೂ ಬಳಸಿರ ಬಹುದು, ಆದರೆ ಹೆಣ್ಣೊಬ್ಬಳು ಇದನ್ನು ಬಳಸುತ್ತಿದ್ದಳೆಂದರೆ ಅಂದಿನ ನಾಗರಿಕತೆಯು ಅದೆಷ್ಟು ಮುಂದಿತ್ತೆಂಬುದನ್ನು ತಿಳಿದು ಕೊಳ್ಳಬೇಕು.

ಕಲ್ಲುಗಳಿಂದ ಮಾಡಿದ ಆಯುಧಗಳನ್ನು ಬಳಸಿಕೊಂಡು ಕಾಡಿನಲ್ಲಿ ಬೇಟೆಯಾಡುತ್ತಿದಂಥ ಯೂರೋಪಿಯನ್ನರ ಕಾಲಘಟ್ಟ ದಲ್ಲಿ ನಮ್ಮಲ್ಲಿ ತಾಮ್ರದ ಲೇಪನವಿರುವ ಕತ್ತಿ, ಬಿಲ್ಲು, ಬಾಣಗಳಿದ್ದವು. ಇಂತಹ ಯೂರೋಪಿಯನ್ನರಿಂದ ನಾವು ನಾಗರಿಕತೆ ಕಲಿತೆವೆಂಬುದು ನಮ್ಮ ತಲೆಯಲ್ಲಿ ತುಂಬಿದ ಬಹುದೊಡ್ಡ ಸುಳ್ಳು. ‘ಸಿನೌಲಿ’ಯಲ್ಲಿ ಸಿಕ್ಕಂತಹ ಮತ್ತೊಂದು ಸಮಾಧಿಯಲ್ಲಿ
ವ್ರುತ್ತಾಕಾರದ ರಕ್ಷಣಾ ಕವಚವೊಂದು ಸಿಕ್ಕಿದೆ. ಈ ರಕ್ಷಣಾ ಕವಚವು ಯುದ್ಧದ ಸಂದರ್ಭದಲ್ಲಿ ಶತ್ರುವಿನ ‘ಖಡ್ಗ’ದೇಟಿನಿಂದ ತಪ್ಪಿಸಿಕೊಳ್ಳಲು ಬಳಕೆಯಾಗುತ್ತಿತ್ತು.

4500 ವರ್ಷದ ಹಳೆಯ ಈ ರಕ್ಷಣಾ ಕವಚದ ವಿನ್ಯಾಸದಲ್ಲಿ ತಾಮ್ರದಲ್ಲಿ ರಚಿಸಿದಂತಹ ಹಲವು ಬಗೆಯ ಆಕೃತಿಗಳನ್ನು
ಕಾಣಬಹುದು. ಸಮಾಧಿಯಲ್ಲಿ ಸಿಕ್ಕಂಥ ಹಲವು ವಸ್ತುಗಳಿಗೆ ತಾಮ್ರದ ಲೇಪನವಾಗಿದ್ದುದ್ದರಿಂದ ಸುಮಾರು 4500 ವರ್ಷಗಳ ಬಳಿಕವೂ ಉತ್ಕನನದ ಸಮಯದಲ್ಲಿ ಸಿಕ್ಕ ವಸ್ತುಗಳು ಹಾಳಾಗಿರಲಿಲ್ಲ. ತಾಮ್ರದ ಹಿಂದಿನ ವಿಜ್ಞಾನ ಭಾರತೀಯ ನಾಗರಿಕರಿಗೆ ಅಷ್ಟು ವರ್ಷಗಳ ಹಿಂದೆಯೇ ತಿಳಿದಿರುವುದಕ್ಕೆ ಅಲ್ಲಿ ಸಿಕ್ಕಂತಹ ಈ ವಸ್ತುಗಳೇ ಸಾಕ್ಷಿ.

ಯುದ್ಧದಲ್ಲಿ ಬಳಸುತ್ತಿದ್ದಂತಹ ರಕ್ಷಣಾ ಕವಚಗಳು, ಭಾರತೀಯ ನಾಗರಿಕ ಸಮಾಜವು 4500 ವರ್ಷಗಳ ಹಿಂದೆಯೇ ಸಮರ ದಲ್ಲಿ ಅದೆಷ್ಟು ಮುಂದಿತ್ತೆಂಬುದಕ್ಕೆ ಮತ್ತೊಂದು ಸಾಕ್ಷಿ. ಮಹಾಭಾರತದ ಕಾಲದಲ್ಲಿ ಉಲ್ಲೇಖಿಸಿರುವ ಅಸ್ತ್ರಗಳ ಬಗ್ಗೆ ತುಚ್ಛವಾಗಿ ಮಾತನಾಡುವ ಕಮ್ಯುನಿಸ್ಟರಿಗೆ ಅದೆಷ್ಟು ಸಾಕ್ಷಿಗಳನ್ನು ಕೊಟ್ಟರು ಭಂಡವಾದವನ್ನು ನಿಲ್ಲಿಸುವುದಿಲ್ಲ, ‘ಸಿನೌಲಿ’ಯಲ್ಲಿ ಬಳಕೆ ಯಾಗಿರುವ ಈ ಅಸಗಳನ್ನು ನೋಡಿದರೆ ಅವರೂ ಸಹ ನಮ್ಮ ಪುರಾಣಗಳಲ್ಲಿ ಉಲ್ಲೇಖವಾಗಿರುವ ಹಲವು ವಿಷಯಗಳನ್ನು ಅಷ್ಟು ವರ್ಷಗಳ ಹಿಂದೆಯೇ ಬಳಸುತ್ತಿದ್ದರೆಂಬುದು ಸ್ಪಷ್ಟವಾಗುತ್ತದೆ.

ಸಮಾಧಿಯ ವಿಷಯ ಇಲ್ಲಿಯೇ ಮುಗಿಯುವುದಿಲ್ಲ, ಮತ್ತೊಂದು ಬಹುದೊಡ್ಡ ಸಮಾಧಿಯಲ್ಲಿ ಒಂದು ಹೆಣ್ಣು ಹಾಗೂ ಗಂಡಿನ
ಅಸ್ತಿಪಂಜರವು ದೊರಕಿದೆ. ಈ ಸಮಾಧಿಯಲ್ಲಿ ‘ಎರಡು’ ರಥಗಳು, ತಾಮ್ರದ ಲೇಪನವಿರುವ ಕತ್ತಿಗಳು, ಸಣ್ಣ ಸಣ್ಣ ಚಾಕುಗಳು, ದೊಡ್ಡ ದೊಡ್ಡ ಪಿಂಗಾಣಿ ಪಾತ್ರೆಗಳು ಸಿಕ್ಕಿವೆ. ಇತರ ಸಮಾಧಿಗಳಿಗಿಂತಲೂ ಹೆಚ್ಚಿನ ವಸ್ತುಗಳನ್ನು ಈ ಸಮಾಧಿಯಲ್ಲಿ  ಹೂಳಲಾಗಿದೆ. ಪುರಾತತ್ವ ಇಲಾಖೆಯವರ ಪ್ರಕಾರ ಈ ಸಮಾಧಿಯು ಆ ಊರಿನ ಮುಖ್ಯಸ್ಥರಾಗಿದ್ದವರ ಸಮಾಧಿಯಾಗಿರ ಬಹುದೆಂದು ಹೇಳಲಾಗುತ್ತಿದೆ.

ಬಹುಷ್ಯ ಗಂಡ ಹೆಂಡತಿ ಇಬ್ಬರೂ ಸಹ ಯಾವುದೊ ಒಂದು ಯುದ್ಧದಲ್ಲಿ ಸತ್ತಿರಬಹುದು, ಹಾಗಾಗಿ ಅವರ ಅಂತ್ಯಕ್ರಿಯೆಯನ್ನು ದೊಡ್ಡದಾಗಿ ಹೆಚ್ಚಿನ ವಿಧಿ ವಿಧಾನಗಳೊಂದಿಗೆ ಮಾಡಿ ಅವರು ಬಳಸುತ್ತಿದ್ದಂಥ ಎಲ್ಲ ವಸ್ತುಗಳನ್ನು ಇರಿಸಿರಬಹುದೆಂಬ ಶಂಕೆ ಯನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿಯೂ ಅಷ್ಟೇ ಬೇರೆ ಸಮಾಧಿಯಲ್ಲಿ ಸಿಕ್ಕಂತಹ ‘ರಥ’ದ ಮಾದರಿಯೇ ಸಿಕ್ಕಿದೆ, ಆದರೆ ಎರಡು
ರಥಗಳು ಸಿಕ್ಕಿರುವುದರಿಂದ ಇಬ್ಬರೂ ಸಹ ಯುದ್ಧ ಪ್ರವೀಣರಾಗಿದ್ದರೆಂದು ಹೇಳಬಹುದಾಗಿದೆ.

ಹೆಚ್ಚಿನ ಅಧ್ಯನಕ್ಕಾಗಿ ‘ಸಿನೌಲಿ’ಯಲ್ಲಿ ಸಿಕ್ಕಂಥ ಉತ್ಖನನದ ವಸ್ತುಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ, ಅಲ್ಲಿ ಸಿಕ್ಕಂಥ
ಹಲವು ವಸ್ತುಗಳ ‘ಸಿ.ಟಿ’ ಸ್ಕ್ಯಾನಿಂಗ್ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಮತ್ತಷ್ಟು ವೈಜ್ಞಾನಿಕ ಅಂಶಗಳು ಬೆಳಕಿಗೆ ಬರಬೇಕಿದೆ. ‘ಸಿನೌಲಿ’ಯಲ್ಲಿ ನಡೆಸಿದ ಉತ್ಖತ್ಕನನವು ಭಾರತದಲ್ಲಿ ನಡೆದ ಬಹುದೊಡ್ಡ ಉತ್ಕನನಗಳದ್ದೆಂದು ಹೇಳಲಾಗುತ್ತಿದೆ.
ಈ ಉತ್ಕನನವು 4500 ವರ್ಷಗಳ ಹಿಂದಿನ ಭವ್ಯ ಭಾರತದ ನಾಗರಿಕತೆಯ ಇತಿಹಾಸವನ್ನು ಸಾರಿ ಸಾರಿ ಜಗತ್ತಿಗೆ ಹೇಳುತ್ತದೆ.
ವಿಪರ್ಯಾಸವೆಂದರೆ ಈ ಉತ್ಖನನಗಳು ಎಂದೋ ನಡೆಯಬೇಕಿತ್ತು, ಬೇಕಂತಲೇ ನಡೆಸದೆ ಪಾಶ್ಚಿಮಾತ್ಯರು ನಮ್ಮ
ನಾಗರಿಕತೆಯ ಹಲವು ವಿಷಯಗಳನ್ನು ಮುಚ್ಚಿ ಹಾಕಿ ತಾವು ಭಾರತೀಯರಿಗೆ ನಾಗರಿಕತೆಯನ್ನು ಹೇಳಿಕೊಟ್ಟವೆಂದು ಜಗತ್ತಿನ
ಮುಂದೆ ಸುಳ್ಳು ಹೇಳುತ್ತಾ ಬಂದಿದ್ದಾರೆ.

ಇವರ ಬೆನ್ನಿಗೆ ಭದ್ರವಾಗಿ ನಿಂತವರು ’ಕಮ್ಯುನಿಸ್ಟರು’, ಹಣಕ್ಕಾಗಿ ಹಾಗು ಅಽಕಾರಕ್ಕಾಗಿ ಅವರು ಹೇಳಬಯಸಿದ ಸುಳ್ಳುಗಳನ್ನು
ಇತಿಹಾಸದ ಪುಟಗಳಲ್ಲಿ ನಮೂದಿಸಿ ನಮ್ಮ ಪ್ರಾಚೀನ ನಾಗರಿಕತೆಯನ್ನು ಮಣ್ಣು ಪಾಲು ಮಾಡಿದ ಕೀರ್ತಿ ಇವರಿಗೆ ಸಲ್ಲಬೇಕು. ‘ಆರ್ಯ’ರಿಂದ ನಾಗರಿಕತೆಯನ್ನು ಕಲಿತೆವೆಂಬ ಸುಳ್ಳು ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿವೆ ‘ಸಿನೌಲಿ’ಯಲ್ಲಿ ಸಿಕ್ಕಂಥ
ಸಮಾಧಿಗಳು.