Sunday, 15th December 2024

ಸಿಂಗಾಪುರ ಗಾರ್ಡನ್ ಸಿಟಿಯಿಂದ ಸಿಟಿ ಇನ್ ಗಾರ್ಡನ್ ಆದದ್ದು !

ನೂರೆಂಟು ವಿಶ್ವ

vbhat@me.com

ನಾನು ಇಲ್ಲಿ ತನಕ ಸಿಂಗಾಪುರಕ್ಕೆ ಏಳು ಸಲ ಹೋಗಿದ್ದೇನೆ. ಅಲ್ಲಿಗೆ ಪ್ರತಿ ಸಲ ಹೋದಾಗಲೂ ನಾನು ಹೊಸ ಸಿಂಗಾಪುರವನ್ನೇ ನೋಡಿದ್ದೇನೆ ಮತ್ತು ಪ್ರತಿ ಸಲವೂ ಸಿಂಗಾಪುರವೆಂಬ ಸಿಟಿ, ಸ್ಟೇಟ್ ಮತ್ತು ದೇಶ ನನಗೆ ವಿನೂತನವಾಗಿಯೇ ಕಂಡಿದೆ. ಈ ಸಲ ನಾನು ಆ ದೇಶದ ಹಸಿರನ್ನು ನೋಡಲೆಂದೇ ಹೋಗಿದ್ದೆ.
ಅಂದರೆ ಅಲ್ಲಿನ ಗಿಡ, ಮರ, ಹೂವು, ಎಲೆ, ಉದ್ಯಾನ, ಹಸಿರು ಆಫೀಸು, ಗಗನಚುಂಬಿ ಹಸಿರು ಕಟ್ಟಡಗಳು, ಹಸಿರು ಹೋಟೆಲುಗಳು, ರಸ್ತೆ ಬದಿ ಸಣ್ಣ ಉದ್ಯಾನ, ಮನೆ ಮುಂದಿನ ಕೈತೋಟ, ಕಾಡು, ಚಿಕ್ಕಕಾಡು, ನೂರಾರು ವರ್ಷಗಳ ವಟವೃಕ್ಷ, ಮಳೆ ಕಾಡು, ಹಸುರು ಬಳ್ಳಿ, ಆರ್ಕಿಡ್ ವನ, ಬೊಟಾನಿಕಲ್ ಗಾರ್ಡನ್, ಅಲ್ಲಿನ ಮರಗಳ ಮೇಲೆ ಸಹಜವಾಗಿ ಬೆಳೆದ ಬಂದಳಿಕೆ, ಸೀತಾಳೆಗಳನ್ನು ನೋಡಲೆಂದೇ ಹೋಗಿದ್ದೆ.

ಇವನ್ನು ಬಿಟ್ಟರೆ ನನಗೆ ಸ್ವಂತ ಕೆಲಸಗಳೇನೂ ಇರಲಿಲ್ಲ. ಜತೆಯಲ್ಲಿ ‘ಫ್ರೆಂಡ್ಸ್ ಆಫ್ ದಿ ಪಾರ್ಕ್ ಕಮ್ಯುನಿಟಿಸ್’ ಎಂಬ ಸ್ವಯಂ ಸೇವಾ ಸಂಸ್ಥೆಯ ‘ಹಸಿರು ಸ್ನೇಹಿತರು’ ಇದ್ದರು. ಇವರ ಜತೆಗೂಡಿ ಸಿಂಗಾಪುರದ ಗಲ್ಲಿಗಲ್ಲಿ ಗಳಲ್ಲಿ, ಪ್ರಮುಖ ಬೀದಿ, ರಸ್ತೆಗಳಲ್ಲಿ ಸುತ್ತಿದ್ದೇ ಸುತ್ತಿದ್ದು. ಒಮ್ಮೆ ಊಹಿಸಿ, ಸಿಂಗಾಪುರವನ್ನು ಹಸಿರು ಕನ್ನಡಕ ಧರಿಸಿ ನೋಡಿದರೆ ಹೇಗೆ ಕಾಣಬಹುದು? ಈ ಸಲ ನನ್ನ ಅನುಭವ ಆ ಥರ ಇತ್ತು. ಸಾಮಾನ್ಯವಾಗಿ ಸಿಂಗಾಪುರಕ್ಕೆ ಹೋಗುವವರು ಅಲ್ಲಿನ ಬಹುಮಹಡಿ ಕಟ್ಟಡ ನೋಡಿಯೋ ಅಥವಾ ಅಲ್ಲಿನ ಕೆಸಿನೋಕ್ಕೆ ಹೋಗಿಯೋ ಬರುತ್ತಾರೆ.

ಸಿಂಗಾಪುರದ ವಿಶಾಲ ವಾದ, ಸ್ವಚ್ಛವಾದ ರಸ್ತೆಗಳನ್ನು ನೋಡಿ ಬರುತ್ತಾರೆ. ಕೇಬಲ್ ಕಾರ್‌ನಲ್ಲಿ ಅಲ್ಲಿನ ಸೆಂಟೋಸಾ ಐಲ್ಯಾಂಡಿಗೆ ಹೋಗಿ ದಿನವಿಡೀ ಹಲವು ಶೋಗಳನ್ನು ನೋಡಿ ಬರುತ್ತಾರೆ. ಜಗತ್ತಿನ ಎಲ್ಲ ಬಗೆಯ ತಿಂಡಿ-ಆಹಾರ ಪದಾರ್ಥಗಳನ್ನು ಸೇವಿಸಿ ಬರುತ್ತಾರೆ. ಈಗಂತೂ ನಗರದ ಮಧ್ಯಭಾಗದಲ್ಲಿ ತಲೆಯೆತ್ತಿರುವ ಮೂರು ಗೋಪುರಗಳ ಮೇಲೆ ಹಡಗನ್ನು ಇಟ್ಟಂತೆ ಕಾಣುವ ‘ಮರೀನಾ ಬೇ ಸ್ಯಾಂಡ್ಸ್’ನ ೫೫ನೇ ಮಹಡಿ ತನಕ ಏರಿ, ಅಲ್ಲಿಂದ ಇಡೀ ಸಿಂಗಾಪುರವನ್ನು ನೋಡಿ, ಇಡೀ ದೇಶವನ್ನು ಕಣ್ತುಂಬಿಕೊಂಡು ಬರುತ್ತಾರೆ. ಇನ್ನು ಕೆಲವರಿಗೆ ಬೆಳಗಿನಿಂದ ರಾತ್ರಿ ತನಕ ಎಷ್ಟೇ ಶಾಪಿಂಗ್ ಮಾಡಿದರೂ ಮುಗಿಯುವುದಿಲ್ಲ. ಅಂಥವರಿಗಾಗಿ ಅಲ್ಲಿ ನೂರಾರು ಶಾಪಿಂಗ್ ಮಾಲ್ ಗಳಿವೆ.

ಆದರೆ ಅಲ್ಲಿಗೆ ಭೇಟಿ ನೀಡಿದ ಅನೇಕರಿಗೆ ತಾವು ಜಗತ್ತಿನಲ್ಲಿಯೇ ಶೇ.೪೦ರಷ್ಟು ಹಸಿರು ಹೊದ್ದ ಪುಟ್ಟ ದೇಶಕ್ಕೆ ಹೋಗಿದ್ದೇವೆ, ಜಗತ್ತಿನಲ್ಲಿಯೇ ಸದಾ ಹಸಿರು ಮಂತ್ರ ಜಪಿಸುವ ದೇಶಕ್ಕೆ ಆಗಮಿಸಿದ್ದೇವೆ, ಎಲ್ಲಿ ನೋಡಿದರೂ ಅಲ್ಲೆಲ್ಲ ಹಸಿರನ್ನು, ನೀರನ್ನು ಆವರಿಸಿರುವ ದೇಶಕ್ಕೆ ಬಂದಿದ್ದೇವೆ, ದೇಶದ ಪ್ರಧಾನಿ ಸೇರಿದಂತೆ ಇಡೀ ಆಡಳಿತ ಹಸಿರು ಕನಸು ಕಾಣುವ ದೇಶದಲ್ಲಿದ್ದೇವೆ, ಒಂದೇ ಒಂದು ಆರೈಕೆಹೀನ ಗಿಡ-ಮರಗಳು ಇಲ್ಲದ ನಗರಕ್ಕೆ ಬಂದಿದ್ದೇವೆ, ಉಸಿರು ಕಟ್ಟಿ ಹಸಿರು ಬೆಳೆಸಿದ ದೇಶದಲ್ಲಿದ್ದೇವೆ, ಗಿಡ-ಮರಗಳನ್ನು ಮಕ್ಕಳಂತೆ ನೋಡಿ ಕೊಳ್ಳುವ, ಮರಗಳ ಮೇಲೆ ಅತೀವ ಭರವಸೆ ಇಟ್ಟಿರುವ ದೇಶಕ್ಕೆ ಬಂದಿದ್ದೇವೆ, ಗಿಡ ನೆಟ್ಟು ಸಂಭ್ರಮಪಡುವ ದೇಶಕ್ಕೆ ಬಂದಿದ್ದೇವೆ ಎಂಬ ಸಂಗತಿ ಗೊತ್ತಿರುವುದಿಲ್ಲ.

ಸಿಂಗಾಪುರದ ಹಸಿರು ವೈಭವ ಅಥವಾ ಹಸಿರು ಕ್ರಾಂತಿ ಬಗ್ಗೆ ಕೇಳಿದವರಿಗೆ, ಅಲ್ಲಿನ ಚಾಂಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾಲಿಡುತ್ತಿದ್ದಂತೆ, ತಾವು ಕೇಳಿದ್ದು ನಿಜ ಎಂಬುದು ಮನವರಿಕೆ ಆಗುತ್ತದೆ. ಅಷ್ಟಕ್ಕೂ ಚಾಂಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಒಂದರ್ಥದಲ್ಲಿ ಗ್ರೀನ್‌ಹೌಸ್ ಇದ್ದಂತೆ. ಹಾಗೆ ನೋಡಿದರೆ ಇದು ವಿಮಾನ ನಿಲ್ದಾಣವೋ, ಗ್ರೀನ್ ಹೌಸೋ ಎಂಬ ಪ್ರಶ್ನೆ ಉದ್ಭವವಾದರೆ ಆಶ್ಚರ್ಯವಿಲ್ಲ. ಕಾರಣ ಚಾಂಗಿಯಲ್ಲಿ ಏನಿಲ್ಲವೆಂದರೂ ಎರಡು ಸಾವಿರ ಜೀವಂತ ಮರಗಳಿವೆ, ಒಂದು ಸಾವಿರ ತಾಳೆ ಮರಗಳಿವೆ, ೧೦ ಸಾವಿರ ಪೊದೆಗಳಿವೆ, ೪೦ ಸಾವಿರಕ್ಕೂ ಅಽಕ ಹೂ ಬಿಡುವ ಗಿಡ ಗಳಿವೆ, ಅಲಂಕಾರಿಕ ಗಿಡಗಳು ಸುಮಾರು ೧ ಲಕ್ಷ ದಾಟ ಬಹುದು.

ಅಲ್ಲಿ ಆಸ್ಟ್ರೇಲಿಯಾ, ಸ್ಪೇನ್, ಥೈಲ್ಯಾಂಡ್, ಅಮೆರಿಕ, ಫ್ರಾನ್ಸ್, ನೆದಲಾಂಡ್ಸ್, ಹಂಗೇರಿ ಮುಂತಾದ ದೇಶಗಳ ೧೨೦ ವಿವಿಧ ಪ್ರಭೇದಗಳ ಹೂ ಬಿಡುವ ಸಸ್ಯಗಳಿವೆ. ವಿಮಾನ ನಿಲ್ದಾಣದಲ್ಲಿ ಮೇಲ್ಚಾವಣಿ ಉದ್ಯಾನ (ರೂಫ್ ಟಾಪ್ ಗಾರ್ಡನ್), ಜಲಪಾತ, ತೊರೆ, ಕೆರೆ, ತಿಳಿಗೊಳವಿದೆ. ಕ್ಯಾಕ್ಟಸ್, ವಾಟರ್ ಲಿಲ್ಲಿ ಸೇರಿದಂತೆ ಹತ್ತು ಉದ್ಯಾನಗಳಿವೆ. ಕ್ಯಾಕ್ಟಸ್ ಉದ್ಯಾನವೊಂದರಲ್ಲೇ ಏನಿಲ್ಲವೆಂದರೂ ನೂರಕ್ಕೂ ಹೆಚ್ಚು ತಳಿಗಳಿವೆ. ವಿಮಾನ ನಿಲ್ದಾಣದ ಪೂರೈಕೆಗೆಂದೇ ಮುನ್ನೂರು ಪ್ರಭೇದಗಳ ಒಂದು ಲಕ್ಷ ಸಸಿಗಳಿರುವ ಭವ್ಯ ನರ್ಸರಿ ಇದೆ. ಇವೆಲ್ಲ ಸುಮಾರು ೨೧ ಸಾವಿರ ಚದರ ಮೀಟರ್ ಪ್ರದೇಶ ದಲ್ಲಿದೆ. ಇವುಗಳ ನಿರ್ವಹಣೆಗೆ ೪೦ ವೃಕ್ಷ ವೈದ್ಯರು (Tree Doctors) ಇದ್ದಾರೆ. ಅವರ ಜತೆಗೆ ನೂರಾರು ಸಸ್ಯ ಸಿಬ್ಬಂದಿ.

ಚಾಂಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ಸುರಕ್ಷತೆಗೆ ನೀಡಿರುವಷ್ಟೇ ಒತ್ತನ್ನು ಹಸಿರಿಗೂ ನೀಡಿರುವುದು ವಿಶೇಷ. ಇನ್ನು ಹತ್ತು ವರ್ಷಗಳಲ್ಲಿ ಚಾಂಗಿ ವಿಮಾನ ನಿಲ್ದಾಣ ದಲ್ಲಿ ಹತ್ತು ಸಾವಿರಕ್ಕೂ ಅಧಿಕ ಮರಗಳು ತಲೆಯೆತ್ತಲಿವೆ. ಜಗತ್ತಿನ ಎಲ್ಲ ಹೂವುಗಳ ಚೆಂದವನ್ನು ಚಾಂಗಿಯಲ್ಲೊಂದೇ ನೋಡಬ ಹುದಾಗಿದೆ. ಅಂದರೆ ಇಡೀ ವಿಶ್ವದಲ್ಲಿ ಕಾಣುವ ಎಲ್ಲ ಬಗೆಯ ಹೂವುಗಳನ್ನು ಒಂದೇ ತಾಣದಲ್ಲಿ ವೀಕ್ಷಿಸಬಹುದಾಗಿದೆ. ಚಾಂಗಿ ಅಂತಾರಾಷ್ಟ್ರೀಯ ವಿಮಾನ
ನಿಲ್ದಾಣ ವಿಶ್ವದಲ್ಲಿಯೇ ಅತ್ಯಂತ ಸುಂದರ ಮತ್ತು ಅಚ್ಚುಕಟ್ಟಾದ ವಿಮಾನನಿಲ್ದಾಣ ಎಂಬ ಪ್ರಶಸ್ತಿ-ಅಭಿದಾನಕ್ಕೆ ಪಾತ್ರವಾಗಿದೆ.

ಇದು ಒಂದೆರಡು ಸಲವಲ್ಲ, ಸತತ ಹನ್ನೆರಡು ಸಲ ಈ ಪ್ರಶಸ್ತಿಗೆ ಪಾತ್ರವಾಗಿರುವುದು ಸಣ್ಣ ಸಾಧನೆಯಲ್ಲ. ಸಿಂಗಾಪುರ ಹಸಿರು-ಸ್ನೇಹಿಯಾಗಿದ್ದು
ಇಂದು-ನಿನ್ನೆಯ ಕತೆಯಲ್ಲ. ೧೯೬೦ರಲ್ಲಿ ಆ ದೇಶದ ಪ್ರಪ್ರಥಮ ಪ್ರಧಾನಿ ಲೀ ಕುಆನ್ ಯು ಸಿಂಗಾಪುರಕ್ಕೆ ಹಸಿರು ತೋರಣ ಕಟ್ಟಲು ಯೋಚಿಸಿದರು. ಆಗ ಸಿಂಗಾಪುರದಲ್ಲಿ ಶೇ.೫ರಷ್ಟು ಹಸಿರು ಹೊದಿಕೆ (ಗ್ರೀನ್ ಕವರ್) ಇತ್ತು. ಅವರು ಪ್ರಧಾನಿಯಾದ ಆರಂಭದಲ್ಲಿ ಯುರೋಪಿನ ದೇಶಗಳಿಗೆ ಹೋದಾಗ ಅಲ್ಲಿನ
ಹಸಿರು ಸೌಂದರ್ಯಗಳಿಗೆ ಮಾರುಹೋಗಿ ತಮ್ಮ ದೇಶವನ್ನೂ ಅದೇ ರೀತಿಯಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಿದರು.

ತಮ್ಮ ದೇಶಕ್ಕೆ ಜಗತ್ತಿನ ಶ್ರೇಷ್ಠ ಸಸ್ಯವಿಜ್ಞಾನಿಗಳು ಮತ್ತು ಪುಷ್ಪ ಪರಿಣತರನ್ನು ಆಹ್ವಾನಿಸಿ, ತಮ್ಮ ದೇಶಕ್ಕೆ ಹಸಿರು ಹೊದಿಕೆಯನ್ನು ವಿಸ್ತರಿಸುವುದು ಹೇಗೆ ಎಂದು ಅವರಿಂದ ಸಲಹೆ ಪಡೆದರು. ತಮ್ಮ ಯೋಚನೆಯನ್ನು ದೇಶವಾಸಿಗಳೊಂದಿಗೆ ಹಂಚಿಕೊಂಡರು. ಈ ‘ಹಸಿರು ಮಹಾಯಜ್ಞ’ದಲ್ಲಿ ತಮ್ಮ ಜತೆ ಕೈಜೋಡಿಸುವಂತೆ
ಕರೆಕೊಟ್ಟರು. ವಿಶ್ವದ ಯಾವುದೇ ಮೂಲೆಯಲ್ಲಿ, ಯಾವುದೇ ದೇಶ ಉತ್ತಮವಾದ ಹಸಿರು ಕ್ರಾಂತಿಯನ್ನು ಮಾಡಿದ್ದರೆ ಅದನ್ನು ಖುದ್ದಾಗಿ ನೋಡಿ ಬಂದು, ಅದರಲ್ಲಿನ ಉತ್ತಮ ಅಂಶಗಳನ್ನು ತಮ್ಮ ದೇಶದಲ್ಲೂ ಜಾರಿಗೊಳಿಸಿದರು.

ರಸ್ತೆ ಪಕ್ಕದಲ್ಲಿ ಹೂವು ಬಿಡದ, ಕಾಲಕಾಲಕ್ಕೆ ಎಲೆಗಳು ಉದುರದ, ಮಳೆ-ಗಾಳಿಗೆ ಬೀಳದ, ಕೊಂಬೆಗಳು ಮುರಿಯದ, ಆದರೆ ಧಾರಾಳ ನೆರಳು ನೀಡುವ ಸಸ್ಯ ಪ್ರಭೇದ ಗಳನ್ನು ಆಯ್ಕೆಮಾಡಿ ತಂದು ನೆಟ್ಟರು. ಇದಕ್ಕೆ ಕಾರಣವೂ ಇತ್ತು. ಹೂವು ಬಿಟ್ಟರೆ, ಎಲೆಗಳು ನಿತ್ಯವೂ ಉದುರಿದರೆ, ಪ್ರತಿದಿನವೂ ಸ್ವಚ್ಛಗೊಳಿಸಬೇಕು, ಅದಕ್ಕೆ ಹೆಚ್ಚು ಸಿಬ್ಬಂದಿ ಬೇಕು. ಇಲ್ಲದಿದ್ದರೆ ಇಡೀ ನಗರ ಗಲೀಜಾಗುತ್ತದೆ. ಹೀಗಾಗಿ ಸಿಂಗಾಪುರದ ರಸ್ತೆಯ ಇಕ್ಕೆಲಗಳಲ್ಲಿರುವ ಮರಗಳು ಮೇಕಪ್ ಮಾಡಿಕೊಂಡ ರೂಪದರ್ಶಿಗಳಂತೆ ಕಾಣುತ್ತವೆ. ಇಂದು ಸಿಂಗಾಪುರದಲ್ಲಿ ಕಾಣುವ ಪ್ರತಿ ಮರವನ್ನೂ ಬೇಕಾಬಿಟ್ಟಿ ನೆಟ್ಟಿದ್ದಲ್ಲ. ಅದರ ಹಿಂದೆ ಸಾಕಷ್ಟು ಚಿಂತನೆ, ತರ್ಕ, ಸಂಶೋಧನೆಯ ಧಾರೆ ಹರಿದಿದೆ. ಅಲ್ಲಿನ ಹವಾಮಾನ, ಪರಿಸರ, ಜನರ ಜೀವನಶೈಲಿ, ಪ್ರವಾಸಿಗರ ಅನುಕೂಲ, ಸ್ವಭಾವಗಳನ್ನು ಯೋಚಿಸಿ ಹಸಿರು ಕಾರಿಡಾರುಗಳನ್ನು ನಿರ್ಮಿಸಿದ್ದಾರೆ.

ಲೀ ಕುಆನ್ ಯು ಯಾವತ್ತೂ ಒಂದು ಮಾತನ್ನು ಹೇಳುತ್ತಿದ್ದರು- ‘ಇಂದು ನೆಡುವ ಗಿಡ, ನಾಳೆ ನಮಗೆ ಎಂದೂ ಸಮಸ್ಯೆ ಯಾಗಿ ಕಾಡಬಾರದು. ಮುಂದೆ ಅದನ್ನು ಕತ್ತರಿಸುವ ಪ್ರಸಂಗ ಬರಬಾರದು. ಒಂದು ಮರವನ್ನು ಕತ್ತರಿಸುವುದೆಂದರೆ, ಲಾಲನೆ-ಪಾಲನೆ ಮಾಡಿ ಬೆಳೆಸಿದ ಮಗುವಿನ ಅಂಗಾಂಗ ಗಳನ್ನು ಕತ್ತರಿಸಿದಂತೆ ಎಂಬುದನ್ನು ಮರೆಯಬಾರದು. ಯಾವ ಕಾರಣಕ್ಕೂ ಮರ, ಮಾರಕವಾಗಬಾರದು. ಅದು ಕಸ-ಕಡ್ಡಿಗಳನ್ನು ಸೃಷ್ಟಿಸುವ ಆಗರವಾಗಬಾರದು. ಬೇಕಾದಾಗ
ಬೆಳೆಯುವ, ಬೇಡವಾದಾಗ ಕತ್ತರಿಸುವ ಮನೋಭಾವ ನಿಮ್ಮದಾಗಿದ್ದರೆ, ಮರಗಳನ್ನು ನೆಡಬಾರದು. ಅಂಥವರು ಕುರಿ-ಕೋಳಿಯನ್ನು ಸಾಕಬೇಕು’ ಎಂದು ಹೇಳುತ್ತಿದ್ದರು.

ಹೀಗಾಗಿ ಸಿಂಗಾಪುರದಲ್ಲಿ ಕಾಣುವ ಬಹುತೇಕ ಮರಗಳು ದಷ್ಟ-ಪುಷ್ಟವಾಗಿ ಬೆಳೆದವು. ಕೆಲವು ಮರಗಳ ಕಾಂಡ ನೀರನ್ನು ಕುಡಿದು ತನ್ನ ಮೈಗೆಲ್ಲ ಹಸಿರುಬಳ್ಳಿ ಗಳನ್ನು, ಮಳೆ ಬಳ್ಳಿಗಳನ್ನು ಹೊದ್ದುಕೊಂಡುಬಿಟ್ಟಿವೆ. ಒಂದೊಂದು ಮರವೂ ತಬ್ಬಿ ಕೊಳ್ಳಲಾಗದಷ್ಟು ದಪ್ಪ-ದೊಡ್ಡದು. ಮರಗಳ ಕೊಂಬೆಯನ್ನು ಬೇಕಾ ಬಿಟ್ಟಿ ಕಡಿಯುವ ಹಾಗಿಲ್ಲ. ಗಿಡಗಳನ್ನು ನೆಡುವಾಗಲೂ ಅನುಮತಿ ಬೇಕು. ಕಾರಣ, ಮನಸ್ಸಿಗೆ ಬಂದ ಸಸಿಗಳನ್ನೂ ನೆಡುವಂತಿಲ್ಲ. ಸಿಂಗಾಪುರದಲ್ಲಿ ಎಲ್ಲಿ ನೋಡಿದರೂ ಹಸಿರು ನೋಟವನ್ನು ತಪ್ಪಿಸಿಕೊಳ್ಳುವಂತಿಲ್ಲ. ಜನನಿಬಿಡ ರಸ್ತೆಗಳಲ್ಲಿ ಓಡಾಡುವಾಗಲೂ ಅಕ್ಕ-ಪಕ್ಕ ಗಿಡ-ಮರಗಳು ಇರಲೇಬೇಕು, ಆ ರೀತಿ ನಗರ ಹಸಿರಿಗೆ ಮಹತ್ವ ನೀಡಲಾಗಿದೆ. ಪ್ರತಿ ಬಹುಮಹಡಿ ಕಟ್ಟಡಕ್ಕೂ ಗಿಡ-ಮರ-ಬಳ್ಳಿಗಳ ತೋರಣ, ಲೇಪನ.

ಕೆಲವು ಗಗನಚುಂಬಿ ಕಟ್ಟಡಗಳ ಹೊರಮೈ ಹಸಿರಿನಿಂದಲೇ ಆವೃತ ವಾಗಿವೆ. ಅರವತ್ತೆರಡನೇ ಮಹಡಿಯಲ್ಲಿ ನೆಟ್ಟ ಬಳ್ಳಿ, ಎಲ್ಲ ಮಹಡಿಗಳನ್ನು ಸವರುತ್ತಾ, ನೆಲವನ್ನು ಚುಂಬಿಸಿದ್ದನ್ನು ಸಹ ನೋಡಬಹುದು. ಕೆಲವು ಕಟ್ಟಡಗಳ ಸಿಮೆಂಟ್-ಗಾಜು- ಸ್ಟೀಲ್ ಚೌಕಟ್ಟು ಸಹ ಕಾಣುವುದಿಲ್ಲ.ಅವು ಹಸಿರಿನಿಂದ ಹೊದ್ದುಕೊಂಡಿವೆ. ಇನ್ನು ಕೆಲವು ಕಟ್ಟಡಗಳ ಮಧ್ಯಭಾಗದಲ್ಲಿನ ಮಹಡಿಯಲ್ಲಿ ನೂರಾರು ಅಡಿಗಳ ಎತ್ತರದ ಮರಗಳು ಮುಗಿಲಿಗೆ ಮುಖ ಮಾಡಿವೆ. ಸಿಂಗಾಪುರದ ಪಾರ್ಕ್
ರಾಯಲ್ ಹೋಟೆಲ್ ಹಸಿರಿನ ದಟ್ಟ ಕಾನನ. ಇಡೀ ಕಟ್ಟಡ ಹಸಿರುಮಯ. ಆ ಹೋಟೆಲಿನ ಯಾವ ರೂಮಿನಲ್ಲಿ ನಿಂತರೂ ಸಸ್ಯ ಸಮೂಹವನ್ನು ವೀಕ್ಷಿಸಬಹುದು. ಮಳೆಕಾಡಿನ ಮಧ್ಯದಲ್ಲಿ ಹೋಟೆಲ್ ಅವತರಿಸಿದರೆ ಹೇಗೋ ಹಾಗೆ.

ಹದಿನೈದು ಸಾವಿರ ಚದರ ಮೀಟರ್ ಪ್ರದೇಶದಲ್ಲಿ ಹಸಿರು ವ್ಯಾಪಿಸಿರುವ ಈ ಹೋಟೆಲ್, ಉದ್ಯಾನದಲ್ಲಿರುವ ಅನುಭೂತಿಯನ್ನು ನೀಡುತ್ತದೆ. ಗಗನೋದ್ಯಾನ (ಸ್ಕೈ ಗಾರ್ಡನ್) ಈ ಹೋಟೆಲಿನ ಮತ್ತೊಂದು ಪ್ರಮುಖ ಆಕರ್ಷಣೆ. ಈ ಹೋಟೆಲಿನ ಐದನೇ ಮಹಡಿಗೆ ಹೋದರೆ, ಗಿಡಮೂಲಿಕೆ, ಸೊಪ್ಪು-ಸದೆ, ಕರಿಬೇವುಗಳನ್ನೂ ಕಾಣಬಹುದು. ಅಡುಗೆ ಭಟ್ಟರು ತಮಗೆ ತಕ್ಷಣ ಬೇಕಾದ ಸಾಮಗ್ರಿಗಳನ್ನು ಇಲ್ಲಿಂದಲೇ ಪಡೆದುಕೊಳ್ಳುವುದುಂಟು. ನನಗೆ ಸಿಂಗಾಪುರದ ಬಗ್ಗೆ ಅಭಿಮಾನ ಮೂಡಿದ ಮತ್ತೊಂದು ಮುಖ್ಯ ಸಂಗತಿಯೆಂದರೆ, ಆ ದೇಶ ಹಮ್ಮಿಕೊಂಡಿರುವ ‘ಸಿಂಗಾಪುರ ಗ್ರೀನ್ ಪ್ಲಾನ್ ೨೦೩೦’ ಎಂಬ ಮಹಾತ್ವಾಕಾಂಕ್ಷೆಯ ಬೃಹತ್ ಯೋಜನೆ.

೨೦೨೦ರಲ್ಲಿ ಆರಂಭವಾದ ಈ ಯೋಜನೆಯ ಮುಖ್ಯ ಆಶಯವೆಂದರೆ, ಮುಂದಿನ ಹತ್ತು ವರ್ಷಗಳಲ್ಲಿ ಸಿಂಗಾಪುರದಲ್ಲಿ ಹತ್ತು ಲಕ್ಷ ಗಿಡಗಳನ್ನು ನೆಟ್ಟಿ ಬೆಳೆಸುವುದು. ಪ್ರಸ್ತುತ ಸಿಂಗಾಪುರದಲ್ಲಿ ಎಪ್ಪತ್ತು ಲಕ್ಷ ಗಿಡ-ಮರಗಳಿವೆ. ಇದನ್ನು ಎಂಬತ್ತು ಲಕ್ಷಕ್ಕೆ ಏರಿಸುವುದು ಇದರ ಉದ್ದೇಶ. ಈ ಯೋಜನೆಯ ಸಾಕಾರಕ್ಕೆ
ಸುಮಾರು ಎಂಬತ್ತು ಸಾವಿರ ಸ್ವಯಂಸೇವಕರು, ಮುಂದಿನ ಹತ್ತು ವರ್ಷಗಳ ಅವಽಯಲ್ಲಿ ತಮ್ಮ ಸಮಯವನ್ನು ಕೊಡಲು ಹೆಸರನ್ನು ನೋಂದಾಯಿಸಿಕೊಂ ಡಿದ್ದಾರೆ.

ಈ ಅಭಿಯಾನದಲ್ಲಿ ಇಡೀ ದೇಶವಾಸಿಗಳೇ ಕೈಜೋಡಿಸಿರುವುದು ವಿಶೇಷ. ಪ್ರತಿ ಕಟ್ಟಡವೂ ಪರಿಸರ-ಸ್ನೇಹಿ ವೈಶಿಷ್ಟ್ಯ ಹೊಂದಲಿದೆ. ಮಳೆ ನೀರು ಕೊಯ್ಲು ಮತ್ತು ಸೌರಶಕ್ತಿ ಬಹುತೇಕ ಎಲ್ಲ ಕಟ್ಟಡಗಳ ಅವಿಭಾಜ್ಯ ಅಂಗ. ಎಲ್ಲ ಕಟ್ಟಡಗಳೂ Green Mark Certification ಮತ್ತು Green Building Rating System ಮಾಪನಕ್ಕೆ ಒಳಪಡಬೇಕು. ಸುಮಾರು ಅರವತ್ತು ಲಕ್ಷ ಜನಸಂಖ್ಯೆಯಿರುವ ಸಿಂಗಾಪುರ ದಲ್ಲಿ ವಾಸಿಸುವ ಪ್ರತಿಯೊಬ್ಬರೂ ಹತ್ತು ನಿಮಿಷ ನಡೆದರೆ ಅವರಿಗೆ ಉದ್ಯಾನ ಸಿಗಬೇಕು ಮತ್ತು ಆ ಹಾದಿಯನ್ನು ಕನಿಷ್ಠ ನೂರು ಮರಗಳ ತಂಪಿನ ನೆರಳಲ್ಲಿ ನಡೆಯಬೇಕು ಎಂಬುದೂ ಈ ಯೋಜನೆಯ ಪ್ರಮುಖ ಅಂಶ. ಸಿಂಗಾಪುರ ಕೇವಲ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿ-ಪಕ್ಷಿಗಳಿಗೂ ಬದುಕಲು ಸಹ್ಯವಾದ ತಾಣವಾಗಬೇಕು ಎಂಬುದು ಈ ಯೋಜನೆಯ ವೈಶಿಷ್ಟ್ಯಗಳಲ್ಲೊಂದು. ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿ ತನ್ನ ಕ್ಯಾಂಪಸ್ಸಿನಲ್ಲಿ ೮೦ ಸಾವಿರ ಗಿಡಗಳನ್ನು ನೆಡಲು ನಿರ್ಧರಿಸಿದೆ.

ಈ ಯೋಜನೆ ಅದೆಷ್ಟು ಆಸ್ಥೆಯಿಂದ ಜಾರಿಯಾಗುತ್ತಿದೆಯೆಂದರೆ, ಎರಡು ವರ್ಷಗಳ ಕೋವಿಡ್ ಹೊಡೆತದ ನಡುವೆಯೂ, ಕಳೆದ ಮೂರು ವರ್ಷಗಳಲ್ಲಿ ನಾಲ್ಕು ಲಕ್ಷ (ಶೇ.ನಲವತ್ತರಷ್ಟು) ಗಿಡಗಳನ್ನು ನೆಡಲಾಗಿದೆ. ಜಗತ್ತಿನಲ್ಲಿರುವ ಪ್ರತಿಯೊಂದು ಸಸ್ಯ ಮತ್ತು ಪುಷ್ಪ ಪ್ರಭೇದ ತಮ್ಮ ದೇಶದಲ್ಲಿರಬೇಕು ಎಂದು ಈ ಯೋಜನೆಯನ್ವಯ ಸಿಂಗಾಪುರದ ಆಡಳಿತ ನಿರ್ಧರಿಸಿದೆ. ಈಗಾಗಲೇ ಅಲ್ಲಿನ ಬೊಟಾನಿಕಲ್ ಗಾರ್ಡನ್‌ನಲ್ಲಿ ನಾನೂರು ಪ್ರಭೇದಗಳ, ಅರವತ್ತು ಸಾವಿರ ಆರ್ಕಿಡ್ ಸಸಿಗಳಿವೆ. ಎರಡು ಸಾವಿರಕ್ಕಿಂತ ಹೆಚ್ಚು ಹೈಬ್ರಿಡ್ ಜಾತಿಯ ಆರ್ಕಿಡ್‌ಗಳಿವೆ. ಇನ್ನೂ ಹತ್ತು ಸಾವಿರ ವಿವಿಧ ಆರ್ಕಿಡ್‌ಗಳನ್ನು ಅಭಿವೃದ್ಧಿಪಡಿಸಲು
ಯೋಚಿಸಲಾಗಿದೆ. ಜಗತ್ತಿನ ವಿಶೇಷ ಸಸ್ಯ ತಳಿಗಳು ತಮ್ಮ ದೇಶದಲ್ಲೂ ಇರಬೇಕೆಂದರೆ ಅದಕ್ಕೆ ಪೂರಕವಾದ ಪರಿಸರ, ವಾತಾವರಣವನ್ನು ನಿರ್ಮಿಸಿಕೊಡ ಬೇಕು. ಆ ಅಂಶವನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈಗಿನ ಗತಿಯನ್ನು ಗಮನಿಸಿದರೆ ಇನ್ನು ಮೂರು
ವರ್ಷಗಳೊಳಗೆ, ಹತ್ತು ಲಕ್ಷದ ಗುರಿಯನ್ನು ತಲುಪುವುದರಲ್ಲಿ ಸಂದೇಹವಿಲ್ಲ.

ಈ ಯೋಜನೆ ಸಾಕಾರಗೊಂಡರೆ ಏನಾಗುತ್ತದೆ? ನಿಸ್ಸಂದೇಹವಾಗಿ, ಗಾರ್ಡನ್ ಸಿಟಿಯಾಗಿದ್ದ ಸಿಂಗಾಪುರ ‘ಸಿಟಿ ಇನ್ ಗಾರ್ಡನ್’ ಆಗಿ, ನಂತರ ‘ಏರ್ ಕಂಡಿ ಷನ್ಡ್ ಸಿಟಿ’ಯಾಗಿ ಮಾರ್ಪಡುವುದರಲ್ಲಿ ಸಂದೇಹವಿಲ್ಲ. ನಾನು ಸುಮಾರು ಹದಿನೆಂಟು ವರ್ಷಗಳ ಹಿಂದೆ, ಮೊದಲ ಬಾರಿಗೆ ಸಿಂಗಾಪುರಕ್ಕೆ ಭೇಟಿ ನೀಡಿದಾಗ ಕಂಡ ಹಸಿರಿನ ಹೊದಿಕೆಗಿಂತ ಈ ಸಲ ಆ ಹೊದಿಕೆ ಇನ್ನಷ್ಟು ದಪ್ಪವಾಗಿದೆ ಮತ್ತು ವಿಸ್ತೃತವಾಗಿದೆ. ಆಗ ನಾನು ಬರೆದಿದ್ದೆ- ಸಿಂಗಾಪುರದಲ್ಲಿ ಸಾರ್ವಜನಿಕ ಟಾಯ್ಲೆಟ್ಟುಗಳಲ್ಲೂ ಮರಗಳನ್ನು ಕಾಣಬಹುದು. ನಮ್ಮ ದೇಶದಲ್ಲಿ ಮರಗಳೇ ಟಾಯ್ಲೆಟ್ಟು (ನಮ್ಮಲ್ಲಿ ಅದರ ಹಿಂದೆ ಹೋಗಿ ಮಲ, ಮೂತ್ರ ವಿಸರ್ಜಿಸುತ್ತಾರೆ). ಈ ಮಾತು ಇಂದಿಗೂ ಅಲ್ಲಿ ಮತ್ತು ಇಲ್ಲಿ ಕಟುಸತ್ಯವಾಗಿಯೇ ಉಳಿದಿದೆ!