ಇದೇ ಅಂತರಂಗ ಸುದ್ದಿ
ಟೂರಿಸ್ಟ್‌ಗೂ, ಟ್ರಾವೆಲರ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಇಬ್ಬರೂ ಬೇರೆ ಬೇರೆ. ಈ ದಿನ ಬೆಳಗ್ಗೆ ಹತ್ತು ಗಂಟೆಗೆ ಹೊರಟು, ಮುಂದಿನ ಶನಿವಾರ ಸಾಯಂಕಾಲ ಏಳು ಗಂಟೆಗೆ ಮನೆಗೆ ವಾಪಸ್ ಬರುವವನು ಟೂರಿಸ್ಟ್. ಆದರೆ ಇಂದು ಹೊರಟು ಯಾವಾಗ ವಾಪಸ್ ಬರುತ್ತೇನೆ ಎಂದು ಗೊತ್ತಿಲ್ಲದವನು ಟ್ರಾವೆಲರ್. ಟೂರಿಸ್ಟ್‌ಗೆ ತನ್ನ ಪ್ರವಾಸದ ಇಡೀ ವೇಳಾಪಟ್ಟಿ ಗೊತ್ತಿರುತ್ತದೆ.
ಆತನ ಪ್ರವಾಸ ನಿಯಮ ಮತ್ತು ಕಾಲಬದ್ಧವಾಗಿ ನಡೆಯುತ್ತದೆ. ಆದರೆ ಟ್ರಾವೆಲರ್ ಹಾಗಲ್ಲ, ಮನೆಯಿಂದ ಹೊರ ಬೀಳುವಾಗ, ಆತನಿಗೆ ಪ್ರವಾಸದ ಸ್ಥೂಲ ಕಲ್ಪನೆಯಿರುತ್ತದೆ. ಆದರೆ ಆತ ತನ್ನ ಪ್ರವಾಸದ ಪೂರ್ವನಿರ್ಧರಿತ ಯೋಜನೆಯಂತೆ ನಡೆಯುವುದಿಲ್ಲ. ಆತನಿಗೆ ನಾಳೆ ತಾನು ಎಲ್ಲಿರುತ್ತೇನೆ, ರಾತ್ರಿ ಎಲ್ಲಿ ತಂಗುತ್ತೇನೆ ಎಂಬುದು ಗೊತ್ತಿರುವುದಿಲ್ಲ. ಟೂರಿಸ್ಟ್ ಪ್ರವಾಸ ಕರಾರುವಾಕ್ಕಾಗಿ ನಡೆದರೆ, ಟ್ರಾವೆಲರ್ ಪ್ರವಾಸ ಅನಿಶ್ಚಯಗಳಿಂದ, ಅಚ್ಚರಿಗಳಿಂದ ಕೂಡಿರುತ್ತವೆ. ಟೂರಿಸ್ಟ್ ಮತ್ತು ಟ್ರಾವೆಲರ್ ಪೈಕಿ ನೀವು ಏನಾಗಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಇವೆರಡರಲ್ಲೂ ಪ್ಲಸ್ ಮತ್ತು ಮೈನಸ್‌ಗಳಿರುತ್ತವೆ. ಅದು ನಿಮ್ಮ ಆಯ್ಕೆ, ಅಭಿರುಚಿಗೆ ಬಿಟ್ಟಿದ್ದು.
ಆದರೆ ಒಮ್ಮೊಮ್ಮೆ ಟೂರಿಸ್ಟ್, ಟ್ರಾವೆಲರ್ ಆಗುವುದು, ಟ್ರಾವೆಲರ್ ಇದ್ದಕ್ಕಿದ್ದಂತೆ ಟೂರಿಸ್ಟ್ ಆಗುವುದು ಇದ್ದಿದ್ದೇ. ಕೆಲವೊಮ್ಮೆ ನಾವು ಎಲ್ಲಿಗೋ ಹೊರಟಿರುತ್ತೇವೆ, ಇನ್ನೆಲ್ಲಿಗೋ ಹೋಗಬೇಕಾಗಿ ಬರುತ್ತದೆ. ಇನ್ಯಾವಾಗಲೋ ಮನೆ ತಲುಪಿರುತ್ತೇವೆ. ಇದೇ ಪ್ರವಾಸದ ರೋಚಕತೆ. ಮೊನ್ನೆ ನನಗೆ ಹೀಗೆ ಆಯಿತು. ನಾನು ಜರ್ಮನಿಯ ಉತ್ತರಕ್ಕಿರುವ ಹ್ಯಾಂಬರ್ಗ್ ನಗರದಲ್ಲಿದ್ದೆ.
ಅಲ್ಲಿಂದ ಲುಫಾನ್ಸಾ ವಿಮಾನದ ಮೂಲಕ ಫ್ರಾಂಕ ಫರ್ಟ್‌ಗೆ ಬಂದು ಅಲ್ಲಿ ವಿಮಾನ ಬದಲಿಸಿ, ಇಮಿಗ್ರಿಷನ್ ಫಾರ್ಮಾಲಿಟಿಸ್ ಮುಗಿಸಿಕೊಂಡು, ಅದೇ ಏರ್ ಲೈನ್ಸ್ ಮೂಲಕ ಬೆಂಗಳೂರು ತಲುಪಬೇಕಾಗಿತ್ತು. ಬೆಳಗ್ಗೆ ಹತ್ತು ಗಂಟೆಗೆ ಹ್ಯಾಂಬರ್ಗ್ ಬಿಟ್ಟು, ಮರುದಿನ ಬೆಳಗಿನ ಜಾವ ಒಂದೂವರೆ ಗಂಟೆಗೆ ಬೆಂಗಳೂರಿಗೆ ತಲುಪಬೇಕಿತ್ತು. ಹ್ಯಾಂಬರ್ಗಿ ನಿಂದ ಫ್ರಾಂಕ ಫರ್ಟ್ ಒಂದು ಗಂಟೆ ಪ್ರಯಾಣ ಮತ್ತು ಅಲ್ಲಿಂದ ಬೆಂಗಳೂರು ಒಂಬತ್ತೂವರೆ ಗಂಟೆ ಪ್ರಯಾಣ.
ಆದರೆ ನಾನು ಹ್ಯಾಂಬರ್ಗ್ ವಿಮಾನ ನಿಲ್ದಾಣ ತಲುಪಿದಾಗ ನನಗೆ ಸಣ್ಣ ಆಘಾತ ಕಾದಿತ್ತು. ‘ನೀವು ಹ್ಯಾಂಬರ್ಗಿನಿಂದ ಫ್ರಾಂಕ ಫರ್ಟ್ ಗೆ ಪ್ರಯಾಣಿಸ
ಬೇಕಿರುವ ವಿಮಾನ ರzಗಿದೆ. ಮುಂದಿನ ವಿಮಾನದಲ್ಲಿ ನೀವು ಫ್ರಾಂಕ ಫರ್ಟ್ ಗೆ ಹೋಗಬಹುದು. ಆದರೆ ನಿಮಗೆ ಅಲ್ಲಿ ಕೇವಲ ಐವತ್ತೈದು ನಿಮಿಷ ಕಾಲಾವಕಾಶವಿದೆ. ಅಷ್ಟರೊಳಗೆ ನೀವು ಟರ್ಮಿನಲ್ ಬದಲಿಸಬೇಕು, ಇಮಿಗ್ರಿಷನ್ ಮುಗಿಸಿಕೊಳ್ಳಬೇಕು, ನಂತರ ನಿಮ್ಮ ವಿಮಾನದ ಗೇಟ್ ತಲುಪಬೇಕು. ಅದು ಸಾಧ್ಯವೇ ಇಲ್ಲ’ ಎಂದು ಲುಫ್ತಾನ್ಸಾ ಅಧಿಕಾರಿ ಸ್ಪಷ್ಟವಾಗಿ ತಿಳಿಸಿದ. ‘ಇದು ನನ್ನ ತಪ್ಪಲ್ಲ. ನೀವೇ ಬದಲಿ ಆಯ್ಕೆಯನ್ನು ಸೂಚಿಸಿ’ ಎಂದು ಹೇಳಿದೆ.
ಅದಕ್ಕೆ ಆತ, ‘ನಾನೊಂದು ಬದಲಿ ಮಾರ್ಗ ಸೂಚಿಸುತ್ತೇನೆ. ಅದು ನಿಮಗೆ ದೂರವಾಗುತ್ತದೆ. ನೀವು ಇನ್ನೊಂದು ದೇಶವನ್ನು ನೋಡಬೇಕಾಗಿ ಬರಬಹುದು. ಹತ್ತು ತಾಸು ತಡವಾಗಿ ನಿಮ್ಮ ಊರನ್ನು ತಲುಪಬಹುದು, ಆಗಬಹುದಾ?’ ಎಂದು ಕೇಳಿದ. ಆತ ಮುಂಬರುವ ‘ಆಘಾತಕರ ಸುದ್ದಿ’ಗೆ ನನ್ನನ್ನು ನಿಧಾನವಾಗಿ ಅಣಿಗೊಳಿಸುತ್ತಿದ್ದಾನೆ ಎಂದೆನಿಸಿತು. ಅದಕ್ಕೆ ನಾನು, ‘ಪರವಾಗಿಲ್ಲ, ಬದಲಿ ಉಪಾಯವೇನು?’ ಎಂದು ಹೇಳಿದೆ.
‘ಲುಫ್ತಾನ್ಸಾ ವಿಮಾನದಲ್ಲಿ ನೀವು ಹ್ಯಾಂಬರ್ಗಿನಿಂದ ಮ್ಯೂನಿಕ್ ಗೆ ಹೋಗುತ್ತೀರಿ. ಅಲ್ಲಿ ನೀವು ಇಮಿಗ್ರಿಷನ್ ಫಾರ್ಮಾಲಿಟಿಸ್ ಮುಗಿಸಿಕೊಂಡು, ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಸಿಂಗಾಪುರಕ್ಕೆ ಹೋಗುತ್ತೀರಿ. ಅಲ್ಲಿಂದ ನೀವು ಬೆಂಗಳೂರಿಗೆ ಹೋಗುತ್ತೀರಿ. ಆಗಬಹುದೇ? ಇದಕ್ಕಾಗಿ ನೀವು ಹೆಚ್ಚುವರಿ ಹಣ ಕೊಡಬೇಕಿಲ್ಲ’ ಎಂದು ಹೇಳಿದ.
ನಾನು ತಕ್ಷಣ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಅವನ ತಪ್ಪಿಗೆ ಅವನೊಂದಿಗೆ ಜಗಳ ಮಾಡಿ ಪ್ರಯೋಜನ ಇಲ್ಲ ಎನಿಸಿತು. ಹಾಗೆಂದು ಆತನ ಸಲಹೆಯನ್ನು ತಕ್ಷಣ ಒಪ್ಪಿಕೊಳ್ಳುವಂತಿರಲಿಲ್ಲ. ಕಾರಣ ಮ್ಯೂನಿಕ್ ನಿಂದ ಸಿಂಗಾಪುರಕ್ಕೆ ಹನ್ನೊಂದೂವರೆ ಗಂಟೆ ಹೋಗಬಾರದು. ನಮ್ಮನ್ನೇ ಪರಿಸ್ಥಿತಿಗೆ ಬಿಟ್ಟುಕೊಡಬೇಕು. ಪ್ರಯಾಣ, ನಂತರ ಸಿಂಗಾಪುರದಿಂದ ಬೆಂಗಳೂರಿಗೆ ನಾಲ್ಕೂವರೆ ಗಂಟೆ ಪ್ರಯಾಣ ಮಾಡಬೇಕಿತ್ತು. ಆ ಎರಡೂ ನಿಲ್ದಾಣಗಳಲ್ಲಿ ತಲಾ ಮೂರು ಗಂಟೆ ಕಾಯಬೇಕಿತ್ತು.
ಆತನ ಆ ಸಲಹೆಯನ್ನು ಒಪ್ಪಿಕೊಂಡರೆ, ನಾನು ಮರುದಿನ ಬೆಳಗಿನ ಜಾವ ಬೆಂಗಳೂರು ತಲುಪಬೇಕಾದವನು ಹನ್ನೆರಡು ಗಂಟೆ ತಡವಾಗಿ ತಲುಪುತ್ತೇನೆ ಎಂಬುದು ಸ್ಪಷ್ಟವಾಯಿತು. ಬೇರೆ ಆಯ್ಕೆಗಳು ಇದ್ದರೂ ಅವು ಇದಕ್ಕಿಂತ ‘ಭಯಾನಕ’ವಾಗಿದ್ದವು. ಹೀಗಾಗಿ ಆ ಆಯ್ಕೆಯ ಬಗ್ಗೆ ಯೋಚಿಸಲಿಲ್ಲ. ನಾನು ಆ ದಿನ ಬೆಂಗಳೂರು ತಲುಪಿ, ಬೇರೆ ಯಾವ ಕಾರ್ಯಕ್ರಮವಾಗಲಿ, ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಲಿ ಇರಲಿಲ್ಲ. ನಾನೇ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಿದ್ದರೆ ಬೇರೆ ಮಾತು. ಅಂಥ ತಲೆ ಹೋಗುವ ಯಾವ
ಕಾರ್ಯಕ್ರಮವೂ ಇರಲಿಲ್ಲ. ಹಾಗಂತ ನನಗೆ ಸಮಾಧಾನ ಮಾಡಿಕೊಂಡೆ.
ಇಂಥ ಸಂದರ್ಭದಲ್ಲಿ ಏರ್‌ಲೈನ್ಸ್ ಅಧಿಕಾರಿಗಳು ಹೇಳುವ ಸಲಹೆಯನ್ನು ಪಾಲಿಸುವುದು ಜಾಣತನ. ಕಾರಣ ಅವರು ದಿನನಿತ್ಯ ನನ್ನಂಥ ಹತ್ತಾರು ಪ್ರಯಾಣಿಕರ ಈ ರೀತಿಯ ಸಮಸ್ಯೆಗಳನ್ನು ಬಗೆಹರಿಸಿರುತ್ತಾರೆ. ಪರಿಸ್ಥಿತಿಗಳನ್ನು ನಿಭಾಯಿಸಿರುತ್ತಾರೆ. ಅವರ ಅನುಭವದ ಮಾತುಗಳಿಗೆ ಕಿವಿಯಾಗುವುದು ವಿಹಿತ. ಅವರ ಸಲಹೆಯಲ್ಲಿ ಏನಾದರೂ ತಪ್ಪುಗಳಾದರೆ ಅವರೇ ಹಾನಿಯನ್ನು ಭರಿಸುತ್ತಾರೆ. ನಾವೇ ಬುದ್ಧಿವಂತರು ಎಂದು ಅವರ ಮುಂದೆ ಅತಿಜಾಣತನ ಪ್ರದರ್ಶಿಸುವುದು ಮೂರ್ಖತನ. ಅದಕ್ಕಿಂತ ಅವರ ಜತೆ ಎಂದೂ ಜಗಳಕ್ಕಿಳಿಯಬಾರದು. ನಮ್ಮ ಪ್ರಯಾಣದ ನೆಮ್ಮದಿ, ಸುಖ ಹಾಳಾಗುತ್ತದೆ. ಅದೊಂದು ಕೆಟ್ಟ ನೆನಪಾಗಿ ಯಾವಜ್ಜೀವ ಕಾಡುತ್ತದೆ. ಅದಕ್ಕಿಂತ ಮುಖ್ಯವಾಗಿ, ನಾವೇ ಸರಿಯಿದ್ದರೂ, ಎಲ್ಲರ ಮುಂದೆ ಜಗಳ ಮಾಡುವುದು ಸಭ್ಯ ನಡವಳಿಕೆ ಅಲ್ಲವೇ ಅಲ್ಲ.
ಹೀಗಾಗಿ ನಾನು ಮರು ಮಾತಾಡದೇ ಆ ಅಧಿಕಾರಿ ಸಲಹೆಗೆ ಒಪ್ಪಿಕೊಂಡೆ. ಆತನೊಂದಿಗೆ ವಾದಿಸಿದ್ದರೆ, ಸಣ್ಣ ಜಗಳ ತೆಗೆದಿದ್ದರೆ, ಆ ದಿನ ಫ್ರಾಂಕ ಫರ್ಟ್ ನಲ್ಲಿ ಹೋಟೆಲ್ ವ್ಯವಸ್ಥೆ ಮಾಡುವಂತೆ ಪೀಡಿಸಬಹುದಿತ್ತು. ಮರುದಿನದ ವಿಮಾನದಲ್ಲಿ ಪ್ರಯಾಣಿಸು ತ್ತೇನೆ ಎಂದು ರಚ್ಚೆ ಹಿಡಿಯಬಹುದಿತ್ತು. ಹ್ಯಾಂಬರ್ಗ್ – ಫ್ರಾಂಕ ಫರ್ಟ್ ವಿಮಾನ ರದ್ದಾಗಲು ನಾನು ಕಾರಣನಾಗಿರಲಿಲ್ಲ. ಆಗ ನಾನು ಒಂದು ದಿನ ತಡವಾಗಿ ಬೆಂಗಳೂರು ತಲುಪುತ್ತಿದ್ದೆ.
ಇವೆಲ್ಲವನ್ನೂ ಯೋಚಿಸಿ ಹ್ಯಾಂಬರ್ಗ್ – ಮ್ಯೂನಿಕ್ – ಸಿಂಗಾಪುರ – ಬೆಂಗಳೂರು ಪ್ರಯಾಣಕ್ಕೆ ಸಮ್ಮತಿಸಿದೆ. ಸರಿ ಹ್ಯಾಂಬರ್ಗಿನಿಂದ ಹೊರಟೆ. ವಿಮಾನ ಮ್ಯೂನಿಕ್‌ಗೆ ಬಂದಿಳಿಯಿತು. ಅಲ್ಲಿಂದ ನನ್ನ ಮುಂದಿನ ಪ್ರಯಾಣ ಸಿಂಗಾಪುರಕ್ಕೆ. ಅದು ಮುಕ್ಕಾಲು ಯೂರೋಪ್ ಖಂಡವನ್ನು ದಾಟಿ, ಮಧ್ಯಪ್ರಾಚ್ಯ ದೇಶಗಳನ್ನು ಕ್ರಮಿಸಿ, ಭಾರತದ ಮೇಲೆ ಸುಮಾರು ಎರಡು ಗಂಟೆ ಪ್ರಯಾಣ ಮಾಡಿ, ಅಂತೂ ಸಿಂಗಾಪುರ ತಲುಪಿತು. ಭಾರತದ ಮೇಲೆ ಹಾರುತ್ತಿದ್ದರೂ ಇಳಿಯುವಂತಿಲ್ಲ!
‘ಕೊಂಕಣ ಸುತ್ತಿ ಮೈಲಾರಕ್ಕೆ ಹೋದರು’ ಅಂತಾರಲ್ಲ ಆ ರೀತಿಯಾಗಿತ್ತು. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಬೆಂಗಳೂರಿನಿಂದ ಮೈಸೂರಿಗೆ ಹೋಗಬೇಕಾದವರು, ತುಮಕೂರು ಮಾರ್ಗವಾಗಿ ಚಿತ್ರದುರ್ಗಕ್ಕೆ ಹೋಗಿ, ವಾಪಸ್ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬಂದು ಮೈಸೂರಿಗೆ ಹೋದಂತೆ. ನನ್ನ ಪಾಲಿಗೆ ಯಾವ ವಿಮಾನ ಪ್ರಯಾಣವೂ ಶಿಕ್ಷೆ ಅಲ್ಲವೇ ಅಲ್ಲ. ಅದೆಷ್ಟೇ ದೂರದ ಪ್ರಯಾಣವಾಗಿರಬಹುದು, ಅದೊಂದು
ಅದ್ಭುತ ಅನುಭವ. ವಿಮಾನದಲ್ಲಿರುವ ಜನರನ್ನು ನೋಡುತ್ತಿದ್ದರೆ ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ. ಬೇರೆ ಬೇರೆ ದೇಶಗಳ ವಿಚಿತ್ರ ಜನ. ಇನ್ನು ಅವರೊಂದಿಗೆ ಮಾತಾಡುವುದು ನಿಜಕ್ಕೂ ಖುಷಿ ಕೊಡುವ ವಿಚಾರ. ನಮಗೆ ಗೊತ್ತಿಲ್ಲದ ಅನೇಕ ಸಂಗತಿ ಗಳನ್ನು ಕೇಳಿ ತಿಳಿದುಕೊಳ್ಳಬಹುದು. ಗಗನಸಖಿ ತನ್ನ ಕೆಲಸ ಮುಗಿಸಿ ನಿರಾಳ ಆಗಿzಗ, ಅವಳನ್ನು ಮಾತಾಡಿಸಿದರೆ ಹತ್ತಾರು ವಿಷಯಗಳು ಗೊತ್ತಾಗುತ್ತವೆ. ಅವರ ವೃತ್ತಿ ಬದುಕಿನ ಕಥೆ ಸ್ವಾರಸ್ಯದಾಯಕ. ಗಗನಸಖಿಯ ಲಘು ಸ್ನೇಹ ಮಾಡಿಕೊಂಡರೆ ನೀವು ಕೇಳಿದ ಪೇಯ, ತಿನಿಸುಗಳನ್ನು ಪಡೆಯಬಹುದು. ಈ ಅವಕಾಶವನ್ನು
ನಾನು ಯಾವತ್ತೂ ಕಳೆದುಕೊಳ್ಳುವುದಿಲ್ಲ.
ಇದ್ಯಾವುದೂ ಇಲ್ಲ ಅಂದರೆ, ನಮಗೆ ಬೇಕಾದ ಸಿನಿಮಾ ನೋಡಬಹುದು, ಪುಸ್ತಕ-ಮ್ಯಾಗಜಿನ್-ಪತ್ರಿಕೆಗಳನ್ನು ಓದಬಹುದು. ಇವೆಲ್ಲ ಮುಗಿದ ಬಳಿಕ ನಮ್ಮ ಪಾಡಿಗೆ ಯೋಚಿಸುತ್ತ ಕುಳಿತು ಕೊಳ್ಳಬಹುದು. ಅಷ್ಟು ನಿರಾತಂಕವಾಗಿ, ಆರಾಮವಾಗಿ ಯೋಚಿಸಲು ಭೂಮಿ ಮೇಲೆ ನಮಗೆ ಸಮಯವೇ ಸಿಗುವುದಿಲ್ಲ. ಕಾರಣ, ಕೈಯಲ್ಲಿರುವ ಮೊಬೈಲ್ ಸುಮ್ಮನಿರಲು ಬಿಡುವುದಿಲ್ಲ. ಹೀಗಾಗಿ ನಾನು ಇಂಥ ದೀರ್ಘ ಅವಧಿಯ ವಿಮಾನ ಪ್ರಯಾಣವನ್ನು ಇಷ್ಟಪಡುತ್ತೇನೆ. ಅಂದು ಹ್ಯಾಂಬರ್ಗ್ – ಮ್ಯೂನಿಕ್ – ಸಿಂಗಾಪುರ – ಬೆಂಗಳೂರು ಮಾರ್ಗ ಪ್ರಯಾಣ ದಿಂದ ನಾನು ಹನ್ನೆರಡು ಗಂಟೆ ತಡವಾಗಿ ಮನೆ ತಲುಪಿರಬಹುದು.
ಎಲ್ಲವೂ ಪ್ರಕಟಣೆಗೆ ಯೋಗ್ಯವೇ!
ವಿದೇಶಗಳಲ್ಲಿನ ಕೆಲವು ಪತ್ರಿಕೆಗಳು ತಾವು ಆಯಾ ವರ್ಷ Letters To The Editor (ಸಂಪಾದಕರಿಗೆ ಪತ್ರ ವಿಭಾಗ) ಅಂಕಣದಲ್ಲಿ ಪ್ರಕಟವಾದ ಪತ್ರಗಳ ಪೈಕಿ ಆಯ್ದವುಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸುವ ಸಂಪ್ರದಾಯವನ್ನು ಹಾಕಿಕೊಂಡು ಬಂದಿವೆ. ಓದುಗರಲ್ಲಿ ಬರೆಯುವ ಅಭ್ಯಾಸವನ್ನು ಪ್ರೋತ್ಸಾಹಿಸು ವುದು ಇದರ ಉದ್ದೇಶ. ಜತೆಗೆ ತಮ್ಮ ಪತ್ರಿಕೆಯ ಆ ವಿಭಾಗದಲ್ಲಿ ಎಂಥ ರೋಚಕ, ಆಸಕ್ತಿದಾಯಕ ಪತ್ರಗಳು ಪ್ರಕಟವಾಗುತ್ತವೆ ಎನ್ನುವುದನ್ನು ಎತ್ತಿ ಹೇಳುವುದೂ ಕಾರಣವಾಗಿರಬಹುದು. ಇನ್ನು ಆ ವಿಭಾಗಕ್ಕೆ ನಿರಂತರವಾಗಿ ಪತ್ರ ಬರೆಯುವವರು, ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ಪತ್ರಗಳನ್ನು ಸೇರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುವುದೂ ಉಂಟು.
ಆದರೆ ಲಂಡನ್ನಿನ ‘ದಿ ಡೇಲಿ ಟೆಲಿಗ್ರಾಫ್’ ಪತ್ರಿಕೆ, ಸಂಪಾದಕರ ಪತ್ರ ವಿಭಾಗದಲ್ಲಿ ಪ್ರಕಟವಾಗದ ಪತ್ರಗಳನ್ನು ಸೇರಿಸಿ, ಪ್ರತಿ ವರ್ಷ ಪ್ರಕಟಿಸುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದೆ. ಇದು ಬೇರೆ ಪತ್ರಿಕೆಗಳ ಪ್ರಕಟಿತ ಪತ್ರಗಳ ಸಂಗ್ರಹಕ್ಕಿಂತ ಹೆಚ್ಚು ಆಸಕ್ತಿದಾಯಕ ವಾಗಿರುವುದು ವಿಶೇಷ. ಇದನ್ನು ‘ದಿ ಡೇಲಿ ಟೆಲಿಗ್ರಾಫ್’ Unpublished Letters To The Daily Telegraph ಹೆಸರಿನಲ್ಲಿ ಪ್ರಕಟಿಸುತ್ತ ಬಂದಿದೆ. ‘ಸಂಪಾದಕರಿಗೆ ಪತ್ರ’ ವಿಭಾಗದಲ್ಲಿ ಪ್ರಕಟವಾದ ಪತ್ರಗಳ ಹಾಗೆ, ಪ್ರಕಟವಾಗದೇ ಇರುವ ಪತ್ರಗಳೂ ಸ್ವಾರಸ್ಯವಾಗಿರುತ್ತವೆ ಎಂಬ ಸಂಗತಿ ಈ ಕೃತಿಯನ್ನು ನೋಡಿದಾಗ ಗಮನಕ್ಕೆ ಬಂದಿತು.
ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಮಾತ್ರ ಅಲ್ಲ, ಕ.ಬು. (ಕಸದಬುಟ್ಟಿ) ಸೇರಿದವೂ ಸ್ವಾರಸ್ಯವಾಗಿರುತ್ತವೆ. ಅಂದರೆ ಎಲ್ಲವೂ ಒಂದಿಂದು ರೀತಿಯಲ್ಲಿ ಪ್ರಕಟಣೆಗೆ ಯೋಗ್ಯ ಎಂದಂತಾಯಿತು. ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಮಾತ್ರ ಪುಸ್ತಕ ರೂಪದಲ್ಲಿ ಪ್ರಕಟವಾಗಲು ಯೋಗ್ಯ ಎಂದು ಭಾವಿಸಬೇಕಿಲ್ಲ. ಅಲ್ಲಿ ಪ್ರಕಟವಾಗದವನ್ನು ಇಲ್ಲಿ ಪ್ರಕಟಿಸಬಹುದು ಎಂದಂತಾಯಿತು. ‘ದಿ ಡೇಲಿ ಟೆಲಿಗ್ರಾಫ್’ ಪತ್ರಿಕೆ ಇಲ್ಲಿ ತನಕ ಈ ಮಾಲಿಕೆಯಲ್ಲಿ ಐದು ಸಾವಿರ ಪತ್ರಗಳನ್ನೊಳಗೊಂಡ ಹತ್ತು ಪುಸ್ತಕಗಳನ್ನು ಪ್ರಕಟಿಸಿದೆ.
ಅದೇನೇ ಇರಲಿ, ಪತ್ರಿಕೆಯಲ್ಲಿ ಪ್ರಕಟವಾಗದ ಪತ್ರಗಳನ್ನು ಸಂಗ್ರಹಿಸಿ ಪುಸ್ತಕವಾಗಿ ಪ್ರಕಟಿಸುವುದು ಒಂದು (ಉತ್ತಮ) ಸಂಪ್ರದಾಯವಾಗಿ ರೂಪುಗೊಂಡಿದೆ.
ಮಧ್ಯಪ್ರಾಚ್ಯದಲ್ಲಿ ದಂಗೆಯಾದರೆ ಗಂಭೀರವಾಗಿ ಪ್ರತಿಕ್ರಿಯಿಸುವ ಓದುಗರು, ಪ್ರಿನ್ಸ್ ವಿಲಿಯಮ್ ತಲೆಗೂದಲು ಉದುರಲಾ ರಂಭಿಸಿದಾಗ ಅಷ್ಟೇ ಆಸ್ಥೆಯಿಂದ ಪತ್ರ ಬರೆಯುತ್ತಾರೆ. ಲಂಡನ್ ರೈಲಿನಲ್ಲಿ (ಟ್ಯೂಬ್) ಮಹಿಳೆಯರಿಗೆ, ವಯಸ್ಸಾದವರಿಗೆ ಆಸನ ಮೀಸಲಿಟ್ಟಂತೆ ಸಾಕುನಾಯಿಯೊಂದಿಗೆ ಬರುವ ಪ್ರಯಾಣಿಕರಿಗೂ ಆಸನ ಮೀಸಲು ಇಡಬೇಕು ಎಂದು ಒತ್ತಾಯಿಸುತ್ತಾರೆ. ‘ಬ್ರಿಟನ್ ಪ್ರಧಾನಿಯ ಹೆಂಡತಿಯ ಡ್ರೆಸ್ ಬಗ್ಗೆ ನನ್ನ ಹೆಂಡತಿಗೆ ಕುತೂಹಲ, ಆದರೆ ನಾನು ಅದೇ ಕುತೂಹಲ ತಾಳಿದ್ದಕ್ಕೆ ಆಕೆ ನನಗೆ ಡೈವೋರ್ಸ್ ನೀಡಿದಳು, ಇದ್ಯಾವ ನ್ಯಾಯ?’ ಎಂದು ಪತ್ರ ಬರೆದು ಕೇಳುತ್ತಾರೆ.
ಅಪ್ರಕಟಿತ ಪತ್ರಗಳನ್ನೂ ಪುಸ್ತಕವಾಗಿ ಪ್ರಕಟಿಸುವ ಸಂಪ್ರದಾಯ ಆರಂಭಿಸಿದಂದಿನಿಂದ, ಯಾವ ಪತ್ರವನ್ನೂ ಬಿಸಾಡುವಂತಿಲ್ಲ. ಎಲ್ಲವೂ ಪ್ರಕಟಣೆಗೆ ಯೋಗ್ಯವೇ!
‘ಸಿಡಿ’ಮಿಡಿ !
ಯಾವಾಗ ಯಾವ ವಸ್ತುವಿಗೆ ಗ್ರಹಚಾರ ಕಾದಿದೆಯೋ ಎಂದು ಹೇಳಲು ಸಾಧ್ಯವಿಲ್ಲ. ಇಂದು ಮಾರುಕಟ್ಟೆಯನ್ನು ಆಳಿದ ಪ್ರಾಡಕ್ಟ್, ಮುಂದಿನ ಒಂದು ವರ್ಷದೊಳಗೆ ಹೇಳಹೆಸರಿಲ್ಲದಂತೆ ನಶಿಸಿ ಹೋಗಬಹುದು. ತಂತ್ರeನಕ್ಕೆ ಎಲ್ಲವನ್ನೂ ನುಂಗಿ ನೀರು ಕುಡಿಯುವ, ಇದ್ದಿದ್ದನ್ನು ಇಲ್ಲದಂತೆ ಮಾಡುವ ವಿಚಿತ್ರ ಶಕ್ತಿಯಿದೆ. ಇತ್ತೀಚೆಗೆ ನಾನು ‘ನ್ಯೂಯಾರ್ಕರ್’ ಕ.ಬು. ಮ್ಯಾಗಜಿನ್‌ನಲ್ಲಿ ಇತಿಹಾಸಕಾರಳಾದ ಜಿಲ್ ಲೆಪೋರ್ ಬರೆದ ಲೇಖನವನ್ನು
ಓದುತ್ತಿz. ಆಕೆಯ ಪ್ರಕಾರ, ಎರಡು ದಶಕಗಳ ಕಾಲ ‘ಸಿಡಿ ಡಿಸ್ಕ್ ಡ್ರೈವ್ ಇಂಡಸ್ಟ್ರಿ’ ಜಗತ್ತಿನೆಡೆ ಜನಪ್ರಿಯವಾಯಿತು. ಆರಂಭ ದಲ್ಲಿ ಸಿಡಿ ಡ್ರೈವ್‌ಗೆ ಐನೂರು ರುಪಾಯಿ ಇತ್ತು. ನಂತರ ಅದು ಒಂದು ಹಂತದಲ್ಲಿ ಹತ್ತು ರುಪಾಯಿಗೆ ಮೂರು ಸಿಗುವಂತಾಯಿತು. ಆಗಲೇ ಆ ಉದ್ಯಮ ನಾಶದ ಹಂತ ತಲುಪಿದೆ ಎಂಬ ಸಂಗತಿ ಅರಿವಾಗಬೇಕಿತ್ತು. ತೈವಾನ್‌ನಂದೇ ಒಂದೂವರೆ ವರ್ಷದಲ್ಲಿ ಸಿಡಿಗಳನ್ನು ತಯಾರಿಸುವ ನೂರಕ್ಕೂ ಹೆಚ್ಚು ಉದ್ಯಮಗಳು ತಲೆಯೆತ್ತಿದವು. ಕಂಪ್ಯೂಟರ್ ತಯಾರಿಸಿ ಹಣ ಮಾಡಿದವರಿಗಿಂತ, ಸಿಡಿ ಮಾಡಿ ಹಣ ಮಾಡಿದವರು ಹೆಚ್ಚು. ಕಂಪ್ಯೂಟರನ್ನು ಹತ್ತು ಮಂದಿ ತಯಾರಿಸಿದರೆ, ಸಿಡಿ ಡಿಸ್ಕುಗಳನ್ನು ಸಾವಿರ ಮಂದಿ ತಯಾರಿಸಲಾರಂಭಿಸಿದರು.
ಜಗತ್ತಿನ ಎಲ್ಲ ಮಾಹಿತಿಯನ್ನೂ ಸಿಡಿಯಲ್ಲಿಡಬಹುದು ಎಂಬ ನಂಬಿಕೆ ಆರಂಭದಲ್ಲಿ ಅನೇಕ ಕಂಪ್ಯೂಟರ್ ಬಳಕೆದಾರರಲ್ಲಿ ಇದ್ದುದೇ ಆ ಉದ್ಯಮ ಬೆಳೆಯಲು ಕಾರಣವಾಗಿತ್ತು. ಆದರೆ ಬರಬರುತ್ತಾ ಸಿಡಿ ಡಿಸ್ಕ್ ಸುರಕ್ಷಿತವಲ್ಲ ಎಂಬುದು ಗೊತ್ತಾಗುತ್ತಾ ಹೋಯಿತು. ಅದಕ್ಕಿಂತ ಮುಖ್ಯವಾಗಿ, ಸಿಡಿಯಲ್ಲಿ ಹೆಚ್ಚು ಡಾಟಾಗಳನ್ನು ಸಂಗ್ರಹಿಸಿಡಲು ಸಾಧ್ಯವಿಲ್ಲ ಎಂಬುದು ಮನವರಿಕೆ ಯಾಯಿತು. ಈ ವಿಷಯ ಗೊತ್ತಾಗುವ ಹೊತ್ತಿಗೆ ಸಿಡಿ ತಯಾರಿಸುವ ಕಂಪನಿಗಳು ಹಾಕಿದ ಬಂಡವಾಳವನ್ನು ತೆಗೆದು ಮೂರು ಜನ್ಮಕ್ಕಾಗುವಷ್ಟು ಹಣ ಸಂಪಾದಿಸಿದ್ದವು.
ಕೊನೆಗೊಂದು ದಿನ, ಸಿಡಿಯನ್ನು ತುರುಕುವ ಡ್ರೈವ್‌ಗಳಿರುವ ಕಂಪ್ಯೂಟರ್‌ಗಳನ್ನು ತಯಾರಿಸುವುದನ್ನೇ ಕಂಪನಿಗಳು ಬಂದ್ ಮಾಡಿಬಿಟ್ಟವು. ಅಷ್ಟರೊಳಗೆ ಕ್ಲೌಡ್ ತಂತ್ರeನ ಬಂದಾಗಿತ್ತು. ಸಿಡಿಗಳನ್ನು ಮಕ್ಕಳು ಆಡಲು ಬಳಸಲಾರಂಭಿಸಿದರು. ಅದನ್ನು ಷೋ ಪೀಸ್ ಆಗಿ ಕಾರುಗಳಲ್ಲಿ ನೇತು ಹಾಕಲಾರಂಭಿಸಿದರು. ಕಂಪ್ಯೂಟರ್ ಬಳಕೆದಾರರಲ್ಲಿ ಮಾತ್ರ ಕಂಡು ಬರುತ್ತಿದ್ದ ಸಿಡಿ ಡಿಸ್ಕು ಗಳನ್ನು ಅಡುಗೆಭಟ್ಟರು ವರ್ತುಲಾಕಾರದ ಡಿಸೈನ್ ಮಾಡಲು ಅನುಕೂಲವಾಗಲೆಂದು ಜಿಲೇಬಿ, ಚಕ್ಕುಲಿ, ದೋಸೆ ತಯಾರಿಸುವಾಗ ಉಪಯೋಗಿಸಲಾರಂಭಿಸಿದರು. ಅಲ್ಲಿಗೆ ಸಿಡಿ ವ್ಯಾಪಾರ ನೆಗೆದು ಬಿದ್ದಿತ್ತು.
ಈಗ ಸಿಡಿಯನ್ನು ನೆನಪಿಸಿಕೊಳ್ಳಲು ಕಾರಣ, ಮೊನ್ನೆ ಜರ್ಮನಿಯ ಮ್ಯೂನಿಕ್ ವಿಮಾನ ನಿಲ್ದಾಣದಲ್ಲಿ ಪತ್ರಿಕೆಯನ್ನು ಓದುವಾಗ ಕಣ್ಣಿಗೆ ಬಿದ್ದ ಒಂದು ಸುದ್ದಿ. ಜರ್ಮನಿಯ ಒಂದು ಪ್ರತಿಷ್ಠಿತ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಇದ್ದ ಐದೂವರೆ ಕೋಟಿ ಸಿಡಿಗಳನ್ನು ಧ್ವಂಸ ಮಾಡಲು ನಿರ್ಧರಿಸಲಾಗಿದೆ ಎಂಬುದು ಆ ಸುದ್ದಿಯ ಸಾರಾಂಶ. ಆ ಸಿಡಿಗಳಲ್ಲಿದ್ದ ಡಾಟಾವನ್ನು ಬೇರೆಡೆ ವರ್ಗಾಯಿಸಿ ಭದ್ರ ಮತ್ತು ಸುರಕ್ಷಿತವಾಗಿ ಇಡಲು
ಆ ಸಂಸ್ಥೆಗೆ ಸುಮಾರು ಮೂರು ವರ್ಷಗಳಾದುವಂತೆ. ಅಷ್ಟೇ ಅಲ್ಲ, ಆ ಸಿಡಿಗಳಲ್ಲಿದ್ದ ಡಾಟಾವನ್ನು ಡಿಲೀಟ್ ಮಾಡಲು ಸಾಕಷ್ಟು ಸಮಯ ಹಿಡಿದಿತ್ತು.
ಈಗ ಸಿಡಿ ಅಂದ್ರೆ ಜನ ಸಿಡಿಮಿಡಿಗೊಳ್ಳುವಂತಾಗಿದೆ!