Saturday, 14th December 2024

ಸಂಭ್ರಮಿಸಲೂ ಗುಲಾಮಿ ಮನಸ್ಥಿತಿಯ ವಿರೋಧವೇ ?!

ವರ್ತಮಾನ

maapala@gmail.com

ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿದ್ದಕ್ಕೆ ಸಂಭ್ರಮಿಸಿದ ಭಾರತೀಯರ ಕುರಿತು ನಮ್ಮವರೇ ಕೊಂಕು ಮಾತನಾಡುತ್ತಿದ್ದಾರೆ. ಈ ಸಂಭ್ರಮಕ್ಕೆ ಕಾರಣಗಳೇನು ಎಂಬ ಯೋಚನೆಯನ್ನೂ ಮಾಡದ ಗುಲಾಮಿ ಮನಸ್ಥಿತಿ ಈಗಲೂ ಅವರಲ್ಲಿ ಉಳಿದು ಕೊಂಡಿದೆ ಎಂದರೆ ಅದಕ್ಕೆ ಅವರಿನ್ನೂ ಬದಲಾವಣೆಗೆ ಒಗ್ಗಿಕೊಂಡಿಲ್ಲ.

ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದ ಉಪಾಧ್ಯಕ್ಷರಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಆಯ್ಕೆ ಯಾದಾಗ ಇಡೀ ಭಾರತ ಸಂಭ್ರಮಿಸಿತ್ತು. ಭಾರತೀಯ ಮೂಲದ ಮಹಿಳೆಯೊಬ್ಬರು ಕಪ್ಪು-ಬಿಳಿಯರು ಎಂಬ ತಾರತಮ್ಯ ಹೊಂದಿರುವ ಅಮೆರಿಕದ ಉಪಾಧ್ಯಕ್ಷರಾಗಿದ್ದು ನಮಗೆಲ್ಲಾ ಹೆಮ್ಮೆಯಾಗಿತ್ತು.

ಆದರೆ, ಅದಕ್ಕಿಂತ ಹತ್ತು ಪಟ್ಟು ಹೆಚ್ಚು ಸಂಭ್ರಮಪಟ್ಟಿದ್ದು ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾದಾಗ. ಅದರಲ್ಲೂ ದೇಶದ ಇತರೆ ರಾಜ್ಯಗಳಿಗಿಂತ ಕನ್ನಡಿಗರು ಹೆಚ್ಚು ಖುಷಿಪಟ್ಟರು. ಅದಕ್ಕೆ ಕಾರಣ ರಿಷಿ, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿಯವರ ಪತಿ ಎಂಬ ಕಾರಣಕ್ಕೆ. ಹೀಗಾಗಿ ಕರ್ನಾಟಕದ ಅಳಿಯ ಬ್ರಿಟನ್ ಪ್ರಧಾನಿಯಾದರೂ ಎಂದು ರಾಜ್ಯದ ಜನ ಸಂತಸಪಟ್ಟರು.

ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾದಾಗ ಹೆಚ್ಚು ಸಂಭ್ರಮಪಡಲು ಇನ್ನೂ ಒಂದು ಕಾರಣವಿತ್ತು. ೨೦೦ ವರ್ಷ ಭಾರತ ವನ್ನಾಳಿದ, ಅಷ್ಟೇ ಅಲ್ಲ ಭಾರತೀಯರನ್ನು ಇನ್ನಿಲ್ಲದಂತೆ ಕಾಡಿದ ಇಂಗ್ಲೆಂಡಿನಲ್ಲಿ ಭಾರತೀಯ ಮೂಲದ ಅದರಲ್ಲೂ ಹಿಂದೂ ಒಬ್ಬ ಪ್ರಧಾನಿ ಪಟ್ಟಕ್ಕೇರುವುದು ಸಣ್ಣ ಮಾತೇನೂ ಅಲ್ಲ. ಪ್ರಧಾನಿ ಹುದ್ದೆಗೆ ಕನ್ಸರ್ವೇಟಿವ್ ಪಾರ್ಟಿಯ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದಾಗಲೇ ಅವರು ಪ್ರಧಾನಿ ಪಟ್ಟಕ್ಕೇರಬೇಕಿತ್ತು.

ಮುಂಚೂಣಿಯಲ್ಲಿದ್ದ ರಿಷಿ ಸುನಕ್ ಕೊನೇ ಕ್ಷಣದಲ್ಲಿ ಹಿನ್ನಡೆ ಅನುಭವಿಸಿ ಲಿಜ್ ಟ್ರಸ್ ಅವರಿಗೆ ಅವಕಾಶ ಸಿಕ್ಕಿತ್ತು. ಆದರೆ, ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದೆ ಟ್ರಸ್ ರಾಜೀನಾಮೆ ನೀಡಬೇಕಾಯಿತು. ಈ ವೇಳೆ ಮತ್ತೆ ಅವಕಾಶ ತಪ್ಪಿಸಲು ಸಾಕಷ್ಟು ಪ್ರಯತ್ನಗಳು ನಡೆದವಾದರೂ ಅದು ಯಶಸ್ವಿಯಾಗದೆ ರಿಷಿ ಸುನಕ್ ಪ್ರಧಾನಿ ಹುದ್ದೆಗೇರಿದರು. ಭಾರತೀಯ ರೆಲ್ಲರೂ ಸಂಭ್ರಮಿಸಿದರು.

ಆದರೆ, ಕೆಲವರಲ್ಲಿ ಇನ್ನೂ ಗುಲಾಮಗಿರಿ ಮನಸ್ಥಿತಿ ಉಳಿದುಕೊಂಡಿದೆ ಎಂಬುದಕ್ಕೆ ಉದಾಹರಣೆ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಾದ ಸಂಭ್ರಮಿಸಿದ ಭಾರತೀಯರ ಬಗ್ಗೆ ಈ ರಾಷ್ಟ್ರದವರೇ ಅಣಕವಾಡಿದ್ದು. ರಿಷಿ ಸುನಕ್ ಭಾರತೀಯ ಅಲ್ಲ, ಪಾಕಿಸ್ತಾನದ ಗುಜ್ರಾನ್‌ವಾಲಾ ಮೂಲದವರು. ಅವರು ಭಾರತೀಯ ಪ್ರಜೆಯಲ್ಲ. ನಿಜವಾಗಿಯೂ ಸಂಭ್ರಮಿಸಬೇಕಾದವರು ಪಾಕಿಸ್ತಾನದವರು. ಗುಜ್ರಾನ್ ವಾಲಾದಲ್ಲಿದ್ದ ಅವರ ತಾತ ಕೀನ್ಯಾಕ್ಕೆ ವಲಸೆ ಹೋಗಿದ್ದರು.

ರಿಷಿ ಸುನಕ್ ತಾಯಿ ತಾಂಜೇನಿಯಾದಲ್ಲಿ ಹುಟ್ಟಿದರು. ತಂದೆ ಬ್ರಿಟನ್‌ಗೆ ವಲಸೆ ಹೋದ ಬಳಿಕ ರಿಷಿ ಅಲ್ಲೇ ಹುಟ್ಟಿ ಶಿಕ್ಷಣ
ಪಡೆದರು. ಅವರು ಅಪ್ಪಟ ಬ್ರಿಟನ್ ಪ್ರಜೆ. ಅವರಿಗೆ ಭಾರತದ ಸಂಪರ್ಕವೇ ಇಲ್ಲ… ಹೀಗೆ ಓತಪ್ರೋತವಾಗಿ ರಿಷಿ ಸುನಕ್ ಬಗ್ಗೆ ಟೀಕೆ ಆರಂಭಿಸಿದರು. ತಾನು ಬ್ರಿಟನ್ ಪ್ರಧಾನಿಯಾಗಿದ್ದನ್ನು ಸಂಭ್ರಮಿಸಿ ಎಂದು ರಿಷಿ ಸುನಕ್ ಹೇಳಿರಲಿಲ್ಲ. ಅಷ್ಟೇ ಅಲ್ಲ, ಅವರ ಅತ್ತೆ-ಮಾವರಾದ ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿ ಕೂಡ ಹೇಳಲಿಲ್ಲ. ಇನ್ನು ಪಾಕಿಸ್ತಾನದವರನ್ನು
ಸಂಭ್ರಮಿಸಬೇಡಿ ಎಂದೂ ಯಾರೂ ನಿರ್ಬಂಧ ಹೇರಿರಲಿಲ್ಲ.

ಆದರೂ ಶತಮಾನಗಳ ಕಾಲ ಮೊಘಲರು, ಬ್ರಿಟಿಷರ ಗುಲಾಮಗಿರಿಯಲ್ಲಿ ಕುಗ್ಗಿಹೋಗಿದ್ದ ಭಾರತೀಯರಿಗೆ ಬ್ರಿಟನ್ ಪ್ರಧಾನಿ ಯಾಗಿ ರಿಷಿ ಸುನಕ್ ಆಯ್ಕೆ ಅತ್ಯಂತ ಖುಷಿ ತಂದಿತ್ತು. ಅಂದು ನಮ್ಮನ್ನು ಗುಲಾಮರಂತೆ ಕಂಡ ದೇಶವನ್ನು ಮೇಲೆತ್ತಲು ಭಾರತೀಯ ಸಂಜಾತನೊಬ್ಬ ಬರಬೇಕಾಯಿತಲ್ಲಾ ಎಂಬ ಸಂತೋಷ ಇದರ ಹಿಂದೆ ಇತ್ತು. ರಿಷಿ ಸುನಕ್ ಕುಟುಂಬದ ಮೂಲ ಪ್ರಸ್ತುತ ಪಾಕಿಸ್ತಾನದಲ್ಲಿದ್ದರೂ ಬ್ರಿಟಿಷರು ಭಾರತವನ್ನು ವಿಭಜಿಸುವ ಮುನ್ನ ಅದು ಅಖಂಡ ಭಾರತದ ಒಂದು ಭಾಗವಾಗಿತ್ತು ಎಂಬುದನ್ನು ಟೀಕಿಸುವವರು ನೆನಪಿಸಿಕೊಳ್ಳಬೇಕು.

ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆಯಾದಾಗ ಸಂಭ್ರಮಿಸಿದ ಭಾರತೀಯರನ್ನು ಟೀಕಿಸುವವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಪ್ರಕರಣವನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಽ ಪ್ರಕರಣಕ್ಕೆ ಥಳಕು ಹಾಕಿದರು. 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರಕ್ಕೆ ಬಂದಾಗ ಸೋನಿಯಾ, ಭಾರತದ ಪ್ರಧಾನಿಯಾಗುವುದನ್ನು ಬಿಜೆಪಿ ವಿರೋಧಿಸಿತ್ತು. ವಿದೇಶಿ ಮೂಲದ ಮಹಿಳೆ ಭಾರತದ ಪ್ರಧಾನಿಯಾಗುವುದು ಬೇಡ ಎಂದು ಹೇಳಿತ್ತು.

ಇದನ್ನೇ ನೆಪವಾಗಿಟ್ಟುಕೊಂಡು ಕೆಲವರು, ‘ಸೋನಿಯಾ ಗಾಂಽಯವರನ್ನು ಇಟಲಿಯಾಕೆ ಎಂದು ಜರಿಯುತ್ತಿರುವ ಬ್ರಿಟಿಷರ ಬೂಟು ನೆಕ್ಕಿದ ರಿಷಿ ಬ್ರಿಟನ್ ಪ್ರಧಾನಿಯಾದಾಗ ಸಂಭ್ರಮಿಸುತ್ತಿರುವುದು ತಮಾಷೆ ಯಾಗಿದೆ. ರಿಷಿ ಭಾರತದ ಹೆಣ್ಣು ಮಗಳನ್ನು ಮದುವೆ ಯಾದರೂ ವಿದೇಶದಲ್ಲೇ ನೆಲೆಸಿದ್ದಾರೆ. ಆದರೆ, ಸೋನಿಯಾ ಭಾರತೀಯನನ್ನು ಪ್ರೀತಿಸಿ ಮದುವೆಯಾಗಿ ಭಾರತಕ್ಕೆ ಬಂದು ನೆಲೆಸಿದ್ದರು.

ಇಬ್ಬರು ಮಕ್ಕಳನ್ನು ಹೆತ್ತು ಈ ನೆಲದಲ್ಲೇ ಅಮ್ಮಾ ಎನಿಸಿಕೊಂಡರು’ ಎಂದೆಲ್ಲಾ ಬಡಬಡಿಸುತ್ತಿದ್ದಾರೆ. ಖಂಡಿತವಾಗಿಯೂ ಸೋನಿಯಾ ಗಾಂಧಿ ಭಾರತಕ್ಕೆ ಬಂದು ನೆಲೆಸಿದರು, ಇಬ್ಬರು ಮಕ್ಕಳನ್ನು ಹೆತ್ತು ಈ ನೆಲದಲ್ಲೇ ಅಮ್ಮಾ ಎನಿಸಿಕೊಂಡರು ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ, ರಾಜೀವ್ ಗಾಂಧಿ ಜತೆ ಭಾರತಕ್ಕೆ ಬಂದ ಬಳಿಕ ಅವರು ಭಾರತೀಯ ಪೌರತ್ವ ಪಡೆದಿರಲಿಲ್ಲ. ರಾಜೀವ್ ಹತ್ಯೆ ಬಳಿಕ ಇನ್ನು ಕಾಂಗ್ರೆಸ್‌ಗೆ ಬೇರೆ ನಾಯಕರಿಲ್ಲ ಎಂಬ ಪರಿಸ್ಥಿತಿ ಬಂದಾಗ ಭಾರತೀಯ ಪೌರತ್ವ ಪಡೆದು ಕಾಂಗ್ರೆಸ್ ನೇತೃತ್ವ ವಹಿಸಿದ್ದರು. ಈ ಕಾರಣವನ್ನೇ ಮುಂದಿಟ್ಟುಕೊಂಡು 2004ರಲ್ಲಿ ಸೋನಿಯಾ ಪ್ರಧಾನಿ ಯಾಗಲು ಬಿಜೆಪಿ ವಿರೋಧಿಸಿತ್ತು.

ಇಂದು ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾದಾಗ ಸಂಭ್ರಮಿಸಿದ ಎಲ್ಲರೂ ವಿರೋಧಿಸಿರಲಿಲ್ಲ. ಅಷ್ಟಕ್ಕೂ ಸೋನಿಯಾರನ್ನು ವಿರೋಧಿಸಲು ಅವರ ವಿದೇಶಿಮೂಲ, ಭಾರತೀಯ ಪೌರತ್ವ ಪಡೆಯಲು ವಿಳಂಬ ಮಾಡಿದ್ದೇ ಕಾರಣ ಎಂಬುದಕ್ಕೆ ಇದೀಗ ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಮಾತ್ರವಲ್ಲ, ಈ ದೇಶ ಒಪ್ಪಿಕೊಂಡಿರುವುದೇ ಉದಾಹರಣೆ. ದೇಶದಲ್ಲಿ ಕಾಂಗ್ರೆಸ್
ಮತ್ತೆ ಅಽಕಾರಕ್ಕೆ ಬಂದಾಗ ರಾಹುಲ್ ಪ್ರಧಾನಿಯಾದರೆ ಅವರ ವಿದೇಶಿಮೂಲವನ್ನು ಕೆದಕಿ ಯಾರೂ ವಿರೋಧಿಸುವುದಿಲ್ಲ.

ಅಷ್ಟಕ್ಕೂ ಸೋನಿಯಾ ಹಾಗೂ ರಿಷಿ ಮಧ್ಯೆ ಸಾಕಷ್ಟು ವ್ಯತ್ಯಾಸಗಳಿವೆ. ಯಾರದ್ದೋ ಪುತ್ರ, ಇನ್ಯಾರದ್ದೋ ಪತಿ ಎಂಬ ಕಾರಣಕ್ಕೆ ಅವರಿಗೆ ಪ್ರಧಾನಿ ಹುದ್ದೆ ದಕ್ಕಿದ್ದಲ್ಲ. ಆತ ಹುಟ್ಟಿ, ಬೆಳೆದದ್ದು ಬ್ರಿಟನ್‌ನಲ್ಲಿ. ಕೆಲಸ ಮಾಡಿದ್ದೂ ಅದೇ ರಾಷ್ಟ್ರದಲ್ಲಿ. 2015ರಲ್ಲಿ ಉತ್ತರ ಯಾರ್ಕ್‌ಶೈರ್‌ನ ರಿಚ್ ಮಂಡ್‌ಗಾಗಿ ಹೌಸ್ ಆಫ್ ಕಾಮನ್ಸ್‌ಗೆ ಸುನಕ್ ಆಯ್ಕೆಯಾದರು.

2018ರಲ್ಲಿ ಥೆರೆಸಾ ಮೇ ಅವರ ಎರಡನೇ ಸರಕಾರಕ್ಕೆ, ಸರಕಾರದ ಸಂಸದೀಯ ಅಧೀನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಥೆರೆಸಾ ಮೇ ರಾಜೀನಾಮೆ ನಂತರ ಕನ್ಸರ್ವೇಟಿವ್ ನಾಯಕರಾಗಲು ಬೋರಿಸ್ ಜಾನ್ಸನ್ ಅವರ ಅಭಿಯಾನವನ್ನು ಸುನಕ್ ಬೆಂಬಲಿಸಿದರು. ಜಾನ್ಸನ್ ಪ್ರಧಾನಿಯಾದ ಬಳಿಕ ಹಣಕಾಸು ಸಚಿವರಾದರು. ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಆಯ್ಕೆಯಾಗಿ ಪ್ರಧಾನಿ ಯಾದರು. ಈ ಸಂದರ್ಭದಲ್ಲಿ ಕನ್ಸರ್ವೇಟಿವ್ ಪಾರ್ಟಿ ರಿಷಿ ಸುನಕ್ ಹಿಂದೆ ನಿಂತಿದ್ದು ಅವರು ಯಾವ ಮೂಲದವರು, ಅವರ ಹಿಂದೆ ಯಾರಿದ್ದಾರೆ ಎಂಬ ಕಾರಣಕ್ಕಾಗಿ ಅಲ್ಲ.

ಬೋರಿಸ್ ಜಾನ್ಸನ್ ಸರಕಾರದಲ್ಲಿ ಹಣಕಾಸು ಸಚಿವರಾಗಿ ಖಾತೆಯನ್ನು ನಿರ್ವಹಿಸಿದ ರೀತಿ, ಕೋವಿಡ್ ಸಾಂಕ್ರಾಮಿಕ
ಎದುರಿಸಿದ ಮಾದರಿಯನ್ನು ಪರಿಗಣಿಸಿದರು. ಯಾರದ್ದೋ ಪತಿ, ಇನ್ಯಾರದ್ದೋ ಮಗ ಎಂಬ ಕಾರಣಕ್ಕಾಗಿ ಅಲ್ಲ. ಅಷ್ಟಕ್ಕೂ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿದ್ದಕ್ಕೆ ಭಾರತೀಯರು ಸಂಭ್ರಮಿಸಿದ್ದು ಅವರಿಂದ ಮುಂದೆ ನಮಗೆ ಅನುಕೂಲವಾಗುತ್ತದೆ ಎಂಬ ನಿರೀಕ್ಷೆಯಿಂದ ಇಲ್ಲ. 200 ವರ್ಷ ನಮ್ಮನ್ನಾಳಿದ ಬ್ರಿಟಿಷರು ದೇಶಕ್ಕೆ ಸ್ವಾತಂತ್ರ್ಯ ನೀಡುವಾಗ, ಯಾರನ್ನು ಇವರು ಗುಲಾಮರಾಗಿರಲಷ್ಟೇ ಲಾಯಕ್ಕು, ಹಾವಾಡಿಸುವವರು ಎಂದೆಲ್ಲಾ ವ್ಯಂಗ್ಯವಾಡಿದ್ದರೋ ಅದೇ ಭಾರತೀಯ ಮೂಲದವರು ಇಂದು ಸಂಕಷ್ಟಕ್ಕೊಳಗಾಗಿರುವ ಬ್ರಿಟಿಷರನ್ನು ಪಾರುಮಾಡುವ ಪರಿಸ್ಥಿತಿ ಬಂತಲ್ಲಾ ಎಂಬ ಖುಷಿಯಿಂದ.

ಅಷ್ಟೇ ಅಲ್ಲ, ರಿಷಿ ಸುನಕ್ ಇಂಗ್ಲೆಂಡ್‌ನಲ್ಲೇ ಹುಟ್ಟಿ ಬೆಳೆದಿರಲಿ, ಇನ್ನೂ ಆತ ಭಾರತೀಯ ಸಂಸ್ಕೃತಿಯನ್ನು ಮರೆತಿಲ್ಲ. ಭಾರತೀಯ ಆಚರಣೆಗಳನ್ನು ಬಿಟ್ಟಿಲ್ಲ. ಶಿಷ್ಟಾಚಾರಗಳಿಂದ ದೂರವಾಗಿಲ್ಲ. ಇದು ಕೂಡ ಅವರ ಆಯ್ಕೆಯನ್ನು ಭಾರತೀಯರು
ಸಂಭ್ರಮಿಸಲು ಒಂದು ಕಾರಣ. ಆದರೆ, ಅದೇಕೋ ಭಾರತೀಯರನ್ನು ಗುಲಾಮರಂತೆ ಆಳಿದ ಬ್ರಿಟಿಷರು ದೇಶ ಬಿಟ್ಟು ತೊಲಗಿ 75 ವರ್ಷ ಕಳೆದರೂ ಇನ್ನೂ ಕೆಲವರಲ್ಲಿ ಅವರು ಬಿತ್ತಿ ಬೆಳೆಸಿದ ಗುಲಾಮಿತನ ಹೋಗಿಲ್ಲ.

ನಾವಿನ್ನೂ ಬ್ರಿಟಿಷರ ಗುಲಾಮರು ಎಂಬ ಭಾವನೆ ಇದ್ದುದರಿಂದಲೇ ಈ ನೆಲದ ಮೂಲದವನೊಬ್ಬ ಬ್ರಿಟನ್ ಪ್ರಧಾನಿಯಾದಾಗ ಸಂಭ್ರಮಿಸಿದ್ದನ್ನು ಕಂಡು ಉರಿದು ಬೀಳುತ್ತಿದ್ದಾರೆ. ಇದಕ್ಕೆ, ಗುಲಾಮರಾಗಿದ್ದವರು ದೊರೆಯಾಗಲು ಇವರ ಮನಸ್ಥಿತಿ ಒಪ್ಪುತ್ತಿಲ್ಲ ಎಂದು ಹೇಳಬೇಕೇ ಹೊರತು ಬೇರೇನನ್ನೂ ಹೇಳಲು ಸಾಧ್ಯವಿಲ್ಲ.

ಲಾಸ್ಟ್ ಸಿಪ್: ಸುಟ್ಟು ಹೋಗುವುದು ಹೊಟ್ಟೆ ಉರಿಸಿಕೊಳ್ಳುವವರೇ ಹೊರತು ಅದಕ್ಕೆ ಕಾರಣರಾದವರು ಅಲ್ಲ.