Sunday, 15th December 2024

ಬಲ್ಲವರು ತೋರಿದ ಭೈರಪ್ಪ ವ್ಯಕ್ತಿತ್ವದ ಬೆಲ್ಲ

ಸುಪ್ತ ಸಾಗರ

ರಾಧಾಕೃಷ್ಣ ಎಸ್‌.ಭಡ್ತಿ

rkbhadti@gmail.com

ಇದು ಜಾಗತಿಕ ವಲಯದ ಯಾವ ಸಾಹಿತ್ಯದ ಕ್ಷೇತ್ರದಲ್ಲೂ ನಡೆಯದಿರುವ ವಿದ್ಯಮಾನ, ಮಹತ್ತ್ವದ ಸಾಹಿತಿಯೊಬ್ಬರ ಬಗ್ಗೆ ಶ್ರೀ ಸಾಮಾನ್ಯ ಸಾಹಿತ್ಯಾಭಿಮಾನಿಗಳ ಅನಿಸಿಕೆಗಳಿಗೆ ಎಡೆ ನೀಡಿರುವ ಹಾಗೂ ಅವುಗಳನ್ನು ಗ್ರಂಥರೂಪದಲ್ಲಿ ಸಂಕಲಿಸಿರುವ ಪ್ರಾಮಾಣಿಕ ಪ್ರಯತ್ನ. ಸರಣಿ ಕೊನೆಯಾಗದಿರಲಿ, ಭೈರಪ್ಪನವರ ಬಗೆಗೆ ಬರೆವ ಅಭಿಲಾಷಿಗಳು, ಬರೆಯಬೇಕಿರುವುದೂ ಇನ್ನೂ ಬಹಳಷ್ಟಿದೆ.

‘ಅವರು ಈಶ್ವರ ವಾದಿಯಲ್ಲ, ಆದರೆ ಅಪ್ಪಟ ಅಧ್ಯಾತ್ಮವಾದಿ’ ಹಾಗೆಂದು ಶತಾವಧಾನಿ ರಾ.ಗಣೇಶರು ಆರಂಭದಲ್ಲೇ ಪ್ರತಿಪಾದಿಸು ತ್ತಾರೆ. ‘ನಾನು ಯಾವತ್ತೂ ಪೂಜೆ, ಹಬ್ಬಗಳನ್ನು ಮಾಡಿದ್ದು ಇಲ್ಲ. ಮನೆಯಲ್ಲಿ ಅವೆಲ್ಲವೂ ನಡೆಯುತ್ತಿರುತ್ತದೆ; ನಡೆಯ ಬೇಕು…’ ಸ್ವತಃ ಅವರೇ ಹೇಳಿಕೊಂಡಿದ್ದನ್ನು ಗಣೇಶರು ಉದ್ದರಿಸುತ್ತಾರೆ.

ಹಾಗೆ ನೋಡಿದರೆ ಅವರೊಳಗಿನ ಅಧ್ಯಾತ್ಮ ಶಿಖರಕ್ಕೆ ಹಿಮಾಲಯ ಸಂಕೇತ. ಸುತ್ತಾಟವೆಂದರೆ ಇಂದಿಗೂ ಜಿಗಿದೆದ್ದು ಹೊರಡುವ ಅವರು ಜೀವನದಲ್ಲಿ ಅದೆಷ್ಟು ಭಾರಿ ಆ ಗಿರಿಶ್ರೇಣಿಯಲ್ಲಿ ಅಲೆದಾಡಿ ಬಂದಿದ್ದಾರೋ? ಅದೆಷ್ಟೊ ವರ್ಷಗಳವರೆಗೆ ಅದರ ತಣ್ಣನೆಯ ಮಡಿಲಲ್ಲಿ ಏಕಾಂತಕ್ಕೆ ಜಾರಿದ್ದಾರೋ, ಸ್ವತಃ ಅವರಿಗೇ ನೆನಪಿರಲಿಕ್ಕಿಲ್ಲ. ಉನ್ನತ ಶಿಖರಶೃಂಗಗಳನ್ನು ತದೇಕ ಚಿತ್ತದಿಂದ ನಿರಕಿಸುತ್ತ, ಅಲ್ಲಿ ಈಶ್ವರ ನನ್ನು ಸಾಕ್ಷಾತ್ಕರಿಸಿಕೊಂಡಿರಲಿಕ್ಕೂ ಸಾಕು. ಇನ್ನೇಕೆ ಭೌತಿಕ ಆರಾಧನೆ, ಪೂಜೆ? ಅವರ ಬಹುತೇಕ ಕೃತಿಗಳ ತಿರುಳೂ ಅಧ್ಯಾ ತ್ಮವೇ.

ಅಧ್ಯಾತ್ಮಿಕ ಮೌಲ್ಯಮಾಪನೆ ನಿರಂತರ ಅವರ ಈವರೆಗಿನ ಎಲ್ಲ ಕೃತಿಗಳಲ್ಲಿ ಸಾತತ್ಯ ಪಡಕೊಳ್ಳುತ್ತಲೇ ಬಂದಿದೆ. ತತ್ತ್ವ ಪ್ರಧಾನವಾದ ಭಾರತೀಯ ಮೌಲ್ಯಗಳನ್ನು ಚರ್ಚಿಸದ ಕೃತಿಗಳೇ ಇಲ್ಲ. ಐತಿಹಾಸಿಕ, ಸಾಮಾಜಿಕ, ಪೌರಾಣಿಕ ವಿಷಯ- ವಸ್ತುಗಳನ್ನೊಳಗೊಂಡ ಕಾದಂಬರಿಗಳಲ್ಲೂ ಸನಾತನವಾದ ಭಾರತೀಯ ಧರ್ಮದ ಮೌಲ್ಯಗಳನ್ನು ಪ್ರತಿಪಾದಿ ಸದೇ ಉಳಿದದ್ದಿಲ್ಲ. ಪಾರಮಾರ್ಥಿಕ ವಿಷಯ ಗಳಿಂದ ಹಿಡಿದು ನಮ್ಮ ನಂಬಿಕೆಯ ಪರಮಪುರುಷಾರ್ಥವಾದ ಮೋಕ್ಷ ಸಾಧನೆ, ಜೀವನ್ಮುಕ್ತಿ ಯವರೆಗೆ ಎಲ್ಲ ಮೌಲ್ಯಗಳೂ ಚರ್ಚಿಸ ಲ್ಪಟ್ಟಿವೆ – ಹಾಗೆಂದು ಎಸ್.ಆರ್. ರಾಮಸ್ವಾಮಿಗಳು ಸಾಕ್ಷೀಕರಿಸುತ್ತಾರೆ.

ಸಾರ್ಥ, ಆವರಣದ ವಸ್ತು ಐತಿಹಾಸಿಕವಾದರೂ ಪರ್ವ, ಉತ್ತರಕಾಂಡದ ವಸ್ತು ಪೌರಾಣಿಕವಾದರೂ ಇವುಗಳನ್ನು ಪಕ್ಕಾ ಐತಿಹಾಸಿಕ, ಪೌರಾಣಿಕ ಕಾದಂಬರಿಗಳು ಎನ್ನಲಾಗುವುದಿಲ್ಲ. ಬದಲಾಗಿ ಪೌರಾಣಿಕ ಚಾರಿತ್ರಿಕ ಚಿತ್ರದ ಸುವರ್ಣ ಚೌಕಟ್ಟಿನಲ್ಲಿ ಮೂಡಿಬಂದ ಸಾಮಾ ಜಿಕ ಕಾದಂಬರಿಗಳು ಎನ್ನಬಹುದು ಎನ್ನುತ್ತಾರೆ ಲೇಖಕಿ ಎಂ.ಎಸ್. ವಿಜಯಾ ಹರನ್.

ಬೆಳೆಗೆರೆ ಕೃಷ್ಣಶಾಸ್ತ್ರಿಗಳು ಹಂಚಿಕೊಂಡ ಈ ಅನುಭವ ನೋಡಿ; ಎಷ್ಟೋ ಸಲ ನಾನು ಮೂರು, ನಾಲ್ಕು ಗಂಟೆಗಳವರೆಗೂ ಮಾತನಾ ಡುತ್ತಿರುತ್ತಿದ್ದೆ. ಮಧ್ಯೆ ಪ್ರಜ್ಞೆ ಬಂದು ಛೇ ಛೇ ಎಂಥಾ ಕೆಲಸ ಮಾಡಿದೆ. ದೊಡ್ಡವರನ್ನು ಮುಂದಿಟ್ಟುಕೊಂಡು ನಾನೇ ಗಂಟೆಗಟ್ಟಲೇ ಮಾತಾ ಡುತ್ತಿದ್ದೀನಲ್ಲ ಎನಿಸಿ ಕ್ಷಮೆ ಕೇಳಿದರೆ, ಅವರು ‘ಇಲ್ಲ ಇಲ್ಲ, ನಾನು ಕೇಳಬೇಕು ಹೇಳಿ’ ಎನ್ನುವರು. ಕೆಲವು ಸಲ ಹೀಗೆ ಮಧ್ಯೆ ಬೇಕಾಗಿಯೇ ನಾನು ಅಲ್ಲಿಂದ ಎದ್ದು ಹೋಗಿಬಿಡುತ್ತಿದ್ದುದೂ ಉಂಟು.

ಅರ್ಧ ಗಂಟೆ ಬಿಟ್ಟು ಹೋದರೆ ‘ಶಾಸ್ತ್ರಿಗಳೇ ಹೀಗೆ ಹೇಳ್ತಿದ್ರಿ..’ ಎಂದು ನಾನು ನಿಲ್ಲಿಸಿದ ಕೊನೆಯ ವಾಕ್ಯವನ್ನು ಹೇಳಿ ಮುಂದಕ್ಕೆ ಮಾತನಾ ಡಲು ಒತ್ತಾಯಿಸುತ್ತಿದ್ದರು. ನಮ್ಮಲ್ಲಿ ಬಹುಪಾಲು ಜನ ಒಬ್ಬರು ಹೇಳುತ್ತಿದ್ದರೆ ಇನ್ನೊಬ್ಬರು ಹೂಂ ಅಂತಿರೋದು, ಬೇರೆ ಏನೋ ಯೊಚನೆ ಮಾಡುತ್ತಿರುವುದು, ಆಸಕ್ತಿಯಿಂದ ಕೇಳಿದವರೆಷ್ಟು? ಇವರ ಆಸಕ್ತಿ ಆ ತರಹದ್ದಲ್ಲ. ಇನ್ನೊಬ್ಬರು ಹೇಳಿದ್ದನ್ನು ಗಹನವಾಗಿ ಕೇಳುತ್ತಾರೆ. ಕೊನೆ ವಾಕ್ಯವನ್ನು ನೆನಪಿಟ್ಟುಕೊಂಡು ಹೀಗೆ ಹೇಳಿದಿರಿ ಎಂದು ಹೇಳುವಂಥಾದ್ದು ನಾನು ಮೆಚ್ಚಿಕೊಳ್ಳುತ್ತೇನೆ. – ಇದು ಹಿರಿಯರಾದ ಶಾಸ್ತ್ರಿಳದ್ದೊಂದೇ ಅನುಭವವಲ್ಲ, ತೀರಾ ಇತ್ತೀಚಿನ ಕಿರಿಯರದ್ದು ಸಹ.
***

ಅನುಮಾನವೇ ಇಲ್ಲ, ವಿಶ್ವಮಾನ್ಯ ಸಾಹಿತ್ಯರಚನೆಯ ಮೂಲಕ ಕಾದಂಬರಿ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿರುವ ಎಸ್. ಎಲ್. ಭೈರಪ್ಪನವರು, ನಿರಂತರ ಸಂಶೋಧನೆ, ಎಲ್ಲದರ ಬಗ್ಗೆ ಬೆರಗು ತೋರುವ ಕೌತುಕದ ಮನಸ್ಸು, ವ್ಯಾಪಕ ಅಧ್ಯಯನ, ವಿಶ್ವ ಪರ್ಯಟನೆ, ಜೀವನಾನುಭವಗಳ ಸಾರ ಸರ್ವಸ್ವದ ಫಲವಾಗಿ ನೀಡಿದ ಕೃತಿಗಳೆಲ್ಲವೂ ಪಂಡಿತ- ಪಾಮರರನ್ನೂ ರಂಜಿಸುವಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದೆ. ಕಲ್ಪನೆಗಳನ್ನೂ ದಾಟಿ ಕಾದಂಬರಿಯ ಬರವಣಿಗೆಗೂ ಒಂದು ಅಧಿಕೃತತೆಯನ್ನು ಕಟ್ಟಿಕೊಟ್ಟ, ಅಧ್ಯಾತ್ಮ, ತತ್ತ್ವಶಾಸ,
ಧರ್ಮಶಾಸ್ತ್ರ, ಮನಃಶಾಸ್ತ್ರ ಗಳನ್ನೂ ರಂಜನೀಯವಾಗಿ ಹೇಳಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿಸಬಲ್ಲ ಏಕೈಕ ಭಾರತೀಯ ಕಾದಂಬರಿಕಾರ ಅವರು. ಅಂಥ ಮಹಾನ್ ಕೃತಿಕಾರನ ಬಗ್ಗೆ ಸಮಾಜಕ್ಕೆ ಗೊತ್ತಿಲ್ಲದ, ಅವರೊಳಗಿನ ವ್ಯಕ್ತಿತ್ವವನ್ನು, ಅದರ ಸೂಕ್ಷ್ಮ ಒಳತೋಟಿಗಳನ್ನು ಗ್ರಹಿಸಿ ಹಿಡಿದಿಡುವ ಅಪರೂಪದ ಹೊತ್ತಗೆ ‘ಬಲ್ಲವರು ಬಲ್ಲಂತೆ ಭೈರಪ್ಪ’.

ಶೀರ್ಷಿಕೆ ಓದುತ್ತಿದ್ದಂತೆ ಥಟ್ಟನೆ ನೆನಪಾಗುವುದು, ‘ಬಲ್ಲವರೇ ಬಲ್ಲರು ಬೆಲ್ಲದ ಸಿಹಿಯ’ ಎಂಬ ಮಾತು. ಹಾಗೆಯೇ ಭೈರಪ್ಪನವರ ವ್ಯಕ್ತಿತ್ವವೂ. ಅವರ ಕಾದಂಬರಿಗಳು ವಿಶ್ವವ್ಯಾಪಿ ಚಿರಪರಿಚಿತ; ಆದರೆ ಭೈರಪ್ಪನವರ ವ್ಯಕ್ತಿತ್ವವಲ್ಲ. ಅವರ ಸ್ನೇಹ, ಸಾಮೀಪ್ಯ ತುಸು ದುರ್ಲಭವೇ. ಅವರ ಅಭಿಮಾನಿಗಳು ಅಸಂಖ್ಯ. ಆದರೆ ಒಮ್ಮೆಲೆ ಅವರ ವಿಶ್ವಾಸದ ತೆಕ್ಕೆಗೆ ಬಿದ್ದವರು ವಿರಳ. ಮೇಲ್ನೋಟಕ್ಕೆ ಮಹಾ ಜಿಗುಟು ಮನುಷ್ಯರೆಂಬಂತೆ ಕಾಣುವ ಅವರ ತೀರಾ ಸನಿಹಕ್ಕೆ ಹೋದರೆ ಭೈರಪ್ಪ ಎಂಬ ಸಾದಾ ಸರಳ, ನಿರಾಡಂಬರ ವ್ಯಕ್ತಿಯ ಮಗುಮುಗ್ಧ ಮನಸು, ಮೃಧು ಸ್ವಭಾವ, ಪರಿಪೂರ್ಣ ಒಡನಾಟ ತೆರೆದುಕೊಳ್ಳುತ್ತದೆ.

ಹೀಗೆ ಒಡನಾಡಿದ, ಸಮೀಪವರ್ತಿಗಳಾದ, ತೀರಾ ಹತ್ತಿರದಿಂದ ‘ನಿಜವಾದ ಅವರನ್ನು’ ಅರಿತ ಕೆಲವೇ ಕೆಲವರಲ್ಲಿ, ಕೆಲವರು ಭೈರಪ್ಪನವರ ಬಗೆಗೆ ತಾವು ಬಲ್ಲದ್ದನ್ನು ಇಲ್ಲಿ ಬರೆದಿದ್ದಾರೆ. ಬರೆದವರೆಲ್ಲರೂ ಅವರವರ ಕ್ಷೇತ್ರದ ಸಾಧಕರೇ. ಶ್ರೇಷ್ಠ ಕಾದಂಬರಿಕಾರನ ಕುರಿತು ಬರೆದದ್ದೆಲ್ಲವೂ ಸರ್ವಶ್ರೇಷ್ಠವೇ. ಬಿಡಿಬಿಡಿಯಾಗಿದ್ದ ಸುರಗಿಯನ್ನು ಜೋಪಾನವಾಗಿ ಆಯ್ದು ಮಾಲೆ ಮಾಡಿದರೆ ಸುತ್ತೆಲ್ಲ ಎಂಥಾ ಸುಗಂಧ ಪಸರಿಸೀತೋ, ಹಾಗೇ ಇದೆ ಹೊತ್ತಗೆ.

ಸಂಪಾದಕಿ, ಎಂ.ಎಸ್. ವಿಜಯಾ ಹರನ್ ವೈಯಕ್ತಿಕವಾಗಿ ನನಗೆ ಪರಿಚಿತರೇನೂ ಅಲ್ಲ. ಆದರೆ ಭೈರಪ್ಪನವರ ಪ್ರೀತಿಯ ಸೌಭಾಗ್ಯ ಪಡೆದವರಲ್ಲಿ ನಾನೂ ಒಬ್ಬ. ಈ ವಿನಾಕಾರಣದ ಅಭಿಮಾನವನ್ನೇ ಭೈರಪ್ಪನವರಂಥ ಹಿರಿಯರು, ಅವರ ಕೃತಿಗಳ ಎಂದಿನ ಪ್ರಕಾಶಕ ರಾದ ಸಾಹಿತ್ಯ ಭಂಡಾರದ ರಾಜಾ- ಅರುಣ ಸೋದರರಲ್ಲಿ ವ್ಯಕ್ತಪಡಿಸಿದ್ದ ಪರಿಣಾಮ ಅಪೂರ್ವ ಹೊತ್ತಗೆ ಬಲುಬೇಗ ನನ್ನ ಕೈ ಸೇರಿತ್ತು. ೩೨೦ ಪುಟಗಳ ಕೃತಿಯ ರಕ್ಷಾಪುಟದಲ್ಲಿ ಭೈರಪ್ಪನವರ ಸುಂದರ ಭಾವಚಿತ್ರ ನೋಡಿದ್ದಷ್ಟೇ.

ಅದರ ಕರ್ತೃ ಯಾರೆಂದೂ ನೋಡದೇ ಒಂದೇ ಗುಕ್ಕಿಗೆ ಕುಳಿತು ಓದಿ ಮುಗಿಸಿದೆ. ಆದರೆ ಓದಿದಷ್ಟು ಸುಲಭದಲ್ಲಿ, ಕೃತಿಯ ಬಗ್ಗೆ ಬರೆಯುವ ಧೈರ್ಯ ಸಾಲಲಿಲ್ಲ. ಒಬ್ಬರೇ? ಇಬ್ಬರೇ? ಬರೆದವರೆಲ್ಲರೂ ಸಾಧಕರೇ. ಅತ್ಯಂತ ಸಂವೇದನಾಶೀಲವಾಗಿ, ಹೊರಜಗತ್ತಿಗೆ ಗೊತ್ತೇ ಇಲ್ಲದ ಭೈರಪ್ಪ ಮತ್ತು ಅವರ ಬರಹಗಳ ಒಳತೋಟಿಯನ್ನು ಅಷ್ಟೇ ನವಿರಾಗಿ ಅಕ್ಷರಗಳಲ್ಲಿ ಎಲ್ಲರೂ ಜೋಡಿಸಿದ್ದಾರೆ. ಸಂಪಾದಕಿ ವಿಜಯಾ ಆರಂಭದಲ್ಲೇ ಹೇಳಿಕೊಂಡದ್ದು ನನ್ನ ಅನುಭವವೂ ಹೌದು- ಅಸಂಖ್ಯಾತ ಅಭಿಮಾನಿಗಳಂತೆ ನಾನು ಸಹ ಅವರ ಕಾದಂಬರಿ ಗಳಿಂದ, ವಿಚಾರ ಪ್ರಚೋದಕ ಬರಹಗಳಿಂದ, ಭಾಷಣಗಳಿಂದ ಪ್ರಭಾವಿತನಾದವನು. ಆದರೆ ಹತ್ತು ವರ್ಷ ತಡವಾಗಿ, ಅಂದರೆ (ಲೇಖಕಿ ಎಪ್ಪತ್ತರ ದಶಕ ಎಂದಿದ್ದಾರೆ) ಎಂಬತ್ತರ ದಶಕದಲ್ಲಿ, ಕಾಲೇಜು ವಿದ್ಯಾರ್ಥಿಯಾಗಿದ್ದಾಗಿನಿಂದಲೇ ಭೈರಪ್ಪನವರ ಕಾದಂಬರಿಗಳನ್ನು ಆಸಕ್ತಿಯಿಂದ ಓದಿದವನು.

ಆದರೆ ಅವರನ್ನು ಕಂಡಿದ್ದು ಮಾತ್ರ 90ರ ದಶಕದ ಕೊನೆಯಲ್ಲಿಗ; ಶಿವಮೊಗ್ಗೆಯಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ನಂತರ. ಅಲ್ಲಿನ ಕರ್ನಾಟಕ ಸಂಘದಲ್ಲಿ ನಡೆದ ಅವರ ಕೃತಿ ‘ಭಿತ್ತಿ’ಯ ಕುರಿತ ಸಂವಾದದಲ್ಲಿ. ಅವರ ಸಾಮೀಪ್ಯ ದೊರೆತದ್ದು ಮತ್ತೂ ಒಂದು ದಶಕದ ನಂತರ ಬೆಂಗಳೂರಿನಲ್ಲಿ ‘ವಿಜಯಕರ್ನಾಟಕ’ದಲ್ಲಿದ್ದ ದಿನಗಳಲ್ಲಿ. ಮತಾಂತರ ಕುರಿತ ಚರ್ಚೆ ಆಗ ಪತ್ರಿಕೆಯಲ್ಲಿ ಬಹಳ ಬಿರುಸಿನಿಂದಲೇ ನಡೆದಿತ್ತು.

ಜ್ಞಾನಪೀಠಿಗಳಲ್ಲಿ ಒಬ್ಬರಾದ ಗಿರೀಶ್ ಕರ್ನಾಡ್ ಕೀಳು ಧಾಟಿಯಲ್ಲಿ ಭೈರಪ್ಪನವರ ಬಗೆಗೆ ಬರೆದಿದ್ದರು. ಆ ಸಂದರ್ಭ ಭೈರಪ್ಪನವರನ್ನು ಸಂದರ್ಶಿಸಿದ್ದೆ. ಮೊದಲಿಗೆ ನನಗೆ ಸಂದರ್ಶನ ನೀಡಲು ಒಪ್ಪಿರಲಿಲ್ಲ. ಬೈರಪ್ಪನವರೇ ಹಾಗೆ. ತಕ್ಷಣಕ್ಕೆ ಎಲ್ಲರನ್ನೂ ಹತ್ತಿರಕ್ಕೆ ಬಿಟ್ಟು ಕೊಳ್ಳುವುದಿಲ್ಲ. (ಅದಕ್ಕೆ ಸಕಾರಣ ಗಳು ಹಲವು, ಬಿಡಿ) ಕೊನೆಗೆ ಭೈರಪ್ಪನವರ ಸ್ನೇಹಿತರೂ, ನನಗೆ ಆತ್ಮೀಯರೂ ಆದ ಸಾಹಿತ್ಯ ಭಂಡಾರದ ಸೋದರ ಸಂಸ್ಥೆಯಾದ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಸುಬ್ಬಣ್ಣ (ಎಂ ಎ. ಸುಬ್ರಹ್ಮಣ್ಯ)ನವರ ಶಿಫಾರಸಿನ ಮೇರೆಗೆ ಒಪ್ಪಿದ್ದರು.

ಅಲ್ಲಿಂದ ಮುಂದೆ ಅವರ ಪ್ರೀತಿಯ, ಸಾಮೀಪ್ಯದ ಸವಿಯಿಂದ ವಂಚಿನಾಗುವ ದೌರ್ಭಾಗ್ಯ ಒದಗಲಿಲ್ಲ. ಹೀಗಾಗಿ ಭೈರಪ್ಪನವರ ಕೃತಿಗಳಷ್ಟೇ ಅಲ್ಲ, ಅವರ ಬಗೆಗಿನ ಕೃತಿಗಳನ್ನೂ ನಾನು ನೋಡುವ, ಓದುವ ಪರಿಯೇ ಬದಲಾಗಿದೆ. ಈ ಹಿನ್ನೆಲೆಯಲ್ಲೇ ‘ಬಲ್ಲವರು ಕಂಡಂತೆ…’ ಓದು ಇನ್ನಷ್ಟು ಆಪ್ತವಾಯಿತು. ಒಂದಲ್ಲ, ಮೂರ‍್ನಾಲ್ಕು ಓದಿನ ಬಳಿಕವೂ ಅವರ ವ್ಯಕ್ತಿತ್ವದ ಮಜಲುಗಳನ್ನು ಪೂರ್ತಿ ಬಲ್ಲೆ
ಎಂದುಕೊಳ್ಳಲಾಗುತ್ತಿಲ್ಲ. ಅಷ್ಟೊಂದು ಅಗಾಧ ಚಿತ್ರಣದ ಕೃತಿ; ಪಕ್ಕಾ ಭೈರಪ್ಪನವರಂತೆಯೇ. ಬಹುಶಃ ಪುಟಗಳ ಮಿತಿ ಕಾಡಿರಲೇಬೇಕು. ಅವರ ಬಲ್ಲವರಿಗೂ ಸ್ಥಳ ಸಂಕೋಚವೇ.

ಅದಿಲ್ಲದಿದ್ದರೆ ಬೈರಪ್ಪನವರ ವ್ಯಕ್ತಿತ್ವದ ಅಗಾಧತೆ ಬರೆದು ಮುಗಿಯದ್ದು. ಅವರ ವ್ಯಕ್ತಿತ್ವವೂ ಅವರ ಬರವಣಿಗೆಗಳಂತೆಯೇ ಸಶಕ್ತ. ಎಷ್ಟೋ ವೇಳೆ ಇದೇ ಕಾರಣಕ್ಕೆ ಅವರನ್ನು, ಬರವಣಿಗೆಯನ್ನೂ ಬೇರ್ಪಡಿಸಲಾಗುವುದೇ ಇಲ್ಲ. ಇಂಥ ಮಿತಿ ಇಲ್ಲಿಯೂ ನನಗೆ ಕಾಡುತ್ತಿರು ವುದು. ಹೊತ್ತಗೆಯ ಬಗ್ಗೆ ಬರೆಯ ಹೊರಟಾಗೆಲ್ಲ, ಮತ್ತೆ ಮತ್ತೆ ಅದು ವ್ಯಕ್ತಿಯಾಗಿ ಭೈರಪ್ಪ ಎಂಥಾ ಮೇರು ಸದೃಶರು ಎಂಬತ್ತಲೇ ಹೊರಳುತ್ತದೆ.

ಶುದ್ಧ ಒರಟರಂತೆ, ನಿಷ್ಠುರವಾದಿಯಂತೆ, ತೀರಾ ಗರ್ವಿಯಂತೆ ಕಾಣುವ ಭೈರಪ್ಪವರ ಮೃದು ಹೃದಯ, ಮಾನವೀಯ ಅಂಶಗಳು, ಅಸಾಮಾನ್ಯ ವ್ಯಕ್ತಿತ್ವ ಇದುವರೆಗೆ ಸಮರ್ಥವಾಗಿ ಅನಾವರಣಗೊಳ್ಳಲೇ ಇಲ್ಲ. ಅಲ್ಲೊಂದು ಇಲ್ಲೊಂದು ಅಭಿನಂದನಾ ಗ್ರಂಥಗಳನ್ನು ಹೊರತುಪಡಿಸಿದರೆ ಅವರ ಬಗೆಗಿನ ಕೃತಿಗಳು ಇಲ್ಲವೇ ಇಲ್ಲ. ಅವರ ಎಷ್ಟೋ ಕೃತಿಗಳ ಕುರಿತೂ ವಸ್ತುನಿಷ್ಠ ವಿಮರ್ಶೆಗೆ ಆಧುನಿಕ ವಿಮರ್ಶಾಲೋಕ ಅಸೀಮ ನಿರ್ಲಕ್ಷ್ಯ ತಾಳಿದೆ ಎಂದೇ ಹೇಳಬೇಕು.

ಅಲ್ಲಲ್ಲಿ ಅನೇಕ ಪತ್ರಿಕೆ ನಿಯತಕಾಲಿಕೆಗಳಲ್ಲಿ ಭೈರಪ್ಪನವರ ಕೃತಿಗಳ ವಿಮರ್ಶೆ ಮತ್ತು ಸಮೀಕ್ಷೆ ಪ್ರಕಟವಾಗಿದೆ. ಇದು ಭೈರಪ್ಪನವರ ಪ್ರತಿಭೆಗೆ ಏನೂ ಸಾಲದೆಂದು ನಾನು ಹೇಳಬೇಕು. ಆದರೆ ಭೈರಪ್ಪನವರ ಸಾಹಿತ್ಯಾಭಿಮಾನಿಗಳಿಗೆ ಈ ಪ್ರಕಟಣೆಗಳಿಂದ ಸಹಾಯ ವಾಗಿದೆ. ಸಂದರ್ಶಕರೊಬ್ಬರು ಭೈರಪ್ಪನವರನ್ನು ಕೇಳಿದರು: ‘ನಿಮ್ಮದು ರಂಜಿಸಿ ವಂಚಿಸುವ ಕಲೆ ಎಂಬ ಅಭಿಪ್ರಾಯ ಕೆಲ ವಿಮರ್ಶಕ ವಲಯಗಳಲ್ಲಿ ಕೇಳಿಬಂದಿದೆ.

ಇದರ ಬಗ್ಗೆ ತಮ್ಮ ಪ್ರತಿಕ್ರಿಯೆ ಏನು?’ ಇದಕ್ಕೆ ಭೈರಪ್ಪನವರು ಕೊಟ್ಟ ಉತ್ತರ: ‘ತಮಗೆ ಒಪ್ಪಿಗೆಯಾಗುವಂಥ ವಿಚಾರಗಳನ್ನು ನಾನು ಪ್ರತಿಪಾದಿಸಿದ್ದಾಗ ಅದು ವೈಚಾರಿಕ ವಂಚನೆ ಎಂದು ಕೆಲವು ನವ್ಯಜಾತಿಯ ವಿಮರ್ಶಕರು ಬರೆದಿರುವುದನ್ನು ನಾನು ಗಮನಿಸಿದ್ದೇನೆ. ಇಂಥ ವಿಮರ್ಶೆಯ ಹಿನ್ನೆಲೆಯಲ್ಲಿ ಬೇಕಾದಷ್ಟು ಖಾಸಗಿ ಹತಾಶೆಗಳೂ ಇವೆ.

ಇದಕ್ಕೆಲ್ಲ ಸೃಜನಶೀಲ ಲೇಖಕನು ಉತ್ತರ ಕೊಡಬಾರದು. ಅವನ ಸೃಜನಶೀಲ ಕೃತಿಗಳೇ ಈ ಜಾತಿಯ ಟೀಕೆಗಳಿಗೆ ಉತ್ತರ.’ ಈ ಉತ್ತರದಲ್ಲಿ ಅನೇಕ ಸಂಗತಿಗಳಿವೆಯೆಂಬುದು ನನ್ನ ಭಾವನೆ. ತಮ್ಮ ಲೇಖನದಲ್ಲಿ ಹೀಗೆಂದು ಹಾ.ಮಾ.ನಾಯಕರು ಅಂದೇ ಹೇಳಿದ್ದು ಇಂದಿಗೂ ವಾಸ್ತವ. ಇದೇ ಅವರ ವ್ಯಕ್ತಿತ್ವದ ಚಿತ್ರಣದ ಕುರಿತೂ ಆಗಿರುವುದು. ಈ ನಿಟ್ಟಿನಲ್ಲಿ. ‘ಬಲ್ಲವರು ಬಲ್ಲಂತೆ…’ ಪರಿಪೂರ್ಣ ನ್ಯಾಯ ಒದಗಿಸದಿದ್ದರೂ ಕನ್ನಡಿಗರಿಗೆ ಮಹದುಪಕಾರವನ್ನಂತೂ ಮಾಡುತ್ತದೆ.

ಭೈರಪ್ಪನವರ ಕೃತಿಗಳ, ಕಥನ ತಂತ್ರದ ಕುರಿತು, ಭಾಷೆ, ವಿಷಯ-ವಸ್ತು ಇತ್ಯಾದಿಗಳ ಬಗೆಗೆ ಅಲ್ಲಲ್ಲಿ ಕೆಲವರು ಪ್ರಸ್ತಾಪಿಸಿದ್ದಾರೆ. ಆದರೆ ಅವರ ವ್ಯಕ್ತಿತ್ವದ ಘನತೆ, ಔಚಿತ್ಯ ಪೂರ್ಣ ನಡವಳಿಕೆ, ಸಾಂದರ್ಭಿಕ ನಿಲುವುಗಳನ್ನು ಕೃತಿ ಅತ್ಯಂತ ಸಮರ್ಥವಾಗಿ ಹೊಸಬನಿಗೆ ಕಟ್ಟಿಕೊಡುತ್ತದೆ. ‘ಹೌದಾ, ಹೀಗಿದ್ದಾರಾ ಭೈರಪ್ಪನವರು’ ಎಂಬಂಥ ಎಷ್ಟೋ ವಿಶೇಷ ಘಟನೆಗಳ ಮೂಲಕ ಕೃತಿ ಓದುಗರ ಗಮನ
ಸೆಳೆಯುತ್ತದೆ. ವ್ಯಕ್ತಿತ್ವಕ್ಕೆ ತಕ್ಕಂತಹ ಸನ್ನಿವೇಶದ ಹಿನ್ನೆಲೆಯೂ ಇಲ್ಲಿನ ಎಲ್ಲ ಲೇಖಕರ ಬರಹಗಳಲ್ಲಿ ಮೂಡಿ ಬಂದಿದೆ. ವಿಭಿನ್ನ ಬರಹಶೈಲಿ, ಭಾಷಾಬಳಕೆ, ವೈವಿಧ್ಯಮಯ ಸನ್ನಿವೇಶದ ಸೊಗಡು, ಅಪರೂಪದ ಘಟನೆಗಳ ದೃಷ್ಟಿಯಿಂದ ಕೃತಿ ವೈವಿಧ್ಯಮಯ ವಾಗಿದ್ದು, ಹಲವು ಗಣ್ಯರ ಬರಹಗಳಿಂದ ಸಹಜವಾಗಿದೆ.

ಭೈರಪ್ಪನವರ ಭಾಷೆ ಹಾಗೂ ಕಥನ ತಂತ್ರದ ಜತೆಗೆ ಅವರ ವ್ಯಕ್ತಿತ್ವದ ಬಗ್ಗೆ ಸಮಗ್ರ ಅಧ್ಯಯನ ಕೈಗೊಳ್ಳುವ ಮಹತ್ಕಾರ್ಯಕ್ಕೆ ಇದು ಇಂಬು ನೀಡುತ್ತದೆ. ಈ ನಿಟ್ಟಿನ ಸಂಪಾದಕಿ ವಿಜಯಾ ಹಾಗೂ ಪ್ರಕಾಶಕರು ಅಭಿನಂದನಾರ್ಹರು. ಬರಹಗಳ ವೈವಿಧ್ಯದಲ್ಲೂ ಭಾಷೆ – ಬಹುಮಾಧ್ಯಮವನ್ನು ಅಚ್ಚುಕಟ್ಟಾಗಿ ಕೃತಿಯಲ್ಲಿ ಹೊಂದಿಸಿದ್ದು ಇಷ್ಟವಾಯಿತು. ಇನ್ನೂ ಗಮನಸೆಳೆಯುವುದೆಂದರೆ ಭೈರಪ್ಪನವರಂತೆಯೇ
ಇಲ್ಲಿನ ಬಹುಪಾಲು ವಿದ್ವಾಂಸರು ಬಹುಶ್ರುತರು. ಅವರೆಲ್ಲರ ಸಂಶೋಧನಾ, ಚಿಕಿತ್ಸಕ ಮನೋಭಾವ ಭೈರಪ್ಪನವರ ಕುರಿತಾದ ಬರಹಗಳಲ್ಲೂ ಇಣುಕಿದೆ. ಕಾದಂಬರಿಕಾರನ ಹಿರಿಮೆ ಗರಿಮೆಗಳನ್ನು ಪರಿಚಯಿಸುವ ಜತೆಗೆ ಕೃತಿಗಳ ಅರ್ಥ ವೈಶಾಲ್ಯವನ್ನೂ ಒಳ ಗೊಳ್ಳುತ್ತ ಕೆಲ ಲೇಖನಗಳು ಸಾಗುತ್ತವೆ.

ಓದಿನ ಅನುಕೂಲದ ದೃಷ್ಟಿಯಿಂದ ಹೊತ್ತಗೆಯಲ್ಲಿ ‘ವಿಶೇಷ ವ್ಯಕ್ತಿತ್ವ’, ‘ಸಾಹಿತ್ಯ ಸತ್ವ’, ‘ನಮ್ಮ ಭೈರಪ್ಪನವರು’ ಹಾಗೂ ‘ಪತ್ರಿಕೆಗಳ ಪುಟಗಳಿಂದ’ ಎಂಬ ನಾಲ್ಕು ಪ್ರಮುಖ ವಿಂಗಡಣೆಯನ್ನು ಮಾಡಲಾಗಿರುವುದು ಔಚಿತ್ಯಪೂರ್ಣ. ಇದರಿಂದ ಕೃತಿ-ಕೃತಿಕಾರನನ್ನು ಪ್ರತ್ಯೇಕವಾಗಿ ಕಟ್ಟಿಕೊಡುವ ಆಶಯ ಈಡೇರಿದೆ. ಅತಿಶ್ರೇಷ್ಠ ಸೃಜನಶೀಲ ಲೇಖಕರ ಸಾಲಿನಲ್ಲಿ ನಿಲ್ಲುವ ಶತಾವಧಾನಿ ಡಾ.ಆರ್.ಗಣೇಶ್, ಬೆಳಗೆರೆ ಕೃಷ್ಣ ಶಾಸ್ತ್ರಿ, ಡಾ.ಹಾ ಮಾ ನಾಯಕ್, ಬಾಬು ಕೃಷ್ಣಮೂರ್ತಿ, ಎಸ್.ಆರ್.ರಾಮಸ್ವಾಮಿ, ಡಾ.ಬಿ.ವಿ.ವಸಂತಕುಮಾರ್,
ಡಾ. ಎನ್. ಎಸ್.ಲಕ್ಷ್ಮೀನಾರಾಯಣ ಭಟ್ಟ, ಡಾ. ಪ್ರಧಾನ್ ಗುರುದತ್ತ, ಪ್ರೊ.ಕೆ.ಬಿ. ಪ್ರಭುಪ್ರಸಾದ್… ಹೀಗೆ 35ಕ್ಕೂ ಹೆಚ್ಚು ಸಾರ್ವಕಾ ಲಿಕ ಶ್ರೇಷ್ಠರು ಭೈರಪ್ಪ ಜತೆಗೆ ತಮ್ಮ ಒಡ ನಾಟ, ಕೃತಿಗಳ ಕುರಿತ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಭೈರಪ್ಪನವರನ್ನು ಓದಿಕೊಳ್ಳುವ ಮೊದಲು ಹಾಗೂ ಕೃತಿಗಳೆಲ್ಲ ವನ್ನೂ ಓದಿದ ನಂತರ ಮಾತ್ರವಲ್ಲ, ಕೆಲವನ್ನಷ್ಟೇ ಓದಿದವರಿಗೂ ಈ ಕೃತಿಯ ಓದು ವಿಭಿನ್ನ ಅನುಭವ ಸೃಜಿಸುತ್ತದೆ. ಅಷ್ಟೇ ಅಲ್ಲ ಇದೇ ಕೃತಿ ತನ್ನ ಓದು-ಮರು ಓದುಗಳಲ್ಲೂ ವಿಭಿನ್ನ ಅನುಭೂತಿ ತೆರೆದಿಡು ವುದು ವಿಶೇಷ. ಹೀಗಾಗಿ ಎಲ್ಲರೂ ಓದಬೇಕಾದ ಮೌಲಿಕ ಹೊತ್ತಗೆಯಾಗಿ ನಿಲ್ಲುತ್ತದೆ. ಅಲ್ಲಲ್ಲಿ ಓದುತ್ತ ಸಾಗಿದರೂ ಹೊಸತೊಂದು ಪರಿಚಯ ಸಾಧ್ಯ. ಒಟ್ಟಾರೆ ಇದು ಭೈರಪ್ಪನವರ ಮಾಹಿತಿಗಳ ಕಣಜ ಎಂಬುದನ್ನು ಒಪ್ಪಲೇಬೇಕು.

ವಿಶ್ವಸಾಹಿತಿ ಭೈರಪ್ಪನವರ ಅಮೂಲ್ಯ ಕೊಡುಗೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಖಂಡಿತಾ ಇದು ಮಹತ್ವದ ಹೆಜ್ಜೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಇದೇ ಲೇಖಕಿ ಈ ಹಿಂದೆ ಸಂಪಾದಿಸಿದ್ದ ‘ನಮ್ಮ ಭೈರಪ್ಪನವರು’ ಹೆಬ್ಬೊತ್ತಿಗೆಗೆ ಸರಣಿಯಾಗಿ ಇದೂ ಸೇರಿದ್ದು ಅಭಿನಂದನೀಯ. ಮೊದಲ ಕೃತಿಯಲ್ಲಿ ಒಂದಷ್ಟು ಮಂದಿಯನ್ನು ಒಳಗೊಳ್ಳಿಸಲಾಗದೇ ನಿರಾಸೆಯ ದನಿಯನ್ನು ಎದುರಿಸಬೇಕಾಗಿ ಬಂದದ್ದು ‘ಬಲ್ಲವರು ಬಲ್ಲಂತೆ…’ ಕೃತಿಗೆ ಕಾರಣವಾಯಿತೆಂದು ಸಂಪಾದಕಿ ಮೊದಲೇ ಹೇಳಿಕೊಂಡಿದ್ದಾರೆ. ಈಗಲೂ ಇನ್ನಷ್ಟು ಮಂದಿ
ಯಿಂದ ಇದೇ ರೀತಿ ‘ನನಗೇಕೆ ಲೇಖನ ಬರೆದುಕೊಡಲು ಹೇಳಲಿಲ್ಲ’ ಎಂಬ ನಿರಾಸೆಯ ಮಾತುಗಳನ್ನು ಕೇಳಲೇಬೇಕಾದ ಅನಿವಾರ್ಯ ವನ್ನು ವಿಜಯಾ ಅವರು ಎದುರಿಸಲೇ ಬೇಕಿದೆ. ಜಗತ್ತಿನಾದ್ಯಂತ ಭೈರಪ್ಪನವರ ಆತ್ಮೀಯರು, ಒಡನಾಡಿಗಳು, ಅಭಿಮಾನಿಗಳದ್ದು ಅಷ್ಟೊಂದು ವಿಶಾಲ ಹರವು.

ಇನ್ನು ಡಾ. ಪ್ರಧಾನ್ ಗುರುದತ್ತ ಅವರು ಮೊದಲ ಕೃತಿ (ನಮ್ಮ ಭೈರಪ್ಪನವರು)ಗೆ ಹೇಳಿದ್ದು ಇದಕ್ಕೂ ಅನ್ವಯ. ಇದು ಸಹ ಜಾಗತಿಕ ವಲಯದ ಯಾವ ಸಾಹಿತ್ಯದ ಕ್ಷೇತ್ರದಲ್ಲಿಯೂ ನಡೆಯದಿರುವಂಥ ವಿದ್ಯಮಾನ, ಮಹತ್ತ್ವದ ಸಾಹಿತಿ ಯೊಬ್ಬರ ಬಗ್ಗೆ ಶ್ರೀಸಾಮಾನ್ಯ ಸಾಹಿತ್ಯಾಭಿಮಾನಿಗಳ ಅನಿಸಿಕೆಗಳಿಗೆ ಎಡೆ ನೀಡಿರುವ ಹಾಗೂ ಅವುಗಳನ್ನು ಗ್ರಂಥರೂಪದಲ್ಲಿ ಸಂಕಲಿಸಿರುವ ಇನ್ನೊಂದು ಪ್ರಾಮಾಣಿಕ ಪ್ರಯತ್ನ. ಸರಣಿ ಕೊನೆಯಾಗದಿರಲಿ, ಭೈರಪ್ಪನವರ ಬಗೆಗೆ ಬರೆಯುವ ಅಭಿಲಾಷಿಗಳು, ಬರೆಯಬೇಕಿರುವುದೂ ಇನ್ನೂ ಬಹಳಷ್ಟಿದೆ.