Saturday, 27th July 2024

ವ್ಯವಸ್ಥಿತ ಹೂಡಿಕೆ ಲಾಭದಾಯಕ

ವಾಣಿಜ್ಯ ವಿಭಾಗ

ಗೋಪಾಲಕೃಷ್ಣ ಭಟ್ ಬಿ.

ಯಾವುದೇ ‘ಸಿಪ್’ ಯೋಜನೆಯಲ್ಲಿ ಹೂಡುವ ಮುನ್ನ, ಹೂಡಿಕೆದಾರರು ಸಂಶೋಧನೆ ನಡೆಸಬೇಕು ಮತ್ತು ಹಣಕಾಸು ಸಲಹೆ ಗಾರರೊಂದಿಗೆ ಸಮಾಲೋಚಿಸಬೇಕು. ಒಟ್ಟಾರೆ ಹಣಕಾಸಿನ ಗುರಿಗಳೊಂದಿಗೆ ಹೂಡಿಕೆಗಳನ್ನು ಅಲ್ಪಾವಧಿ, ಮಧ್ಯಮಾವಧಿ ಅಥವಾ ದೀರ್ಘಾವಧಿ ಮೇಲೆ ಹೊಂದಿಸಬೇಕು.

ಭಾರತದ ಜನಸಂಖ್ಯೆ ೧೪೦ ಕೋಟಿಗೂ ಅಧಿಕ. ಈ ಪೈಕಿ ೬೦ ಕೋಟಿಗಿಂತಲೂ ಹೆಚ್ಚಿನವರು ೧೮ ರಿಂದ ೩೫ರ ವಯೋಮಾನ ದವರು. ನಮ್ಮ ದೇಶದಲ್ಲಿ ಶೇ.೬೨ರಷ್ಟು ಮಂದಿ ದುಡಿಯುವ ವರ್ಗಕ್ಕೆ ಸೇರಿದವರು. ಮಾಹಿತಿಗಳ ಪ್ರಕಾರ, ಮ್ಯೂಚುವಲ್
ಫಂಡ್‌ಗಳಲ್ಲಿ ಅಂದಾಜು ೪ ಕೋಟಿ ಜನರು ಒಟ್ಟು ೧೫ ಕೋಟಿ ಪೋಲಿಯೋಗಳನ್ನು (ಆಂದರೆ ಹೂಡಿಕೆಯ ಸಂಪುಟವನ್ನು) ಹೊಂದಿದ್ದಾರೆ. ಇತರ ಕೆಲ ದೇಶಗಳಿಗೆ ಹೋಲಿಸಿದಾಗ ಇದು ಸಾಕಷ್ಟು ಕೆಳಮಟ್ಟದಲ್ಲಿದೆ.

ಹೂಡಿಕೆಗೆ ಮುಂದಾಗಲು ನಿರ್ಧರಿಸುವುದು ಮುಖ್ಯ, ಅದಕ್ಕಾಗಿ ಮನಸ್ಥಿತಿಗಳು ಬದಲಾಗಬೇಕು. ಮುಂದಿನ ದಿನಗಳಲ್ಲಿ ಬರುವ
ಹಣಕಾಸಿನ ಜವಾಬ್ದಾರಿಗಳನ್ನು (ನಿವೇಶನ/ಮನೆ/ ವಾಹನ ಖರೀದಿ, ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ವೆಚ್ಚ ಇತ್ಯಾದಿ) ನಿಭಾಯಿಸಲು ಇರುವ ಒಂದು ದೀರ್ಘಕಾಲದ ಹೂಡಿಕೆಯೆಂದರೆ ಮ್ಯೂಚುವಲ್ ಫಂಡ್ ಗಳ ‘ಸಿಪ್’ (ಖqsoಠಿಛಿಞZಠಿಜ್ಚಿ ಐqಛಿoಠಿಞಛ್ಞಿಠಿ PZ ಖಐP) ಎಂಬ ವ್ಯವಸ್ಥಿತ ಹೂಡಿಕೆ ಯೋಜನೆ ಯನ್ನು ಪ್ರಾರಂಭಿಸುವುದು. ಈ ಕುರಿತಂತೆ ಆರ್ಥಿಕ ಸಲಹೆಗಾರರೂ ಉಪಯುಕ್ತ ಮಾಹಿತಿ ನೀಡುತ್ತಾರೆ.

ಜತೆಗೆ ಮ್ಯೂಚುವಲ್ ಫಂಡ್‌ಗಳ ಜಾಲತಾಣಗಳಲ್ಲಿ ವಿವರ ಸಿಗುತ್ತದೆ. ಗೂಗಲ್ ಶೋಧಕ್ಕೆ ಒಡ್ಡಿಕೊಂಡರೆ ಇಂಥ ಫಂಡ್‌ಗಳ ಕಳೆದ ೫-೧೦ ವರ್ಷಗಳಲ್ಲಿನ ಸಾಧನೆ, ಲಾಭಾಂಶ ಮತ್ತು ಪರಸ್ಪರ ಹೋಲಿಕೆ ಇತ್ಯಾದಿ ಅಂಶಗಳನ್ನು ಕಂಡುಕೊಳ್ಳಬಹುದು.
ಎಲ್‌ಐಸಿಯ ಕೆಲವು ಯೋಜನೆಗಳು, ಬ್ಯಾಂಕಿನ ನಿಶ್ಚಿತ ಠೇವಣಿ, ಪಿಪಿಎಫ್, ಅಂಚೆ ಕಚೇರಿಯ ಠೇವಣಿ ಇತ್ಯಾದಿ ಸಾಂಪ್ರದಾಯಿಕ ಹೂಡಿಕೆಗಳಿಗಿಂತ ಹೆಚ್ಚು ಲಾಭ ತಂದುಕೊಡುವ ಸಾಮರ್ಥ್ಯ ‘ಸಿಪ್’ಗೆ ಇದೆ. ಮೇಲಿನ ಇತರ ಹೂಡಿಕೆಗಳಲ್ಲಿ ಒಂದು ಸ್ಥಿರ
ಲಾಭಾಂಶವಿದೆಯಾದರೂ, ಹಣದುಬ್ಬರವನ್ನು ಮೀರಿ ತುಂಬಾ ಲಾಭ ತಂದುಕೊಡುವ ಸಾಮರ್ಥ್ಯ ಅವಕ್ಕಿಲ್ಲ. ಇವುಗಳಲ್ಲಿ ಹೂಡಿಕೆಯ ಮೇಲಿನ ಪ್ರತಿ ಫಲ ಅಂದಾಜು ಶೇ.೭-೭.೫ರಷ್ಟು ಇರಬಹುದು.

ಇದು ನಮ್ಮ ಬೆಲೆ ಏರಿಕೆಯ ಮಟ್ಟಕ್ಕೆ (ಶೇ.೬-೭) ಸುಮಾರಾಗಿ ಸರಿಸಮವಾಗುತ್ತದೆ. ಈ ಬೆಲೆ ಏರಿಕೆ ಯನ್ನೂ ಮೀರಿದ ಲಾಭಾಂಶ ಕ್ಕಾಗಿ ನೂವು ಸೂಕ್ತವಾದ ಫಂಡ್ ಅನ್ನು ‘ಸಿಪ್’ ಮೂಲಕ ಆಯ್ಕೆ ಮಾಡಬೇಕು. ಇಂದು ೨,೫೦೦ಕ್ಕೂ ಅಧಿಕ ಮ್ಯೂಚುವಲ್ ಫಂಡ್ ಯೋಜನೆಗಳಿವೆ. ಈ ಫಂಡ್‌ಗಳು ಒಂದೇ ರೀತಿಯ ಗುಂಪಿನ ಎಲ್ಲ ಹೂಡಿಕೆದಾರರ ಹೂಡಿಕಾ ಮೊತ್ತವನ್ನು ಸಂಗ್ರಹಿಸಿ, ಮಾರುಕಟ್ಟೆಯಲ್ಲಿನ ಷೇರುಗಳು, ಅಲ್ಪಾವಧಿ ಹೂಡಿಕೆಗಳು ಅಥವಾ ಇತರ ಸೆಕ್ಯುರಿಟಿಗಳಲ್ಲಿ ಒಟ್ಟಾಗಿ ಹೂಡಿಕೆ ಮಾಡುತ್ತವೆ.

ಮ್ಯೂಚುವಲ್ ಫಂಡ್‌ಗಳಲ್ಲಿ, ನಿಧಿಯ ಹೂಡಿಕೆಗಳನ್ನು ನಿರ್ಧರಿಸುವ ಹಾಗೂ ಲಾಭ-ನಷ್ಟದ ಖಾತೆ ನಿರ್ವಹಿಸುವ ನಿಧಿ ವ್ಯವಸ್ಥಾಪಕರಿದ್ದಾರೆ. ‘ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ’ (ಸೆಬಿ) ಎಂಬುದು ಮ್ಯೂಚುವಲ್
ಫಂಡ್‌ಗಳಿಗಾಗಿ ಭಾರತದ ಪ್ರಮುಖ ನಿಯಂತ್ರಕ ಹಾಗೂ ನೀತಿ-ನಿರೂಪಕ ಸಂಸ್ಥೆಯಾಗಿದೆ. ಮ್ಯೂಚುವಲ್ ಫಂಡ್‌ಗಳು ಆರ್‌ಬಿಐನ ನಿಯಂತ್ರಣಕ್ಕೂ ಒಳಪಟ್ಟಿವೆ. ಮ್ಯೂಚುವಲ್ ಫಂಡ್‌ನ ನಿರ್ದಿಷ್ಟ ಯೋಜನೆಯ ಕಾರ್ಯಕ್ಷಮತೆಯನ್ನು ನಿವ್ವಳ ಆಸ್ತಿ ಮೌಲ್ಯದಿಂದ (ಸರಳವಾಗಿ ಹೇಳುವುದಾದರೆ ಮಾರುಕಟ್ಟೆ ಮೌಲ್ಯದಿಂದ) ಸೂಚಿಸಲಾಗುತ್ತದೆ.

ನಿವ್ವಳ ಆಸ್ತಿಮೌಲ್ಯ ಹೆಚ್ಚಾದಂತೆ ಹೂಡಿಕೆದಾರರಿಗೆ ದಕ್ಕುವ ಲಾಭಾಂಶವೂ ಜಾಸ್ತಿಯಾಗುತ್ತದೆ. ಮ್ಯೂಚುವಲ್ ಫಂಡ್‌ಗಳ ಮೌಲ್ಯಮಾಪನ ಮಾಡುವಲ್ಲಿ ‘ಸಂಯೋಜಿತ ವಾರ್ಷಿಕ ಬೆಳವಣಿಗೆ ದರ’ವು ಇನ್ನೊಂದು ಪ್ರಮುಖ ಮಾನದಂಡವಾಗಿರುತ್ತದೆ.
ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆಗಳು ಕಡ್ಡಾಯ ವಲ್ಲ; ಆದರೂ ಆ ಖಾತೆಗಳನ್ನು ತೆರೆದರೆ ಹೂಡಿಕೆ ದಾರರಿಗೆ ಎಲ್ಲಾ ಹೂಡಿಕೆಗಳ ವಿವರ ತಿಳಿಯುತ್ತದೆ.

ಖುದ್ದಾಗಿ ಟ್ರೇಡಿಂಗ್ ಮಾಡಲು ಈ ಖಾತೆಗಳು ಅನಿವಾರ್ಯ. ಇವನ್ನು ಬ್ಯಾಂಕುಗಳಲ್ಲಿ, ಮ್ಯೂಚುವಲ್ ಫಂಡ್ ಜಾಲತಾಣಗಳಲ್ಲಿ ತೆರೆಯಬಹುದು. ಮ್ಯೂಚುವಲ್ ಫಂಡ್‌ಗಳ ಹೂಡಿಕೆದಾರರ  ಸೇವಾಕೇಂದ್ರ ಯೋಜನೆಯಲ್ಲಿ ಹೂಡಿಕೆಯನ್ನು ಪ್ರಾರಂಭಿಸಬಹುದು ಅಥವಾ ಸಂಬಂಧಿತ ಮ್ಯೂಚುವಲ್ ಫಂಡ್‌ಗಳ ರಿಜಿಸ್ಟ್ರಾರ್ ಮತ್ತು ಟ್ರಾನ್ಸ್ ಫರ್ ಏಜೆಂಟ್‌ಗಳು, ಚೆಕ್ ಮತ್ತು ಬ್ಯಾಂಕ್ ಡ್ರಾಫ್ಟ್ ನೊಂದಿಗೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಮ್ಯೂಚುವಲ್ ಫಂಡ್ ಗಳ ಸಂಘದಲ್ಲಿ ನೋಂದಾಯಿಸಲ್ಪಟ್ಟ ಮ್ಯೂಚುವಲ್ ಫಂಡ್ ವಿತರಕರ ಸಹಾಯದಿಂದ ನೇರವಾಗಿ ಹೂಡಿಕೆ ಮಾಡಬಹುದು. ಬ್ಯಾಂಕ್, ಬ್ರೋಕರೇಜ್ ಸಂಸ್ಥೆ ಅಥವಾ ಆನ್‌ಲೈನ್ ವಿತರಣಾ ಚಾನಲ್ ಪೂರೈಕೆದಾರರಂಥ ವೈಯಕ್ತಿಕ ಅಥವಾ ವೈಯಕ್ತಿಕ
ವಲ್ಲದ ಘಟಕಗಳು ಮ್ಯೂಚುವಲ್ ಫಂಡ್ ವಿತರಕರಾಗಬಹುದು.

ಮ್ಯೂಚುವಲ್ ಫಂಡ್‌ಗಳಲ್ಲಿ ‘ಸಿಪ್’ ಮೂಲಕ ಹೂಡಿಕೆ ಮಾಡುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಕಡಿಮೆ ಅಪಾಯಕಾರಿ ಸ್ವರೂಪ ಮತ್ತು ಹೆಚ್ಚಿನ ಆದಾಯದ ಸಾಮರ್ಥ್ಯದಿಂದಾಗಿ ‘ಸಿಪ್ ’ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇವು ನಿಯತವಾಗಿ, ವಿಶಿಷ್ಟವಾಗಿ ಬೇರೆ ಬೇರೆ ಮಧ್ಯಂತರಗಳಲ್ಲಿ ಹಣ ಹೂಡಲು ಸರಳ, ಅನುಕೂಲಕರ, ಶಿಸ್ತುಬದ್ಧ ಮತ್ತು ರಚನಾತ್ಮಕ ಮಾರ್ಗವಾಗಿವೆ. ಸಣ್ಣ ಹೂಡಿಕೆ ದಾರರಿಗೆ ಮ್ಯೂಚುವಲ್ ಫಂಡ್‌ಗಳಲ್ಲಿ ಭಾಗವಹಿಸಲು ಮತ್ತು ಕಾಲಾಂತರದಲ್ಲಿ ದೀರ್ಘಾವಧಿಯಲ್ಲಿ ಸಂಪತ್ತು ನಿರ್ಮಿಸಲು ಅವಕಾಶ ರೂಪಿಸುವುದು ‘ಸಿಪ್’ನ ವೈಶಿಷ್ಟ್ಯ.

‘ಸಿಪ್’ನಲ್ಲಿ ಹೂಡಿಕೆ ಮಾಡುವುದು ಸರಳ; ಆನ್‌ಲೈನ್ ಅಥವಾ ಆಫ್ ಲೈನ್‌ನಲ್ಲಿ ಇದು ನೆರವೇರುತ್ತದೆ. ಉತ್ತಮ ಮ್ಯೂಚುವಲ್
ಫಂಡ್ ಯೋಜನೆಯನ್ನು ಆರಿಸಿ, ಸಿಪ್ ದಿನಾಂಕ ವನ್ನು ಆಯ್ಕೆಮಾಡಿ, ಹೂಡಿಕೆಯನ್ನು ಅಧಿಕೃತ ಗೊಳಿಸಬೇಕು. ‘ಸಿಪ್’ನಲ್ಲಿನ ಹೂಡಿಕೆಯ ಕನಿಷ್ಠ ಮೊತ್ತ ೧೦೦ ರುಪಾಯಿ. ಯಾವುದೇ ‘ಸಿಪ್’ ಯೋಜನೆಯಲ್ಲಿ ಹೂಡುವ ಮುನ್ನ, ಹೂಡಿಕೆ ದಾರರು ತಮ್ಮದೇ ಆದ ಸಂಶೋಧನೆಯನ್ನು ನಡೆಸ ಬೇಕು ಮತ್ತು ಹಣಕಾಸು ಸಲಹೆಗಾರರೊಂದಿಗೆ ಸಮಾಲೋಚಿಸಬೇಕು. ನಮ್ಮ ಒಟ್ಟಾರೆ ಹಣಕಾಸಿನ ಗುರಿಗಳೊಂದಿಗೆ ‘ಸಿಪ್’ ಹೂಡಿಕೆಗಳನ್ನು ಅಲ್ಪಾವಧಿ, ಮಧ್ಯಮಾವಧಿ ಅಥವಾ ದೀರ್ಘಾವಧಿ ಮೇಲೆ
ಹೊಂದಿಸಬೇಕು.

ಹೂಡಿಕೆದಾರರ ಅನುಕೂಲಕ್ಕಾಗಿ ‘ಸಿಪ್’ನಲ್ಲಿ ೭ ವಿಧದ ಆಯ್ಕೆಗಳನ್ನು ನೀಡಲಾಗಿದ್ದು, ಹೂಡಿಕೆದಾರರು ತಮ್ಮ ವೈವಿಧ್ಯಮಯ ಆದ್ಯತೆಯ ಅವಶ್ಯಕತೆ ಗಳನ್ನು ಪೂರೈಸಲು ಮತ್ತು ತಮ್ಮ ಹಣಕಾಸಿನ ಉದ್ದೇಶದೊಂದಿಗೆ ಹೊಂದಾಣಿಕೆ ಮಾಡಲು ಇವನ್ನು ಆರಿಸಿಕೊಳ್ಳಬಹುದು. ನಿಯತ ಸಿಪ್: ಹೂಡಿಕೆದಾರರು ನಿಯತ ಮಧ್ಯಂತರ ದಲ್ಲಿ ನಿಗದಿತ ಮೊತ್ತವನ್ನು ಹೂಡಿಕೆ ಮಾಡುತ್ತಾರೆ.
ಸಾಮಾನ್ಯವಾಗಿ ಮಾಸಿಕ ಅವಽಗೆ. ಕಾಲಾಂತರದಲ್ಲಿ ಸ್ಥಿರ ಸಂಪತ್ತಿನ ಸೃಷ್ಟಿಗಾಗಿ ದೀರ್ಘಾವಧಿಯ ಹೂಡಿಕೆದಾರರಿಗೆ ನಿಯತ ಸಿಪ್‌ಗಳು ಸೂಕ್ತವಾಗಿವೆ.

ಉದಾಹರಣೆಗೆ, ೧೦ ವರ್ಷಗಳ ಅವಧಿಗೆ ಮ್ಯೂಚು ವಲ್ ಫಂಡ್ ಯೋಜನೆಯಲ್ಲಿ ತಿಂಗಳಿಗೆ ೫೦೦೦ ರುಪಾಯಿ ಹೂಡಿಕೆ ಮಾಡುವುದು.

ಟಾಪ್-ಅಪ್ ಸಿಪ್: ಇದು ನಿಯತ ‘ಸಿಪ್’ನ ಒಂದು ರೂಪಾಂತರವಾಗಿದ್ದು, ಹೂಡಿಕೆದಾರರು ಹೂಡಿಕೆಯ ಮೊತ್ತವನ್ನು ಪೂರ್ವನಿರ್ಧರಿತ ಮಧ್ಯಂತರದಲ್ಲಿ ಹೆಚ್ಚಿಸಬಹುದಾಗಿರುತ್ತದೆ. ಹೂಡಿಕೆ ದಾರರು ತಮ್ಮ ಆದಾಯದ ಹೆಚ್ಚಳದೊಂದಿಗೆ
ಹೂಡಿಕೆಯ ಮೊತ್ತವನ್ನೂ ಹೆಚ್ಚಿಸಲು ಇದೊಂದು ಆದರ್ಶ ಆಯ್ಕೆಯಾಗಿದೆ. ಉದಾಹರಣೆಗೆ, ೫೦೦೦ ರುಪಾಯಿಯ ನಿಯತ ‘ಸಿಪ್’ ಪ್ರಾರಂಭಿಸಿ, ವಾರ್ಷಿಕವಾಗಿ ಶೇ.೧೦-೧೫ರಷ್ಟು ಹೆಚ್ಚಿಸಬಹುದು.

ಹೊಂದಿಕೊಳ್ಳುವ ಸಿಪ್: ಹೂಡಿಕೆದಾರರು ತಮ್ಮ ಅನುಕೂಲಕ್ಕನುಗುಣವಾಗಿ ‘ಸಿಪ್’ ಹೂಡಿಕೆಯ ಮೊತ್ತ ಹಾಗೂ ಆವರ್ತನವನ್ನು ಬದಲಿಸಲು ಇದು ಅನುಮತಿಸುತ್ತದೆ. ಆದಾಯದಲ್ಲಿ ಏರಿಳಿತವಿರುವ ಹೂಡಿಕೆದಾರರಿಗೆ ಅಥವಾ ಹೆಚ್ಚುವರಿ ಹೂಡಿಕೆ ಮಾಡಬಯಸುವವರಿಗೆ ಇದು ಸೂಕ್ತ ಆಯ್ಕೆ ಯಾಗಿದೆ. ಉದಾಹರಣೆಗೆ ೫,೦೦೦ ರು. ಹೂಡಿಕೆಯೊಂದಿಗೆ ಹೊಂದಿಕೊಳ್ಳುವ ‘ಸಿಪ್’ ಅನ್ನು ಪ್ರಾರಂಭಿಸುವುದು ಮತ್ತು ಅನುಕೂಲಕ್ಕೆ ಅನುಗುಣ ವಾಗಿ ಮೊತ್ತವನ್ನು ಹೆಚ್ಚಿಸುವ ಅಥವಾ ತಗ್ಗಿಸುವ ಆಯ್ಕೆ ಇರುತ್ತದೆ.

ಶಾಶ್ವತ ಸಿಪ್: ಇದು ನಿಯತ ಸಿಪ್‌ನ ಒಂದು ರೂಪಾಂತರವಾಗಿದ್ದು, ಹೂಡಿಕೆದಾರರು ಅನಿರ್ದಿಷ್ಟ ಅವಧಿಯವರೆಗೆ ನಿಯತ ಮಧ್ಯಂತರದಲ್ಲಿ ನಿಗದಿತ ಮೊತ್ತದ ಹಣವನ್ನು ಹೂಡಬಹುದು. ನಿವೃತ್ತಿಯ ನಂತರದ ಸ್ಥಿರ ಆದಾಯದ ಹರಿವನ್ನು ಹುಡುಕುತ್ತಿ
ರುವ ದೀರ್ಘಾವಧಿಯ ಹೂಡಿಕೆದಾರರಿಗೆ ಇದು ಸೂಕ್ತವಾದ ಆಯ್ಕೆಯಾಗಿದೆ.

ಟ್ರಿಗರ್ ಸಿಪ್: ಇದು ನಿಯತ ಸಿಪ್‌ನ ಒಂದು ರೂಪಾಂತರವಾಗಿದ್ದು, ಹೂಡಿಕೆದಾರರು ಮಾರುಕಟ್ಟೆಯ ಪರಿಸ್ಥಿತಿಗಳ ಆಧಾರದ ಮೇಲೆ ಹೂಡಿಕೆಗಾಗಿ ಟ್ರಿಗರ್‌ಗಳನ್ನು ಹೊಂದಿಸಬಹುದು. ಮಾರುಕಟ್ಟೆಯ ಅವಕಾಶಗಳ ಲಾಭ ಪಡೆಯಲು ಹೂಡಿಕೆದಾರರಿಗೆ
ಇದು ಸೂಕ್ತ ಮತ್ತು ಉತ್ತಮ ಆಯ್ಕೆಯಾಗಿದೆ. ವಿಮೆ ಸಹಿತ ಸಿಪ್: ಇದು ಹೂಡಿಕೆದಾರರಿಗೆ ಜೀವ ವಿಮಾ ರಕ್ಷಣೆಯೊಂದಿಗೆ ಹೂಡಿಕೆ ಆದಾಯವನ್ನು ಒದಗಿಸುತ್ತದೆ.

ಮಲ್ಟಿ ಸಿಪ್: ಹೂಡಿಕೆದಾರರು ಒಂದೇ ಸಿಪ್ ಖಾತೆಯ ಮೂಲಕ ವಿವಿಧ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಬಂಡವಾಳವನ್ನು ವೈವಿಧ್ಯ ಗೊಳಿಸಲು ಇದು ಸೂಕ್ತವಾದ ಆಯ್ಕೆ ಯಾಗಿದೆ. ಇದು ಹೂಡಿಕೆ ಬಂಡವಾಳದ ಒಟ್ಟಾರೆ ಅಪಾಯ ವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೀಗೆ ಮ್ಯೂಚುವಲ್ ಫಂಡ್‌ಗಳಲ್ಲಿ ಕಾಣಬರುವ ಸಂಯೋಜಕ ಶಕ್ತಿ ಅನುಪಮವಾಗಿದೆ. ಬೆಂಜಮಿನ್ ಗ್ರಹಾಂರಿಂದ ವಾರೆನ್ ಬಫೆಟ್‌ವರೆಗೆ, ಹೂಡಿಕೆ ಮಾಡುವ ಎಲ್ಲರೂ ಈ ಸಂಯೋಜನೆಯ ಶಕ್ತಿ ಯನ್ನು ಒಪ್ಪಿಕೊಂಡಿದ್ದಾರೆ ಹಾಗೂ ಶ್ಲಾಘಿಸಿದ್ದಾರೆ. ವರದಿಗಳ ಅನುಸಾರ, ಮುಂದಿನ ಆರ್ಥಿಕ ವರ್ಷದಲ್ಲೂ (೨೦೨೪-೨೫) ಮ್ಯೂಚುವಲ್ -ಂಡ್ ಹೂಡಿಕೆಗೆ ಒಳ್ಳೆಯ ಭವಿಷ್ಯವಿದೆ. ಆದರೂ, ಮ್ಯೂಚುವಲ್ ಫಂಡ್ ಯೋಜನೆಗಳ ಕಾರ್ಯಕ್ಷಮತೆಯು ಮಾರುಕಟ್ಟೆಯ ಏರಿಳಿತಗಳಿಂದ ಪ್ರಭಾವಿತವಾಗಿರುತ್ತದೆ ಎಂಬುದನ್ನು ತಿಳಿದಿರಬೇಕು.

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

Leave a Reply

Your email address will not be published. Required fields are marked *

error: Content is protected !!