ನೂರೆಂಟು ವಿಶ್ವ
ಕೆಲ ವರ್ಷಗಳ ಹಿಂದೆ ಕನ್ನಡದ ನಟರೊಬ್ಬರು ಟ್ವೀಟ್ ಮಾಡಿದ್ದರು- ‘ನಮ್ಮ ಹೆಸರಿನಲ್ಲಿ ಸ್ಮಾರಕ ಕಟ್ಟಿಸಿಕೊಳ್ಳುವ ಆಸೆ ಇಲ್ಲ. ನಾವು ಸತ್ತ ನಂತರ ನಮ್ಮ ಹೆಸರಿ
ನಲ್ಲಿ ಯಾರೂ ಸ್ಮಾರಕ ಕಟ್ಟಬೇಡಿ. ಸರಕಾರವೇನಾದರೂ ಅಂಥ ಸ್ಮಾರಕ ಕಟ್ಟಬೇಕೆಂದು ನೀವು ಬಯಸಿದರೆ, ನೀವೇ ಒಂದು ಎಕರೆ ಜಾಗವನ್ನು ಬದುಕಿದ್ದಾಗಲೇ ಸರಕಾರಕ್ಕೆ ಕೊಟ್ಟುಬಿಡಿ. ನಿಮ್ಮ ನಂತರ ಸರಕಾರಕ್ಕೆ ಸ್ಮಾರಕ ನಿರ್ಮಿಸಲು ಅನುಕೂಲ ವಾಗುತ್ತದೆ.’ ಒಳ್ಳೆಯ ಸಲಹೆ ಅನಿಸಿತು.
ತಾನು ಸತ್ತ ನಂತರ ಸರಕಾರ ಸ್ಮಾರಕ ನಿರ್ಮಿಸಲಿ ಎಂದು ಆಸೆ ಪಡುವವರಿಗೆ, ಅವರ ಅಭಿಮಾನಿಗಳಿಗೆ ಇದರಿಂದ ಸ್ವಲ್ಪವೂ ಬೇಸರವಾಗುವುದಿಲ್ಲ. ಮೃತವ್ಯಕ್ತಿ ಸಾಯುವ ಮೊದಲೇ ನೀಡಿದ ಜಾಗದಲ್ಲಿ ಕಟ್ಟಿದ್ದು ಸರೀನಾ, ತಪ್ಪಾ ಎಂಬ ಚರ್ಚೆ, ವಿವಾದ ಉದ್ಭವಿಸುವುದೇ ಇಲ್ಲ. ಇಲ್ಲದಿದ್ದರೆ ನಿಧನರಾದವರು ಎಲ್ಲವನ್ನೂ ಬಿಟ್ಟು
ಹೋದರೂ, ಚರ್ಚೆ, ಜಗಳ, ವಿವಾದವನ್ನು ಮಾತ್ರ ಇಲ್ಲಿಯೇ ಇಟ್ಟು ಹೋಗುತ್ತಾರೆ. ಅವರು ನಿಧನರಾಗಿ ಎಷ್ಟೋ ವರ್ಷ ಗಳಾದ ನಂತರವೂ ಈ ವಿವಾದ ಮಾತ್ರ ಮುಂದುವರಿದಿರುತ್ತದೆ. ನಿಧನರಾದವರಿಗೆ ಇವ್ಯಾವವೂ ಬೇಕಾಗಿರುವುದಿಲ್ಲ, ಅವರು ಭಗವಂತನ ಪಾದ ಸೇರಿರುತ್ತಾರೆ. ಆದರೆ ಬದುಕಿರುವವರು ಸತ್ತವರಿಗಾಗಿ ಕಿತ್ತಾಡುತ್ತಿರುತ್ತಾರೆ.
ಅಷ್ಟಕ್ಕೂ ಸ್ಮಾರಕವನ್ನು ಯಾರಿಗೆ ನಿರ್ಮಿಸಬೇಕು? ಯಾರು ನಿರ್ಮಿಸಬೇಕು? ಯಾಕೆ ನಿರ್ಮಿಸಬೇಕು? ಈ ವಿಷಯದ ಬಗ್ಗೆ ಯಾರಿಗೂ ಸ್ಪಷ್ಟನೆ ಇದ್ದಂತಿಲ್ಲ. ಸರಕಾರದ ಮುಂದೆ ಯಾವ ನೀತಿ ಇದ್ದಂತಿಲ್ಲ. ನಾಗರಿಕ ಸಮಾಜಕ್ಕೂ ಖಚಿತ ನಿಲುವು ಎಂಬುದು ಇದ್ದಂತಿಲ್ಲ. ಗಣ್ಯ ವ್ಯಕ್ತಿಗಳಿಗೆ ಸ್ಮಾರಕ ನಿರ್ಮಿಸುವುದು ಸಂಪ್ರದಾಯ. ಆದರೆ ಮೃತ ವ್ಯಕ್ತಿ ಗಣ್ಯ ಹೌದೋ, ಅಲ್ಲವೋ ಎಂದು ನಿರ್ಧರಿಸುವವರು ಯಾರು? ಅದಕ್ಕೆ ಮಾನದಂಡವೇನು? ಅದಕ್ಕೊಂದು ಸ್ಮಾರಕ-ಸಂಹಿತೆ ಎಂಬುದೇನಾದರೂ ಇದೆಯಾ? ಅಥವಾ ಆಯಾ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಸರಕಾರದ ಮುಖ್ಯಸ್ಥರಿಗೆ ಅನಿಸುವುದೇ ಸಂಹಿತೆಯಾ? ಅವರ ತೀರ್ಮಾನವೇ ಅಂತಿಮವಾ? ರಾಷ್ಟ್ರಪಿತ ಮಹಾತ್ಮಗಾಂಽ ಅವರಿಗೆ ದಿಲ್ಲಿಯ ರಾಜಘಾಟ್ ನಲ್ಲಿ ಸ್ಮಾರಕ ನಿರ್ಮಿಸಿದ್ದಾರೆ.
ದೇಶದ ಮೊದಲ ಪ್ರಧಾನಿ ಯಾಗಿದ್ದ ಜವಾಹರಲಾಲ ನೆಹರು ಅವರಿಗೆ ದಿಲ್ಲಿಯಲ್ಲಿ ಭವ್ಯ ಸ್ಮಾರಕ ನಿರ್ಮಿಸಲಾಗಿದೆ. ಅದಕ್ಕೆ ‘ಶಾಂತಿವನ’ ಎಂದು ಹೆಸರು.
ನಂತರ ಪ್ರಧಾನಿಯಾಗಿ ನಿಧನರಾದ ಲಾಲ್ ಬಹಾದುರ್ ಶಾಸ್ತ್ರಿ (ಕಿಸಾನ್ ಘಾಟ್), ಇಂದಿರಾ ಗಾಂಧಿ (ಶಕ್ತಿ ಸ್ಥಳ), ರಾಜೀವ್ ಗಾಂಧಿಧಿ ಅವರಿಗೆ ಸ್ಮಾರಕ ನಿರ್ಮಿಸಲಾಗಿದೆ. ಅಂದರೆ ಪ್ರಧಾನಿ ಯಾಗಿದ್ದವರಿಗೆ ಸರಕಾರ ಸ್ಮಾರಕ ಕಟ್ಟಿಸುತ್ತದೆ ಎಂದಾಯಿತು. ಆದರೆ ಇದೇ ಮಾನದಂಡವನ್ನು ಎರಡು ಸಲ ಹಂಗಾಮಿ
ಪ್ರಧಾನಿಯಾಗಿದ್ದ ಗುಲ್ಜಾರಿಲಾಲ್ ನಂದಾ ಅವರಿಗೆ ಅನುಸರಿಸಲಿಲ್ಲ. ಅವರು ಹಂಗಾಮಿ ಆಗಿದ್ದರು, ಹೀಗಾಗಿ ಅವರಿಗೆ ಸ್ಮಾರಕ ಕಟ್ಟಿಸಿಲ್ಲ ಎಂದು ವಾದಿಸಬಹುದು, ಒಪ್ಪೋಣ.
ಆದರೆ ಅದಾದ ನಂತರ ಭಾರತದ ಪ್ರಧಾನಿಯಾದ ಮೊರಾರ್ಜಿ ದೇಸಾಯಿ ಅವರಿಗೆ ದಿಲ್ಲಿಯಲ್ಲಿ ಸ್ಮಾರಕ ಕಟ್ಟಬೇಕು ಎಂದು ಯಾವ ಸರಕಾರಕ್ಕೂ ಅನಿಸಲಿಲ್ಲ. ಗುಜರಾತಿನ ಅಹಮದಾ ಬಾದ್ನ ಸಬರಮತಿ ನದಿ ದಡದಲ್ಲಿ ಮೊರಾರ್ಜಿ ಅವರಿಗೆ ಸ್ಮಾರಕ (ಅಭಯ ಘಾಟ್) ನಿರ್ಮಿಸಲಾಗಿದೆ. ಮಾಜಿ ಪ್ರಧಾನಿಗೆ ದಿಲ್ಲಿಯಲ್ಲಿ ಸ್ಮಾರಕ ಕಟ್ಟಬೇಕೆಂಬುದು ಸಂಪ್ರ ದಾಯವಾದರೆ, ಅದನ್ನು ಒಪ್ಪುವುದಾದರೆ, ನೆಹರು, ಇಂದಿರಾ, ರಾಜೀವ್ ನಂತರ ಪ್ರಧಾನಿಯಾದ ಚರಣ್ಸಿಂಗ್, ಚಂದ್ರಶೇಖರ್, ವಿ.ಪಿ. ಸಿಂಗ್, ಐ.ಕೆ. ಗುಜ್ರಾಲ್ ಅವರಿಗೆ ದಿಲ್ಲಿಯಲ್ಲೇಕೆ ಭವ್ಯ ಸ್ಮಾರಕ ನಿರ್ಮಿಸಲಿಲ್ಲ? ಕಾಂಗ್ರೆಸ್ ಪಕ್ಷದವರೇ ಆಗಿದ್ದ ಪಿ.ವಿ.ನರಸಿಂಹರಾಯರಿಗೆ ಒಂದು ಸ್ಮಾರಕ ನಿರ್ಮಿಸಲು ಅವರು ನಿಧನರಾಗಿ ಹತ್ತು ವರ್ಷಗಳು ಬೇಕಾದವು.
ಬರೀ ಪ್ರಧಾನಿಗಳಿಗೆ ಮಾತ್ರ ಸ್ಮಾರಕವಾ, ರಾಷ್ಟ್ರಪತಿಗಳಿಗೆ ಸ್ಮಾರಕ ಏಕಿಲ್ಲ ಎಂಬ ಪ್ರಶ್ನೆ ಎದುರಾಯಿತು. ಅಲ್ಲದೇ ದೇಶದ ಪ್ರಧಾನಿಯಾದವರೆಲ್ಲರಿಗೂ ಹೀಗೆ ಸ್ಮಾರಕ ನಿರ್ಮಿಸುತ್ತಾ ಹೋದರೆ, ಮುಂದೊಂದು ದಿನ ರಾಜಧಾನಿ ಸ್ಮಾರಕಗಳ ನಗರವಾಗಬಹುದು, ಅಲ್ಲದೇ ಸ್ಮಾರಕ ನಿರ್ಮಾಣದಲ್ಲೂ ತಾರತಮ್ಯವಾಗ ಬಹುದೆಂದು ಅನಿಸಿ, ಈಗ ದಿಲ್ಲಿಯಲ್ಲಿ ‘ಏಕತಾಸ್ಥಳ’ ಎಂಬ ಸ್ಮಾರಕ ನಿರ್ಮಿಸಲಾಗಿದೆ. ಅದು ರಾಷ್ಟ್ರಪತಿ, ಪ್ರಧಾನಿಗಳ ಸಮಾಽ. ಸಾವಿನಲ್ಲೂ ಅದೃಷ್ಟ ಮಾಡಿದವ ರೆಂದರೆ ನೆಹರು, ಇಂದಿರಾ ಹಾಗೂ ರಾಜೀವ್ ಗಾಂಧಿ. ಇವರಿಗೆ ತಮ್ಮದೆನ್ನುವ, ಭವ್ಯ ಸ್ಮಾರಕಗಳಿವೆ. ಉಳಿದವರು ಪ್ರಧಾನಿಗಳಾಗಿರಬಹುದು, ಆದರೆ ಅವರಷ್ಟು ಅದೃಷ್ಟ ವಂತರಲ್ಲ. ‘ಭಾರತದ ಉಕ್ಕಿನ ಮನುಷ್ಯ’ರೆಂದೇ ಖ್ಯಾತರಾದ ಸರ್ದಾರ್ ವಲ್ಲಭಭಾಯಿ ಪಟೇಲರು ಪ್ರಧಾನಿಯೇನೂ ಆಗಿರಲಿಲ್ಲ. ಅವರು ನೆಹರು ಮಂತ್ರಿಮಂಡಲದಲ್ಲಿ ಗೃಹಸಚಿವರಾಗಿದ್ದರು. ಪ್ರಧಾನಿ ಪದವಿಗೆ ಪ್ರಬಲ ಆಕಾಂಕ್ಷಿ ಆಗಿದ್ದರು. ಆದರೆ ಅವರು ನಿಧನರಾದ ೬೮ ವರ್ಷಗಳ ನಂತರ, ನರೇಂದ್ರ
ಮೋದಿ ಸರಕಾರ, ಸುಮಾರು ಮೂರು ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ವಿಶ್ವದ ಅತಿ ಎತ್ತರದ, ವಿಶ್ವವೇ ಮೂಕವಿಸ್ಮಿತವಾಗುವ ಪಟೇಲರ ಪ್ರತಿಮೆ ನಿಲ್ಲಿಸಿ, ಬೃಹತ್ ಭವ್ಯ ಸ್ಮಾರಕ ಸ್ಥಾಪಿಸಿದೆ. ಪ್ರಧಾನಿ ಆಗದಿದ್ದರೂ ಪರವಾಗಿಲ್ಲ, ಅಷ್ಟು ವರ್ಷ ಕಾದಿದ್ದೂ ಸಾರ್ಥಕವಾಯಿತು ಎಂಬಂತೆ ವಿಶ್ವದ ಅತಿ ಎತ್ತರದ ಸ್ಮಾರಕ ನಿರ್ಮಾಣವಾಯಿತು. ಈ ವಿಷಯದಲ್ಲಿ ಪಟೇಲರು ಮಹಾತ್ಮ ಗಾಂಧಿಗಿಂತ ಅದೃಷ್ಟವಂತರು. ಹುತಾತ್ಮರಾದರೆ ಈ ರೀತಿ ಆಗಬೇಕು. ನರೇಂದ್ರ ಮೋದಿಯವರಲ್ಲದೇ ಬೇರೆ ಯಾರೇ ಪ್ರಧಾನಿ ಆಗಿದ್ದರೂ ಪಟೇಲರಿಗಾಗಿ ಇಂಥ ಸ್ಮಾರಕ ನಿರ್ಮಿಸುತ್ತಿರಲಿಲ್ಲ. ಸ್ವಾತಂತ್ರ್ಯಾನಂತರ ಅರ್ಧ ಶತಮಾನ ಕಾಂಗ್ರೆಸ್ಸೇ ದೇಶವನ್ನಾಳಿದರೂ, ಪಟೇಲರಿಗೊಂದು ಸ್ಮಾರಕ ಕಟ್ಟಬೇಕೆಂದು ಆ ಪಕ್ಷದ ನಾಯಕರಿಗೆ ಅನಿಸಲಿಲ್ಲ.
ಆದರೆ ಮೋದಿಯವರು ಆ ಪಕ್ಷದವರಲ್ಲದಿದ್ದರೂ, ಮಹಾತ್ಮ ಗಾಂಧಿ ಅವರಿಗೆ ನಿರ್ಮಿಸಲಾದ ಸ್ಮಾರಕಕ್ಕಿಂತ ಎಷ್ಟೋ ಪಟ್ಟು ಭವ್ಯವಾದ ಸ್ಮಾರಕ ನಿರ್ಮಿಸಿದರು. ಅದಕ್ಕೇ ಅನ್ನೋದು, ನಮ್ಮಲ್ಲಿ ಒಂದು ಸ್ಮಾರಕ-ಸಂಹಿತೆ ಎಂಬುದೇ ಇಲ್ಲ. ಗಣ್ಯವ್ಯಕ್ತಿಗಳೆಂದರೆ ಯಾರು, ಕೇವಲ ರಾಜಕಾರಣಿಗಳು, ಅಧಿಕಾರದಲ್ಲಿದ್ದವರು ಮಾತ್ರ ಗಣ್ಯರಾ, ಅವರ ಹೊರತಾಗಿ ಸಮಾಜದಲ್ಲಿ, ದೇಶದಲ್ಲಿ ಗಣ್ಯವ್ಯಕ್ತಿಗಳೇ ಇಲ್ಲವಾ? ಯಾವ ಪಕ್ಷ ಅಧಿಕಾರದಲ್ಲಿ ಇದೆಯೋ, ಅವರಿಗೆ ಯಾರು ಇಷ್ಟವೋ,
ಅವರಿಗೆ ಸ್ಮಾರಕ ಕಟ್ಟುವ ಕೆಟ್ಟ ಸಂಪ್ರದಾಯ ಬೆಳೆದು ಬಂದಿದೆ.
ಸಾಯುವಾಗ ಯಾವ ಪಕ್ಷ ಅಧಿಕಾರದಲ್ಲಿದೆ, ಯಾರು ಮುಖ್ಯಮಂತ್ರಿಯಾಗಿದ್ದಾರೆ, ಅವರು ತನ್ನ ಜಾತಿಯವರಾ ಎಂಬುದನ್ನೆಲ್ಲ ಯೋಚಿಸಿ ಸಾಯಬೇಕು. ಬೇರೆ ಪಕ್ಷದವ ರಾದರೆ, ಬೇರೆ ಜಾತಿಯವರಾದರೆ, ‘ಸ್ಮಾರಕ ಭಾಗ್ಯ’ ಸಿಗಲಿ ಕ್ಕಿಲ್ಲ. ನಾಯಿಗೆ ಮೂತ್ರ ಮಾಡಲು ಲಾಯಕ್ಕಾದ ಮೈಲಿಗಲ್ಲಿ ನಂಥ ಸ್ಮಾರಕ ನಿರ್ಮಿಸಬಹುದು. ನಮ್ಮ ಪಕ್ಷ, ನಮ್ಮ ಜಾತಿಯವರಾದರೆ ಭವ್ಯ ಸ್ಮಾರಕ ಭಾಗ್ಯ! ಬದುಕಲು ಮಾತ್ರ ಅಲ್ಲ, ಸತ್ತ ಮೇಲೂ ಅದೃಷ್ಟ ಮಾಡಿರಬೇಕು! ಅಷ್ಟಕ್ಕೂ ಸ್ಮಾರಕ ಕಟ್ಟುವ ಉದ್ದೇಶವಾದರೂ ಏನು? ಇಂಥ ಒಬ್ಬ ವ್ಯಕ್ತಿ ಇದ್ದರು, ಇವರು ಇಷ್ಟೆಲ್ಲ ಒಳ್ಳೆಯ ಕೆಲಸ ಮಾಡಿ ದರು, ಅವರ ಆದರ್ಶಗಳು, ಪ್ರತಿಪಾದಿಸಿದ ನಂಬಿಕೆ, ಮೌಲ್ಯ, ಜೀವನ ಸಿದ್ಧಾಂತಗಳು ಶಾಶ್ವತವಾಗಿರಬೇಕು, ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು, ಅನುಕರಣೀಯವಾಗ ಬೇಕು, ಅವರ ಸ್ಮಾರಕಕ್ಕೆ ಭೇಟಿ ನೀಡಿದವರಿಗೆ ಅವರ ಸ್ಮರಣೆ ಪ್ರೇರಣೆ, ಸೂರ್ತಿಯಾಗಬೇಕು, ತಾನೂ ಅಂಥ ಆದರ್ಶ ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಚೇತೋ
ಹಾರಿ, ಪವಿತ್ರ ಭಾವ ಸುರಿಸಬೇಕೆಂಬ ಉದಾತ್ತ ಉದ್ದೇಶದಿಂದ ಸ್ಮಾರಕಗಳನ್ನು ನಿರ್ಮಿಸುವ ಸಂಪ್ರದಾಯವನ್ನು ಜಗತ್ತಿನೆಲ್ಲೆಡೆ ಪಾಲಿಸಿಕೊಂಡು ಬರಲಾಗುತ್ತಿದೆ.
ಹೀಗಾಗಿ ಯಾರ್ಯಾರಿಗೋ, ಕೋಲ್ಯ, ಕೊಲ್ಕಾ, ಕೊಮ್ಯನಿಗೆಲ್ಲ ಸ್ಮಾರಕ ಕಟ್ಟುವುದಿಲ್ಲ. ಕೋಲ್ಯನಿಗೆ ಕೋಟ್ಯಂತರ ಅಭಿಮಾನಿಗಳಿರಬಹುದು, ಅಭಿ ಮಾನಿಗಳಿರುವುದು ಸ್ಮಾರಕ ನಿರ್ಮಿಸಲು ಅಳತೆಗೋಲಲ್ಲ. ಆ ಅಭಿಮಾನಿಗಳು ಅಭಿಮಾನಿಗಳ ಸಂಘ ಕಟ್ಟಿಕೊಳ್ಳಲಿ, ಯಾರೂ ಬೇಡ ಎನ್ನುವುದಿಲ್ಲ. ಆದರೆ ಅದೇ ಅಭಿಮಾನಿಗಳು ಹೇಳಿದ್ದಾರೆಂದು ಸ್ಮಾರಕ ನಿರ್ಮಿಸಲು ಹೊರಟರೆ, ‘ಆರಾಧ್ಯದೈವ’ನಿಗೆ ಅವಮಾನ ಮಾಡಿದಂತೆ. ಕಾರಣ ಯಾವ ಪರಮ ಪವಿತ್ರ,
ಉದಾತ್ತ ಧ್ಯೇಯಗಳಿಗಾಗಿ ಈ ಪ್ರತಿಮೆ ಸ್ಥಾಪಿಸಿದ್ದೀರಿ ಎಂದು ಮುಂದಿನ ಪೀಳಿಗೆ ಪ್ರಶ್ನಿಸಿದರೆ, ಅದಕ್ಕೆ ಉತ್ತರಿಸಬೇಕಾಗುತ್ತದೆ. ಇಲ್ಲದಿದ್ದರೆ ‘ಆರಾಧ್ಯದೈವ’ನಿಗೆ ಅಪಚಾರ ಮಾಡಿದಂತಾಗುತ್ತದೆ.
ಬಗೆದಂತಾಗುತ್ತದೆ. ಮುಂದಿನ ಪೀಳಿಗೆಗೆ ಕೆಟ್ಟ ಸಂಪ್ರದಾಯ ಹಾಕಿದಂತಾಗುತ್ತದೆ. ಯೋಗ್ಯರನ್ನು ಕಡೆಗಣಿಸುವುದು ಎಷ್ಟು ಕ್ರೂರವೋ, ಅಪಾತ್ರರನ್ನು ಮೆರೆಯಿಸುವುದು, ವೈಭವೀಕರಿಸುವುದು ಸಹ ಅಷ್ಟೇ ಕ್ರೂರವಾದುದು. ಇವೆರಡರಿಂದ ತಮ್ಮ ಸಂದೇಶಗಳು ರವಾನೆಯಾಗುತ್ತವೆ. ಕೆಲವರು ಮಹಾನ್ ವ್ಯಕ್ತಿಗಳೆಂದು ಕರೆಯಿಸಿಕೊಳ್ಳುತ್ತಾರೆ. ಆದರೆ ಅವರ ಹೆಂಡತಿಯೇ ತನ್ನ ಮಕ್ಕಳು ಅಪ್ಪನಂತೆ ಆಗಲಿ ಎಂದು ಆಶಿಸುವುದಿಲ್ಲ. ಅನ್ಯಾನ್ಯ ಕಾರಣಗಳಿಂದ ಅವರು
ಪ್ರಸಿದ್ಧಿಗೆ ಬಂದು ದೊಡ್ಡವರೆನಿಸಿಕೊಳ್ಳುತ್ತಾರೆ. ಇಂಥವರಿಗೆಲ್ಲ ಊರ ಮಧ್ಯದಲ್ಲಿ ಸ್ಮಾರಕ ಕಟ್ಟಿಸಿದರೆ ಅದು ಆ ಸಮಾಜದ ಮನಸ್ಥಿತಿಯನ್ನು ತೋರಿಸುತ್ತದೆ. ಅಷ್ಟಕ್ಕೂ ಯಾರ ಹೆಸರಿನಲ್ಲಿ, ಪ್ರಮುಖ ಸ್ಥಳದಲ್ಲಿ ಸ್ಮಾರಕ ಕಟ್ಟುತ್ತೇವೋ, ಅವರು ಮಾತ್ರ ಉದಾತ್ತ ಜೀವಿಗಳು, ಮಹಾನ್ ವ್ಯಕ್ತಿಗಳು ಎಂದು ಭಾವಿಸಬೇಕಿಲ್ಲ.
ಒಬ್ಬನ ಸಾಧನೆ, ಮಹಾನ್ ಗುಣ, ಆದರ್ಶ ಜೀವನ, ಸಂಪನ್ನತೆಗಳೆಲ್ಲ ಸ್ಮಾರಕದಲ್ಲಿ ಅಡಕವಾಗಿಲ್ಲ. ಅವುಗಳಿಗೆ ಸ್ಮಾರಕ ಮಾನದಂಡ ಅಲ್ಲ. ಸಾವಿರ ಅರ್ಹ, ಯೋಗ್ಯ ವ್ಯಕ್ತಿಗಳಿಗೆ ಸ್ಮಾರಕ ಕಟ್ಟದಿದ್ದರೆ ಏನೂ ಆಗುವುದಿಲ್ಲ. ಅವರು ಪ್ರತಿಪಾದಿಸಿದ ಸಿದ್ಧಾಂತ, ಆದರ್ಶ, ಧ್ಯೇಯ, ನಿಷ್ಠೆ, ತತ್ತ್ವ, ಸಂದೇಶಗಳೆಲ್ಲ ಅಮೆರಿಕದಲ್ಲಿ ‘ಹೂವರ್ ಡ್ಯಾಮ್’ ನಿರ್ಮಿಸುವಾಗ, ಅಲ್ಲಿನ ಕಾರ್ಮಿಕರನ್ನು ಬೆಳಗ್ಗೆ ಎಬ್ಬಿಸಿ, ಅವರ ಬಿಡಾರಗಳನ್ನು ಕಾಯುತ್ತಿದ್ದ ನಾಯಿ, ಸರಕು ಸಾಗಣೆ ಲಾರಿ ಚಕ್ರಕ್ಕೆ ಸಿಲುಕಿ
ಸತ್ತುಹೋಯಿತು. ಅಣೆಕಟ್ಟಿನ ಪಕ್ಕದಲ್ಲಿಯೇ ಆ ನಾಯಿ ಗೊಂದು ಸ್ಮಾರಕ ಕಟ್ಟಿದ್ದಾರೆ. ಆ ನಾಯಿಯ ಪುಟ್ಟದಾದ ಜೀವನ ವೃತ್ತಾಂತವಿದೆ. ಆ ನಾಯಿ ಅಣೆಕಟ್ಟು ನಿರ್ಮಿಸಿದ ಕಾರ್ಮಿಕರಿಗೆ ಹೇಗೆ ಮುದ, ಸಂತಸ ನೀಡಿ ಅವರ ದೈನಂದಿನ ಜೀವನದಲ್ಲಿ ಪ್ರೀತಿಪಾತ್ರವಾಗಿತ್ತೆಂಬುದನ್ನು ಬರೆದಿದ್ದಾರೆ. ಆ ನಾಯಿ ಸ್ಮಾರಕಕ್ಕೆ ಭೇಟಿ ನೀಡಿದವರಿಗೆ ಕಾಯಕ ಪ್ರೀತಿಯ ಹೃದಯಂಗಮ ಕತೆ ಬಿಚ್ಚಿಕೊಳ್ಳುತ್ತದೆ.
ಮೂಕ ಪ್ರಾಣಿಯೊಂದು ಮಾನವ ಸಂವೇದನೆಗೆ ಮಿಡಿದ ಆಪ್ತಭಾವ ಜಿನುಗುತ್ತದೆ. ನಾಯಿಗಾಗಿ ಕಟ್ಟಿದ ಸ್ಮಾರಕದಲ್ಲೂ ಒಂದು ಆದರ್ಶ ಗುಣದಲ್ಲಿ ಆರ್ದ್ರವಾದ ಸಾರ್ಥಕ ಭಾವ ಅಲ್ಲಿಗೆ ಭೇಟಿ ನೀಡಿದವರ ಮನಸ್ಸಿನಲ್ಲಿ ತೇಲುತ್ತದೆ. ಅಂದರೆ ಆ ಶ್ವಾನ ಸ್ಮಾರಕವೂ ನಮಗೊಂದು ಬದುಕಿನ ಪಾಠ ಹೇಳುತ್ತದೆ. ಇಲ್ಲಿ ನಮಗೆ ಶ್ವಾನ ಮುಖ್ಯ ಅಲ್ಲ, ಅದು ಬಿಟ್ಟು ಹೋದ ಆದರ್ಶ ಮಾತ್ರ. ಹೀಗಾಗಿ ಸ್ಮಾರಕವನ್ನು ಗಣ್ಯರಿಗೆ ಮಾತ್ರ ಅಲ್ಲ, ಸಾಮಾನ್ಯರಲ್ಲಿ ಸಾಮಾನ್ಯನಿಗೂ, ನಾಯಿಯಂಥ ಮೂಕ ಪ್ರಾಣಿಗೂ ಕಟ್ಟಬಹುದು. ಇನ್ನು ನೂರು ವರ್ಷಗಳ ನಂತರ, ಈ ಶ್ವಾನ ಸ್ಮಾರಕ ಕೋಟ್ಯಂತರ ಜನರಲ್ಲಿ ಮಾನವ ಸಂವೇದನೆಗೆ ಬರೆದ ಹೊಸ ಭಾಷ್ಯದಂತೆ ನಮ್ಮಲ್ಲೊಂದು ಅನನ್ಯಭಾವವನ್ನು ಉದ್ದೀಪಿಸುತ್ತಲೇ ಇರುತ್ತದೆ.
ಇಲ್ಲಿ ನಾಯಿಯ ಗುಣದಂತೆ, ಅದನ್ನು ಗುರುತಿಸಿದ ಮನುಷ್ಯನ ಗುಣವೂ ಅಷ್ಟೇ ಮುಖ್ಯ. ಮನುಷ್ಯ ಆ ನಾಯಿಗೊಂದು ಸ್ಮಾರಕ ಕಟ್ಟಿ ಮನುಷ್ಯತ್ವ
ಮೆರೆದಿದ್ದಾನೆ. ಕಾರಣ ಅಲ್ಲೊಂದು ಅಮರ ಸಂದೇಶವಿದೆ. ಅದು ಆ ಸ್ಮಾರಕದಲ್ಲಿ ಹರಳುಗಟ್ಟಿದೆ. ಆ ಸ್ಮಾರಕ ಸಣ್ಣದಾಗಿ ಬಹುದು. ಆದರೆ ಅದು ಬೀರುವ ಸಂದೇಶ ಮಾತ್ರ ಅನೂಹ್ಯವಾದುದು. ಆದ್ದರಿಂದ ನಾವು ಯಾರಿಗೆ ಸ್ಮಾರಕ ಕಟ್ಟುತ್ತೇವೆಂಬುದು ಮುಖ್ಯ ಅಲ್ಲ, ಅವರ ಯಾವ ಸಾಧನೆ, ಯಾವ ಆದರ್ಶ ಗುಣಗಳಿಗೆ ಅದನ್ನು ಕಟ್ಟುತ್ತಿದ್ದೇವೆಂಬುದು ಬಹಳ ಮುಖ್ಯ. ಇವರಂತೆ ನೀವೂ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ನಮ್ಮ ಮಕ್ಕಳಿಗೆ ಯಾರ ಬಗ್ಗೆ ಹೇಳುತ್ತೇವೋ, ಅಂಥವರ
ಸ್ಮಾರಕ ಕಟ್ಟಿದರೆ ಅದಕ್ಕೊಂದು ಬೆಲೆ. ಇಲ್ಲಿ ವ್ಯಕ್ತಿಗಿಂತ ಆದರ್ಶಗಳೇ ಮುಖ್ಯವಾಗುತ್ತವೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ನಲ್ಲಿ ಪೌರ ಕಾರ್ಮಿಕನೊಬ್ಬನ ಪ್ರತಿಮೆ ನಿಲ್ಲಿಸಿದ್ದಾರೆ. ಆ ನಗರದ ಸೌಂದರ್ಯವರ್ಧನೆ, ಸ್ವಚ್ಛತೆ, ನೈರ್ಮಲ್ಯದ ಪ್ರತೀಕ ವಾಗಿ ಆ ಪ್ರತಿಮೆ ಕಟ್ಟಿದ್ದಾರೆ. ಇಲ್ಲಿ ವ್ಯಕ್ತಿ ಗೌಣ. ಆತನ ಆದರ್ಶಗಳೇ
ಪುತ್ಥಳಿಯಾಗಿದೆ. ಆತ ಬಿಟ್ಟುಹೋದ ಕಾಳಜಿಗಳೇ ‘ಪ್ರತಿಮಾ ರೂಪ’ವಾಗಿ ಅಲ್ಲಿ ನಿಂತಿದೆ. ಅದನ್ನು ನೋಡಿದ ಎಂಥವರಿಗಾದರೂ ನಗರ ಸ್ವಚ್ಛತೆಗಾಗಿ ಬದುಕನ್ನು
ಮುಡಿಪಾಗಿಟ್ಟ ಒಬ್ಬ ಅಪರೂಪದ ವ್ಯಕ್ತಿಯ ಜೀವನದರ್ಶನ, ಮೌಲ್ಯಗಳ ಅನಾವರಣವಾಗದೇ ಹೋಗುವುದಿಲ್ಲ.
ಅಲ್ಲಿಗೆ ಹೋದವರು ವಾಪಸ್ ಬರುವಾಗ ಒಂದಷ್ಟು ಆದರ್ಶ ಗುಣಗಳಿಂದ ಪ್ರೇರಿತರಾಗಿ ಬರುತ್ತಾರೆ. ಆದರೆ ನಾವು ಯಾರ ಸ್ಮರಣಾರ್ಥ, ಸರಕಾರಿ ಖರ್ಚಿನಲ್ಲಿ
ಸ್ಮಾರಕ ನಿರ್ಮಿಸುತ್ತೇವೋ, ಆ ವ್ಯಕ್ತಿಯಲ್ಲಿ ಯಾವ ಆದರ್ಶ ಗುಣಗಳೇ ಇಲ್ಲದಿದ್ದರೆ, ಅವರು ಮಾದರಿ ಅಥವಾ ಅನುಕರಣೀಯರಲ್ಲದಿದ್ದರೆ, ನಾವು ಸಮಾಜಕ್ಕೆ ಎಂಥ ಸಂದೇಶ ನೀಡುತ್ತಿದ್ದೇವೆ ಎಂಬುದನ್ನು ಗಂಭೀರವಾಗಿ ಯೋಚಿಸ ಬೇಕಾಗುತ್ತದೆ. ಇವರಂತೆ ಯಾರೂ ಬದುಕಬಾರದು, ಆ ಎಚ್ಚರಿಕೆ ನೀಡಲು ಅವರ ಸ್ಮಾರಕ ಕಟ್ಟುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರೆ, ಅದೂ ಒಳ್ಳೆಯದೇ. ಆದರೆ ಈ ವ್ಯತ್ಯಾಸ ಅರಿಯದೇ ಸ್ಮಾರಕ ನಿರ್ಮಿಸಿದರೆ ಸಮಾಜಕ್ಕೆ ದೊಡ್ಡ ದ್ರೋಹ ನಿರರ್ಥಕವಾಗುವುದಿಲ್ಲ. ಅವುಗಳನ್ನು ಸ್ಮಾರಕದಲ್ಲಿ ಸಂಗ್ರಹಿಸಿಡಬೇಕಿಲ್ಲ.
ಆದರೆ ಒಬ್ಬೇ ಒಬ್ಬ ಅಪಾತ್ರನಿಗೆ ಸ್ಮಾರಕ ಕಟ್ಟಿಸಿದರೆ ಅದರಿಂದ ಆಗುವ ಅನಾಹುತ ಅಷ್ಟಿಷ್ಟಲ್ಲ. ಸ್ಮಾರಕ ಕಟ್ಟುವವರಿಗೆ, ಕಟ್ಟಬೇಕೆಂದು ಒತ್ತಾಯಿಸುವವರಿಗೆ ಈ ಎಚ್ಚರ ಇರಬೇಕಾಗುತ್ತದೆ. ಇಲ್ಲದಿದ್ದರೆ ಬೇರೆ ಯಾರಿಗೂ ಅಲ್ಲ, ನಾವು ಯಾರ ಹೆಸರಿನಲ್ಲಿ ಸ್ಮಾರಕ ಕಟ್ಟುತ್ತೇವೋ ಅವರಿಗೇ ಮಾರಕ ವಾದಂತಾಗುತ್ತದೆ. ಅದು ಒಬ್ಬ ಸಾಹಿತಿಯ ಕೆಟ್ಟ ಕೃತಿಗೆ ಪ್ರತಿಷ್ಠಿತ ಬಹುಮಾನ ನೀಡಿ ಅವಮಾನಿಸಿದಂತೆ. ಒಬ್ಬ ವ್ಯಕ್ತಿ ಸತ್ತಾಗ, ಅವನಿಗೆ ಸ್ಮಾರಕ ನಿರ್ಮಿಸಿದರೆ, ಅವನ ತತ್ತ್ವ, ಜೀವನ ಸಂದೇಶಗಳಿಂದ ಅವನಿಗೆ ಜೀವ ಕೊಟ್ಟ ಹಾಗೆ, ಅವನನ್ನು ಪುನಃ ಜೀವಂತವಾಗಿ ನಿಲ್ಲಿಸಿದ ಹಾಗೆ. ಆತ ತನ್ನ ಸ್ಮಾರಕದಿಂದಲೇ ಸಮಾಜಕ್ಕೆ ತನ್ನ ನಂಬಿಕೆ, ತಾನು ಬಿಟ್ಟು ಹೋದ ಆದರ್ಶ ಗುಣಗಳಿಂದ ಸಂದೇಶ ನೀಡುತ್ತಾ ಹೋಗು ತ್ತಾನೆ ಎಂಬುದನ್ನು ನಾವು ಮರೆಯಬಾರದು. ಆದ್ದರಿಂದ ಸ್ಮಾರಕ ನಿರ್ಮಾಣ ವೆನ್ನುವುದು ಹುಡುಗಾಟಿಕೆಯಲ್ಲ, ಪಡ ಪೋಶಿ ನಡೆಯಲ್ಲ, ಅಟ್ರಾಕಣಿ ವ್ಯವಹಾರವಲ್ಲ. ಅದೊಂದು ಅತ್ಯಂತ ಜವಾಬ್ದಾರಿಯುತ ಸಾಮಾಜಿಕ ನಡೆ, ಕರ್ತವ್ಯ,
ಹೊಣೆಗಾರಿಕೆ.
ಸ್ಮಾರಕ ನಿರ್ಮಾಣದಲ್ಲಿ ಸಮಾಜ ನಿರ್ಮಾಣವೂ ಅಡಗಿದೆ ಎಂಬ ವಿವೇಕ ನಮಗಿರಬೇಕು. ನಿಮಗೆ ಗೊತ್ತಿರಬಹುದು, ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ತಾನು ಬದುಕಿರುವಾಗಲೇ ಬಾಗ್ದಾದ್ ನಗರದ ಮಧ್ಯಭಾಗದಲ್ಲಿ ತನ್ನ ಎತ್ತರದ ಪ್ರತಿಮೆ ಸ್ಥಾಪಿಸಿಕೊಂಡಿದ್ದ. ಅದು ಆತನ ಅಹಂಕಾರದ ಪ್ರತೀಕವಾಗಿತ್ತೇ ಹೊರತು, ಆತನ ಘನಕಾರ್ಯದ ದ್ಯೋತಕವಾಗಿರಲಿಲ್ಲ. ತಾನು ಸತ್ತ ನಂತರ ಯಾರೂ ತನ್ನ ಪ್ರತಿಮೆ ಅಥವಾ ಸ್ಮಾರಕ ಸ್ಥಾಪಿಸುವುದಿಲ್ಲ ಎಂಬುದು ಆತನಿಗೆ ಗೊತ್ತಿತ್ತು. ಕಾರಣ ಅಂಥ ಘನಂದಾರಿ ಕೆಲಸವನ್ನು ತಾನು ಮಾಡಿಲ್ಲವೆಂಬುದು ಅವನಿಗೆ ಅನಿಸಿರ ಬೇಕು. ಅದಕ್ಕಾಗಿ ಮರ್ಯಾದೆ ಬಿಟ್ಟು ಆತ ತನ್ನ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದ. ನಮ್ಮ ಪ್ರತಿಮೆಯನ್ನು ನಾವು ಜೀವಂತವಿರುವಾಗ ನಾವೇ ನಿರ್ಮಿಸಿಕೊಳ್ಳುವುದು ಪರಮ ಲಜ್ಜೆಗೇಡಿತನದ ಪರಾಕಾಷ್ಠೆ. ಇಂಥ ಸಣ್ಣ ಸಂಗತಿಯೂ
ಅವನಿಗೆ ಗೊತ್ತಿರಲಿಲ್ಲ. ಹೀಗಾಗಿ ತನ್ನ ಪ್ರತಿಮೆಯನ್ನೇ ದೊಡ್ಡ ದಾಗಿ ನಿಲ್ಲಿಸಿಕೊಂಡಿದ್ದ.
ಆದರೆ ಸದ್ದಾಂ ಬದುಕಿದ್ದಾಗಲೇ, ಅಲ್ಲಿನ ಜನ ಅದನ್ನು ಉರುಳಿಸಿದರು. ಉರುಳಿಬಿದ್ದ ಪ್ರತಿಮೆಗೆ ಜನ ಕಾಲಿನಿಂದ ಒದ್ದರು, ಕಲ್ಲಿನಿಂದ ಹೊಡೆದರು. ಸದ್ದಾಂನ ಅಹಂಕಾರವನ್ನು ನಿರ್ನಾಮ ಮಾಡಿದರು. ಯಾವ ಪ್ರತಿಮೆ, ಸ್ಮಾರಕ ಅವನ ಸಾಧನೆಯನ್ನು ಮೆರೆಯುವ ದ್ಯೋತಕವಾಗ ಬೇಕಿತ್ತೋ, ಅದೇ ಸ್ಮಾರಕದಲ್ಲಿ ಆತನ ಇಡೀ ವ್ಯಕ್ತಿತ್ವವೇ ಸಮಾಧಿಯಾಯಿತು. ಆತನ ಪ್ರತಿಮೆ ಹೊಡೆದುರುಳಿಸಿದ್ದು ಆತನ ವ್ಯಕ್ತಿತ್ವ ನಿರ್ನಾಮದ ಸಂಕೇತವಾಯತು. ಅವನ ಪ್ರತಿಮೆಯಿಂದ ಅವನ ಗೌರವ ಹೆಚ್ಚಾಗಲಿಲ್ಲ. ಅದೇ ಅವನ ಅವನತಿಯ ಸಂಕೇತವೂ ಆಯಿತು. ಸ್ಮಾರಕ ನಿರ್ಮಾಣದಿಂದ ಅವನ ವ್ಯಕ್ತಿತ್ವ ವೃದ್ಧಿಗೆ ಸ್ವಲ್ಪವೂ ಸಹಕಾರಿ ಆಗಲಿಲ್ಲ.
ಯಾರ ಜ್ಞಾಪಕಾರ್ಥ ಸ್ಮಾರಕ ಕಟ್ಟುತ್ತೇವೋ, ಅದನ್ನು ಕಟ್ಟಿಸಿದವರ ವ್ಯಕ್ತಿತ್ವವೂ ಅದರಿಂದ ಬೆತ್ತಲಾಗುತ್ತದೆ. ಇಂಥ ಸಾಮಾನ್ಯ ಸಂಗತಿಯನ್ನೂ ಅರಿಯದೇ ಸ್ಮಾರಕ ಕಟ್ಟಲು ಹೋಗಬಾರದು. ಅಷ್ಟಕ್ಕೂ ಸ್ಮಾರಕ ಕಟ್ಟುವುದು ಸಾಧನೆಯಲ್ಲ. ಯಾರ್ಯಾರದ್ದೋ ಸ್ಮಾರಕ ಕಟ್ಟಿಸಿದವರೂ ದೊಡ್ಡವರೆನಿಸಿಕೊಳ್ಳುವುದಿಲ್ಲ. ಸ್ಮಾರಕ ಕಟ್ಟಿಸಿದ ಮಾತ್ರಕ್ಕೆ ಸತ್ತ ವ್ಯಕ್ತಿಗೆ ಜೀವ ಬರುವುದಿಲ್ಲ. ಆದರೆ ಸ್ಮಾರಕವೆನ್ನುವುದು ಮಾರಕವೂ ಆಗಬಾರದು, ಅಣಕವೂ ಆಗಬಾರದು. ಏನಂತೀರಾ?