Sunday, 15th December 2024

Smart Glass : ರಾಜೇಂದ್ರ ಭಟ್‌ ಅಂಕಣ: ಸ್ಮಾರ್ಟ್ ವಾಚ್, ಸ್ಮಾರ್ಟ್ ಫೋನ್ ನಂತರ ಈಗ ಸ್ಮಾರ್ಟ್ ಗ್ಲಾಸ್ ಸರದಿ!

smart glass

ಸ್ಫೂರ್ತಿಪಥ ಅಂಕಣ: ಮಾರ್ಕೆಟಿಗೆ ದಾಂಗುಡಿ ಇಡ್ತಾ ಇವೆ ಮೆಟಾ ರೆಬಾನ್ ಕನ್ನಡಕಗಳು!

Rajendra Bhat K
  • ರಾಜೇಂದ್ರ ಭಟ್ ಕೆ.

Smart Glass : ಇವತ್ತು ಯಾವುದಾದರೂ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆ ಆಗ್ತಾ ಇದೆ ಎಂದರೆ ಅದು ಐಟಿ ಕ್ಷೇತ್ರದಲ್ಲಿ! ಅದರಲ್ಲಿಯೂ ಯಾವಾಗ ಕೃತಕ ಬುದ್ಧಿಮತ್ತೆಯು (Artificial Intelligence) ಜೊತೆಗೆ ಸೇರಿತೋ ಆಗ ಇನ್ನೂ ವೇಗವಾಗಿ ತಾಂತ್ರಿಕತೆ ಬೆಳೆಯುತ್ತ ಇದೆ.

2030ರ ವರ್ಷ ತಲುಪುವಾಗ ಮನುಷ್ಯನ ಬುದ್ಧಿಮತ್ತೆಗೆ ಸಮನಾದ ಸಾಮರ್ಥ್ಯ ಇರುವ ಸಾಫ್ಟ್ ವೇರ್ ಕಂಡುಹಿಡಿಯುತ್ತೇವೆ ಎಂದು ಐಟಿ ಕಂಪೆನಿಗಳು ಸವಾಲು ಸ್ವೀಕರಿಸಿವೆ ಮತ್ತು ಈಗಲೇ ಸಂಶೋಧನೆ ಆರಂಭವಾಗಿವೆ. ಇದು ಎಲ್ಲಿಯವರೆಗೆ ತಲುಪಬಹುದು ಎನ್ನುವುದು ನನ್ನ, ನಿಮ್ಮ ಊಹೆಗೆ ಮೀರಿದ್ದು!

ಈಗ ಸ್ಮಾರ್ಟ್ ಗ್ಲಾಸ್ ಸರದಿ

ಸ್ಮಾರ್ಟ್ ವಾಚ್ ಇವತ್ತು ಮೂಲೆ ಸೇರಿ ಆಗಿದೆ. ಸ್ಮಾರ್ಟ್ ಫೋನ್ ಕೂಡ ಮುಂದಿನ ದಿನಗಳಲ್ಲಿ ಔಟ್ ಡೇಟ್ ಆಗುವ ಸೂಚನೆಗಳು ಕಂಡು ಬರುತ್ತಿವೆ. ಮುಂದೆ ಏನು ಎಂಬ ಪ್ರಶ್ನೆಗೆ ಉತ್ತರ ಖಂಡಿತವಾಗಿಯೂ ಸ್ಮಾರ್ಟ್ ಗ್ಲಾಸ್ ಹೌದು.

ಮುಂಚೂಣಿಯ ಐಟಿ ಕಂಪೆನಿಯಾದ ಆಪಲ್ ಈಗಾಗಲೇ ಸ್ಮಾರ್ಟ್ ಗ್ಲಾಸ್ ರೆಡಿ ಮಾಡಿ ಮಾರ್ಕೆಟಗೆ ಪ್ರವೇಶ ಮಾಡಲು ಕಾಯುತ್ತಿದೆ! ಗೂಗಲ್ ಕಂಪೆನಿ 2010ರಲ್ಲಿಯೇ ಆಧುನಿಕವಾದ ಸ್ಮಾರ್ಟ್ ಗ್ಲಾಸ್ ಮಾರುಕಟ್ಟೆಗೆ ಬಿಟ್ಟು ಮುಂದೆ ಹಲವು ಕಾರಣಗಳಿಂದ ಅದನ್ನು ಹಿಂಪಡೆದುಕೊಂಡಿದೆ! ಹಿಂಪಡೆಯಲು ಕಾರಣ ದುಬಾರಿ ಬೆಲೆ, ಬಳಕೆದಾರರ ಸುರಕ್ಷತೆಗೆ ತೊಂದರೆ ಮತ್ತು ಗ್ರಾಹಕರ ಖಾಸಗಿತನದ ರಕ್ಷಣೆಯಲ್ಲಿ ಕೊರತೆ ಎಂದು ಕಂಪೆನಿ ಹೇಳಿಕೊಂಡಿತ್ತು.

ಈಗ 2024ರಲ್ಲಿ ಮತ್ತೆ ಅಪ್ಡೇಟ್ ಆಗಿ ಮಾರುಕಟ್ಟೆಗೆ ಬರುತ್ತೇವೆ ಎಂದು ಗೂಗಲ್ ಕಂಪೆನಿ ಪ್ರೆಸ್ ಮೀಟ್ ಮಾಡಿದೆ!

ಈಗ ಮಾರ್ಕ್ ಝುಕರ್ಬರ್ಗ್ ಸರದಿ!

ಈಗ ಜಗತ್ತಿನ ದೈತ್ಯ ಐಟಿ ಉದ್ಯಮಿ ಮಾರ್ಕ್ ಝುಕರ್ ಬರ್ಗ್ ಸುಮ್ಮನೆ ಇರಲು ಸಾಧ್ಯವೇ? ಅವರು ತಮ್ಮ ಕಂಪೆನಿಯಾದ META ಬ್ರಾಂಡಿನಲ್ಲಿ ಹೊಸ ಸ್ಮಾರ್ಟ್ ಗ್ಲಾಸ್ ಲಾಂಚ್ ಮಾಡಲು ಹೊರಟಿದ್ದಾರೆ. ಜಗತ್ತಿನ ನಂಬರ್ ಒನ್ ಕೂಲ್ ಗ್ಲಾಸ್ ಕಂಪೆನಿ ರೇಬಾನ್ ಜೊತೆಗೆ ಅವರು ಒಡಂಬಡಿಕೆ ಮಾಡಿಕೊಂಡಿದ್ದಾರೆ. ನೂರಾರು ಐಟಿ ಇಂಜಿನಿಯರಗಳು ಹಗಲು ರಾತ್ರಿ ದುಡಿದು ಈಗ META – REBAN ಬ್ರಾಂಡಿನ ಸ್ಮಾರ್ಟ್ ಗ್ಲಾಸ್ ರೆಡಿ ಮಾಡಿ ಅಮೇರಿಕಾದಲ್ಲಿ ಮೊದಲು ಮಾರುಕಟ್ಟೆಗೆ ಇಳಿಸಿದ್ದಾರೆ. ಅದರ ಕನಿಷ್ಠ ಬೆಲೆ 25,000ರೂ.ನಿಂದ ಆರಂಭವಾಗಿ 75, 000ದವರೆಗೆ ತಲುಪುತ್ತಿದೆ. ಒಂದೆರಡು ವರ್ಷಗಳ ಒಳಗೆ ಪ್ರಪಂಚದ ಅತೀ ದೊಡ್ಡ ಕೊಳ್ಳುಬಾಕ ದೇಶವಾದ ಭಾರತಕ್ಕೆ ಅದು ತಲುಪಲಿದೆ. 2026 ಆಗುವಾಗ ಸ್ಮಾರ್ಟ್ ಫೋನ್ ಮನೆಯಲ್ಲಿ ಇಟ್ಟು ಈ ಶೋಕಿ ಮಾಡುವ ಹಾಗೂ ಸ್ಮಾರ್ಟ್ ಫೋನಗಿಂತಲೂ ಅದ್ಭುತವಾಗಿ ಕೆಲಸ ಮಾಡುವ ಈ ಸ್ಮಾರ್ಟ್ ಗ್ಲಾಸ್ ಧರಿಸಿಕೊಂಡು ರಸ್ತೆಗೆ ಇಳಿಯುವ ದಿನಗಳು ಖಂಡಿತ ಬರುತ್ತವೆ!

ಇದು ಹೆಡ್ ಮೌಂಟ್ ಸ್ಮಾರ್ಟ್ ಫೋನ್!

ಈ ಮೆಟಾ ರೇಬಾನ್ ಸ್ಮಾರ್ಟ್ ಗ್ಲಾಸಗಳ ವಿಶೇಷ ಅಂದರೆ ಅದು ಸ್ಮಾರ್ಟ್ ಕಂಪ್ಯೂಟರ್, ಸ್ಮಾರ್ಟ್ ಫೋನ್ ಮತ್ತು ಸ್ಮಾರ್ಟ್ ಟಿವಿ ಈ ಮೂರರ ಕೆಲಸಗಳನ್ನು ಮಾಡುತ್ತದೆ! ಕಣ್ಣಿನ ರೆಪ್ಪೆಯು ತೆರೆದುಕೊಂಡಂತೆ ಈ ಸ್ಮಾರ್ಟ್ ಗ್ಲಾಸ್ ಆಕ್ಟೀವೇಟ್ ಆಗುತ್ತದೆ! ಅಲ್ಲಿಗೆ ಸ್ಮಾರ್ಟ್ ಜಗತ್ತು ತೆರೆದುಕೊಳ್ಳುತ್ತದೆ! ಅದರಿಂದ ಕಾಲ್ ಮಾಡುವುದು, ಕಾಲ್ ರಿಸೀವ್ ಮಾಡುವುದು, ಮೆಸೇಜ್ ಕಳುಹಿಸುವುದು, ಮೇಲ್ ಮಾಡುವುದು, ಫೋಟೋ ಕ್ಯಾಪ್ಚರ್ ಮಾಡುವುದು, ಮೂರು ಆಯಾಮಗಳ ವಿಡಿಯೋ ಮಾಡುವುದು, ಅದನ್ನು ಕಣ್ಣಿನ ನೋಟದಲ್ಲಿಯೇ ಎಡಿಟ್ ಮಾಡುವುದು, ಧ್ವನಿ ಸಹಾಯಕ ವ್ಯವಸ್ಥೆ, ಕ್ಯೂರ್ ಕೋಡ್ ಸ್ಕ್ಯಾನಿಂಗ್ ಮಾಡುವುದು…..ಹೀಗೆ ಸ್ಮಾರ್ಟ್ ಮೊಬೈಲ್ ಮಾಡುವ ಎಲ್ಲ ಕೆಲಸಗಳನ್ನೂ ಅದು ಪೂರ್ತಿ ಮಾಡುತ್ತದೆ! ಕೃತಕ ಬುದ್ಧಿಮತ್ತೆ ( AI) ಆಧಾರಿತ ವಿಡಿಯೋ ಎಡಿಟಿಂಗ್, ಕಲರಿಂಗ್, ರೀಲ್ಸ್ ಮಾಡುವುದು, ಯೂ ಟ್ಯೂಬ್ ಸಂಪರ್ಕ ಮತ್ತು ಸ್ಕ್ರಿಪ್ಟ್ ಮಾಡುವುದು ಹೀಗೆ ಎಲ್ಲವನ್ನೂ ಸ್ಮಾರ್ಟ್ ಫೋನ್ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಮತ್ತು ಹೆಚ್ಚು ಸಕ್ಷಮವಾಗಿ ಈ ಸ್ಮಾರ್ಟ್ ಗ್ಲಾಸ್ ಮಾಡುತ್ತದೆ!

ಈ ಸ್ಮಾರ್ಟ್ ಗ್ಲಾಸುಗಳು ಈಗ ಆರಂಭಿಕ ಹಂತದಲ್ಲಿ ಇದ್ದು ಅದರ ಹಿಂದೆ ಸಾವಿರಾರು ತಂತ್ರಜ್ಞರು ಜಿದ್ದಿಗೆ ಬಿದ್ದ ಹಾಗೆ ಕೆಲಸ ಮಾಡುವುದನ್ನು ನೋಡಿದಾಗ ಬೆರಗು ಮೂಡುತ್ತದೆ. ಹಾಗೆಯೇ ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಜಗತ್ತನ್ನು ಎಲ್ಲಿಗೆ ತಲುಪಿಸಬಹುದು ಎಂಬ ಆತಂಕ ಮೂಡುತ್ತದೆ!

VISUAL REALITY (VR) ಎಂಬ ಮಾಯಾಜಾಲ

ಇಂದು ಐಟಿ ಜಗತ್ತಿನಲ್ಲಿ ಹೆಚ್ಚು ಬಳಕೆ ಆಗುವ ಪರಿಕಲ್ಪನೆ ಎಂದರೆ ಈ ವಿಶ್ಯುವಲ್ ರಿಯಾಲಿಟಿ! ಅಂದರೆ ವಾಸ್ತವದ ಭ್ರಮೆ ಹುಟ್ಟಿಸುವ ತಂತ್ರಜ್ಞಾನ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಈ ಸ್ಮಾರ್ಟ್ ಗ್ಲಾಸ್ ಅದೇ ತಂತ್ರಜ್ಞಾನದ ಮುಂದುವರೆದ ಭಾಗ ಆಗಿದೆ. ಐಟಿ ಕಂಪೆನಿಗಳು ಈ ಕ್ಷೇತ್ರದಲ್ಲಿ ಕೂಡ ಅನಾರೋಗ್ಯಕರ ಸ್ಪರ್ಧೆಗೆ ಇಳಿದಿವೆ.

ಆಪಲ್ ಕಂಪೆನಿ ವಿಶನ್ ಪ್ರೊ ಎಂಬ ಹೆಸರಿನ VR ಸಾಧನವನ್ನು ಅಭಿವೃದ್ಧಿ ಪಡಿಸಿದ್ದರೆ, ಮೆಟಾ ಕಂಪೆನಿಯು ಮೆಟಾ ಕ್ವೆಸ್ಟ್ ಎಂಬ VR ಬ್ರಾಂಡ್ ತಯಾರಿ ಮಾಡಿದೆ. ಮೈಕ್ರೋಸಾಫ್ಟ್ HALO LENSE 2 ಎಂಬ VR ಬ್ರಾಂಡ್ ತಯಾರು ಮಾಡಿದೆ. ಇವುಗಳು ಮನರಂಜನೆ, ಆರೋಗ್ಯ, ಶಿಕ್ಷಣ ಮತ್ತು ಉದ್ಯಮ ರಂಗಗಳಲ್ಲಿ ಮುಂದಿನ ದಿನಗಳಲ್ಲಿ ಕ್ರಾಂತಿಯನ್ನೇ ಮಾಡುತ್ತವೆ ಎನ್ನುತ್ತವೆ ಐಟಿ ಕಂಪೆನಿಗಳು!

ಇದನ್ನೂ ಓದಿ: Mandolin Srinivas: ಸ್ಫೂರ್ತಿಪಥ ಅಂಕಣ: ಮ್ಯಾಂಡೊಲಿನ್ ಮೂಲಕ ಪೂರ್ವ ಮತ್ತು ಪಶ್ಚಿಮಗಳನ್ನು ಬೆಸೆದ ಯು. ಶ್ರೀನಿವಾಸ್!