Sunday, 10th November 2024

ನಗುವೆಂಬ ಕಿರಣದಲ್ಲಿ ಹೊಳೆವ ಚೆಲುವು !

ಯಶೋ ಬೆಳಗು

yashomathy@gmail.com

ಅದೊಂದು ಜೋಕ್ ಎನ್ನುವುದೂ ಅರ್ಥವಾಗದೆ, ಕೆಲವರಿಗೆ ಜೋಕ್ ಹೇಳಿದ ಮೇಲೂ ಹೂಗುಟ್ಟುತ್ತಲೇ ಇರ್ತಾರೆ. ಹಿಂದೆಲ್ಲ ತಮ್ಮ ಹಾವ-ಭಾವಗಳಿಂದಲೇ ನಗೆಯುಕ್ಕಿಸುತ್ತಿದ್ದ ಹಾಸ್ಯ ನಟನೆಯೆಲ್ಲ ಕ್ರಮೇಣ ದ್ವಂದ್ವಾರ್ಥಗಳಿಂದ ತುಂಬಿಹೋಗಿ ಹಾಸ್ಯವೆಂದರೇ ದ್ವಂದ್ವಾರ್ಥವೆನ್ನುವಂತಾಗಿ ಹೋಯ್ತು. ಹಾಸ್ಯಪ್ರಜ್ಞೆಯಿದ್ದವರಿಗೆ ಎಂಥ ಗಂಭೀರ ಸನ್ನಿವೇಶದಲ್ಲೂ ಹಾಸ್ಯಪ್ರಸಂಗಗಳು ಕಾಣುತ್ತವೆ.

ಸಾಮಾನ್ಯವಾಗಿ ಬರಹಗಾರರೆಲ್ಲ ಬಹಳ moody ಇರ್ತಾರೆ. ಯಾವಾಗ ಸಹಜವಾಗಿ ರ್ತಾರೆ, ಯಾವಾಗ ಚಿಂತನೆಯಲ್ಲಿ ರ್ತಾರೆ ಎನ್ನುವುದು ನಮ್ಮಂಥ ಸಾಮಾನ್ಯರಿಗೆ ಅಷ್ಟು ಸುಲಭಕ್ಕೆ ಅರಿವಿಗೆ ಬರುವುದಿಲ್ಲ. ಬರೆಯುತ್ತಾ ಕೂತಾಗ ರಿಂಗಾಗುವ ಮೊಬೈಲಿನ ಶಬ್ದ ಕೂಡ ಒಮ್ಮೊಮ್ಮೆ ಅಸಾಧ್ಯವಾದ ಕಿರಿಕಿರಿಯನ್ನುಂಟು ಮಾಡಿಬಿಡುತ್ತದೆ. ಅದಕ್ಕೇ ಬಹಳ ಸಲ ರವಿ Do not distub  ಬೊರ್ಡನ್ನು ಅವರ ಕ್ಯಾಬಿನ್ನಿನ ಬಾಗಿಲಿಗೆ ನೇತು ಹಾಕಿ ಬರೆಯಲಾರಂಭಿಸುತ್ತಿದ್ದರು.

ಪುಸ್ತಕಗಳ ಬರವಣಿಗೆಲ್ಲಿದ್ದಾಗಲಂತೂ ಹಗಲು-ರಾತ್ರಿಯೆನ್ನದೆ ನಿರಂತರವಾಗಿ ತಲೆತಗ್ಗಿಸಿ ಬರೆಯುತ್ತಾ ಕೂರುತ್ತಿದ್ದರು. ದಿನ ಗಟ್ಟಲೆ ಅವರ ಕ್ಯಾಬಿನ್ನಿನಿಂದ ಹೊರಬರುತ್ತಲೇ ಇರಲಿಲ್ಲ. ಆಗೆಲ್ಲ ಅವರೊಬ್ಬ ತಪಸ್ಸಿಗೆ ಕುಳಿತ ದೇವರುಷಿಯಂತೆ ಭಾಸ ವಾಗುತ್ತಿತ್ತು. ಬೆಳಗ್ಗೆ ಒಂಭತ್ತೂವರೆಯಾಗುತ್ತಿದ್ದಂತೆ ಎಲ್ಲ staf ಹಾಜರಿರಬೇಕು. ಸ್ವಲ್ಪ ತಡವಾದರೂ ಕಚೇರಿಯ ಬಾಗಿಲಿಗೆ ಬೀಗ ಹಾಕಿ ಬಿಡುತ್ತಿದ್ದರು. ಹಾಗಂತ ಸಂಜೆ ಆರು ಗಂಟೆಯಾದ ಕೂಡಲೇ ಎದ್ದು ಹೋಗುವಂತಿರಲಿಲ್ಲ.

ಇದ್ದ ಕೆಲಸ ಮುಗಿಸಿಯೇ ಹೋಗಬೇಕಿತ್ತು. ಹೋಗುವಾಗೊಮ್ಮೆ ಅವರಿಗೆ ತಿಳಿಸಿಯೇ ಹೋಗಬೇಕಿತ್ತು. ಸಾಮಾನ್ಯವಾಗಿ ಎಡಿಷನ್ ಪ್ರಿಂಟಿಗೆ ಹೋಗುವ ಸಮಯದಲ್ಲಿ ಹೆಚ್ಚಿನ ಕೆಲಸದ ಒತ್ತಡ ಇರುತ್ತಿತ್ತು. ಆನಂತರ ಓದುಗ- ಅಭಿಮಾನಿಗಳನ್ನು ಭೇಟಿ ಮಾಡುತ್ತ ಅವರೊಂದಿಗೆ ಮಾತುಕತೆ ಹರಟೆ, ಚರ್ಚೆಗಳು ನಡೆದಿರುತ್ತಿದ್ದವು. ಆಗಿನ್ನೂ ನಾನು ಕಚೇರಿಗೆ ಸೇರಿದ ಹೊಸತು. ಅವರ ಬಗ್ಗೆ ಯಾವ ವಿಷಯವೂ ತಿಳಿದಿರಲಿಲ್ಲ. ಅಂಕಣಕಾರರು, ವರದಿಗಾರರು, ಕಲಾವಿದರೆಲ್ಲ ವಾರಕ್ಕೊಮ್ಮೆ ಬಂದು ಹೋಗುತ್ತಿದ್ದರು.

ಉಳಿದಂತೆ ಕಚೇರಿಯಲ್ಲಿರುತ್ತಿದ್ದವರೇ ನಾವು ಮೂರ್ನಾಲ್ಕು ಜನ. ಪತ್ರಿಕೆ ಪ್ರಿಂಟಿಗೆ ಕಳಿಸಿದ ಮಾರನೆಯ ದಿನ ಉಳಿದವರಿಗೆಲ್ಲ ಸಾಕಷ್ಟು ಕೆಲಸವಿರುತ್ತಿತ್ತು. ಹೀಗಾಗಿ ಕಚೇರಿಯಲ್ಲಿ ನಾನೊಬ್ಬಳೇ ಉಳಿಯುವ ಪ್ರಸಂಗ ಎದುರಾಗುತ್ತಿತ್ತು. ಒಮ್ಮೆ ಅಂಥದ್ದೇ
ಸಂದರ್ಭ ಎದುರಾದಾಗ ನಾಳೆ ಬರುವಾಗ ನೀನೇ ಮನೆಯಿಂದ ಕಚೇರಿಯ ಬೀಗದಕೈ ತಂದುಬಿಡು. ಮನೆಯಲ್ಲಿ ನನ್ನ ಹೆಂಡತಿ ಇರುತ್ತಾಳೆ. ಅಪ್ಪಿತಪ್ಪಿಯೂ ಮಾತಾಡಿಸಲು ಹೋಗಬೇಡ. ರಾಕ್ಷಸಿ ಅವಳು. ಭಯಂಕರ ಸಿಡುಕಿ.

ತಾಡಿಸಿದರೆ ರೇಗ್ತಾಳೆ. ಸುಮ್ಮನೆ key ತಗೊಂಡು ಬಂದ್ಬಿಡು… ಹೇಳಿzಲ್ಲ ನೆನಪಿದೆ ತಾನೇ? ಅಂತ ಹೇಳ್ಬೇಕಾದ್ರೆ ಉಳಿದವರೆಲ್ಲ ಗೊಳ್ಳನೆ ನಕ್ಕಿದ್ದರು. ನಂಗೇನೂ ಅರ್ಥವಾಗದೆ ಸರಿ ಅಂತ ತಲೆಯಾಡಿಸಿ ಮಾರನೆಯ ದಿನ ಅವರ ಮನೆಗೆ ಹೋಗಿದ್ದೆ. ಮೊದಲೇ ಹೇಳಿದ್ರಲ್ಲ ಜಾಸ್ತಿ ಮಾತಾಡಬೇಡ ಅಂತ… ಹೀಗಾಗಿ ಹೆಚ್ಚಿಗೆ ಮಾತಾಡದೆ ಆಫೀಸ್ key ಬೇಕಿತ್ತು ಅಂತಷ್ಟೆ ಹೇಳಿ ಸುಮ್ಮನಾದೆ. ಅದಿನ್ಯಾರ ಬಳಿಯೋ ಇದೆ. ಸ್ವಲ್ಪಹೊತ್ತು wait ಮಾಡಿ. ತಂದುಕೊಡ್ತಾರೆ ಅಂದ್ರು. ಮಾತು ಮೃದುವಾಗೇ ಇದೆಯ? ಅನಿಸಿತಾ ದರೂ ಅವರು ಹೇಳಿದ್ದು ನೆನಪಿತ್ತಲ್ಲ? ಮತ್ಯಾಕೆ ಸುಮ್ಮನೆ ಇಲ್ಲದ ರಗಳೆ ಅಂತ ನಾನೂ ಹೆಚ್ಚಿಗೆ ಮಾತನಾಡಲು ಹೋಗಲಿಲ್ಲ.

ಆಗೆಲ್ಲ ಮೊಬೈಲುಗಳಿರಲಿಲ್ಲವಲ್ಲ? ಪುಸ್ತಕ ಓದುವ ಹವ್ಯಾಸವೂ ಹೆಚ್ಚಾಗಿ ಇರಲಿಲ್ಲ. ಆದ್ರೆ ಎಷ್ಟು ಹೊತ್ತೂ ಅಂತ ಸುಮ್ಮನೆ ಕೂರುವುದು? ಯಾವ್ದಾದ್ರೂ ಫೋಟೋ ಆಲ್ಬಮ್ ಇದ್ಯಾ? Key ತರೋವರ್ಗೂ ನೋಡ್ತಿರ್ತೀನಿ ಅಂದೆ. ನನ್ನನ್ನೊಮ್ಮೆ ನೋಡಿ ಅದಕ್ಕೇನೂ ಉತ್ತರಿಸದೆ ಅವರು ತಮ್ಮ ಕೆಲಸದಲ್ಲಿ ನಿರತರಾದರು. ನಾನೇನಾದರೂ ಕೇಳಬಾರದ್ದು ಕೇಳಿಬಿಟ್ಟೆನಾ? ಇದರಿಂದ ಸಿಟ್ಟೇನಾದ್ರೂ ಬಂದಿರಬಹುದಾ? ಅನ್ನುವ ಗೊಂದಲದ ನಡುವೆ ಚಡಪಡಿಸುತ್ತಿರುವ ಹೊತ್ತಿಗೆ ಆಪದ್ಬಾಂಧವನಂತೆ ಯಾರೋ ಕಚೇರಿಯ ಚಾವಿ ತಂದುಕೊಟ್ಟರು.

ಸದ್ಯ ಬದುಕಿದೆಯಾ ಬಡಜೀವವೇ ಅಂದುಕೊಂಡು ಅಲ್ಲಿಂದ ಕಾಲ್ಕಿತ್ತೆ. ಆದರೆ ದಿನಕಳೆದಂತೆ ಗೊತ್ತಾಯ್ತು ಅವರೆಷ್ಟು ಸಹನ ಶೀಲರು ಹಾಗೂ ಮೃದುಮನಸಿನ ಮಾತೃಹೃದಯದವರು ಅಂತ. ಬಾಸ್ ನನ್ನನ್ನ ಚೆನ್ನಾಗಿ ಬಕ್ರಾ ಮಾಡಿದ್ರು ಅಂತ.
ನಿಧ ನಿಧಾನಕ್ಕೆ ಅಲ್ಲಿನ ವಾತಾವರಣವನ್ನು ಅರ್ಥಮಾಡಿಕೊಳ್ಳುತ್ತಾ ಅದಕ್ಕೆ ಹೊಂದಿಕೊಳ್ಳತೊಡಗಿದೆ. ಒಮ್ಮೆ ಬರಬೇಕಾ ಗಿದ್ದ ಬಸ್ಸು ಸಮಯಕ್ಕೆ ಸರಿಯಾಗಿ ಬರದೆ ತಡವಾಗಿದ್ದರಿಂದ ಕಚೇರಿಗೆ ಬರುವುದು ಅರ್ಧಗಂಟೆಯಷ್ಟು ತಡವಾಗಿತ್ತು. ಆತುರಾತುರ ವಾಗಿ ಓಡೋಡುತ್ತಾ ಮೆಟ್ಟಿಲು ಹತ್ತುತ್ತಿದ್ದವಳಿಗೆ ಕಂಡದ್ದು ಟೇಬಲ್ಲಿನ ಸಮೇತ ಗೇಟಾಚೆಗೆ ಬಂದಿದ್ದ ಕಂಪ್ಯೂಟರು! ಅರೆ ಯಾಕೆ? ಎಂದು ಕೇಳಿದಾಗ ಸಮಯಕ್ಕೆ ಸರಿಯಾಗಿ ಬರಲಾಗಲಿಲ್ಲವೆಂದರೆ ಅಲ್ಲಿಂದಲೇ ಕೆಲಸ ಮಾಡಲು ಹೇಳಿದ್ದಾರೆ ಬಾಸ್! ಅಂದದ್ದು ಕೇಳಿ ಗರಬಡಿದವಳಂತಾಗಿದ್ದೆ.

ಅದರರ್ಥ ನಿಮ್ಮ ಅಗತ್ಯವಿಲ್ಲ ನೀವಿನ್ನು ಮನೆಗೆ ಹೋಗಬಹುದು ಎಂದು. ಏನು ಮಾಡುವುದು? ಈಗ ಮನೆಗೆ ಹೋದರೆ
ಎಲ್ಲ ವಿಷಯವನ್ನೂ ಮನೆಯಲ್ಲಿ ವಿವರಿಸಬೇಕಾಗುತ್ತದೆ. ಇದರಿಂದ ನನಗೇ ಅವಮಾನ! ಏನು ಮಾಡುವುದು? ಎಂದು ಯೋಚಿಸುತ್ತಿರುವಾಗಲೇ ಆಗತಾನೆ ರಿಲೀಸಾಗಿ ಭಾರೀ ಚರ್ಚೆಯಲ್ಲಿದ್ದ ಉಪೇಂದ್ರರ ಅ ಸಿನೆಮಾ ನೆನಪಾಯ್ತು. ಹೇಗಿದ್ರೂ ಇಷ್ಟೋಂದು ಸಮಯವಿದೆಯಲ್ಲ? ಸಿನೆಮಾ ಹೇಗಿದೆ ಅಂತ ನೋಡಬಹುದು. ಆದರೆ ಒಬ್ಬಳೇ ಹೋಗೋದು ಹೇಗೆ? ಅಂದು ಕೊಳ್ಳುತ್ತಾ ನನ್ನ ಕಸಿನ್‌ಗೆ ಫೋನ್ ಮಾಡಿದೆ.

ಅವಳು ಅ ಎಮ್.ಜಿ. ರೋಡಿನ ಒಂದು ಕಚೇರಿಯಲ್ಲಿ ಅಕೌಂಟೆಂಟ್ ಆಗಿದ್ದಳು. ಅಜ್ಜಿಗೆ ಬಹಳ ಸೀರಿಯಸ್ಸಾಗಿದೆ ಎಂದು ಹೇಳಿ ಅವಳೂ ರಜೆ ಹಾಕಿ ಇಬ್ಬರೂ ಅ ಸಿನೆಮಾ ನೋಡಿ I am God! God is great ಅನ್ನುವ ಸನ್ನಿವೇಶವನ್ನು ನೋಡಿ ಮನಸಾರೆ ನಕ್ಕು ಮನೆಗೆ ಹೋಗಿ ಮಾರನೆಯ ದಿನ ಐದು ನಿಮಿಷ ಮುಂಚಿತವಾಗಿಯೇ ಕಚೇರಿಯಲ್ಲಿದ್ದೆ. ಒಂದು ದಿನ ಕಂಪ್ಯೂಟರು ಆಚೆ ಹಾಕಿ ದ್ದಕ್ಕೆ ಸರಿಯಾಗಿ ಬುದ್ದಿ ಬಂದಿದೆ ಅನ್ನುವ ಸಮಾಧಾನ ಅವರಿಗೆ! ಮತ್ಯಾವಾಗ ಇವರಿಗೆ ಹೀಗೆ ಸಿಟ್ಟು ಬಂದು ಮತ್ತೆ ಕಂಪ್ಯೂಟರು ಆಚೆ ಹಾಕೋದು ಅನ್ನುವ ಲೆಕ್ಕಾಚಾರ ನನ್ನ ಮನದೊಳಗೆ.

ಆನಂತರದ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಅಥವಾ ಅದಕ್ಕಿಂತ ಮುಂಚಿತವಾಗಿ ಕಚೇರಿಯಲ್ಲಿರುವುದು ರೂಢಿಯಾಗಿ ಹೋಯಿತು. ಆ ದಿನವೂ ಹಾಗೆ ಹತ್ತು ನಿಮಿಷ ಬೇಗನೇ ಕಚೇರಿಯಲ್ಲಿದ್ದೆ. ಇನ್ನೂ ಯಾರ ಸುಳಿವೂ ಇರಲಿಲ್ಲ. ಕಚೇರಿಯ ಕಾಫಿ-ಟೀ ಮಾಡಿಕೊಳ್ಳಲು ಒಂದು ಪುಟ್ಟ ಕೋಣೆ ಇತ್ತು. ಹೇಗಿದ್ದರೂ ಬೇಗ ಬಂದಿದ್ದಾನಲ್ಲ? ಸರಿ ಒಂದು ಚೆಂದದ ಕಾಫಿ ಮಾಡಿ ಕೊಂಡು ಕುಡಿಯುವಾ? ಅಂತನ್ನಿಸಿ ಅವರೇ ಹೇಳಿಕೊಟ್ಟಿದ್ದ ರೀತಿಯಲ್ಲಿ ತುಂಬ ಬೆಳ್ಳಗೂ ಅಲ್ಲದ ಕರ್ರ‍ಗೂ ಅಲ್ಲದ ಬ್ರೌನ್ ಕಾಫಿಯನ್ನು ಸ್ವಲ್ಪ ಕಡಿಮೆ ಸಕ್ಕರೆ ಹಾಕಿ ದೇವತೆಗಳು ಮಾತ್ರ ಕುಡಿಯುವಂಥ ಅದ್ಭುತವಾದ ಕಾಫಿ ಮಾಡಿಕೊಂಡು
ಕುಡಿಯುತ್ತಾ ಕುಳಿತಿದ್ದೆ.

ಅಷ್ಟರಲ್ಲಿ ಆಗತಾನೆ ಹೊಸದಾಗಿ ಸೇರಿದ್ದ ಹುಡುಗಿ ನನ್ನನ್ನು ನೋಡಿದವಳೇ ಮೇಡಮ್ ನಮಸ್ತೆ ನಿಮ್ಮನ್ನು ಎಲ್ಲೋ ನೋಡಿದ ಹಾಗಿದೆಯಲ್ಲ? ಹಾ ಈಗ ನೆನಪಾಯ್ತು. ನೀವು ಬರೆಯುವ article ಎಲ್ಲ ಓದಿದೀನಿ. ಬಹಳ ಚೆನ್ನಾಗಿ ಬರೀತೀರ. ಫೋಟೋಲಿ ಮಾತ್ರ ಚೆನ್ನಾಗಿದೀರ ಅಂದ್ಕೊಂಡಿದ್ದೆ. ನಿಜಕ್ಕೂ ನೀವು ಬಹಳ ಚೆನ್ನಾಗಿದ್ದೀರ. ಆದ್ರೆ ಹೆಸರೇ ನೆನಪಾಗ್ತಿಲ್ಲ ಅಂತೆಲ್ಲ ಹೇಳುತ್ತಿ ದ್ದಾಗ ಅವಳ ಮಾತನ್ನು ತುಂಡರಿಸಿ thank you, ಶೊಭಾ ಡೇ ಅಂತ ನನ್ನ ಹೆಸರು. ಆರು ಜನ ಮಕ್ಕಳು ನಂಗೆ…. (ಬಹುಶಃ ನನಗಾಗ ಅಂದಾಜು ಇಪ್ಪತೈದು-ಇಪ್ಪತ್ತಾರರ ವಯಸ್ಸಿದ್ದರಬಹುದು) ಅಂದ ಕೂಡಲೇ ಅವಳ ಸಂತೋಷಕ್ಕೆ ಕೊನೆಯೇ ಇಲ್ಲದಂತಾಯ್ತು. ಆರು ಜನ ಮಕ್ಕಳಾ? ನಂಬೋಕೇ ಆಗಲ್ಲ ಮೇಡಂ… ನೀವಿನ್ನೂ ಎಷ್ಟು ಯಂಗ್ ಆಗಿ ಕಾಣ್ತೀರಿ.

ನಿಜಕ್ಕೂ great ನೀವು ಅಂತೆಲ್ಲ ಹೊಗಳುವಷ್ಟರಲ್ಲಿ ಉಳಿದ staf ಎಲ್ಲ ಬಂದು ನಮ್ಮ ಸಂಭಾಷಣೆಯನ್ನು ಕೇಳಿ ಮುಸಿಮುಸಿ ನಗಲಾರಂಭಿಸಿದಾಗ ಸತ್ಯಾಂಶ ತಿಳಿದು ಹುಡುಗಿ ಏನ್ ಮೇಡಮ್ ನೀವೂ…. ಎಂದು ನಗುತ್ತಾ ಎದ್ದು ಹೋದಳು. ಎಲ್ಲ ಸರಿ-ತಪ್ಪು ಸಿಟ್ಟು-ಸೆಡವುಗಳ ನಡುವೆ ಇಂಥ ಹತ್ತು ಹಲವು ಪ್ರಸಂಗಗಳು ನೆನಸಿಕೊಂಡಾಗ ಈಗಲೂ ಅಷ್ಟೇ ನಗು ಉಕ್ಕಿ ಬರುತ್ತದೆ. ಒಂದೇ ಜೋಕನ್ನ ಹತ್ತು ಬಾರಿ ಹೇಳಿದರೂ ಯಶೋಮತಿ ಮೊದಲ ಬಾರಿ ನಕ್ಕಷ್ಟೇ ನೂರನೇ ಬಾರಿ ಹೇಳಿದಾಗಲೂ ನಗ್ತಾರೆ ಎನ್ನುತ್ತ ಎಲ್ಲರೂ ತಮಾಷೆ ಮಾಡ್ತಿದ್ರು.

ಅದೊಂದು ಜೋಕ್ ಎನ್ನುವುದೂ ಅರ್ಥವಾಗದೆ, ಕೆಲವರಿಗೆ ಜೋಕ್ ಹೇಳಿದ ಮೇಲೂ ಹೂಗುಟ್ಟುತ್ತಲೇ ಇರ್ತಾರೆ. ಹಿಂದೆಲ್ಲ ತಮ್ಮ ಹಾವ-ಭಾವಗಳಿಂದಲೇ ನಗೆಯುಕ್ಕಿಸುತ್ತಿದ್ದ ಹಾಸ್ಯ ನಟನೆಯೆಲ್ಲ ಕ್ರಮೇಣ ದ್ವಂದ್ವಾರ್ಥಗಳಿಂದ ತುಂಬಿ ಹೋಗಿ ಹಾಸ್ಯ ವೆಂದರೇ ದ್ವಂದ್ವಾರ್ಥವೆನ್ನುವಂತಾಗಿ ಹೋಯ್ತು. ಹಾಸ್ಯಪ್ರಜ್ಞೆಯಿದ್ದವರಿಗೆ ಎಂಥ ಗಂಭೀರ ಸನ್ನಿವೇಶದಲ್ಲೂ ಹಾಸ್ಯಪ್ರಸಂಗ ಗಳು ಕಾಣುತ್ತವೆ. ಯಾವ ಕಲ್ಮಶವೂ ಇರದ ಮಗುವಿನ ನಗೆಯದೆಷ್ಟು ಚೆಂದ! ಇನ್ನು ಸೌಂದರ್ಯದ ಪ್ರತೀಕವಾದ ಹೆಣ್ಣಿಗೆ ನಗೆಯ ಲೇಪನವಿದ್ದರಂತೂ ಸ್ವರ್ಗಕ್ಕೇ ಕಿಚ್ಚು! ಆದ್ದರಿಂದ ಸಾಧ್ಯವಾದಷ್ಟೂ ಕಷ್ಟಗಳನ್ನು ಮರೆತು ನಗುತ್ತಾ ನಗಿಸುತ್ತಾ ಈ ಬದುಕನ್ನು ಸುಂದರ ಹಾಗೂ ಸಹನೀಯಗೊಳಿಸಿಕೊಳ್ಳೋಣ.