ಶಶಾಂಕಣ
shashidhara.halady@gmail.com
ಈಗ ಬೆಂಗಳೂರಿನ ತಾಪಮಾನ ೩೭ ಡಿಗ್ರಿ ಸೆಲ್ಷಿಯಸ್ ಎನ್ನುತ್ತಿದ್ದಾರೆ! ರಾಯಚೂರು, ವಿಜಯಪುರ ಮುಂತಾದೆಡೆ ಇನ್ನೂ ಜಾಸ್ತಿ! ಜತೆಗೆ, ಈ ವರ್ಷ ಬಿಸಿಲಿನ ಝಳ, ವಾತಾವರಣದ ಬಿಸಿ, ಬಿಸಿಗಾಳಿಯ ಲಕ್ಷಣಗಳು ಜಾಸ್ತಿ. ಬಹಳ ದಿನ ಗಳಿಂದ ಮಳೆಯಾಗದಿರುವುದರಿಂದಾಗಿ, ನೆಲದಲ್ಲಿನ ನೀರಿನಂಶ, ತಂಪು ಎಲ್ಲವೂ ಬೇಗನೆ ಆವಿಯಾಗಿರುವುದರಿಂದ ಈ ಸ್ಥಿತಿ. ಬೆಂಗಳೂರಿನಂಥ ತಂಪು ನಗರದಲ್ಲೂ ಈಗಿನ ದಿನಗಳಲ್ಲಿ ಸನ್ ಸ್ಟ್ರೋಕ್ ಆಗುವ ಸಾಧ್ಯತೆಯಿದೆ.
ವಿಪರೀತ ತಾಪಮಾನದಿಂದಾಗುವ ಪರಿಣಾಮಗಳು ಹಲವು. ಮನುಷ್ಯನಿಗಂತೂ ಬಿಸಿಲು ಜಾಸ್ತಿಯಿದ್ದರೂ ಕಷ್ಟ, ಮಳೆ ಜಾಸ್ತಿ ಬಂದರೂ ಕಷ್ಟ. ಸತತವಾಗಿ ಕಳೆದ ಹಲವು ದಶಕಗಳಿಂದ ಜಗತ್ತಿನಾದ್ಯಂತ ನಡೆಸುತ್ತಿರುವ ಕಾಡಿನ ನಾಶ, ಪರಿಸರದ ನಾಶದಿಂದಾಗಿ ‘ಗ್ಲೋಬಲ್ ವಾರ್ಮಿಂಗ್’ ಪರಿಣಾಮ ಉಂಟಾಗಿ, ವಾತಾವರಣದಲ್ಲಿ ಏರುಪೇರಾಗುತ್ತಿದೆ. ಅತಿಯಾದ ಬಿಸಿಲಿನಿಂದ ಮನುಷ್ಯನಿಗೆ ಸಮಸ್ಯೆಯಾದ ರೀತಿಯಲ್ಲೇ, ಪ್ರಾಣಿ ಪಕ್ಷಿಗಳಿಗೂ ಸಮಸ್ಯೆಯಾಗುತ್ತಿರುವುದು ಸಹಜ. ನಮ್ಮ ಹಳ್ಳಿಯಲ್ಲಿ ಇಂಥ ಬಿಸಿಯಾದ ದಿನಗಳಲ್ಲಿ ತಲೆದೋರುವ ಒಂದು ಸಮಸ್ಯೆ ಎಂದರೆ, ನೆಲದಿಂದ ಹೊರಬರುವ ಉರಗಗಳು!
ಬಿಸಿಲಿನಿಂದ ನೆಲ ಕಾದಂತೆಲ್ಲಾ, ನೆಲದೊಳಗೆ ಶಿಶಿರನಿದ್ರೆ ಮಾಡುತ್ತಿರುವ ಅಥವಾ ತಮ್ಮ ತಾಣದಲ್ಲಿ ವಿರಮಿಸುತ್ತಿರುವ ಹಾವು-ಚೇಳುಗಳು ಮೇಲ್ಮೈಗೆ ಬರುವುದುಂಟು. ಜನರು ಒಂದು ಪ್ರದೇಶದಿಂದ ಇನ್ನೊಂದಕ್ಕೆ ಹೋಗಲು ನಡಿಗೆಯೇ ಪ್ರಧಾನವಾಗಿದ್ದ ಹಿಂದಿನ ದಿನಗಳಲ್ಲಿ, ಬೇಸಗೆಯ ಸಮಯದಲ್ಲಿ ಹೀಗೆ
ಹೊರಬರುವ ಹಾವುಗಳಿಂದಾಗಿ, ಸಾಕಷ್ಟು ಅಪಾಯಕಾರಿ ಸನ್ನಿವೇಶಗಳೂ ಎದುರಾಗುತ್ತಿದ್ದುದುಂಟು. ಪಾಪ, ಆ ಹಾವುಗಳಿಗೆ ತಾವು ಸಂಚರಿಸುವ ದಾರಿಯು ಮನುಷ್ಯನ ದಾರಿ ಎಂದು ಹೇಗಾದರೂ ಗೊತ್ತಾಗಬೇಕು? ತಮ್ಮ ಪಾಡಿಗೆ ತೆವಳಿಕೊಂಡು ಹೋಗುತ್ತಿರುವಾಗ ಮನುಷ್ಯನು ನೋಡದೆ ಅವುಗಳ ಮೇಲೆ ಕಾಲಿಟ್ಟರೆ, ಅವು ಕಚ್ಚುತ್ತಿದ್ದುದುಂಟು. ಆ ದಾರಿಯಲ್ಲಿ ನಡೆಯುತ್ತಿದ್ದವನ ಗ್ರಹಚಾರ ನೆಟ್ಟಗಿದ್ದರೆ, ಅದು ವಿಷರಹಿತ ಹಾವು ಆಗಿರಬಹುದು; ಆದರೆ, ವಿಷಕಾರಿ ಹಾವು ಕಚ್ಚಿದರೆ, ಪ್ರಾಣಾಪಾಯದ ಸಂದರ್ಭ ಇದ್ದದ್ದೇ.
ಕೆಲವು ದಶಕಗಳ ಹಿಂದಿನ ಆ ದಿನಗಳಲ್ಲಿ ಸನಿಹದಲ್ಲಿ ಆಸ್ಪತ್ರೆಗಳೂ ಇರಲಿಲ್ಲ, ಅಲ್ಲಿ ಆಂಟಿ ವೆನಮ್ ಇಂಜಕ್ಷನ್ ಸಹ ಇರಲಿಲ್ಲವಲ್ಲ. ಇಂಥದೊಂದು ದುರಂತಕ್ಕೆ ಒಮ್ಮೆ ಸಾಕ್ಷಿಯಾಗಿದ್ದೆ. ನಾವು ಆರೆಂಟು ಮಕ್ಕಳು ಶಾಲೆ ಮುಗಿಸಿ, ಸಂಜೆ ಮನೆಯ ಮುಂದಿನ ಅಗೇಡಿಯಲ್ಲಿ ಚಿನ್ನಿದಾಂಡು ಆಡುತ್ತಿದ್ದೆವು. ಕತ್ತಲಾಗುವ ಸಮಯ. ಯಾರೋ ಹೊಡೆದ ಚಿನ್ನಿಯು, ಅಗೇಡಿಯ ಅಂಚಿನ ತೋಡಿನತ್ತ ಹೋಗಿ ಬಿತ್ತು. ಅದು ಬೇಸಗೆಯಾಗಿದ್ದರಿಂದ ಅಗೇಡಿಯಲ್ಲಾಗಲೀ ತೋಡಿನಲ್ಲಾಗಿಲೀ ನೀರಿರಲಿಲ್ಲ. ಆದರೂ, ತೋಡಿನ ಉದ್ದಕ್ಕೂ ಹಳು, ಮುಂಡುಕನ ಗಿಡ, ಕುಸುಬನ ಗಿಡ ಬೆಳೆದಿದ್ದವು. ನಮ್ಮ ಜತೆ ಆಡುತ್ತಿದ್ದ, ಪಕ್ಕದ ಮನೆಯ ಸುಬ್ಬಣ್ಣ ಚಿನ್ನಿಯನ್ನು ಹುಡುಕುತ್ತಾ ಆ ತೋಡಿನಂಚಿಗೆ ಹೋದ. ‘ಹಾವು ಕಚ್ಚಿತೋ’ ಎಂದು ಕೂಗುತ್ತಾ ಅವನು ವಾಪಸು ಬಂದಿದ್ದಷ್ಟೇ ಗೊತ್ತು.
ನಾವೆಲ್ಲರೂ ಮನೆಗೆ ಓಡಿದೆವು. ಪಂಡಿತರನ್ನು ಕರೆಸಿದರು. ಅವರು ಸುಬ್ಬಣ್ಣನನ್ನು ಕಾಲಿನ ಮೇಲೆ ಮಲಗಿಸಿಕೊಂಡು, ನಾರು-ಬೇರಿನ ರಸವನ್ನು ಕುಡಿಸುತ್ತಿದ್ದ ದೃಶ್ಯ ನೆನಪಿದೆ. ಆಗಿನ್ನೂ ವಿದ್ಯುತ್ ಸಂಪರ್ಕ ಇರಲಿಲ್ಲ; ಚಿಮಿಣಿ ಬೆಳಕಿನಲ್ಲೇ ಸುಬ್ಬಣ್ಣ ಮಲಗಿದ್ದು, ನಂತರ ಆತ ನಮ್ಮನ್ನಗಲಿದ್ದು ಎಲ್ಲವೂ ನೆನಪಿದೆ. ಹಳ್ಳಿಯ ಜೀವನ ಬಹುಸುಂದರ ಎಂಬುದರಲ್ಲಿ ಅನುಮಾನವಿಲ್ಲವಾದರೂ, ದೂರದ ಗ್ರಾಮೀಣ ಪ್ರದೇಶದ ಜನರು ಇಂಥ ಹಲವು ರಿಸ್ಕ್ ಗಳನ್ನು ಎದುರಿಸುತ್ತಲೇ ಜೀವನ
ಸಾಗಿಸಬೇಕಾದ ಅನಿವಾರ್ಯತೆ ಇತ್ತು. ಈಚಿನ ದಶಕಗಳಲ್ಲಿ ನಮ್ಮೂರಿನಲ್ಲಿ ಆಸ್ಪತ್ರೆಯಾಗಿರುವುದರಿಂದ, ಅಷ್ಟರಮಟ್ಟಿಗೆ ಪರ ವಾಗಿಲ್ಲ.
ಬೇಸಗೆಯಲ್ಲಿ ನೆಲದ ತಾಪಮಾನ ಏರುವುದರಿಂದಾಗಿ, ಹಾವು ಮುಂತಾದವು ನೆಲದ ಮೇಲೆ ಓಡಾಡುವಾಗ, ಇಂಥ ದೊಂದು ರಿಸ್ಕ್ ಈಗಲೂ ಇದೆ.
ಒಂದು ರೀತಿಯಲ್ಲಿ ನೋಡಿದರೆ, ನಮ್ಮ ಮನೆಯಂಗಳವು ಹಾವು-ಕಪ್ಪೆಗಳ ಪ್ಲೇಗ್ರೌಂಡ್ ಎನ್ನಬಹುದು! ಇಲ್ಲಿ ‘ಪ್ಲೇ’ ಎಂದರೆ, ಕಪ್ಪೆಯು ಹಾವಿನೊಂದಿಗೆ ಆಡಲೇಬೇಕಾದ ಜೀವನ್ಮರಣದ ಆಟ. ಮನೆಯೆದುರಿನ ಅಂಗಳವನ್ನು ಮಣ್ಣುಹಾಕಿ ಚೆನ್ನಾಗಿ ಒರೆದಿರುತ್ತಿದ್ದರು; ಅದರ ಒಂದು ತುದಿಯಲ್ಲಿ ಬಗ್ಗುಬಾವಿ. ಒರಟು ಕಲ್ಲುಗಳನ್ನೇ ಜೋಡಿಸಿ ಅದಕ್ಕೆ ಕಟ್ಟ ಣೆ ಮಾಡಲಾಗಿದ್ದರಿಂದ, ಆ ಕಲ್ಲುಗಳ ಸಂದಿಯಲ್ಲಿ ಹತ್ತಿಪ್ಪತ್ತು ಒಳ್ಳೆ ಹಾವುಗಳು ವಾಸಿಸುತ್ತಿದ್ದವು! ಅದೇ ಬಾವಿಯಿಂದ ನಾವು
ಕುಡಿಯುವ ನೀರನ್ನು ತರುತ್ತಿದ್ದುದು ನಿಜವಾದರೂ, ಒಳ್ಳೆ ಹಾವುಗಳು ನೀರು ಎತ್ತಲು ಬಂದವರಿಗೆ ಏನೂ ಮಾಡುತ್ತಿರಲಿಲ್ಲ. ಆದರೆ, ಬಡಪಾಯಿ ಕಪ್ಪೆಗಳು
ಸುಳಿದಾಡಿದರೆ ಹಿಡಿದು ತಿನ್ನಲು ಸದಾ ಕಾಯುತ್ತಿದ್ದವು. ಅಂಗಳದ ಒಂದು ತುದಿಯಿಂದ ಕುಪ್ಪಳಿಸುತ್ತಾ ಬರುವ ಕಪ್ಪೆಯು ಇನ್ನೊಂದು ತುದಿಗೆ, ಅಂದರೆ ನಮ್ಮ ಮನೆಯತ್ತ ಬರುವುದು ರೂಢಿ. ಅದನ್ನು ಬೆನ್ನತ್ತುತ್ತಿದ್ದ ಹಾವು, ಮನೆಯ ಬಾಗಿಲಿನ ತನಕವೂ ಬರುತ್ತಿತ್ತು!
ಕಪ್ಪೆ ಬೇಗ ಬೇಗನೆ ಕುಪ್ಪಳಿಸುತ್ತಾ, ಅಡುಗೆಮನೆಯ ಬಾಗಿಲಿನತ್ತ ಧಾವಿಸುತ್ತಿತ್ತು. ನಾವು ಕೋಲು ಹಿಡಿದು ‘ಹಚಾ ಹಚಾ’ ಎಂದು ಅದನ್ನು ಓಡಿಸುತ್ತಿದ್ದೆವು! ಅಡುಗೆ ಮನೆಯೊಳಗೆ ಸೇರಿಕೊಂಡರೆ ಆ ಹಾವಿನಿಂದ ರಕ್ಷಣೆ ಎಂದು ಅದರ ಭಾವನೆ ಇರಬಹುದು. ಒಮ್ಮೊಮ್ಮೆ ಅದರ ಉಪಾಯ ಫಲಿಸುತ್ತಿರಲಿಲ್ಲ; ಬೆನ್ನತ್ತಿದ
ಹಾವು, ಕಪ್ಪೆಯನ್ನು ಗಬಕ್ಕನೆ ಕಚ್ಚಿಕೊಂಡು ತನ್ನ ಠಾವಾದ ಬಾವಿಯ ಕಲ್ಲುಗಳ ಸಂದಿಗೆ ಓಡುತ್ತಿತ್ತು. ಆಗ, ಅದರ ಬಾಯಲ್ಲಿ ಸಿಕ್ಕಿಕೊಂಡ ಕಪ್ಪೆಯ ‘ಓಂಕ್
ವಾಂಕ್’ ಎಂದು ಆರ್ತನಾದ ಮಾಡುವಾಗ ಅದನ್ನು ನೋಡಿದ ನಮ್ಮಂಥ ಮಕ್ಕಳಿಗೆ ಕನಿಕರ ಮೂಡುತ್ತಿತ್ತು. ‘ಅಂಥ ಕನಿಕರದ ಅಗತ್ಯವಿಲ್ಲ, ಸುಮ್ಮನಿರಿ, ಅದು ಹಾವಿನ ಆಹಾರ’ ಎಂದು ಹಿರಿಯರು ಹೇಳಿ, ಇವೆಲ್ಲಾ ಈ ಗ್ರಾಮೀಣ ಪ್ರಪಂಚದ ವಿದ್ಯಮಾನಗಳು ಎಂದು ಸುಮ್ಮನಾಗಿಸುತ್ತಿದ್ದರು. ತನ್ನ ಆಹಾರವನ್ನು ಹಿಡಿಯುವ ಹಾವಿನ ಈ ಯತ್ನಕ್ಕೆ ತಡೆಯೊಡ್ಡುವುದು ಸರಿಯಲ್ಲ ಎಂಬುದು ಅವರ ಭಾವ. ಇಕಾಲಜಿಯ ಸರಪಣಿಯ ವಿದ್ಯಮಾನಗಳಲ್ಲಿ ಇದು ಸಹಜ ಮತ್ತು ವಾಸ್ತವ ಅಲ್ಲವೆ?
ಹಾವು ಬೆನ್ನತ್ತಿದಾಗ ಕಪ್ಪೆಯು ಅಡುಗೆ ಮನೆ ಯತ್ತ ಧಾವಿಸುತ್ತಿದ್ದುದು ಇಂದಿಗೂ ನನಗೊಂದು ವಿಸ್ಮಯವೇ.
ಬಾಗಿಲಿನ ರೂಪ, ಮನೆಯೊಳಗಿನ ನಸುಬೆಳಕನ್ನು ಗುರುತಿಸಿ ಅವು ಬರುತ್ತಿದ್ದವೋ ಏನೋ. ಆದರೂ, ಇಲ್ಲಿ ಇನ್ನೊಂದು ಕುತೂಹಲಕಾರಿ ವಿಚಾರ ನೆನಪಾಗುತ್ತಿದೆ. ಬೇಸಗೆಯ ತಾಪಮಾನಕ್ಕೆ, ಮಜ್ಜಿಗೆ ಬೇಗನೆ ಹುಳಿಯಾಗುತ್ತದೆ ಯಲ್ಲವೇ? ಇದನ್ನೆದುರಿಸಲು ನಮ್ಮ ಮನೆಯಲ್ಲಿ ಒಂದು ಉಪಾಯ ಮಾಡುತ್ತಿದ್ದರು. ದೊಡ್ಡ ಬಾಯಿಯ ಪಾತ್ರೆಯಲ್ಲಿ ನೀರನ್ನು ತುಂಬಿ, ಅದರೊಳಗೆ ಮಜ್ಜಿಗೆಯ ಪಾತ್ರೆಯನ್ನಿಡುತ್ತಿದ್ದರು. ಇದರಿಂದ ಸ್ವಲ್ಪ ಅನುಕೂಲವಾಗುತ್ತಿತ್ತು; ತಣ್ಣೀರಿ ನಲ್ಲಿ ಇದ್ದ ಮಜ್ಜಿಗೆ ಕಡಿಮೆ ಹುಳಿಯಾಗುತ್ತಿತ್ತು.
ನೀರು ಹಾಕಿದ ಆ ದೊಡ್ಡ ಪಾತ್ರೆಯನ್ನು ಒಂದು ಮೂಲೆಯಲ್ಲಿ ಇಡುತ್ತಿದ್ದರು. ತಮಾಷೆಯೆಂದರೆ, ಆ ನೀರಿನ ಬೋಗುಣಿಯನ್ನು ಕಪ್ಪೆಯೊಂದು ಪತ್ತೆ ಮಾಡಿ, ಪ್ರತಿ
ರಾತ್ರಿ ಬಂದು ಅದರೊಳಗೆ ಕುಳಿತುಕೊಳ್ಳುತ್ತಿತ್ತು. ಅದರ ಪಾಡಿಗೆ ಅದು ಇರುತ್ತದೆ ಎಂದು ಮನೆಯವರು ಸುಮ್ಮನಿರುತ್ತಿದ್ದುದೂ ಉಂಟು. ಒಂದು ರಾತ್ರಿ ಕಪ್ಪೆಯೊಂದು ಬಂದು ಆ ನೀರಿನ ಬೋಗುಣಿಯಲ್ಲಿ ಕುಳಿತುಬಿಟ್ಟಿತ್ತು! ಅದರೊಳಗೆ ಮಜ್ಜಿಗೆಯ ಪಾತ್ರೆ ಇಡಬೇಕಲ್ಲ. ‘ಆ ಕಪ್ಪೆಯನ್ನು ಮನೆಯೆದುರಿನ ಅಂಗಳದಾಗ ಎಸೆದು ಬಾ’ ಎಂದರು ನಮ್ಮ ಅಮ್ಮ. ಕುಳಿತಿದ್ದ ಕಪ್ಪೆಯ ಸಮೇತ ಆ ನೀರಿನ ಬೋಗುಣಿಯನ್ನು ಎತ್ತಿಕೊಂಡು ಹೊರಬಂದು ಅಲ್ಲೊಂದು ತೋಡಿಗೆ ಸುರಿದೆ.
ಬೇಸಗೆಯಾಗಿದ್ದರಿಂದ ತೋಡಿನಲ್ಲಿ ನೀರಿರಲಿಲ, ಕಪ್ಪೆ ಕುಪ್ಪಳಿಸುತ್ತಾ ಓಡಿಹೋಯಿತು. ಬೋಗುಣಿ ಯಲ್ಲಿ ಇನ್ನಷ್ಟು ನೀರು ತುಂಬಿ, ಮಜ್ಜಿಗೆ ಪಾತ್ರೆಯನ್ನು ಇಟ್ಟರು. ಏನಾಶ್ಚರ್ಯ! ಮರುದಿನ ಬೆಳಗ್ಗೆ ನೋಡಿದರೆ, ಆ ಕಪ್ಪೆಯು ಬೋಗುಣಿಯಲ್ಲಿ ಕುಳಿತಿದೆ!
ರಾತ್ರಿಯ ಕತ್ತಲಿನಲ್ಲಿ, ದಾರಿ ಹುಡುಕಿಕೊಂಡು ಅದು ವಾಪಸಾಗಿದೆ. ಜತೆಗೆ, ಆ ಬೋಗುಣಿಯ ನೀರು ತನ್ನ ಠಾವು ಎಂದು ಠಸ್ಸೆಯೊತ್ತಿ, ಅಲ್ಲೇ ನೆಮ್ಮದಿಯಾಗಿ ಕುಳಿತಿದೆ! ‘ಈ ಕಪ್ಪೆಯದೊಂದು ರಾಮಾಯಣ; ದೂರ ಎಸೆದರೂ, ಮರುದಿನ ಬೆಳಗ್ಗೆ ನೋಡುವಾಗ ಬಂದು ನೀರಿನಲ್ಲಿ ಕುಳಿತಿರುತ್ತದೆ’ ಎಂದು ಮನೆಯವರು
ಗೊಣಗುವುದು ಸಾಮಾನ್ಯವಾಗಿತ್ತು. ಹಾಗಂತ ಕಪ್ಪೆಯ ಈ ಕುತೂಹಲಕಾರಿ ವರ್ತನೆ ವರ್ಷದ ಎಲ್ಲಾ ದಿನಗಳಲ್ಲೂ ಇರುತ್ತಿತ್ತು ಎಂದಲ್ಲ, ಕೆಲವು ತಿಂಗಳುಗಳಲ್ಲಿ ಮಾತ್ರ ಅದು ಮನೆಯಲ್ಲಿನ ನೀರಿನ ಪಾತ್ರೆಯನ್ನು ಹುಡುಕಿಕೊಂಡು ಬರುತ್ತಿತ್ತು!
ಬೇಸಗೆಯಲ್ಲಿ ಹಾವುಗಳು ನಮ್ಮ ಹಳ್ಳಿಮನೆಯೊಳಗೂ ಬರುತ್ತಿದ್ದುದು ಮಾಮೂಲು. ಎಸ್‌ಎಸ್ ಎಲ್‌ಸಿ ಪರೀಕ್ಷೆಗೆಂದು ಓದಲು ೧ ತಿಂಗಳು ರಜೆ ಕೊಡುತ್ತಿದ್ದರಲ್ಲ, ಆಗ ಉಪ್ಪರಿಗೆಯಲ್ಲಿ ಕುರ್ಚಿ ಹಾಕಿಕೊಂಡು ಓದುತ್ತಾ ಕೂರುವುದು ನನ್ನ ಅಭ್ಯಾಸವಾಗಿತ್ತು. ಆ ಜಾಗದ ಪಕ್ಕದಲ್ಲೊಂದು ಪುಟ್ಟ ಕಿಟಕಿ. ಅಲ್ಲೇನೋ ಸರಿದಂತಾ ಯಿತು. ಏನೆಂದು ನೋಡಿದರೆ, ನಾಗರಹಾವು! ‘ಅಯ್ಯೋ ಹಾವು ಬಂದಿದೆ’ ಎಂದು ಕೂಗಿದೆ. ‘ಅದು ನಿನಗೇನೂ ಮಾಡೊಲ್ಲ, ನಿನ್ನ ಪಾಡಿಗೆ ನೀನು ಓದಿಕೊ’ ಎಂದರು ಅಮ್ಮಮ್ಮ. ನಮ್ಮ ಉಪ್ಪರಿಗೆ ಮಾಡಿನ ಜಂತಿಯ ಸಂದಿಯಲ್ಲಿದ್ದ ಇಲಿಗಳನ್ನು ಹಿಡಿದು ತಿನ್ನಲು ಆ ಹಾವು ಬಂದಿತ್ತು; ಅವು ಹೀಗೆ ಓಡಾಡುವುದು ಮಾಮೂಲು ಎಂಬುದೇ ನಮ್ಮ ಹಿರಿಯರ ಅಭಿಪ್ರಾಯ. ಅಂದು ಬಂದಿದ್ದ ಹಾವು ನಿಧಾನವಾಗಿ ಅತ್ತಿತ್ತ ಸರಿದು, ಅಲ್ಲೇ ಒಂದು ವೈರಿನ ಮೇಲಿದ್ದ ಸೂರಕ್ಕಿಯ ಗೂಡಿನತ್ತ ಧಾವಿಸಿತು!
ಪಾಪ, ಮೊಟ್ಟೆ ಇದ್ದವೋ ಏನೋ, ಎರಡು ಸೂರಕ್ಕಿಗಳು ಆ ಹಾವನ್ನು ನೋಡುತ್ತಾ, ಗೂಡಿನ ಬಳಿ ಆರ್ತನಾದ ಮಾಡುವಂತೆ ಕೂಗುತ್ತಿದ್ದವು. ಹೀಗೆ ಒಂದು ನಾಗರಹಾವು ಆಗಾಗ ನಮ್ಮ ಮನೆಯ ಮೇಲೆಕ್ಕೇರಿ, ಇಲಿಗಳನ್ನು ಹುಡುಕುತ್ತಾ ಓಡಾಡುತ್ತಿತ್ತು. ಪ್ರತಿ ಬೇಸಗೆಯಲ್ಲಿ ೨-೩ ಬಾರಿಯಾದರೂ ಹಾವಿನ ಗೃಹಸಂಚಾರ ಇರುತ್ತಿತ್ತು. ನಮ್ಮೂರಿನವರು ಯಾವ ಕಾರಣಕ್ಕೂ ನಾಗರಹಾವನ್ನು ಹೊಡೆಯುತ್ತಿರಲಿಲ್ಲವಾದ್ದರಿಂದ, ನಮ್ಮ ಹಳ್ಳಿ ಅವುಗಳ ಸಾಮ್ರಾಜ್ಯವಾಗಿತ್ತು. ಆ ಹಾವುಗಳನ್ನು ಪೂಜಿಸುತ್ತಿದ್ದ ಹಳ್ಳಿಯವರು, ಅವಕ್ಕೆ ರಾಜಮರ್ಯಾದೆ ನೀಡುತ್ತಿದ್ದುದಂತೂ ನಿಜ.