Sunday, 15th December 2024

ತುರ್ತು ಪರಿಸ್ಥಿತಿಯ ಹುತಾತ್ಮೆ ಸ್ನೇಹಲತಾ ರೆಡ್ಡಿ

ವೀಕೆಂಡ್ ವಿತ್ ಮೋಹನ್

camohanbn@gmail.com

೧೯೭೦ರಲ್ಲಿ ‘ಸಂಸ್ಕಾರ’ ಎಂಬ ಕನ್ನಡ ಚಲನಚಿತ್ರ ಬಿಡುಗಡೆಯಾಗಿತ್ತು. ಯು.ಆರ್. ಅನಂತಮೂರ್ತಿಯವರು ಬರೆದಿದ್ದ ಕಥೆಯನ್ನು ಆಧರಿಸಿದ್ದ ಈ ಚಲನ ಚಿತ್ರಕ್ಕೆ ರಾಜ್ಯ-ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪ್ರಶಸ್ತಿ-ಪುರಸ್ಕಾರಗಳು ಲಭಿಸಿದ್ದವು. ಪಟ್ಟಾಭಿರಾಮ ರೆಡ್ಡಿ ನಿರ್ದೇಶನದ ಈ ಚಲನ ಚಿತ್ರದಲ್ಲಿ, ಪಶ್ಚಿಮ ಘಟ್ಟದ ಹಳ್ಳಿಯೊಂದರ ಮಾಧ್ವ ಬ್ರಾಹ್ಮಣ ಕುಟುಂಬವೊಂದರಲ್ಲಿ ನಡೆಯುವ ಘಟನೆಯೊಂದರ ಕಥಾಹಂದರವಿತ್ತು. ಚಿತ್ರದ ನಾಯಕನಾಗಿ ಗಿರೀಶ್ ಕಾರ್ನಾಡ್, ನಾಯಕಿಯಾಗಿ ಸ್ನೇಹ ಲತಾ ರೆಡ್ಡಿ ಅಭಿನಯಿಸಿದ್ದರು.

ಅಷ್ಟು ಹೊತ್ತಿಗಾಗಲೇ ತೆಲುಗು, ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಸ್ನೇಹಲತಾ ಉತ್ತಮ ನಟಿ ಎನಿಸಿಕೊಂಡಿದ್ದರು. ಎರಡು ದಿನಗಳ ಹಿಂದೆ, ಕೇಂದ್ರ ಸರಕಾರದ ವಿರುದ್ಧ ವಿಪಕ್ಷಗಳ ಒಕ್ಕೂಟವು ಅವಿಶ್ವಾಸ ನಿರ್ಣಯವನ್ನು ಮಂಡಿಸಿದ ಸಂದರ್ಭದಲ್ಲಿ, ಮಣಿಪುರದಲ್ಲಿ ಮಹಿಳೆಯ ಮೇಲೆ ನಡೆದ ಅಮಾನುಷ ಕೃತ್ಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿತ್ತು. ಈ ವೇಳೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ಇಂದಿರಾ ಗಾಂಧಿ ಸರಕಾರವು ತುರ್ತು ಪರಿಸ್ಥಿತಿಯ ವೇಳೆ ಬೆಂಗಳೂರಿನ ಜೈಲಿನಲ್ಲಿ ಮಹಿಳೆಯ ಮೇಲೆ ನಡೆಸಿದ್ದ ಅಮಾನುಷ ಕೃತ್ಯವನ್ನು ಸಂಸತ್ತಿನಲ್ಲಿ ನೆನಪಿಸಿದರು. ತುರ್ತು ಪರಿಸ್ಥಿತಿಯ ವೇಳೆ, ಕೇಂದ್ರದ ಕಾಂಗ್ರೆಸ್ ಸರಕಾರದ ವಿರುದ್ಧ ಮಾತನಾಡಿದವರನ್ನು ಮುಲಾಜಿಲ್ಲದೆ ಜೈಲಿಗಟ್ಟಲಾಗಿತ್ತು, ಸಂವಿಧಾನದಲ್ಲಿ ಉಲ್ಲೇಖಿಸ ಲಾಗಿರುವ ನಾಗರಿಕರ ಮೂಲಭೂತ ಹಕ್ಕುಗಳಗೆ ಚ್ಯುತಿ ತರಲಾಗಿತ್ತು.

‘ಸಂಸ್ಕಾರ’ ಚಿತ್ರದ ನಟಿ ಸ್ನೇಹ ಲತಾ ರೆಡ್ಡಿಯವರು ತುರ್ತು ಪರಿಸ್ಥಿತಿಯ ವೇಳೆ ಇಂದಿರಾ ಗಾಂಧಿಯವರ ವಿರುದ್ಧ ಹೋರಾಟಕ್ಕೆ ಧುಮುಕಿದ್ದರು. ಅಟಲ್ ಬಿಹಾರಿ ವಾಜಪೇಯಿಯವರ ಸರಕಾರದಲ್ಲಿ ರಕ್ಷಣಾ ಮಂತ್ರಿಯಾಗಿದ್ದ ಜಾರ್ಜ್ ಫೆರ್ನಾಂಡಿಸ್‌ರ ಸ್ನೇಹಿತೆಯೂ ಆಗಿದ್ದ ಸ್ನೇಹಲತಾ, ಸಮಾಜವಾದದ ಪ್ರತಿಪಾದಕ ರಾಗಿದ್ದರು. ಸ್ನೇಹಲತಾರ ಪತಿ ಪಟ್ಟಾಭಿರಾಮ ರೆಡ್ಡಿ ಕೂಡ ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಲೋಹಿಯಾ ಅವರ ತತ್ತ್ವಗಳನ್ನು ಅನುಸರಿಸುತ್ತಿದ್ದ ಈ ದಂಪತಿ, ಇಂದಿರಾ ಗಾಂಧಿಯವರ ನಿರಂಕುಶ ಆಡಳಿತ ಮತ್ತು ತುರ್ತು ಪರಿಸ್ಥಿತಿಯ ಘೋಷಣೆಯ ವಿರುದ್ಧ ಮಾತನಾಡುತ್ತಿದ್ದರು.

ಸ್ನೇಹಲತಾ ಅವರು, ಆಂಧ್ರಪ್ರದೇಶದ ೨ನೇ ತಲೆಮಾರಿನ, ಕ್ರೈಸ್ತಧರ್ಮಕ್ಕೆ ಮತಾಂತರಗೊಂಡ ಕುಟುಂಬದಲ್ಲಿ ೧೯೩೨ರಲ್ಲಿ ಜನಿಸಿದ್ದವರು. ಅವರು ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯನ್ನು ಚಿಕ್ಕಂದಿನಿಂದಲೇ ಬಲವಾಗಿ ವಿರೋಧಿಸಿ, ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದರು. ಸ್ನೇಹಲತಾ ಬ್ರಿಟಿಷರನ್ನು ಎಷ್ಟರ ಮಟ್ಟಿಗೆ ವಿರೋಧಿಸುತ್ತಿದ್ದರೆಂದರೆ, ಮುತ್ತಜ್ಜನ ಕಾಲದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಕುಟುಂಬದಲ್ಲಿ ಹುಟ್ಟಿದ್ದ ಅವರು ತಮಗೆ ವಂಶಪಾರಂಪರಿಕವಾಗಿ ಬಂದಿದ್ದ ಹೆಸರನ್ನು ಬದಲಾಯಿಸಿ ಮೂಲ ಭಾರತೀಯ ಹೆಸರನ್ನು ಇಟ್ಟುಕೊಂಡರು, ಭಾರತೀಯ ಬಟ್ಟೆಗಳನ್ನೇ ಧರಿಸುತ್ತಿದ್ದರು.
ಸಮಾಜವಾದವನ್ನು ಪ್ರತಿಪಾದಿಸುತ್ತ ಬಂದಿದ್ದ ಅವರಿಗೆ ಚಲನಚಿತ್ರಗಳಲ್ಲಿನ ಅಭಿನಯವು ಅವರ ಹೋರಾಟಕ್ಕೆ ಉತ್ತಮ ವೇದಿಕೆಯನ್ನು ನೀಡಿತ್ತು. ತುರ್ತು ಪರಿಸ್ಥಿತಿಯ ವೇಳೆ ಇಂದಿರಾ ಗಾಂಧಿಯವರ ವಿರುದ್ಧ ಹೋರಾಟ ನಡೆದಾಗ, ೧೯೭೬ರಲ್ಲಿ ‘ಬರೋಡ ಡೈನಮೈಟ್’ ಕೇಸಿನಲ್ಲಿ ಜಾರ್ಜ್ ಫೆರ್ನಾಂಡಿಸ್ ಮತ್ತು ಇತರ ೨೪ ಮಂದಿಯನ್ನು ಬಂಧಿಸಲಾಗಿತ್ತು. ಇದೇ ವೇಳೆ ಫೆರ್ನಾಂಡಿಸ್ ಜತೆ ಕೈ ಜೋಡಿಸಿದ್ದಾರೆಂದು ಆರೋಪಿಸಿ ಸ್ನೇಹಲತಾರನ್ನು ಬಂಧಿಸಿ
ಬೆಂಗಳೂರಿನ ಜೈಲಿನಲ್ಲಿ ಇರಿಸಲಾಗಿತ್ತು.

ಇಂದಿರಾ ಗಾಂಧಿ ಸರಕಾರವು ತುರ್ತು ಪರಿಸ್ಥಿತಿಯ ವೇಳೆ ವಿಪಕ್ಷ ನಾಯಕ ಜಾರ್ಜ್ ಫೆರ್ನಾಂಡಿಸ್ ಮತ್ತು ಇತರ ೨೪ ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಬಳಸಿದ ಪ್ರಕರಣವೇ ‘ಬರೋಡ ಡೈನಮೈಟ್ ಕೇಸ್’. ತುರ್ತು ಪರಿಸ್ಥಿತಿ ಹೇರಿಕೆಯನ್ನು ಪ್ರತಿಭಟಿಸಿ ಸರಕಾರಿ ಸಂಸ್ಥೆಗಳು ಮತ್ತು ರೈಲು ಹಳಿಗಳನ್ನು ಸೋಟಿಸಲು ಡೈನಮೈಟ್ ಕಳ್ಳಸಾಗಣೆ ಮಾಡಿದ ಆರೋಪವನ್ನು ಕೇಂದ್ರೀಯ ತನಿಖಾ ದಳವು ಜಾರ್ಜ್ ಮತ್ತು ಇತರರ ಮೇಲೆ ಹೊರಿಸಿತ್ತು. ಸರಕಾರವನ್ನು ಉರುಳಿಸಲು ದೇಶದ ವಿರುದ್ಧ ಯುದ್ಧ ಮಾಡಿದ ಆರೋಪವೂ ಅವರ ಮೇಲಿತ್ತು. ಆರೋಪಿಗಳನ್ನು ೧೯೭೬ರ ಜೂನ್‌ನಲ್ಲಿ ಬಂಧಿಸಿ ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಯಿತು. ಇತರ ಪ್ರಮುಖ ಆರೋಪಿಗಳಾಗಿ ವೀರೇನ್ ಜೆ. ಶಾ, ಜಿ.ಜಿ. ಪಾರಿಖ್, ಸಿ.ಜಿ.ಕೆ. ರೆಡ್ಡಿ, ಪ್ರಭುದಾಸ್ ಪಟ್ವಾರಿ, ದೇವಿ ಗುಜ್ಜರ್ ಮತ್ತು ಮೋತಿಲಾಲ್ ಕನೋಜಿಯಾರನ್ನು ಸೇರಿಸಲಾಗಿತ್ತು. ಗುಜರಾತಿನ ಬದಲಾಗಿ ದೆಹಲಿಯಲ್ಲಿ ಈ ಪ್ರಕರಣದ ವಿಚಾರಣೆ ನಡೆಸಲಾಗಿತ್ತು; ಘಟನೆಯ ಸ್ಥಳ ಬರೋಡಾ ಆಗಿದ್ದರೂ, ಪ್ರಕರಣವು ರಾಷ್ಟ್ರೀಯ ಪರಿಣಾಮಗಳನ್ನು ಹೊಂದಿದೆ ಎಂಬ ಮೊಂಡು ವಾದವನ್ನು ಸಿಬಿಐ ಮಾಡಿತ್ತು. ತುರ್ತು ಪರಿಸ್ಥಿತಿಯ ವೇಳೆ ಸರಕಾರದ ಆಡಳಿತ ಯಂತ್ರವೇ ಇಂದಿರಾ ಗಾಂಧಿಯವರ ಅಡಿಯಲ್ಲಿದ್ದುದರಿಂದ, ತನಗಿಷ್ಟ ಬಂದ ಜಾಗದಲ್ಲಿ ವಿಚಾರಣೆ ನಡೆಸುವುದು ಕಾಂಗ್ರೆಸ್ಸಿನ ಚಾಳಿಯಾಗಿತ್ತು. ಈ
ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಸ್ನೇಹಲತಾರ ಹೆಸರು ಇರಲಿಲ್ಲ.

ಆದರೂ ಜಾರ್ಜ್ ಫೆರ್ನಾಂಡಿಸ್‌ರ ಸ್ನೇಹಿತರು ಎಂಬ ಕಾರಣಕ್ಕೆ ಅವರನ್ನು ಬಂಧಿಸಲಾಗಿತ್ತು. ಬಂಧನದ ನಂತರ ವಿಚಾರಣೆಯನ್ನೇ ನಡೆಸದೆ ೮ ತಿಂಗಳ ಕಾಲ
ಜೈಲಿನಲ್ಲಿರಿಸಲಾಗಿತ್ತು. ಈ ಕರಾಳ ಅವಧಿಯಲ್ಲಿ ಸ್ನೇಹಲತಾ ಅನುಭವಿಸಿದ ನೋವು ಯಾವೊಬ್ಬ ಮಹಿಳೆಗೂ ಬರಬಾರದು. ಮಾನವೀಯತೆಯನ್ನೇ ಮರೆತು ಆಕೆಯನ್ನು ಪ್ರಾಣಿಯಂತೆ ನಡೆಸಿಕೊಳ್ಳಲಾಗಿತ್ತು. ಅಸ್ತಮಾ ಸಮಸ್ಯೆಯಿದ್ದ ಸ್ನೇಹಲತಾರಿಗೆ ಉಸಿರಾಟದ ತೊಂದರೆಯಾದಾಗ ಸರಿಯಾದ ಸಮಯದಲ್ಲಿ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡುತ್ತಿರಲಿಲ್ಲ.

ಆಕೆಯ ಅರೋಗ್ಯ ಸಮಸ್ಯೆಯನ್ನು ಬೇಕಂತಲೇ ನಿರ್ಲಕ್ಷಿಸಿ ತೊಂದರೆ ನೀಡಲಾಗುತ್ತಿತ್ತು. ಸೂಕ್ತ ಚಿಕಿತ್ಸೆಯಿಲ್ಲದೆ ೮ ತಿಂಗಳಲ್ಲಿ ೨ ಬಾರಿ ಆಕೆ ‘ಕೋಮಾ’ಕ್ಕೆ ಹೋಗಿದ್ದೂ ಇದೆ. ಏಕಾಂತ ಬಂಧನದಿಂದಾಗಿ ಆರೋಗ್ಯ ತುಂಬಾ ಹದಗೆಟ್ಟ ಕಾರಣ, ೧೯೭೭ರ ಜನವರಿ ೧೫ರಂದು ಸ್ನೇಹಲತಾರನ್ನು ಕೊನೆಗೆ ಪೆರೋಲ್ ಮೇಲೆ ಬಿಡುಗಡೆ ಮಾಡಲಾಯಿತು. ದೀರ್ಘಕಾಲದ ಆಸ್ತಮಾ ಮತ್ತು ದುರ್ಬಲಗೊಳಿಸುವ ಶ್ವಾಸಕೋಶದ ಸೋಂಕಿನ ಪರಿಣಾಮವಾಗಿ, ಬಿಡುಗಡೆಯಾದ ಐದು ದಿನದ ನಂತರ ಆಕೆ ನಿಧನರಾದರು. ಹೀಗೆ, ತುರ್ತು ಪರಿಸ್ಥಿತಿಯ ವೇಳೆ ಹುತಾತ್ಮರಾದವರಲ್ಲಿ ಸ್ನೇಹಲತಾ ಕೂಡ ಒಬ್ಬರು.

ಇಂದಿರಾ ಗಾಂಧಿಯವರು ತಮ್ಮ ಸ್ವಾರ್ಥಕ್ಕಾಗಿ ಹೇರಿದ್ದ ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ಕ್ರಾಂತಿಕಾರಿ ಹೋರಾಟಕ್ಕೆ ಧುಮುಕಿದ್ದ ಜಾರ್ಜ್ ಫೆರ್ನಾಂಡಿಸ್‌ ರನ್ನು ಬಂಧಿಸಲು ಪೊಲೀಸರು ಬಹಳ ಕಷ್ಟ ಪಟ್ಟಿದ್ದರು. ಆ ಸಮಯದಲ್ಲಿ ಫೆರ್ನಾಂಡಿಸ್‌ರಿಗೆ ‘ತುರ್ತು ಪರಿಸ್ಥಿತಿಯ ವಿರುದ್ಧ ಕ್ರಾಂತಿಕಾರಿ ಹೋರಾಟ ಬೇಡ, ಅದು ಶಾಂತಿಯುತ ವಾಗಿರಲಿ’ ಎಂಬ ಸಲಹೆ ನೀಡಿದ್ದು ಸ್ನೇಹಲತಾ. ಆಕೆಯ ಮಾತನ್ನು ಒಪ್ಪಿ ಜಾರ್ಜ್ ತಮ್ಮ ಚಳವಳಿಯ ರೂಪರೇಷೆಗಳನ್ನು ಬದಲಿಸಿಕೊಂಡಿದ್ದರು. ಆದರೆ ಇಂದಿರಾರಿಗೆ ಸರಕಾರದ ವಿರುದ್ಧ ಮಾತನಾಡಿದವರೆಲ್ಲರೂ ರಾಜಕೀಯ ಕೈದಿಗಳಾಗಿ ಕಾಣುತ್ತಿದ್ದರು. ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟಕ್ಕೆ ಬೇಕಿದ್ದ ಸಾಹಿತ್ಯ ರಚನೆಯಲ್ಲಿ ಸ್ನೇಹಲತಾ ಮತ್ತು ಅವರ ಪತಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದರು. ಈ ಸಾಹಿತ್ಯವನ್ನೇ ಬಳಸಿಕೊಂಡು ಸರಕಾರದ ವಿರುದ್ಧದ ಪೋಸ್ಟರ್‌ಗಳು ತಯಾರಾಗುತ್ತಿದ್ದವು.

ಫೆರ್ನಾಂಡಿಸ್‌ರೊಂದಿಗಿನ ಸ್ನೇಹಲತಾ ದಂಪತಿಯ ಒಡನಾಟ ಕಾಂಗ್ರೆಸ್ ಸರಕಾರಕ್ಕೆ ಆತಂಕ ತಂದಿಟ್ಟಿತ್ತು. ಫೆರ್ನಾಂಡಿಸ್ ಪೊಲೀಸರ ಕೈಗೆ ಸಿಗದಿದ್ದಾಗ ಅವರ ಆಪ್ತರನ್ನು ಬಂಽಸಲಾಗಿತ್ತು. ಸ್ನೇಹಲತಾ ಮತ್ತು ಪಟ್ಟಾಭಿರಾಮರೆಡ್ಡಿ ಮನೆಯಲ್ಲಿರದ ವೇಳೆ ಅವರ ಮಕ್ಕಳನ್ನು ವಿಚಾರಣೆಗೊಳಪಡಿಸಿ ಮಾನಸಿಕ ಹಿಂಸೆ ನೀಡಲಾ
ಗಿತ್ತು. ಬಳಿಕ ಸ್ನೇಹಲತಾರನ್ನು ಬಂಽಸಿ ಒಬ್ಬರನ್ನೇ ಕತ್ತಲೆ ಕೋಣೆಯಲ್ಲಿರಿಸಿ ಹೊರಜಗತ್ತಿನ ಸಂಪರ್ಕಕ್ಕೆ ಸಿಗದಂತೆ ಮಾಡಲಾಗಿತ್ತು. ಆಕೆಯ ಭೇಟಿಗೆ ಕುಟುಂಬಸ್ಥರಿಗೂ ಅವಕಾಶ ನೀಡುತ್ತಿರಲಿಲ್ಲ. ಆಕೆಯನ್ನು ಬಿಡಿಸುವ ಪ್ರಯತ್ನ ನಡೆದರೂ, ‘ಮಿಸಾ’ ಕಾಯ್ದೆಯಡಿ ಮಗದೊಮ್ಮೆ ಬಂಧಿಸಿ ಜೈಲಿನಲ್ಲಿರಿಸಲಾಗಿತ್ತು. ಆಕೆಯ ಕುಟುಂಬ ವೈದ್ಯರು ಹೇಳಿದ ಪ್ರಕಾರ, ಜೈಲಿನಲ್ಲಿ ಅವರ ಅಸ್ತಮಾ ಕಾಯಿಲೆಯ ಔಷಧಿಯ ಡೋಸೇಜ್ ಅನ್ನು ಹೆಚ್ಚಿಸಲಾಗಿತ್ತಂತೆ. ತಮಗೆ ಸೂಕ್ತ
ಸಮಯದಲ್ಲಿ ಮಾತ್ರೆಗಳನ್ನು ನೀಡುತ್ತಿರಲಿಲ್ಲವೆಂದು ಡೈರಿಯಲ್ಲಿ ಸ್ನೇಹಲತಾ ಬರೆದುಕೊಂಡಿದ್ದಾರೆ.

ಮಾತ್ರವಲ್ಲ, ಬಂದಿಖಾನೆಗೆ ಬರುತ್ತಿದ್ದ ಮಹಿಳಾ ಖೈದಿಗಳನ್ನು ಇತರ ಮಹಿಳಾ ಕೈದಿಗಳ ಮುಂದೆ ಬೆತ್ತಲೆಯಾಗಿ ನಿಲ್ಲಿಸಿ ಅಮಾನುಷವಾಗಿ ನಡೆಸಿಕೊಳ್ಳಲಾಗು ತ್ತಿತ್ತೆಂದೂ ಆ ಡೈರಿಯಲ್ಲಿ ಉಲ್ಲೇಖ ವಿದೆ. ಮಹಿಳೆಯರ ಮುಟ್ಟಿನ ಸಂದರ್ಭದಲ್ಲಿ ಅಗತ್ಯವಿದ್ದ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಜೈಲಿನ ಅಧಿಕಾರಿಗಳು ನೀಡುತ್ತಿರ ಲಿಲ್ಲವೆಂಬ ಅಂಶವೂ ಅದರಲ್ಲಿದೆ. ತುರ್ತುಪರಿಸ್ಥಿತಿಯ ವೇಳೆ ವಿಚಾರಣೆಯನ್ನೇ ನಡೆಸದೆ ಹೀಗೆ ೮ ತಿಂಗಳ ಕಾಲ ಸ್ನೇಹಲತಾರಿಗೆ ಚಿತ್ರಹಿಂಸೆ ನೀಡಿತ್ತು ಇಂದಿರಾಗಾಂಧಿ ನೇತೃತ್ವದ ಸರಕಾರ.

ಸ್ನೇಹಲತಾರ ಕಥೆ ಹೀಗಾದರೆ, ದೇಶಾದ್ಯಂತ ಅದೆಷ್ಟು ಸಾವಿರ ಹೆಣ್ಣುಮಕ್ಕಳು ತಮ್ಮದಲ್ಲದ ತಪ್ಪಿಗೆ ಕಾಂಗ್ರೆಸ್ ಸರಕಾರದ ತುರ್ತು ಪರಿಸ್ಥಿಯ ಸಂದರ್ಭದಲ್ಲಿ ನೋವು ಅನುಭವಿಸಿರಬಹುದು? ಮಣಿಪುರದಲ್ಲಿ ನಡೆದ ಅಮಾನುಷ ಕೃತ್ಯವನ್ನು ತನ್ನ ರಾಜಕೀಯ ಹಿತಾಸಕ್ತಿಯ ನೆರವೇರಿಕೆಗಾಗಿ ಮುನ್ನೆಲೆಗೆ ತಂದಿರುವ ಕಾಂಗ್ರೆಸ್ ಪಕ್ಷ, ಹಿಂದೊಮ್ಮೆ ತನ್ನ ಅಧಿಕಾರಾವಧಿಯಲ್ಲಿ ನಡೆಸಿದ ಇಂಥ ಕೃತ್ಯಗಳನ್ನು ನೆನೆಯ ಬೇಕು. ಜೈಲಿನ ಉದ್ಯಾನದಲ್ಲಿ ವಾಕ್ ಮಾಡುವುದಕ್ಕೂ ಸ್ನೇಹ ಲತಾರಿಗೆ ಅವಕಾಶ ನೀಡುತ್ತಿರಲಿಲ್ಲ. ಅವರ ಬಿಡುಗಡೆಗೆ ಅಂದಿನ ಕಾಲದಲ್ಲಿ ೫ ಲಕ್ಷ ರುಪಾಯಿಯ ಬ್ಯಾಂಕ್ ಬಾಂಡ್ ನೀಡಬೇಕೆಂದು ಕೇಳಲಾಗಿತ್ತು. ಅವರ ಕುಟುಂಬಸ್ಥರು ಬ್ಯಾಂಕಿನಲ್ಲಿ ಮಾತನಾಡಿ ಬಾಂಡ್ ತಯಾರು ಮಾಡುವ ಹೊತ್ತಿಗೆ ಬಿಡುಗಡೆ ಮಾಡಲಾಗುವುದಿಲ್ಲವೆಂಬ ಸಂದೇಶ ಬರುತ್ತಿತ್ತು.

ಮಾನಸಿಕವಾಗಿ ಆಕೆಯನ್ನು ಕುಗ್ಗಿಸಿ ಅನಾರೋಗ್ಯಪೀಡಿತರನ್ನಾಗಿ ಮಾಡಲಾಗಿತ್ತು. ಆಕೆಯ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿರುವುದನ್ನು ಕಂಡು, ಆಕೆ ಜೈಲಿನಲ್ಲೇ ಮರಣಿಸಿದರೆ ದೊಡ್ಡ ಸಮಸ್ಯೆಯಾಗುತ್ತದೆ ಯೆಂದು ಗ್ರಹಿಸಿದ ಅಧಿಕಾರಿಗಳು ಇದ್ದಕ್ಕಿದ್ದ ಹಾಗೆ ೧೯೭೭ರ ಜನವರಿ ೧೫ರಂದು ಆಕೆಯನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಿದರು. ಬಿಡುಗಡೆಯಾದ ಐದು ದಿನದಲ್ಲಿ ಸ್ನೇಹಲತಾ ರೆಡ್ಡಿ ಹೃದಯಾಘಾತದಿಂದ ಸಾವನ್ನಪ್ಪಿದರು. (ಸ್ನೇಹಲತಾ ರೆಡ್ಡಿಯವರು ಜೈಲಿನಲ್ಲಿ ಅನುಭವಿಸಿದ್ದ ನೋವನ್ನು ಅವರ ಮಕ್ಕಳಿಬ್ಬರು ಯುಟ್ಯೂಬ್‌ನಲ್ಲಿ ‘ಪ್ರಿಸನರ್ ಡೈರೀಸ್’ ಎಂಬ ಡಾಕ್ಯುಮೆಂಟರಿಯಲ್ಲಿ ಹಂಚಿಕೊಂಡಿದ್ದಾರೆ).

ಕಾಕತಾಳೀಯವೆಂಬಂತೆ ೧೯೭೭ರ ಜನವರಿ ೧೮ರಂದು ಇಂದಿರಾಗಾಂಧಿ ಸಾರ್ವತ್ರಿಕ ಚುನಾವಣೆಯನ್ನು ಘೋಷಣೆ ಮಾಡಿದರು. ಹೀಗೆ, ತುರ್ತು ಪರಿಸ್ಥಿತಿಯ ಹೋರಾಟದ ಸಂದರ್ಭದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದ ನಟಿಯೊಬ್ಬರು ಜೈಲಿನಲ್ಲಿ ಅನುಭವಿಸಿದ ಕರಾಳ ದಿನಗಳನ್ನು ನೆನೆದರೆ, ದೇಶಾದ್ಯಂತ ಅದೇ ರೀತಿಯ ಕಷ್ಟ ಅನುಭವಿಸಿದ ಮಹಿಳೆಯರ ನೋವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.