Wednesday, 18th September 2024

ಜನಸೇವಕರು ಮತ್ತವರ ಸಂಪತ್ತು ಬೆಳೆಸುವ ಕರಾಮತ್ತು !

ಧನ ನಾಯಕರು

ಜಿ.ಪ್ರತಾಪ ಕೊಡಂಚ

pratap.kodancha@gmail.com

ಭ್ರಷ್ಟತೆ ಹಿಂದುಳಿದ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಗಲಿದ ಶಾಪವೆಂದು ಬಿಂಬಿಸಲ್ಪಟ್ಟರೂ, ಪ್ರಜಾಪ್ರಭುತ್ವವೆನಿಸಿಕೊಂಡ ಅಮೆರಿಕ, ಇಂಗ್ಲೆಂಡ್ ಮೊದಲಾದ ರಾಷ್ಟ್ರಗಳ ಜನನಾಯಕರೂ ತಂತಮ್ಮ ವೈಯಕ್ತಿಕ ಸಂಪತ್ತಿನ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ. ವಾರ್ಷಿಕ ಕೆಲವೇ ಸಾವಿರಗಳಷ್ಟು ಸಂಬಳಗಳಿಸಿಕೊಳ್ಳುವ ಅಮೆರಿಕದ ಜನಪ್ರತಿನಿಽಗಳ ಸಂಪತ್ತು ಕೂಡಾ ಹಲವು ಪಟ್ಟು ವೃದ್ಧಿಸಿದ ಹಿನ್ನೆಲೆ ಚರ್ಚೆಯಲ್ಲಿದೆ.

ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಲೋಕಸಭಾ ಚುನಾವಣೆ ಪ್ರಕ್ರಿಯೆ ಬಹುತೇಕ ಮುಗಿದಿದೆ. ಫಲಿತಾಂಶದ ನೀರಿಕ್ಷೆಯಲ್ಲಿದ್ದೇವೆ.
ಚುನಾವಣೆ, ನಾಗರೀಕ ಸಮಾಜಕ್ಕೆ ಪ್ರತಿನಿಽಗಳ ಆಯ್ಕೆ ಮಾಡಿಕೊಳ್ಳುವ ಅತ್ಯಮೂಲ್ಯ ಅವಕಾಶ. ಪ್ರಭುಗಳು ಮತದಾರರ ಮುಂದೆ ಮತಭಿಕ್ಷೆ ಕೇಳುವ ಸಮಯದಲ್ಲಿ ವಿರೋಧಿಗಳ ಮೇಲಿನ ಕೆಸರೆರೆಚಾಟಗಳ ಜೊತೆಗೆ, ಇನ್ನಿತರ ವಶೀಲಿ, ಭರವಸೆಗಳ ಪ್ರವಾಹವನ್ನೇ ಹರಿಸುವುದು ಹೊಸತೇನಲ್ಲ.

ಪ್ರಭುಗಳೇ ಮತಕ್ಕಾಗಿ ಅಂಗಲಾಚುವ ಪ್ರಹಸನ ನಡೆಯುವುದು ಅಪರೂಪದ ವಿಷಯ. ಇವೆಲ್ಲದರ ಜೊತೆಗೆ ಚುನಾವಣಾ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸುವವರಿಗೆ ನೇತಾರರು ವೃದ್ಧಿಸಿಕೊಂಡ ಸಂಪತ್ತಿನ ಮಟ್ಟ ಅರಿತುಕೊಳ್ಳುವ ಸದವಕಾಶ ದೊರಕುವುದು ಚುನಾವಣೆಯ ಸಮಯದಲ್ಲಿ ಮಾತ್ರವೇ ಸರಿ. ತಾನೊಬ್ಬ ಶ್ರೀಸಾಮಾನ್ಯ, ಎಲ್ಲರೊಂದಿಗೆ ಬೆರೆತು ಬಾಳುವ ಬಡವನೆಂದೇ ಬಿಂಬಿಸಿಕೊಂಡು, ಕೆಲವೇ ವರ್ಷಗಳ ಹಿಂದಿನ ತನಕ ಅಷ್ಟೊಂದು ಸ್ಥಿತಿವಂತರಲ್ಲದವರೂ, ಸ್ಥಿತ್ಯಂತರಗೊಂಡು ನವಕೋಟಿ ನಾರಾಯಣರಾಗಿ ಕಾಣಿಸಿಕೊಳ್ಳುವುದು ಆಗ ಮಾತ್ರ.

ಕೋಟಿಗಟ್ಟಲೆಯ ಆಸ್ತಿ, ಮಣಗಟ್ಟಲೆ ಚಿನ್ನ, ಬೆಳ್ಳಿ, ಹತ್ತಾರು ಮನೆ, ಮಳಿಗೆಗಳನ್ನು ಹೊಂದಿರುವ ಕೆಲವು ರಾಜಕಾರಣಿಗಳ ಬಳಿ ತಿರುಗಾಡಲು ಸ್ವಂತದ ವಾಹನವೇ ಇಲ್ಲವೆಂಬ ದಾಖಲೆಯನ್ನೂ ಇಲ್ಲಿ ಒದಗಿಸಲಾಗುತ್ತದೆ! ಜನಸೇವೆಯಲ್ಲಿ ಮುಳುಗಿ ಬಿಟ್ಟಿರುವವರಿಗೆ ಸ್ವಂತದ್ದೊಂದು ವಾಹನ ತೆಗೆದು ಕೊಳ್ಳಲು ಸಮಯವೆಲ್ಲಿರಬೇಕೆನ್ನಿ? ಅಥವಾ ಅವರ ಜನಸೇವೆಗೆ ಮಾರುಹೋಗಿ ಭಕ್ತಗಣಗಳಬ್ಬರು ತಮ್ಮ ನಾಯಕರ ತಿರುಗಾಟಕ್ಕೆಂದು ಸುಸಜ್ಜಿತ ವಾಹನದ ಹೊರೆಕಾಣಿಕೆ ಕೊಟ್ಟಿರಲೂ ಬಹುದೆನ್ನಿ!

ಒಟ್ಟಿನಲ್ಲಿ ಪ್ರಜಾಪ್ರಭುತ್ವವೆಂಬುದು ಜನರಿಂದಲೇ, ಜನರಿಗಾಗಿ, ಜನರೇ ಎಳೆಯುವ ತೇರು. ತೇರು ಏರಿ ಕುಳಿತವರದ್ದು ಬರೋಬ್ಬರಿ ಕಾರುಬಾರು!
ಜನಸೇವೆಗಿಳಿಯುವ ಮುಂಚೆ ಜನಸಾಮಾನ್ಯರಾಗಿರುವ ಬಹುತೇಕ ರಾಜಕಾರಣಿಗಳನ್ನು ಕೆಲವೇ ವರ್ಷಗಳಲ್ಲಿ ಬಹು ದೊಡ್ಡ ಕೃಷಿಕರು, ಉದ್ಯೋಗಪತಿ ಗಳನ್ನಾಗಿ ಹೊರಹೊಮ್ಮಿಸಬಲ್ಲ ರಾಜಕೀಯೋದ್ಯಮದ ಚಮತ್ಕಾರ ನಿಬ್ಬೆರಗಾಗಿಸುವುದು ನಿಜ. ಶ್ರೀಮಂತರೆಂದು ಗುರುತಿಸಿಕೊಂಡರೆ ಜನಸಾಮಾನ್ಯರ ಬೆಂಬಲ ಸಿಗಲಿಕ್ಕಿಲ್ಲವೆಂಬತ್ತಿದ್ದ ಚಿತ್ರಣ ಮುಂಚಿತ್ತು. ಇತ್ತೀಚಿಗೆ ಶ್ರೀಮಂತರಲ್ಲದವರು ರಾಜಕಾರಣಕ್ಕೆ ಸಲ್ಲದವರು ಎಂಬ ನಿರೀಕ್ಷೆ ನಾಗರೀಕ(?) ಸಮಾಜದಲ್ಲೂ ಕಾಣುತ್ತಿರುವುದು ವಿಪರ್ಯಾಸ.

ಸಮಾಜದ ನೀರಿಕ್ಷೆಗಳೂ ಭ್ರಷ್ಟತೆಯನ್ನೇ ಬಯಸುತ್ತಿರುವುದು ಇಂದಿನ ದುರಂತ. ಹೀಗಿರುವಾಗ ಜನಸೇವೆಗೆ ಧುಮಿಕಿದ ರಾಜಕೀಯೋದ್ಯಮಿಗಳನ್ನು ಮಾತ್ರ ಭ್ರಷ್ಟರೆಂದು ಬಿಂಬಿಸುವುದು ಕೂಡಾ ಸಮಂಜಸವಲ್ಲ. ಭ್ರಷ್ಟತೆ ಎಂದಾಕ್ಷಣ ನಮಗೆ ನೆನಪಾಗುವುದು ಲಂಚಕೋರತನ. ಲಂಚಕೋರತೆ, ಭ್ರಷ್ಟತೆಯ ಒಂದು ಸಣ್ಣ ಭಾಗ ಮಾತ್ರ. ಲಂಚವನ್ನು ಎಡಕಣ್ಣಿ ನಿಂದಲೂ ನೋಡದ ಹಲವು ನಾಯಕರು ನಮ್ಮ ನಡುವಿದ್ದಾರೆ. ಅವರೆಲ್ಲರೂ ಪ್ರಾಮಾಣಿಕರಂತೆ ಕಾಣಿಸಿಕೊಂಡರೂ ಭ್ರಷ್ಟರಲ್ಲವೆಂದು ಹೇಳಲಾಗುವುದಿಲ್ಲ.

ಬಹುತೇಕರು ತಮಗಿರುವ ಗೌಪ್ಯ ಮಾಹಿತಿಗಳು, ಅಧಿಕಾರ, ಸ್ಥಾನದ ಬಲದಲ್ಲಿ ಸಿಗಬಲ್ಲ ಸೌಕರ್ಯಗಳ ಬಳಕೆ /ದುರ್ಬಳಕೆಯ ಮೂಲಕವೂ ತಮ್ಮ ಬಲವೃದ್ಧಿಗೆ ಮುಂದಾಗುವುದು ಸಾಮಾನ್ಯ. ಇಂತಹ ಸನ್ನಿವೇಶಗಳಲ್ಲಿ ಬಳಕೆ ಮತ್ತು ದುರ್ಬಳಕೆಯ ನಡುವೆ ನೂಲೆಳೆಯಷ್ಟೇ ಅಂತರ ಕಾಣಿಸುವುದು ಮಾತ್ರ ಸುಳ್ಳಲ್ಲ! ಭಾರತದ ಬಹುತೇಕ ಶ್ರೀಮಂತ ರಾಜಕಾರಣಿಗಳ ಐಶ್ವರ್ಯದ ಮೂಲ ಕೃಷಿ, ವ್ಯಾಪಾರ, ಉದ್ಯಮ. ಚುನಾವಣೆಯಿಂದ ಚುನಾವಣೆಗೆ ಆಸ್ತಿ ಮಟ್ಟದ ಏರಿಕೆಗೆ ತಂತಮ್ಮ ಕುಟುಂಬದ ಒಡೆತನದ ಭೂಮಿಯ ಮೌಲ್ಯ ವೃದ್ಧಿಯೇ ಕಾರಣವೆಂಬ ಸಮಾಜಾಯಿಷಿ ಹಲವರು ಕೊಡುವುದೂ ಇದೆ. ಅದು ನಿಜವೂ ಕೂಡ.

ಆದರೆ ಕೆಲವೊಮ್ಮೆ ಅಂತಹ ಅಸ್ತಿ ಖರೀದಿಸುವ ಮುಂಚೆ ಆ ಪ್ರದೇಶದಲ್ಲಿ ಸರಕಾರ ಅಥವಾ ಖಾಸಗಿಯವರ ನೇತೃತ್ವದ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂಬ ಮುಂಚಿತ ಮಾಹಿತಿ ಅವರಿಗಿರುವುದು ಕೂಡ ಒಂದು ಕಾರಣ. ಇಂತಹ ಮಾಹಿತಿ ಜನ ಸಾಮಾನ್ಯರಿಗೆ ತಲುಪುವ ಹೊತ್ತಿಗೆ ಅಂತಹ ಹೂಡಿಕೆಗಳು, ಜನಸಾಮಾನ್ಯರ ಪಾಲಿಗೆ ನಿಲುಕದ ನಕ್ಷತ್ರಗಳಾಗಿ ಹೊರಹೊಮ್ಮಿಯಾಗಿರುತ್ತದೆ. ಜನಸೇವೆಗೆ ತಮ್ಮ ಬಾಳನ್ನೇ ಮುಡಿಪಾಗಿಡುವ ಇಂತಹ ಹಲವು ನಾಯಕರು ತಮ್ಮ ಅಧಿಕಾರ, ಸ್ಥಾನಬಲದ ಕಾರಣ ದೊರಕುವ ಮಾಹಿತಿಯ ದುರುಪಯೋಗ ಮಾಡಿಕೊಂಡು ಲಾಭ ಮಾಡಿಕೊಳ್ಳಬಾರದೆಂಬ ನಿಯಮಗಳು ಕಾಲ ಕಾಲಕ್ಕೆ ರೂಪುಗೊಂಡರೂ, ಅವುಗಳೇನೂ ಪರಿಣಾಮಕಾರಿಯಾಗಿಲ್ಲ. ಕೆಲವೊಮ್ಮೆ ಅಂತಹ ನಿಯಮಗಳ ಜಾರಿಗೊಳಿಸಲು ಕುಂದುಕೊರತೆ ಕಂಡು ಬಂದರೆ, ಇನ್ನಷ್ಟು ಸಮಯದಲ್ಲಿ ಜಾರಿಯಾದರೂ ಲಾಘುವಾಗದಂತೆ ನುಣುಚಿಕೊಳ್ಳುವ ಮಾರ್ಗೋಪಾಯಗಳ
ಬಳಕೆಯಾಗಿರುತ್ತದೆ.

ಭ್ರಷ್ಟತೆ ಹಿಂದುಳಿದ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಗಲಿದ ಶಾಪವೆಂದು ಬಿಂಬಿಸಲ್ಪಟ್ಟರೂ, ಪ್ರಜಾಪ್ರಭುತ್ವವೆನಿಸಿಕೊಂಡ ಅಮೆರಿಕ, ಇಂಗ್ಲೆಂಡ್ ಮೊದಲಾದ ಮುಂದುವರಿದ ರಾಷ್ಟ್ರಗಳ ಜನನಾಯಕರೂ ತಂತಮ್ಮ ವೈಯಕ್ತಿಕ ಸಂಪತ್ತಿನ ಅಭಿವೃದ್ಧಿಯ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ವಾರ್ಷಿಕ ಕೆಲವೇ ಸಾವಿರಗಳಷ್ಟು ಸಂಬಳಗಳಿಸಿಕೊಳ್ಳುವ ಅಮೆರಿಕದ ಜನಪ್ರತಿನಿಧಿಗಳ ಸಂಪತ್ತು ಕೂಡಾ ಅವರ ಅಧಿಕಾರವಧಿಯಲ್ಲಿ ಹಲವು ಪಟ್ಟು ವೃದ್ಧಿಸಿದ
ಹಿನ್ನೆಲೆ ಅಮೆರಿಕದಲ್ಲಿ ಚರ್ಚೆಯಲ್ಲಿದೆ.

ಭಾರತದಲ್ಲಿ ಇಂತಹ ಐಶ್ವರ್ಯವೃದ್ಧಿಯ ಮೂಲ ಕೃಷಿ, ವ್ಯವಹಾರವೆನಿಸಿಕೊಂಡರೆ, ಅಮೆರಿಕದ ರಾಜಕಾರಣಿಗಳ ವೈಯಕ್ತಿಕ ಸಂಪತ್ತಿನ ವೃದ್ಧಿಯ ಮೂಲ ಷೇರು ಮಾರುಕಟ್ಟೆಯಲ್ಲಿನ ಅವರ, ಅವರ ಕುಟುಂಬದವರ ಹೂಡಿಕೆ ಮತ್ತದು ಕ್ಷಿಪ್ರಗತಿಯಲ್ಲಿ ತಂದುಕೊಟ್ಟ ಲಾಭಂಶ. ಅಧಿಕಾರ ಹಿಡಿಯುವ ಮೊದಲು ಅಷ್ಟೇನೂ ಶ್ರೀಮಂತರಲ್ಲವಾಗಿದೆ ಬಹಳಷ್ಟು ಅಮೆರಿಕದ ಜನಪ್ರತಿನಿಧಿಗಳು ತಮ್ಮ ಅಧಿಕಾರಾವಧಿಯಲ್ಲಿ ವೈಯಕ್ತಿಕ ಸಂಪತ್ತನ್ನು ನೂರಾರು, ಸಾವಿರಾರು ಪಟ್ಟು ಹೆಚ್ಚಿಸಿಕೊಂಡ ಹಲವಾರು ನಿದರ್ಶನಗಳು ಇತ್ತೀಚಿಗೆ ಬಹಳಷ್ಟು ಚರ್ಚೆಯಾಗುತ್ತಿವೆ.

ಜಗತ್ತೇ ಕೋವಿಡ್ ಸಾಂಕ್ರಾಮಿಕದ ದಾಳಿಗೆ ತತ್ತರಿಸಿ ಹಲವಾರು ಕುಟುಂಬಗಳ ಆದಾಯಕ್ಕೆ ಕುತ್ತಾದ ಸಂಧರ್ಭದಲ್ಲೂ ಕೆಲ ರಾಜಕೀಯ ನೇತಾರರ ಆದಾಯ ಬಹುಪಟ್ಟು ಹೆಚ್ಚಿದ ಸನ್ನಿವೇಶ ಭಾರತ ಮಾತ್ರವಲ್ಲ ಅಮೆರಿಕದಂತಹ ದೇಶದಲ್ಲೂ ಕಂಡು ಬಂದಿದೆ.

ಭಾರತದದರೂ ಕೆಲವರು ಅಲ್ಲಿಲ್ಲಿ ಕಿಟ್ ಹಂಚಿ ಸಹಾಯ ಮಾಡಿದಂತಾದರೂ ಮಾಡಿದರೆನ್ನಿ. ಇತ್ತೀಚಿನ ತನಕವೂ ಅಮೇರಿಕ ಸಂಸತ್ತಿನ ಸ್ಪೀಕರ್ ಆಗಿದ್ದ ನ್ಯಾನ್ಸಿ ಪೆಲೊಸಿ, ಅವರ ಆದಾಯ ಕೋವಿಡ್ ಸಂದರ್ಭದಲ್ಲಿ ೧೬. ೧ ದಶಲಕ್ಷ ಡಾಲರುಗಳಷ್ಟು ವೃದ್ಧಿಸಿತು ಎಂಬ ಅಂಶ ಅಮೆರಿಕದಲ್ಲಿ ಬಹು ಚರ್ಚೆಯ ವಿಷಯ. ರಿಚರ್ಡ್ ಬರ್, ಕೆಲ್ಲಿ ಲ್ಯೊ-ರ್, ಡ್ಯಾನಿಯಲ್ -ನ್ಸ್ಟಿನ್, ಜೇಮ್ಸ ಇಂಹೊ- ಮುಂತಾದ ಅಮೆರಿಕದ ರಾಜಕಾರಣಿಗಳೂ ಈ ವಿಷಯದಲ್ಲಿ ನ್ಯಾನ್ಸಿ ಪೆಲೊಸಿ ಅವರ ಸಹಪಾಠಿಗಳು! ಇವರೆಲ್ಲರೂ ಆಯಾಯ ಹೊತ್ತಿನಲ್ಲಿ ತಮಗಿರುವ ಸೂಕ್ಷ್ಮ ಮಾಹಿತಿಯ ಲಾಭ ಪಡೆದುಕೊಂಡು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿ ತಮ್ಮ ಹೂಡಿಕೆಯನ್ನು ಕ್ಷಿಪ್ರ ಗತಿಯಲ್ಲಿ ಬಹುಪಟ್ಟು ಮಾಡಿಕೊಂಡ ಪರಿಣತರೆ.

ನ್ಯಾನ್ಸಿ ಪೆಲೊಸಿಯವರ ಪತಿ ಹೂಡಿಕೆದಾರರೆನಿಸಿಕೊಂಡಿದ್ದರು. ಅವರ ಕೆಲವು ಹೂಡಿಕೆ ಮತ್ತದರ ಸಮಯ ಹಲವು ಪರಿಣತ ಹೂಡಿಕೆದಾರರ ಅನುಭವವನ್ನೇ ನಾಚಿಸುವಂತಿರುವುದು ಕಾಕತಾಳೀಯ ಎನ್ನುವುದು ಕಷ್ಟ. ಇಲೆಕ್ಟ್ರಾನಿಕ್ ಉದ್ಯಮದ ಮೇಲೆ ಚೀನಾದ ಮೇಲೆ ಅಮೆರಿಕ ಸರಕಾರ ಕೆಲ ನಿಯಂತ್ರಣ ಹೇರುವ ಕೆಲವೇ ಗಂಟೆಗಳ ಮೊದಲು ಪೆಲೊಸಿ ಪತಿ ಪೌಲ್ ಮತ್ತವರ ಪಾಲುದಾರಿಕೆಯ ಹೂಡಿಕೆಯ ಸಂಸ್ಥೆಗಳು ಇಂಟೆಲ್, ಎನ್ವಿಡಿಯಾ ದಂತಹ ಬಹುದೊಡ್ಡ ಚಿಪ್ ತಯಾರಕ ಕಂಪನಿಗಳ ಷೇರುಗಳನ್ನು ಮಾರಿ ಕೈ ತೊಳೆದುಕೊಳ್ಳುತ್ತಾರೆ.

ತತ್ ಕ್ಷಣವೇ ಆ ಸಂಸ್ಥೆಗಳ ಷೇರುಗಳು ನೆಲ ಕಚ್ಚುತ್ತವೆ! ಅಮೆರಿಕ ಸಂಸತ್ತಿನ ಆರೋಗ್ಯ ಸಲಹಾ ಸಮಿತಿಯ ಸದಸ್ಯರೂ ಆಗಿರುವ ರಿಚರ್ಡ್ ಬರ್, ಕೋವಿಡ್ ಸಮಯದಲ್ಲಿ ಜಾಗತಿಕ ವಿಮಾನಯಾನದ ಮೇಲೆ ನಿರ್ಬಂಧ ಹೇರುವ ಕೆಲವೇ ಕೆಲವು ತಾಸುಗಳ ಮುಂಚೆ ಕೋಟ್ಯಂತರ ಮೌಲ್ಯದ
ವಿಮಾನಯಾನ ಉದ್ದಿಮೆಗಳ ಷೇರುಗಳು, ಫ್ಯೂಚರ್ಸ್ ಮತ್ತು ಒಪ್ಶನ್ ಕರಾರುಗಳನ್ನು ಮಾರಿ, ಅನೂಹ್ಯ ಪ್ರಮಾಣದ ಲಾಭಂಶ ಗೆಬರಿಕೊಂಡಿದ್ದೂ ಸುದ್ದಿಯಾಗಿತ್ತು.

ತಾನೇ ಅಂತ ಉದ್ದಿಮೆಗಳ ಷೇರು ಮಾರಿ ಲಾಭಗಳಿಸಿಕೊಳ್ಳುವಾಗಲೇ ಈ ಮಹಾಶಯರು ಪ್ರಜೆಗಳಿಗೆ, ಆ ಉದ್ದಿಮೆಗಳ ಮೇಲೆ ಹೂಡಿಕೆ ಮಾಡಲು
ಪ್ರೋತ್ಸಾಹಿಸುವಂತ ಮಾತನಾಡಿದ್ದು ನಯವಂಚಕತೆಯ ತಾಜಾ ಉದಾಹರಣೆ. ಇದನ್ನು ಗಮನಿಸಿದ ಇಲ್ಲಿನ ಹೂಡಿಕೆದಾರರ ವರ್ಗ, ಅಧಿಕಾರವಂತರ ಹೂಡಿಕೆಗಳನ್ನು ಗಮನಿಸಿ ಅದನ್ನೇ ಅನುಸರಿಸುವ ರೀತಿಯ ಹೂಡಿಕೆಗಳ ಸರಣಿಗಳನ್ನು ಆರಂಭಿಸಿವೆ. ನಾಯಕರರ ಹೂಡಿಕೆಗಳ ನಡೆ ಅನುಸರಿಸಿ ಅನುಯಾಯಿಗಳೂ ಕೊಂಚ ಲಾಭಗಳಿಸಿಕೊಳ್ಳುವ ಮಾರ್ಗೋಪಾಯವಿದು!

ತನು, ಮನ ಅರ್ಪಿಸಿ ಜನಸೇವೆಯ ಹಗಲಿರುಳು ದುಡಿಯುವ ರಾಜಕೀಯ ನೇತಾರರು ತಮ್ಮ ಧನ, ಐಶ್ವರ್ಯವೃದ್ಧಿಯ ಮಾರ್ಗೋಪಾಯವನ್ನು ತಮ್ಮ ಅನುಯಾಯಿಗಳಿಗೆ ಒಂದಂಶದಷ್ಟಾದರೂ ಕಲಿಸಕೊಟ್ಟರೆ, ಬಡತನ ನಿರ್ಮೂಲನೆ ಎಂಬುದು ಕನಸಾಗಿ ಉಳಿಯಲಿಕ್ಕಿಲ್ಲವಲ್ಲವೇ?

(ಲೇಖಕರು: ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *