Thursday, 12th December 2024

ಮುಕ್ತ ಲೈಂಗಿಕತೆಯನ್ನು ಸಮಾಜ ಒಪ್ಪಿಕೊಳ್ಳುತ್ತಿರುವಂತಿದೆ

ಅವಲೋಕನ

ಡಾ.ಆರ್‌.ಜಿ.ಹೆಗಡೆ

ಮಾನವ ಲೈಂಗಿಕತೆಯ ಕುರಿತು ಜಗತ್ತಿನಲ್ಲಿ ಮೊದಲ ಬಾರಿಗೆ, ನೇರವಾಗಿ ಸಾರ್ವಜನಿಕವಾಗಿ, ದೊಡ್ಡ ಸ್ವರದಲ್ಲಿ ಮಾತನಾಡಿದವನು ಸಿಗ್ಮಂಡ್ ಫ್ರಾಯ್ಡ್.
ಆಸ್ಟ್ರಿಯನ್ ಮನೋವಿಜ್ಞಾನಿ ಮತ್ತು ಪ್ರಾಧ್ಯಾಪಕ. ಇಪ್ಪತ್ತನೆ ಶತಮಾನದ ಆರಂಭದಲ್ಲಿ ಬಂದ ತನ್ನ ‘ದ ಇಂಟರ್‌ಪ್ರಿಟೇಶನ್ ಆಫ್ ಡ್ರೀಮ್ಸ್’ ಎನ್ನುವ ಕೃತಿಯಲ್ಲಿ
ಹಾಗೂ ನಂತರದ ಕೃತಿಗಳಲ್ಲಿ. ಹಾಗೆಂದು ಇತಿಹಾಸ ದುದ್ದಕ್ಕೂ ಆ ಕುರಿತು ಮಾತನಾಡಲು ಪ್ರಯತ್ನಗಳು ನಡೆದಿದ್ದವು.

ವಾತ್ಸಾಯನನ ಕಾಮಸೂತ್ರದಲ್ಲಿ ಮತ್ತು 17ನೆಯ ಶತಮಾನದಲ್ಲಿ ಸ್ಯಾಮ್ಯುಯಲ್ ಪೆಪಿಸ್‌ನ ಡೈರಿಗಳಲ್ಲಿ ಇಂಥ ಪ್ರಯತ್ನಗಳಿವೆ. ಆದರೂ ಈ ಕೃತಿಗಳು
‘ಎಲ್ಲವನ್ನೂ ಬಿಚ್ಚಿ ಅಥವಾ ವಿಕೃತವಾಗಿ’ ಸೆಕ್ಸ್ ಕುರಿತು ಮಾತನಾಡುವುದಿಲ್ಲ. ಏಕೆಂದರೆ ಹಾಗೆ ಮಾತನಾಡಲು ನಾಗರಿಕತೆಗಳು ಅನುಮತಿ ನೀಡಿರಲಿಲ್ಲ. ಯೋನಿ ಮತ್ತು ಲಿಂಗ ಪೂಜೆಯಂಥ ಪದ್ಧತಿಗಳು ಇದ್ದವು ನಿಜ. ಜುರಾಹೋದಲ್ಲಿನಂತೆ ಅಲ್ಲಲ್ಲಿ ಕಾಮವನ್ನು ಬಹಿರಂಗಪಡಿಸುವ ‘ಶಿಲ್ಪಕೃತಿಗಳು’ ಇದ್ದವು ನಿಜ.
ಆದರೂ ಕೂಡ ಒಟ್ಟಾರೆಯಾಗಿ ನಾಗರಿಕತೆಗಳು ಲೈಂಗಿಕತೆಯನ್ನು ಮುಟ್ಟಬಾರದ ವಿಷಯವನ್ನಾಗಿ ಪರಿಗಣಿಸಿ ವಿವರಗಳನ್ನು ಮುಚ್ಚಿಯೇ ಇಟ್ಟಿದ್ದವು.

ಅವು ಪರಿಗಣಿಸಿದ್ದೆಂದರೆ ಒಳವ್ಯವಹಾರವಾಗಿ, ಮಕ್ಕಳನ್ನು ಹುಟ್ಟಿಸುವ ಕ್ರಿಯೆಯಾಗಿ ಇರಬೇಕಿರುವುದೇ ಲೈಂಗಿಕತೆಯ ಜಾಗ. ಸಾರ್ವಜನಿಕವಾಗಿ ಸೆಲೆಬ್ರೇಟ್
ಮಾಡಬಹುದಾದ ವಿಷಯ ಅಲ್ಲವೇ ಅಲ್ಲ. ಕುತೂಹಲವೆಂದರೆ ಗಾಂಧೀಜಿ ಕೂಡ ಸೆಕ್ಸ್ ಅನ್ನು ಕೇವಲ ಮಕ್ಕಳನ್ನು ಹುಟ್ಟಿಸುವ ಅನಿವಾರ್ಯತೆ ಎಂದೇ ಪರಿಗಣಿಸಿ ಉಳಿದೆಲ್ಲ ಅಂದರೆ ‘ರತಿಸುಖ’ಕ್ಕಾಗಿ ನಡೆಸುವ ಕಾಮವನ್ನು ಅನೈತಿಕ ಮತ್ತು ಪಾಪ ಎಂದೇ ಭಾವಿಸಿದ್ದರು.

ನಾಗರಿಕತೆಗಳ ಇಂಥ ನಿರ್ಧಾರಕ್ಕೆ ಕಾರಣಗಳಿದ್ದವು. ಅವು ಗ್ರಹಿಸಿದ್ದೆಂದರೆ ನಿಮಿಷಗಳ ವ್ಯವಹಾರದಂತೆ ತೋರುವ ಸೆಕ್ಸ್‌ಗೆ ಅಪಾರವಾದ ಶಕ್ತಿಯಿದೆ.
ಅಪಾಯಕಾರಿ ಶಕ್ತಿ, ಬೆಂಕಿಯಂಥದ್ದು. ಅದು ಒಮ್ಮೆ ಆರ್ಭಟಿಸಿತೆಂದರೆ ಅದಕ್ಕೆ ಬಲಿ ಸಿಗಲೇಬೇಕು. ಶಮನವಾಗಲೇಬೇಕು. ಅಲ್ಲಿಯ ತನಕ ಅದು ಮನಸ್ಸುಗಳನ್ನು ಒಂದು ರೀತಿಯ ಹುಚ್ಚಿನ ಸ್ಥಿತಿಯಲ್ಲಿಡುತ್ತದೆ. ಕಾಮಕ್ಕೆ ಕ್ರೌರ್ಯದ ಆಯಾಮ ಇದೆ. ಸೆಕ್ಸ್‌ಗಾಗಿ ರೇಪ್‌ಗಳು, ಕೊಲೆಗಳು ನಡೆದು ಹೋಗುವುದು ಸಾಮಾನ್ಯ. ಹೆಣ್ಣಿಗಾಗಿ ಯುದ್ಧಗಳೇ ನಡೆದು ಹೋಗಿದ್ದು ಅವರಿಗೆ ಗೊತ್ತಿತ್ತು. ಸೆಕ್ಸ್ ವಿವರಗಳನ್ನು ಮುಚ್ಚಿಡದಿದ್ದರೆ ಯುವಜನರು ಪ್ರಾಣಿಗಳಂತೆ ಆಗಿಹೋಗಿ ಸುಸಂಸ್ಕೃತ ಸಮಾಜವೇ ನಾಶವಾಗಿ ಹೋಗಿಬಿಡಬಹುದು ಎಂಬ ಅರಿವೂ ಇತ್ತು.

ಹಾಗಾಗಿಯೇ ಅವು ಸೆಕ್ಸ್ ಅನ್ನು ಕತ್ತಲೆ ಕೋಣೆಯ ವ್ಯವಹಾರವನ್ನಾಗಿಯೇ ಇರಿಸಿ, ಆ ಕುರಿತ ಸಾರ್ವಜನಿಕ ಮಾತುಗಳು, ಕ್ರಿಯೆಗಳು, ಪ್ರದರ್ಶನಗಳು ಇತ್ಯಾದಿ
ಗಳನ್ನು ನಿಷೇದಿಸಿದ್ದು. ವಿವಾಹದಂಥ, ವೇಶ್ಯಾವಾಟಿಕೆ ಯಂಥ ವ್ಯವಸ್ಥೆಗಳನ್ನು ನಿರ್ಮಿಸಿದ್ದು. ವೇಶ್ಯೆಯರು ಕೂಡ ‘ಆರೋಗ್ಯವಂತ’ ಸಮಾಜದ ಅವಶ್ಯಕತೆಗಳೇ
ಎಂದೂ ಬಹುಶಃ ನಾಗರಿಕತೆಗಳು ಭಾವಿಸಿದ್ದವು. ಹೀಗೆ ಒಂದು ರೀತಿಯ ಭಯ, ಅಪರಾಧ ಪ್ರಜ್ಞೆ, ಮತ್ತೆ ಅದರ ಶಕ್ತಿಯ ಅರಿವು ಇಂಥ ಸಂಕೀರ್ಣ ಭಾವನೆಗಳೇ ಸೆಕ್ಸ್ ಅನ್ನು ಬೆಂಕಿಯ ಹಾಗೆ ಎಚ್ಚರದಿಂದ ಬಳಸಿಕೊಳ್ಳಬೇಕಾದ ವಿಷಯವನ್ನಾಗಿ ಮಾರ್ಪಡಿಸಿದ್ದು. ಅದನ್ನು ಅಶ್ಲೀಲ, ಅನಾಗರಿಕ, ಕಾನೂನುಬಾಹಿರ ವಿಷಯ ವನ್ನಾಗಿಸಿ ನಾಗರಿಕತೆಗಳು ಮುಚ್ಚಿಟ್ಟಿದ್ದು.

ಸೆಕ್ಸ್ ಅನ್ನು ಏಕೆ ಹತೋಟಿ ಮಾಡಬೇಕು ಎಂಬ ಚಿಂತನೆಗೆ ಬೇರೊಂದು ಕಾರಣ ಒದಗಿಸಿದ್ದು ಡಾರ್ವಿನ್‌ನ ಉತ್ಕ್ರಾಂತಿವಾದ. ಅದು ಪ್ರಾಣಿಗಳಿಗಿಂತ ತಾನು
ಮೇಲಿನವನು ಅಲ್ಲದೆ ಶ್ರೇಷ್ಠತೆಯನ್ನು ಪಡೆಯಬಲ್ಲವನು ಎನ್ನುವ ಗರ್ವವನ್ನು ಮಾನವ ಮನಸ್ಸಿನಲ್ಲಿ ಮೂಡಿಸಿತು. ತಾನು ‘ಕೀಳು’ ಕಾಮದಲ್ಲಿ ತೊಡಗಬಾರದು. ಅದು ತನ್ನ ಘನತೆಗೆ ಯೋಗ್ಯವಲ್ಲ ಎಂಬ ಭಾವನೆ ಆತನ ಮನಸ್ಸಿನಲ್ಲಿ ಬಂತು. ಹೀಗೆ ತನಗೆ ತಾನೇ ಆದರ್ಶದ ಪಾತ್ರ ಕೊಟ್ಟುಕೊಂಡ ಮನುಷ್ಯ ಸುಮಾರು ಇಪ್ಪತ್ತನೆಯ ಶತಮಾನದ ಆದಿಭಾಗದವರೆಗೂ ಸೆಕ್ಸ್ ಅನ್ನು ಮುಚ್ಚಿಕೊಳ್ಳುತ್ತ ಆದರ್ಶದ ಜೇಡರಬಲೆಯನ್ನು ನೂತುಕೊಳ್ಳುತ್ತಲೇ ಹೋದ. ಈಗ ಆತ ಗ್ರಹಿಸಿದ್ದೆಂದರೆ ಮಾನವ ಪ್ರಾಣಿತ್ವವನ್ನು ಮೀರಿದ ಪ್ರಾಣಿ. ಘನವಂತ. ಆತನ ಅಗಾಧ ವ್ಯಕ್ತಿತ್ವದಲ್ಲಿ ಲೈಂಗಿಕತೆ ಇತ್ಯಾದಿಯೆಲ್ಲ ಚಿಲ್ಲರೆ ವಿಷಯಗಳು. ಚಿಕ್ಕ ಒಳ
ವ್ಯವಹಾರ. ವಿಷಯ ಸಾರ್ವಜನಿಕವಾಗಿ ಮಾತನಾಡುವವ ಹೊಲಸು ಮನುಷ್ಯ. ಅಸಹಜ ಸೆಕ್ಸ್ ಸಮಾಜಬಾಹಿರ ಕೆಲಸ. ಶಿಕ್ಷಾರ್ಹ ಅಪರಾಧ. ಭಾರತದಂಥ ಸಂಸ್ಕೃತಿಗಳು ಕಾಮವನ್ನು ಗೆಲ್ಲಬಹುದಾದ ದಾರಿಗಳನ್ನೂ ಹುಡುಕಿದ್ದವು.

ಸಂಸ್ಕೃತಿಯನ್ನು, ಧಾರ್ಮಿಕತೆಯನ್ನು ಒಂದು ರೀತಿಯ ರಾಕಾಷ್ಟತೆಯ ಮನಸ್ಥಿತಿಗೆ ಒಯ್ದರೆ ಸೆಕ್ಸ್ ಅನ್ನು ಅಷ್ಟರ ಮಟ್ಟಿಗೆ ನಿಯಂತ್ರಿಸಬಹುದು ಎನ್ನುವುದು ಅವುಗಳ ಗ್ರಹಿಕೆಯಾಗಿತ್ತು. ಮತ್ತು ಇಂಥ ಹಿನ್ನೆಲೆಯಲ್ಲಿಯೇ ಕಾಮವನ್ನು ಗೆದ್ದವರನ್ನು ವಿಶೇಷ ಶಕ್ತಿ ಹೊಂದಿದವರು ಎಂದು ಬಿಂಬಿಸಲಾಗುತ್ತಿತ್ತು. ಮಾನವ ಹುಟ್ಟುವುದು ಹಲವು ಜನ್ಮದ ಪುಣ್ಯದ ಫಲವಾಗಿ. ಮತ್ತೆ ಜೀವನದ ಉದ್ದೇಶ ಒಳ್ಳೆಯ ಕಾರ್ಯ ಮಾಡಿ ಭಗವಂತನ ಪಾದ ಸೇರುವುದು. ಭವಬಂಧನದಿಂದ ಮುಕ್ತಿ ಹೊಂದುವುದು. ನಾಗರಿಕತೆಗಳು ಇದೇ ರೀತಿಯ ಜೀವನ ಮತ್ತು ಸಾಂಸ್ಕೃತಿಕ ದೃಷ್ಟಿಯನ್ನು ಮನುಕುಲಕ್ಕೆ ನೀಡಿದ್ದವು. ಮಹಾಭಾರತ ರಾಮಾಯಣಗಳನ್ನು ನೋಡಿ!

ಮನುಷ್ಯನ ಜೀವನದ ಉದ್ದೇಶ ಇರುವುದು ಪಾರಮಾರ್ಥಿಕತೆಯಲ್ಲಿ. ಮಿಲ್ಟನ್ ಪ್ಯಾರಡೈಸ್ ಲಾಸ್ಟ್ ಅನ್ನು ಬರೆದದ್ದು ಕೂಡ ಮನುಷ್ಯ ಹಾಗೂ ದೇವರ ನಡುವಿನ ಸಂಬಂಧವನ್ನು ಗ್ರಹಿಸುವುದಕ್ಕಾಗಿ. ಗಾಂಧಿ ತಮ್ಮ ಜೀವನದ ಕೊನೆಯ ಹಂತಗಳಲ್ಲಿ ಸೆಕ್ಸ್ ಅನ್ನು ಗೆಲ್ಲಲು ತಾನು ಯಶಸ್ವಿಯಾಗಿದ್ದೇನೆಯೇ ಇಲ್ಲವೇ ಇತ್ಯಾದಿ ಪರೀಕ್ಷೆಗಳಲ್ಲಿ ತೊಡಗಿಕೊಂಡಿದ್ದು ಇಂಥ ಭಾವನೆಗಳ ಹಿನ್ನೆಲೆಯಲ್ಲಿಯೇ. ಮೇಲಿನದು ಮುನ್ನುಡಿ. ನಿಜವಾಗಿ ಹೇಳಬೇಕಾದ ವಿಷಯ ಸಮಾಜಗಳ ಇಂಥ ಪ್ರಯತ್ನಗಳನ್ನೆಲ್ಲ ವ್ಯರ್ಥವಾಗಿಸಿದ ಸೆಕ್ಸ್ ಹೇಗೆ ಇಂದು ನಮ್ಮ ಮನಸ್ಸುಗಳನ್ನು ಆಳುತ್ತಿದೆ ಎನ್ನುವುದು. ಸಿಗ್ಮಂಡ್ ಪ್ರಾಯ್ಡ್ ಹುಟ್ಟುಹಾಕಿದ ಲೈಂಗಿಕ ಕ್ರಾಂತಿಯ ನಡುವೆ ತಳಮಳದ ಜಗತ್ತಿನಲ್ಲಿ ನಾವು ಬದುಕಿದ್ದೇವೆ ಎನ್ನುವುದು.

ಸೆಕ್ಸ್ ಅನ್ನು ಬದುಕಿನ ಕೇಂದ್ರಕ್ಕೆ ತಂದು ನಿಲ್ಲಿಸಿದವನು ಪ್ರಾಯ್ಡ್. ಮನಸ್ಸುಗಳನ್ನೇ ಬದಲಿಸಿದವನು. ಆಳವಾದ ಮನಶಾಸ್ತ್ರೀಯ ಅಧ್ಯಯನದಲ್ಲಿ ತೊಡಗಿದ್ದ ಆತನಿಗೆ ಸೆಕ್ಸ್ ಕುರಿತಾದ ಹಲವು ವಿಷಯಗಳು ಗೋಚರಿಸಿದ್ದವು. ಆತ ಹೇಳಿದ್ದೆಂದರೆ ‘ಲಿಬಿಡಿನಲ್ ಪವರ್ ಅಥವಾ ಕಾಮದ ಶಕ್ತಿಯೇ ವ್ಯಕ್ತಿತ್ವವನ್ನು ನಿರೂಪಿ ಸುವ ಕೇಂದ್ರ ಶಕ್ತಿ. ಅದು ಹಲವು ಹಂತಗಳಲ್ಲಿ ಬೆಳೆಯುತ್ತದೆ. ಓರಲ್, ಆನಲ್ ಮತ್ತು ಪ್ರೀ-ಸೆಕ್ಷುವಲ್. ಮತ್ತಷ್ಟು ತಿಳಿಸಿದ ಪ್ರಾಯ್ಡ್, ‘ಮನುಷ್ಯನ ಇಡೀ ವ್ಯಕ್ತಿತ್ವ ವನ್ನೇ ಸೆಕ್ಸ್ ಆವರಿಸಿಕೊಂಡಿದೆ ಎಂದು ಹೇಳಿದ. ಗಂಡು ಮಗುವಿನಲ್ಲಿ ತಾಯಿಯ ಕುರಿತು ಇರುವ ವಿಶೇಷವಾದ ಆಕರ್ಷಣೆ ಲೈಂಗಿಕವಾದ ‘ಈಡಿಪಸ್
ಕಾಂಪ್ಲೆಕ್ಸ್’ ಎಂದು ಹೇಳಿದ. ಹಾಗೆಯೇ ಹೆಣ್ಣು ಮಗುವಿಗೆ ತಂದೆಯ ಕುರಿತಾದ ವಿಶೇಷವಾದ ಆಕರ್ಷಣೆ ಎಲೆಕ್ಟ್ರಾಕಾಂಪ್ಲೆಕ್ಸ್ (ಲೈಂಗಿಕ) ಎಂದು ಹೇಳಿದ. ಸೆಕ್ಸ್
ಮಾನವನ ಮೂಲಭೂತ ನಡವಳಿಕೆ ಎಂದು ಹೇಳಿದ.

ಶೇಕ್ಸ್‌ಪಿಯರ್‌ನ ನಾಟಕ ‘ಹ್ಯಾಮ್ಲೆಟ್’ನಲ್ಲಿ ನಾಯಕ ಹ್ಯಾಮ್ಲೆಟ್ ತಾಯಿಯ ಕೋಣೆಯಲ್ಲಿ ಎಷ್ಟೋ ಬಾರಿ ಆಕೆಗೆ ಗುಡ್‌ನೈಟ್ ಹೇಳಿದರೂ ಕೂಡ ಕೋಣೆಯಿಂದ
ಹೊರಬಾರದೆ ಅಲ್ಲೇ ನಿಂತಿರುವ ನಡವಳಿಕೆಯನ್ನು ವಿಮರ್ಶಕರು ಈಡಿಪಸ್ ಕಾಂಪ್ಲೆಕ್ಸ್‌ಗೆ ಉದಾಹರಣೆಗಾಗಿ ಹೇಳಿದ್ದಾರೆ. ಫ್ರಾಯ್ಡ್ ಹೇಳಿದ್ದು ಸರಿಯೋ ತಪ್ಪೋ ಎನ್ನುವ ಚರ್ಚೆ ಇಲ್ಲಿ ಅಪ್ರಸ್ತುತ. ಹಲವು ಮನಶಾಸ್ತ್ರಜ್ಞರ ವಾದವನ್ನು ಬಲವಾಗಿ ವಿರೋಽಸಿದ್ದಾರೆ ಕೂಡ. ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಫ್ರಾಯ್ಡ್
ಜಾಗತಿಕ ಲೈಂಗಿಕ ಕ್ರಾಂತಿಗೆ ಮುನ್ನುಡಿ ಬರೆದ.

ನಾಗರಿಕತೆಗಳು ಕಾಮದ ಮೇಲೆ ಇಟ್ಟುಕೊಂಡೇ ಬಂದಿದ್ದ ಮುಚ್ಚಿಗೆಯನ್ನು ಆತ ಕಿತ್ತೆಸೆದ. ಫ್ರಾಯ್ಡ್ ಆಳಿದ ಜಗತ್ತು ಲೈಂಗಿಕತೆಯ ಒಳವಿವರಗಳ ಕುರಿತು
ಕೂಡ ಬಿಚ್ಚಿ ಮಾತನಾಡಲಾರಂಭಿಸಿತು. ಹಿಂದಿನ ಜಗತ್ತು ‘ಹೊಲಸು’, ‘ವಿಕೃತ’ ‘ಅಸಭ್ಯ’ ‘ಅಶ್ಲೀಲ’ ಎಂದು ಭಾವಿಸಿದ್ದ ವಿಷಯಗಳು ಈಗ ಭಾರೀ ದೊಡ್ಡ
ಗದ್ದಲದೊಂದಿಗೆ ಹೊರಬಿದ್ದವು. ಪರಿಶುದ್ದ (ಕಾಮವಿಲ್ಲದ) ಪ್ರೇಮ ಹಾಸ್ಯದ ವಿಷಯವಾಯಿತು. ‘ವಿಕೃತ’ ಕವಿತೆಗಳು ಬಂದವು. ಉದಾಹರಣೆಗೆ ಇರುವುದು ಫ್ರೆಂಚ್ ಸಿಂಬಲಿಸ್ಟ್ ಕಾವ್ಯ. ಈ ಗುಂಪಿನ ಪ್ರಮುಖ ಕವಿ ಬೌದಲೇಯರ್ ಕೃತಿ (ಲಂಕೇಶ್ ಅನುವಾದಿತ) ‘ಪಾಪದ ಹೂಗಳು’ ಮುಕ್ತ, ‘ವಲ್ಗರ್’ ಕಾಮವನ್ನು ಸೆಲೆಬ್ರೇಟ್ ಮಾಡುವ ಕವನ ಸಂಕಲನ.

ಅಲ್ಲಿನ ಒಂದು ಕವಿತೆಯಲ್ಲಿ ಓರ್ವ ಪ್ರಿಯಕರ ವೇಶ್ಯೆಯೊಬ್ಬಳಿಗೆ ‘ನೀನು ನನ್ನ ಪ್ರೀತಿಯ ತಂಗಿ ಮತ್ತು ಪ್ರಿಯತಮೆ ಎಂದು ಹೇಳುತ್ತಾನೆ. ಹೀಗೆ ಕವಿತೆ ವೇಶ್ಯೆ,
ಪ್ರಿಯತಮೆ ಮತ್ತು ತಂಗಿಯನ್ನು ಒಂದೇ ಆಗಿಸುತ್ತದೆ. ಕವಿತೆ ಜಗತ್ತನ್ನೇ ಬೆಚ್ಚಿ ಬೀಳಿಸಿತು. ನಂತರ ಇಂಗ್ಲಿಷ್ ನಾಟಕಕಾರ ಬರ್ನಾಡ್ ಷಾ ತನ್ನ ಕೃತಿ ಮಿಸ್ಸಸ್ ವಾರನ್ಸ ಪ್ರೊಫೆಶನ್‌ನಲ್ಲಿ (ಒಂದು ವೇಶ್ಯೆಯ ಕಥೆ) ಕಾಮದ ನೈತಿಕತೆಯನ್ನು ಹಾಸ್ಯ ಮಾಡಿದ. ಕವಿ ಟಿ. ಎಸ್.ಎಲಿಯಟ್ ತನ್ನ ವೇಸ್ಡಲ್ಯಾಂಡ್‌ನಲ್ಲಿ ಈಗ
‘ಪ್ರೇಮ’ವೆಲ್ಲವೂ ಹೊರಟುಹೋಗಿ ಸೆಕ್ಸ್ ಮಾತ್ರ ಉಳಿದುಕೊಂಡಿರುವ ಹೆಣ್ಣು ಗಂಡುಗಳ ಕಥೆ ಹೇಳಿದ.

ಅಲ್ಲಿ ಇಂಥ ಎರಡು ಸನ್ನಿವೇಶಗಳು ಬರುತ್ತವೆ. ಮೊದಲನೆಯದು ಒಂದು ‘ಪ್ರಿಯತಮೆ’ ಮತ್ತು ‘ಪ್ರಿಯಕರ’ನ ಭೇಟಿಯ ಸನ್ನಿವೇಶ. ಬಂದ ಆತ ನೇರವಾಗಿ ಆಕೆಯ ಮೇಲೆರಗುತ್ತಾನೆ. ಆಕೆ ಕಾದಿರುವುದೂ ಅದಕ್ಕಾಗಿಯೇ. ‘ಅದು’ ಮುಗಿಸಿ ಆತ ಹೊರಟು ಹೋಗುತ್ತಾನೆ. ಆಕೆ ಈಗ ನಿರಾಳವಾಗಿ ತನ್ನ ಕೂದಲುಗಳನ್ನು ಸಾವರಿಸಿ ಕೊಳ್ಳುತ್ತಾಳೆ. ಗ್ರಾಮೋಫೋನ್ ಹಚ್ಚಿ ಮತ್ತೆ ಕಾಯುತ್ತಾಳೆ. ಅಂದರೆ ಗ್ರಾಮ-ನ್ ತಿರುಗುವಂಥ ನಿರ್ಭಾವುಕ ಕ್ರಿಯೆ ಅದು. ನಿಜವಾಗಿ ಆತ ಆಕೆಯ ‘ಪ್ರಿಯಕರ’ ಅಲ್ಲ. ಕಾಮದ ಗೊಂಬೆ ಮಾತ್ರ. ಅಥವಾ ಈಗ ಪ್ರಿಯಕರ ಶಬ್ದದ ಅರ್ಥವೇ ಬದಲಾಗಿ ಹೋಗಿದೆ. ಇನ್ನೊಂದು ಸನ್ನಿವೇಶದಲ್ಲಿ ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಗೆ ಹೇಳುತ್ತಾಳೆ: ನೀನು ಆತನ ಬಳಿ ಹೋಗು. ಮತ್ತೆ ನೀನು ಆತನನ್ನು ಪ್ರೀತಿಸದಿದ್ದರೂ ಏನಾಯಿತು? ಮುಗಿಸಿ ಬಾ ಅಷ್ಟೇ!

ಮತ್ತೆ ಗುಳಿಗೆ ತೆಗೆದುಕೊಂಡರಾಯಿತು ಎನ್ನುತ್ತಾಳೆ. ಹಾಗೆಯೇ ಇನ್ನೂ ಮುಂದೆ ಹೋಗಿ ಮತ್ತೆ ನೀನು ಒಪ್ಪದಿದ್ದರೆ ಆತನ ಬಳಿ ಇನ್ನೊಬ್ಬಳು ಹೋಗುತ್ತಾಳೆ
ನೋಡು ಎಂದು ಎಚ್ಚರಿಸುತ್ತಾಳೆ. ಹೀಗೆ ಎಲಿಯಟ್ ಕಾಮದ ಅನ್‌ರೋಮ್ಯಾನ್ಟಿಕ್ ಮುಖಗಳನ್ನು ಜಗತ್ತಿನ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟ. ಬ್ರಿಟಿಷ್
ಕಾದಂಬರಿಕಾರ ಡಿ.ಎಚ್.ಲಾರೆನ್ಸ್‌ನ ‘ಲೇಡಿ ಚಟರ್ಲಿಸ್ ಲವರ್’ ನಮ್ಮ ಶೋಭಾ ಡೇಯ ಕಾದಂಬರಿಗಳ ರೀತಿ ಕಾಮದ ಅಸಹ್ಯ ವಿವರಣೆಗಳಿಂದ ತುಂಬಿದ ಕೃತಿ. ಎಂಥ ವಲ್ಗರ್ ವಿವರಗಳಿಂದ ತುಂಬಿದೆ ಎಂದರೆ ಇಂಗ್ಲೆಂಡಿನಲ್ಲಿಯೇ ಅದನ್ನು ಬ್ಯಾನ್ ಮಾಡಲಾಗಿತ್ತು. (ಆದರೆ ಕದ್ದು ಅದರ ಲಕ್ಷಾಂತರ ಕಾಪಿಗಳು
ಮಾರಾಟವಾದವು ಬಿಡಿ!). ಮತ್ತೆ ಇದೇ ಸಂದರ್ಭದಲ್ಲಿಯೇ ಜಾಗತಿಕವಾದ, ತೆರೆದ ಲೈಂಗಿಕತೆಯ ‘ಪ್ಲೇಬಾಯ್’ ಮತ್ತಿತರ ಪತ್ರಿಕೆಗಳು ಆರಂಭವಾಗಿದ್ದು.
ಇಂಥ ಮೊದಲನೆಯ ‘ಬೃಹತ್ ಲೈಂಗಿಕ ಕ್ರಾಂತಿ’ ನಡೆದದ್ದು ಇಪ್ಪತ್ತನೆ ಶತಮಾನದ ಎರಡನೆಯ ದಶಕದ ಆಸುಪಾಸು.

ಎರಡನೆಯ ಲೈಂಗಿಕ ಕ್ರಾಂತಿ ನಡೆದದ್ದು ಅರವತ್ತರ ದಶಕದಲ್ಲಿ. ಈಗ ಪಾಶ್ಚಾತ್ಯ ದೇಶಗಳಲ್ಲಿ ‘ಬ್ಲೂ ಫಿಲಂಗಳು’ ಬಂದವು. ಕಾಂಡೋಮ್‌ಗಳು ಬಂದವು.
ಮಹಿಳೆಯರು ಬಳಸಬಹುದಾದ ಗುಳಿಗೆಗಳು ಬಂದವು. ಭಗವಾನ್ ರಜನೀಶ್ ಹೇಳುವ ಹಾಗೆ ಈ ವೈಜ್ಞಾನಿಕ ಬೆಳವಣಿಗೆಗಳು ಪುರುಷ ಮತ್ತು ಮಹಿಳೆಯರ ನಡುವೆ ಲೈಂಗಿಕ ಸಮಾನತೆಯನ್ನು ತಂದವು. ಏಕೆಂದರೆ ಆತ ಹೇಳುವ ಹಾಗೆ ನಿಜವಾಗಿಯೂ ಗಂಡು ಹೆಣ್ಣಿನ ನಡುವೆ ಅಸಮಾನತೆ ಹುಟ್ಟಿಕೊಳ್ಳುತ್ತಿದ್ದುದು ಸೆಕ್ಸ್ ಕ್ರಿಯೆ ಮುಗಿದ ನಂತರ. ಆತ ಗರ್ಭಿಣಿಯಾಗುವುದಿಲ್ಲ. ಆಕೆ ಗರ್ಭಿಣಿಯಾಗಬೇಕಿತ್ತು. ಆದರೆ ಗುಳಿಗೆಗಳು ಗಂಡು ಹೆಣ್ಣಿನ ನಡುವಿನ ಈ ಅಸಮಾನತೆಯನ್ನು ತೆಗೆದುಹಾಕಿ ಮಹಿಳೆಯರಿಗೂ ಮುಕ್ತ ಕಾಮದ ಅವಕಾಶ, ಸ್ವಾತಂತ್ರ್ಯ ಒದಗಿಸಿದವು.

ನಂತರ ‘ಬ್ರಾ ವಿರೋಧಿ’ ಚಳವಳಿಗಳು ಬಂದವು. ಹಿಪ್ಪಿ ಸಂಸ್ಕೃತಿ ಬಂತು. ಸೆಕ್ಸ್ ಸಂಪೂರ್ಣವಾಗಿ ಬಯಲಲ್ಲಿ ಬಂದು ನಿಂತಿದ್ದು ಹೀಗೆ. ಇಂದಿನ ನಮ್ಮ ಬದುಕು ಗಳನ್ನು ಪ್ರಮುಖವಾಗಿ ಆಳುತ್ತಿರುವ ಶಕ್ತಿ ಹಿಂದಿನವುಗಳಿಗಿಂತಲೂ ವಿಸ್ತಾರವಾದ ಮತ್ತು ಆಳವಾದ (ಮೂರನೆಯ) ಬಹು ದೊಡ್ಡ ಲೈಂಗಿಕ ಕ್ರಾಂತಿ. ಸೆಕ್ಷುವಲ್ ಕ್ರಾಂತಿ ಯಾವ ಮಟ್ಟವನ್ನು ಮುಟ್ಟಿದೆ ಎಂದರೆ ಪ್ರಸ್ತುತದಲ್ಲಿ ಬ್ಲೂಫಿಲಂಗಳು, ವೇಶ್ಯಾವಾಟಿಕೆ, ಕ್ಯಾಶುವಲ್ ಸೆಕ್ಸ್ ಸಾಮಾನ್ಯವಾಗಿ ಹೋಗಿವೆ. ಎಲ್ಲೆಂದರಲ್ಲಿ ಲಭ್ಯವಿವೆ. ಸೆಕ್ಸ್ ಆಟಿಗೆಗಳು ಬಂದಿವೆ. ಸಲಿಂಗಿಗಳು, ಲೆಸ್ಬಿಯನ್‌ಗಳು, ಗೇಗಳು, ಟ್ರಾನ್ಸ್‌ಜೆಂಡರ್‌ಗಳು ಇವರ ವಿಷಯ ಎಲ್ಲರಿಗೂ ಗೊತ್ತು. ಸೆಕ್ಸ್ ಟೂರಿಸಂ ಜನಪ್ರಿಯವಾಗಿರುವುದು ಜಗತ್ತಿಗೇ ತಿಳಿದಿದೆ. ಬದಲಾಗಿ ಹೋಗಿರುವ ಜಗತ್ತಿನಲ್ಲಿ ಸೆಕ್ಸ್ ಒಂದು ಬೃಹತ್ ಮಾರುಕಟ್ಟೆ.

ಹೀಗಾಗಿಯೇ ಇತ್ತೀಚೆಗೆ ಟಿವಿಗಳು ನೇರವಾಗಿ ತೋರಿಸುತ್ತಿರುವ ಲೈಂಗಿಕ ಹಗರಣಗಳ ವಿಡಿಯೋಗಳು ಅಥವಾ ದಟ್ಟ ಲೈಂಗಿಕ ವಾಸನೆಯಿಂದ ತುಂಬಿರುವ ರಿಯಾಲಿಟಿ ಶೋಗಳು ಕೂಡ ನಮ್ಮ ಸಮಾಜವನ್ನು ಶಾಕ್ ಮಾಡುತ್ತಿಲ್ಲ. ಸಮಾಜ ಬೆಚ್ಚಿಕೊಳ್ಳುತ್ತಿರುವಂತಿಲ್ಲ. ಬದಲಿಗೆ ‘ಇವೆಲ್ಲ ಏನು ಮಹಾ’! ಎಂಬಂತೆ
ಮೌನವಾಗಿದೆ. ಅಂದರೆ ಹೆಚ್ಚು ಕಡಿಮೆ ಮುಕ್ತ ಲೈಂಗಿಕತೆಯನ್ನು ಸಮಾಜ ಒಪ್ಪಿಕೊಳ್ಳುತ್ತಿರುವಂತಿದೆ. ಗಾಬರಿಯ ವಿಷಯವೆಂದರೆ ಮುಂದಿನ ದಶಕಗಳಲ್ಲಿ
ವಿವಾಹಗಳಂಥ ವ್ಯವಸ್ಥೆಗಳು ಅಪ್ರಸ್ತುತವಾಗಿ ಹೋದರೂ ಅಚ್ಚರಿ ಇಲ್ಲ. ಇವೆಲ್ಲವುಗಳ ಕುರಿತು ನಮ್ಮ ನಿಲುವುಗಳು ಏನು ಎಂದು ಸಮಾಜಗಳು ಗಂಭೀರವಾಗಿ
ಆಲೋಚಿಸಬೇಕಿದೆ.