ಶಶಾಂಕಣ
ಶಶಿಧರ ಹಾಲಾಡಿ
ಇಂದಿನ ಕೋವಿಡ್ ಸ್ಥಿತಿ ಮತ್ತು ಲಾಕ್ಡೌನ್ ನಿಂದಾಗಿ ಜನಸಾಮಾನ್ಯರಲ್ಲಿ ಖಿನ್ನತೆ ಮನೆಮಾಡುವ ಸಾಧ್ಯತೆಯಿದೆ. ಅದಕ್ಕೆ ಉತ್ತಮ ಚಿಕಿತ್ಸೆ ಎಂದರೆ ರೀಡಿಂಗ್ ಥೆರೆಪಿ ಅಥವಾ ಓದಿನ ಚಿಕಿತ್ಸೆ.
ಪುಸ್ತಕಗಳನ್ನು ಓದುವ ಮೂಲಕ ಖಿನ್ನತೆ ದೂರ ಮಾಡಬಹುದು ಮತ್ತು ಮನಸ್ಸನ್ನು ಉಲ್ಲಸಿತವನ್ನಾಗಿಡಬಹುದು – ಹೀಗೆಂದ ವರು ಖ್ಯಾತ ಮನೋವೈದ್ಯ ಮತ್ತು ಸಾಹಿತಿ ಡಾ. ಸಿ.ಆರ್.ಚಂದ್ರಶೇಖರ್. ಸಂದರ್ಭ ಕರ್ನಾಟಕದಲ್ಲಿ ಜನರಿಗೆ ಹೊಸ ಪುಸ್ತಕ ಖರೀದಿಸಲು ಅವಕಾಶ ಮಾಡಿಕೊಡಬೇಕು ಎಂಬ ಹಕ್ಕೊತ್ತಾಯದ ವಿಡಿಯೋ ಮೀಟಿಂಗ್. ಈ ವೆಬ್ ಮೀಟಿಂಗ್ ನಡೆದದ್ದು ಮೊನ್ನೆ (19.5.2021).
ಕರ್ನಾಟಕದ ಪ್ರಮುಖ ಪುಸ್ತಕ ಮಳಿಗೆಗಳು, (ಸಪ್ನಾ, ನವಕರ್ನಾಟಕ, ಅಂಕಿತ, ಆಕೃತಿ, ಬಹುರೂಪಿ ಇತ್ಯಾದಿ), ಸಾಹಿತಿಗಳು ಮತ್ತು ಓದುಗರು ಭಾಗವಹಿಸಿದ್ದ ಈ ವಿಡಿಯೋ ಮೀಟಿಂಗನ್ನು ಆಯೋಜಿಸಿದ್ದವರು ಬಹುರೂಪಿ ಬುಕ್ ಹಬ್. ಜ್ಞಾನ ಪಸರಿಸುವ, ಮನರಂಜನೆ ಒದಗಿಸುವ, ಓದು ಎಂಬ ಅಪರೂಪದ ಅನುಭವ ನೀಡುವ, ಹೊಸ ಕೌಶಲಗಳನ್ನು ಕಲಿಯಲು
ಅವಕಾಶ ಮಾಡಿಕೊಡುವ ಪುಸ್ತಕಗಳು ಇಂದು ಜನಸಾಮಾನ್ಯರಿಗೆ ಸಿಗದಂತಾಗಿವೆ; ಮನಸ್ಸಿಗೆ ನೆಮ್ಮದಿ ನೀಡುವ, ಮಿದುಳಿಗೆ ಆರೋಗ್ಯಕರ ಕಸರತ್ತು ನೀಡುವ ಓದು ಅಷ್ಟರ ಮಟ್ಟಿಗೆ ಹಿನ್ನಡೆ ಕಂಡಿದೆ; ಹೊಸ ಪುಸ್ತಕಗಳನ್ನು ಜನರು ಖರೀದಿಸುವ ಅವಕಾಶವೇ ಬಹುಮಟ್ಟಿಗೆ ನಿಂತುಹೋಗಿದೆ; ಹೊಸ ಹೊಸ ಜ್ಞಾನವನ್ನು ಜನರಿಗೆ ಹಂಚುವ ಅವಕಾಶವೇ ಇಲ್ಲದಂತೆ
ಮಾಡಲಾಗಿದೆ. ಆದ್ದರಿಂದ ಜನರು ಪುಸ್ತಕ ಖರೀದಿಸುವ ಅವಕಾಶ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸುವ ಮೊನ್ನೆ ನಡೆದ ಈ ವೆಬ್ ಮೀಟಿಂಗ್ ಅರ್ಥಪೂರ್ಣ ಎನಿಸಿತು.
ಸುಮಾರು ಒಂದೂವರೆ ಗಂಟಯ ಕಾಲ ನಡೆದ ಈ ಮೀಟಿಂಗ್ನಲ್ಲಿ ಪ್ರಮುಖ ಪ್ರಕಾಶಕರು ಮತ್ತು ಮಾರಾಟಗಾರರು ಪುಸ್ತಕ
ಮಾರಾಟದ ಸಮಸ್ಯೆಯನ್ನು ತೋಡಿಕೊಂಡರೆ, ಡಾ.ಸಿ.ಆರ್. ಚಂದ್ರಶೇಖರ್ರವರಂಥ ವೈದ್ಯರು “ರೀಡಿಂಗ್ ಥೆರೆಪಿ” ಅಥವಾ ಓದಿನ ಚಿಕಿತ್ಸೆಯ ಮಹತ್ವವನ್ನು ತಿಳಿಸಿದರು. ನಮ್ಮ ದೇಶ ಹಿಂದೆಂದೂ ಕಾಣದಂಥ ವೈರಸ್ ಸೋಂಕಿನ ಬಿಕ್ಕಟ್ಟನ್ನು ಎದುರಿಸು ತ್ತಿದೆ; ಇಂಥ ಸಮಯದಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು, ಜನರ ಮನಸ್ಥಿತಿಯನ್ನು ಆರೋಗ್ಯಕರವಾಗಿರಿಸಲು ಪುಸ್ತಕ ಗಳು ಎಂಥ ಮಹತ್ವದ ಪಾತ್ರ ವಹಿಸಬಲ್ಲವು ಎಂಬುದನ್ನು ಸಿ.ಆರ್.ಚಂದ್ರಶೇಖರ್ ವಿವರಿಸಿದ ಪರಿ ಮನಮುಟ್ಟುವಂತಿತ್ತು.
ಆ ವಿಡಿಯೋ ಮೀಟಿಂಗ್ನಲ್ಲಿ ಪೂರ್ತಿಯಾಗಿ ಭಾಗವಹಿಸಿದ ನಂತರ ಅನಿಸಿದ್ದೇನೆಂದರೆ, ಸರಕಾರ ಯಾಕೆ ಪುಸ್ತಕಗಳು ಜನರ ಕೈಗೆ ಸಿಗದಂತೆ ಮಾಡಿಬಿಟ್ಟಿದೆಯಲ್ಲಾ ಎಂಬ ಅಸಹಾಯಕತೆ ಮತ್ತು ಒಂದು ರೀತಿಯ ಹತಾಶೆ. ಇದು ಉದ್ದೇಶಪೂರ್ವಕ ಅಲ್ಲದಿರ ಬಹುದು, ಲಾಕ್ ಡೌನ್ ನಿಯಮಾವಳಿ ಗಳನ್ನು ಮಾಡುವಾಗ ಸಾರಾಸಗಟಾಗಿ ಹೇರಿದ ನಿರ್ಬಂಧದಿಂದ ಉಂಟಾದ ಪರಿಸ್ಥಿತಿ ಇದಾಗಿರ ಬಹುದು. ಆದರೆ, ಹೊಸ ಹೊಸ ಪುಸ್ತಕಗಳನ್ನು ಖರೀದಿಸಬಯಸುವವರಿಗೆ ಕಳೆದ ಎರಡು ಮೂರು ವಾರಗಳಿಂದ ಅಕ್ಷರಶಃ ಕೈಕಟ್ಟಿಹಾಕಿದಂತಾಗಿದೆ.
ಲಾಕ್ಡೌನ್ನಿಂದಾಗಿ, ಪುಸ್ತಕದ ಅಂಗಡಿಗಳು ದಿನಪೂರ್ತಿ ಬಾಗಿಲು ಹಾಕಿದ್ದು, ಅಂಗಡಿಗೆ ಹೋಗಿ ತಮಗೆ ಬೇಕೆನಿಸುವ ಪುಸ್ತಕ ಖರೀದಿಸಲು ಜನರಿಗೆ ಅಸಾಧ್ಯ ಎನಿಸಿದೆ. ಉತ್ತಮ ಪುಸ್ತಕಮಳಿಗೆಯೊಂದರಲ್ಲಿ ನಾನಾ ರೀತಿಯ ಪುಸ್ತಕಗಳನ್ನು ನೋಡುತ್ತಾ, ನೆಚ್ಚಿನ ಲೇಖಕರ ಪುಸ್ತಕಗಳನ್ನು ಕೈಯಿಂದ ಮುಟ್ಟಿ, ಒಮ್ಮೆ ಸವರಿ, ಮನದಲ್ಲೇ ಅದೊಂದು ರೀತಿಯ ಸಂಭ್ರಮಕ್ಕೆ ಒಳಗಾಗಿ,
ಬೇಕೆನಿಸಿದ ಪುಸ್ತಕ ಖರೀದಿಸುವ ಅನುಭವವೇ ಅನನ್ಯ. ಹಾಗೆ ಪ್ರೀತಿಯಿಂದ ಖರೀದಿಸಿ ಮನೆಗೆ ತಂದ ಪುಸ್ತಕವನ್ನು ಆರಾಮಾಗಿ ಕುಳಿತು, ನಿಧಾನವಾಗಿ ಓದುವ ಅನುಭವ ವಂತೂ ಇನ್ನಷ್ಟು ಅನನ್ಯ, ಮನೋಲ್ಲಾಸಕಾರಿ.
ಉತ್ತಮ ಮತ್ತು ನೆಚ್ಚಿನ ಪುಸ್ತಕವೊಂದನ್ನು ಓದಿದ ನಂತರ ಸಿಗುವ ಉಲ್ಲಾಸ, ನೆಮ್ಮದಿ, ಅನುಭವವನ್ನು ಶಬ್ದಗಳಲ್ಲಿ ಸುಲಭ ವಾಗಿ ಹೇಳಲು ಕಷ್ಟ. ಡಾ. ಸಿ.ಆರ್. ಚಂದ್ರಶೇಖರ್ ಹೇಳುವಂತೆ, ಅದೊಂದು ವಿಶಿಷ್ಟ ಥೆರೆಪಿ; ಆರೋಗ್ಯಕರ ಮನಸ್ಸನ್ನು ಇನ್ನಷ್ಟು ಸ್ವಸ್ಥವಾಗಿಸುವ ಥೆರೆಪಿ ಅದು; ಕರೋನಾ ಕಾರ್ಮೋಡಕ್ಕೆ ನಲುಗಿರಬಹುದಾದ ಮನಸ್ಸೊಂದರಲ್ಲಿ ಉಲ್ಲಾಸ ತುಂಬಿ, ಸಹಜಸ್ಥಿತಿಗೆ ವಾಪಸು ತರಬಲ್ಲ ಪರಿಣಾಮಕಾರಿ ರೀಡಿಂಗ್ ಥೆರೆಪಿ ಅದು.
ಹಾಗೆ ನೋಡಿದರೆ, ಇಂದು ಹೊಸ ಹೊಸ ಪುಸ್ತಕಗಳು ಜನರ ಕೈಗೆ ಸುಲಭವಾಗಿ ಸಿಗದಂತೆ ಮಾಡಿದ್ದರಲ್ಲಿ ಸರಕಾರದ ನಿಯಮಾ ವಳಿಗಳ ನೇರ ಹಸ್ತಕ್ಷೇಪವಿದೆ. ನಮ್ಮ ರಾಜ್ಯದಲ್ಲಿ ಈ ಬಾರಿಯ ಲಾಕ್ಡೌನ್ ಘೋಷಿಸಿದಾಗ, ಪುಸ್ತಕಗಳನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸದೇ ಇದ್ದುದರಿಂದಾಗಿ ಆದ ತೊಡಕು ಇದು. ಹಾಲು, ದಿನಸಿ ಸಾಮಾನುಗಳು, ತಿಂಡಿ ತಿನಿಸು, ತರಕಾರಿ, ಹಣ್ಣು, ದೈಹಿಕ ಆರೋಗ್ಯ ಕಾಪಾಡಲು ಅಗತ್ಯ ಎನಿಸಿದ ವಸ್ತುಗಳನ್ನು ಬೆಳಗಿನ ಆರರಿಂದ ಹತ್ತರ ತನಕ ಖರೀದಿಸುವ ಅವಕಾಶ
ನೀಡಲಾಗಿದೆ. (ಈ ವಾರದಿಂದ ಜಿಲ್ಲಾವಾರು ವಿಭಿನ್ನ ಷರತ್ತಿನ ಲಾಕ್ಡೌನ್ ಜಾರಿಗೆ ಬರುತ್ತಿರುವುದು ಅಲಾಯಿದ ವಿಚಾರ).
ಜತೆಯಲ್ಲೇ, ಬೆಳಗಿನ ಆರರಿಂದ ಹತ್ತರ ತನಕ ಮದ್ಯ ಖರೀದಿಸಲು ಅನುಮತಿ ನೀಡಲಾಗಿದ್ದು, ಮದ್ಯವೂ ಸಹ ಅಯಾಚಿತವಾಗಿ ಅಗತ್ಯ ವಸ್ತುಗಳ ಪಟ್ಟಿಗೆ ಸೇರ್ಪಡೆ ಗೊಂಡಂತಾಗಿದೆ. ಮದ್ಯ ಖರೀದಿಗೆ, ಅಬಕಾರಿ ನಿಯಮಗಳಂತೆ ಇರುವ ಸಮಯ ಮಿತಿ ಯನ್ನು ಸಡಿಲಿಸಿದ್ದು ಸಹ ಸ್ಪಷ್ಟವಾಗಿದೆ. ಬೇರೆಲ್ಲಾ ಅಂಗಡಿಗಳನ್ನು ಬಂದ್ ಮಾಡತಕ್ಕದ್ದು ಎಂಬ ಕಠಿಣ ನಿಯಮವನ್ನು ಸರಕಾರ ಸಾರಾಸಗಟಾಗಿ ಜಾರಿ ಮಾಡಿರುವುದರಿಂದಾಗ, ಪುಸ್ತಕದ ಅಂಗಡಿಗಳು ಬೀಗ ಹಾಕಬೇಕಾಯಿತು.
ವಿದ್ಯಾರ್ಥಿಗಳಿಗೆ ಅಗತ್ಯ ಎನಿಸುವ ಪುಸ್ತಕಗಳು, ಸಾಹಿತ್ಯಾಸಕ್ತರಿಗೆ ಬೇಕೆನಿಸುವ ಕಾದಂಬರಿಗಳು, ಜೀವನಚರಿತ್ರೆಗಳು, ಪ್ರವಾಸ
ಕಥನಗಳು, ಕಥೆಗಳು, ಲಾಕ್ಡೌನ್ ಸಮಯದಲ್ಲಿ ಮನೆಯಲ್ಲೇ ಕುಳಿತು ಕೌಶಲ ಬೆಳೆಸಿಕೊಳ್ಳಲು ಮಾರ್ಗದರ್ಶನ ನೀಡುವ ಸೆಲ್ಹೆಲ್ತ್ ಪುಸ್ತಕಗಳು, ಮನಸ್ಸಿಗೆ ನೆಮ್ಮದಿ ನೀಡುವ ಸೂರ್ತಿ ತುಂಬುವ ಪುಸ್ತಕಗಳು, ಧಾರ್ಮಿಕ ಗ್ರಂಥಗಳು – ಹೀಗೆ ಎಲ್ಲವೂ
ಅಂಗಡಿಗಳಲ್ಲಿ ಬಂಧಿಯಾಗಿವೆ. ಹೊಸ ಪುಸ್ತಕಗಳನ್ನು ಓದುತ್ತಾ, ಸಮಯದ ಸದುಪಯೋಗ ಮತ್ತು ರೀಡಿಂಗ್ ಥೆರೆಪಿಗೆ ಒಳಗಾಗ ಬಯಸುವವರಿಗೆ ತೀವ್ರ ತೊಡಕಾಗಿದೆ.
ದೇಶವ್ಯಾಪಿ ಕರೋನಾ ಸಮಸ್ಯೆಯನ್ನು ತಡೆಯಲು ಎಲ್ಲೆಡೆ ಜಾರಿಯಲ್ಲಿರುವ ಲಾಕ್ಡೌನ್ ಷರತ್ತುಗಳ ಚರ್ಚೆಯೂ ನಡೆದ ಈ “ಪುಸ್ತಕಗಳ ವೆಬಿನಾರ್”ನಲ್ಲಿ ಒಂದು ಕುತೂಹಲಕಾರಿ ಅಂಶ ಬಯಲಾಯಿತು. ದೆಹಲಿ ಮತ್ತು ಕೇರಳ ರಾಜ್ಯಗಳಲಿ ವಿಶೇಷ ತಿದ್ದುಪಡಿ ತಂದು, ಪುಸ್ತಕಗಳನ್ನು ಮಹತ್ವ ಕಂಡು, ಅಲ್ಲಿ ಪುಸ್ತಕದ ಅಂಗಡಿ ಗಳನ್ನು ನಿಯಮಿತ ಅವಧಿಗೆ ತೆರೆಯಲು ಅವಕಾಶ
ಮಾಡಿಕೊಡಲಾಗಿದೆ! ಇದು ನಿಜಕ್ಕೂ ಒಳ್ಳೆಯ ನಡೆ. ಆ ಎರಡು ರಾಜ್ಯಗಳ ಓದುಗರು, ಪುಸ್ತಕದ ಅಂಗಡಿಗೆ ಭೇಟಿ ನೀಡಿ,ಕರೋನಾ ನಿಯಮಗಳನ್ನು ಪಾಲಿಸುತ್ತಲೇ, ತರಕಾರಿ ಹಣ್ಣುಗಳ ಜತೆ ಪುಸ್ತಕಗಳನ್ನು ಖರೀದಿಸಬಹುದು!
ಹಾಲು, ಬ್ರೆಡ್, ಬಿಸ್ಕೆಟ್, ದಿನಸಿ ಸಾಮಾನು ಗಳನ್ನು ಖರೀದಿಸುವ ಸಮಯದಲ್ಲೇ, ಅದೇ ಬೀದಿಯ ಒಂದು ಮೂಲೆಯಲ್ಲಿರಬಹು ದಾದ ಪುಸ್ತಕದ ಅಂಗಡಿಗೂ ಭೇಟಿ ನೀಡಿ, ತಮಗೆ ಬೇಕೆನಿಸಿದ ಪುಸ್ತಕಗಳನ್ನು ಖರೀದಿಸುವ ಅವಕಾಶವನ್ನು ಅಲ್ಲಿ ಮಾಡಿಕೊಡ ಲಾಗಿದೆ. ಕೇರಳದಲ್ಲಂತೂ ಪ್ರಕಾಶಕರು ಮತ್ತು ಲೇಖಕರ ಸಂಘಗಳು ಪ್ರಭಾವಶಾಲಿ ಯಾಗಿದ್ದು, ಪುಸ್ತಕಗಳ ಮಹತ್ವವನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿವೆ.
ಇದೇ ರೀತಿ ಕರ್ನಾಟಕದಲ್ಲೂ ಏಕೆ ಸಾಧ್ಯವಿಲ್ಲ? ನಮ್ಮ ನಾಡಿನ ಕೆಲವು ವಿದ್ಯಮಾನಗಳನ್ನು ಗಮನಿಸಿದರೆ, ಈ ನಿಟ್ಟಿನಲ್ಲಿ ನಮ್ಮ ಸರಕಾರದ ಮನವೊಲಿಸಲು ಖಂಡಿತಾ ಸಾಧ್ಯವಿದೆ. ಪುಸ್ತಕದ ಅಂಗಡಿಗಳನ್ನು ಬೆಳಗಿನ ಆರರಿಂದ ಹತ್ತರ ತನಕ ತೆರೆಯಲು ಅವಕಾಶಮಾಡಿಕೊಟ್ಟು, “ಲಾಕ್ ಡೌನ್ ಬ್ಲೂಸ್”ನ್ನು ಬಡಿದೋಡಿಸಲು ಸಹಕರಿಸುವ ಪುಸ್ತಕ ಖರೀದಿಗೆ ಅವಕಾಶ ಮಾಡಿ ಕೊಡಲು ಸರಕಾರಕ್ಕೆ ಸಾಧ್ಯವಿದೆ. ವೆಬಿನಾರ್ನಲ್ಲಿ ಚರ್ಚೆಗೆ ಬಂದಂತೆ, ಕೆಲವು ವಾರಗಳ ಹಿಂದೆ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಎಂಬ ಚಲನಚಿತ್ರ ಪ್ರದರ್ಶನ ನಿಯಮವನ್ನು ಬದಲಾಯಿಸಿ, ಚಿತ್ರಮಂದಿರದಲ್ಲಿ ಪೂರ್ಣ ಪ್ರಮಾಣದ ಪ್ರೇಕ್ಷಕರು ಕುಳಿತು ಕೊಲ್ಳುವ ಅವಕಾಶವನ್ನು ಮಾನ್ಯ ಮುಖ್ಯಮಂತ್ರಿ ಗಳು ಮಾಡಿಕೊಟ್ಟರು. ಆ ಚಿತ್ರದ ನಟ ಮತ್ತು ಇತರ ತಂತ್ರಜ್ಞರು ಇದಕ್ಕಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾದ ಸುದ್ದಿಯು ಟಿವಿಗಳಲ್ಲೂ ಪ್ರಸಾರ ಗೊಂಡು, ಪ್ರಚಾರ ಪಡೆಯಿತು.
ಒಂದು ಚಲನಚಿತ್ರ ಪ್ರದರ್ಶನಕ್ಕೆ ಲಾಕ್ಡೌನ್ ನಿಯಮಗಳನ್ನು ಪರಿಷ್ಕರಿಸಬಹುದಾದರೆ, ಜ್ಞಾನ ಪಸರಿಸುವ ಪುಸ್ತಕಗಳು ಜನಸಾಮಾನ್ಯರ ಕೈಗೆ ಸಿಗಲು ಅಂತಹದೇ ಕ್ರಮ ಏಕೆ ಸಾಧ್ಯವಿಲ್ಲ? ಈಗಿನ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಪುಸ್ತಕಗಳು ಜನರು ಖರೀದಿಸುವ ಅವಕಾಶ ನೀಡುವುದು ಅಗತ್ಯ ಎಂದು ಸರಕಾರದ ಮನವೊಲಿಸಲು ಮಾರಾಟಗಾರರು ಮತ್ತು ಓದುಗರಿಂದ ಸಾಧ್ಯವಾದರೆ, ಕರ್ನಾಟಕದಲ್ಲೂ ಕೇರಳದ ರೀತಿ ಪುಸ್ತಕ ಮಳಿಗೆಗಳನ್ನು ದಿನದ ಸ್ವಲ್ಪ ಅವಧಿಗೆ ತೆರೆದಿಡುವಂತೆ ಮಾಡಲು ಸಾಧ್ಯ.
ಈ ಬಾರಿಯ ಲಾಕ್ಡೌನ್ನಲ್ಲಿ ಕನ್ನಡ ಪುಸ್ತಕಗಳ ಮಾರಾಟದ ಕುರಿತಾದ ಇನ್ನೊಂದು ಸಣ್ಣಮಟ್ಟದ ಅನ್ಯಾಯ ಆಗಿರುವುದು ಸಹ ಕಾಣುತ್ತಿದೆ. ಈಗಿನ ಲಾಕ್ ಡೌನ್ ನಿಯಮಾವಳಿಗಳಲ್ಲಿ ಇ-ಕಾರ್ಟ್ (ಅಗತ್ಯ ವಸ್ತುಗಳು) ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈ ಸೌಲಭ್ಯವನ್ನು ಉಪಯೋಗಿಸಿಕೊಂಡು, ಅಮೆಜಾನ್, ಫ್ಲಿಪ್ಕಾರ್ಟ್ ಮೊದಲಾದ ಬೃಹತ್ ಆನ್ಲೈನ್ ಸಂಸ್ಥೆಗಳು ಪುಸ್ತಕಗಳನ್ನು ಸಹ ಮನೆಮನೆಗೆ ತಲುಪಿಸುತ್ತಿವೆ.
ಎಲ್ಲರಿಗೂ ತಿಳಿದಂತೆ, ಇಂತಹ ದೈತ್ಯ ಆನ್ಲೈನ್ ಪುಸ್ತಕ ಮಳಿಗೆಗಳಲ್ಲಿ ದೊರೆಯುವ ಪುಸ್ತಕಗಳು ಬಹುಪಾಲು ಇಂಗ್ಲಿಷ್
ಪುಸ್ತಕಗಳು. ಕೆಲವೇ ಕೆಲವು ಕನ್ನಡ ಲೇಖಕರು ಮತ್ತು ಪ್ರಕಾಶಕರ ಪುಸ್ತಕಗಳು ಮಾತ್ರ ಅಲ್ಲಿ ಲಭ್ಯ. ಜತೆಗೆ ಪುಸ್ತಕದ ಮಳಿಗೆಗಳು ಈಗ ಸಂಪೂರ್ಣ ಬಂದ್ ಆಗಿರುವುದರಿಂದ, ಕನ್ನಡ ಪುಸ್ತಕಗಳು ಅಲ್ಲಿ ಲಿಸ್ಟ್ ಆಗಿದ್ದರೂ, ಅಲ್ಲಿಗೆ ತಲುಪಿಸಲು ಕಷ್ಟವಾಗುತ್ತಿದೆ. ಅಮೆಜಾನ್ನಂಥ ಸಂಸ್ಥೆಗಳು ತಮ್ಮದೇ ಕೊರಿಯರ್ ವ್ಯವಸ್ಥೆ ಹೊಂದಿರುವುದರಿಂದ, ತಮ್ಮಲ್ಲಿ ಹೆಚ್ಚು ಲಭ್ಯವಿರುವ ಇಂಗ್ಲಿಷ್ ಪುಸ್ತಕಗಳನ್ನು ಬಹುಬೇಗನೆ ಮನೆಮನೆಗೆ ತಲುಪಿಸಬಲ್ಲರು.
ಇಂದು ಎದುರಾಗಿರುವ ಇನ್ನೊಂದು ಸನ್ನಿವೇಶ ಎಂದರೆ, ಕನ್ನಡ ಪುಸ್ತಕ ಬೇಕು ಎಂದು ಆನ್ಲೈನ್ನಲ್ಲಿ ಬ್ರೌಸ್ ಮಾಡಿದ
ಆಸಕ್ತರಿಗೆ, ಅಮೆಜಾನ್ ಮೊದಲಾದ ಸಂಸ್ಥೆಗಳಲ್ಲಿರುವ ಇಂಗ್ಲಿಷ್ ಪುಸ್ತಕಗಳೇ ಹೆಚ್ಚಾಗಿ ಕಣ್ಣಿಗೆ ಬಿದ್ದು, ಅವುಗಳೇ ಮನೆಗೆ ಸುಲಭವಾಗಿ ಡೆಲಿವರಿ ಆಗುತ್ತಿವೆ! ಇತ್ತ ಕನ್ನಡ ಪುಸ್ತಕಗಳು, ಪುಸ್ತಕ ಮಳಿಗೆಗಳ ಕಪಾಟಿನಲ್ಲಿ ಭದ್ರವಾಗಿ ಕೂರುವಂತಾಗಿದೆ. ಸಪ್ನ, ಅಂಕಿತ, ನವಕರ್ನಾಟಕ, ಆಕೃತಿ, ಅಭಿನವ ಮೊದಲಾದ ಪ್ರಕಾಶಕರು ಆನ್ಲೈನ್ ಮಾರಾಟದ ಸೌಲಭ್ಯ ಹೊಂದಿದ್ದರೂ, ಕೊರಿಯರ್ ವ್ಯವಸ್ಥೆಯ ಅಲಭ್ಯ್ಯತೆ, ಕೆಲಸಗಾರರು ಮಳಿಗೆ ತಲುಪಲಾಗದ ಲಾಕ್ ಡೌನ್ ನಿಯಮ, ಅಂಗಡಿಯಲ್ಲಿರುವ ಪುಸ್ತಕಗಳನ್ನು ವಿವಿಧ ವಿತರಕರಿಗೆ ನೀಡಲಾಗದ ಅಸಹಾಯಕತೆಯಿಂದಾಗಿ, ಕನ್ನಡ ಪುಸ್ತಕಗಳು ಸಕಾಲದಲ್ಲಿ ಓದುಗರಿಗೆ ತಲುಪುತ್ತಿಲ್ಲ.
ಈ ಹಿನ್ನೆಲೆಯಲ್ಲಿ, ಬೆಳಗ್ಗೆ ಆರರಿಂದ ಹತ್ತು ಗಂಟೆಯ ತನಕ ಹಾಲು, ಹಣ್ಣು, ತರಕಾರಿ, ಮದ್ಯ ಮೊದಲಾದ ವಸ್ತುಗಳನ್ನು ಅವಕಾಶ ನೀಡಿದ ರೀತಿಯಲ್ಲೇ, ಅದೇ ಅವಧಿಯ ಮಿತಿಯಲ್ಲಿ ಪುಸ್ತಕದ ಮಳಿಗೆಗಳಲ್ಲಿ ಪುಸ್ತಕ ಖರೀದಿಸಲು ಅವಕಾಶ ನೀಡಬೇಕೆಂಬ ಓದುಗರ ಮತ್ತು ಪ್ರಕಾಶಕರ ಹಕ್ಕೊತ್ತಾಯ ಬಹು ಸಮಂಜಸ ಎಂದನ್ನಿತ್ತಿದೆ.
ನಮ್ಮ ರಾಜ್ಯದ ಜನಸಾಮಾನ್ಯರಿಗೆ ಹಾಲು, ತರಕಾರಿ, ಹಣ್ಣುಗಳ ಜತೆ ಮದ್ಯವೂ ಅಗತ್ಯವಸ್ತು ಎಂದು ಸರಕಾರಕ್ಕೆ ಅನಿಸಿರುವಾಗ, ಅದೇ ಜನರ ಮನಸ್ಸನ್ನು ಉಲ್ಲಸಿತವಾಗಿಡಲು ಪುಸ್ತಕಗಳೂ ಅಗತ್ಯ ಎಂದು ಏಕೆ ಅನಿಸುತ್ತಿಲ್ಲ? ಇದು ಪ್ರಾಜ್ಞ ಓದುಗರ ಪ್ರಶ್ನೆ! ಮದ್ಯಕ್ಕೆ ಅಡಿಕ್ಟ್ ಆಗಿರುವರ ಮೇಲೆ ಸರಕಾರಕ್ಕೆ ಇರುವ ಕನಿಕರ, ಪುಸ್ತಕಕ್ಕೆ ಅಡಿಕ್ಟ್ (ಪುಸ್ತಕ ಪ್ರೇಮಿ) ಆಗಿರುವವರ ಮೆಲೆ
ಏಕಿಲ್ಲ? ಬೇರೆಲ್ಲಾ ಅಂಗಡಿಗಳಲ್ಲಿರುವಂತೆ, ಪುಸ್ತಕದ ಅಂಗಡಿಗಳಲ್ಲೂ ಕರೋನಾ ನಿಯಮಾವಳಿಗಳನ್ನು ಅನುಸರಿಸುತ್ತಲೇ, ಪುಸ್ತಕ ಮಾರಾಟಕ್ಕೆ ಅವಕಾಶ ನೀಡಬಹುದು.
ಇಂದು ಕರೋನಾ ಪರಿಸ್ಥಿತಿ ಗಂಭೀರವಾಗಿದೆ. ದೇಶದಾದ್ಯಂತ ಲಸಿಕೆ ನೀಡುವ ಕಾರ್ಯವು ನಿಧಾನವಾಗಿ ಸಾಗಿದೆ ಎಂದು ಸರಕಾರವೇ ಒಪ್ಪಿಕೊಂಡಿದೆ. ತಜ್ಞರ ಅಧ್ಯಯನದ ಪ್ರಕಾರ ಈ ವೈರಸ್ನ ಮೂರನೆಯ ಅಲೆ ಮತ್ತು ನಾಲ್ಕನೆಯ ಅಲೆಗಳು ದೇಶದ ಮೇಲೆ ಮತ್ತೊಮ್ಮೆ ಎರಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಲಾಕ್ಡೌನ್, ಜನರ ಓಡಾಟದ ಮೇಲೆ ಇನ್ನಷ್ಟು ನಿರ್ಬಂಧ ಹೇರುವ ಅನಿವಾರ್ಯತೆ ಸರಕಾರಕ್ಕೆ ಎದುರಾಗಬಹುದು.
ಅಂತಹ ಸಮಯದಲ್ಲಿ ಹೊಸ ಪುಸ್ತಕಗಳನ್ನು ಜನರಿಗೆ ಲಭ್ಯವಾಗುವಂತೆ ಮಾಡುವ ಮೂಲಕ, ಸಮಾಜದ ಮಾನಸಿಕ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ಜತೆಯಲ್ಲೇ, ತರಗತಿಯ ಪಾಠಗಳಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಹೊಸ ಪುಸ್ತಕಗಳು ಕೈಸೇರು ವಂತಾಗಬೇಕು. ಆದ್ದರಿಂದ, ಈಗಿಂದಲೇ ಅನ್ವಯವಾಗುವಂತೆ, ಹಾಲು, ತರಕಾರಿ, ಬ್ರೆಡ್, ದಿನಸಿ, ಮದ್ಯದ ಅಂಗಡಿಗಳಿಗೆ ಅವಕಾಶ ನೀಡಿರುವಂತೆ, ಪುಸ್ತಕ ಮಳಿಗೆಗಳಿಗೂ ಬೆಳಗಿನ ಆರರಿಂದ ಹತ್ತರ ತನಕ ತೆರೆಯುವ ಅವಕಾಶ ನೀಡಲು ಸರಕಾರ ಮನಸ್ಸು ಮಾಡಬೇಕು, ಲಾಕ್ಡೌನ್ ಷರತ್ತುಗಳನ್ನು ತಿದ್ದುಪಡಿ ಮಾಡಬೇಕು.
ಜ್ಞಾನವನ್ನು ಹರಡಲು, ಸಾಹಿತ್ಯವನ್ನು ಓದಲು, ಸೆಲ್ ಹೆಲ್ಪ್ ಪುಸ್ತಕದ ಮೂಲಕ ಕೌಶಲ ಬೆಳೆಸಲು, ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು ಲಭ್ಯವಾಗುವಂತಾಗಲು, ಕರೋನಾ ಸನ್ನಿವೇಶವು ತರಬಹುದಾದ ಖಿನ್ನತೆ ಹೊಡೆದೋಡಿಸುವ ಉತ್ತಮ ಪುಸ್ತಕಗಳು ಜನಸಾಮಾನ್ಯರಿಗೆ ದೊರೆಯುವಂತಾಗಲು ಸರಕಾರ ಅವಕಾಶ ಮಾಡಿಕೊಡಬೇಕು. ಲಾಕ್ಡೌನ್ ನಿಯಮಾವಳಿಗೆ ತಿದ್ದುಪಡಿ
ಮಾಡಿ, ಪುಸ್ತಕದ ಮಳಿಗೆಗಳೂ ದಿನದ ಸೀಮಿತ ಅವಧಿಗೆ ತೆರೆಯುವ ಅವಕಾಶ ಮಾಡಿಕೊಡಬೇಕು.
ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಸಹಕಾರಿ ಎನಿಸುವ ಈ ಕಾರ್ಯವನ್ನು ಕೈಗೊಳ್ಳುವುದು ಸರಕಾರದ ಆದ್ಯತೆ ಆಗಬೇಕು, ಅದರಿಂದ ಖಂಡಿತಾ ಒಳ್ಳೆಯದೇ ಆಗುತ್ತದೆ.