Sunday, 15th December 2024

ಸಿಎಂ ಅವರೇ, ಮತ್ತೆ ಶಾಶ್ವತ ಪರಿಹಾರದೊಂದಿಗೆ ಬನ್ನಿ

ಒಡಲ ದನಿ

ವಿನುತಾ ಹೆಗಡೆ ಶಿರಸಿ

ಒಂದು ಮಳೆಗಾಲದ ಅನಾಹುತ ಸಂಭವಿಸಿದ ಮೇಲೆ ಇನ್ನೊಂದು ಮಳೆಗಾಲ ಬರುವವರೆಗಾದರೂ ಕಾರಣ ಅರಿತು ಕಾರ್ಯ
ಪ್ರವೃತ್ತರಾಗಬೇಕಿತ್ತು, ಶಾಶ್ವತ ಪರಿಹಾರ ಬೇಕಿತ್ತು. ಜಲಾವೃತವಾಗುವ ಪ್ರದೇಶದ ಕುಟುಂಬಗಳಿಗೆ ಪರ್ಯಾಯ ಪುನರ್ವಸತಿ ಕಲ್ಪಿಸಬೇಕಿತ್ತು.

ಕುಸಿದ ಮನೆಗಳು, ಕಸಿದ ಕನಸುಗಳು, ಒದ್ದೆಯಾದ ಬಟ್ಟೆಗಳು…ಸುರಿವ ಮಳೆಗೆ ಕಾಣಿಸದಂತೆ ಹರಿವ ಕಣ್ಣೀರು, ಮನೆಯೊಳ ಗಿನ, ಮನದೊಳಗಿನ ಆಶಾವಾದವೆಲ್ಲ ವಿಧಿಯಾಟಕ್ಕೆ ನರಕಕ್ಕೆ ಸೇರಿದವು. ಇವು ಉತ್ತರಕನ್ನಡದ ಜನರಲ್ಲಿನ ನೈಜ ಸ್ಥಿತಿ. ಮಳೆಗಾಲವೆಂದರೆ ಉರಿ ಬೇಸಿಗೆಯಲ್ಲೇ ನಡುಕದ ಆರಂಭ.

ಗಾಯದ ಮೇಲೆ ಬರೆ ಎಳೆಯುವುದು ಎಂದರೆ ಇದೇ ಇರಬೇಕು. ಕಣ್ಣಿಗೆ ರಾಚುತ್ತಿವೆ ಒಂದರ ಮೇಲೊಂದು ಆಘಾತ, ಅನಾಹುತ, ಸಾವುಗಳ ಸರ ಪಳಿ… ಒಂದಲ್ಲ ಎರಡು ಮಳೆಗಾಲದಲ್ಲೂ ತತ್ತರಿಸಿದ ಉತ್ತರಕನ್ನಡಕ್ಕೆ ಉತ್ತರದಾಯಿಗಳೇ ಇಲ್ಲ. ಬಡಬಡಿಸುವ ತಳಮಳದ ತಳ ಕಳಚಿದ ಕುಟುಂಬಗಳ ದುಖಃಕ್ಕೆ ಎಲ್ಲರೂ ಆಗಸವಾಗಿದ್ದಾರೆ. ಕಣ್ಣಿಗೆ ಕಂಡರೂ ಕೈಗೆಟುಕ ದಂತೆ.

ಕಳೆದ ವರ್ಷದ ಮಳೆಗಾಲದಲ್ಲಿ ಯಲ್ಲಾಪುರ ತಾಲೂಕಿನ ಕಳಚೆಯಲ್ಲಿ ನಡೆದ ಭಾರೀ ಅನಾಹುತದಿಂದ ಜಿಲ್ಲೆ ಇನ್ನೂ ಚೇತರಿಸಿ ಕೊಂಡಿಲ್ಲ. ಹಾಗಿರುವಾಗಲೇ ಇನ್ನೊಂದು ಅನಾಹುತ ಸಂಭವಿಸಿಯೇ ಬಿಟ್ಟಿದೆ. ಗುಡ್ಡಗಾಡು ಪ್ರದೇಶದಲ್ಲಿರುವ ಉತ್ತರಕನ್ನಡದ ಜನರ ಸ್ಥಿತಿಗೆ ಯಾವ ಸ್ಪಂದನೆಯೂ ಸರಿಯಾಗಿ ಸಿಗುತ್ತಿಲ್ಲ. ಮುಖ್ಯ ಮಂತ್ರಿ ಮೊಮ್ಮಾಯಿಯವರು ಕಳೆದ ಸಾರಿಯ ಅನಾಹುತ ನಡೆದ ಕಳೆ ಪ್ರದೇಶ ಹಾಗೂ ಗುಳ್ಳಾಪುರಕ್ಕೆ ಭೇಟಿ ನೀಡಿದಂತೆ ಭಟ್ಕಳದಲ್ಲಿ ನಡೆದ ಅನಾಹುತ ಪ್ರೇಶವಾದ ಮಟ್ಟಳ್ಳಿಗೂ ಭೇಟಿ ನೀಡಿದ್ದಾರೆ.

ಆದರೆ ಪ್ರತೀ ಮಳೆಗಾಲದಲ್ಲಿಯೂ ಜಿಲ್ಲೆಯ ಜನ ಕಷ್ಟ, ನಷ್ಟ ಅನುಭವಿಸುತ್ತಾರೆ ಆದರೆ ಈ ವರೆಗೂ ಶಾಶ್ವತ ಪರಿಹಾರ ವೆಂಬುದು ಇಲ್ಲವೇ ಇಲ್ಲ. ಆಶ್ವಾಸನೆಗಳು ಬದುಕು, ಕುಟುಂಬಗಳ, ಜೀವನಕ್ಕೆ ದಾರಿಯಾಗದು. ಕಳೆದ ಬಾರಿಯಂತೆ ಈ ಬಾರಿಯೂ ಮಳೆಯಿಂದಾಗಿ ರಾಜ್ಯದಲ್ಲೇ ಅತೀಹೆಚ್ಚು ಹಾನಿಗೊಳಗಾಗಿದ್ದು ಉತ್ತರಕನ್ನಡ ಜಿಲ್ಲೆ. ಇದು ಯಾವ ನಾಯಕರಿಗೂ ಕಂಡಿಲ್ಲವೇ.

ಕಂಡಿದ್ದರೂ ಇದುವರೆಗೂ ಏಕೆ ಶಾಶ್ವತ ಪರಿಹಾರ ಅಥವಾ ಪರ್ಯಾಯ ವ್ಯವಸ್ಥೆ ಕೈಗೊಂಡಿಲ್ಲ. ಅಭಿವೃದ್ಧಿಯ ಹೆಸರಲ್ಲಿ
ಜಿಲ್ಲೆಯ ಸಂಪತ್ತನ್ನು ಕಸಿದಿದ್ದು, ಇಂದು ಮಳೆಯಿಂದಾಗಿ ಬೀಕರ ಸ್ಥಿತಿ ಎದುರಾಗಿದೆ. ಘಟ್ಟದ ಕೆಳಗಿನ ಪ್ರದೇಶ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಲೋ ಅಥವಾ ಸರಿಯಾದ ವ್ಯವಸ್ಥೆ ಕೈಗೊಳ್ಳದ ಕಾರಣದಿಂದಲೋ ಸಂಭವಿಸಿದರೆ ಘಟ್ಟದ
ಮೇಲಿನ ಭಾಗದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಎಲ್ಲ ಯೋಜನೆಗಳಿಂದಾಗಿಯೇ ಅವಘಡ ನಿರ್ಮಾಣವಾಗುತ್ತಿದೆ.

ಭಟ್ಕಳದ ಮಟ್ಟಳ್ಳಿ, ಯಲ್ಲಾಪುರದ ಕಳಚೆ, ಹಳಿಯಾಳದ ಮುರ್ಕವಾಡಾದಂತ ಗ್ರಾಮದ ಜನತೆ ಇನ್ನೂ ಅನಾಹುತಗಳಿಂದ ಚೇತರಿಸಿಕೊಂಡಿಲ್ಲ. ತಮ್ಮದೇ ಆದ ಸುಂದರ ಬದುಕು ಕಟ್ಟಿಕೊಂಡು ನೆಮ್ಮದಿಯ ಜೀವನ ಸಾಗಿಸುವ ಪುಟ್ಟ ಪುಟ್ಟ ಹಳ್ಳಿಗಳಲ್ಲಿಂದು ಕಣ್ಣೀರ ಧಾರೆ ಸುರಿಯುತ್ತಿದೆ. ಅವಾಂತರ ಸೃಷ್ಟಿಸಿದ ಮಳೆ ಹನಿ ಇಂದಿಗೆ ತಗ್ಗಿರಬಹುದು, ವರ್ಷಗಳೇ ಕಳೆದಿರಬಹುದು ಆದರೆ ಬದುಕಿನ ಅಡಿಪಾಯ ಇಲ್ಲದೇ ಅತಂತ್ರರಾಗಿದ್ದಾರೆ.

ಮಳೆಯಿಂದ ಕುಸಿದ ಗುಡ್ಡ, ಮಣ್ಣುಗಳ ಬಗೆದಷ್ಟೂ ಪಾತ್ರೆ, ಬಟ್ಟೆ, ನಾಯಿ, ಕೋಳಿ, ದನ-ಕರುಗಳ, ಧವಸಧಾನ್ಯಗಳು
ಅವಶೇಷವಾಗಿದ್ದು ಕಾಣಿಸುತ್ತದೆ. ಜಲಧಾರೆಗೆ ಮಣ್ಣಿನಲ್ಲಿ ಮುಸುಕೊದ್ದು ಮಲಗಿದ ಅಡಕೆ, ತೆಂಗು ತೋಟಗಳು, ಕೊಚ್ಚಿಹೋದ ಸೇತುವೆ, ಸಂಕಗಳು ಅಬ್ಬಾ… ಮುಖ್ಯಮಂತ್ರಿಗಳೇ ಇನ್ನು ನೀವು ನಮ್ಮ ಜಿಲ್ಲೆಗೆ ಬರುವುದಾದರೆ ಇಲ್ಲಿನ ಜನರ ದುರಂಥ ಕಷ್ಟಗಳಿಗೆ ಶಾಶ್ವತ ಪರಿಹಾರದೊಂದಿಗೇ ಬನ್ನಿ!

ಕಣ್ಣೆದುರೇ ಧರೆ ಕುಸಿದು ಜೀವ ಬಲಿಯಾದ ನಂತರ ಸಿಕ್ಕಿದ್ದು ನೀರವ. ಸಂತಾಪಗಳ ವಿನಿಮಯ, ಅಧಿಕಾರಿಗಳ ಭೇಟಿ, ಭರವಸೆ ಇಷ್ಟೇ. ಈ ಭರವಸೆಯ ಪಸೆ ಕಳೆದ ವರ್ಷ ಮಳೆಗಾಲದ ಅನಾಹುತಕ್ಕೆ ಸಿಲುಕಿದ್ದ ಕಳಚೆಯೇ ಉತ್ತರ
ಹೇಳಬಲ್ಲದು. ಪಶ್ಚಿಮ ಘಟ್ಟ ಪ್ರದೇಶಕ್ಕೊಳಪಡುವ ಉತ್ತರಕನ್ನಡ ಜಿಲ್ಲೆಯಲ್ಲಿ ಶೇ ೮೦ ಪರ್ಸೆಂಟ್ ಅರಣ್ಯ ಭಾಗವೇ ಇದೆ.
ಅದರಲ್ಲೂ ಘಟ್ಟದ ಮೇಲ ಭಾಗವಾದ ಶಿರಸಿ, ಯಲ್ಲಾಪುರ, ಸಿದ್ದಾಪುರ, ಮುಂಡಗೋಡ, ಜೋಯಿಡಾ, ಹಳಿಯಾಳ
ತಾಲೂಕುಗಳು ಅತೀ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿವೆ.

ಆದ್ದರಿಂದ ಮಳೆಗಾಲದಲ್ಲಿ ಸಾಮಾನ್ಯಾಗಿ ಮಳೆ ಜೋರಾಗಿಯೇ ಇರುತ್ತದೆ. ಅದರ ನಡುವೆ ಮಳೆ ಪ್ರಕೃತಿ ವಿಕೋಪ ನಡೆದರೆ ಗುಡ್ಡಗಾಡು ಜನರ ಸ್ಥಿತಿ ಏನೆಂದು ಇದೀಗ ಕಣ್ಣಾರೆ ಕಂಡಿದ್ದು, ಇದೆಂತ ಪ್ರಳಯ ಅನಿಸಿದ್ದು ಸುಳ್ಳಲ್ಲ. ಅತ್ತ ಘಟ್ಟದ ಕೆಳಗಿನ ಪ್ರದೇಶದಲ್ಲಿ ಇಲ್ಲಿನ ನೀರೇ ಸಾಗಿ ಮನೆ, ಗದ್ದೆ ಗಳೆಲ್ಲ ಜಲಾವೃತವಾಗುತ್ತವೆ. ರಸ್ತೆಯ ಕಾಮಗಾರಿ ನಡೆಯುತ್ತಿರುವುದರಿಂದ ಅದರ ಪರಿಣಾಮವಾಗಿಯೂ ನೀರಿನ ಹರಿವಿನ ದಿಕ್ಕು ಬದಲಾಯಿಸಿಯೂ ಅನೇಕ ಅನಾಹುತಗಳು ಸಂಭವಿಸಿವೆ.

ಇದಕ್ಕೆಲ್ಲ ಶಾಶ್ವತ ಪರಿಹಾರವೇ ಇಲ್ಲವೇ? ಒಂದು ಮಳೆಗಾಲದ ಅನಾಹುತ ಸಂಭವಿಸಿದ ಮೇಲೆ ಇನ್ನೊಂದು ಮಳೆಗಾಲ ಬರುವವರೆಗಾದರೂ ಕಾರಣ ಅರಿತು ಕಾರ್ಯ ಪ್ರವೃತ್ತರಾಗಬೇಕಿತ್ತು, ಶಾಶ್ವತ ಪರಿಹಾರ ಬೇಕಿತ್ತು. ಜಲಾವೃತವಾಗುವ ಪ್ರದೇಶದ ಕುಟುಂಬಗಳಿಗೆ ಪರ್ಯಾಯ ಪುನರ್ವಸತಿ ಕಲ್ಪಿಸಬೇಕಿತ್ತು. ಒಂದರ ಮೇಲೊಂದು ಮಳೆಗಾಲ ಬರುತ್ತಲೇ ಇರುತ್ತದೆ ಉತ್ತರಕನ್ನಡದ ಜನ ಅಧಿಕಾರಿಗಳ, ರಾಜಕಾರಣಿಗಳ ಬರುವಿಕೆಗೆ ಅವರು ನೀಡುವ ಪುಡಿಗಾಸಿಗೆ ಲೆಕ್ಕ
ಹಾಕುವುದಷ್ಟೇ ಆಗಿದೆ ವಿನಃ ಶಾಶ್ವತ ಪರಿಹಾರವೇ ಸಿಕ್ಕಿಲ್ಲ.

ಈ ಬಾರಿಯ ಮಳೆಗೆ ಜಿಲ್ಲೆಯಲ್ಲಿ ಲೆಕ್ಕವಿಲ್ಲದಷ್ಟು ಮನೆಗಳಿಗೆ ಹಾನಿಯಾಗಿದೆ. ಆದರೆ ಅತೀ ಅವಶ್ಯವಾಗಿ ಕಳೆಚೆಯ
ಜನರಿಗೆ ಪುನರ್ ವಸತಿ ಕಲ್ಪಿಸುವ ಅಗತ್ಯತೆ ಇದೆ. ಅಂಕೊಲಾ, ಹೊನ್ನಾವರ, ಭಟ್ಕಳದಂತ ತಾಲೂಕಿನ ನೆರ ಪ್ರದೇಶದ ಜನರಿಗೆ ಶಾಶ್ವತ ನೆಲೆ ಕಲ್ಪಿಸುವ ಅನಿವಾರ್ಯತೆಯೂ ಇದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಕುಟುಂಬ ಗಳಿಗೆ ಶಾಶ್ವತ ಪರಿಹಾರ, ಪುನರ್ವಸತಿ ಕಲ್ಪಿಸಿ ಎನ್ನುವುದು ವಿಶ್ವವಾಣಿಯ ಕಾಳಜಿ.