Saturday, 14th December 2024

ಕುಳಿತು ಕೆಲಸ ಮಾಡುವವರಿಗೆ ಇಲ್ಲಿದೆ ಪರಿಹಾರ

ವೈದ್ಯ ವೈವಿಧ್ಯ

drhsmohan@gmail.com

ಸಣ್ಣ ಸಣ್ಣ ಬದಲಾವಣೆಯು ಬಹಳ ಮುಖ್ಯವಾಗುತ್ತವೆ. ಕುಳಿತು ಕೆಲಸ ಮಾಡುವಾಗ ಪ್ರತಿ ಗಂಟೆಗೆ ೫ ನಿಮಿಷ ವಾಕ್ ಮಾಡುವುದು ಬಹಳ ಎನಿಸಲಾರದು. ಆದರೆ ದಿನದ ಕೊನೆಗೆ ಅದು ೪೦ ನಿಮಿಷ ವಾಕಿಂಗ್ ಆಗುತ್ತದೆ.

ಹೆಚ್ಚಿನ ನಾವೆಲ್ಲ ಕುಳಿತು ಕೆಲಸ ಮಾಡುತ್ತೇವೆ. ಅದರಲ್ಲಿಯೂ ಈ ಕೋವಿಡ್ ಅಥವಾ ಕರೋನಾ ಹಾವಳಿಯ ನಂತರ ಮಕ್ಕಳಿಗೆ ಆನ್‌ಲೈನ್ ತರಗತಿ, ಶಿಕ್ಷಕರು, ಬೇರೆ ಕೆಲಸಗಾರರು ಮೊಬೈಲ್ ಮತ್ತು ಲ್ಯಾಪ್‌ಟಾಪ್ ನಲ್ಲಿ ಕೆಲಸ ಮಾಡುವುದು, ಸಾಫ್ಟ್ ವೇರ್ ಎಂಜಿನಿಯರ್‌ಗಳು ಮನೆಯಿಂದ ಕೆಲಸ-ಇನ್ನೂ ಬೇರೆ ಬೇರೆ ಕಾರಣಗಳಿಂದ ಕುಳಿತು ಕೆಲಸ ಮಾಡುವವರ ಸಂಖ್ಯೆ ತುಂಬಾ ಜಾಸ್ತಿ ಯಾಗಿದೆ. ಹೌದು, ಆಧುನಿಕ ಈಗಿನ ಜೀವನದಲ್ಲಿ ದೈಹಿಕವಾಗಿ ಶ್ರಮವಿಲ್ಲದೆ ಮಾಡುವ ಕೆಲಸಗಳು ಬಹಳ ಜಾಸ್ತಿ.

ಜಗತ್ತಿನ ಶೇ.೮೫ರಷ್ಟು ಜನರು ದೈಹಿಕ ಶ್ರಮವಿಲ್ಲದಿರುವಂತಹ ಕೆಲಸಗಳಿಂದ ಜೀವನ ನಿರ್ವಹಿಸು ತ್ತಿದ್ದಾರೆ ಎಂಬುದು ಇತ್ತೀಚಿನ ಒಂದು ಅಂದಾಜು. ಬಹಳ ದೀರ್ಘ ಕಾಲ ಕುಳಿತೇ ಕೆಲಸ ಮಾಡುವುದು ತೀವ್ರವಾದ ಆರೋಗ್ಯ ಸಮಸ್ಯೆ ಉಂಟುಮಾಡಬಹುದೆಂದು ವೈದ್ಯಕೀಯ ತಜ್ಞರ ಅಭಿಪ್ರಾಯ. ಅಂತಹವರು ಹೃದಯ, ರಕ್ತನಾಳ ಸಂಬಂಧಿ ಕಾಯಿಲೆಗಳು, ಡಯಾಬಿಟಿಸ್, ಸ್ಥೂಲಕಾಯ, ಏರು ರಕ್ತದೊತ್ತಡ (ಹೈ ಬ್ಲಡ್ ಪ್ರೆಶರ್) ಕಾಯಿಲೆಗಳಿಗೆ ಒಳಗಾಗುವುದು ತುಂಬಾ ಜಾಸ್ತಿ ಎಂದು ಜಾಗತಿಕಮಟ್ಟದ ವಿವಿಧ ತಜ್ಞ ವೈದ್ಯರುಗಳ ಒಟ್ಟೂ ಅಭಿಪ್ರಾಯ.

ಇತ್ತೀಚಿನ ಒಂದು ಸಂಶೋಧನೆ ಈ ದಿಸೆಯಲ್ಲಿ ಒಂದು ಹೊಸ ಪರಿಹಾರವನ್ನು ಕಂಡುಕೊಂಡಿದೆ. ೩೦ ನಿಮಿಷಗಳ ಕಾಲ ಕುಳಿತು ಕೆಲಸ ಮಾಡಿದ ನಂತರ ಮಧ್ಯೆ ಸಣ್ಣ ಬಿಡುವು ತೆಗೆದುಕೊಂಡು ೫ ನಿಮಿಷಗಳ ಕಾಲ ವಾಕಿಂಗ್ ಅಥವಾ ನಡೆದಾಡಿದರೆ ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆಯ ಅಂಶ ಎರಡನ್ನೂ ಹತೋಟಿಯಲ್ಲಿ ಇಡಬಹುದು. ಹಾಗೆಯೇ ಈ ತರಹ ಮಾಡುವುದರಿಂದ ವ್ಯಕ್ತಿಯ ಮೂಡ್ ಚೇತೋಹಾರಿಯಾಗುತ್ತದೆ. ಆಯಾಸ, ಸುಸ್ತು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ವ್ಯಕ್ತಿಯು ಲವಲವಿಕೆಯಿಂದ ಪುನಃ ಕೆಲಸ ಮಾಡಲು ಉತ್ಸುಕನಾಗುತ್ತಾನೆ.

ಈ ಸಂಶೋಧನೆಯ ವಿವರಗಳಿಗೆ ಹೋಗುವ ಮೊದಲು ಈ ಬಗೆಗಿನ ವಿಶ್ವ ಆರೋಗ್ಯ ಸಂಸ್ಥೆಯ ಪೂರಕ ಮಾಹಿತಿಯನ್ನು ಗಮನಿಸೋಣ. ದೈಹಿಕ
ಶ್ರಮವಿಲ್ಲದ ಕೆಲಸ ಮಾಡುವವರು ವಿವಿಧ ಕಾರಣಗಳಿಂದ ಸುಮಾರು ೨ ಮಿಲಿಯನ್ (೨೦ ಲಕ್ಷ) ವ್ಯಕ್ತಿಗಳು ಜಗತ್ತಿನಾದ್ಯಂತ ಪ್ರತಿ ವರ್ಷ
ಮರಣ ಹೊಂದುತ್ತಾರೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜು. ಮರಣ ಹೊಂದುವ ಅಥವಾ ವಿವಿಧ ಊನ, ಕಾಯಿಲೆಗಳಿಗೆ ಒಳಗಾಗುವ ಜಗತ್ತಿನ ಅತಿ ಮುಖ್ಯ ೧೦ ಕಾಯಿಲೆಗಳನ್ನು ಆ ಸಂಸ್ಥೆ ಪಟ್ಟಿ ಮಾಡಿದೆ. ಶ್ರಮವಿಲ್ಲದ ಜೀವನಶೈಲಿ ಅಳವಡಿಸಿಕೊಂಡ ವ್ಯಕ್ತಿಗಳೂ ಸಹಿತ ಈ ಪಟ್ಟಿಯಲ್ಲಿ ಸೇರುತ್ತಾರೆ.

ಇತ್ತೀಚಿನ ದಿನಗಳಲ್ಲಿ ದೈಹಿಕ ಶ್ರಮರಹಿತ ಕೆಲಸ ಮಾಡುವ ವ್ಯಕ್ತಿಗಳ ಸಂಖ್ಯೆ ತೀರಾ ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಮುಖ್ಯ ಕಾರಣ ಎಂದರೆ ಆಫೀಸ್ ಕೆಲಸಗಳು ಮತ್ತು ಮನೆಯಿಂದಲೇ ಆನ್‌ಲೈನ್ ಕೆಲಸ ಮಾಡುವ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಉಪಯೋಗಿಸುವ ಅವಶ್ಯಕತೆ ತುಂಬಾ ಜಾಸ್ತಿ ಆಗಿರುವುದು. ವಯಸ್ಕರಲ್ಲಿ ಶೇ.೬೦ ರಿಂದ ೮೫ರಷ್ಟು ಜನರು ಹಾಗೆಯೇ ಶೇ.೬೬-೭೦ರಷ್ಟು ಮಕ್ಕಳು ಜಗತ್ತಿನಾದ್ಯಂತ ಈ ರೀತಿಯ ಶ್ರಮವಿಲ್ಲದ ಜೀವನ ಸಾಗಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ. ಇದರ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡುವ ಬಗ್ಗೆ ಹಲವಾರು ಸಂಶೋಧಕರು, ವೈದ್ಯಕೀಯ ತಜ್ಞರುಗಳು ಬಹಳ ಕಾಲದಿಂದ ತಮ್ಮನ್ನು ತೊಡಗಿಸಿಕೊಂಡು ಅಧ್ಯಯನ ಮಾಡುತ್ತಿದ್ದಾರೆ.

ಇತ್ತೀಚೆಗೆ ಅಮೆರಿಕದ ನ್ಯೂಯಾರ್ಕ್‌ನ ಕೊಲಂಬಿಯ ವಿಶ್ವವಿದ್ಯಾನಿಲಯದ ಅಧ್ಯಯನ ಈ ಸಮಸ್ಯೆಗೆ ಒಂದು ಒಳ್ಳೆಯ ಪರಿಹಾರವನ್ನು ಹುಡುಕಿ ಕೊಟ್ಟಿದೆ. ದೈಹಿಕ ಶ್ರಮ ಮಾಡದಿರುವ ವ್ಯಕ್ತಿಗಳು ಕೆಲಸ ಮಾಡುವ ದಿವಸಗಳಲ್ಲಿ ಆಗಾಗ ಸಮಯ ಮಾಡಿಕೊಂಡು ಸ್ವಲ್ಪ ವ್ಯಾಯಾಮ, ನಡಿಗೆ  ಮಾಡಿದರೆ ಈ ರೀತಿಯ ಜೀವನಶೈಲಿ ರೂಢಿಸಿಕೊಂಡವರು ಸಹಿತ ಅದರ ಕೆಟ್ಟ ಪರಿಣಾಮಗಳಿಂದ ಹೊರಬರಬಹುದು ಎನ್ನುತ್ತದೆ ಆ ಅಧ್ಯಯನ. ಮುಖ್ಯವಾಗಿ ಅವರ ಸಲಹೆ ಎಂದರೆ-೩೦ ನಿಮಿಷ ನಿರಂತರ ಕುಳಿತು ಕೆಲಸ ಮಾಡಿದ ನಂತರ ೫ ನಿಮಿಷಗಳು ಇರುವ ಸ್ಥಳದಲ್ಲಿಯೇ ವಾಕಿಂಗ್ ಮಾಡಿದರೆ ಬಹಳ ಕಾಲ ಕುಳಿತು ಕೆಲಸ ಮಾಡುವವರಲ್ಲಿ ಉಂಟಾಗುವ ಕೆಟ್ಟ ಪರಿಣಾಮಗಳನ್ನು ತಪ್ಪಿಸಬಹುದು.

ಹೆಚ್ಚು ದೈಹಿಕ ಪರಿಶ್ರಮ ಮಾಡದ ಜೀವನಶೈಲಿ ಅಳವಡಿಸಿಕೊಂಡ ವ್ಯಕ್ತಿಗಳಲ್ಲಿ ಹೃದಯ ಮತ್ತು ರಕ್ತನಾಳದ ಕಾಯಿಲೆಗಳು, ಡಯಾಬಿಟಿಸ್, ಏರು
ರಕ್ತದೊತ್ತಡ, ಸ್ಥೂಲಕಾಯ, ಹಾರ್ಮೋನುಗಳಿಗೆ ಸಂಬಂಧಪಟ್ಟ ಕ್ಯಾನ್ಸರ್‌ಗಳು ಬರುವ ಸಾಧ್ಯತೆಗಳು ತುಂಬಾ ಜಾಸ್ತಿ. ಹಾಗೆಯೇ ಅಂತಹವರಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಜಾಸ್ತಿ ಕಂಡುಬರುತ್ತವೆ. ಈ ರೀತಿ ಕುಳಿತೇ ಕೆಲಸ ಮಾಡುವುದನ್ನು ಕಡಿಮೆ ಮಾಡಿ ದೈಹಿಕ ಪರಿಶ್ರಮ, ಅಂದರೆ ವ್ಯಾಯಾಮ, ಯೋಗ, ವಾಕಿಂಗ್‌ಗಳನ್ನು ಮಾಡುವಂತೆ ಪ್ರೇರೇಪಿಸುವ ಬಗ್ಗೆ ಜಾಗತಿಕ ಮಟ್ಟದಲ್ಲಿ ತಜ್ಞರು ವಿವಿಧ ಸ್ತರಗಳಲ್ಲಿ ಪ್ರಯತ್ನಿಸುತ್ತಿದ್ದಾರೆ.

ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಶನ್ (ಸಿಡಿಸಿ) ಸಂಸ್ಥೆಯ ಪ್ರಕಾರ, ವಾರದಲ್ಲಿ ೧೫೦ ನಿಮಿಷಗಳಾದರೂ ಮಧ್ಯಮ ರೀತಿಯ ದೈಹಿಕ ಪರಿಶ್ರಮದಲ್ಲಿ ತೊಡಗಿಕೊಳ್ಳಬೇಕು. ಹಾಗೆಯೇ ಎರಡು ದಿನಗಳ ಕಾಲ ವಿವಿಧ ವ್ಯಾಯಾಮಗಳ ಬಗ್ಗೆ ತರಬೇತಿ ಪಡೆಯಬೇಕು. ವಿಧವಿಧದ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೂ ದೀರ್ಘಕಾಲ ಕುಳಿತು ಕೆಲಸ ಮಾಡುವುದು ಆರೋಗ್ಯಕ್ಕೆ ಏನೂ ಒಳ್ಳೆಯದಲ್ಲ.

ಹಲವು ರೀತಿಯ ಗಂಭೀರ ಆರೋಗ್ಯದ ತೊಡಕುಗಳಿಗೆ ಅಂತಹಾ ವ್ಯಕ್ತಿ ಒಳಗಾಗಬಹುದು. ಅದಕ್ಕೆ ಪರಿಹಾರವಾಗಿ ಮೇಲಿನ ಸಂಶೋಧಕರ ಮತ್ತು
ಹಲವು ಬೇರೆ ಬೇರೆ ಅಧ್ಯಯನಗಳ ಪ್ರಕಾರ, ಆಗಾಗ ಕುಳಿತ ಸ್ಥಳದಿಂದ ಎದ್ದು ಓಡಾಡುತ್ತಾ ಇರಬೇಕು. ಈಗ ಮೊದಲು ಪ್ರಸ್ತಾಪಿಸಿದ ಕೊಲಂಬಿಯಾ
ಅಧ್ಯಯನದ ವಿಚಾರಕ್ಕೆ ಬರೋಣ. ೧೧ ವ್ಯಕ್ತಿಗಳು ಒಂದು ಲ್ಯಾಬೋರೇಟರಿಗೆ ಬೇಟಿ ಕೊಟ್ಟರು. ಅಲ್ಲಿ ಸತತವಾಗಿ ೮ ಗಂಟೆಗಳ ಕಾಲ ಕುಳಿತು ಕೆಲಸ ಮಾಡಿದರು. ಅವರಷ್ಟಕ್ಕೆ ಅವರು ಓದುವುದು, ಮೊಬೈಲ್ ಫೋನ್ ಉಪಯೋಗಿಸಿ ತಮ್ಮ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಯಿತು. ಅವರಿಗೆ ಈ ಕೆಳಗಿನ ೫ ರೀತಿಯ ದೈಹಿಕ ಪರಿಶ್ರಮವನ್ನು ಮಾಡಿಸಲಾಯಿತು.

೩೦ ನಿಮಿಷಗಳ ಕೆಲಸದ ನಂತರ ಒಂದು ನಿಮಿಷದ ವಾಕಿಂಗ್, ೬೦ ನಿಮಿಷಗಳ ಕೆಲಸದ ನಂತರ ಒಂದು ನಿಮಿಷದ ವಾಕಿಂಗ್, ೩೦ ನಿಮಿಷಗಳ ಕೆಲಸದ ನಂತರ ೫ ನಿಮಿಷಗಳ ವಾಕಿಂಗ್, ೬೦ ನಿಮಿಷಗಳ ಕೆಲಸದ ನಂತರ ೫ ನಿಮಿಷಗಳ ವಾಕಿಂಗ್, ಎಂಟು ಗಂಟೆಗಳ ಕುಳಿತು ಸತತ ಕೆಲಸ,
ವಾಕಿಂಗ್ ಅಥವಾ ದೈಹಿಕ ಪರಿಶ್ರಮ ಇಲ್ಲ. ಈ ಅಧ್ಯಯನದಲ್ಲಿ ಒಳಗೊಂಡ ಎಲ್ಲರಿಗೂ ಒಂದೇ ರೀತಿಯ ಸ್ಟ್ಯಾಂಡರ್ಡ್ ಆಹಾರ ಒದಗಿಸಲಾಯಿತು. ಈ ವ್ಯಕ್ತಿಗಳ ಬಿಪಿ, ರಕ್ತದಲ್ಲಿನ ಗ್ಲುಕೋಸ್ ಮಟ್ಟ ಮತ್ತು ಇತರ ಆರೋಗ್ಯ ಸೂಚ್ಯಂಕಗಳನ್ನು ಸಂಶೋಧಕರು ಆಗಾಗ ಮಾನಿಟರ್ ಮಾಡುತ್ತಿದ್ದರು. ೩೦ ನಿಮಿಷಗಳ ನಂತರ ೫ ನಿಮಿಷಗಳ ಕಾಲ ವಾಕಿಂಗ್ ಮಾಡಿದ ವ್ಯಕ್ತಿಗಳಲ್ಲಿ ರಕ್ತದಲ್ಲಿನ ಗ್ಲುಕೋಸ್ ಮಟ್ಟ ಮತ್ತು ರಕ್ತದೊತ್ತಡವು ಕಡಿಮೆ
ಯಾಗಿರುವುದನ್ನು ಸಂಶೋಧಕರು ಗಮನಿಸಿದರು.

ದೀರ್ಘಕಾಲ ಕುಳಿತು ಕೆಲಸ ಮಾಡುವವರ ಆರೋಗ್ಯ ಸಮಸ್ಯೆಗಳು ಬರದಿರುವಂತೆ ಮಾಡುವಲ್ಲಿ ತಮ್ಮ ಸಂಶೋಧನೆ ಬಹಳ ಸರಳವಾದ
ಉಪಾಯ ಕಂಡುಕೊಂಡಿದೆ ಎಂದು ಈ ಅಧ್ಯಯನದ ಮುಖ್ಯಸ್ಥ ಕೊಲಂಬಿಯ ವಿಶ್ವವಿದ್ಯಾನಿಲಯದ ಬಿಹೇವಿಯರಲ್ ಮೆಡಿಸಿನ್ ನ ಪ್ರೊ.ಕೀತ್ ಡಯಾಜ್ ಅಭಿಪ್ರಾಯಪಡುತ್ತಾರೆ. ನಾವು ದಿನದಲ್ಲಿ ಎಷ್ಟು ಹಣ್ಣುಗಳನ್ನು, ತರಕಾರಿಗಳನ್ನು ನಮ್ಮ ಆಹಾರದಲ್ಲಿ ಉಪಯೋಗಿಸಬೇಕು,
ದಿವಸದಲ್ಲಿ ಎಷ್ಟು ವ್ಯಾಯಾಮ ಮಾಡಬೇಕು ಎನ್ನುವ ರೀತಿಯಲ್ಲಿಯೇ ಈ ರೀತಿಯ ಪರಿಹಾರ ಎಂಬುದು ಈ ಅಧ್ಯಯನದ ಉತ್ತೇಜನಕಾರಿ
ವಿಚಾರ ಎಂದು ಅವರ ಅನಿಸಿಕೆ. ಜಗತ್ತಿನಾದ್ಯಂತ ದೀರ್ಘಕಾಲ ಕುಳಿತು ಕೆಲಸ ಮಾಡುವ ಬಹಳಷ್ಟು ಜನರು ಇದ್ದಾರೆ.

ಅಂತಹವರಿಗೆ ನಾವು ಒಂದು ಪರಿಹಾರ ಕಂಡುಕೊಂಡಿದ್ದೇವೆ ಎಂಬುದು ತುಂಬಾ ಸಂತೋಷ ಎಂದು ಅವರು ನುಡಿಯುತ್ತಾರೆ. ಈಗ ನಾವು ಈ ವಿಚಾರದಲ್ಲಿ ಯೋಗ್ಯ ರೀತಿಯಲ್ಲಿ ಅವರ ಕೆಲಸದ ಕ್ರಮವನ್ನು ಬದಲಿಸಿಕೊಳ್ಳುವಂತೆ ಸಲಹೆ ಕೊಡಬಹುದು. ಹಾಗೆಯೇ ಅವರ ಆರೋಗ್ಯದ ರಿಗಳನ್ನು ಕಡಿಮೆ ಮಾಡಬಹುದು. ಕುಳಿತು ಕೆಲಸ ಮಾಡುವ ವ್ಯಕ್ತಿಗಳು ಪ್ರತಿ ಅರ್ಧ ಗಂಟೆಯಲ್ಲಿ ೫ ನಿಮಿಷಗಳ ಕಾಲ ವಾಕ್ ಮಾಡಿದರೆ
ಗ್ಲುಕೋಸ್ ಮಟ್ಟವು ಆಹಾರ ತೆಗೆದುಕೊಂಡ ನಂತರವೂ ಶೇ.೫೮ರಷ್ಟು ಕಡಿಮೆಯಾಗಿರುವುದನ್ನು ಆ ಸಂಶೋಧಕ ತಂಡ ದಾಖಲಿಸಿದೆ.

ರಕ್ತದ ಗ್ಲುಕೋಸ್ ಮಟ್ಟವು ಹೀಗೆ ಇಳಿಯುವುದರ ತಾಂತ್ರಿಕತೆಯನ್ನು ಡಾ.ಡಯಾಜ್ ವಿವರಿಸಿದರು. ನಮ್ಮ ದೈಹಿಕ ಆರೋಗ್ಯದಲ್ಲಿ ಮಾಂಸಖಂಡ ಗಳು ರಕ್ತದಲ್ಲಿನ ಗ್ಲುಕೋಸ್ ಮತ್ತು ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಆದರೆ ಅವುಗಳನ್ನು ನಾವು ಸರಿಯಾಗಿ ಉಪಯೋಗಿಸಬೇಕು, ಆಗ ಅವು ಸಕ್ರಿಯವಾಗಿ ಕೆಲಸ ಮಾಡುತ್ತಿರಬೇಕು. ಗಂಟೆಗಟ್ಟಲೇ ವ್ಯಕ್ತಿ ಕುಳಿತೇ ಇದ್ದಾಗ ಅಂತಹ ಕಾಲಿನ ಮಾಂಸ ಖಂಡಗಳು ಉಪಯೋಗಿಸಲ್ಪಡುವುದಿಲ್ಲ. ಹಾಗಾಗಿ ಅಂತಹ ಸಂದರ್ಭಗಳಲ್ಲಿ ರಕ್ತದಲ್ಲಿನ ಗ್ಲುಕೋಸ್ ಮತ್ತು ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುವುದಿಲ್ಲ.

ಹಾಗಾಗಿ ಮಧ್ಯೆ ಮಾಡುವ ವಾಕಿಂಗ್ ಕ್ರಿಯೆ ಮಾಂಸಖಂಡಗಳನ್ನು ಸಕ್ರಿಯಗೊಳಿಸುತ್ತವೆ. ಪರಿಣಾಮ ಎಂದರೆ ರಕ್ತದ ಗ್ಲೂಕೋಸ್ ಮತ್ತು ಕೊಲೆಸ್ಟರಾಲ್ ಮಟ್ಟವು ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ಬರುತ್ತವೆ. ಆರೆಂಜ್ ಕೋ ಮೆಡಿಕಲ್ ಸೆಂಟರ್‌ನ ಮೆಮೋರಿಯಲ್ ಕೇರ್ ಹಾರ್ಟ್ ಮತ್ತು ವ್ಯಾಸ್ಕುಲಾರ್ ಸಂಸ್ಥೆಯ ಹೃದಯ ತಜ್ಞರು ಡಾ ಯೂ ಮಿಂಗ್ ನಿ ಈ ಮೇಲಿನ ಸಂಶೋಧನೆ ಅಥವಾ ಅಧ್ಯಯನದಲ್ಲಿ ಒಳಗೊಂಡಿಲ್ಲ. ಮಾಂಸಖಂಡಗಳು ರಕ್ತದ ಸಕ್ಕರೆಯ ಅಂಶವನ್ನು ಶೀಘ್ರವಾಗಿ ಕರಗಿಸುವ ಬಹಳ ಮುಖ್ಯ ಅಂಗಗಳು ಎಂದು ಅವರು ಅಭಿಪ್ರಾಯ ಪಡುತ್ತಾರೆ.  ದೈಹಿಕ ಶ್ರಮವು ರಕ್ತದ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿಟ್ಟು ಅಂತಹ ವ್ಯಕ್ತಿಯಲ್ಲಿ ಡಯಾಬಿಟಿಸ್ ಬರುವ ರಿ ಕಡಿಮೆ ಮಾಡುತ್ತದೆ ಎಂದು ಅವರ ಅಭಿಪ್ರಾಯ.

ಹೃದಯಾಘಾತ ಮತ್ತು ಪಾರ್ಶ್ವವಾಯು ಕಾಯಿಲೆಗಳಿಗೆ ಡಯಾಬಿಟಿಸ್ ಕಾಯಿಲೆ ಬಹಳ ದೊಡ್ಡ ರಿ ಉಂಟು ಮಾಡಬಹುದಾದ ಕಾಯಿಲೆ. ಹಾಗಾಗಿ
ಡಯಾಬಿಟಿಸ್ ಬರುವುದನ್ನು ತಪ್ಪಿಸಿದರೆ ಹೃದಯಾಘಾತ ಆಗುವ ಸಾಧ್ಯತೆಯೂ ಕಡಿಮೆ ಆಗುತ್ತದೆ. ಮೇಲಿನ ನಾಲ್ಕೂ ರೀತಿಯ ವಾಕಿಂಗ್
ಅಥವಾ ಪರಿಶ್ರಮದ ನಂತರ ರಕ್ತದ ಒತ್ತಡದಲ್ಲಿ ೫ -೬ ಮಿ.ಮೀ. ನಷ್ಟು ಕಡಿಮೆಯಾಗಿರುವುದು ಸಂಶೋಧಕರ ಗಮನಕ್ಕೆ ಬಂದಿತು. ಕುಳಿತು ಕೆಲಸ ಮಾಡುವ ಭಂಗಿ ರಕ್ತನಾಳಗಳಲ್ಲಿ ತಿರುವುಗಳನ್ನು ಉಂಟು ಮಾಡುತ್ತದೆ. ಅಂತೆಯೇ ರಕ್ತನಾಳಗಳು ಕಿರಿದಾಗುವಂತೆ ಮಾಡುತ್ತವೆ. ಅವು ರಕ್ತದ ಹರಿವಿನ ಮೇಲೆ ಪ್ರಭಾವ ಬೀರಿ ರಕ್ತದ ಒತ್ತಡ ಜಾಸ್ತಿ ಆಗುವಂತೆ ಮಾಡುತ್ತವೆ.

ಹಾಗಾಗಿ ನಿಯಮಿತವಾದ ಕಡಿಮೆ ಅವಽಯ ಪರಿಶ್ರಮ ಅಥವಾ ವಾಕಿಂಗ್, ಕಾಲಿನ ಭಾಗಕ್ಕೆ ಉತ್ತಮ ರೀತಿಯ ರಕ್ತದ ಹರಿವನ್ನು ಉಂಟು ಮಾಡಿ ರಕ್ತ ದೊತ್ತಡದಲ್ಲಿ ವ್ಯತ್ಯಯವಾಗುವುದನ್ನು ತಪ್ಪಿಸುತ್ತದೆ. ರಕ್ತದೊತ್ತಡ ಸರಿಯಾಗಿ ನಿಯಂತ್ರಣದಲ್ಲಿಟ್ಟಾಗ ಹೃದಯದ ಮೇಲಿನ ಒತ್ತಡ ಕಡಿಮೆ
ಮಾಡುತ್ತದೆ. ಹಾಗಾಗಿ ಹೃದಯಾಘಾತ ಮತ್ತು ಹೃದಯ ಸ್ತಂಭನ ಎರಡನ್ನೂ ಪರಿಣಾಮಕಾರಿಯಾಗಿ ತಡೆಯುತ್ತವೆ.

ಸಣ್ಣ ಸಣ್ಣ ಬದಲಾವಣೆಯು ಬಹಳ ಮುಖ್ಯವಾಗುತ್ತವೆ. ಕುಳಿತು ಕೆಲಸ ಮಾಡುವಾಗ ಪ್ರತಿ ಗಂಟೆಗೆ ೫ ನಿಮಿಷ ವಾಕ್ ಮಾಡುವುದು ಬಹಳ
ಎನಿಸಲಾರದು. ಆದರೆ ದಿನದ ಕೊನೆಗೆ ಅದು ೪೦ ನಿಮಿಷ ವಾಕಿಂಗ್ ಆಗುತ್ತದೆ. ಊಟದ ವಿರಾಮದ ವೇಳೆ ೧೫ ನಿಮಿಷಗಳ ವಾಕ್ ಮಾಡಿದರೆ ದಿವಸದಲ್ಲಿ ಒಂದು ಗಂಟೆಯ ಪರಿಶ್ರಮ ತನ್ನಿಂದ ತಾನೇ ಆಗಿಬಿಡುತ್ತದೆ. ಈ ರೀತಿ ಸಣ್ಣ ಸಣ್ಣ ಬದಲಾವಣೆ ಆರೋಗ್ಯದ ಮೇಲೆ ಬಹಳ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಹೃದಯ ರೋಗ ತಜ್ಞ ಡಾ ಯೂ ಮಿಂಗ್ ನಿ ಅಭಿಪ್ರಾಯ ಪಡುತ್ತಾರೆ. ಒಟ್ಟಿನಲ್ಲಿ ಕೈಗೊಳ್ಳಬಹುದಾದ ಈ ಪರಿಹಾರ
ಕ್ರಮವನ್ನು ನಿಯಮಿತವಾಗಿ ಅಳವಡಿಸುವುದು ಮುಖ್ಯ.