Wednesday, 18th September 2024

ರಾಜ್ಯಸಭೆಗೆ ಹೋಗುತ್ತಾರಾ ಸೋಮಣ್ಣ ?

ಮೂರ್ತಿಪೂಜೆ

ರಾಜ್ಯ ಬಿಜೆಪಿಯ ಹಿರಿಯ ನಾಯಕ ವಿ.ಸೋಮಣ್ಣ ಅವರಿಗೆ ಮೊನ್ನೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಫೋನು ಮಾಡಿದ್ದರು. ವಿಧಾನಸಭಾ ಚುನಾವಣೆಯ ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರ ವಿರುದ್ಧ ಕುದಿಯುತ್ತಿರುವ ಸೋಮಣ್ಣ ಅವರನ್ನು ಸಮಾಧಾನಿಸುವುದು ನಡ್ಡಾ ಅವರ ಉದ್ದೇಶ. ಅಂದ ಹಾಗೆ ಸೋಮಣ್ಣ ಎಪಿಸೋಡನ್ನು ಸೆಟ್ಲ್ ಮಾಡಲು ಮೋದಿ-ಅಮಿತ್ ಶಾ ಜೋಡಿ ತಮಗೆ ಜವಾಬ್ದಾರಿ ನೀಡಿದ್ದರಿಂದ ನಡ್ಡಾ ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಹಾಗಂತಲೇ ಮೂರು ವಾರಗಳ ಹಿಂದೆ ಸೋಮಣ್ಣ ಅವರನ್ನು ನಡ್ಡಾ ಸಂಪರ್ಕಿಸಿದ್ದರಾದರೂ ಆ ಮಾತುಕತೆ ವಿಫಲವಾಗಿತ್ತು. ಕಾರಣ? ನಡ್ಡಾ ಅವರು, ‘ನಿಮಗೇನೇ ಬೇಸರವಿರಲಿ, ಅದನ್ನು ಸರಿಮಾಡೋಣ. ಅದಷ್ಟು ಬೇಗ ದಿಲ್ಲಿಗೆ ಬಂದುಬಿಡಿ. ವಿವರವಾಗಿ ಮಾತನಾಡೋಣ’ ಅಂತ ಆಹ್ವಾನ ನೀಡಿದಾಗ
ಸೋಮಣ್ಣ ಕೆರಳಿಬಿಟ್ಟಿದ್ದರು. ಅಷ್ಟೇ ಅಲ್ಲ, ‘ನಾನು ದಿಲ್ಲಿಗೆ ಬಂದು ನಿಮ್ಮ ಜತೆ ಮಾತನಾಡಿದರೆ ವಿಷಯ ಸೆಟ್ಲಾಗಲ್ಲ ಸರ್. ಇವತ್ತು ನನ್ನ ಅಸಮಾಧಾನಕ್ಕೇನು ಕಾರಣ ಅಂತ ಗೊತ್ತಾಗಬೇಕಿದ್ದರೆ ನಿಮ್ಮ ಜತೆಗಿನ ಮಾತುಕತೆಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನೂ ಕರೆಸಿ. ನಡೆದಿದ್ದೇನು? ಇವರು ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ನನ್ನನ್ನು ಹೇಗೆ ಸೋಲಿಸಿದರು? ಅಂತ ನಾನು ದಾಖಲೆ ಸಮೇತ ಹೇಳುತ್ತೇನೆ.

ಆನಂತರ ಈ ವಿಷಯದಲ್ಲಿ ನೀವೇ ತೀರ್ಮಾನ ತೆಗೆದುಕೊಳ್ಳಿ. ಒಂದು ವೇಳೆ ಈ ಮಾತುಕತೆಗೆ ಅವರಿಬ್ಬರೂ ಬರದೆ ನಾನೊಬ್ಬನೇ ಬಂದರೆ ಫಲವಿಲ್ಲ’ ಅಂತ ನೇರಾನೇರವಾಗಿ ಹೇಳಿಬಿಟ್ಟಿದ್ದರು. ಯಾವಾಗ ಸೋಮಣ್ಣ ಗರಂ ಆಗಿರುವುದು ಗೊತ್ತಾಯಿತೋ, ನಡ್ಡಾ ಅವರು ಹೆಚ್ಚು ಮಾತನಾಡದೆ ಲೈನು ಕಟ್ ಮಾಡಿದ್ದರು.
ಇದಾದ ನಂತರ ನಡ್ಡಾ ಅವರನ್ನು ಭೇಟಿ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದಿಲ್ಲಿಗೆ ಹೋದರಲ್ಲ? ಆ ಸಂದರ್ಭದಲ್ಲಿ ಕೆಲ ಪತ್ರಕರ್ತರೊಂದಿಗೆ ಔಪಚಾರಿಕವಾಗಿ ಮಾತನಾಡಿದ ಅವರು, ‘ಅಯ್ಯೋ ನಮಗೆ ಸೋಮಣ್ಣ, ಯತ್ನಾಳ್ ಅವರೆಲ್ಲ ಲೆಕ್ಕವೇ ಅಲ್ಲ ಬಿಡ್ರೀ, ಕರ್ನಾಟಕದಲ್ಲಿ ಬಿಜೆಪಿ ಅಂದ್ರೆ ಯಡಿಯೂರಪ್ಪ. ಯಡಿಯೂರಪ್ಪ ಅಂದ್ರೆ ಬಿಜೆಪಿ ಅಷ್ಟೇ’ ಅಂತ ಹೇಳಿದ್ದರಂತೆ.

ಹೀಗೆ ದಿಲ್ಲಿಯಲ್ಲಿ ವಿಜಯೇಂದ್ರ ನಿಮ್ಮನ್ನು ಉಚಾಯಿಸಿ ಮಾತನಾಡಿದ್ದಾರೆ ಅಂತ ಆಪ್ತರು ಮೆಸೇಜು ಕೊಟ್ಟಾಗ ಸೋಮಣ್ಣ ಇನ್ನಷ್ಟು ಕಿಡಿಕಿಡಿಯಾಗಿದ್ದು
ನಿಜ. ಹೀಗಾಗಿ ದಿಲ್ಲಿಯ ನಾಯಕರ ಜತೆ ಮಾತನಾಡುವ ಆಸಕ್ತಿ ಕಳೆದುಕೊಂಡ ಸೋಮಣ್ಣ, ಮುಂದೇನು ಮಾಡಬೇಕು ಎಂಬ ಯೋಚನೆಗಿಳಿದಾಗ ಕಾಂಗ್ರೆಸ್ ಪಕ್ಷದ ನಾಯಕರು ಅವರಿಗೆತಗುಲಿಕೊಂಡಿದ್ದಾರೆ. ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಪಕ್ಷದಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬ ಚಿಂತೆ
ಯಲ್ಲಿರುವ ಕಾಂಗ್ರೆಸ್ ನಾಯಕರಿಗೆ ಸೋಮಣ್ಣ ಭರವಸೆಯಾಗಿ ಕಂಡಿರುವುದು ಸಹಜ.

ಹಾಗಂತಲೇ, ‘ಸೋಮಣ್ಣ ಅವರೇ, ನೀವು ಪಕ್ಷಕ್ಕೆ ಬಂದು ಪಾರ್ಲಿಮೆಂಟ್ ಕ್ಯಾಂಡಿಡೇಟ್ ಆದರೆ ನಿರಾಯಾಸವಾಗಿ ಗೆಲ್ಲುತ್ತೀರಿ’ ಅಂತ ಹೇಳತೊಡಗಿದ್ದಾರೆ. ಹೀಗೆ
ಕಾಂಗ್ರೆಸ್ ನಾಯಕರ ಒತ್ತಾಯ ಹೆಚ್ಚಾದ ಬೆನ್ನಲ್ಲೇ ಮೊನ್ನೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಪುನಃ ಸೋಮಣ್ಣ ಅವರಿಗೆ ಫೋನು ಮಾಡಿದ್ದಾರೆ. ಅವರು ಲೈನಿಗೆ ಬಂದು ದಿಲ್ಲಿಗೆ ಬರಲು ಆಹ್ವಾನಿಸಿದರೆ ಸೋಮಣ್ಣ ಯಥಾಪ್ರಕಾರ, ‘ಸರ್, ಮಾತುಕತೆಗೆ ನಾನು ಮಾತ್ರ ಬಂದರೆ ಸಾಲದು. ಜತೆಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರೂ ಬರಬೇಕು. ಅಲ್ಲಿಯ ತನಕ ನಾನೂ ಬರಲ್ಲ’ ಎಂದಿದ್ದಾರೆ. ಆಗೆಲ್ಲ ಬೇಸರದ ಧ್ವನಿಯಲ್ಲಿ ಮಾತನಾಡಿದ ನಡ್ಡಾ ಅವರು, ‘ಸೋಮಣ್ಣ ಅವರೇ, ಪದೇ ಪದೆ ಯಾಕೆ ಯಡಿಯೂರಪ್ಪ, ವಿಜಯೇಂದ್ರ ಅವರೂ ಬರಲಿ ಅಂತ ಪಟ್ಟು ಹಿಡಿಯುತ್ತೀರಿ? ಮೊನ್ನೆ ನಾನು ಕೂಡಾ ಅವರ ಜತೆ ಮಾತನಾಡಿದ್ದೇನೆ. ಸೋಮಣ್ಣ ಅವರು ವಿಧಾನಸಭೆ ಚುನಾವಣೆಯಲ್ಲಿ ಹೇಗೆ ಸೋತರು? ಯಾಕೆ ಸೋತರು? ಅಂತ ಅವರಿಗೆ ಮನಸ್ಸಿಗೆ ಮುಟ್ಟುವಂತೆ ಹೇಳಿದ್ದೇನೆ.

ಅಷ್ಟೇ ಅಲ್ಲ, ಯಾವ ಕಾರಣಕ್ಕೂ ಮುಂದೆ ಇಂಥದ್ದೆಲ್ಲ ಆಗಬಾರದು. ಇದು ಸರಿಯಲ್ಲ ಅಂತ ನೇರವಾಗಿ ಹೇಳಿದ್ದೇನೆ. ಈಗ ಅವರೂ ಸೋಮಣ್ಣ ಎಪಿಸೋಡನ್ನು ಹೇಗಾದರೂ ಸೆಟ್ಲ್ ಮಾಡಿ ಎಂದಿದ್ದಾರೆ. ಅದಕ್ಕಿಂತ ಮುಖ್ಯವಾಗಿ ನಿಮ್ಮ ವಿಷಯದಲ್ಲಿ ಎಲ್ಲವೂ ಸುಸೂತ್ರವಾಗಿ ಬಗೆಹರಿಯಬೇಕು ಅಂತ ಪ್ರೈಮ್ ಮಿನಿಸ್ಟರು, ಹೋಮ್ ಮಿನಿಸ್ಟರು ಬಯಸಿದ್ದಾರೆ. ಹೀಗಾಗಿ ಇವತ್ತು ಯಾವುದೇ ನೋವುಗಳಿದ್ದರೂ ಅದನ್ನು ಪಕ್ಷದ ಹಿತಾಸಕ್ತಿಯ ದೃಷ್ಟಿಯಿಂದ ನೀವು ಮರೆಯಬೇಕು. ಮೋದಿಯವರು ಪ್ರಧಾನಿ ಆಗಬೇಕು ಅಂತ ಬಯಸುವವರು ನೀವು. ಹೀಗಾಗಿ ಯೋಚಿಸಿ. ಜನವರಿ ಎರಡನೇ ವಾರ ದಿಲ್ಲಿಗೆ ಬನ್ನಿ’ ಅಂದಿದ್ದಾರೆ. ನಡ್ಡಾ ಅವರಾಡಿದ ಮಾತು ಕೇಳಿ ಸ್ವಲ್ಪ ಹೊತ್ತು ಮೌನವಾದ ಸೋಮಣ್ಣ, ‘ಆಗ್ಲಿ ಬಿಡಿ ಸರ್, ನೀವು ಡೇಟು ಕೊಡಿ. ದಿಲ್ಲಿಗೆ ಬರುತ್ತೇನೆ’ ಎಂದಿದ್ದಾರೆ. ಅವರ ಮಾತು ಕೇಳಿ ಸಮಾಧಾನಗೊಂಡ ನಡ್ಡಾ ಅವರು, ‘ಪಾರ್ಲಿಮೆಂಟ್ ಎಲೆಕ್ಷನ್ನಲ್ಲಿ ನೀವು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲು ರೆಡಿಯಾಗಿ.

ಉಳಿದಿದ್ದನ್ನು ನಮಗೆ ಬಿಡಿ’ ಎಂದಿದ್ದಾರೆ. ಆದರೆ ಆ ಬಗ್ಗೆ ಆಸಕ್ತಿ ತೋರದ ಸೋಮಣ್ಣ, ‘ಅದನ್ನೆಲ್ಲ ದಿಲ್ಲಿಗೆ ಬಂದಾಗ ಮಾತನಾಡುತ್ತೇನೆ ಸರ್. ಈಗಲೇ ಯಾವ ತೀರ್ಮಾನ ಬೇಡ’ ಎಂದಿದ್ದಾರೆ. ಅಲ್ಲಿಗೆ ಕಳೆದ ಏಳು ತಿಂಗಳಿನಿಂದ ಬಗೆಹರಿಯದೆ ಉಳಿದಿದ್ದ ‘ಸೋಮಣ್ಣ ಅನ್‌ಹ್ಯಾಪಿ ಎಪಿಸೋಡು’ ಸದ್ಯದಲ್ಲೇ ಸೆಟ್ಲಾಗುವ ಲಕ್ಷಣಗಳು ಕಾಣಿಸಿಕೊಂಡಿವೆ. ಅಂದ ಹಾಗೆ, ಜನವರಿ ಎರಡನೇ ವಾರ ದಿಲ್ಲಿಗೆ ತೆರಳಲಿರುವ ಸೋಮಣ್ಣ ಅವರು ನಡ್ಡಾ ಅವರ ಮುಂದೆ ತಮ್ಮ ಮನಸ್ಸನ್ನು
ತೋಡಿಕೊಳ್ಳಲಿದ್ದಾರೆ. ಈಗಿರುವ ಮಾಹಿತಿಯ ಪ್ರಕಾರ, ಸೋಮಣ್ಣ ಅವರಿಗೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಪರ್ಧಿಸುವ ಮನಸ್ಸಿಲ್ಲ. ಬದಲಿಗೆ ರಾಜ್ಯಸಭೆಗೆ ಹೋಗುವುದು ಅವರ ಇರಾದೆ. ಈ ಪ್ರಪೋಸಲ್ಲಿನೊಂದಿಗೆ ದಿಲ್ಲಿಗೆ ಧಾವಿಸಲಿರುವ ಅವರಿಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಗ್ರೀನ್ ಸಿಗ್ನಲ್ ಕೊಡುವ ವಿಶ್ವಾಸ ಇದೆಯಂತೆ.

ಹೆಗಡೆ-ಕಾಗೇರಿ ಬಿಗ್ ಫೈಟ್

ಈ ಮಧ್ಯೆ, ಬಿಜೆಪಿಯಲ್ಲಿ ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹೆಗಡೆ ಮತ್ತು ವಿಧಾನಸಭೆಯ ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಡುವೆ ಬಿಗ್ ಫೈಟ್ ಶುರುವಾಗಿದೆ. ಅಂದ ಹಾಗೆ, ಪಾರ್ಲಿಮೆಂಟಿನಲ್ಲಿ ಉತ್ತರ ಕನ್ನಡ ಕ್ಷೇತ್ರವನ್ನು ಪ್ರತಿನಿಽಸುತ್ತಿರುವ ಅನಂತಕುಮಾರ್ ಹೆಗಡೆ ಇತ್ತೀಚಿನ ದಿನಗಳಲ್ಲಿ ಶಸಸನ್ಯಾಸದ ಸುಳಿವು ನೀಡಿದ್ದರು. ಯಾವಾಗ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಲಕ್ಷಣ ಕಾಣತೊಡಗಿತೋ, ಆಗ ಫೀಲ್ಡಿಗಿಳಿದ
ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಷೇತ್ರದಾದ್ಯಂತ ರಣರಣ ಸುತ್ತಾಡತೊಡಗಿದರು.

ಹೀಗೆ ಅವರು ಆಕ್ಟಿವ್ ಆದರಲ್ಲ, ಆಗ ಇದ್ದಕ್ಕಿದ್ದಂತೆ ಅನಂತಕುಮಾರ್ ಹೆಗಡೆಯವರ ಆಪ್ತರು ತಳಮಳಗೊಂಡರು. ಅಂದ ಹಾಗೆ, ಸದಾ ಕಾಲ ಹಿಂದೂ ಹುಲಿಯ ಪೋಷಾಕು ತೊಟ್ಟು, ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಾ ಬಂದಿರುವ ಅನಂತಕುಮಾರ್ ಹೆಗಡೆ, ಕ್ಷೇತ್ರದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದಾರೆ ಎಂಬ ಕೂಗು
ಹೊಸತಲ್ಲವಾದರೂ, ಅವರ ಜಾಗಕ್ಕೆ ಕಾಗೇರಿ ಬರುವ ಸೂಚನೆ ಕಾಣುತ್ತಿದ್ದಂತೆಯೇ ಈ ಆಪ್ತರು ಹುಯಿಲೆಬ್ಬಿಸತೊಡಗಿದರು. ಮುಂದಿನ ಪಾರ್ಲಿಮೆಂಟ್ ಎಲೆಕ್ಷನ್ನಿನಲ್ಲಿ ನೀವು ಮತ್ತೆ ಸ್ಪರ್ಧಿಸಬೇಕು ಅಂತ ಅನಂತಕುಮಾರ್ ಹೆಗಡೆ ಅವರನ್ನು ಒತ್ತಾಯಿಸತೊಡಗಿದರು. ಯಾವಾಗ ಈ ಕೂಗು ಶುರುವಾಯಿತೋ, ಆಗ ಅನಂತಕುಮಾರ್ ಹೆಗಡೆ ಕೂಡಾ, ‘ಎಲೆಕ್ಷನ್ನಿನಲ್ಲಿ ಮತ್ತೆ ಸ್ಪಽಸುವಂತೆ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.

ಇಂಥ ಅಭಿಪ್ರಾಯವನ್ನು ನಿರ್ಲಕ್ಷಿಸುವುದು ಮೂರ್ಖತನವಾಗುತ್ತದೆ’ ಎಂದುಬಿಟ್ಟರು. ಇದರ ಪರಿಣಾಮ ಏನಾಗಿದೆ ಎಂದರೆ ಉತ್ತರ ಕನ್ನಡ ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಹೆಗಡೆ ವರ್ಸಸ್ ಕಾಗೇರಿ ನಡುವೆ ಬಿಗ್ ಫೈಟ್ ಶುರುವಾಗಿದೆ. ಅಂದ ಹಾಗೆ, ಬಿಜೆಪಿ ಮೂಲಗಳ ಪ್ರಕಾರ, ಈ ಬಾರಿ ಅನಂತಕುಮಾರ್ ಹೆಗಡೆ ಅವರಿಗೆ ಪಾರ್ಲಿಮೆಂಟ್ ಟಿಕೆಟ್ ಕೊಡುವ ವಿಷಯದಲ್ಲಿ ಪಕ್ಷದ ನಾಯಕರಿಗೆ ಆಸಕ್ತಿ ಇಲ್ಲ. ಕಾರಣ? ಸಂದರ್ಭ ಬಂದರೆ ಯಾವ ನಾಯಕರನ್ನಾದರೂ ಅವರು ಉಚಾಯಿಸ ಬಲ್ಲರು. ವಿವಾದಗಳಲ್ಲೇ ಮುಳುಗಿ ಬಿಸಿ ಕಾಯಿಸಿಕೊಳ್ಳಬಲ್ಲರು. ಹೀಗಾಗಿ ಅವರ ಬದಲು ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪಾರ್ಲಿಮೆಂಟ್ ಟಿಕೆಟ್ ಕೊಡುವುದು ಬೆಸ್ಟು ಎಂಬ ಅಭಿಪ್ರಾಯ ಬಹುತೇಕ ನಾಯಕರಲ್ಲಿದೆ. ಆದರೆ ಇದು ಎಷ್ಟರ ಮಟ್ಟಿಗೆ ವರ್ಕ್‌ಔಟ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ಸಿಗುತ್ತದೋ? ಕಾದು ನೋಡಬೇಕು.

ಮಂಡ್ಯದಲ್ಲಿ ‘ರಮ್ಯ’ ಕ್ಯಾಂಡಿಡೇಟು ಸಿಗುತ್ತಿಲ್ಲ

ಇನ್ನು ಪಾರ್ಲಿಮೆಂಟ್ ಚುನಾವಣೆ ಹತ್ತಿರವಾಗುತ್ತಿದ್ದರೂ ಕರ್ನಾಟಕದ ಕೈ ಪಾಳಯಕ್ಕೆ ಕ್ಯಾಂಡಿಡೇಟುಗಳ ಕೊರತೆ
ಕಾಡುತ್ತಿದೆ. ಇದು ಒಂದೆರಡು ಕ್ಷೇತ್ರಗಳ ಕತೆಯಲ್ಲ, ರಾಜ್ಯದ ಡಜನ್‌ಗೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ವಿನ್ನಿಂಗ್ ಕ್ಯಾಂಡಿಡೇಟುಗಳು ಸಿಗುತ್ತಿಲ್ಲ. ಈ ಮಧ್ಯೆ ಮಂಡ್ಯ ಪಾರ್ಲಿಮೆಂಟ್ ಕ್ಷೇತ್ರದ ಕತೆ ಇನ್ನಷ್ಟು ವಿಚಿತ್ರವಾಗಿದೆ. ಯಾಕೆಂದರೆ ಅಲ್ಲಿ ಗೆಲ್ಲುವ ಶಕ್ತಿ ಇರುವ ಕ್ಯಾಂಡಿಡೇಟ್ ಇದ್ದಾರೆ. ಆದರೆ ಅವರಿಗೆ ಪಕ್ಷದ ಟಿಕೆಟ್ ಕೊಡುವ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಘಟಾನುಘಟಿ
ನಾಯಕರ‍್ಯಾರಿಗೂ ಒಲವಿಲ್ಲ.

ಅಂದ ಹಾಗೆ ಈ ಕ್ಯಾಂಡಿಡೇಟು ಬೇರೆ ಯಾರೂ ಅಲ್ಲ, ಚಿತ್ರನಟಿ, ಮಾಜಿ ಸಂಸದೆ ರಮ್ಯಾ. ಇವತ್ತೂ ಟಿಕೆಟ್ ಕೊಟ್ಟರೆ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಕ್ಯಾಂಡಿ ಡೇಟನ್ನು ಅಲುಗಾಡಿಸಬಲ್ಲ ವರ್ಚಸ್ಸು ರಮ್ಯಾ ಅವರಿಗಿದೆ. ಆದರೆ ಪಕ್ಷದ ರಾಜ್ಯ ಘಟಕದಿಂದ ಹಿಡಿದು, ಜಿಲ್ಲಾ ಘಟಕದ ತನಕ ಬಹುತೇಕ ನಾಯಕರು ಇದನ್ನು ಲೆಕ್ಕಕ್ಕೇ ಇಡುತ್ತಿಲ್ಲ. ಕಾರಣ? ರಮ್ಯಾ ಅವರು ಸಂಸದೆಯಾಗಿ ದಿಲ್ಲಿ ತಲುಪಿಕೊಂಡರೆ ಅವರನ್ನು ನಿಯಂತ್ರಿಸುವುದು ಕಷ್ಟ ಎಂಬ ಮುನ್ನೆಚ್ಚರಿಕೆ. ಹೀಗಾಗಿ
ವಿನ್ನಿಂಗ್ ಕ್ಯಾಂಡಿಡೇಟ್ ಕಾಣಿಸದಿದ್ದರೂ ರಮ್ಯಾ ಪರವಾಗಿ ಯಾರೂ ಬ್ಯಾಟ್ ಮಾಡುತ್ತಿಲ್ಲ.

ಬದಲಿಗೆ ಮಂಡ್ಯ ಕ್ಷೇತ್ರದ ಕ್ಯಾಂಡಿಡೇಟಿನ ಆಯ್ಕೆ ಜವಾಬ್ದಾರಿಯನ್ನು ಪಕ್ಷದ ಹೈಕಮಾಂಡ್ ಹೆಗಲ ಮೇಲೆ ಹಾಕಿ ಎಲ್ಲರೂ ಕೈ ತೊಳೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *