Saturday, 14th December 2024

ಕೆಲವು ಮಾಹಿತಿಗಳು ನಮಗೆ ಗೊತ್ತಿಲ್ಲದಿರುವುದೇ ಒಳ್ಳೆಯದು !

ಇದೇ ಅಂತರಂಗ ಶುದ್ದಿ

ವಿಶ್ವೇಶ್ವರ ಭಟ್

vbhat@me.com

ಖಾಸಗಿ ಬಸ್ಸು ಅಥವಾ ವಿಮಾನ ಅಪಘಾತಕ್ಕೀಡಾದಾಗ ಮಾಡುವ ಮೊದಲ ಕೆಲಸವೆಂದರೆ, ತಮ್ಮ ಸಂಸ್ಥೆಯ ಹೆಸರು ಮತ್ತು  ಲೋಗೋವನ್ನು ಡಾಂಬರು ಹಾಕಿ ಪೈಂಟ್ ಮಾಡುವುದು.

ಅಪಘಾತಕ್ಕೀಡದ ಬಸ್ಸಿನ ಅಥವಾ ವಿಮಾನದ ಮೇಲಿನ ಹೆಸರು ಕಂಡರೆ, ಅದು ಗ್ರಾಹಕರ ಮೇಲೆ ಸಂಸ್ಥೆಯ ಬಗ್ಗೆ ನೆಗೆಟಿವ್ ಭಾವ ಮೂಡಿಸಬಹುದು ಎಂದು ಆ ಕ್ರಮಕ್ಕೆ ಮುಂದಾಗುತ್ತಾರೆ. ಕೆಲವು ವರ್ಷಗಳ ಹಿಂದೆ, ಬೆಂಗಳೂರಿನಲ್ಲಿ ಕಪಾಟನ್ನು ಸಾಗಿಸುವಾಗ, ಅದು ಬಿದ್ದು ಒಬ್ಬ ಸತ್ತಾಗ, ಪತ್ರಿಕೆಯಲ್ಲಿ ‘ಗೋದ್ರೇಜ್ ಕಪಾಟು ಬಿದ್ದು ಒಬ್ಬನ ಸಾವು’ ಎಂಬ ಸುದ್ದಿ ಪ್ರಕಟವಾದಾಗ, ಗೋದ್ರೇಜ್ ಕಂಪನಿ ಪತ್ರಿಕೆಯ ಮೇಲೆ ಕೇಸು ಹಾಕಿದ ಪ್ರಸಂಗ ನೆನಪಾಗುತ್ತಿದೆ. ಅಪಘಾತ ಕ್ಕೀಡಾದ ವಾಹನದ ಫೋಟೋ ಪತ್ರಿಕೆಯಲ್ಲಿ ಪ್ರಕಟವಾಗುವು ದರಿಂದ, ಓದುಗನ ಮನಸ್ಸಿನಲ್ಲಿ ಆ ಸಾರಿಗೆ ಸಂಸ್ಥೆಯ ಬಗ್ಗೆ ನಕಾರಾತ್ಮಕ ಭಾವನೆ ಮೂಡದೇ ಹೋಗುವುದಿಲ್ಲ. ಹೀಗಾಗಿ ತಕ್ಷಣ ಹೆಸರಿನ ಮೇಲೆ ಕಪ್ಪು ಮಸಿ ಬಳಿಯುತ್ತಾರೆ.

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ ದಿಲ್ಲಿಯ ಪ್ರತಿಷ್ಠಿತ ಲೀಲಾ ಪ್ಯಾಲೇಸ್ ಹೋಟೆಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ, ಆ ಸುದ್ದಿ ಎಲ್ಲ ಟಿವಿ ಚಾನೆಲುಗಳಲ್ಲಿ ಪ್ರಸಾರವಾಯಿತು. ಪತ್ರಿಕೆಯಲ್ಲಿ ಪ್ರಕಟವಾಯಿತು. ಮರುದಿನವೇ ಲೀಲಾ ಪ್ಯಾಲೇಸ್ ಹೋಟೆಲಿನ ಜನರಲ್ ಮ್ಯಾನೇಜರ್ ಎಲ್ಲಾ ಮಾಧ್ಯಮ ಸಂಸ್ಥೆಗಳಿಗೆ, ತಮ್ಮ ಹೋಟೆಲಿನ ಹೆಸರನ್ನು ಪ್ರಸ್ತಾಪಿಸದಂತೆ ಬಿನ್ನವಿಸಿಕೊಂಡರು. ಇದರಿಂದ ತಮ್ಮ ಹೋಟೆಲಿ ನಲ್ಲಿ ವಾಸಿಸುವ ಅತಿಥಿಗಳ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆ ಮೂಡುತ್ತದೆ ಮತ್ತು ತಮ್ಮ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ತೊಡಕಾಗುತ್ತದೆ ಎಂದು ನಿವೇದಿಸಿಕೊಂಡರು.

ಅನಂತರ ಕೆಲವು ಟಿವಿ ಚಾನೆಲ್ಲುಗಳು ‘ದಿಲ್ಲಿಯ ಪ್ರತಿಷ್ಠಿತ ಪಂಚತಾರಾ ಹೋಟೆಲೊಂದರಲ್ಲಿ’ ಎಂದು ವರದಿ ಮಾಡಲಾರಂಭಿಸಿದವು. ಘಟನೆ ಸಂಭವಿಸಿದ ಮಾರನೇ ದಿನ, ಕೆಲವು ಪತ್ರಿಕೆಗಳು ‘ಕೋಣೆ ನಂಬರ್ 345 ರಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಳು’ ಎಂದು ವರದಿ ಮಾಡಿದ್ದವು. ಇದರಿಂದಾಗಿ ಸುಮಾರು ಆರು ತಿಂಗಳ ಕಾಲ, ಇಡೀ ಮಹಡಿಯಲ್ಲಿದ್ದ ಎಲ್ಲ ರೂಮಿಗಳನ್ನು ಅತಿಥಿಗಳಿಗೆ ನೀಡಿರಲಿಲ್ಲ. ನಂತರ ಎಲ್ಲ ರೂಮುಗಳನ್ನು ನವೀಕರಿಸಲಾಯಿತಾದರೂ, ಇಂದಿಗೂ ೩೪೫ನೇ ನಂಬರಿನ ಕೋಣೆ ಬಂದ್ ಆಗಿದೆ. ಈ ಘಟನೆಯ ನಂತರ, ಆ ಹೋಟೆಲಿಗೆ ಬರುವ ಅತಿಥಿಗಳ ಸಂಖ್ಯೆ ಇಳಿಮುಖ ಕಂಡಿತು.

ಇಂದಿಗೂ ಅನೇಕರು, ‘ಸುನಂದಾ ಪುಷ್ಕರ ಆತ್ಮಹತ್ಯೆ ಮಾಡಿಕೊಂಡ ರೂಮನ್ನು ನೀಡುತ್ತಿಲ್ಲವಷ್ಟೆ’ ಎಂದು ಖಾತ್ರಿಪಡಿಸಿಕೊಳ್ಳುತ್ತಾರಂತೆ. ಮುಂಬೈ ತಾಜ್ ಮಹಲ್ ಹೋಟೆಲ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ನಂತರ, ತನ್ನ ಫ್ಲಾಗ್ ಶಿಪ್ ಹೋಟೆಲ್ ಅನ್ನು ಮುಂಚಿನ ಸ್ಥಿತಿಗೆ ತರಲು ಟಾಟಾ ಸಂಸ್ಥೆ ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಈಗಂತೂ ಆ ಘಟನೆಯ ನೆನಪೇ ಸುಳಿಯದಂತೆ, ಆ ಹೋಟೆಲ್ಲನ್ನು ನವೀಕರಿಸಲಾಗಿದೆ.

ಸಾಮಾನ್ಯವಾಗಿ ಹೋಟೆಲಿನಲ್ಲಿ ಯಾರಾದರೂ ಸತ್ತರೆ, ಆ ಸುದ್ದಿ ಪ್ರಚಾರವಾಗುವುದಿಲ್ಲ. ಅದರಲ್ಲೂ ಹೋಟೆಲಿನ ಆಡಳಿತ ಮಂಡಳಿ ಈ ವಿಷಯದಲ್ಲಿ ಬಹಳ ಎಚ್ಚರವಹಿಸಿ, ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಾರೆ. ಈ ವಿಷಯ ಬಹಿರಂಗವಾದರೆ, ಅಲ್ಲಿಗೆ ಬರುವ ಅತಿಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗು ತ್ತದೆ. ನೀವು ಯಾವುದೇ ಹೋಟೆಲಿಗೆ ಹೋದಾಗ, ಈ ರೂಮಿನಲ್ಲಿ ಯಾರಾದರೂ ನೇಣು ಬಿಗಿದು ಸತ್ತಿರಬಹುದಾ ಎಂಬ ಯೋಚನೆ ನಿಮ್ಮ ಮನಸ್ಸಿನೊಳಗೆ ಹಾದು ಹೋದರೆ ಸಾಕು, ಆ ರಾತ್ರಿ ನಿಮ್ಮ ಕಣ್ಣೊಳಗೆ ನಿದ್ದೆ ಇಳಿಯುವುದಿಲ್ಲ.

ನಾನು ಆಫ್ರಿಕಾ ಖಂಡದ ರವಾಂಡಾ ದೇಶಕ್ಕೆ ಹೋದಾಗ, Hotel Des Mille Collines ನಲ್ಲಿ ಉಳಿದುಕೊಂಡಿದ್ದೆ. 1994ರಲ್ಲಿ ರವಾಂಡಾದಲ್ಲಿ ಜನಾಂಗೀಯ ಹತ್ಯೆಯಲ್ಲಿ ನೂರು ದಿನಗಳಲ್ಲಿ ಹತ್ತು ಲಕ್ಷಕ್ಕೂ ಅಧಿಕ ಜನ ಸತ್ತಾಗ, ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಈ ಹೋಟೆಲಿನಲ್ಲಿ ಅಡಗಿ ಕುಳಿತಿದ್ದರು. ಹತ್ತೆಂಟು ಹೆಣಗಳು ಬಿದ್ದವು. ಇದೇ ಹೋಟೆಲಿನಲ್ಲಿ ‘ಹೋಟೆಲ್ ರವಾಂಡಾ’ ಸಿನಿಮಾದ ಚಿತ್ರೀಕರಣ ಸಹ ನಡೆದಿದ್ದು. ಹೋಟೆಲ್ ಡೆಸ್ ಮಿ ಕಾಲಿನ್ಸ್ ಮತ್ತು ಹೋಟೆಲ್ ರವಾಂಡಾ ಇವೆರಡೂ ಬೇರೆ ಬೇರೆ ಹೋಟೆಲುಗಳು ಎಂದೇ ನಾನು ಭಾವಿಸಿದ್ದೆ. ಆದರೆ ಅವೆರಡೂ ಒಂದೇ ಎಂದು ಮೊದಲ ರಾತ್ರಿಯೇ ಗೊತ್ತಾದಾಗ ನನಗೆ ಅಲ್ಲಿ ವಾಸಿಸಲು ಸಾಧ್ಯವಾಗಲೇ ಇಲ್ಲ. ಆ ಒಂದು ರಾತ್ರಿ ಕಳೆಯುವುದೇ ದುಸ್ತರವಾಯಿತು.

ಬೆಳಗಾಗುತ್ತಲೇ ಬೇರೆ ಹೋಟೆಲ್ಲಿಗೆ ವರ್ಗವಾದೆ. ಆಗಲೇ ನಾನು ನಿಟ್ಟುಸಿರು ಬಿಟ್ಟಿದ್ದು. ಆ ದೇಶದಲ್ಲಿ ಜನಾಂಗೀಯ ನರಮೇಧ ನಡೆಡಿದ್ದು ಇಪ್ಪತ್ತೈದು ವರ್ಷಗಳ ಹಿಂದಾದರೂ, ನನಗೆ ಆ ಒಂದು ರಾತ್ರಿ ಆ ಹೋಟೆಲಿನಲ್ಲಿ ಕಳೆಯಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಹೋಟೆಲಿನ ಆಡಳಿತ ಮಂಡಳಿ ಈ ವಿಷಯದಲ್ಲಿ ತೀರಾ ಎಚ್ಚರವಹಿಸುತ್ತದೆ. ಯಾರಾದರೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡರೂ, ಹೋಟೆಲಿನಲ್ಲಿ ವಾಸವಿರುವವರಿಗೆ ಗೊತ್ತಾಗದಂತೆ, ಶವವನ್ನು ಸಾಗಿಸಿ, ಮಾಧ್ಯಮಗಳಲ್ಲಿ ವಿಷಯ ವರದಿಯಾಗದಂತೆ ನೋಡಿಕೊಳ್ಳುತ್ತವೆ.

ಮೂರು ವರ್ಷಗಳ ಹಿಂದೆ, ನಾನು ನ್ಯೂಯಾರ್ಕಿನ ಟೈಮ್ಸ್ ಸ್ಕ್ವೇರ್ ಸನಿಹವಿರುವ ಹೋಟೆಲ್ ಎಡಿಸನ್‌ನಲ್ಲಿ ಉಳಿದುಕೊಂಡಿದ್ದೆ. ಈ ಹೋಟೆಲ್ ಕಟ್ಟಿ ತೊಂಬತ್ತು ವರ್ಷಗಳಾದವು. ಈ ಹೋಟೆಲಿನಲ್ಲಿ ಯಾರು ಉಳಿದುಕೊಂಡಿದ್ದಾರೆ ಎಂಬ ಮಾಹಿತಿಯನ್ನು ಪೋಲೀಸರ ಹೊರತಾಗಿ ಯಾರು ಕೇಳಿದರೂ ಹೇಳುವುದಿಲ್ಲ. ನಿಮ್ಮ ಮಗನೋ, ಪತ್ನಿಯೋ, ಸ್ನೇಹಿತನೋ ಅಲ್ಲಿ ಉಳಿದುಕೊಂಡಿದ್ದರೂ, ನೀವು ಹೋಗಿ ಅವರ ವಾಸ್ತವ್ಯದ ಬಗ್ಗೆ ವಿಚಾರಿಸಿದರೆ ಹೇಳುವುದಿಲ್ಲ. ನಮ್ಮ ಅತಿಥಿಗಳ ಕುರಿತಾದ ಯಾವ ಮಾಹಿತಿಯನ್ನೂ ನೀಡುವುದಿಲ್ಲ ಎಂದು ರಿಸೆಪ್ಷನ್‌ನಲ್ಲಿರುವವರು ಹೇಳುತ್ತಾರೆ. ಅದಿರಲಿ. ಮಾರಿಯೋ ಪುಝೋ ಕಾದಂಬರಿ ಆಧಾರಿತ ‘ಗಾಡ್ ಫಾದರ್’ ಸಿನಿಮಾದ ಬಗ್ಗೆ ಕೇಳಿರುತ್ತೀರಿ. ಆ ಸಿನಿಮಾದಲ್ಲಿ ಬರುವ ಲುಕಾ ಬ್ರಾಸಿ ಎಂಬಾತನ ಹತ್ಯೆ ಈ ಹೋಟೆಲಿನಲ್ಲಿಯೇ ನಡೆಯುತ್ತದೆ.

ಇದು ಕಾಲ್ಪನಿಕ ಪಾತ್ರ ಮತ್ತು ಚಿತ್ರ. ನಾನು ಎಡಿಸನ್ ಹೋಟೆಲಿನಲ್ಲಿ ಉಳಿದುಕೊಂಡ ಆರು ರಾತ್ರಿಯೂ ಲುಕಾ ಬ್ರಾಸಿ ಹತ್ಯೆ ಪ್ರಸಂಗ ನೆನಪಾಗಿ ಮುಸುಕೆ ಳೆದುಕೊಂಡು ಮಲಗುತ್ತಿದ್ದೆ. ಕೆಲವು ವರ್ಷಗಳ ಹಿಂದೆ, ಎಮಿರೇಟ್ಸ ಇನ್ ಫ್ಲೈಟ್ ಮ್ಯಾಗಜಿನ್ ನಲ್ಲಿ, ಖ್ಯಾತ ಶೆಲ್ಫ್ (ಅಡುಗೆಭಟ್ಟ) ನ ಸಂದರ್ಶನ ಪ್ರಕಟವಾಗಿತ್ತು. ಅದರಲ್ಲಿ ಆತ ಹೇಳಿದ್ದ – ‘ನಾನು ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಜಗತ್ತಿನ ಪ್ರತಿಷ್ಠಿತ ಪಂಚತಾರಾ ಹೋಟೆಲುಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ಜಿರಲೆಗಳಿಲ್ಲದ
ಕಿಚನ್ ಯಾವ ಹೋಟೆಲ್ ಎಲ್ಲೂ ನೋಡಿಲ್ಲ. ಪಂಚಾತಾರ ಹೋಟೆಲುಗಳಾದರೂ ಜಿರಳೆ ಇದ್ದೇ ಇರುತ್ತವೆ.’ ಸಾಮಾನ್ಯವಾಗಿ ಇನ್ ಫ್ಲೈಟ್ ಮ್ಯಾಗಜಿನ್‌ನಲ್ಲಿ ಇಂಥ ಲೇಖನ ಪ್ರಕಟಿಸುವುದಿಲ್ಲ. ಈಗಲೂ ಪಂಚತಾರಾ ಹೋಟೆಲುಗಳಲ್ಲಿ ಊಟ ಮಾಡುವಾಗ, ಆ ಸಂದರ್ಶನ ನೆನಪಾಗುವುದುಂಟು. (ಇದನ್ನು ಓದಿ ನೀವೂ ನೆನಪು ಮಾಡಿಕೊಳ್ಳಬೇಡಿ) ಮಾಹಿತಿ ವಿಷಯದಲ್ಲಿ ಎಲ್ಲವನ್ನೂ ತಿಳಿದಿರಬೇಕು ಅಂತಾರೆ. ಆದರೆ ಕೆಲವು ಮಾಹಿತಿಗಳು ನಮಗೆ ಗೊತ್ತಿಲ್ಲದಿರುವುದೇ ಒಳ್ಳೆಯದು.

ನೆಹರು ಭದ್ರತಾ ಅಧಿಕಾರಿ ಹೇಳಿದ್ದು

ಕಳೆದ ಹದಿನೈದು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಯವರ ಭದ್ರತಾ ಲೋಪ ಬಹುಚರ್ಚಿತ ವಿಷಯ. ಇದು ಮೋದಿಯವರ ಹತ್ಯೆಗೆ ನಡೆದಿತ್ತೆನ್ನಲಾದ ಸಂಚು ಇದ್ದಿರಬಹುದಾ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಮೋದಿಯವರ ಭದ್ರತೆ ಏಳು-ಸುತ್ತಿನ ಕೋಟೆಯನ್ನು ಭೇದಿಸಿದಂತೆ. ಆದರೂ ಅಂದು ಒಂದಷ್ಟು ಹೊತ್ತು ಕಳವಳವನ್ನುಂಟು ಮಾಡಿದ್ದೂ ಸುಳ್ಳಲ್ಲ. ಜವಾಹರಲಾಲ್ ನೆಹರು ಪ್ರಧಾನಿಯಾಗಿದ್ದಾಗ ಅವರ ಭದ್ರತೆ ಹೇಗಿತ್ತು ? ನೆಹರು ಅವರ ಮುಖ್ಯ ಭದ್ರತಾ ಅಧಿಕಾರಿಯಾಗಿದ್ದ ಪದ್ಮ ವಿಭೂಷಣ ಕೆ.ಎಫ್.ರುಸ್ತಮ್ ಜೀ ತಮ್ಮ I was Nehru’s Shadow ಪುಸ್ತಕದಲ್ಲಿ ಬರೆದಿದ್ದಾರೆ.

ದೊಡ್ಡ ಜನಜಂಗುಳಿಯನ್ನು ಕಂಡಾಗ, ನೆಹರು ಅವರಲ್ಲಿ ಉತ್ಸಾಹ ಪುಟಿದೇಳುತ್ತಿತ್ತಂತೆ. ಅವರು ಯಾವುದೇ ಎಚ್ಚರಿಕೆ ಮಾತುಗಳನ್ನೂ ಕೇಳುತ್ತಿರಲಿಲ್ಲ.
ಮುಚ್ಚಿದ ಕಾರಿನಲ್ಲಿ ಪ್ರಯಾಣಿಸುವುದನ್ನು ಇಷ್ಟಪಡುತ್ತಿರಲಿಲ್ಲ. ತೆರೆದ ಕಾರನ್ನು ವ್ಯವಸ್ಥೆ ಮಾಡುವಂತೆ ಹೇಳುತ್ತಿದ್ದರು. ಮುಚ್ಚಿದ ಕಾರಿನಲ್ಲಿ ಪ್ರಯಾಣಿಸುವು ದೆಂದರೆ, ಪಂಜರದೊಳಗೆ ಪಯಣಿಸಿದಂತೆ ಎಂದು ಅವರು ಹೇಳುತ್ತಿದ್ದರು. ಕಾರಿನಿಂದ ಇಳಿದು ಅದರ ಬಾನೆಟ್ ಮೇಲೆ ಅಥವಾ ಮಡ್ ಗಾರ್ಡ್ ಮೇಲೆ
ಕುಳಿತುಕೊಳ್ಳುತ್ತಿದ್ದರು. ಕೆಲವು ಸಲ ತಾವೇ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದರು.

ಒಮ್ಮೊಮ್ಮೆ ನೆಹರು ಭದ್ರತಾ ಅಧಿಕಾರಿಗಳಿಗೆ ಸುಳಿವನ್ನೂ ಕೊಡದೇ ಜನಜಂಗುಳಿಯೊಳಗೆ ಹೋಗಿ ಬಿಡುತ್ತಿದ್ದರು. ಆಗ ಅವರಿಗೆ ಭದ್ರತೆ ಒದಗಿಸುವುದು ಬಹಳ
ಕಷ್ಟವಾಗುತ್ತಿತ್ತು. ಆ ಸಂದರ್ಭದಲ್ಲಿ ಯಾವ ಸಲಹೆ ನೀಡಿದರೂ ಅವರು ಕೇಳುತ್ತಿರಲಿಲ್ಲ. ಕಾರಿನಲ್ಲಿ ಪ್ರಯಾಣ ಮಾಡುವಾಗ, ಒಂದು ಬಾಸ್ಕೆಟ್ ತುಂಬಾ ಹಣ್ಣುಗಳನ್ನು ಇಟ್ಟಿರಬೇಕಾಗುತ್ತಿತ್ತು. ಅದರಲ್ಲೂ ಪ್ರಯಾಣದಲ್ಲಿ ಅವರು ಬಾಳೆಹಣ್ಣುಗಳನ್ನು ಇಷ್ಟಪಡುತ್ತಿದ್ದರು.

ಅದನ್ನು ಅವರು the fruit of travel ಎಂದು ಕರೆಯುತ್ತಿದ್ದರು. ಸೇಬು ಇಟ್ಟರೆ, ಅದನ್ನು ಕಡಿಯುತ್ತಾ ಇರುತ್ತಿದ್ದರು. ಪ್ರಯಾಣ ದಲ್ಲಿ ಹಣ್ಣು ಮತ್ತು ನೀರು ಯಥೇಚ್ಛ ಸೇವಿಸಬೇಕು ಎಂದು ತಮ್ಮ ಜತೆಯಲ್ಲಿ ಹೋಗುವವರಿಗೆ ಹೇಳುತ್ತಿದ್ದರು. ಒಮ್ಮೆ ಅವರು ದಿಲ್ಲಿಯಿಂದ ಸುಮಾರು ಎಂಬತ್ತು ಕಿಮಿ ಪ್ರಯಾಣವನ್ನು ಕಾರಿನಲ್ಲಿ ಪ್ರಯಾಣಿಸುವಾಗ, ಅವರ ಆಪ್ತ ಸಹಾಯಕ ಹಣ್ಣುಗಳನ್ನಿಡಲು ಮರೆತುಬಿಟ್ಟಿದ್ದ. ಹತ್ತು ಕಿಮಿ ಪ್ರಯಾಣಿಸಿದ ನಂತರ ಹಣ್ಣಿಗಳಿಲ್ಲದಿರುವುದು ಅವರ ಗಮನಕ್ಕೆ ಬಂದಿತು. ಅವರು ವಾಪಸ್ ಬಂದು ಹಣ್ಣುಗಳನ್ನು ತೆಗೆದುಕೊಂಡು ಹೋಗಿದ್ದರು.

ಸಮಸ್ಯೆಗೇ ಸವಾಲು ಹಾಕಿ
ಯಾವತ್ತೂ ಸಾಧಕರು ಹೇಳುವ ಮಾತುಗಳನ್ನು ಕೇಳಬೇಕಂತೆ. ಅದು ಏನೇ ಆಗಿರಲಿ, ಸ್ವಾಭಾವಿಕವಾಗಿ ಆ ಮಾತುಗಳಿಗೆ ಮಹತ್ವ ಬರುತ್ತವೆ. ಯಶಸ್ಸು ಅಂಥ ಪವಾಡವನ್ನು ಮಾಡುತ್ತದೆ. ಕೆಲ ದಿನಗಳ ಹಿಂದೆ ಟೆಸ್ಲಾ ಕಂಪನಿಯ ಮುಖ್ಯಸ್ಥ ಮತ್ತು ಸಾಧಕ ಎಲಾನ್ ಮಸ್ಕ್ ಹೇಳಿದ ಈ ಮಾತುಗಳನ್ನು ಆ ಹಿನ್ನೆಲೆಯಲ್ಲಿ
ಗಮನಿಸಬಹುದು.

ನೀವು ಯಾವುದೇ ಹೊಸ ಕೆಲಸವನ್ನು ಮಾಡುತ್ತಿರುವಾಗ ಅಲ್ಲಿ ತಪ್ಪುಗಳಾಗಬಹುದೇನೋ ಎಂಬ ಶಂಕೆ ಮನದಳುವುದು ಸಹಜ. ಇಲ್ಲಿ ಮುಖ್ಯವಾದ ಸಂಗತಿ ಏನೆಂದರೆ, ನೀವು ನಿಮ್ಮ ತಪ್ಪುಗಳಿಂದ ಏನನ್ನು ಕಲಿತಿರಿ, ತಪ್ಪುಗಳನ್ನು ಹೇಗೆ ಗ್ರಹಿಸಿದಿರಿ ಮತ್ತು ಆ ಬಗ್ಗೆ ಏನು ಚಿಂತಿಸಿದಿರಿ ಎಂಬುದು. ಪ್ರತಿ ಕೆಲಸ ಶುರು
ಮಾಡುವಾಗ ಎಲ್ಲರೂ ತಪ್ಪು ಮಾಡ್ತಾರೆ. ಆದರೆ ಯಶಸ್ವಿ ವ್ಯಕ್ತಿಗಳು ತಪ್ಪನ್ನು ಗುರುತಿಸುತ್ತಾರೆ ಮತ್ತು ಬಹುಬೇಗ ಅದನ್ನು ಸರಿಪಡಿಸಿಕೊಳ್ಳುತ್ತಾರೆ.

ಆದರೆ ಸೋತ ವ್ಯಕ್ತಿಗಳು ತಪ್ಪುಗಳಿಂದಾಗುವ ಅಪಾಯಗಳನ್ನು ಸಹಿಸಲಾರರು. ಅಂಥವರು ತಪ್ಪುಗಳಾದಾಗ ನಾಚಿಕೊಳ್ಳುತ್ತಾರೆ ಮತ್ತು ಸಫಲರಾದಾಗ ಗರ್ವ ದಿಂದ ಬೀಗುತ್ತಾರೆ. ನೀವು ತಪ್ಪುಮಾಡಿದಾಗ ನಾಚಿಗೆ ಪಟ್ಟುಕೊಳ್ಳುತ್ತೀರಿ ಎಂದಾದರೆ ನಿಮ್ಮನೋ ದೋಷವಿದೆ ಎಂದರ್ಥ. ತಪ್ಪುಗಳಿಂದ ಕಲಿಕೆಯ ಪಾಠವನ್ನು ನೀವೇ ನೀವಾಗಿ ಪಡೆಯುತ್ತೀರಿ ಎಂದಾದರೆ ನಿಮ್ಮಲ್ಲಿ ಸಹಜಜ್ಞಾನ ಒಡಮೂಡುತ್ತದೆ. ಅಸಫಲತೆಯ ಸಾಧ್ಯತೆಯನ್ನು ನೀವು ಮುಂದಾಗಿ ಊಹಿಸಲು ಶಕ್ತರಾಗು ತ್ತೀರಿ.

ಅಂದರೆ ನೀವು ಭವಿಷ್ಯವಾಣಿ ನುಡಿಯಬಲ್ಲವರಾಗುತ್ತೀರಿ ಎಂದಲ್ಲ, ನಿಮ್ಮ ಭವಿಷ್ಯ ಹೇಗಿರಬೇಕು ಎಂಬುದನ್ನು ರೂಪಿಸುವ ರೂವಾರಿಗಳಾಗುತ್ತೀರಿ. ನೀವು ಯಶಸ್ವಿಯಾಗಿಲ್ಲ ಎಂದರೆ ನೀವು ಹೊಸತೇನನ್ನೂ ಮಾಡುತ್ತಿಲ್ಲ ಎಂದರ್ಥ. ಏಕೆಂದರೆ ಇನ್ನೊಬ್ಬರು ಸಿದ್ಧಪಡಿಸಿದ ದಾರಿಯಲ್ಲಿ ಸಾಗುವುದು ತುಂಬಾ ಸುಲಭ. ಆದರೆ ಸ್ವತಃ ನೀವೇ ಹೊಸ ರಸ್ತೆಯೊಂದನ್ನು ನಿರ್ಮಿಸಿ, ನಿಮ್ಮಂತಹ ಇನ್ನೂ ಅನೇಕರಿಗೆ ದಾರಿ ತೋರಿಸುವುದಿದೆಯಲ್ಲ, ಅದು ಕಠಿಣ ಕೆಲಸ.

ಯಾವುದಾದರೊಂದು ಕೆಲಸ ನಿಮ್ಮನ್ನು ಪದೇ ಪದೆ ತೊಂದರೆಗೆ ಈಡು ಮಾಡುತ್ತಿದೆಯಾದರೆ, ಅದರಲ್ಲಿ ನಿಮಗೆ ಫೋಕಸ್ ದಕ್ಕುತ್ತಿಲ್ಲವೆಂದಾದರೆ, ಆ ವಿಚಾರ ವನ್ನು ಸಮಗ್ರವಾಗಿ ಪರಾಮರ್ಶಿಸಿ. ನಿಮಗೆ ಕೆಲಸ ಮಾಡುವಾಗ ಹತ್ತು ನಿಮಿಷವೂ ಮನಸ್ಸನ್ನು ಏಕಾಗ್ರತೆಯಲ್ಲಿಟ್ಟುಕೊಳ್ಳಲು ಆಗುತ್ತಿಲ್ಲ ಮತ್ತು ಅದು ನಿಮ್ಮನ್ನು ಬೇರೆ ಸಂಗತಿಗಳತ್ತ ಒಯ್ಯುತ್ತದೆ ಎಂದಾದರೆ ನೀವು ಆ ಕೆಲಸದ ಸಮಗ್ರ ಸಂಗತಿಗಳನ್ನು ನಿಮ್ಮ ಮನಸ್ಸಿನ ವ್ಯಾಖ್ಯಾನಿಸಿಕೊಂಡು, ಏಕೆ, ಹೇಗೆ, ಏನು ಮಾಡಬೇಕು ಎಂದು ಪ್ರಶ್ನೆ ಹಾಕಿಕೊಂಡು ಮತ್ತೆ ಅದರಲ್ಲಿ ಮಗ್ನರಾಗಿ. ನೀವು ಯಶಸ್ಸನ್ನು ಪಡೆದೇ ಪಡೆಯುತ್ತೀರಿ.

ಮಾನಸಿಕ ಶಕ್ತಿಯ ಅಗಾಧತೆ
ನಿನಗೆ ಕ್ಯಾನ್ಸರ್ ಕಾಯಿಲೆ ಇದೆ, ನೀನಿನ್ನು ಕೆಲ ತಿಂಗಳು ಮಾತ್ರ ಬದುಕುಳಿಯುತ್ತೀಯಾ ಎಂಬುದಾಗಿ ಡೋರಿಸ್ ಡೆಬೋ ಎಂಬ ಒಂಭತ್ತನೇ ತರಗತಿಯ ಗಣಿತ ಶಿಕ್ಷಕಿಗೆ ವೈದ್ಯರು ಹೇಳಿದ್ದರು. ಈ ಮಾತು ಕೇಳಿ ಆಕೆ ಒಮ್ಮೆ ಸ್ಥಂಭೀಭೂತಳಾದಳು. ಆದರೆ ಆ ಕ್ಷಣದಲ್ಲಿ ತಾನು ಸಾಯಬಾರದು ಎಂಬ ದೃಢ ನಿರ್ಧಾರಕ್ಕೆ
ಬಂದುಬಿಟ್ಟಳು. ವೈದ್ಯರ ಕಣ್ಣಲ್ಲಿ ಕಣ್ಣಿಟ್ಟು ಆತ್ಮವಿಶ್ವಾಸದಿಂದ ಮಾತನಾಡುತ್ತಾ, ‘ನಾನು ಅಷ್ಟು ಬೇಗ ಸಾಯುವುದಿಲ್ಲ, ಇನ್ನೂ ಇಪ್ಪತ್ತೈದು ವರ್ಷ ಬದುಕ್ತೀನಿ, ಯಾಕೆಂದರೆ ನಾನಿನ್ನೂ ಸಾವಿರಾರು ಮಕ್ಕಳಿಗೆ ಪಾಠ ಮಾಡಬೇಕು. ಅವರಿಗೆ ಗಣಿತವನ್ನು ಚೆನ್ನಾಗಿ ಹೇಳಿಕೊಡಬೇಕು. ಗಣಿತದಲ್ಲಿರುವ ಭಯವನ್ನು ನಿವಾರಿಸಬೇಕು. ಆ ವಿಷಯದಲ್ಲಿ ಹೆಚ್ಚು ಅಂಕ ಗಳಿಸುವ ಹಿಕ್ಮತ್ತನ್ನು ತಿಳಿಸಿಕೊಡಬೇಕು’ ಎಂದೆಲ್ಲ ಆಕೆ ಹೇಳಿಕೊಂಡಳು.

ಆಕೆ ಕ್ಯಾನ್ಸರ್‌ನಂತಹ ಮಹಾಮಾರಿಯನ್ನು ನಾಲ್ಕುಬಾರಿ ಮಣಿಸಿ ಗೆದ್ದಳು, ದೀರ್ಘಕಾಲ ಬದುಕಿದಳು, ಅಚ್ಚರಿಯೆನಿಸಬಹುದು, ಕೊನೆಗೂ ಆಕೆ ಸತ್ತಿದ್ದು ಕ್ಯಾನ್ಸರ್‌ ನಿಂದಲ್ಲ. ನಿಮ್ಮೊಳಗಿರುವ ಏಕಾಗ್ರತೆ ಮತ್ತು ದೃಢಶಕ್ತಿ ನೀವೇನಾಗಬೇಕು ಎಂಬುದನ್ನು ನಿರ್ಧರಿಸುತ್ತದೆ. ನಿಮ್ಮ ಮಾನಸಿಕ ಶಕ್ತಿಯಿಂದಲೇ ನಿಮ್ಮೊಳಗಿರುವ ಕಾಯಿಲೆ, ನ್ಯೂನತೆಯನ್ನು ಹೊಡೆದೋಡಿಸಲು ಸಾಧ್ಯ. ನಿಮಗೆ ಎದುರಾದ ವಿಪತ್ತು ಮತ್ತು ಅದು ತಂದೊಡ್ಡುವ ಸವಾಲುಗಳಿಗೆ ನೀವು ಹೈರಾಣಾದರೆ ಅದರ ಪ್ರಭಾವ ನಿಮ್ಮನ್ನು ಸಹಜವಾಗಿ ಇರಗೊಡುವುದಿಲ್ಲ.

ನೀವೇನಾಗಬೇಕು ಎಂಬ ಕನಸಿಗೆ ನೀವು ಕಾವು ತುಂಬಿದಾಗ ವಿಪತ್ತು ಎಷ್ಟೇ ದೊಡ್ಡದಿದ್ದರೂ ನೀವು ಸಫಲರಾಗುತ್ತೀರಿ. ನಾವೆಲ್ಲರೂ ಸದಾ ಒಂದಿಂದು ಸಮಸ್ಯೆ ಗಳ ಸುಳಿಯಲ್ಲಿ ಸಿಕ್ಕು ಚಿಂತಿತರಾಗಿರುತ್ತೇವೆ. ಆದರೆ ಅವೆಲ್ಲವುಗಳಿಂದ ಪಾರಾಗುವ ಕ್ಷಮತೆಯನ್ನು ಮೈಗೂಡಿಸಿಕೊಂಡು, ಆಗಬೇಕಾಗಿರುವ ಕೆಲಸಕ್ಕೆ
ಮನಸ್ಸಿನ ರಣನೀತಿಯನ್ನು ರೂಪಿಸಿಕೊಂಡಾಗ ಮಹತ್ವ ಪೂರ್ಣವಾದದ್ದು ಘಟಿಸುತ್ತದೆ.

ಹೀಗಾಗಿ ನೀವು ನಿಮ್ಮನ್ನೇ ಆಗಾಗ ಪ್ರಶ್ನಿಸಬೇಕು. ನಿಮ್ಮ ಭವಿಷ್ಯದ ಕುರಿತಾದ ಬೃಹತ್ ಚಿತ್ರಣದ ನೀಲನಕಾಶೆ ಮನದಲ್ಲಿ ರೂಪುಗೊಳ್ಳಬೇಕು. ಈಗ ಎದುರಾ ಗಿರುವ ವಿಪತ್ತು ಇನ್ನೊಮ್ಮೆ ಆಗದಂತೆ ಮಾಡಲು ನಾನೇನು ಮಾಡಬೇಕು ಎಂಬುದನ್ನೂ ಚಿಂತನೆಗೆ ಒಡ್ಡಬೇಕು. ನಿಮ್ಮನ್ನು ಅಥವಾ ನಿಮ್ಮ ಸಂಸ್ಥೆಯನ್ನು
ಮುಂಬರುವ ಕೆಲತಿಂಗಳುಗಳಲ್ಲಿ ಯಾವ ಎತ್ತರಕ್ಕೆ ಒಯ್ಯ ಬೇಕೆಂದು ಯೋಚಿಸಿದ್ದೀರೋ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತ ಹೋಗಬೇಕು. ಈಗ ಎದುರಾಗಿರುವ ವಿಪತ್ತು ನನಗೊಂದು ಪಾಠ, ಅದೊಂದು ಅನುಭವ, ಅದರಿಂದ ನಾನೇನು ಕಲಿಯಲು ಸಾಧ್ಯ ಎಂಬುದನ್ನು ಪರಾಮರ್ಶೆ ಮಾಡಿ ಮುನ್ನುಗ್ಗ ಬೇಕು.

ನಮ್ಮನ್ನು ಬಾಧಿಸುವ ಅನೇಕ ಸಂಗತಿಗಳಿಗೆ, ನಮ್ಮ ಮನಸ್ಸಿನಲ್ಲಿಯೇ ಉತ್ತರವಿದೆ. ನಾನು ಯಾವ ಕಾರಣದಲ್ಲೂ ಸೋಲುವುದಿಲ್ಲ, ಯಾವ ಶಕ್ತಿಯೂ ನನ್ನನ್ನು ಮಣಿಸುವುದಿಲ್ಲ ಎಂದು ನೀವು ನಿರ್ಧರಿಸಿದ್ದೇ ಆದಲ್ಲಿ, ನಿಮಗೆ ಏನೂ ಆಗುವುದಿಲ್ಲ. ಇದು ವೈದ್ಯಕೀಯವಾಗಿಯೂ ರುಜುವಾತಾಗಿದೆ. ನಮ್ಮ ಬಹುತೇಕ ಸಮಸ್ಯೆ ಗಳಿಗೆ ನಮ್ಮ ಮನಸ್ಸೇ ಕಾರಣ. ಈ ಕೆಲಸ ನನ್ನಿಂದ ಆಗದು ಎಂದು ನೀವು ಮೊದಲೇ ತೀರ್ಮಾನಿಸಿ ಬಿಟ್ಟರೆ ನಿಮ್ಮಿಂದ ಆ ಕೆಲಸ ಆಗುವುದಿಲ್ಲ. ಅನೇಕ ಸಂದರ್ಭದಲ್ಲಿ ನಾವು ನಮ್ಮ ಮನಸ್ಸಿನ ಜತೆ ಅನುಸಂಧಾನ ಮಾಡಿಕೊಳ್ಳಬೇಕಾಗುತ್ತದೆ.

ಮನಸ್ಸನ್ನು ಹದಳಿಸಿ, ಸಿದ್ಧಗೊಳಿಸಿಕೊಳ್ಳಬೇಕಾಗುತ್ತದೆ. ಮನಸ್ಸಿಗೆ ಅಗಾಧ ಶಕ್ತಿಯಿದೆ. ಈ ಮಾತನ್ನು ಖ್ಯಾತ ಲೇಖಕ ವಿಲಿ ಜಾಲಿ ಕೂಡ ಹೇಳಿದ್ದಾನೆ. ಒಮ್ಮೆ ಮನಸ್ಸು ನಿರ್ಧರಿಸಿದರೆ, ಎಂಥ ಸವಾಲುಗಳನ್ನು ಎದುರಿಸಲೂ ಅದು ನಮ್ಮನ್ನು ಅಣಿಗೊಳಿಸುತ್ತದೆ. ಘೋರ ವಿಪತ್ತು ಎದುರಾದಾಗ, ನನಗೆ ಏನೂ ಆಗಿಲ್ಲ ಎಂದು ನೀವು ನಿಮ್ಮ ಮನಸ್ಸನ್ನು ನಂಬಿಸಿದರೆ, ಯಾವ ಸಮಸ್ಯೆಯನ್ನಾದರೂ ಎದುರಿಸಬಹುದು.

ಪುಸ್ತಕದಂಗಡಿ ಮುಂದಿನ ಫಲಕ
ಇತ್ತೀಚೆಗೆ ಯಾರೋ ಪುಸ್ತಕದ ಅಂಗಡಿಯ ಮುಂದೆ ಇಟ್ಟ ಫಲಕವೊಂದರ ಫೋಟೋ ತೆಗೆದು ಒಂದು ಟ್ವೀಟ್ ಮಾಡಿದ್ದರು. ಆ ಫಲಕದಲ್ಲಿ ಬರೆದಿತ್ತು – ಕರೋನಾ ಕಾರಣದಿಂದ ನಾವು ನಮ್ಮ ಪುಸ್ತಕದ ಅಂಗಡಿಯಲ್ಲಿಟ್ಟ ಪುಸ್ತಕಗಳ ವರ್ಗೀಕರಣದಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಿದ್ದೇವೆ. ಟ್ರಾವೆಲ್ ಪುಸ್ತಕಗಳನ್ನು ಫ್ಯಾಂಟಸಿ ವಿಭಾಗದಲ್ಲೂ, ಸೈನ್ಸ್ ಫಿಕ್ಷನ್ ಪುಸ್ತಕಗಳನ್ನು ಕರೆಂಟ್ ಅಫೇರ್ಸ್ (ಪ್ರಚಲಿತ ವಿದ್ಯಮಾನ) ವಿಭಾಗದಲ್ಲೂ, ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸ್ವಸಹಾಯ (ಸೆಲ್ಫ್-ಹೆಲ್ಪ್) ವಿಭಾಗದಲ್ಲೂ ಇಡಲಾಗಿದೆ. ಗ್ರಾಹಕರು ಸಹಕರಿಸಬೇಕಾಗಿ ವಿನಂತಿ.