Thursday, 12th December 2024

ಕೋವಿಡ್ ಸುತ್ತಮುತ್ತ ಮತ್ತಷ್ಟು…

ವೈದ್ಯವೈವಿಧ್ಯ

ಡಾ.ಎಚ್.ಎಸ್.ಮೋಹನ್‌

drhsmohan@gmail.com

ಈ ಕೋವಿಡ್ ಕಾಯಿಲೆ ದಿನ ಕಳೆದಂತೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ಹಾಗೆಯೇ ವಿಜ್ಞಾನಿಗಳಿಗೆ ಮತ್ತು ಸಂಶೋಧಕ ರಿಗೆ ಹೊಸ ಹೊಸ ಸವಾಲುಗಳನ್ನು ಒಡ್ಡುತ್ತಿದೆ. ಇತ್ತೀಚೆಗೆ ಯುರೋಪಿನ ಎಂಡೋಕ್ರೈನಾಲಜಿ ಸೊಸೈಟಿಯ ತಜ್ಞ ವೈದ್ಯರುಗಳು ಕೋವಿಡ್ ಬಗೆಗೆ ನವೀಕೃತ ಗೈಡ್‌ಲೈನ್ ಗಳನ್ನು ಬಿಡುಗಡೆ ಮಾಡಿದರು.

ಅವರು ಇಲ್ಲಿಯವರೆಗಿನ ರೋಗಿಗಳ ಡೇಟಾಗಳನ್ನು ಪರಿಶೀಲಿಸಿ ಕೋವಿಡ್ ಕಾಯಿಲೆ, ಹಾರ್ಮೋನುಗಳು ಮತ್ತು ಮೆಟಬಾಲಿಸಂ ಬಗೆಗೆ ತಮ್ಮ ಶಿಫಾರಸ್ಸುಗಳನ್ನು ನವೀಕರಿಸಿದರು. ಹಾಗೆಯೇ ಅವರು ಡಯಾಬಿಟಿಸ್, ಸ್ಥೂಲಕಾಯ, ವಿಟಮಿನ್ ಡಿ ಮಟ್ಟ
ತುಂಬಾ ಕಡಿಮೆ ಇರುವವರು, ಪಿಟ್ಯೂಟರಿ, ಅಡ್ರೀನಲ್ ಮತ್ತು ಥೈರಾಯಿಡ್ ಕಾಯಿಲೆ ಇರುವವರಲ್ಲಿ ಕೋವಿಡ್ ಕಾಯಿಲೆಯ ಹೆಚ್ಚಿನ ರಿಸ್ಕ್ ಇದೆಯೇ ಎಂದು ಪರಿಶೀಲಿಸಿದರು.

ಹಾಗೆಯೇ ತೀವ್ರ ಪ್ರಮಾಣದ ಕೋವಿಡ್ ಕಾಯಿಲೆಗೆ ಮಹಿಳೆಯರಿಗಿಂತ ಪುರುಷರು ಹೆಚ್ಚು ಒಳಗಾಗುತ್ತಿದ್ದಾರೆ ಏಕೆ? ಇದಕ್ಕೆ ಕಾರಣ ಏನು? ಪುರುಷರ ಲೈಂಗಿಕ ಹಾರ್ಮೋನುಗಳನ್ನು ಬ್ಲಾಕ್ ಮಾಡುವ ಔಷಧಗಳು ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ? ಹಾಗೆಯೇ ಕೊನೆಯಲ್ಲಿ ಅವರು ಹಾರ್ಮೋನುಗಳಿಗೆ ಸಂಬಂಧಪಟ್ಟ ಕಾಯಿಲೆ ಹೊಂದಿರುವ ವ್ಯಕ್ತಿಗಳು ಸಹಿತ ಸುರಕ್ಷಿತವಾಗಿ ಕೋವಿಡ್ ಲಸಿಕೆ ತೆಗೆದುಕೊಳ್ಳಬಹುದು ಎಂದು ಶಿಫಾರಸ್ಸು ಮಾಡುತ್ತಾರೆ.

ಈ ಬಗೆಗೆ ಹಿಂತಿರುಗಿ ನೋಡಿದಾಗ ಕೋವಿಡ್‌ನ ಆರಂಭದ ದಿನಗಳಲ್ಲಿ ಅಂದರೆ ಕಳೆದ ವರ್ಷ ತೀವ್ರ ಹಂತದ ಕಾಯಿಲೆ ಮತ್ತು ಮರಣ ಬರುವುದು – ಇದು ಮಹಿಳೆಯರಿಗಿಂತ ಪುರುಷರಲ್ಲಿ ಜಾಸ್ತಿ ಎಂದು ಗೊತ್ತಾಯಿತು. ಮುಖ್ಯವಾದ ಕಾರಣ ಎಂದರೆ
ಧೂಮಪಾನ, ಹಾಗೆಯೇ ಮಾಸ್ಕ್ ಧರಿಸಲು ಹಿಂಜರಿತ ಎನ್ನಲಾಗಿತ್ತು. ಆದರೆ ಕೆಲವು ವಿಜ್ಞಾನಿಗಳು ಮಾತ್ರ ಇಷ್ಟೇ ಅಲ್ಲ ಹೆಚ್ಚಿನ ಜೈವಿಕ ಕಾರಣ ಇರಬೇಕು ಎಂದು ಊಹಿಸಿದ್ದರು, ಭಾವಿಸಿದ್ದರು.

ಕೋವಿಡ್ ಕಾಯಿಲೆ ತರುವ ಕರೋನಾ ವೈರಸ್ ಸಾರ್ಸ್ ಸಿಒವಿ 2 ಎಸಿಇ 2 ಮತ್ತು ಟಿಎಂಪಿಆರ್‌ಎಸ್‌ಎಸ್ 2 – ಈ ಎರಡು ಮೆಂಬ್ರೇನ್‌ಗಳನ್ನು ಹಾಯ್ದು ಮನುಷ್ಯನ ಒಳ ಪ್ರವೇಶಿಸುತ್ತದೆ. ಸಂಶೋಧನೆಯ ಪ್ರಕಾರ ಪುರುಷರ ಲೈಂಗಿಕ ಹಾರ್ಮೋನುಗಳು ಶ್ವಾಸಕೋಶಗಳ ಜೀವಕೋಶಗಳಲ್ಲಿ ಮೇಲಿನ 2 ರಿಸೆಪ್ಟಾರ್‌ಗಳ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಪರಿಣಾಮ ಎಂದರೆ ವೈರಸ್‌ ಗಳು ಶ್ವಾಸಕೋಶಕ್ಕೆ ಹೆಚ್ಚಿನ ಸೋಂಕು ಉಂಟು ಮಾಡುತ್ತವೆ.

ಇನ್ನೊಂದು ಪುರಾವೆ ಎಂದರೆ ಡೈ ಹೈಡ್ರೋ ಟೆಸ್ಟೋಸ್ಟಿರೋನ್ ರಕ್ತದಲ್ಲಿ ಜಾಸ್ತಿ ಇರುವ ಪುರುಷರಲ್ಲಿ ಬೋಳು ತಲೆಯು ಹೆಚ್ಚು
ಕಾಣಿಸಿಕೊಳ್ಳುತ್ತವೆ. ಇಂತಹವರಲ್ಲಿ ತುಂಬಾ ತೀವ್ರ ರೀತಿಯ ಕೋವಿಡ್ ಕಾಯಿಲೆ ಕಾಣಿಸಿಕೊಂಡಿರುವ ಬಗ್ಗೆ ಎಲ್ಲಾ ವೈದ್ಯ
ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಇದರ ಇನ್ನೊಂದು ಮುಖ ಎಂದರೆ ಬೋಳು ತಲೆ ಮತ್ತು ಪ್ರಾಸ್ಟೇಟ್ ಕಾಯಿಲೆಗಳನ್ನು ಚಿಕಿತ್ಸೆ ಮಾಡುವ ಔಷಧಗಳು ಕೋವಿಡ್ ಕಾಯಿಲೆಯ ಚಿಕಿತ್ಸೆಗೆ ಉಪಯೋಗಿಸಬಹುದಾ ಎಂಬ ಬಗ್ಗೆ ಈಗ ಸಂಶೋಧನೆ ನಡೆಯುತ್ತಿದೆ.

ಮೊದಲು ತಿಳಿಸಿದಂತೆ ಯುರೋಪಿನ ಎಂಡೋಕ್ರೈನಾಲಜಿ ತಜ್ಞ ವೈದ್ಯರುಗಳು ಅದರಲ್ಲಿಯೂ ಮುಖ್ಯವಾಗಿ ಸ್ಪೇನ್, ಟರ್ಕಿ ಮತ್ತು ಇಟಲಿಯ ತಜ್ಞರು ಈ ಹಾರ್ಮೋನುಗಳು ಕೋವಿಡ್ ಕಾಯಿಲೆಯ ಸಂಬಂಧದ ಬಗ್ಗೆ ಇತ್ತೀಚೆಗೆ ಹೊಸ ಅಭಿಪ್ರಾಯ ಗಳನ್ನು ವ್ಯಕ್ತಪಡಿಸಿದರು. ಅವರ ಪ್ರಕಾರ ವಯಸ್ಸಾದ ಪುರುಷರಲ್ಲಿ ಹೈಪೋಗೋನಾಡಿಸಂ ಕಾಯಿಲೆಗೆ ಟೆಸ್ಟೋಸ್ಟಿರೋನ್
ಹಾರ್ಮೋನು ಸಲಹೆ ಮಾಡುವಾಗ ತುಂಬಾ ಹುಷಾರಾಗಿರಬೇಕು ಎಂದು ಎಚ್ಚರಿಸುತ್ತಾರೆ.

ಹಾಗೆಯೇ ಅವರು ವಿಟಮಿನ್ ಡಿ ಕಡಿಮೆ ಇರುವವರಲ್ಲಿ,ಡಯಾಬಿಟಿಸ್, ಸ್ಥೂಲಕಾಯ, ಅಡ್ರೀನಲ್ ಗ್ರಂಥಿಯ ಸಮಸ್ಯೆ, ಪಿಟ್ಯೂಟರಿ ಮತ್ತು ಥೈರಾಯಿಡ್ ಗ್ರಂಥಿಯಸಮಸ್ಯೆ ಇರುವವರಲ್ಲಿ ಇತ್ತೀಚಿನ ವಿವರಣೆ ಹೊರಗೆಡವಿದರು.

ವಿಟಮಿನ್ ಡಿ ಕಡಿಮೆ ಮಟ್ಟ : ಸ್ಪೇನ್‌ನ ಬಾರ್ಸಿಲೋನಾ ವಿಶ್ವವಿದ್ಯಾಲಯದ ಡಾ.ಮ್ಯಾನುಯಲ್ ಪೂಯಿಂಗ್ ಅವರು ವಿಟಮಿನ್ ಡಿ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ವಿಟಮಿನ್ ಡಿ ಕಡಿಮೆಯಾಗಿರುವುದು ತುಂಬಾ ಜನರಲ್ಲಿ ಕಂಡು ಬರುತ್ತದೆ. ಆಸ್ಪತ್ರೆಗಳಲ್ಲಿ ಕೋವಿಡ್ ರೋಗ ಬಂದು ದಾಖಲಾದ ರೋಗಿಗಳಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ಮತ್ತು ಅಂತಹವರಲ್ಲಿ ಒಮ್ಮೆಲೇ ಕಾಯಿಲೆ ತೀವ್ರ ಪ್ರಮಾಣವನ್ನು ತಲುಪಿಬಿಡುತ್ತದೆ.

ವಿಟಮಿನ್ ಡಿ ಎನ್ನುವುದು ವಿಟಮಿನ್ ಅಲ್ಲ. ಅದು ಹಾರ್ಮೋನಿನ ಪೂರ್ವ ಹಂತದ ವಸ್ತು (Precursor). ಕೆಲವೊಮ್ಮೆ ತೀವ್ರ ರೀತಿಯ ಕಾಯಿಲೆಗೆ ಒಳಗಾದ ಕೋವಿಡ್ ರೋಗಿಗಳು ನಾವು ನೋಡುತ್ತಿರುವಂತೆಯೇ ಇನ್ನೂ ತೀವ್ರ ಮಟ್ಟಕ್ಕೆ ತಿರುಗಿ ಅಂತಹ ವರಿಗೆ ಒಮ್ಮೆಲೇ ಮರಣ ಬಂದು ಬಿಡುತ್ತದೆ. ಹಾಗಾಗಿ ವಯಸ್ಸಾದ ರೋಗಿಗಳು ಅದರಲ್ಲಿಯೂ ಡಯಾಬಿಟಿಸ್ ಮತ್ತು ಸ್ಥೂಲ ಕಾಯ ಹೊಂದಿದವರಲ್ಲಿ ಸರಿಯಾದ ಪ್ರಮಾಣದ ವಿಟಮಿನ್ ಡಿ ಹೊಂದಿರುವಂತೆ ವೈದ್ಯರು ನೋಡಿಕೊಳ್ಳಬೇಕು ಎಂದು
ಅಭಿಪ್ರಾಯ ಪಡುತ್ತಾರೆ.

ಡಯಾಬಿಟಿಸ್ ರೋಗಿಗಳಲ್ಲಿ : ಮೇಲಿನ ಸಮೀಕ್ಷೆ ಕೈಗೊಂಡ ಎಂಡೋಕ್ರೈನ್ ತಜ್ಞ ವೈದ್ಯರುಗಳು ಡಯಾಬಿಟಿಸ್ ಬಗ್ಗೆ ಇದು ವರೆಗೆ ಪ್ರಕಟವಾದ ಅಧ್ಯಯನಗಳನ್ನು ಉದ್ಧರಿಸುತ್ತಾ ಡಯಾಬಿಟಿಸ್ ರೋಗಿಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು
ಸರಿಯಾಗಿ ನಿಯಂತ್ರಣ ಮಾಡದಿದ್ದರೆ ಹಾಗೂ ಸ್ಥೂಲಕಾಯದವರಾಗಿದ್ದರೆ ಅಂತಹವರಲ್ಲಿ ಕೋವಿಡ್ ಕಾಯಿಲೆ ಕಂಡು ಬಂದರೆ ಒಮ್ಮೆಲೇ ತೀವ್ರ ಪ್ರಮಾಣದ ಕಾಯಿಲೆಗೂ ತಿರುಗಬಹುದು, ಹಾಗೆಯೇ ಅಂಥವರಲ್ಲಿ ಹೆಚ್ಚಿನವರು ಮರಣವನ್ನೂ ಅಪ್ಪಬಹುದು ಎಂದು ಅಭಿಪ್ರಾಯ ಪಡುತ್ತಾರೆ. ಹಾಗಾಗಿ ಇಂತಹವರು ಕಠಿಣವಾದ ರೋಗ ಪರೀಕ್ಷೆ, ರಕ್ತ ಪರೀಕ್ಷೆ ಹಾಗೂ ಕೋವಿಡ್ ಕಾಯಿಲೆ ಬಂದ ಬಗ್ಗೆ ಸಂಶಯ ಇದ್ದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು.

ಸರಿಯಾದ ವೈದ್ಯಕೀಯ ಸಿಬ್ಬಂದಿಯ ಮೇಲೆ ನಿಗಾದಲ್ಲಿರಬೇಕು ಎಂದು ಅಭಿಪ್ರಾಯಪಡುತ್ತಾರೆ. ಹಾಗೆಯೇ ಡಯಾಬಿಟಿಸ್ ರೋಗಿಗಳು ಔಷಧಗಳನ್ನು ಸರಿಯಾದ ಪ್ರಮಾಣದಲ್ಲಿ ನಿಯಮಿತವಾಗಿ ತೆಗೆದುಕೊಳ್ಳಬೇಕು. ಹಾಗೆಯೇ ಕೊಲೆಸ್ಟ್ರಾಲ್ ಮಟ್ಟ
ತೀವ್ರವಿದ್ದು ಅದಕ್ಕೆ ಔಷಧ ತೆಗೆದುಕೊಳ್ಳುತ್ತಿರುವವರು ಕೋವಿಡ್ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರೆ ಆ ಮೊದಲಿನ ಔಷಧಗಳನ್ನು ನಿಯಮಿತವಾಗಿ ಸರಿಯಾಗಿ ತೆಗೆದುಕೊಂಡರೆ ಕೋವಿಡ್ ಕಾಯಿಲೆ ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಮರಣ ಬರುವ ಸಾಧ್ಯತೆಯೂ ತೀರಾ ಕಡಿಮೆ ಎಂದು ಅಭಿಪ್ರಾಯ ಪಡುತ್ತಾರೆ.

ಇನ್ಸುಲಿನ್ ಉತ್ಪಾದಿಸುವ ಪ್ಯಾಂಕ್ರಿಯಾಸ್‌ನ ಬೀಟಾ ಸೆಲ್‌ಗಳು ಈ ಕರೋನಾ ವೈರಸ್‌ಗಳಿಂದ ತೀವ್ರವಾಗಿ ಹಾನಿಗೆ ಒಳಗಾಗು ತ್ತವೆ. ಏಕೆಂದರೆ ಅವುಗಳಲ್ಲಿ ಎಸಿಎ 2 ರೆಸೆಪ್ಟಾರ್ ಗಳು ಜಾಸ್ತಿ ಇರುತ್ತವೆ. ಹಾಗಾಗಿ ಈಗಿನ ಕೋವಿಡ್ ಕಾಯಿಲೆಯಲ್ಲಿ ಮೊದಲು ಡಯಾಬಿಟಿಸ್ ಹೊಂದಿಲ್ಲದ ರೋಗಿಗಳಲ್ಲಿ ಸಹಿತ ಸಕ್ಕರೆಯ ಪ್ರಮಾಣವು ತೀವ್ರ ಮಟ್ಟಕ್ಕೆ ತಿರುಗುತ್ತದೆ. ಹಾಗಾಗಿ ಈ ಕೋವಿಡ್ ಮತ್ತು ಡಯಾಬಿಟಿಸ್ ಕಾಯಿಲೆ ಇವುಗಳ ಮಧ್ಯೆ ಎರಡು ರೀತಿಯ ಸಂಬಂಧಗಳು ಹುಟ್ಟಿಕೊಂಡಿವೆ.

ಹಾಗಾಗಿ ಈ ಸಾಂಕ್ರಾಮಿಕ ತೊಡಗಿದ ಮೇಲೆ ಈಗಾಗಲೇ ಡಯಾಬಿಟಿಸ್ ಹೊಂದಿದ ರೋಗಿಗಳಲ್ಲಿ ಸಕ್ಕರೆಯ ಮಟ್ಟ ತೀವ್ರ ಪ್ರಮಾಣಕ್ಕೆ ಹೋಗುತ್ತದೆ. ಇದುವರೆಗೆ ಡಯಾಬಿಟಿಸ್ ಹೊಂದಿಲ್ಲದ ರೋಗಿಗಳು ಹೊಸದಾಗಿ ಡಯಾಬಿಟಿಸ್ ರೋಗಿಗಳಾಗಿ
ಪರಿವರ್ತಿತರಾಗುತ್ತಾರೆ. ಇದು ಭವಿಷ್ಯದಲ್ಲಿ ಹಲವಾರು ಸಮಸ್ಯೆಗಳನ್ನು ಹುಟ್ಟು ಹಾಕಬಹುದು ಎಂದು ಈ ತಜ್ಞ ವೈದ್ಯರುಗಳು ಅಭಿಪ್ರಾಯ ಪಡುತ್ತಾರೆ.

ಸ್ಥೂಲಕಾಯ ಎಂಬ ಮತ್ತೊಂದು ಪಿಡುಗು: ಡಯಾಬಿಟಿಸ್‌ನಂತೆಯೇ ಈ ಸ್ಥೂಲಕಾಯವೂ ಈ ಕೋವಿಡ್ ರೋಗಿಗಳಿಗೆ ದೊಡ್ಡ ತಲೆಬೇನೆಯಾಗಿದೆ. ಸಾಮಾನ್ಯವಾಗಿ ಎಲ್ಲರಲ್ಲಿಯೂ ತೂಕವನ್ನು ಸಮ ಸ್ಥಿತಿಯಲ್ಲಿಡುವುದು, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು ಹಾಗೂ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸಮಸ್ಥಿತಿಯಲ್ಲಿಡುವುದು ಆರೋಗ್ಯವಂತ ಎಲ್ಲರ ಲ್ಲಿಯೂ ಅವಶ್ಯಕತೆ ಇದೆ. ಅವರ ಹೃದಯ ಮತ್ತು ಮೆಟಬಾಲಿಕ್ ಆರೋಗ್ಯವನ್ನು ಸುಸ್ಥಿತಿ ಯಲ್ಲಿಡಲು ಅದರಲ್ಲಿಯೂ ಸ್ಥೂಲ ಕಾಯದವರಲ್ಲಿ ಇದು ಇನ್ನೂ ಹೆಚ್ಚಿನ ಅವಶ್ಯಕತೆ ಇದೆ.

ಇಲ್ಲದಿದ್ದರೆ ಇಂತಹವರು ಗಂಭೀರ ಆರೋಗ್ಯ ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಾರೆ. ಆದರೆ ಈ ಕೋವಿಡ್ ಕಾಯಿಲೆ ಮತ್ತೊಂದು ಆಯಾಮವನ್ನು ಉಂಟು ಮಾಡಿದೆ. ಈಗ ಹೆಚ್ಚಿನೆಡೆ ಲಾಕ್‌ಡೌನ್ ನಿಯಮಗಳಿರುವುದರಿಂದ ಇಂಥ ವ್ಯಕ್ತಿಗಳ ಆಹಾರದ ಪ್ರಮಾಣ, ದೈಹಿಕ ಪರಿಶ್ರಮದ ಮಟ್ಟ, ನಿದ್ರೆಯ ಪ್ರಮಾಣ – ಇವೆಲ್ಲವೂ ಏರುಪೇರಾಗಿ ಮತ್ತಷ್ಟು ತೂಕ ಜಾಸ್ತಿ ಮಾಡಿಕೊಳ್ಳಲು ಕಾರಣವಾಗುತ್ತದೆ.

ಹಾಗಾಗಿ ಸ್ಥೂಲಕಾಯದ ವ್ಯಕ್ತಿಗಳು ಹೆಚ್ಚಿನ ದೈಹಿಕ ಪರಿಶ್ರಮ, ವ್ಯಾಯಾಮ ಗಳಲ್ಲಿ ತೊಡಗಿಕೊಂಡಿರುವಂತೆ ನೋಡಿಕೊಳ್ಳ ಬೇಕು, ಆರೋಗ್ಯವಂತ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವತ್ತ ಪ್ರಯತ್ನಿಸಬೇಕು, ನಿದ್ರೆಯ ಪ್ರಮಾಣವನ್ನು ನಿರ್ದಿಷ್ಟ ಪಡಿಸಿಕೊಳ್ಳಬೇಕು – ಎಂದು ಮೇಲಿನ ತಜ್ಞರ ಅಭಿಮತ.

ಎಂಡೋಕ್ರೈನ್ ಗ್ರಂಥಿಗಳಿಗೆ ನೇರವಾದ ಹಾನಿ: ಈಗಾಗಲೇ ಮೊದಲು ತಿಳಿಸಿರುವಂತೆ ಕರೋನಾ ವೈರಸ್ ಪ್ಯಾಂಕ್ರಿಯಾಸ್ ಗ್ರಂಥಿಯನ್ನು ನಾಶಪಡಿಸುವು ದಲ್ಲದೇ ಅವು ಅಡ್ರೀನಲ್, ಪಿಟ್ಯೂಟರಿ ಮತ್ತು ಥೈರಾಯಿಡ್ ಗ್ರಂಥಿಗಳನ್ನು ಸಹಿತ ನಾಶ ಗೊಳಿಸುತ್ತವೆ ಎಂಬುದಕ್ಕೆ ಪುರಾವೆಗಳಿವೆ ಎಂಬುದು ತಜ್ಞರುಗಳ ಅಭಿಮತ.

ಹಾಗೆಯೇ ಅವರು ಸಮಸ್ಥಿತಿಯಲ್ಲಿರುವ ಡಯಾಬಿಟಿಸ್ ಮತ್ತು ಸ್ಥೂಲಕಾಯದ ರೋಗಿಗಳಲ್ಲಿ ಇತರ ಆರೋಗ್ಯವಂತ ವ್ಯಕ್ತಿ ಗಳಂತಯೇ ಕೋವಿಡ್ ಲಸಿಕೆಗಳು ಪ್ರಭಾವ ಹೊಂದಿವೆ. ಹಾಗಾಗಿ ಇಂತಹವರು ಇತರರಂತೆಯೇ ನಿಗದಿತ ಅವಧಿಗೆ ಸರಿಯಾಗಿ ಲಸಿಕೆಗಳನ್ನು ತೆಗೆದುಕೊಳ್ಳಬೇಕೆಂದು ಸಲಹೆ ನೀಡುತ್ತಾರೆ. ಕೋವಿಡ್ ಕಾಯಿಲೆ ಮತ್ತೊಂದು ಹೊಸ ಕಾಯಿಲೆಗೆ
ನಾಂದಿಯಾಗುವುದೇ? ಈಗ ಜಗತ್ತನ್ನು ತಲ್ಲಣಗೊಳಿಸುತ್ತಿರುವ ಕೋವಿಡ್ ಇತ್ತೀಚೆಗೆ ಭಾರತದಲ್ಲಿ ಎರಡನೇ ಅಲೆಯ ರೂಪದಲ್ಲಿ
ಜಾಸ್ತಿಯಾಗುತ್ತಿದ್ದರೂ ಜಗತ್ತಿನ ಹೆಚ್ಚಿನ ಭಾಗಗಳಲ್ಲಿ ಏಪ್ರಿಲ್ ನಂತರ ಕೋವಿಡ್ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದೆ
ಎನ್ನಲಾಗಿದೆ.

ಈಗ ವೈದ್ಯ ವಿಜ್ಞಾನಿಗಳು ಕೋವಿಡ್ ಕಾಯಿಲೆಗೆ ಒಳಗಾದ ವ್ಯಕ್ತಿಗಳಲ್ಲಿ ಕೋವಿಡ್ ನಂತರದ ಜೀವನದಲ್ಲಿ ಹೇಗೆ ಮುಂದು ವರಿಯುತ್ತಾರೆ ಎಂದು ಅಭ್ಯಸಿಸುತ್ತಿದ್ದಾರೆ. ಈ ಹೊಸ ರೀತಿಯ ಅಧ್ಯಯನವು ಇತ್ತೀಚೆಗೆ ಜಗತ್ತಿನ ಪ್ರತಿಷ್ಠಿತ ವೈದ್ಯಕೀಯ ಜರ್ನಲ್ ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಕೋವಿಡ್ ಕಾಯಿಲೆ ಕಾಣಿಸಿಕೊಂಡ ಹೆಚ್ಚಿನವರಲ್ಲಿ ಕಾಯಿಲೆಯ ಹೆಚ್ಚಿನ ಲಕ್ಷಣಗಳು ಕಂಡು ಬಂದಿರಲಿಲ್ಲ. ಆದರೆ ಇನ್ನುಳಿದ ಹಲವರಲ್ಲಿ ಸಾಮಾನ್ಯ ತೀವ್ರವಾಗಿ ಮತ್ತೆ ಕೆಲವರಲ್ಲಿ ಮತ್ತೂ ಇನ್ನೂ ತೀವ್ರವಾಗಿ ಕಾಣಿಸಿಕೊಂಡು ಕೆಲವು ದೇಶಗಳ ಆರೋಗ್ಯ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ.

ಕಾಯಿಲೆ ಗುಣವಾದವರಲ್ಲಿಯೂ ಬಹಳ ದಿನಗಳು, ತಿಂಗಳುಗಳ ವರೆಗೆ ಕಾಯಿಲೆಯ ಅಂಶಗಳು ಉಳಿದುಕೊಂಡು ವಿಸ್ತೃತ ಕೋವಿಡ್ ರೀತಿಯಲ್ಲಿ ಕಾಣಿಸಿಕೊಂಡಿವೆ.

ಅಧ್ಯಯನ: 2020ರ ಜನವರಿ 1 ಮತ್ತು ಅಕ್ಟೋಬರ್ 31ರಳಗೆ ಕರೋನಾ ಪಾಸಿಟಿವ್ ಆದ ವ್ಯಕ್ತಿಗಳಲ್ಲಿ ಅಧ್ಯಯನ ಕೈಗೊಳ್ಳ ಲಾಯಿತು. 2,66,586 ಜನರಲ್ಲಿ ಅಧ್ಯಯನಕಾರರು 193,113 ವ್ಯಕ್ತಿಗಳಲ್ಲಿ 21 ದಿನಗಳವರೆಗೆ ಅಧ್ಯಯನ ನಡೆಸಿದರು. ಈ ವ್ಯಕ್ತಿಗಳು 18-65 ವಯೋಮಾನದವರಾಗಿದ್ದು, ಅವರೆ ಅಮೆರಿಕದ ಆರೋಗ್ಯ ವ್ಯವಸ್ಥೆಗೆ ನೋಂದಣಿ ಮಾಡಿದ ವ್ಯಕ್ತಿಗಳಾಗಿ ದ್ದರು. ಈ ಅಧ್ಯಯನಕಾರರು ಅಧ್ಯಯನದಲ್ಲಿ ಪಾಲ್ಗೊಂಡ ವ್ಯಕ್ತಿಗಳ ನಂತರದ ದಿನಗಳಲ್ಲಿ ಏನಾಯಿತು ಎಂದು ಅವರ ವೈದ್ಯಕೀಯ ದಾಖಲೆಗಳನ್ನು ಅಭ್ಯಸಿಸಿದರು.

ಕೋವಿಡ್ ಕಾಯಿಲೆ ಆರಂಭವಾಗಿ 3 ವಾರಗಳ ನಂತರದ ಅವಧಿಯಿಂದ ಮುಂದಿನ 6 ತಿಂಗಳುಗಳಲ್ಲಿ ಯಾರಲ್ಲಿ ಹೊಸದಾದ ಕಾಯಿಲೆ ಕಾಣಿಸಿ ಕೊಂಡಿದೆಯೋ ಎಂಬುದನ್ನು ಪರಿಶೀಲಿಸಿದರು. ಇನ್ನೊಂದು ಗುಂಪಿನ ವ್ಯಕ್ತಿಗಳು ಎಂದರೆ ಅವರಲ್ಲಿ ಕೋವಿಡ್ ಕಾಯಿಲೆ ಬರದಿದ್ದ ವ್ಯಕ್ತಿಗಳು – ಈ ಎರಡೂ ಗುಂಪುಗಳನ್ನು ತುಲನೆಮಾಡಿ ನೋಡಿದಾಗ ಕೋವಿಡ್ ಕಾಯಿಲೆ ಬಂದು ವಾಸಿಯಾದ ಮೊದಲ ಗುಂಪಿನ ಶೇ.14 ವ್ಯಕ್ತಿಗಳಲ್ಲಿ ಯಾವುದಾದರೂ ಒಂದು ಹೊಸ ಕಾಯಿಲೆ ಕಾಣಿಸಿಕೊಂಡಿತ್ತು.

ಭೀರವಾದ, ಚಿಕಿತ್ಸೆ ಅಗತ್ಯವಿರುವ ಕಾಯಿಲೆಯೇ ಅದಾಗಿತ್ತು. ಈ ತರಹದ ಕಾಯಿಲೆಯು ದೇಹದ ಹೃದಯ – ರಕ್ತನಾಳಗಳು,
ನರಗಳು, ಕಿಡ್ನಿ, ಶ್ವಾಸಕೋಶ ಮತ್ತು ಉಸಿರಾಟದ ಅಂಗಗಳು ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟವು ಆಗಿದ್ದವು.
ಹೀಗೆ ಹೊಸ ಕಾಯಿಲೆ ಕಾಣಿಸಿಕೊಳ್ಳುವುದು ವಯಸ್ಸಾದ ಮತ್ತು ಈಗಾಗಲೇ ಗಂಭೀರ ಕಾಯಿಲೆ ಹೊಂದಿರುವ ರೋಗಿಗಳಿಗೆ ಮಾತ್ರ ಸೀಮಿತ ವಾಗಿರಲಿಲ್ಲ. ಆಶ್ಚರ್ಯ ಮತ್ತು ಭಯಾನಕ ಎಂದರೆ ಇಲ್ಲಿಯವರೆಗೆ ಯಾವ ಆರೋಗ್ಯ ಸಮಸ್ಯೆಯನ್ನು ಹೊಂದಿರದ ಚಿಕ್ಕ ವಯಸ್ಸಿನ ವ್ಯಕ್ತಿಗಳೂ ಈ ಕೋವಿಡ್ ನಂತರ ಒಂದು ಹೊಸದಾದ ಗಂಭೀರ ಕಾಯಿಲೆಗೆ ಒಳಗಾಗಿದ್ದರು.

ಹಾಗಾಗಿ ಈ ವಿಸ್ತೃತ ಕೋವಿಡ್ ತರಬಹುದಾದ ಈ ರೀತಿಯ ಸಮಸ್ಯೆ ಮತ್ತು ಹೊಸ ಕಾಯಿಲೆಯ ಬಗ್ಗೆ, ಕೋವಿಡ್ ಕಾಯಿಲೆ ಚಿಕಿತ್ಸೆ ಮಾಡುತ್ತಿರುವ ವೈದ್ಯರುಗಳು ತುಂಬಾ ಜಾಗರೂಕರಾಗಿರಬೇಕೆಂದು ಲಂಡನ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ ರೀಸರ್ಚ್‌ನ ವೈಜ್ಞಾನಿಕ ಸಲಹೆಗಾರ ಡಾ ಇಲೈನ್ ಮ್ಯಾಕ್ಸ್‌ವೆಲ್ ಅಭಿಪ್ರಾಯ ಪಡುತ್ತಾರೆ.

ಈ ಅಧ್ಯಯನದ ಮುಖ್ಯ ಫಲಶೃತಿ ಏನು? ಇದರ ಬಗ್ಗೆ ತಮ್ಮ ಅಭಿಪ್ರಾಯವನ್ನು ಕೊಡುತ್ತಾ ನ್ಯಾಶ್ ವೆಯ ವ್ಯಾಂಡರ್ ಬಿಲ್ಟ ಯುನಿವರ್ಸಿಟಿ ಮೆಡಿಕಲ್ ಸೆಂಟರ್‌ನ ಸೋಂಕು ವಿಭಾಗದ ವೈದ್ಯಕೀಯ ಪ್ರೊಫೆಸರ್ ಡಾ.ವಿಲಿಯಂ ಶಾಫನರ್ ಈ ಅಧ್ಯಯನವು ತುಂಬಾ ಮುಖ್ಯವಾದ ಅಂಶವನ್ನು ಹೊರಗೆಡವಿದೆ. ಶೇ.14ರಷ್ಟು ಜನರಲ್ಲಿ ಹೊಸ ಕಾಯಿಲೆ ಹುಟ್ಟಿಕೊಳ್ಳುತ್ತದೆ ಎಂಬುದು ತುಂಬಾ ಗಮನಾರ್ಹವಾದುದು. ಹಾಗೆಯೇ ಇದು ಯಾವುದೋ ಒಂದು ವ್ಯವಸ್ಥೆ ಅಥವಾ ಅಂಗಕ್ಕೆ ಸೀಮಿತವಾಗಿಲ್ಲದೆ ದೇಹದ ಎಲ್ಲಾ ಅಂಗಗಳನ್ನೂ ವ್ಯಾಪಿಸಿ ರೋಗ ಲಕ್ಷಣಗಳು ಹೊಸದಾಗಿ ಕಾಣಿಸಿಕೊಂಡವು ಎಂಬುದು ನಿಜವಾಗಿಯೂ ಗಾಬರಿ ಹುಟ್ಟಿಸು ವಂತಾದ್ದು. ನಾವೆ ಇದರ ಬಗ್ಗೆ ಭವಿಷ್ಯದ ದಿನಗಳಲ್ಲಿ ತೀವ್ರ ಗಮನ ಹರಿಸಬೇಕಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.