ಇದೇ ಅಂತರಂಗ ಸುದ್ದಿ
vbhat@me.com
ಇತ್ತೀಚೆಗೆ ನಾನು ಮಲೇಷಿಯಾದ ರಾಜಧಾನಿ ಕೌಲಾಲಾಂಪುರದ ‘ಫೋರ್ ಸೀಸನ್ಸ್’ ಹೋಟೆಲಿನ ಜನರಲ್ ಮ್ಯಾನೇಜರ್ ಜತೆ ಮಾತಾಡುತ್ತಿದ್ದೆ. ನಮ್ಮ ಮಾತುಕತೆ ಹೋಟೆಲಿನಲ್ಲಿ ಉಳಿದುಕೊಳ್ಳುವ ಗ್ರಾಹಕರ ಮನಸ್ಥಿತಿ ಮತ್ತು ಅವರ ವರ್ತನೆಯ ಬಗ್ಗೆ ಹೊರಳಿತು. ‘ಫೋರ್ ಸೀಸನ್ಸ್’ ಲಕ್ಸುರಿ ಹೋಟೆಲು ಗಳ ಪೈಕಿ ಪ್ರಮುಖವಾದುದು. ಸಾಮಾನ್ಯವಾಗಿ ಅಲ್ಲಿಗೆ ಲಾಟಪೂಟ ವ್ಯಕ್ತಿಗಳು ಬರುವುದಿಲ್ಲ.
ಸಮಾಜದಲ್ಲಿ ಗಣ್ಯವ್ಯಕ್ತಿಗಳೆಂದು ಕರೆಯಿಸಿಕೊಂಡವರು, ಶ್ರೀಮಂತರು, ಸಿಲೆಬ್ರಿಟಿಗಳು, ಸಿನಿಮಾ ನಟರು, ಉದ್ಯಮಿಗಳು ಆಗಮಿಸುತ್ತಾರೆ. ಅಲ್ಲಿಗೆ ಬರುವವರೆಲ್ಲ ವಿವಿಐಪಿಗಳೇ. ಯಾರನ್ನೂ ಸಾಮಾನ್ಯರು ಎಂದು ಪರಿಗಣಿಸುವಂತಿಲ್ಲ. ‘ನಮ್ಮ ಹೋಟೆಲಿಗೆ ಬರುವ ವ್ಯಕ್ತಿಯ ಪರಿಚಯ ಇಲ್ಲದೇ
ಹೋಗಬಹುದು. ಆದರೆ ನಮ್ಮಲ್ಲಿಗೆ ಬರುವವರೆಲ್ಲರೂ ಅತಿಗಣ್ಯ ವ್ಯಕ್ತಿಗಳೇ. ಯಾರನ್ನೂಲಘುವಾಗಿ ಪರಿಗಣಿಸುವಂತಿಲ್ಲ’ ಎಂಬುದು ಆ ಹೋಟೆಲಿನ ಗೆ ಮ್ಯಾನ್ಯುವಲ್‌ನಲ್ಲಿ ಬರೆದಿದೆ.
ಇಂಥ ಹೋಟೆಲಿಗೆ ಬರುವವರೆಲ್ಲರೂ ಅತಿಗಣ್ಯ ವ್ಯಕ್ತಿಗಳು ಎಂದ ಮೇಲೆ ಅವರ ವರ್ತನೆಯೂ ಉನ್ನತ ಸ್ಥರದಲ್ಲಿದ್ದಿರಬಹುದು ಎಂದು ಭಾವಿಸುವುದು ಸಹಜ. ಬಹುತೇಕ ಸಂದರ್ಭದಲ್ಲಿ ಅದು ನಿಜ ಕೂಡ. ಆದರೆ ಶ್ರೀಮಂತರು ಅಂದರೆ ಪರಿಪೂರ್ಣರು ಎಂದುಭಾವಿಸಬೇಕಿಲ್ಲ. ಅವರಲ್ಲಿಯೂ ಸಾಕಷ್ಟು
ಗುಣದೋಷಗಳಿರುತ್ತವೆ. ಆ ಹೋಟೆಲಿಗೆ ಎಲ್ಲ ಮನಸ್ಥಿತಿಯವರೂ ಉಳಿಯಲು ಬರುತ್ತಾರೆ. ಅವರ ಭಾವನೆಗಳನ್ನು ಅರಿತು ಅವರೊಂದಿಗೆ ವ್ಯವಹರಿಸುವುದು ಬಹಳ ಮುಖ್ಯ.
ಎಲ್ಲರಿಗೂ ತಾವು ಹೆಚ್ಚಿನ ಹಣವನ್ನು ತೆತ್ತು ಅಲ್ಲಿಗೆ ಬಂದಿರುತ್ತೇವೆ ಎಂಬ ಭಾವನೆ ಇರುತ್ತದೆ. ಹೀಗಾಗಿ ತಮಗೆ ವಿಶೇಷ ಸವಲತ್ತು, ಸೌಕರ್ಯ, ಗಮನ ಮತ್ತು ಮರ್ಯಾದೆ ಸಿಗಬೇಕು ಎಂದು ಅಪೇಕ್ಷಿಸುತ್ತಾರೆ. ಇವುಗಳ ಪೈಕಿ ಸ್ವಲ್ಪ ವ್ಯತ್ಯಯವಾದರೂ ಕಿರಿಕಿರಿ ಮಾಡುತ್ತಾರೆ ಅಥವಾ ಜಗಳವಾಡಲು
ಹಿಂದೇಟು ಹಾಕುವುದಿಲ್ಲ. ಸಾಮಾನ್ಯವಾಗಿ ಸ್ಟಾರ್ ಹೊಟೇಲುಗಳಲ್ಲಿ, ಗ್ರಾಹಕರು ಹೋಗುವಾಗ ಹೊತ್ತೊಯ್ಯುವ ಸಾಮಾನುಗಳನ್ನು ಇಡುವುದಿಲ್ಲ. ಆದರೆ ಕೆಲವು ಅತಿಥಿಗಳು ಹೋಟೆಲಿನ ಟವೆಲ್ಲುಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಾರೆ.
ಕೆಲವು ಹೋಟೆಲುಗಳು ಅದನ್ನು ಪುರಸ್ಕರಿಸುವುದಿಲ್ಲ. ಆದರೆ ಅತಿಥಿಗಳ ಬ್ಯಾಗ್ ಚೆಕ್ ಮಾಡಲು ಆಗುವುದಿಲ್ಲ. ಅತಿಥಿಗಳು ಹೋಟೆಲಿನಿಂದ ಹೋದ ಬಳಿಕ ಅವರು ಟವೆಲ್ ಎಗರಿಸಿದ್ದು ಗೊತ್ತಾಗುತ್ತದೆ. ಆಗ ಏನೂ ಮಾಡಲು ಆಗುವುದಿಲ್ಲ. ಕೆಲವು ಹೋಟೆಲುಗಳು ರೂಮು ಬಾಡಿಗೆ ದರ ನಿರ್ಧರಿಸು ವಾಗಲೇ, ಟವೆಲ, ಸೋಪ್, ಶಾಂಪೂ, ಟೂತ್‌ಬ್ರಷ್, ರೇಜರ್ ಮುಂತಾದವುಗಳ ಬೆಲೆಗಳನ್ನು ಸೇರಿಸಿರುತ್ತಾರೆ. ಅಂದರೆ ಅತಿಥಿಗಳು ರೂಮಿನಲ್ಲಿಟ್ಟ ಈ ವಸ್ತುಗಳನ್ನು ತೆಗೆದುಕೊಂಡು ಹೋದರೂ ತಲೆಕೆಡಿಸಿಕೊಳ್ಳುವುದಿಲ್ಲ.
ಕೆಲವು ಹೋಟೆಲುಗಳು, ‘ನಮ್ಮ ರೂಮಿನಲ್ಲಿಟ್ಟ ಯಾವುದಾದರೂ ವಸ್ತುಗಳು ನಿಮಗೆ ಇಷ್ಟವಾದರೆ, ಅವು ಮಾರಾಟಕ್ಕೆ ಸಿಗುತ್ತವೆ’ ಎಂದು ಬರೆದಿರುತ್ತವೆ. ಸಾಮಾನ್ಯವಾಗಿ ಇಂಥ ಸೂಚನೆಯನ್ನು ಹೋಟೆಲಿನ ಜನರಲ್ ಮ್ಯಾನೇಜರ್ ಅತಿಥಿಗಳಿಗೆ ತನ್ನ ಲೆಟರ್‌ಹೆಡ್‌ನಲ್ಲಿ ನೀಡಿರುತ್ತಾನೆ. ಅಂದರೆ ರೂಮಿ ನಲ್ಲಿಟ್ಟ ಯಾವುದೇ ಸಾಮಾನುಗಳನ್ನು ತೆಗೆದುಕೊಂಡು ಹೋಗಬಾರದು ಎಂಬುದನ್ನು ಸೂಚ್ಯವಾಗಿ ರವಾನಿಸಿರುತ್ತಾರೆ. ಆದರೂ ಅತಿಥಿಗಳು ತಮ್ಮ ಅಸಲಿಬುದ್ಧಿಯನ್ನು ತೋರಿಸಿರುತ್ತಾರೆ. ಇದರಲ್ಲಿ ಶ್ರೀಮಂತರು, ಅತಿ ಶ್ರೀಮಂತರು ಎಂಬ ಭೇದ-ಭಾವ ಇಲ್ಲ. ಇದು ಅವರವರ ಮನಸ್ಥಿತಿಗೆ
ಸಂಬಂಧಿಸಿದ್ದು.
ನ್ಯೂಯಾರ್ಕಿನ ಪ್ರಮುಖ ಹೋಟೆಂದು ಕೆಲ ತಿಂಗಳ ಹಿಂದೆ, ರೂಮಿನಲ್ಲಿಟ್ಟ ಟವೆಲ್ಲಿಗೆ ಎಲೆಕ್ಟ್ರಾನಿಕ್ ಟ್ಯಾಗ್ ಅಳವಡಿಸಿದ್ದಾಗಿಯೂ, ಯಾರಾದರೂ ಹೋಟೆಲ್‌ನಿಂದ ಹೊರಕ್ಕೆ ಯಾವುದೇ ಸಾಮಾನುಗಳನ್ನು ಎಗರಿಸಿಕೊಂಡು ಹೋದರೆ, ಬೀಪ್ ಸದ್ದು ಬರುವುದಾಗಿಯೂ ಘೋಷಿಸಿಕೊಂಡಿತ್ತು. ಆದರೆ
ಇದಕ್ಕೆ ಅತಿಥಿಗಳಿಂದ ಮತ್ತು ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಯಿತು. ‘ನಿಮ್ಮ ಹೋಟೆಲಿನಲ್ಲಿ ಉಳಿದುಕೊಂಡವರಿಗೆ ಕಳ್ಳ ಎಂಬ ಹಣೆಪಟ್ಟಿ ಹಚ್ಚಬೇಡಿ. ಅಷ್ಟಕ್ಕೂ ನಿಮ್ಮ ಹೋಟೆಲಿನಲ್ಲಿ ಉಳಿದುಕೊಳ್ಳ ಬೇಕು ಎಂಬ ಅನಿವಾರ್ಯವೇನಿದೆ?’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವ ಜನಿಕರು ತರಾಟೆಗೆತೆಗೆದುಕೊಂಡರು. ಅಲ್ಲಿಗೆ ಆ ಹೋಟೆಲ್ ಆ ನಿರ್ಧಾರವನ್ನು ಕೈಬಿಟ್ಟಿತು.
ಆದರೆ ಹೋಟೆಲ್ ಆಡಳಿತ ಮಂಡಳಿಗೆ ಅತಿಥಿಗಳ ಈ ವರ್ತನೆ ತಲೆನೋವೇ. ಆದರೆ ದೊಡ್ಡ ದೊಡ್ಡ ಹೋಟೆಲುಗಳು ಈ ವಿಷಯದ ಬಗ್ಗೆ ತಲೆಕೆಡಿಸಿ ಕೊಳ್ಳುವುದನ್ನು ಬಿಟ್ಟಿವೆ. ಈ ವಸ್ತುಗಳನ್ನು ಸೇರಿಸಿಯೇ ರೂಮ್ ಬಾಡಿಗೆ ತೆಗೆದುಕೊಳ್ಳುತ್ತದೆ. ಆದರೆ ಹೋಟೆಲಿನಲ್ಲಿ ಉಳಿದುಕೊಳ್ಳುವ ಎಲ್ಲ ಗ್ರಾಹಕರೂ ಹೀಗೆ ಮಾಡುವುದಿಲ್ಲ. ಆಗ ಹೋಟೆಲಿಗೆ ಲಾಭವೇ. ಈ ಕಾರಣದಿಂದ ಅದನ್ನು ಒಂದು ರಾದ್ಧಾಂತದ ವಿಷಯವಾಗಿ ಮಾಡುವುದಿಲ್ಲ. ಭಾರತೀಯ ರೈಲಿನಲ್ಲಿ ಯಾವ ವಸ್ತುವನ್ನೂ ಎಗರಿಸಿಕೊಂಡು ಹೋಗಲು ಆಗುವುದಿಲ್ಲ. ಚೊಂಬನ್ನು ಸಹ ಸರಪಳಿ ಕಟ್ಟಿ ಇಡುತ್ತಿದ್ದರು. ಸೀಟಿನಿಂದ ಸ್ಪಾಂಜನ್ನು ಕೀಳಲು ಆಗುವುದಿಲ್ಲ.
ಪೋನ್ ಕಿತ್ತುಕೊಂಡು ಹೋಗಲು ಸಾಧ್ಯವಿಲ್ಲ. ಅದೇ ನಿಯಮವನ್ನು ಕೆಲವು ಹೋಟೆಲುಗಳು ಪಾಲಿಸುತ್ತಿವೆ. ಆದರೆ ಟವೆಲ್ ಎಗರಿಸುವ ವಿಷಯದಲ್ಲಿ ‘ಫುಲ್‌ಪ್ರೂಫ್’ ವ್ಯವಸ್ಥೆಯನ್ನು ತರಲು ಸಾಧ್ಯವಾಗಿಲ್ಲ. ನೂರು-ಐನೂರು ರೂಮುಗಳಿರುವ ಹೋಟೆಲ್ ನಿಭಾಯಿಸುವುದು ಸಣ್ಣ ಕೆಲಸವಲ್ಲ. ಐನೂರು ಸಂಸಾರಗಳನ್ನು ನಿಭಾಯಿಸಿದಂತೆ. ಮಧ್ಯರಾತ್ರಿ ಫೋನ್ ಮಾಡಿ, ಶಾವರ್‌ನಿಂದ ಹರಿದನೀರು ರೂಮಿನಲ್ಲ ತುಂಬಿಕೊಂಡಿದೆ ಎಂದು ಹೇಳುತ್ತಾರೆ. ಇನ್ಯಾರೋ ಮೂರು ಗಂಟೆಗೆ ಫೋನ್ ಮಾಡಿ, ‘ಮಜ್ಜಿಗೆ ಬೇಕಿತ್ತು. ರೂಮಿಗೆ ಕಳಿಸಿ’ ಅಂತಾರೆ. ಯಾರಿಗೂ ಇಲ್ಲ ಎಂದು ಹೇಳುವಂತಿಲ್ಲ.
ಒಂದು ವೇಳೆ ಇಲ್ಲ ಅಂದರೆ ಅದನ್ನೇ ದೊಡ್ಡ ವಿಷಯವಾಗಿ ಮಾಡುತ್ತಾರೆ. ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಎಂದು ಯಾರನ್ನು ಭಾವಿಸುತ್ತೇವೋ, ಅವರ ವರ್ತನೆ ಭಿನ್ನವಾಗಿರುವುದಿಲ್ಲ. ಹಾಲಿವುಡ್ ನಟರೊಬ್ಬರು, ಹೋಟೆಲಿನಲ್ಲಿ ಕುಡಿದು ಪ್ಲೇಟನ್ನು ಬಿಸಾಡಿ ರಂಪ-ರಾದ್ಧಾಂತ ಮಾಡಿದ್ದರಂತೆ.
ಅತಿಗಣ್ಯರೊಬ್ಬರು ಗೋಡೆಯಲ್ಲಿ ನೇತುಹಾಕಿದ ಪೇಂಟಿಂಗ್‌ನ್ನು ಎಗರಿಸಿಕೊಂಡು ಹೋಗಿದ್ದರು. ಸಂದೇಹ ಬರದಿರಲೆಂದು ಆ ಜಾಗದಲ್ಲಿ ಬೇರೊಂದು
ಪೇಂಟಿಂಗ್ ತಂದು ಇಟ್ಟಿದ್ದರು. ಹತ್ತಾರು ವರ್ಷಗಳ ಕಾಲ ಸ್ಟಾರ್ ಹೋಟೆಲುಗಳಲ್ಲಿ ಕೆಲಸ ಮಾಡಿದವರು ಸಿಕ್ಕರೆ, ಅವರ ಬಾಯಿ ಬಿಡಿಸಿ. ನಿಮಗೆ ಹಲವು ಕತೆಗಳು ಸಿಗುತ್ತವೆ. ಕೆಲವರ ಬಗ್ಗೆ ಇರುವ ಕಲ್ಪನೆಗಳು ಬದಲಾಗುತ್ತವೆ. ಅಂಥವರ ಇನ್ನೊಂದು ಮುಖ ಗೊತ್ತಾಗುತ್ತದೆ. ನಾನಂತೂ ಈ ಅವಕಾಶವನ್ನು
ಎಂದೂ ತಪ್ಪಿಸಿಕೊಳ್ಳುವುದಿಲ್ಲ.
ಅಡ್ಡ ಪರಿಣಾಮ
ಇತ್ತೀಚೆಗೆ ಖ್ಯಾತ ವಕೀಲ ಪ್ರಶಾಂತ ಭೂಷಣ ಒಂದು ಟ್ವೀಟ್ ಮಾಡಿದ್ದರು. ಕೋವಿಶೀಲ್ಡ ವ್ಯಾಕ್ಸಿನ್‌ನ ಸೈಡ್ ಇಫೆಕ್ಟ್ ಬಗ್ಗೆ ಮಾಧ್ಯಮಗಳಲ್ಲಿ ವರದಿ ಯಾದ ಹಿನ್ನೆಲೆಯಲ್ಲಿ ಅವರು ಆ ಟ್ವೀಟ್ ಮಾಡಿದ್ದರು. ‘ಭಾರತದಲ್ಲಿ ಕೋವಿಶೀಲ್ಡ ಲಸಿಕೆಯ ಅಡ್ಡ ಪರಿಣಾಮದ ಬಗ್ಗೆ ಮಾಧ್ಯಮಗಳಲ್ಲಿ ಮೊದಲ ವರದಿ ಪ್ರಕಟವಾಗಿದೆ. ಲಸಿಕೆಯನ್ನುಹಾಕಿಸಿಕೊಳ್ಳಲು ನಾನೇಕೆ ಹಿಂದೇಟು ಹಾಕಿದ್ದೆ ಎಂಬ ಬಗ್ಗೆ ನಾನು ೨೦೨೧ ರಲ್ಲಿಯೇ ಲೇಖನ ಬರೆದು ನನ್ನ ಆತಂಕವನ್ನು ವ್ಯಕ್ತಪಡಿಸಿದ್ದೆ. ಆ ಸಂದರ್ಭದಲ್ಲಿ ನನ್ನ ಈ ಅಧ್ಯಯನ ಪೂರ್ಣ ಲೇಖನವನ್ನು ಪ್ರಕಟಿಸಲು ಮುಖ್ಯವಾಹಿನಿ ಪತ್ರಿಕೆಗಳು ನಿರಾಕರಿಸಿ ದವು.’ ಎಂದು ಪ್ರಶಾಂತ ಭೂಷಣ ಟ್ವೀಟ್ ಮಾಡಿದ್ದರು.
ಅದಕ್ಕೆ ಡಾ.ವೇದು ಎನ್ನುವವರು ಹೀಗೆ ಪ್ರತಿಕ್ರಿಯಿಸಿದ್ದರು – ‘ಭೂಷಣ್ ಅವರೇ, ಕಾಂಡೋಮ್ ಸೇರಿದಂತೆ ಪ್ರತಿ ಔಷಧಕ್ಕೂ ಅಡ್ಡಪರಿಣಾಮ ಎಂಬುದು ಇದ್ದೇ ಇರುತ್ತದೆ. ನಿಮ್ಮ ತಂದೆಯವರು ಅದನ್ನು ಬಳಸಿಯೂ, ನೀವು ಹುಟ್ಟಿರಬಹುದು. ಹತ್ತು ಲಕ್ಷದಲ್ಲಿ ಒಬ್ಬರಿಗೆ ಕೋವಿಶೀಲ್ಡ ಅಡ್ಡಪರಿಣಾಮ
ತಟ್ಟಿರಬಹುದು. ಆದ್ದರಿಂದ ಜನರಲ್ಲಿ ಆತಂಕ ಸೃಷ್ಟಿಸುವ ನಿಮ್ಮ ಚಾಳಿಯನ್ನು ಬಿಟ್ಟುಬಿಡಿ. ಒಂದು ವೇಳೆ ಈ ಲಸಿಕೆಯನ್ನು ಕಾಂಗ್ರೆಸ್ ಸರಕಾರ ನೀಡಿದ್ದಿದ್ದರೆ ನೀವು ಸೊಂಟಕ್ಕೆ, ಭುಜಕ್ಕೆ ಸೇರಿದಂತೆ ಹತ್ತು ಲಸಿಕೆಗಳ ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದೀರಿ.’
ಸೆಕ್ಸ್ ಮತ್ತು ಪತ್ನಿ ಮುಖ
ಟ್ವಿಟ್ಟರ್‌ನಲ್ಲಿ (ಈಗ ಎಕ್ಸ್) ಮಹಿಳೆಯೊಬ್ಬಳು, ‘ಸೆಕ್ಸ್ ಮಾಡುವಾಗ ಗಂಡಸರು ತಮ್ಮ ಹೆಂಡತಿಯನ್ನು ನೋಡುತ್ತಾರಾ?’ ಎಂಬ ಪ್ರಶ್ನೆಯನ್ನು ಕೇಳಿದ್ದಳು. ಇಂಥ ಪ್ರಶ್ನೆಗಳನ್ನು ಓದಿ ಯಾರೂ ಸುಮ್ಮನಿರುವುದಿಲ್ಲ. ತಲೆಗೊಬ್ಬರು ತರಲೆ ಉತ್ತರ ಅಥವಾ ಪ್ರತಿಕ್ರಿಯೆ ನೀಡುತ್ತಾರೆ. ಈ ಪ್ರಶ್ನೆಗೆ ನೂರಕ್ಕೂ ಹೆಚ್ಚು ಜನ ಪ್ರತಿಕ್ರಿಯೆ ನೀಡಿದ್ದರು. ಆದರೆ ನನಗೆ ಒಂದು ಪ್ರತಿಕ್ರಿಯೆ ಇಷ್ಟವಾಯಿತು. ಕ್ಸೆವಿಯರ್ ಎನ್ನುವವರು ಹೀಗೆ ಬರೆದಿದ್ದರು – ‘ನಾನು ಒಮ್ಮೆ ಅವಳ ಮುಖವನ್ನು ನೋಡಿದೆ. ಅವಳ ಮುಖ ಕೋಪದಲ್ಲಿ ಕುದಿಯುತ್ತಿತ್ತು. ಆಕೆ ಕಿಟಕಿಯಾಚೆಯಿಂದ ದುರುದುರು ನಮ್ಮನ್ನು ದಿಟ್ಟಿಸುತ್ತಿದ್ದಳು.’
ಕೊಡೊ ನಿಶಿಮುರಾ ಕುರಿತು
ನೀವು ಕೊಡೊ ನಿಶಿಮುರಾ ಅವರ ಹೆಸರನ್ನು ಕೇಳಿದ್ದೀರೋ, ಇಲ್ಲವೋ ಗೊತ್ತಿಲ್ಲ. ಇತ್ತೀಚೆಗೆ ನಾನು ಅವರು ಬರೆದ This Monk Wears Heels : Be Who You Are ಎಂಬ ಪುಸ್ತಕವನ್ನು ಓದುತ್ತಿದ್ದೆ. ನಿಜಕ್ಕೂ ಎಂಥವರ ಮೇಲೂ ಪರಿಣಾಮ ಬೀರುವಂಥ ಕೃತಿ. ಈ ಕೃತಿಯನ್ನು ನಿಶಿಮುರಾ ಅವರು, ತಮ್ಮ ಹೃದಯದೊಂದಿಗೆ ಯಾವತ್ತೂ ಪ್ರಾಮಾಣಿಕವಾಗಿರಲು ಹೋರಾಟ ನಡೆಸುವವರಿಗೆ (For anyone who has ever struggled to be honest with their heart)) ಅರ್ಪಿಸುವುದಾಗಿ ಹೇಳಿಕೊಂಡಿದ್ದಾರೆ.
ಈ ಮೊದಲು ನಾನು ನಿಶಿಮುರಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿz. ಅವರ ವಿಚಾರದಲ್ಲಿನ ಸ್ಪಷ್ಟತೆ ಮತ್ತು ಪ್ರಾಮಾಣಿಕ ಧೋರಣೆ ಅವರನ್ನು ಇಷ್ಟಪಡುವಂತೆ ಮಾಡಿತು. ಮೂಲತಃ ಕೊಡೊ ನಿಶಿಮುರಾ ಬೌದ್ಧಭಿಕ್ಷು. ಇಷ್ಟೇ ಆಗಿದ್ದರೆ ಅವರು ಹತ್ತರ ಜತೆ ಹನ್ನೊಂದನೆಯವರಾಗಿರುತ್ತಿದ್ದರು. ಆದರೆ ಅವರದು ಬಹುಮುಖ ಪ್ರತಿಭೆ, ಆಸಕ್ತಿ. ಅವರು ಬೌದ್ಧ ಧರ್ಮದ ಪವಿತ್ರ ಗ್ರಂಥಗಳನ್ನು, ಶಾಸನಗಳನ್ನು ಓದಬಲ್ಲರು. ಹಾಗೆಯೇ ‘ಭುವನ ಸುಂದರಿ’ ಸ್ಪರ್ಧೆಯಲ್ಲಿ ಭಾಗವಹಿಸುವ ಲಲನಾಮಣಿಯರಿಗೆ ಮೇಕಪ್ ಕಲಾವಿದರಾಗಿಯೂ ಕೆಲಸ ಮಾಡಬಲ್ಲರು.
ಇವರು ಮೇಕಪ್ ಮಾಡಿದ ಮೂವರು, ‘ಮಿಸ್ ಯೂನಿವರ್ಸ್’ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದು ವಿಶೇಷ. ವಿಶೇಷ ಸಂದರ್ಭಗಳಲ್ಲಿ, ಬೇರೆ ಬೇರೆ ದೇಶಗಳ ರಾಣಿಯರಿಗೆ, ಗಣ್ಯರಿಗೆ ಮೇಕಪ್ ಮಾಡಲು ಇವರಿಗೆ ಆಮಂತ್ರಣ ಬರುತ್ತದೆ. ಹೀಗಾಗಿ ಇವರು ದೇಶ-ದೇಶಗಳನ್ನು ಸದಾ ಸುತ್ತುತ್ತಲೇ ಇರುತ್ತಾರೆ. ಈ ಬೌದ್ಧಭಿಕ್ಷು ಫ್ಯಾಷನ್ ಪ್ರಿಯ. ದಿನಕ್ಕೊಂದು ರಂಗುರಂಗಿನ ಪೋಷಾಕಿನಲ್ಲಿ ಕಂಗೊಳಿಸುತ್ತಾರೆ, ಕಿವಿಗೆ ವಿವಿಧ ಓಲೆಗಳನ್ನು ಧರಿಸುತ್ತಾರೆ. ಸಿನಿಮಾ ನಟಿಯರಂತೆ ಹೈಹೀಲ್ಡ್ (ಹಿಮ್ಮಡ ಎತ್ತರಿಸಿದ) ಚಪ್ಪಲಿ ಧರಿಸಿ ಓಡಾಡುತ್ತಾರೆ.
ಒಂದು ದಿನ ಗಂಡಸಿನ ಪೋಷಾಕು ಧರಿಸಿದರೆ, ಮರುದಿನ ಹೆಂಗಸರ ದಿರಿಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ತಮ್ಮ ಡ್ರೆಸ್ ನ್ನು ತಾವೇ ಡಿಸೈನ್ ಮಾಡಿ ಕೊಳ್ಳುತ್ತಾರೆ. ಇವರ ಕೇಶಾಲಂಕಾರವೂ ದಿನದಿನಕ್ಕೆ ಬದಲಾಗುತ್ತದೆ. ಒಂದು ದಿನ ಕೆಂಪುಗೂದಲಲ್ಲಿ ಕಾಣಿಸಿಕೊಂಡರೆ, ಮರುದಿನ ಬಿಳಿಗೂದಲಿ ನಲ್ಲಿ ಕಂಗೊಳಿಸುತ್ತಾರೆ. ಒಮ್ಮೆ ಬರೀ ಕೊರಳಲ್ಲಿ, ಮತ್ತೊಮ್ಮೆ ಕೊರಳ ತುಂಬಾ ಬಂಗಾರದ ಒಡವೆಗಳು. ಹಾಗೆ ದಿನಕ್ಕೊಂದು ಬಣ್ಣದ ಲಿಪ್‌ಸ್ಟಿಕ್. ಇವರು ಹೀಗೇ ಎಂದು ಹೇಳುವಂತಿಲ್ಲ. ಪ್ರತಿದಿನವೂ ಭಿನ್ನವಾಗಿರಲು ಬಯಸುತ್ತಾರೆ. ಇಷ್ಟೇ ಆಗಿದ್ದರೆ ನಿಶಿಮುರಾ ಬಗ್ಗೆ ಹೆಚ್ಚು ಹೇಳುವಂಥದ್ದು ಏನೂ ಇರುತ್ತಿರಲಿಲ್ಲ. ಇವರು ತಮ್ಮನ್ನು ಸಲಿಂಗಕಾಮಿ ಎಂದು ಘೋಷಿಸಿಕೊಂಡು, ಸಲಿಂಗಿಗಳ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ.
‘ನಾನು ಸಲಿಂಗಿಯಾದರೆ ಅದು ನನ್ನ ಇಷ್ಟ. ಅದನ್ನು ತಪ್ಪು ಎಂದು ಹೇಳಲು ಯಾರಿಗೂ ಅಧಿಕಾರವಿಲ್ಲ. ಸಲಿಂಗ ಪ್ರಕೃತಿಯಷ್ಟೇ ಸಹಜ. ನಮ್ಮ ಉಸಿರಿನಷ್ಟೇ ಸತ್ಯ. ಅದಕ್ಕಾಗಿ ನಾವು ಅವಮಾನ ಅನುಭವಿಸಬೇಕಿಲ್ಲ. ಸಲಿಂಗಿ ಎಂದು ಹೇಳಿಕೊಳ್ಳಲು ಅಂಜಬೇಕಿಲ್ಲ. ಧೈರ್ಯದಿಂದ ನಾನು ಸಲಿಂಗಿ ಎಂದು ಹೇಳಿಕೊಳ್ಳಬೇಕು. ಯಾರೂ ನಿಮ್ಮ ತಲೆ ತೆಗೆಯುವುದಿಲ್ಲ. ಆದರೆ ಹೇಳಿಕೊಳ್ಳಬೇಕೋ, ಬೇಡವೋ ಎಂಬ ತೊಳಲಾಟದಲ್ಲಿ ಮಾತ್ರ ಇರಬೇಡಿ.
ಹಾಗೆ ಮಾಡಿದರೆ ಅದು ನಿಮ್ಮ ಆತ್ಮಘಾತುಕತನ. ಪ್ರತಿಯೊಬ್ಬ ವ್ಯಕ್ತಿಯೂ ಅದ್ಭುತ ಮತ್ತು ಅನೂಹ್ಯ. ಅವರು ಹೀಗೇ ಇರಬೇಕು ಎಂದು ಬಯಸುವುದು
ಸರಿಯಲ್ಲ’ ಎಂದು ಅವರು ಘೋಷಿಸಿದರು. ನಿಶಿಮುರಾ ತಮ್ಮನ್ನು gender gifted ಎಂದು ಬಣ್ಣಿಸಿಕೊಂಡಿದ್ದಾರೆ.
ಇವರು ಹುಟ್ಟಿದ್ದು ಜಪಾನಿನ ಟೋಕಿಯೋದಲ್ಲಿ. ಓದಿದ್ದು ಡಿಸೈನಿಂಗ್ ಬಗ್ಗೆ. ಅದೂ ನ್ಯೂಯಾರ್ಕಿನ ಪಾರ್ಸ ಸ್ಕೂಲ್ ಆಫ್ ಡಿಸೈನ್‌ನಲ್ಲಿ. ಇವರ ತಂದೆ ಬೌದ್ಧಭಿಕ್ಷು. ಬೌದ್ಧ ದೇಗುಲದಲ್ಲಿ ಪೂಜಾರಿಯಾಗಿದ್ದರು. ನಿಶಿಮುರಾ ಅವರನ್ನೂ ಅದೇ ವಾತಾವರಣದಲ್ಲಿ ಬೆಳೆಸಿದರು. ಆದರೆ ಅವರು ತಮ್ಮ ಸುತ್ತಲಿನ ಸಂಕೋಲೆಗಳನ್ನು ಬಿಡಿಸಿಕೊಂಡು, ಸಮಾಜದ ಎಲ್ಲಾ ಕಂದಾಚಾರ, ಗೊಡ್ಡು ಆಚರಣೆಗಳಿಂದ ವಿಮೋಚನೆ ಪಡೆದು ತಮ್ಮಿಷ್ಟದಂತೆ, ಆದರೆ
ಬೌದ್ಧಧರ್ಮದ ಆಯಾಮದೊಳಗೆ ಹೊಸತನದ ಹಾದಿಯನ್ನು ಅರಸುವ ನಿಟ್ಟಿನಲ್ಲಿ ಸಾಗಿದ್ದಾರೆ. ಅವರ ಮಾತು, ಉಪನ್ಯಾಸಗಳಲ್ಲಿ ಹೊಸಹೊಳಹು, ದೃಷ್ಟಿಕೋನವನ್ನು ಕಾಣಬಹುದಾಗಿದೆ.