Sunday, 15th December 2024

ಸೋಮೇಶ್ವರ ಶತಕ: ಪದ್ಯಗಳಲ್ಲೇ ಪುರಾಣದ ಕಥೆಗಳೂ !

ತಿಳಿರು ತೋರಣ

srivathsajoshi@yahoo.com

ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ‘ಸೋಮೇಶ್ವರ ಶತಕ’ ಪುಸ್ತಕದಲ್ಲಿ ಪದ್ಯದ ಭಾವಾರ್ಥ ಮತ್ತು ಟಿಪ್ಪಣಿಯಷ್ಟೇ ಅಲ್ಲ, ಪುರಾಣ ಪಾತ್ರಗಳ ಉಲ್ಲೇಖವಿದ್ದರೆ ಮೂಲಕಥೆಗಳೂ ಅನುಬಂಧದಲ್ಲಿ ಇವೆ. ನೂರು ಪುಟಗಳ ಪುಟ್ಟ ಪುಸ್ತಕ, ಒಳಗಿರುವ ಹೂರಣ ನೂರು ಗ್ರಂಥಗಳಿಗೆ ಸಮವಾದದ್ದು. ಪರಿಷತ್ತು ಈ ಪುಸ್ತಕವನ್ನು ಸಾಹಿತ್ಯ ಸಮ್ಮೇಳನಗಳಲ್ಲಿ ಅಗ್ಗದ ದರದಲ್ಲಿ ಒದಗಿಸುತ್ತದೆ.

‘ಅನುಮಾನಂಬಡೆ ರಾಮನಗ್ನಿಯೊಳಪೊಕ್ಕಾ ಸೀತೆ ತಾನೈತರಲ್| ವನದೊಳ್ ನೇರಿಳೆವಣ್ಣನಗ್ನಿಜೆ ಬಹುಪ್ರಖ್ಯಾತಿಯಿಂ ಪತ್ತಿಸಲ್| ದನುಜಾರಾತಿ ಸ್ಯಮಂತರತ್ನವ ನೃಪಂಗೀಯಲ್ಕೆ ದೂರ್ ಪೋದುದೇ| ಜನರಂ ಮೆಚ್ಚಿಸಲಾಗದೈ ಹರಹರಾ ಶ್ರೀಚೆನ್ನ ಸೋಮೇಶ್ವರಾ||’ ಇದು ಸೋಮೇಶ್ವರ ಶತಕದ್ದೊಂದು ಪದ್ಯ.

ಸೀತೆಯು ರಾವಣನ ಬಳಿಯಲ್ಲಿ ಬಹುಕಾಲ ಇದ್ದಳಾದ್ದರಿಂದ ಆಕೆಯನ್ನು ಹಾಗೆಯೇ ಸ್ವೀಕರಿಸಲಿಕ್ಕೆ ರಾಮ ಹಿಂಜರಿದನು. ಸೀತೆ ಅಗ್ನಿಪ್ರವೇಶ ಮಾಡಿ ಶುದ್ಧಳೆಂದೆನಿಸಿ ಕೊಳ್ಳಬೇಕಾಯ್ತು. ಮರದಿಂದ ಕೊಯ್ದ ನೇರಿಳೆಹಣ್ಣನ್ನು ದ್ರೌಪದಿಯು ಮರಳಿ ಮರಕ್ಕೆ ಸೇರಿಕೊಳ್ಳು ವಂತೆ ಮಾಡಿ ಮಹಾಪತಿವ್ರತೆ ಎನಿಸಿಕೊಂಡಳು. ಕಳೆದುಹೋಗಿದ್ದ ಸ್ಯಮಂತಕ ಮಣಿಯನ್ನು ಶ್ರೀಕೃಷ್ಣನು ಹುಡುಕಿತಂದು ಸತ್ರಾಜಿತನಿಗೆ ಕೊಟ್ಟು ತನ್ನ ಮೇಲೆ ಬಂದಿದ್ದ ಅಪವಾದ ಸುಳ್ಳೆಂದು ತೋರಿಸಿದನು.

ಇದನ್ನೆಲ್ಲ ಮಾಡಿದರೂ ಇವರುಗಳ ಮೇಲೆ ಬಂದಿದ್ದ ಆರೋಪಗಳು ಹೋಗಲಿಲ್ಲ. ಜನರನ್ನು ಮೆಚ್ಚಿಸುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಈ ಪದ್ಯದ ಅರ್ಥ. ಸೀತೆಯ ಅಗ್ನಿಪ್ರವೇಶದ ಕಥೆ ಗೊತ್ತಿದ್ದದ್ದೇ. ಸ್ಯಮಂತಕೋಪಾಖ್ಯಾನವೂ ಚೌತಿಯಂದು ಲೌಡ್‌ಸ್ಪೀಕರ್‌ಗಳಲ್ಲಿ ಕೇಳಿಕೇಳಿ ಬಹುಪ್ರಖ್ಯಾತ. ದ್ರೌಪದಿಯ ನೇರಿಳೆಹಣ್ಣಿನ ಕಥೆ ಮಾತ್ರ ಅಷ್ಟೇನೂ ಜನಜನಿತವಲ್ಲ. ಆ ಕಥೆ ಹೀಗಿದೆ: ಪಂಚಪಾಂಡವರು ದ್ರೌಪದಿಯೊಂದಿಗೆ ವನವಾಸ ದಲ್ಲಿದ್ದ ದಿನಗಳು.

ಒಮ್ಮೆ ಭೀಮಸೇನನು ಕಣ್ವಮುನಿಯ ಆಶ್ರಮದ ಬಳಿ ಒಂದು ನೇರಿಳೆ ಮರದಲ್ಲಿ ಅದ್ಭುತವಾದ ಒಂದೇ ಒಂದು ಹಣ್ಣು ಬಿಟ್ಟಿದ್ದನ್ನು ಕಂಡನು. ಕೊಯ್ದುತಂದು ಅಣ್ಣ ಧರ್ಮರಾಯನಿಗೆ ಒಪ್ಪಿಸಿದನು. ಅವನು ಆ ದಿವ್ಯವಾದ ಹಣ್ಣನ್ನು ಮಿಕ್ಕವರಿಗೂ ತೋರಿಸಿದನು. ಪಂಚಪಾಂಡವರ ಪೈಕಿ ದಿವ್ಯಜ್ಞಾನಿ ಯಾಗಿದ್ದ ಸಹದೇವನು ‘ಅಣ್ಣಾ! ಈ ಹಣ್ಣು ಕಣ್ವಮುನಿಯ ಆಶ್ರಮದ್ದು. ವರುಷಕ್ಕೊಮ್ಮೆ ಬಿಡುವ ಈ ಒಂದೇ ಹಣ್ಣನ್ನು
ತಿಂದು ಆ ಋಷಿಯು ತಪಸ್ಸು ಮಾಡುವನು. ಈಗ ಆತನು ಕಣ್ದೆರೆದು ನೋಡಿ ಹಣ್ಣು ಕಾಣದಿದ್ದರೆ ಅದನ್ನು ಕೊಯ್ದವರಿಗೆ ಶಾಪ ಕೊಡುವನು. ಹಣ್ಣನ್ನು ಮತ್ತೆ ಅದರ ತೊಟ್ಟಿಗೆ ಸೇರಿಸದಿದ್ದರೆ ನಮಗೆ ಅಪಾಯವಿದೆ’ ಎಂದು ಎಚ್ಚರಿಸಿದನು.

ಸರಿ, ಧರ್ಮರಾಯನು ಹಣ್ಣನ್ನೆತ್ತಿಕೊಂಡು ಎಲ್ಲರನ್ನೂ ಕರೆದುಕೊಂಡು ಆ ಮರದ ಕೆಳಗೆ ಹೋದನು. ಹಣ್ಣನ್ನು ಮತ್ತೆ ತೊಟ್ಟಿನಲ್ಲಿ ಕೂರಿಸು ವುದು ಹೇಗಪ್ಪಾ ಎಂದು ಚಿಂತಿಸುತ್ತಿದ್ದಾಗ ಕೃಷ್ಣ ಪ್ರತ್ಯಕ್ಷನಾದನು. ಹಣ್ಣನ್ನು ನೆಲದಮೇಲೆ ತೊಟ್ಟಿನ ನೇರಕ್ಕೆ ಸರಿಯಾಗಿಟ್ಟು ಪಾಂಡವ ರನ್ನುದ್ದೇಶಿಸಿ ‘ನಿಮ್ಮನಿಮ್ಮ ಮನಸ್ಸಿನ ನಿಶ್ಚಯವನ್ನು ಮರೆಮಾಚದೆ ಹೇಳಿ. ಆಗ ಹಣ್ಣು ತಾನಾಗಿಯೇ ಮೇಲಕ್ಕೇರುವುದು’ ಎಂದನು. ಪಾಂಡವರೈವರೂ ಹಾಗೆ ಮಾಡಿದಾಗ ಹಣ್ಣು ಒಂದೊಂದು ಮೊಳ ಮೇಲಕ್ಕೇರಿತು. ತೊಟ್ಟನ್ನು ತಲುಪಲಿಕ್ಕೆ ಇನ್ನೂ ಅಂತರವಿತ್ತು. ದ್ರೌಪದಿಯೂ ಮುಂದೆಬಂದು ತನ್ನ ಮನಸ್ಸಿನಲ್ಲಿದ್ದುದನ್ನು ಹೇಳಿದಳು.

ಆಗ ಆ ನೇರಿಳೆಹಣ್ಣು ಕೊಂಬೆ ಹತ್ತಿ ತೊಟ್ಟಿಗೆ ಸಿಕ್ಕಿಕೊಂಡಿತು! ಅಲ್ಲಿದ್ದವರಿಗೆಲ್ಲ ಆಶ್ಚರ್ಯ, ಪತಿವ್ರತೆ ದ್ರೌಪದಿಯ ಬಗೆಗೆ ಅಭಿಮಾನ. ಇಷ್ಟಾದರೂ ಲೋಕವು ದ್ರೌಪದಿಯತ್ತ ಬೆಟ್ಟು ಮಾಡುವುದು ದುಶ್ಶಾಸನನಿಂದ ಮಾನಭಂಗಕ್ಕೊಳಗಾದವಳು ಎಂದೇ! ಅದಕ್ಕೇ ಹೇಳಿದ್ದು ‘ಜನರಂ ಮೆಚ್ಚಿಸಲಾಗದೈ’ ಎಂದು. ಸೋಮೇಶ್ವರ ಶತಕವನ್ನು ಆಂಧ್ರದ ಪಾಲ್ಕುರಿಕೆಯ ಸೋಮ ಬರೆದನೋ ಅಥವಾ ಧಾರವಾಡದ ಪುಲಿಗೆರೆಯ ಸೋಮ ಬರೆದನೋ ಎಂಬ ಬಗ್ಗೆ ವಿದ್ವಾಂಸರಲ್ಲಿ ಒಮ್ಮತವಿಲ್ಲ.

ಯಾರೇ ಬರೆದಿರಲಿ, ಈ ನೂರು ಪದ್ಯಗಳು ನೀತಿಯ ಗುಳಿಗೆಗಳು ಎಂಬುದು ನಿರ್ವಿವಾದ. ವಾಚಕರ ಮನಸ್ಸಿಗೆ ಹತ್ತುವಂತೆ, ಸುಲಭ ಶೈಲಿಯಲ್ಲಿ ಮನೋಹರವಾದ ಛಂದೋರಚನೆಯಿಂದ ಸಹಜವಾಗಿ ಹೇಳಿರುವ ನೀತಿಬೋಧಕ ಕವಿತೆಗಳಿವು. ಕನ್ನಡದಲ್ಲಿ ಅಪೂರ್ವ ವೆಂದೇ ಹೇಳಬಹುದು. ಇವು ಕನ್ನಡಿಗರಿಗೆ ಎಷ್ಟು ಹಿಡಿಸಿವೆಯೆಂದರೆ ಕೆಲವು ಪದ್ಯಭಾಗಗಳು ಗಾದೆಗಳಂತೆಯೇ ಆಗಿಹೋಗಿವೆ.
‘ಕೆಲವಂ ಬಲ್ಲವರಿಂದ ಕಲ್ತು…’, ‘ಪಲವುಂ ಪಳ್ಳ ಸಮುದ್ರವೈ’, ‘ಬಡವಂ ಬಲ್ಲಿದನಾಗನೇ’, ‘ಸತಿಗೆ ಪಾತಿವ್ರತ್ಯವೇ ಭೂಷಣಂ’, ‘ಮಡಿಯೇ ನಿರ್ಮಲಚಿತ್ತವೈ’, ‘ಕಲಿಸಿದಾತಂ ವರ್ಣಮಾತ್ರಂ ಗುರು’, ‘ಹರ ಕೊಲ್ಲಲ್ ಪರ ಕಾಯ್ವನೇ’ ಮುಂತಾದುವೆಲ್ಲ ಅರಳುಹುರಿದಂಥ ಮಾತುಗಳಲ್ಲಿ ಫಳಫಳ ಹೊಳೆಯುವ ಹರಳುಗಳು. ಈಗಿನ ಪಠ್ಯಪುಸ್ತಕಗಳಲ್ಲಿ ಸೋಮೇಶ್ವರ ಶತಕದ ಪದ್ಯಗಳಿವೆಯೋ ಇಲ್ಲವೋ ಗೊತ್ತಿಲ್ಲ.

ಹಿಂದೆಲ್ಲ ಪ್ರಾಥಮಿಕ ತರಗತಿಗಳ ಪಠ್ಯದಲ್ಲಿ ಇರುತ್ತಿದ್ದವು. ‘ಪ್ರಜೆಯಂ ಪಾಲಿಸಬಲ್ಲೊಡಾತನರಸಂ…’, ‘ಉಡುರಾಜಂ ಕಳೆಗುಂದಿ ಪೆರ್ಚದಿಹನೇ…’, ‘ಇರಿಯಲ್ವಲ್ಲೊಡೆ ವೀರನಾಗು ಧರೆಯೊಳ್…’, ‘ಪೊಡೆಯೊಳ್ ತುಂಬಿರೆ ಪಂಕ…’ ಈ ನಾಲ್ಕು ಪದ್ಯಗಳು ನಮಗೆ ಐದನೆಯ ತರಗತಿಯ ಕನ್ನಡಭಾರತಿ ಪಠ್ಯಪುಸ್ತಕದಲ್ಲಿದ್ದವು. ಅಷ್ಟಾಗಿ ಕವಿಯು ಈ ಪದ್ಯಗಳನ್ನು ರಚಿಸಿದ್ದು ತನ್ನ ಪಾಂಡಿತ್ಯವನ್ನು,
ಕಾವ್ಯಕೌಶಲವನ್ನು ತೋರಿಸಿಕೊಳ್ಳಲಿಕ್ಕಲ್ಲ.

ಸಾಮಾನ್ಯ ಜನರಿಗೆ ಅವರು ಅನುಸರಿಸಬೇಕಾದ ಸಾಮಾನ್ಯ ನೀತಿಗಳನ್ನು ಮನಸ್ಸಿಗೆ ನಾಟುವಂತೆ ತಿಳಿಸುವುದೇ ಕವಿಯ ಉದ್ದೇಶ. ಕಥೆಗಳನ್ನು ಉಲ್ಲೇಖಿಸಿದರೆ ನೀತಿಬೋಧನೆ ಮತ್ತಷ್ಟು ಪರಿಣಾಮಕಾರಿಯೆಂದು ಕವಿಗೆ ಗೊತ್ತು. ಆದ್ದರಿಂದಲೇ ಸೋಮೇಶ್ವರ ಶತಕದ
ಹಲವಾರು ಪದ್ಯಗಳಲ್ಲಿ ಪುರಾಣಪಾತ್ರಗಳನ್ನು ಬಳಸಿ ನೀತಿ ಬೋಧನೆ ಮಾಡಿದ್ದಿದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಅವಲೋಕಿಸೋಣ. ಹಳಗನ್ನಡದ ಸೊಬಗನ್ನೂ ಸವಿಯೋಣ.

ಲೋಕದಲ್ಲಿ ವಿಽಯನ್ನು ಮೀರಲು ಯಾರಿಂದಲೂ ಆಗದೆಂದು ತಿಳಿಸುವ ಪದ್ಯ ಹೀಗಿದೆ: ‘ಮದನಂ ದೇಹವ ನೀಗಿದ ನೃಪವರಂ ಚಂಡಾಲಗಾಳಾದ ಪೋ| ದುದು ಬೊಮ್ಮಂಗೆ ಶಿರಸ್ಸು ಭಾರ್ಗವನು ಕಣ್ಗಾಣಂ ನಳಂ ವಾಜಿಪಂ| ಸುಧೆಯಂ ಕೊಟ್ಟು ಸುರೇಂದ್ರ ಸೋಲ್ತ ಸತಿಯಂ ಪೋಗಾಡಿದಂ ರಾಘವಂ| ವಿಧಿಯಂ ಮೀರುವನಾವನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ||’ ಮನ್ಮಥನು ಮುಕ್ಕಣ್ಣನ ಜ್ವಾಲೆಗೆ ಉರಿದು ಭಸ್ಮವಾದನು.

ರಾಜಶ್ರೇಷ್ಠನಾದ ಹರಿಶ್ಚಂದ್ರನು ಚಂಡಾಲನಿಗೆ ದಾಸನಾದನು. ಶುಕ್ರಾಚಾರ್ಯನು ಒಂದು ಕಣ್ಣನ್ನು ಕಳೆದುಕೊಂಡರೆ ಬ್ರಹ್ಮನಿಗೆ ಒಂದು ತಲೆಯೇ ಹೋಯಿತು. ನಳನು ಕುದುರೆ ಕಾಯುವಂತಾದನು. ಇಂದ್ರನು ಅಮೃತವನ್ನು ಕಳೆದುಕೊಂಡು ಯುದ್ಧದಲ್ಲಿ ಸೋತನು. ಶ್ರೀರಾಮನು ಹೆಂಡತಿಯನ್ನು ಕಳೆದುಕೊಳ್ಳಬೇಕಾಯಿತು. ಒಂದೇ ಪದ್ಯದಲ್ಲಿ ಏಳು ಕಥೆಗಳು! ‘ಹುಲುಬೇಡಂ ಮುರವೈರಿಯಂ ಕುರುಬನಾ ಶೂದ್ರೀಕನಂ ರಾಮನಂ| ಬೆಲೆವೆಣ್ಣಿಂದ ಶಿಖಂಡಿ ಭೀಷ್ಮನುಮನಾ ದ್ರೋಣಾರ್ಯನಂ ವಸ್ತ್ರವಂ| ತೊಳೆವಾತಂ ಹತಮಾಡರೇ ಪಣೆಯೊಳಂ ಪೂರ್ವಾರ್ಜಿತಂ ಹಾಗಿರಲ್| ಕೊಲನೇ ಕ್ಷುದ್ರ ಸಮರ್ಥನಂ ಹರಹರಾ ಶ್ರೀ ಚೆನ್ನಸೋಮೇಶ್ವರಾ||’ ಪದ್ಯದಲ್ಲಿ, ಹಣೆಬರಹವೇ ಹಾಗಿದ್ದರೆ ಸಮರ್ಥನನ್ನು ಅಲ್ಪನಾದವನು ಕೊಲ್ಲಬಲ್ಲ ಎಂದು ತಿಳಿಸಲಿಕ್ಕೆ ಮತ್ತಷ್ಟು ಕಥೆಗಳು.

ಅಲ್ಪನಾದ ಬೇಡನೊಬ್ಬನು ಶ್ರೀಕೃಷ್ಣನನ್ನೂ, ಕುರುಬನೊಬ್ಬನು ಶೂದ್ರೀಕನೆಂಬ ವೀರನನ್ನೂ, ಅಂಬೆಯು ಪರಶುರಾಮನನ್ನೂ, ಶಿಖಂಡಿಯು ಭೀಷ್ಮನನ್ನೂ, ಧೃಷ್ಟದ್ಯುಮ್ನನು ದ್ರೋಣನನ್ನೂ ನಾಶಮಾಡುವುದಕ್ಕೆ ಕಾರಣರಾದರು. ಅಲ್ಪನು ಬಲಿಷ್ಠರ ಮೇಲೆ ಯುದ್ಧಕ್ಕೆ ಹೋದರೆ ಕೇಡು ತಪ್ಪದೆಂದು ಸಾರುವ ಪದ್ಯವೂ ಇದೆ: ‘ತ್ರಿಜಗಾಧೀಶ್ವರನೊಳ್ ಮನೋಜ ಕಲಹಂದಾಳ್ದಗ್ನಿಗೀಡಾದ ವಾ| ರಿಜನಾಭಂಗಿದಿರಾಗಿ ಬಾಣ ಭುಜಸಾಹಸ್ರಂಗಳಂ ನೀಗಿದಂ| ದ್ವಿಜರಾಜಂಗೆಣೆವಂದು ಚಕ್ರಹತಿಯಿಂ ಸ್ವರ್ಭಾನು ತುಂಡಾಗನೇ| ಗಜದೊಳ್ ಸುಂಡಗೆ ಯುದ್ಧವೇ ಹರಹರಾ ಶ್ರೀ ಚೆನ್ನಸೋಮೇಶ್ವರಾ||’ ಈಶ್ವರನೊಡನೆ ಹೋರಾಡಿದ ಮನ್ಮಥನು ಬೂದಿಯಾದನು.

ವಿಷ್ಣುವಿನ ಮೇಲೆ ಯುದ್ಧ ಮಾಡಿದ ಬಾಣಾಸುರನು ತನ್ನ ಸಾವಿರ ತೋಳುಗಳನ್ನೂ ಕಳೆದುಕೊಂಡನು. ಚಂದ್ರನ ಸಮಕ್ಕೆ ಬಂದು ಕುಳಿತ ರಾಹುವು ವಿಷ್ಣವಿನ ಚಕ್ರದಿಂದ ತುಂಡಾದನು. ಆನೆಯ ಮೇಲೆ ಸುಂಡಿಲಿಯು ಯುದ್ಧಮಾಡಲು ಸಾಧ್ಯವೆ? ಇವೆಲ್ಲ ಪದ್ಯಗಳ ಒಂದೊಂದು ಸಾಲನ್ನೂ ಒಂದೆರಡು ಗಂಟೆಗಳ ಕಾಲ ಕಥೆ ಹೇಳುತ್ತಲೇ ವ್ಯಾಖ್ಯಾನಿಸಬಹುದು.

ಕಥೆಗಳೆಂದರೆ ಯಾರಿಗೆ ತಾನೆ ಕಿವಿನಿಮಿರುವುದಿಲ್ಲ! ಕಳ್ಳತನ ಒಳ್ಳೆಯದಲ್ಲ ಎನ್ನುವುದಕ್ಕೊಂದು ಪದ್ಯವಿದೆ: ‘ಸುಳಿದಾ ಹೊಮ್ಮಿಗವೆಯ್ದೆ
ಸೀತೆಯ ಖಳಂ ಕೊಂಡೊಯ್ದು ತಾಂಬಾಳ್ದನೇ| ಇಳಿದಂಬೋಧಿಯ ಬಾಳ್ದನೇ ತಮಸನಂದಾಮ್ನಾಯವಂ ಕದ್ದು ತಾಂ| ತಲೆಯಂ ಕಟ್ಟರೆ ಕಂಚವಾಳ ಮರದೊಳ್ ಶೂದ್ರೀಕ ವೀರಾಖ್ಯನಂ| ಕಳವೇಂ ಕೊಲ್ಲದೆ ಕಾಯ್ವುದೇ ಹರಹರಾ ಶ್ರೀ ಚೆನ್ನಸೋಮೇಶ್ವರಾ||’ ಚಿನ್ನದ ಜಿಂಕೆಯು ಸುಳಿದಾಡುತ್ತಿರುವಂತೆ ಮಾಡಿ ಅಲ್ಲಿದ್ದ ಸೀತೆಯನ್ನು ಕದ್ದೊಯ್ದ ರಾವಣನು ಬದುಕಿದನೆ? ವೇದಗಳನ್ನು ಕದ್ದೊಯ್ದ ರಾಕ್ಷಸನು
ಸಮುದ್ರದಲ್ಲಿ ಅಡಗಿಕೊಂಡರೂ ಉಳಿದನೆ? ಶೂದ್ರೀಕನೆಂಬ ಶೂರನನ್ನು ಕಳ್ಳತನ ಮಾಡಿದುದಕ್ಕಾಗಿ ಕಂಚವಾಳದ ಮರಕ್ಕೆ ನೇಣು ಹಾಕದೆ ಬಿಟ್ಟರೆ? ಕಳ್ಳತನದಿಂದ ಕೇಡೇ ಹೊರತು ಕ್ಷೇಮವಾಗದು.

ಅತಿಯಾದ ಸ್ತ್ರೀವ್ಯಾಮೋಹದ ಕೇಡನ್ನು ತಿಳಿಸಲಿಕ್ಕೂ ಒಂದು ಪದ್ಯವಿದೆ: ‘ಕೃತ ಶಾಪಾನ್ವಿತನಾ ಹಿಮಾಂಶು ಗುರುವಿಂಗೋತ್ರಾರಿಯನ್ಯಾಂಗನಾ| ರತಿಯಿಂ ಕೀಚಕನಂ ಬಕಾರಿ ಮುರಿದಂ ಸುಗ್ರೀವನಿಂ ವಾಲಿ ತಾಂ| ಹತನಾದಂ ದಶಕಂಠನಾ
ಹರಿಶರಕ್ಕೀಡಾದನೇವೇಳ್ವೆನಾ| ನತಿ ಕಾಮರ್ಗತಿ ಹಾನಿಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ||’ ಪರಸ್ತ್ರೀಯನ್ನು ಬಯಸಿದ್ದರಿಂದ ಚಂದ್ರನು ಬೃಹಸ್ಪತಿಯ ಶಾಪಕ್ಕೂ, ಇಂದ್ರನು ಗೌತಮನ ಶಾಪಕ್ಕೂ ಗುರಿಯಾದರು; ಕೀಚಕನು ಭೀಮನಿಂದಲೂ, ವಾಲಿಯು ಸುಗ್ರೀವನಿಂದಲೂ, ರಾವಣನು ರಾಮನಿಂದಲೂ ಹತರಾದರು.

ಮೋಸದ ಬಗೆಗೆ ಮತ್ತೊಂದು: ‘ಪಿಡಿಯಲ್ ಪೊಮ್ಮಿ ಗವೆಂದು ಪೋಗೆ ರಘುಜಂ ಭೂಪುತ್ರಿ ಸಂನ್ಯಾಸಿಯೆಂ| ದಡಿಯಿಟ್ಟಳ್ ದಶಕಂಠ ನುಯ್ದಿವಳನಂದಾಯುಷ್ಯಮಂ ನೀಗಿದಂ| ಕೊಡಬೇಡೆಂದೆನೆ ಶುಕ್ರ ರಾಜ್ಯವನಿತಂ ಪೋಗಾಡಿದಂ ರಾಕ್ಷಸಂ| ಕಡು ಮೋಸಂ ಕೆಡಿಕುಂದಲೈ ಹರಹರಾ ಶ್ರೀ ಚೆನ್ನಸೋಮೇಶ್ವರಾ||’ ಮಾಯಾಮೃಗವನ್ನು ನಿಜವಾದ ಚಿನ್ನದ ಜಿಂಕೆಯೆಂದು ನಂಬಿ ರಾಮನು ರಾವಣನ ಮೋಸಕ್ಕೊಳಗಾದನು.

ಸೀತಾದೇವಿಯು ರಾವಣನನ್ನು ನಿಜವಾದ ಸಂನ್ಯಾಸಿಯೆಂದು ತಿಳಿದು ಪರ್ಣಶಾಲೆಯಿಂದ ಹೊರಬಂದು ಅವನ ಕೈಗೆ ಸಿಕ್ಕಿದಳು.
ಬ್ರಹ್ಮಚಾರಿಯಾಗಿ ಬಂದ ವಾಮನನಿಗೆ ದಾನ ಕೊಡಬೇಡವೆಂದು ಶುಕ್ರನು ಎಷ್ಟು ಹೇಳಿದರೂ ಕೇಳದೆ ಬಲಿಯು ವಾಮನನ  ಮೋಸಕ್ಕೊಳಗಾಗಿ ರಾಜ್ಯವನ್ನೆಲ್ಲ ಕಳೆದುಕೊಂಡನು. ಈ ದೃಶ್ಯಗಳೆಲ್ಲ ಪೌರಾಣಿಕ ನಾಟಕ ನೋಡಿದಂತೆ ವಾಚಕರ ಮನಸ್ಸಿನಲ್ಲಿ ಸುಳಿ
ಯುತ್ತವೆ. ಪದ್ಯ ಪರಿಣಾಮಕಾರಿಯಾಗಲಿಕ್ಕೆ ಇನ್ನೇನು ಬೇಕು?

ದಾನದ ಶ್ರೇಷ್ಠತೆಯನ್ನು ಕೊಂಡಾಡುವ ಪದ್ಯ: ‘ಅಡಿಮೂರೀಯೆನಲೀಯನೇ ಬಲಿನೃಪಂ ಮೂಲೋಕಮಂ ದೇಹಮಂ| ಕಡಿದೀಯೆಂದೆನೆ ಪಕ್ಕಿಗೀಯನೆ ನೃಪಂ ತನ್ನಂಗವಾದ್ಯಂತಮಂ| ಮೃಡಬೇಕೆಂದೆನೆ ಸೀಳ್ದು ತನ್ನ ಸುತನಂ ನೈವೇದ್ಯಮಂ ಮಾಡನೇ|
ಕೊಡುವರ್ಗಾವುದು ದೊಡ್ಡಿತೈ ಹರಹರಾ ಶ್ರೀಚೆನ್ನ ಸೋಮೇಶ್ವರಾ||’ ವಾಮನನು ಮೂರು ಹೆಜ್ಜೆಯಷ್ಟು ನೆಲವನ್ನು ಬೇಡಲು ಬಲಿಚಕ್ರವ ರ್ತಿಯು ಮೂರು ಲೋಕವನ್ನೂ ಕೊಡಲಿಲ್ಲವೆ? ಗಿಡುಗದ ರೂಪದಿಂದ ಬಂದ ಇಂದ್ರನು ಶಿಬಿಯ ದೇಹದಿಂದ ಮಾಂಸವನ್ನು ಕೊಡೆಂದು ಕೇಳಲು ಆತ ದೇಹವನ್ನೆಲ್ಲ ಕೊಟ್ಟು ಬಿಡಲಿಲ್ಲವೆ? ಈಶ್ವರನು ಸಿರಿಯಾಳನ ಮಗನ ಮಾಂಸವನ್ನು ಕೇಳಲಾಗಿ ಸಿರಿಯಾಳನು ಅದನ್ನೂ ಒದಗಿಸಲಿಲ್ಲವೆ? ತ್ಯಾಗಿಗಳಿಗೆ ದಾನಮಾಡುವ ವಿಷಯದಲ್ಲಿ ಯಾವುದೂ ಹೆಚ್ಚಲ್ಲ.

ಇನ್ನು, ಸಾಲವು ಹೇಗೆ ಭಾರವಾಗುತ್ತದೆ ಎಂದು ತಿಳಿಸಲಿಕ್ಕೆ ಬಲಿ ಚಕ್ರವರ್ತಿಯ ಕಥೆಯನ್ನೇ ಬಳಸಿದ್ದು ಈ ಪದ್ಯದಲ್ಲಿ: ‘ರಣದೊಳ್ ಶಕ್ರನ ತೇರನೇರಿದ ಮಹಾಶೈಲಾಳಿ ಬೆಂಬತ್ತ ಮಾ| ರ್ಗಣದಿಂ ಚಿಮ್ಮಿದ ಸಪ್ತಸಾಗರಗಳಂ ದಿಕ್ಕೆಂಟು ಮೂಲೋಕಮಂ| ಕ್ಷಣದೊಳ್ ವೆಚ್ಚವಮಾಡಿ ಬೇಡೆ ಬಲಿ ಸಾಲಕ್ಕಂಜಿ ಬಿಟ್ಟೋಡಿದಂ| ರುಣಭಾರಕ್ಕೆಣೆ ಯಾವುದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ||’ ಬಲಿಚಕ್ರವರ್ತಿಯು ಯುದ್ಧದಲ್ಲಿ ಇಂದ್ರನನ್ನು ಗೆದ್ದು ಅವನ ರಥವನ್ನೇ ಹತ್ತಿದ ಪರಾಕ್ರಮಿ.

ದೊಡ್ಡ ಬೆಟ್ಟಗಳ ಗುಂಪು ಹಿಂದಟ್ಟಿ ಬರಲು ಬಾಣದಿಂದ ತಡೆದವನು; ಇಂಥವನು ಮೂರಡಿ ಭೂಮಿಯನ್ನು ಬೇಡಿದ ವಾಮನನಿಗೆ ಸಪ್ತ ಸಮುದ್ರಗಳನ್ನೂ, ಎಂಟು ದಿಕ್ಕುಗಳನ್ನೂ, ಮೂರು ಲೋಕಗಳನ್ನೂ ಕ್ಷಣಮಾತ್ರದಲ್ಲಿ ದಾನಮಾಡಿಯೂ ಸಾಲವನ್ನು ತೀರಿಸುವುದಕ್ಕೆ ಶಕ್ತಿಯಿಲ್ಲದೆ ಹೆದರಿ ಪಾತಾಳಕ್ಕೆ ಓಡಿಹೋದನು. ಸಾಲಕ್ಕಿಂತ ಹೆಚ್ಚಾದ ಭಾರವು ಯಾವುದೂ ಇಲ್ಲ.

ಗರ್ವದ ಕೆಡುಕಿನ ಬಗೆಗೆ ಈ ಪದ್ಯ: ‘ಖಳ ವೇದಂಗಳನೊಯ್ದನುರ್ವಿತಳಮಂ ತಾಂ ಚಾಪೆವೊಲ್ ಸುತ್ತಿದಂ| ಛಲದಿಂ ಪೋರಿದರೆಲ್ಲರಂ ಗೆಲಿದು ಬಂದಾ ಪೆಂಣ ಕೊಂಡೋಡಿದಂ| ತಲೆಯೊಳ್ ಕಾದಿದರೂರ್ಗಳಂ ಪಡೆದರೆಲ್ಲರ್ ಗೆಲ್ದು ತಾವಾಳ್ದರೇಂ| ಬಲು ಗರ್ವಂ ಕೊಲದಿರ್ಪುದೇ ಹರಹರಾ ಶ್ರೀ ಚೆನ್ನಸೋಮೇಶ್ವರಾ||’ ವೇದಗಳನ್ನು ಕದ್ದೊಯ್ದ ಸೋಮಕಾಸುರನೂ, ಭೂಮಿಯನ್ನು ಚಾಪೆಯಂತೆ ಸುತ್ತಿ ಪಾತಾಳಕ್ಕೊಯ್ದ ಹಿರಣ್ಯಾಕ್ಷನೂ, ರಾಜಪುತ್ರರೆಲ್ಲರನ್ನೂ ಸ್ಪರ್ಧೆಯಲ್ಲಿ ಗೆದ್ದು ರಾಮನು ಪಡೆದಿದ್ದ ಸೀತಾದೇವಿಯನ್ನು ಅಪಹರಿಸಿದ ರಾವಣನೂ, ಬಲದ ಗರ್ವದಿಂದ ಕಾದಿ ಎಲ್ಲ ಪಡೆದರಾದರೂ ತಾವು ಗೆದ್ದುದನ್ನು

ಅನುಭವಿಸಲಿಲ್ಲ. ಅತಿಯಾದ ಸಲುಗೆ-ಸರಸಗಳೂ ಒಳ್ಳೆಯದಲ್ಲ ಎಂದು ತಿಳಿಸಲಿಕ್ಕೆ: ‘ಹರಿಯೊಳ್ ನಾರದ ಮಂದಿವಾಳದೆ ಮಹಾ
ಶಾಪಂಗಳಂ ತಾಳನೇ| ಸುರವೆಣ್ಣಿಂದಲಿ ಪುಷ್ಪದಂತ ವನದೊಳ್ ತಾಂ ಕ್ರೋಡರೂಪಾಗನೇ| ವಿರಸಂ ಬರ್ಪುದು ಬೇಡೆನಲ್ ದೃಪದೆಯಂ ಭೀಮಾರಿ ತಾಂ ನೋಯನೆ| ಸರಸಂ ವೆಗ್ಗಳ ಮಾಗದೈ ಹರಹರಾ ಶ್ರೀಚೆನ್ನಸೋಮೇಶ್ವರಾ||’ ನಾರದನು ವಿಷ್ಣುವಿನಲ್ಲಿ ಹೆಚ್ಚಾದ ಸಲಿಗೆ ತೋರಿಸಿ ಶಪಿತನಾದನು. ಪುಷ್ಪ ದಂತನೆಂಬ ಗಂಧರ್ವನು ಅಪ್ಸರೆಯನ್ನು ತಡೆದುದರಿಂದ ಹಂದಿಯಾಗಿ ಹುಟ್ಟಿದನು. ದ್ರೌಪದಿಯ ಸಂಗ ಬಯಸಿದ ಕೀಚಕನು ಭೀಮನಿಂದ ಹತನಾದನು.

ಇಲ್ಲಿ ಬರೀ ಪುರಾಣಕಥಾಶ್ರವಣವೇ ಮುಖ್ಯವಲ್ಲ. ಆದಿಪ್ರಾಸಕ್ಕಾಗಿಯೋ, ಮತ್ತೇಭವಿಕ್ರೀಡಿತ ವೃತ್ತಕ್ಕೆ ಅಕ್ಷರಗಳು ಹೊಂದಿಕೊಳ್ಳು ವಂತೆಯೋ ಕವಿಯು ಪುರಾಣಪಾತ್ರಗಳ ಹೆಸರನ್ನು ಬರೆವ ರೀತಿಯೂ ಕುತೂಹಲಕರ ಕಲಿಕೆಯೇ. ಉದಾಹರಣೆಗೆ ‘ಮಹಿಯೊಳ್ ಭೂಸುರವೇಷದಿಂ ಕಲಿಯಲ್ ಕರ್ಣಂ ಧನುರ್ವೇದಮಾ| ರಹಿಗೆಟ್ಟಂ ಬಲು ನೊಂದನಿಲ್ವಲ ಮಹಾವಾತಾಪಿಯೊಳ್ ಶುಕ್ರನುಂ| ಅಹಿರಾತ್ಮಜೆ ಮಂತ್ರತಂತ್ರವರಿದಾಣ್ಮಂ ಪೋಗೆ ತಾ ತಂದಳೇ| ಬಹು ವಿದ್ವಾಂಸನು ಭ್ರಾಂತನೈ ಹರಹರಾ ಶ್ರೀಚೆನ್ನಸೋಮೇಶ್ವರಾ||’ ಪದ್ಯ.

ಕರ್ಣನು ಬ್ರಾಹ್ಮಣ ವೇಷ ಧರಿಸಿ ಪರಶುರಾಮನಲ್ಲಿ ಧನುರ್ವಿದ್ಯೆ ಕಲಿತರೂ ಕೇಡನ್ನು ಹೊಂದಿದನು. ಶುಕ್ರನು ಇಲ್ವಲ ವಾತಾಪಿಯೆಂಬ ರಾಕ್ಷಸರಿಗೆ ಮಂತ್ರೋಪದೇಶ ಮಾಡಿ ವ್ಯಥೆಪಟ್ಟನು. ಇಲ್ಲಿ ಕರ್ಣ, ಇಲ್ವಲ, ವಾತಾಪಿ, ಶುಕ್ರ ಪಾತ್ರಗಳ ಹೆಸರುಗಳು ನೇರವಾಗಿಯೇ
ಬಂದಿವೆ. ಆದರೆ ಅಹಿರಾತ್ಮಜೆ ಎಂದರೆ ಯಾರು? ಸಂಸ್ಕೃತದಲ್ಲಿ ಅಹಿ ಎಂಬ ಪದಕ್ಕೆ ಇರುವ ಹಲವಾರು ಅರ್ಥಗಳಲ್ಲಿ ಹಾವು ಎಂಬುದೂ ಒಂದು. ಹಾವಿನ ಮಗಳು ಅಂದರೆ ಕಾರ್ಕೋಟಕನ ಮಗಳು, ವಾಸುಕಿಯ ತಂಗಿ, ಜರತ್ಕಾರು.

ಆಕೆ ಮಂತ್ರತಂತ್ರಗಳನ್ನು ಕಲಿತಿದ್ದರೂ ತನ್ನನ್ನು ಬಿಟ್ಟುಹೋದ ಗಂಡನನ್ನು ಹಿಂದಕ್ಕೆ ಕರೆತರಲಾರದೆ ಹೋದಳು ಎಂದು ಕಥೆ. ಹೀಗೆ ಬೇರೆ ಪದ್ಯಗಳಲ್ಲೂ ಪ್ರಾಸ ಮತ್ತು ಛಂದಸ್ಸಿಗಾಗಿ ಶಿವ ‘ಮೃಡ’ನಾಗುತ್ತಾನೆ. ಕಂಸ ‘ಮಧುರೇಂದ್ರ’ನಾಗುತ್ತಾನೆ. ಅಭಿಮನ್ಯು ‘ಹರಿಯ
ತಂಗಿಯ ಬಾಲ’ನಾಗುತ್ತಾನೆ. ದ್ರೌಪದಿ ‘ಅಗ್ನಿಜೆ’ಯಾಗುತ್ತಾಳೆ. ರಾವಣ ‘ದಶಕಂಠ’ನಾಗುತ್ತಾನೆ. ವಿಷ್ಣು ‘ವಾರಿಜನಾಭ’ ನಾಗುತ್ತಾನೆ.

ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ‘ಸೋಮೇಶ್ವರ ಶತಕ’ ಪುಸ್ತಕದಲ್ಲಿ ಪದ್ಯದ ಭಾವಾರ್ಥ ಮತ್ತು ಟಿಪ್ಪಣಿಯಷ್ಟೇ ಅಲ್ಲ, ಪುರಾಣ ಪಾತ್ರಗಳ ಉಲ್ಲೇಖವಿದ್ದರೆ ಮೂಲಕಥೆಗಳೂ ಅನುಬಂಧದಲ್ಲಿ ಇವೆ. ನೂರು ಪುಟಗಳ ಪುಟ್ಟ ಪುಸ್ತಕ, ಒಳಗಿರುವ ಹೂರಣ ನೂರು ಗ್ರಂಥಗಳಿಗೆ ಸಮವಾದದ್ದು. ಪರಿಷತ್ತು ಈ ಪುಸ್ತಕವನ್ನು ಸಾಹಿತ್ಯ ಸಮ್ಮೇಳನಗಳಲ್ಲಿ ಅಗ್ಗದ ದರದಲ್ಲಿ ಒದಗಿಸುತ್ತದೆ. ನನ್ನ ಬಳಿ ಕೆಲವರ್ಷಗಳ ಹಿಂದೆ ಬೆಂಗಳೂರಿನ ಅಂಕಿತಪುಸ್ತಕ ಅಂಗಡಿಯಿಂದ ಕೊಂಡುತಂದ ಪ್ರತಿ ಇದೆ.

ಮೊನ್ನೆ ಅಂತರಜಾಲಮಥನ ಮಾಡುತ್ತಿದ್ದಾಗ ಇದೇ ಪುಸ್ತಕದ ಪಿಡಿಎಫ್ (ಚಿಜಿಠಿ.qs/oಟಞZoeZಠಿeZhZ) ಉಚಿತವಾಗಿ ಸಿಗುತ್ತದೆ ಯೆಂದೂ ಗೊತ್ತಾಯಿತು. ನನಗನಿಸುವಂತೆ ಈ ಪುಸ್ತಕ ಪ್ರತಿಯೊಬ್ಬ ಕನ್ನಡಿಗನ ಮನೆಯಲ್ಲಿರಬೇಕು. ಹಾಳಾದ ಪಠ್ಯಪುಸ್ತಕಗಳಿಗಿಂತ ಇಂತಹ ನೀತಿಬೋಧೆಯ ಪುಸ್ತಕಗಳನ್ನು ಹೆತ್ತವರೇ ಕೊಂಡು ಮಕ್ಕಳಿಂದಲೂ ಓದಿಸಬೇಕು. ಏಕೆಂದರೆ ಕವಿಯೇ ಹೇಳುವಂತೆ ‘ಮತಿಯಂ ಬುದ್ಧಿಯ ಜಾಣ್ಮೆಯಂ ಗಮಕಮಂ ಗಾಂಭೀರ್ಯಮಂ ನೀತಿಯಾ| ಯತಮಂ ನಿಶ್ಚಲ ಚಿತ್ತಮಂನೃಪವರಾಸ್ಥಾನೋಚಿತಾರ್ಥಂಗಳಂ| ಅತಿಮಾಧುರ್ಯ ಸುಭಾಷಿತಂಗಳ ಮಹಾಸತ್ಕೀರ್ತಿಯಂ ಬಾಳ್ಕೆಯಂ| ಶತಕಾರ್ಥ ಕೊಡದಿರ್ಪುದೇ ಹರಹರಾ ಶ್ರೀ ಚೆನ್ನಸೋಮೇ ಶ್ವರಾ||’ ಈ ಶತಕದ ಅರ್ಥವನ್ನು ಚೆನ್ನಾಗಿ ವಿಚಾರಮಾಡಿ ನೋಡಿದರೆ ವಿವೇಕವೂ ಬುದ್ಧಿಯೂ ಜಾಣ್ಮೆಯೂ, ಓದುವ ಒಳ್ಳೆಯ ಶೈಲಿಯೂ, ಗಾಂಭೀರ್ಯವೂ ನೀತಿಯೂ, ದೃಢಮನಸ್ಸೂ, ರಾಜಾಸ್ಥಾನಕ್ಕೆ ಯೋಗ್ಯವಾದ ಪಾಂಡಿತ್ಯವೂ, ಬಹಳ ಇಂಪಾದ ವಾಕ್ಪಟುತ್ವವೂ, ಒಳ್ಳೆಯ ಕೀರ್ತಿಯೂ ಅರ್ಥಪೂರ್ಣ ಜೀವನವೂ ದೊರೆಯದೆ ಹೋಗದು.