Sunday, 15th December 2024

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ…

ಶಿಶಿರ ಕಾಲ

ತುಳುವಿನಲ್ಲಿ ಕೆಲವರ ಗುಣವನ್ನು ಹೇಳುವುದಕ್ಕೆ ‘ಬೈಪಣೆಯ ನಾಯಿ’ ಎಂದು ಬಳಸುವುದುಂಟು. ಕೊಟ್ಟಿಗೆಯಲ್ಲಿ ದನಗಳಿಗೆ ಅಕ್ಕಚ್ಚು, ಹಿಂಡಿ, ಹುಲ್ಲು ಹಾಕಲಿಕ್ಕೆ ಸ್ವಲ್ಪ ಎತ್ತರದ ಜಾಗ ಮಾಡಿ ಅಲ್ಲೊಂದು ಚಿಕ್ಕ ಸಿಮೆಂಟಿನ ಹೊಂಡ ಮಾಡಿರುತ್ತಾರಲ್ಲ, ಅಲ್ಲಿ ಹಾಕಿದ ಬೈಹುಲ್ಲನ್ನು ದನಗಳು ಸ್ವಲ್ಪ ಮಿಕ್ಕಿಸಿ ಟ್ಟುಕೊಂಡಿರುತ್ತವೆ. ಅದೇ ಸಮಯದಲ್ಲಿ ಮನೆಯ ನಾಯಿ ಆ ಹುಲ್ಲಿನ ಮೇಲೆ ಹೋಗಿ ಬೆಚ್ಚಗೆ ಮಲಗುತ್ತದೆ. ಆಕಳು ಸ್ವಲ್ಪ ಸಮಯದ ನಂತರ, ಎದ್ದು ನಿಂತು ಹುಲ್ಲು ತಿನ್ನಬೇಕೆಂದರೆ ಈ ನಾಯಿಯದು ಗಲಾಟೆ. ದನಕ್ಕೇ ಬೊಗಳಿ ಹೆದರಿಸುತ್ತದೆ.

ನಾಯಿಯೇನೂ ಹುಲ್ಲನ್ನು ತಿನ್ನುವುದಿಲ್ಲ, ದನಕ್ಕೆ ತಿನ್ನಲೂ ಬಿಡುವುದಿಲ್ಲ. ಕೆಲವು ದನಗಳು ನಾಯಿಯನ್ನು ಗುದ್ದಿ ಓಡಿಸಿದರೆ ಇನ್ನು ಬಹುತೇಕ ದನಗಳು ಹೆದರಿ ನಿಲ್ಲುತ್ತವೆ. ಉಸಾಬರಿಯೇ ಬೇಡ, ಸುಮ್ಮನಿದ್ದುಬಿಡೋಣ ಎಂದು ದೂರ ಸರಿಯುತ್ತದೆ. ಈಗೀಗ ಸೋಷಿಯಲ್ ಮೀಡಿಯಾದಲ್ಲಿ, ಯೂಟ್ಯೂಬುಗಳಲ್ಲಿ, ಕೆಲವು ಹೆಸರುವಾಸಿ ಮಾಧ್ಯಮಗಳಲ್ಲಿ ಇಂಥ ‘ಬೈಪಣೆಯ ಜೀವಿಗಳ’ ಹಾವಳಿ ಎಲ್ಲಿಲ್ಲದಷ್ಟು ಹೆಚ್ಚಿದೆ. ಕೆಲವು ದಿನಗಳಿಂದ ಇದು ಎಲ್ಲ ಮಿತಿಯನ್ನೂ ಮೀರಿದ್ದರಿಂದ ಈ ವಿಷಯ ಪ್ರಸ್ತಾಪಿಸಲೇಬೇಕಾಗಿದೆ. ಇದೆಲ್ಲದಕ್ಕೆ ಕಾರಣ ಇನ್ನೆರಡು ವಾರದಲ್ಲಿ ಉದ್ಘಾಟನೆಯಾಗಲಿರುವ ರಾಮ
ಮಂದಿರ; ಅದರ ಶ್ರೇಯಸ್ಸು ಬಿಜೆಪಿಗೆ, ನರೇಂದ್ರ ಮೋದಿ ಯವರಿಗೆ ದಕ್ಕುತ್ತದೆ ಎಂಬುದು. ಸಮಸ್ಯೆ ಮಂದಿರದ್ದಲ್ಲ, ಶ್ರೇಯಸ್ಸಿನದು.

ಯಶಸ್ಸು ಯಾರಿಗೆ ಸಲ್ಲಬೇಕೆನ್ನುವುದು. ಮುಂಬರುವ ಚುನಾವಣೆಯದು. ಹಾಗಾದರೆ ಧಾರ್ಮಿಕ ಭಾವನೆಗಳ ಲಾಭವನ್ನು ಒಂದು ರಾಜಕೀಯ ಪಕ್ಷ
ಪಡೆಯುವುದು ಸರಿಯೇ? ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿ ಭಾರತಕ್ಕೆ ಸಾವಿರದೆಂಟು ತೊಡಕು, ತೊಂದರೆಗಳಿದ್ದವು. ದೇಶವಿಭಜನೆಯ ಸಮಯದಲ್ಲಾದ ಮಾರಣಹೋಮದ ಬಗ್ಗೆ ವಿವರಿಸುವ ಅವಶ್ಯಕತೆಯಿಲ್ಲ ಎಂದುಕೊಳ್ಳುತ್ತೇನೆ. ಬ್ರಿಟಿಷರು ಬಿಟ್ಟು ಹೋಗುವಾಗ ದೇಶವು ನಾಯಿ ಉಂಡು ಬಿಟ್ಟ ಪಾತ್ರೆಯಂತಾಗಿತ್ತು. ಆದರೆ ಆ ಸಮಯದಲ್ಲಿ ಜನರಲ್ಲಿ ಅತ್ಯಂತ ಜಾಗೃತವಾಗಿದ್ದುದು ಎರಡು. ಮೊದಲನೆಯದು ದೇಶಪ್ರೇಮ, ಎರಡನೆಯದು ಧಾರ್ಮಿಕ ಆಸ್ಥೆ. ಇವೆರಡನ್ನೂ ಮೇಲಕ್ಕೆತ್ತಬೇಕಾದದ್ದು ಅಂದಿನ ಸರಕಾರ, ಪ್ರಧಾನಿಗಳ ಕೆಲಸವಾಗಿತ್ತು. ಆದರೆ ಅವೆರಡನ್ನೂ ವ್ಯವಸ್ಥಿತವಾಗಿ ದುರ್ಬಲಗೊಳಿಸುವ, ಬಹುಸಂಖ್ಯಾತ ರನ್ನು, ಸಭ್ಯರನ್ನು ಅಸಹಾಯಕರನ್ನಾಗಿಸುವ ಕೆಲಸ ನಡೆಯಿತು ಎಂಬುದಕ್ಕೆ ಸಾಕ್ಷಿಯಾಗುವ ವಿಷಯ ರಾಮಮಂದಿರ.

ಅದು ಹೇಗೆಂದು ವಿವರಿಸುವುದಕ್ಕಿಂತ ಮೊದಲು ಸೋಮನಾಥ ದೇವಸ್ಥಾನದ ಬಗ್ಗೆ ನೆನಪಿಸಿಕೊಳ್ಳಬೇಕು. ಮೊದಲ ಉಪಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ನವೆಂಬರ್ ೧೯೪೭ರಂದು ಸೋಮನಾಥ ದೇವಸ್ಥಾನವನ್ನು ಪುನರ್ನಿರ್ಮಿಸುವುದಾಗಿ ಘೋಷಣೆಮಾಡಿದ್ದರು. ಈ
ವಿಷಯವನ್ನು ಗಾಂಽಯವರಿಗೆ ಹೇಳಿದಾಗ, ಇಂಥದ್ದಕ್ಕೆಲ್ಲ ಒಪ್ಪಿಕೊಳ್ಳದ ಅವರು ಕೂಡ ತಮ್ಮ ರಾಜ್ಯವೆಂಬ ವ್ಯಾಮೋಹಕ್ಕೋ ಏನೋ, ಒಪ್ಪಿಕೊಂಡಿದ್ದರು. ಅಲ್ಲಿಯೂ ದೇವಸ್ಥಾನದ ಮೇಲೆಯೇ ಮಸೀದಿ ಇತ್ತು, ರಾಮ ಮಂದಿರದಂತೆ. ಆ ದೇವಸ್ಥಾನಕ್ಕೂ ಎರಡರಿಂದ ಮೂರು
ಸಾವಿರಕ್ಕೂ ಮೀರಿದ ಇತಿಹಾಸ. ಒಟ್ಟಾರೆ ಪುನರ್ನಿರ್ಮಾಣವಾಯಿತು.

ಥೇಟ್ ಅಂಥದ್ದೇ ಪರಿಸ್ಥಿತಿಯಿದ್ದ ರಾಮಮಂದಿರ ಮಾತ್ರ ಹಾಗೆಯೇ ಉಳಿಯಿತು. ಅಂದೇ ರಾಮಮಂದಿರ ನಿರ್ಮಿಸಿಬಿಟ್ಟಿದ್ದರೆ ಅದರ ಶ್ರೇಯಸ್ಸು ಕಾಂಗ್ರೆಸ್ಸಿಗೇ ಸಲ್ಲುತ್ತಿತ್ತು, ನಂತರದ ಯಾವುದೇ ಹಿಂಸಾಚಾರಗಳೂ ನಡೆಯುತ್ತಿರಲಿಲ್ಲ. ಆದರೆ ಹಾಗಾಗಲಿಲ್ಲವಲ್ಲ. ೧೯೪೯ರಲ್ಲಿ ಅಯೋಧ್ಯೆಯಲ್ಲಿ ಕೆಲವರು ರಾಮಮೂರ್ತಿಯನ್ನು ಸ್ಥಾಪಿಸಿ ಅದು ಉದ್ಭವ ಮೂರ್ತಿ ಎಂದರು. ಇದರ ನಂತರ ಸಹಸ್ರಾರು ಹಿಂದೂ ಆಸ್ತಿಕರು ಅಲ್ಲಿಗೆ ಬರಲು ಶುರುಮಾಡಿದರು. ವಿವಾದ ಹುಟ್ಟಿಕೊಂಡಾಗ ಅದನ್ನು ಸರಿಮಾಡುವುದು ಬಿಟ್ಟು ಬಾಗಿಲು ಮುಚ್ಚಿದ್ದು ಅಂದಿನ ಕಾಂಗ್ರೆಸ್ ಸರಕಾರ. ಅಲ್ಲಿಂದ ಮುಂದೆ ಹಿಂದೂಗಳೆಲ್ಲ ನಿರಂತರವಾಗಿ ದೇವಸ್ಥಾನ ಪುನರ್ನಿರ್ಮಾಣವಾಗಿ ಪೂಜೆಗೆ ಅವಕಾಶವಾಗಬೇಕು ಎಂದು ಕೇಳಿಕೊಂಡರೂ ಅಡ್ಡಲಾಗಿ ನಿಂತದ್ದು ಕಾಂಗ್ರೆಸ್ ಪಕ್ಷದ ಸರಕಾರವೇ. ರಾಮಮಂದಿರ ನಿರ್ಮಾಣಕ್ಕೆ ಸಂಘಟನೆಯ ಮೂಲಕ ಮೊದಲು ಆಗ್ರಹಿಸಿದ್ದು ವಿಶ್ವ ಹಿಂದೂ ಪರಿಷತ್.

೧೯೮೦ರಲ್ಲಿ. ಅದಾದ ನಂತರ ಈ ವಿಷಯ ನಿಧಾನಕ್ಕೆ ಕಾವು ಪಡೆಯಿತು. ಅದೆಷ್ಟೋ ಗಲಭೆಗಳು, ಹಿಂಸಾಚಾರಗಳು ನಡೆದವು. ಅಂದಿನ ಕಾಂಗ್ರೆಸ್ ಪಕ್ಷ
ಇದೆಲ್ಲವನ್ನೂ ಸರಿಮಾಡಿ, ರಾಮಮಂದಿರವನ್ನು ನಿರ್ಮಿಸುವುದನ್ನು ಬಿಟ್ಟು, ಇವರೆಲ್ಲರನ್ನು ದೇಶದ್ರೋಹಿಗಳಂತೆ ನಡೆಸಿಕೊಂಡಿತು. ಆದರೆ ಅದಾಗಲೇ ರಾಮಮಂದಿರವೆಂಬ ಸೆಂಟಿಮೆಂಟ್ ದೇಶದ ಮೂಲೆಮೂಲೆಯಲ್ಲೂ ಜಾಗೃತವಾಗಿತ್ತು. ರಾಮಮಂದಿರದ ವಿಷಯವನ್ನು ಚುನಾವಣೆಯ ವಿಷಯ
ವಾಗಿ ಜನರೆದುರು ನಿರ್ಧಾರಕ್ಕೆ ಇಟ್ಟದ್ದು ಅಟಲ್ ಬಿಹಾರಿ ವಾಜಪೇಯಿಯವರು. ‘ಒಂದೋ ರಾಮಮಂದಿರಕ್ಕೆ ಜಾಗ ಬಿಟ್ಟು ಅವಕಾಶ ಮಾಡಿಕೊಡಿ, ಇಲ್ಲವೇ ಇದರಿಂದಾಗುವ ಕಷ್ಟವನ್ನು ಅನುಭವಿಸಿ’ ಎಂದು ನಿರ್ಭಿಡೆಯಿಂದ ಹೇಳಿದ್ದು ಅವರು. ಇದೊಂದು ಮಹತ್ವದ ನಿಲುವು. ಚುನಾವಣೆಯನ್ನು ಗೆಲ್ಲುವ ಉದ್ದೇಶದಿಂದಲೇ ಅವರು ಹೇಳಿದ್ದು ಎಂದಿಟ್ಟು ಕೊಳ್ಳೋಣ. ಆದರೆ ಜನರಿಗೆ ಮೊದಲ ಬಾರಿಗೆ ಆಯ್ಕೆಗೆ ಅವಕಾಶವಾಯಿತು.

ಇದರ ಜತೆ ‘ಮಂದಿರ್ ವಹೀ ಬನೇಗಿ’ ಎಂದು ಆಡ್ವಾಣಿ ಶ್ರುತಿ ಜೋಡಿಸಿದರು. ಆ ಕಾರಣಕ್ಕೇ, ೨ ಸೀಟಿನಷ್ಟಿದ್ದ ಬಿಜೆಪಿ ೮೫ಕ್ಕೆ ಮುಟ್ಟಿ ಒಂದು ರಾಷ್ಟ್ರೀಯ
ಪಕ್ಷವೆನಿಸಿಕೊಂಡದ್ದು. ವಿಶ್ವ ಹಿಂದೂ ಪರಿಷತ್ತಿಗೆ ಶಿಲಾನ್ಯಾಸಕ್ಕೆ ಅನುಮತಿ ಕೊಡುವ ಸ್ಥಿತಿಗೆ ರಾಜೀವ್ ಗಾಂಧಿ ಮುಟ್ಟಿದ್ದು ಹೀಗೆ. ಶಾ ಬಾನು ಕೇಸ್‌ನ ಸುಪ್ರೀಂ ಕೋರ್ಟಿನ ತೀರ್ಪನ್ನು ಬದಲಿಸಿದ ರಾಜೀವ್ ಗಾಂಧಿ, ಧಾರ್ಮಿಕ ವಿಷಯದಲ್ಲಿ ತನ್ನ ಅಜ್ಜ, ಅಮ್ಮನಿಗಿಂತ ಭಿನ್ನವಲ್ಲ ಎಂಬ ಕಾರಣಕ್ಕೆ ಗಲಾಟೆಯೆದ್ದಿತ್ತು. ಆಗ ಹಿಂದೂ ಗಳನ್ನು ಸಮಾಧಾನಪಡಿಸಲು ರಾಜೀವ್ ಅಯೋಧ್ಯೆಯ ರಾಮಮಂದಿರದ ಬಾಗಿಲು ತೆರೆಯುವುದಕ್ಕೆ, ಪೂಜೆಗೆ
ಒಪ್ಪಿಕೊಂಡಿದ್ದು.

ಪರಿಸ್ಥಿತಿಯೇ ಹಾಗಾಗಿತ್ತು. ಬಹುಶಃ ಸ್ವಾತಂತ್ರ್ಯಾನಂತರ ದೇಶದಲ್ಲಿ ಮೊದಲ ಬಾರಿಗೆ ಬಹುಸಂಖ್ಯಾತರ ವೋಟಿನ ಚಿಂತೆ ಕಾಂಗ್ರೆಸ್ ಪಕ್ಷಕ್ಕೆ ಎದುರಾ
ದದ್ದಿರಬೇಕು. ಅಲ್ಲಿಯವರೆಗೆ ಹಿಂದೂಗಳೆಲ್ಲ ಸಭ್ಯ-ಮೂಕರಾಗಿದ್ದರು. ಬಿಜೆಪಿ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳು ಒಂದಾದವು. ಶಿಲಾನ್ಯಾಸಕ್ಕೆ ಸರಕಾರ ಒಪ್ಪಬಾರದು ಎಂದು ಲೋಕಸಭೆಯಲ್ಲಿ ಗಲಾಟೆಯೆಬ್ಬಿಸಿದವು. ಆದರೂ ಕಾಂಗ್ರೆಸ್ ಪಕ್ಷ ಹೆದರಿ ಸುಮ್ಮನೆ ಕುಳಿತಿತ್ತು. ಶಿಲಾನ್ಯಾಸವಾಯಿತು. ಅದಾದ ನಂತರ ಬಾಬ್ರಿ ಮಸೀದಿ ಕೆಡವಿದ್ದು, ೨-೩ ಸಾವಿರ ಜನರ ಮಾರಣಹೋಮವಾಗಿದ್ದು ಇತ್ಯಾದಿ. ವಾಜಪೇಯಿ ಮತ್ತು ಆಡ್ವಾಣಿ ಅಂದು ಇದನ್ನು
ಚುನಾವಣೆಯ ವಿಷಯವೆಂದು ಜನರ ಮುಂದೆ ಇತ್ಯರ್ಥಕ್ಕೆ ಇಡದಿದ್ದಲ್ಲಿ, ಮುಂದಿನ ಯಾವ ಬೆಳವಣಿಗೆಯೂ ನಡೆಯುತ್ತಿರಲಿಲ್ಲ.

ವಾಜಪೇಯಿ ಮತ್ತು ಬಿಜೆಪಿ ೧೯೯೬ರಲ್ಲಿ ಹದಿಮೂರು ದಿನಕ್ಕೇ ಸರಿ, ಪ್ರಧಾನಿಯಾಗುವ ಹಂತಕ್ಕೆ ಆ ಪಕ್ಷ ಬೆಳೆಯಲು ಕಾರಣ ರಾಮಮಂದಿರ. ನಂತರ ವಾಜಪೇಯಿ ಸರಕಾರ ಮತ್ತೆ ದೊಡ್ಡ ಪಕ್ಷವಾಗಿ ಆಯ್ಕೆಯಾಗಿ ೧೯೯೮ರಲ್ಲಿ ಅಧಿಕಾರ ಸ್ವೀಕರಿಸುವುದಕ್ಕೂ ರಾಮಮಂದಿರವೇ ಕಾರಣ. ಅದಾಗಲೇ ವಿಷಯ ಕೋರ್ಟಿನಲ್ಲಿತ್ತು ಎಂಬ ಕಾರಣದಿಂದ ವಾಜಪೇಯಿ ಏನನ್ನೂ ಮಾಡಲೇ ಇಲ್ಲ. ೨೦೦೨ರಲ್ಲಿ ಗುಜರಾತಿನಲ್ಲಿ ಅಯೋಧ್ಯೆಯಿಂದ ಬಂದ ೫೯ ಕರಸೇವಕರನ್ನು ರೈಲಿನ ಬಾಗಿಲುಗಳನ್ನು ಮುಚ್ಚಿ ಅಮಾನವೀಯವಾಗಿ ಸುಡಲಾಯಿತು.

ತರುವಾಯ ಗುಜರಾತಿನಲ್ಲಿ ದಂಗೆ. ಆ ಸಮಯದಲ್ಲಿ ಮಾಧ್ಯಮಗಳ ಎದುರು ಮೋದಿಯವರನ್ನು ಕೂರಿಸಿಕೊಂಡು ರಾಜಧರ್ಮವನ್ನು ಪಾಲಿಸಬೇಕಾಗಿ ವಾಜಪೇಯಿ ಹೇಳಿದ್ದರು. ಮೋದಿ, ‘ನಾನು ಮಾಡುತ್ತಿರುವುದು ಅದನ್ನೇ’ ಎಂದು ಮೈಕಿನೆದುರೇ ಪಿಸುಗುಟ್ಟಿದ್ದರು. ಮೋದಿಯವರನ್ನು ಆ ಸಮಯದಲ್ಲಿ ಕೆಳಕ್ಕಿಳಿಸಬೇಕು ಎಂದು ಖುದ್ದು ವಾಜಪೇಯಿ ಬಯಸಿದ್ದರಂತೆ. ಅಂದು ಅವರನ್ನು ತಡೆದು ನಿಲ್ಲಿಸಿದ್ದು ಬಾಳ್ ಠಾಕ್ರೆ.

೨೦೦೪ರ ಎಲೆಕ್ಷನ್ ಸಮಯ. ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಆಡ್ವಾಣಿಯವರ ಭಾಷಣ ಕೇಳಲು ನಾವೊಂದಿಷ್ಟು ಸ್ನೇಹಿತರು ಹೋಗಿದ್ದೆವು. ಅಲ್ಲಿ ಒಂದನ್ನು ಗ್ರಹಿಸಿದ್ದೆ- ಆಡ್ವಾಣಿಯವರ ಭಾಷಣದಲ್ಲಿ ರಾಮಮಂದಿರದ ಪ್ರಸ್ತಾಪ ಒಂದೆರಡು ಬಾರಿ ಚಿಕ್ಕದಾಗಿ ಬಂದುಹೋಯಿತು. ಬಿಜೆಪಿಯ ಪ್ರಣಾಳಿಕೆಯಲ್ಲಿ ರಾಮಮಂದಿರ ನಿರ್ಮಾಣ ಎನ್ನುವುದಿದ್ದರೂ ಅದಕ್ಕೆ ಅವರ ಭಾಷಣದಲ್ಲಿ ಹೆಚ್ಚು ಒತ್ತುಕೊಟ್ಟಿರಲಿಲ್ಲ. ಆ ಭಾಷಣವಷ್ಟೇ ಅಲ್ಲ, ಆ ಚುನಾವಣೆಯಲ್ಲಿ ರಾಮಮಂದಿರದ ವಿಷಯಕ್ಕೆ ಬಿಜೆಪಿ ಅಷ್ಟು ಒತ್ತು ಕೊಡಲೇ ಇಲ್ಲ. ಇದರಿಂದಲೇ ಎಂಬಂತೆ ಬಿಜೆಪಿ ಸೋತು ಹೋಯಿತು.

ಗೆದ್ದಿದ್ದರೆ ಆಡ್ವಾಣಿಯೇ ಪ್ರಧಾನಿ ಎಂದಾಗಿದ್ದ ಎಲೆಕ್ಷನ್ ಅದು. ಸೋಮನಾಥದಿಂದ ರಥಯಾತ್ರೆ ಹೊರಡಿಸಿದ್ದ ಆಡ್ವಾಣಿ ರಾಮಮಂದಿರವನ್ನು ಅಲಕ್ಷ್ಯ ಮಾಡಿದ್ದರ ಪೆಟ್ಟನ್ನು ಅಂದು ಬಿಜೆಪಿ ಅನುಭವಿಸಿತು. ಆಗ ಬಿಜೆಪಿಗೆ ಹೆಚ್ಚಿನ ಹೊಡೆತ ಬಿದ್ದದ್ದು ಹಿಂದಿ ಭಾಷಿಕ ಪ್ರಾಂತ್ಯದಲ್ಲಿ. ಒಟ್ಟಾರೆ, ರಾಮ ಮಂದಿರದ ವಿಷಯ ಎಷ್ಟು ಮುಖ್ಯವೆನ್ನುವುದು ಈ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟವಾಗಿತ್ತು. ೨೦೧೪ರ ಎಲೆಕ್ಷನ್ ನೆನಪಿರಬಹುದು. ನರೇಂದ್ರ ಮೋದಿ ತಮ್ಮ ಪಕ್ಷ ಹಿಂದಿನ ಎರಡು ಚುನಾವಣೆಯಲ್ಲಿ ರಾಮಮಂದಿರ ವನ್ನು ಅಲಕ್ಷಿಸಿದ್ದರ ಪಾಠ ಕಲಿತಂತೆ ಅನ್ನಿಸಿತ್ತು. ಮೋದಿ ‘ಮಂದಿರ್ ವಹೀ ಬನೇಗಿ’ ಎನ್ನಲು ಶುರುಮಾಡಿದ್ದರು. ಸಾಬರ್‌ಮತಿ ಘಟನೆಯ ತರುವಾಯ ನಡೆದ ಬೆಳವಣಿಗೆಗಳು ಅವರಲ್ಲಿ ಜನರಿಗೆ ನಂಬಿಕೆ ಹುಟ್ಟುವುದಕ್ಕೆ ಕಾರಣ ವಾಗಿದ್ದವು.

ಅಂದಿನ ಬಿಜೆಪಿ ಪ್ರಣಾಳಿಕೆಯಲ್ಲಿ ರಾಮಮಂದಿರ ಕಟ್ಟುವುದಕ್ಕೆ ಬೇಕಾಗುವ ಕಾನೂನಾತ್ಮಕ ಹೋರಾಟ ಕೂಡ ಒಂದಾಗಿತ್ತು. ೨೦೧೦ರಲ್ಲಿಯೇ ರಾಮಜನ್ಮಭೂಮಿ ಇತ್ಯರ್ಥವನ್ನು ಅಲಹಾಬಾದ್ ಕೋರ್ಟ್ ಕೊಟ್ಟಾಗಿತ್ತು. ಅದರ ಪ್ರಕಾರ ಇದ್ದ ೨.೭ ಎಕರೆ ಜಾಗವನ್ನು ಮೂರು ಭಾಗವಾಗಿಸಿ, ರಾಮನಿಗೊಂದು ಪಾಲು, ನಿರ್ಮೋಹಿ ಅಖಾಡಾ ಮತ್ತು ಸುನ್ನಿ ವಕ್ ಬೋರ್ಡಿಗೆ ಒಂದೊಂದು ತುಂಡು ಎಂದಾಗಿತ್ತು. ಅದು ಸುಪ್ರೀಂ ಕೋರ್ಟ್
ಮೆಟ್ಟಿಲೇರಿತ್ತು. ೨೦೧೧ರಲ್ಲಿ ಅಲಹಾ ಬಾದ್ ಕೋರ್ಟಿನ ತೀರ್ಪಿಗೆ ಸುಪ್ರೀಂ ಕೋರ್ಟ್ ಸ್ಟೇ ಕೊಟ್ಟಿತು. ನಂತರ ಅಂದಿನ ದೊಡ್ಡ ದೊಡ್ಡ ಹಗರಣಗಳ ನಡುವೆ ಈ ವಿಷಯ ಜನಮಾನಸದಿಂದ ಸರಿದು ನನೆಗುದಿಗೆ ಬಿತ್ತು. ನಂತರ ಮೋದಿ-ಬಿಜೆಪಿ ಸರಕಾರ ೨೦೧೪ರಲ್ಲಿ ಅಧಿಕಾರಕ್ಕೇನೋ ಬಂತು, ಆದರೆ ೨೦೧೬ರವರೆಗೆ ವ್ಯಾಜ್ಯದ ಹಿಯರಿಂಗ್ ಬಿಡಿ, ಯಾವುದೇ ಚಿಕ್ಕ ಬೆಳವಣಿಗೆಯೂ ಆಗಲಿಲ್ಲ.

೨೦೧೫ರಲ್ಲಿ ಇದನ್ನು ಮತ್ತೆ ಮುನ್ನೆಲೆಗೆ ತಂದದ್ದು ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ. ರಾಮಮಂದಿರಕ್ಕೆ ಪೂಜೆಗೆಂದು ಬರುವವರಿಗೆ ಸೌಲಭ್ಯ ಒದಗಿಸಬೇಕೆಂಬ ರಿಟ್ ಅದು. ಅದಾದ ನಂತರ ಸ್ಟೇ ಕೊಟ್ಟ ಸುಪ್ರೀಂ ಕೋರ್ಟಿನಲ್ಲಿ ಪ್ರತಿದಿನ ಇದರ ವಿಚಾರಣೆಯಾಗಿ ಆದಷ್ಟು ಬೇಗ ಇತ್ಯರ್ಥ
ಹೊರಬರಬೇಕು ಎಂದು ಸ್ವಾಮಿ ಮೋದಿಯವರಿಗೆ ಪತ್ರ ಬರೆದರು. ಇದನ್ನು ಅವರಾಗಿಯೇ ಮಾಡಿದರೋ, ಅಥವಾ ಸರಕಾರವೇ ಮಾಡಿಸಿತೋ, ಗೊತ್ತಿಲ್ಲ. ಒಟ್ಟಾರೆ ಅವರು ಬಿಜೆಪಿಯವರಾದದ್ದರಿಂದ ಇದು ಬಿಜೆಪಿಯ ಮೊದಲ ನಡೆ ಎಂದರೆ ತಪ್ಪಿಲ್ಲ. ಆದರೆ ಅಷ್ಟರೊಳಗೇ ೨೦೧೯ರ ಲೋಕಸಭಾ
ಚುನಾವಣೆ ಬಂದುಬಿಟ್ಟಿತು. ಚುನಾವಣೆಯ ಕಾರಣವೇ ಇರಬೇಕು, ಬಿಜೆಪಿ-ಮೋದಿ ಆಗ ಯಾವುದೇ ನಿರ್ಣಯ ತೆಗೆದುಕೊಳ್ಳಲಿಲ್ಲ. ಇದಕ್ಕೆ ಚುನಾವಣೆ ಯಲ್ಲಿ ಹಾನಿಯಾಗಬಹುದೆನ್ನುವ ಕಾರಣವೇ ಇದ್ದಂತಿದೆ. ಅದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡ, ಆ ಪಕ್ಷವೇ ಅನುಮೋದಿ ಸುವ ಕೆಲವು ದೊಡ್ಡ ವಕೀಲರು ಅಲಹಾಬಾದಿನ ತೀರ್ಪನ್ನು ಅನೂರ್ಜಿತಗೊಳಿಸುವಂತೆ ಸುಪ್ರೀಂ ಮೊರೆಹೋಗಿದ್ದರು. ಇದು ಕಾಂಗ್ರೆಸ್ಸಿನ ನಿಲುವು ಎಂಬಂತೆಯೇ ಅಂದು ಬಿಂಬಿತವಾದದ್ದಂತೂ ಸುಳ್ಳಲ್ಲ.

೨೦೧೯ರಲ್ಲಿ, ಮೋದಿ-ಬಿಜೆಪಿ ಸರಕಾರ ಪುನಃ ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲಿ ಸುಪ್ರೀಂ ಕೋರ್ಟ್ ಪ್ರತಿದಿನ ಹಿಯರಿಂಗ್ ಮಾಡಬೇಕೆಂಬ ಅನುಮೋದನೆಯನ್ನು ಸ್ವೀಕರಿಸಿತು ಮತ್ತು ಇತ್ಯರ್ಥ ಮಾಡಲು ಐದು ನ್ಯಾಯಾಧೀಶರನ್ನೊಳಗೊಂಡ ಪೀಠ ಶುರುಮಾಡಿತು. ನಲವತ್ತು ದಿನ,
ಪ್ರತಿನಿತ್ಯ ವಿಚಾರಣೆ. ೫-೦ ಸುಪ್ರೀಂ ಕೋರ್ಟ್‌ನ ತೀರ್ಪು ರಾಮಮಂದಿರದ ಪರವಾಗಿ ಇತ್ಯರ್ಥವಾಗಿಹೋಯಿತು. ಸೋಮನಾಥ ದೇವಸ್ಥಾನದ ಪುನರ್‌ನಿರ್ಮಾಣವನ್ನು ನೆಹರು ಒಪ್ಪಿರಲಿಲ್ಲ. ‘ಇದು ಹಿಂದೂ ಪುನರುಜ್ಜೀವನ, ನನ್ನ ಸಹಮತವಿಲ್ಲ’ ಎಂದಿದ್ದರು.

ಬಹುಶಃ ಗಾಂಧಿ ಒಪ್ಪಿದ್ದಕ್ಕೇ ಅದು ಅಂದು ಸಾಧ್ಯವಾದದ್ದು. ಸೋಮನಾಥ ದೇವಸ್ಥಾನ ಉದ್ಘಾಟನೆಗೆ ಅಧ್ಯಕ್ಷರಿಂದ ಹಿಡಿದು ಯಾರೂ ಭಾಗವಹಿಸ ಬಾರದೆಂದು ನೆಹರು ಅಂದಿನ ರಾಷ್ಟ್ರಾಧ್ಯಕ್ಷರಿಗೆ ಪತ್ರ ಬರೆದಿದ್ದರು. ರಾಜೀವ್ ಗಾಂಽ ತುಷ್ಟೀಕರಣಕ್ಕೆಂದು ಶಾ ಬಾನು ಕೇಸ್ ಹಿಂಪಡೆದಾಗ ಇತ್ತ ಬ್ಯಾಲೆನ್ಸ್ ಮಾಡಲು ಪೂಜೆಗೆ ಅವಕಾಶ ಕೊಟ್ಟದ್ದು ಅನಿವಾರ್ಯತೆಯಿಂದ.

೧೯೯೧ರ PZಛಿo ಟ್ಛ Uಟ್ಟoeಜಿm Zಠಿ, ಪೂಜಾ ಸ್ಥಳಗಳನ್ನು ಸ್ವಾತಂತ್ರ್ಯ ಸಮಯದಲ್ಲಿ, ೧೯೪೭ರಲ್ಲಿ ಹೇಗಿತ್ತೋ ಹಾಗೆಯೇ ಮುಂದುವರಿಸಿಕೊಂಡು ಹೋಗಬೇಕೆಂಬ ಕಾನೂನು, ಈ ಮೂಲಕ ಯಾವುದೇ ಹಿಂದೂ ತನ್ನ ಅತಿಕ್ರಮಿಸಿದ ದೇವಸ್ಥಾನವನ್ನು ಪಡೆಯುವಂತಿಲ್ಲ. ಇದಾದ ನಂತರವೇ
ಬಾಬ್ರಿ ಮಸೀದಿ ಕೆಡವಿದ್ದು. ೨೦೦೮ರಲ್ಲಿ ಕೋರ್ಟಿಗೆ, ‘ರಾಮಸೇತುವನ್ನು ನಾಶಮಾಡಿದ್ದು ರಾಮನೇ’ ಎಂದು ಸರಕಾರವೇ ಹೇಳಿತ್ತು. ವಾಲ್ಮೀಕಿ ರಾಮಾಯಣ ಸತ್ಯಘಟನೆ ಎನ್ನುವುದಕ್ಕೆ ಸಾಕ್ಷ್ಯವಿಲ್ಲ, ಅದೊಂದು ಕಾಲ್ಪನಿಕ ಕಥೆ ಎಂದು ಅಫಿಡವಿಟ್ಟು ಸಲ್ಲಿಸಿದ್ದೂ ಅಂದಿನ ಕಾಂಗ್ರೆಸ್ ಸರಕಾರವೇ.
ಇದು ಮನಮೋಹನ್ ಸಿಂಗ್ ಅವರ ಸರಕಾರಿ ನಿಲುವಾಗಿತ್ತು.

ಹೀಗೆ ಹೇಳುತ್ತಾ ಹೋದರೆ ಒಂದೆರಡಲ್ಲ. ಇಷ್ಟೆಲ್ಲಾ ಕಥೆಯಿರುವಾಗ, ಇತಿಹಾಸ ನಮ್ಮ ಎದುರಿಗೇ ಸ್ಪಷ್ಟವಾಗಿ ಇರುವಾಗ, ಈ ಎಲ್ಲ ಯಶಸ್ಸನ್ನು ಬಿಜೆಪಿ ಮತ್ತು ನರೇಂದ್ರ ಮೋದಿ ಪಡೆಯುವುದು ಅದು ಹೇಗೆ ತಪ್ಪಾಗುತ್ತದೆ? ಒಂದು ಪಕ್ಷ ಪ್ರಣಾಳಿಕೆಯಂತೆ ನಡೆದರೆ ಅದು ಪರೋಕ್ಷವಾಗಿ ಜನರ ಇಚ್ಛೆಯಂತೆ ನಡೆದಂತಾಯಿತಲ್ಲ. ಆರ್ಡಿನೆನ್ಸ್ ತಂದೋ, ಅಥವಾ ಆ ಭೂಮಿಯನ್ನು ರಾಷ್ಟ್ರೀಕರಣಗೊಳಿಸಿಯೋ ಯಾವುದೇ ಸರಕಾರ ಇದನ್ನು ಎಂದೋ ಬಗೆಹರಿಸಬಹುದಿತ್ತು. ಮೋದಿ ಸರಕಾರವೂ ಅದನ್ನು ಮಾಡಬಹುದಿತ್ತು. ಆದರೆ ಇದೆಲ್ಲವೂ ಆರ್ಟಿಕಲ್ ೩೭೦ ತೆಗೆದಂತೆ ತೀರಾ ವ್ಯವಸ್ಥಿತವಾಗಿ ಪೂರೈಸಿರುವುದಂತೂ ಸುಳ್ಳಲ್ಲ.

ಪಕ್ಷ ಯಾವುದೇ ಇರಲಿ, ಒಳ್ಳೆಯ ಕೆಲಸ ಮಾಡಿದರೆ ಅದರ ಯಶಸ್ಸನ್ನು ಪಡೆಯುವುದು ಒಳ್ಳೆಯ ನಡೆ. ಅದು ಹುಟ್ಟು ಹಾಕುವ ನಂಬಿಕೆ ಪ್ರಜಾಪ್ರಭುತ್ವ ದಲ್ಲಿ ತೀರಾ ಅವಶ್ಯಕ. ಅದುವೇ ಸತ್ಯವಾದಲ್ಲಿ ಅದನ್ನು ಹೇಳಲು ಮಾಧ್ಯಮಗಳು ಹಿಂಜರಿಯಬೇಕಾಗಿಲ್ಲ. ಅದುವೇ ನಿಜವಾದ ಪತ್ರಿಕೋದ್ಯಮ. ಈಗ ಪ್ರಶ್ನಿಸಬೇಕಾದದ್ದು ಇದಲ್ಲ. ಬದಲಿಗೆ, ಯಾವಾಗ ಈ ರೀತಿ ಸಿಕ್ಕಿಕೊಂಡಿರುವ ಉಳಿದ ದೇವಸ್ಥಾನಗಳು ಪುನರ್ನಿರ್ಮಾಣ ವಾಗುತ್ತವೆ? ದೇವಸ್ಥಾನಗಳಿಗೆ ಸ್ವಾಯುತ್ತತೆ ಯಾವಾಗ ಸಿಗುತ್ತದೆ? ದೇವಸ್ಥಾನಕ್ಕೆ ಆಸ್ತಿಕರು ಹಾಕುವ ದುಡ್ಡು ಸರಕಾರದ ಬೊಕ್ಕಸಕ್ಕೆ ಸೇರಿ, ಭಾವನೆಗೆ ವ್ಯತಿರಿಕ್ತವಾದುದಕ್ಕೆ ಬಳಕೆ ಯಾಗುವುದು ಯಾವಾಗ ನಿಲ್ಲುತ್ತದೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಈಗ ಹಾಗಬೇಕಿದೆ. ಇವೆಲ್ಲ ಹೇಳುವಾಗ ಗಜಾನನ ಶರ್ಮರ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ’ ಎಂಬ ಸೊಲ್ಲು ನೆನಪಾಗುತ್ತದೆ.