ಸಂದರ್ಭ – ಸ್ವಾರಸ್ಯ
ಮಲ್ಲಿಕಾರ್ಜುನ ಹೆಗ್ಗಳಗಿ
ಬೆಂಗಳೂರು ಗ್ರಾಮಾಂತರ ಲೋಕಸಭೆ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಖ್ಯಾತ ಹೃದಯರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಗಳು ಅನಸೂಯಾ ಅವರ ಮದುವೆಯ ಕಥೆ ತುಂಬ ಸ್ವಾರಸ್ಯಕರವಾಗಿದೆ. ಸ್ವತಃ ಮಂಜುನಾಥ್ ಅವರೇ ಹೇಳಿದ ತಮ್ಮ ಮದುವೆಯ ಸಂಗತಿಯನ್ನು ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರರಾವ್ ಅವರು ‘ಸಮಾಜಮುಖಿ’ ಕೃತಿಯಲ್ಲಿ ಸೊಗಸಾಗಿ ದಾಖಲಿಸಿದ್ದಾರೆ.
ಮಂಜುನಾಥ್ ಅವರು ಮೈಸೂರಿನಲ್ಲಿ ಎಂ.ಡಿ. ಮುಗಿಸಿ ಚನ್ನರಾಯಪಟ್ಟಣದಲ್ಲಿ ೧೯೮೧ರಲ್ಲಿ ಆಸ್ಪತ್ರೆ ಆರಂಭಿಸಿ ಉತ್ತಮ ವೈದ್ಯರೆಂದು ಬಹುಬೇಗನೆ ಹೆಸರು ಮಾಡಿದರು. ಆಗ ಜನತಾ ಪಾರ್ಟಿಯ ಶಾಸಕರಾಗಿದ್ದ ದೇವೇಗೌಡರು ಬೆಂಗಳೂರಿನ ವಿಲ್ಸನ್ ಗಾರ್ಡನ್ ಬಡಾವಣೆಯ ಬಾಡಿಗೆ ಮನೆಯೊಂದ ರಲ್ಲಿ ವಾಸವಾಗಿದ್ದರು. ಡಾ.ಮಂಜುನಾಥ್ ಅವರು ಅದೊಂದು ಮುಂಜಾನೆ ದೇವೇಗೌಡರನ್ನು ಭೇಟಿಮಾಡಲು ಹೋದರು. ಹೊರಗೆ ಹೋಗಲು ಸಜ್ಜಾಗಿದ್ದ ದೇವೇಗೌಡರನ್ನು ಕಂಡು, ‘ನಿಮ್ಮ ಮಗಳು ಅನಸೂಯಾ ಅವರನ್ನು ಮದುವೆಯಾಗಲು ಬಯಸಿದ್ದೇನೆ’ ಎಂದು ಧೈರ್ಯವಾಗಿ ಪ್ರಸ್ತಾಪ ಮಾಡಿದರು. ಯುವಕನ ಮಾತು ಕೇಳಿ ಕ್ಷಣಕಾಲ ಗಲಿಬಿಲಿಗೊಂಡ ಗೌಡರು ಹೆಚ್ಚು ಮಾತನಾಡದೆ ತಮ್ಮ ಕಾರಿನಲ್ಲೇ ಅವರನ್ನು ಕಬ್ಬನ್ ಪಾರ್ಕಿಗೆ ಕರೆದುಕೊಂಡು ಬಂದರು.
‘ಅನಸೂಯಾಳನ್ನು ನೀವು ಎಲ್ಲಿ ಭೇಟಿಯಾದ್ರಿ? ನೀವಿಬ್ಬರೂ ಪರಸ್ಪರ ಮಾತನಾಡಿಕೊಂಡಿದ್ದೀರಾ?’ ಎಂದು ಗೌಡರು ಸ್ವಲ್ಪ ಆತಂಕದ ಧ್ವನಿಯಲ್ಲೇ
ಮಂಜುನಾಥ್‌ರನ್ನು ಪ್ರಶ್ನಿಸಿದರು. ಅದಕ್ಕೆ ಮಂಜುನಾಥ್ ‘ನಿಮ್ಮ ಮಗಳನ್ನು ನಾನು ನೋಡಿಲ್ಲ; ಆದರೆ ಆಕೆಯ ಬಗ್ಗೆ ನಮ್ಮ ಮನೆಯವರು ಹಾಗೂ ಸಂಬಂಽಕರು ಬಹಳ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ. ನೀವು ನನ್ನ ತಾಯಿಯ ಕಡೆಯಿಂದ ಸಂಬಂಧಿಕರು. ಹೀಗಾಗಿ ಖುದ್ದು ಭೇಟಿ ಮಾಡಿ ಮಾತನಾಡುವ ಉದ್ದೇಶದಿಂದ ನಿಮ್ಮ ಬಳಿ ಬಂದಿದ್ದೇನೆ’ ಎಂದರು.
‘ನನ್ನ ಮಗಳು ನನ್ನ ಹಾಗೆ ಕಪ್ಪಗೆ ಇದ್ದಾಳೆ, ನಿಮಗೆ ಇಷ್ಟವಾಗಲಿಕ್ಕಿಲ್ಲ’ಎಂದರು ಗೌಡರು. ‘ತಂದೆ-ತಾಯಿಯ ಸಲಹೆ ಮೇರೆಗೆ ನಾನು ಈ ನಿರ್ಧಾರ ಮಾಡಿ
ಬಂದಿದ್ದೇನೆ. ನನಗೆ ವರದಕ್ಷಿಣೆ ಯಾವುದೂ ಬೇಡ, ಸರಳ ಮದುವೆಯಲ್ಲಿ ನನಗೆ ಆಸಕ್ತಿ ಇದೆ. ತಾವು ನಿಧಾನಕ್ಕೆ ಆಲೋಚಿಸಿ ತಿಳಿಸಿರಿ’ ಎಂದು ಮಂಜು ನಾಥ್ ಹೇಳಿದಾಗ ದೇವೇಗೌಡರು ಇನ್ನೂ ಹೆಚ್ಚು ಗೊಂದಲದಲ್ಲಿ ಬಿದ್ದರು. ಮಗಳ ಭವಿಷ್ಯದ ಕುರಿತು ಚಿಂತಿಸುವ ಎಲ್ಲ ತಂದೆ-ತಾಯಿಯರಲ್ಲಿ ಕಾಣುವ ಕುತೂಹಲ ಸಹಜವಾಗಿ ಗೌಡರನ್ನೂ ಕಾಡತೊಡಗಿತು. ತಮ್ಮ ಆತ್ಮೀಯರಲ್ಲಿ ಹಾಗೂ ಜ್ಯೋತಿಷಿಗಳಲ್ಲಿ ಹುಡುಗನ ಬಗ್ಗೆ ಸಾಕಷ್ಟು ವಿಚಾರಿಸಿ ದರು. ಎಲ್ಲರಿಂದಲೂ ಮೆಚ್ಚುಗೆಯ ಮಾತುಗಳು ಕೇಳಿಬಂದವು.
ವರದಕ್ಷಿಣೆ ಅಥವಾ ಕಾಣಿಕೆಗಳಿಲ್ಲದೆ ೧೯೮೨ರಲ್ಲಿ ಡಾ. ಮಂಜುನಾಥ್ ಮತ್ತು ಅನಸೂಯಾ ಅವರ ವಿವಾಹ ನಡೆಯಿತು. ಖರ್ಚು ಜಾಸ್ತಿ ಬರುತ್ತದೆ ಎನ್ನುವ ಕಾರಣಕ್ಕೆ ವಿವಾಹ ಸಮಾರಂಭದ ವಿಡಿಯೋ ಕೂಡ ಮಾಡಲಿಲ್ಲ. ಡಾ.ಮಂಜುನಾಥ್ ಅವರ ಮನೆಗೆ ಮೊದಲ ಬಾರಿಗೆ ದೇವೇಗೌಡರು ಸರಕಾರಿ
ಬಸ್ಸಿನಲ್ಲಿಯೇ ಬಂದಿದ್ದರು. ಮದುವೆಯ ನಂತರ ಅನಸೂಯಾ ಅವರು ಗೃಹವಿಜ್ಞಾನದಲ್ಲಿ ಪಿಎಚ್.ಡಿ. ಮಾಡಿದರು. ಈ ದಂಪತಿಯ ಇಬ್ಬರು
ಮಕ್ಕಳೂ ವೈದ್ಯರಾಗಿದ್ದಾರೆ. ಮಂಜುನಾಥ್‌ರಂಥ ಅಳಿಯ ಸಿಕ್ಕಿದ್ದು ನನ್ನ ಪುಣ್ಯ ಎನ್ನುತ್ತಾರೆ ಈಗ ಗೌಡರು!
(ಲೇಖಕರು ಹವ್ಯಾಸಿ ಬರಹಗಾರರು)