ಶಶಾಂಕಣ
ಶಶಿಧರ ಹಾಲಾಡಿ
ನೀಲ ಸಾಮ್ರಾಟ ಹಕ್ಕಿ – ನಮ್ಮ ಸಹ್ಯಾದ್ರಿಯ ಕಾಡಿನಲ್ಲಿ ವಾಸಿಸುವ ಈ ಪುಟ್ಟ ಹಕ್ಕಿಗೆ ಇಷ್ಟು ಚಂದದ ಹೆಸರನ್ನಿಡಲು ತೇಜಸ್ವಿ ಯವರಿಂದ ಮಾತ್ರ ಸಾಧ್ಯ!
ಬ್ಲಾಕ್ ನೇಪ್ಡ್ ಬ್ಲೂ ಮೊನಾರ್ಚ್ – ಕ್ಯಾಚರ್ ಎಂಬ ಇಂಗ್ಲಿಷ್ ಹೆಸರನ್ನು ಕನ್ನಡಕ್ಕೆ ತರುವಾಗ ತೇಜಸ್ವಿಯವರು ಬಳಸಿದ ಪದಗಳು ವಿಶಿಷ್ಟ. 1980ರ ದಶಕದಲ್ಲಿ ಉದಯವಾಣಿ ದೀಪಾವಳಿ ವಿಶೇಷಾಂಕದಲ್ಲಿ ಈ ಪುಟಾಣಿ, ಸುಂದರ ಹಕ್ಕಿಯ ಕುರಿತು ಅವರೊಂದು ನುಡಿಚಿತ್ರ (ಚಿತ್ರ ಲೇಖನ) ಬರೆದಿದ್ದರು. ಆ ಹಕ್ಕಿಯ ಛಾಯಾಚಿತ್ರಗಳನ್ನು ಮೂಡಿಗೆರೆಯ ಸರಹದ್ದಿನ ಕಾಡಿನಲ್ಲಿ ಕುಳಿತು, ತೇಜಸ್ವಿಯವರೇ ಸ್ವತಃ ಕ್ಲಿಕ್ಕಿಸಿದ್ದರು.
ಹಕ್ಕಿಯೊಂದು ಗೂಡುಕಟ್ಟಿ, ಮೊಟ್ಟಯಿಟ್ಟು, ಕಾವು ಕೊಟ್ಟು, ಮರಿಮಾಡಿ, ಆ ಮರಿಗಳಿಗೆ ಆಹಾರ ತಂದುಕೊಟ್ಟು, ಬೆಳೆಸಿ, ಹಾರಲು ಕಲಿಸುವ ಪ್ರಕ್ರಿಯೆಯನ್ನು ಪ್ರತಿದಿನ ಗಮನಿಸುವ ಅದೃಷ್ಟ ಸಿಕ್ಕಿದರೆ, ಅದೊಂದು ವಿಶೇಷ ಅನುಭೂತಿ. ನಮ್ಮ ಹಳ್ಳಿಯ ಮನೆಯಲ್ಲಿ ಹಕ್ಕಿಯೊಂದು ಗೂಡುಕಟ್ಟಿ, ಮರಿ ಮಾಡುವುದನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ದೊರಕಿತ್ತು. ಕೆಲವು
ಹಕ್ಕಿಗಳಿಗೆ ಮನುಷ್ಯನ ಸಾಂಗತ್ಯ ಎಂದರೆ ಇಷ್ಟ.
ಬಹುಷಃ, ಮನುಷ್ಯರ ಮನೆಯ ಸುತ್ತಮುತ್ತಲೇ ಗೂಡುಕಟ್ಟಿದರೆ ಭಯ ಕಡಿಮೆ ಎಂಬ ಅಭಿಮತವೂ ಅವುಗಳಲ್ಲಿರಬೇಕು! ಇಲ್ಲವಾದರೆ, ನಮ್ಮ ಮನೆಯ ಉಪ್ಪರಿಗೆ ಕಿಟಿಕಿಯ ಹತ್ತಿರವೇ, ಪ್ರತಿವರ್ಷವೂ ಗೂಡುಕಟ್ಟುತ್ತಿದ್ದ ಆ ಸೂರಕ್ಕಿಯ ಧೈರ್ಯವನ್ನು
ಹೇಗೆಂದು ವಿಶ್ಲೇಷಿಸುವುದು! ನಾನಾಗ ಹೈಸ್ಕೂಲಿನಲ್ಲಿ ಓದುತ್ತಿದ್ದೆ. ನಮ್ಮ ಮನೆಯಲ್ಲಿ ಹಳೆಯ ಕಾಲದ ಫಿಲಿಪ್ಸ್ ರೇಡಿಯೋ
ಇತ್ತು. ಬ್ಯಾಟರಿ ಸೆಲ್ ಶಕ್ತಿಯಿಂದ ಮಧುರ ಗೀತೆಗಳನ್ನು ಕೇಳಿಸುತ್ತಿದ್ದ ಆ ರೇಡಿಯೋಗಳಿಗೆ ಏರಿಯಲ್ ಎಂಬ ಸಂಪರ್ಕ ಬೇಕಿತ್ತು.
ಮನೆಯ ಉಪ್ಪರಿಗೆಯ ತುದಿಯಲ್ಲಿ, ಉದ್ದನೆಯ ವಯರಿನ ವಿನ್ಯಾಸವನ್ನು ಅಳವಡಿಸಿ, ಅದನ್ನು ಸಂಪರ್ಕಿಸುವ ವಯರನ್ನು ರೇಡಿಯೋದ ಹಿಂಭಾಗದಲ್ಲಿರದ್ದ ರಂಧ್ರದಲ್ಲಿ ಅಳವಡಿಸಿದಾಗ ಮಾತ್ರ, ಅದು ದೂರದ ಭದ್ರಾವತಿ ಸ್ಟೇಷನ್ನ ತರಂಗಗಳನ್ನು ಗ್ರಹಿಸುತ್ತಿತ್ತು. ಉಪ್ಪರಿಗೆಯಲ್ಲಿ ತೂಗು ಹಾಕಿದ್ದ ಏರಿಯಲ್ ತಂತಿಗಳಿಗೆ ಸಂಪರ್ಕ ನೀಡುವ ಒಂದು ಕಪ್ಪನೆಯ ವಯರು ಉದ್ದಕ್ಕೂ ಇಳಿಬಂದು, ಚಾವಡಿಯಲ್ಲಿದ್ದ ರೇಡಿಯೋಕ್ಕೆ ಸಿಕ್ಕಿಕೊಂಡಿತ್ತು.
ಈ ಕಪ್ಪನೆಯ ವಯರನ್ನು ಕಂಡರೆ, ಆ ಸೂರಕ್ಕಿ ದಂಪತಿಗಳಿಗೆ ಅದೇನೋ ಪ್ರೀತಿ, ವಿಶ್ವಾಸ. ಉಪ್ಪರಿಗೆಯ ಹೊರಭಾಗದ ಗೋಡೆ ಯಿಂದ ಇಳಿಬಂದಿದ್ದ ಆ ವಯರಿಗೆ ತಮ್ಮ ಗೂಡನ್ನು ಅಂಟಿಸಿದ್ದವು. ತರಗಲೆ, ಬೂರುಗದ ಹತ್ತಿಯ ಚೂರು, ಜೇಡರ ಬಲೆ
ಮೊದಲಾದ ಚಿಕ್ಕಪುಟ್ಟ ಸಾಮಗ್ರಿಗಳಿಂದ ತಯಾರಿಸಿದ ಆ ಗೂಡಿಗೆ ಒಂದು ಪ್ರವೇಶದ್ವಾರ. ನಮ್ಮ ಮನೆಯ ಎದುರಿನಲ್ಲಿ ಸದಾ ನೀರಿನಿಂದ ತುಂಬಿರುತ್ತಿದ್ದ ಅಗೇಡಿಯ ಮೇಲೆ ಜೋತಾಡುವಂತಿದ್ದ ಆ ಗೂಡಿನ ಪ್ರವೇಶ ದ್ವಾರವು, ಬಯಲಿನ ಕಡೆಗೆ ತೆರೆದು ಕೊಂಡಿತ್ತು.
ಒಂದು ಸಂಜೆ ಗೂಡು ಕಟ್ಟುವ ಕೆಲಸ ಮುಗಿದಿರಬೇಕು. ಆ ಪುಟಾಣಿ ಸೂರಕ್ಕಿ, ತನ್ನ ಉದ್ದನೆಯ ಕೊಕ್ಕನ್ನು ಹೊರಗೆ ಚಾಚಿ ಕೊಂಡು, ಆ ಗೂಡಿನಲ್ಲಿ ಹುದುಗಿ ಕುಳಿತಿತ್ತು! ಮೊಟ್ಟೆಯಿಟ್ಟು, ಆ ಮೊಟ್ಟೆಗಳಿಗೆ ಕಾವುಕೊಡಲು ಕುಳಿತಿತ್ತು ಎನಿಸುತ್ತದೆ. ನಮ್ಮ ಮನೆಯ ಮುಂಭಾಗದ ಜಗಲಿಯಲ್ಲಿ ನಿಂತರೆ, ಸುಮಾರು ಎಂಟು ಅಡಿ ದೂರದಲ್ಲಿ, ಆರೇಳು ಅಡಿ ಎತ್ತರದಲ್ಲಿ ಇದ್ದ ಆ ತೂಗಾ ಡುವ ಗೂಡು ನಮಗೆಲ್ಲಾ ಸ್ಪಷ್ಟವಾಗಿ ಕಾಣಿಸುತ್ತಿತ್ತು.
ಎಷ್ಟು ಸ್ಪಷ್ಟ ಎಂದರೆ, ಆ ಸೂರಕ್ಕಿ ಹೊರಗೆ ಚಾಚಿದ್ದ ಒಂದಿಂಚು ಉದ್ದದ ಕೊಕ್ಕಿನ ವಿನ್ಯಾಸ, ಆ ಕೊಕ್ಕಿನ ತುದಿಯಿಂದ ಆಗಾಗ ಹೊರಗೆ ಚಾಚುತ್ತಿದ್ದ ತೆಳ್ಳನೆಯ ನಾಲಗೆಯಂತಿರುವ ಹೀರುಕೊಳವೆ ಕಾಣಿಸುವಷ್ಟು! ಸೂರಕ್ಕಿ ಅಥವಾ ಸನ್ಬರ್ಡ್ಗಳಲ್ಲಿ ಹಲವು ಪ್ರಭೇದಗಳಿವೆ. ಪರ್ಪಲ್ ಸನ್ಬರ್ಡ್, ಪರ್ಪಲ್ ರಂಪ್ಡ್ ಸನ್ಬರ್ಡ್ ಇವೆರಡು ಸಾಮಾನ್ಯವಾಗಿ ಕಾಣಸಿಗುವ, ನಗರಗಳಲ್ಲೂ ಗೂಡುಕಟ್ಟಿ ಮರಿ ಮಾಡುವ ಸುಂದರ ಹಕ್ಕಿಗಳು.
ನಮ್ಮ ಹಳ್ಳಿಯಲ್ಲಿ ಅಂದು ಗೂಡು ಕಟ್ಟಿದ್ದು ಲೋಟೆನ್ಸ್ ಸನ್ಬರ್ಡ್ ಅಥವಾ ಲೋಟೆನ್ಸ್ ಸೂರಕ್ಕಿ. ಈ ಹೆಸರನ್ನು ನಾನು
ನಂತರದ ದಿನಗಳಲ್ಲಿ ಸಲೀಂ ಆಲಿಯವರ ಪುಸ್ತಕ ಓದಿ, ಪತ್ತೆ ಮಾಡಿದೆ. ಲೋಟೆನ್ಸ್ ಸನ್ಬರ್ಡ್ ಬಹುಮಟ್ಟಿಗೆ ಪರ್ಪಲ್ ಸನ್ಬರ್ಡ್ ರೀತಿಯೇ ಇದ್ದರೂ, ಗಾತ್ರದಲ್ಲಿ ತುಸು ದೊಡ್ಡದು. ಮಾಮೂಲಿ ಸೂರಕ್ಕಿಯ ಕೊಕ್ಕು ಅರ್ಧ ಇಂಚು ಉದ್ದನೆಯ
ದಾಗಿದ್ದರೆ, ಲೋಟೆನ್ಸ್ ಸೂರಕ್ಕಿಯ ಕೊಕ್ಕು ಸುಮಾರು ಒಂದು ಇಂಚು ಉದ್ದ. ಅದರ ಮುಖದಲ್ಲಿ, ಈ ಕೊಕ್ಕೇ ದೊಡ್ಡದಾಗಿ ನೀಡಿಕೊಂಡಂತೆ ಕಾಣಿಸುತ್ತದೆ!
ಗಂಡು ಹಕ್ಕಿ ಪೂರ್ಣ ಕಪ್ಪು. ಹೆಣ್ಣು ಹಕ್ಕಿ ತುಸು ಮಾಸಲು ಬಣ್ಣ. ಈ ಹಕ್ಕಿಯನ್ನು ಗುರುತಿಸಲು ಅದರ ಕರ್ಕಶ ದನಿ ಹೆಚ್ಚು ಸಹಕಾರಿ. ನಮ್ಮ ಮನೆಯ ಜಗಲಿಯ ಮೇಲಿದ್ದ ವಯರಿಗೆ ಗೂಡು ಕಟ್ಟಿ, ಆ ಸೂರಕ್ಕಿ ದಂಪತಿಗಳು ಮೊಟ್ಟೆಯಿಟ್ಟು ಮರಿ ಮಾಡಿ, ಮರಿಗಳಿಗೆ ಹಾರಲು ಕಲಿಸಿ ಕರೆದುಕೊಂಡು ಹೋದವು! ತಮ್ಮ ಮರಿಗಳಿಗೆ ಪ್ರತಿದಿನ ಅವು ಕೀಟಗಳನ್ನು ತಂದು ತಿನ್ನಿಸುವುದನ್ನು
ಹತ್ತಿರದಿಂದ ನೋಡುವ ಅವಕಾಶ. ಜತೆಯಲ್ಲೇ, ಗೂಡಿನಲ್ಲಿದ್ದ ಕಲ್ಮಶಗಳನ್ನು ಸಹ ಕೊಕ್ಕಿನಲ್ಲಿ ಕಚ್ಚಿ ಹೊರಗೆ ಕೊಂಡೊಯ್ದು, ಚೊಕ್ಕಟವಾಗಿಡುತ್ತಿದ್ದವು!
ಅದನ್ನೆಲ್ಲಾ ಆ ಹಕ್ಕಿಗಳಿಗೆ ಹೇಳಿಕೊಟ್ಟವರಾದರೂ ಯಾರು? ನಮಗೆ ಅಚ್ಚರಿ ಎಂದರೆ, ಮುಂದಿನ ವರ್ಷವೂ ಅದೇ ವಯರಿಗೆ ಆ ಸೂರಕ್ಕಿಗಳು ತಮ್ಮ ಗೂಡನ್ನು ಸಿದ್ದವು. ಆದರೆ ಆ ವರ್ಷ ಒಂದು ಪುಟ್ಟ ಅನಾಹುತವಾಯಿತು. ಆಗಿನ್ನೂ ಗೂಡು ಶೇ.90ರಷ್ಟು
ಮುಗಿದಿತ್ತು ಅಥವಾ ಪೂರ್ತಿಯಾಗಿತ್ತೋ ಸರಿಯಾಗಿ ನೆನಪಿಲ್ಲ. ಅದೇ ಸಮಯದಲ್ಲಿ ದೀಪಾವಳಿ ಹಬ್ಬ ಬಂತು. ಆಗಿನ ದಿನಗಳಲ್ಲಿ ಪಟಾಕಿಗಳನ್ನು ಸುಡುವುದೆಂದರೆ ನಮ್ಮಪ್ಪನಿಗೆ ವಿಪರೀತ ಹುಚ್ಚು.
ಹಬ್ಬ ಆಚರಿಸಲು ತಂದಿದ್ದ ಒಂದೆರಡು ಬಿರುಸುಗಳನ್ನು ಹಕ್ಕಿ ಗೂಡಿನ ಕೆಳಗೆ, ಜಗಲಿಯ ಮೇಲೆ ಇಟ್ಟು ಹಚ್ಚಿದರು ನಮ್ಮಪ್ಪ. ‘ಆ ಜಗಲಿಯ ಮೇಲೆ ಬಿರುಸನ್ನಿಟ್ಟು ಹಚ್ಚಬೇಡಿ, ಅಲ್ಲೇ ಮೇಲೆ ಸೂರಕ್ಕಿಯ ಗೂಡು ಇದೆ’ ಎಂದು ನಾನು ಕೂಗಿಕೊಂಡೆ. ‘ಏನೂ
ಆಗಲ್ಲ ಬಿಡು, ಗೂಡು ಎತ್ತರದಲ್ಲಿದೆ’ ಎಂದು, ಅಲ್ಲೇ ಇಟ್ಟು ಬಿರುಸಿಗೆ ಬೆಂಕಿ ಹಚ್ಚಿದರು. ಬರ್ ಎಂದು ಮೇಲಕ್ಕೆ ನೆಗೆದ ಬಿರುಸಿನ ಕಿಡಿಗಳು ಸೂರಕ್ಕಿಯ ಗೂಡಿಗೆ ತಗುಲಿದವು. ಒಂದೇ ಕ್ಷಣದಲ್ಲಿ ಸೂರಕ್ಕಿಯ ಗೂಡು ಭಸ್ಮ!
ಪಾಪ, ಮರುದಿನ ಬೆಳಿಗ್ಗೆ ಅಲ್ಲೇ ಸುತ್ತ ಮುತ್ತ ಹಾರಾಡುತ್ತಿದ್ದ ಸೂರಕ್ಕಿಗಳು, ತಮ್ಮ ಉರಿದು ಹೋದ ಗೂಡನ್ನು ಕಂಡು ಮರು ಗಿದವೋ ಏನೋ. ಅವುಗಳಿಗೆ ಭಯವಾಗಿರಬೇಕು, ಅವುಗಳ ಗೂಡೇ ಸುಟ್ಟು ಹೋಯಿತು, ಇನ್ನು ನಮ್ಮ ಮನೆಯ ಹತ್ತಿರ ಅವು ಗೂಡು ಕಟ್ಟುವುದಿಲ್ಲವೇನೋ ಎಂದುಕೊಂಡೆ ನಾನು!
ಆದರೆ, ಸೂರಕ್ಕಿಗಳು ಯಾವುದೇ ಭಯವಿಲ್ಲದೇ, ಮರುವರ್ಷವೂ ಅದೇ ಜಾಗದಲ್ಲಿ ತಮ್ಮ ಗೂಡು ಕಟ್ಟಿದವು. ಆದರೆ ಈ ವರ್ಷ ಮತ್ತೊಂದು ಗಂಡಾಂತರ ಕಾದಿತ್ತು. ನಮ್ಮ ಉಪ್ಪರಿಗೆಯ ತುದಿಯಲ್ಲಿ ಇಲಿಗಳು ವಾಸಿಸುತ್ತಿದ್ದುದು ಸಹ ಸಾಮಾನ್ಯ ಸಂಗತಿ. ಆ
ಇಲಿಗಳನ್ನು ಹುಡುಕಿಕೊಂಡು ಹಗಲಿನ ಹೊತ್ತಿನಲ್ಲಿ ಹಾವುಗಳು ಸಹ ಬರುತ್ತಿದ್ದವು! ಮನೆಯ ಮಾಡಿನ ಮೇಲೆ ಹಾವು ನಿಧಾನವಾಗಿ ಸಂಚರಿಸುತ್ತಾ, ಇಲಿಗಳ ವಾಸನೆಯನ್ನು ಗ್ರಹಿಸಲು ತನ್ನ ನಾಲಗೆಯನ್ನು ಝಳಪಿಸುತ್ತಾ ಓಡಾಡುವುದನ್ನು ನಾನು ಹಲವು ಬಾರಿ ಕಂಡಿದ್ದೆ.
‘ಅದು ಅದರ ಪಾಡಿಗೆ ಬಂದು ಹೋಗುತ್ತದೆ, ನಮಗೆ ಏನೂ ಮಾಡುವುದಿಲ್ಲ’ ಎನ್ನುತ್ತಿದ್ದರು ನಮ್ಮ ಅಜ್ಜಿ! ಆ ವರ್ಷ ಮಾತ್ರ, ಆ ರೀತಿ ಉಪ್ಪರಿಗೆಯ ಮಾಡಿನ ಮೇಲೆ ಇಲಿಗಳನ್ನು ಹುಡುಕುತ್ತಾ ಬಂದ ಒಂದು ನಾಗರಹಾವು, ನಿಧಾನವಾಗಿ ಸೂರಕ್ಕಿಯ ಗೂಡಿನ ಕಡೆ ಚಲಿಸಿತು. ಆ ನಾಗರಹಾವಿಗೆ ಅದೆಂತಹ ಕೌಶಲವಿತ್ತೆಂದರೆ, ಗೂಡಿನ ಕಡೆ ನಿಧಾನವಾಗಿ ಚಲಿಸಿ, ವಯರಿಗೆ ಅಂಟಿಕೊಂಡಿದ್ದ ಸೂರಕ್ಕಿಯ ಗೂಡನ್ನು ಪತ್ತೆ ಮಾಡೇ ಬಿಟ್ಟಿತು. ಆ ಹಾವು ಹಕ್ಕಿಗೂಡಿನ ಬಾಯನ್ನು ಗುರುತಿಸಿ, ಅದರೊಳಗೆ ಇಣುಕಿತು!
ಹತ್ತಿರದಲ್ಲೇ ಇದ್ದ ಸೂರಕ್ಕಿಗಳು ಜೋರಾಗಿ ಕೂಗುತ್ತಾ, ಅತ್ತಿತ್ತ ಹಾರಾಡುತ್ತಾ ಆರ್ತನಾದ ಮಾಡುತ್ತಿದ್ದವು. ಆಗ ಗೂಡಿನಲ್ಲಿ ಮೊಟ್ಟೆ ಇತ್ತೋ ಇಲ್ಲವೋ ನನಗೆ ಸ್ಪಷ್ಟವಾಗಿ ಗೊತ್ತಿಲ್ಲ; ಹಾವು ಮೊಟ್ಟೆಯನ್ನು ನುಂಗಿದ್ದನ್ನು ಸಹ ನಾನು ಕಣ್ಣಾರೆ ನೋಡಿರ ಲಿಲ್ಲ. ಆದರೆ, ಆ ಎರಡು ಹಕ್ಕಿಗಳು ಅತ್ತಿಂದಿತ್ತ ಹಾರಾಡುತ್ತಾ, ಸನಿಹದ ಮಾವಿನ ಮರದ ಟೊಂಗೆಯ ಮೇಲೆ ಒಮ್ಮೊಮ್ಮೆ ಕುಳಿತು, ಮತ್ತೆ ಇತ್ತ ಹಾರಿ ಬರುತ್ತಾ, ಕೂಗುತ್ತಿದ್ದ ಪರಿಯನ್ನು ಕಂಡರೆ ಮಾತ್ರ, ಏನೋ ದೊಡ್ಡ ಅನಾಹುತ ಆಗಿರಲೇಬೇಕು ಎನಿಸಿತು.
ಕೆಲವು ನಿಮಿಷಗಳ ನಂತರ ಹಾವು ಕೆಳಗಿಳಿದು, ತನ್ನ ಪಾಡಿಗೆ ತನ್ನ ಬಿಲವನ್ನು ಹುಡುಕಿಕೊಂಡು ಹೊರಟಿತು. ಸೂರಕ್ಕಿಗಳಿಗೆ ತಮ್ಮ ಗೂಡಿಗೆ ಭೇಟಿಕೊಟ್ಟ ಆ ನಾಗರಹಾವನ್ನು ಕಂಡು ಏನು ಅನಿಸಿತೋ, ಎಷ್ಟು ಭಯಪಟ್ಟವೋ! ಆ ಗೂಡನ್ನೇ ಬಿಟ್ಟು ಹೋದವು. ಮಾತ್ರವಲ್ಲ, ಮುಂದೆಂದೂ ಆ ವಯರಿಗೆ ಅಂಟಿದಂತೆ ತಮ್ಮ ಗೂಡನ್ನು ಕಟ್ಟಲೇ ಇಲ್ಲ. ದೀಪಾವಳಿಯ ದಿನ
ಬೆಂಕಿ ತಗುಲಿ ಗೂಡು ಭಸ್ಮವಾದರೂ, ಅವು ಬೆದರಲಿಲ್ಲ. ಆದರೆ ನಾಗರಹಾವು ತಮ್ಮ ಗೂಡಿಗೆ ಭೇಟಿಕೊಟ್ಟದ್ದನ್ನು ಕಂಡು ಹೆದರಿದವು. ನಂತರದ ವರ್ಷಗಳಲ್ಲಿ ನಮ್ಮ ಮನೆಯ ಸುತ್ತ ಮುತ್ತ ಲೋಟೆನ್ಸ್ ಸೂರಕ್ಕಿಗಳು ಹಾರಾಡುವುದನ್ನು ಕಂಡಿದ್ದೆ ನಾದರೂ, ಆ ಜಾಗದಲ್ಲಿ ಅವು ಮತ್ತೆ ಗೂಡು ಕಟ್ಟಲಿಲ್ಲ.
ಸೂರಕ್ಕಿಯ ಗೂಡನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದ್ದರೂ, ಅದರ ಛಾಯಾಚಿತ್ರ ತೆಗೆಯುವ ಅವಕಾಶ ನನಗಿರಲಿಲ್ಲ. ಅಂದಿನ ದಿನಗಳಲ್ಲಿ ನಮ್ಮ ಹಳ್ಳಿಯಲ್ಲೇ ಯಾರ ಬಳಿಯಲ್ಲೂ ಕ್ಯಾಮೆರಾ ಇರಲಿಲ್ಲ ಎನಿಸುತ್ತದೆ! ನಾನು ಉದ್ಯೋಗಸ್ಥನಾದ ನಂತರ, ಒಂದು ಫಿಲಂ ಕ್ಯಾಮೆರಾ ಕೊಂಡುಕೊಂಡೆ. ‘ಹಕ್ಕಿಯ ಗೂಡು ಕಂಡರೆ ತಿಳಿಸು, ಫೋಟೋ ತೆಗೆಯುತ್ತೇನೆ’ ಎಂದು ತಾರಿಕಟ್ಟೆಯಲ್ಲಿದ್ದ ಬಂಧು, ರಾಜಣ್ಣನಿಗೆ ಹೇಳಿದ್ದೆ.
‘ಮನೆಯ ಹತ್ತಿರವೇ ಪುಟಾಣಿ ಹಕ್ಕಿಯೊಂದು ಗೂಡು ಕಟ್ಟಿದೆ, ಫೋಟೋ ತೆಗೆಯಬಹುದು, ಬಾ’ ಎಂದು ರಾಜಣ್ಣ ಕಾಗದ ಬರೆದ.
ಕ್ಯಾಮೆರಾ ಹೊತ್ತು ತಾರಿಕಟ್ಟೆಗೆ ಹೋದೆ. ರಾಜಣ್ಣನ ಮನೆಯ ಎದುರು ತುಸು ದೂರದಲ್ಲಿದ್ದ ತೇಗದ ಗಿಡದಲ್ಲಿ ದರ್ಜಿ ಹಕ್ಕಿ ಯೊಂದು ಗೂಡುಕಟ್ಟಿತ್ತು. ಆ ಗೂಡಿನ ಫೋಟೋ ಕ್ಲಿಕ್ಕಿಸಲು ನನಗೆ ಅನುಕೂಲವಾಗಲೆಂದು, ಸುತ್ತಲಿನ ಕುರುಚಲು ಗಿಡಗಳನ್ನು ರಾಜಣ್ಣ ಚೊಕ್ಕಟ ಮಾಡಿದ್ದ. ‘ಹಾಗೆ ಮಾಡಬಾರದಿತ್ತು, ಹಕ್ಕಿಗೆ ಹೆದರಿಕೆ ಆಗುತ್ತೆ’ ಎಂದೆ ನಾನು.
ಆ ಗೂಡಿನಲ್ಲಿ ಎರಡು ಮರಿಗಳಿದ್ದವು. ನಾವಿಬ್ಬರೂ ಗೂಡಿನ ಹತ್ತಿರ ಸುಳಿದಾಡುವುದನ್ನು ಕಂಡು ತಾಯಿ ಹಕ್ಕಿಗೆ ಗಾಬರಿ ಯಾಗಿರಬೇಕು. ಆಚೀಚಿನ ಗಿಡಗಳಲ್ಲಿ ಕುಳಿತು, ಜೋರಾಗಿ ಕೂಗತೊಡಗಿತು. ನಾನು ಕ್ಯಾಮೆರಾ ಫೋಕಸ್ ಮಾಡಲು ಆರಂಭಿಸಿದೆ. ‘ಇನ್ನೂ ಒಂದೆರಡು ಎಲೆ, ಗೆಲ್ಲು ತೆಗೆದು ಹಾಕಿ, ಇನ್ನಷ್ಟು ಜಾಗ ಮಾಡಿಕೊಡಲೆ?’ ಎಂದು ರಾಜಣ್ಣ ಕೇಳಿದ. ‘ಖಂಡಿತಾ ಬೇಡ, ಆ ಹಕ್ಕಿಗೆ ತೊಂದರೆ ಆಗುತ್ತದೆ’ ಎಂದೆ.
ಸ್ಪಷ್ಟವಾಗಿ ಚಿತ್ರ ತೆಗೆಯಲು ಇನ್ನಷ್ಟು ಹತ್ತಿರ ಹೋದೆ. ತಾಯಿ ಹಕ್ಕಿ ಇನ್ನಷ್ಟು ತೀವ್ರವಾಗಿ ಕೂಗತೊಡಗಿತು. ತನ್ನ ಮರಿಗಳಿಗೆ ಅಪಾಯ ಮಾಡಲು ಬಂದಿದ್ದೇನೆ ಎಂದೇ ಅದು ಗ್ರಹಿಸಿರಬೇಕು. ನಾನಿನ್ನೂ ಗೂಡಿನ ಒಂದೇ ಒಂದು ಫೋಟೋ ತೆಗೆದಿರಲಿಲ್ಲ, ಅದೇಕೋ ಒಮ್ಮೆಗೇ ಮನಸ್ಸು ಕಲವಿಲವಾಯಿತು. ಆ ಪುಟಾಣಿ ಮರಿಗಳ ಹತ್ತಿರ ಹೋಗಿ, ಅವುಗಳ ದಿನಚರಿಗೆ ಭಂಗ ತರುವಂತೆ ನಾನು ಫೋಟೋ ತೆಗೆಯಬೇಕೆ? ನಾವಿಬ್ಬರೂ ಅಷ್ಟು ಹತ್ತಿರ ಸುಳಿದಾಡಿದ್ದನ್ನು ಕಂಡು, ತಾಯಿ ಹಕ್ಕಿ, ಬೆದರಿ, ಖಾಯಂ ಆಗಿ ಆ ಜಾಗವನ್ನು ತೊರೆದರೆ, ಆ ಕ್ಷಣದಿಂದಲೇ ಆ ಮರಿಗಳು ಅನಾಥವಾಗಬಹುದಲ್ಲವೆ? ನಾನು ಫೋಟೋ ತೆಗೆಯುವುದು ಮುಖ್ಯವೇ ಅಥವಾ ಆ ಹಕ್ಕಿಗೂಡಿನ ಮರಿಗಳು ತಾಯಿಯ ಆರೈಕೆ ಪಡೆದು, ಬೆಳೆಯುವುದು ಮುಖ್ಯವೆ? ಅದೇಕೋ ಆ ಕ್ಷಣದಲ್ಲಿ, ನಮ್ಮ ಹಳ್ಳಿ
ಮನೆಯಲ್ಲಿ ಅಂದು ನಾಗರಹಾವನ್ನು ತಮ್ಮ ಗೂಡಿನ ಬಳಿ ಕಂಡು ಬೆದರಿ, ಆರ್ತನಾದ ಮಾಡುತ್ತಿದ್ದ ಲೋಟೆನ್ಸ್ ಸೂರಕ್ಕಿಯ ನೆನಪಾಯಿತು.
ರಾಜಣ್ಣನಿಗೆ ಹೇಳಿದೆ ‘ಫೋಟೋ ತೆಗೆಯುವುದಿಲ್ಲ ಮಾರಾಯ, ಈ ಹಕ್ಕಿ ತನ್ನ ಮರಿಗಳನ್ನು ಕ್ಷೇಮವಾಗಿ ಬೆಳೆಸಲಿ’. ಕ್ಯಾಮೆರಾ ವನ್ನು ಬ್ಯಾಗಿಗೆ ಸೇರಿಸಿದೆ. ಆ ದರ್ಜಿ ಹಕ್ಕಿಯ ಮರಿಗಳು ಬೆಳೆಯಲಿ ಎಂದು ಆಶಿಸಿ, ಆ ಗೂಡಿನ ಒಂದೇ ಒಂದು ಫೋಟೋ ಚಿತ್ರಿಸಿದೇ ಊರಿಗೆ ವಾಪಸಾದೆ.
ಸೂರಕ್ಕಿ ಅಥವಾ ಸನ್ಬರ್ಡ್ಗಳಲ್ಲಿ ಹಲವು ಪ್ರಭೇದಗಳಿವೆ. ಪರ್ಪಲ್ ಸನ್ಬರ್ಡ್, ಪರ್ಪಲ್ ರಂಪ್ಡ್ ಸನ್ಬರ್ಡ್ ಇವೆರಡು ಸಾಮಾನ್ಯವಾಗಿ ಕಾಣಸಿಗುವ, ನಗರಗಳಲ್ಲೂ ಗೂಡುಕಟ್ಟಿ ಮರಿ ಮಾಡುವ ಸುಂದರ ಹಕ್ಕಿಗಳು. ನಮ್ಮ ಹಳ್ಳಿಯಲ್ಲಿ ಅಂದು ಗೂಡು ಕಟ್ಟಿದ್ದು ಲೋಟೆನ್ಸ್ ಸನ್ಬರ್ಡ್ ಅಥವಾ ಲೋಟೆನ್ಸ್ ಸೂರಕ್ಕಿ. ಲೋಟೆನ್ಸ್ ಸನ್ ಬರ್ಡ್ ಬಹುಮಟ್ಟಿಗೆ ಪರ್ಪಲ್ ಸನ್ಬರ್ಡ್ ರೀತಿಯೇ ಇದ್ದರೂ, ಗಾತ್ರದಲ್ಲಿ ತುಸು ದೊಡ್ಡದು.
ಮಾಮೂಲಿ ಸೂರಕ್ಕಿಯ ಕೊಕ್ಕು ಅರ್ಧ ಇಂಚು ಉದ್ದನೆಯದಾಗಿದ್ದರೆ, ಲೋಟೆನ್ಸ್ ಸೂರಕ್ಕಿಯ ಕೊಕ್ಕು ಸುಮಾರು ಒಂದು ಇಂಚು ಉದ್ದ.ಅದರ ಮುಖದಲ್ಲಿ, ಈ ಕೊಕ್ಕೇ ದೊಡ್ಡದಾಗಿ ನೀಡಿಕೊಂಡಂತೆ ಕಾಣಿಸುತ್ತದೆ!