Tuesday, 10th September 2024

ಅಪಾಯಕಾರಿ ಸೊರೋಸ್ ಜತೆ ಕೈ ಜೋಡಣೆ !

ವೀಕೆಂಡ್ ವಿತ್ ಮೋಹನ್

camohanbn@gmail.com

ಜಾರ್ಜ್ ಸೊರೋಸ್ ಮೂಲತಃ ಹಂಗರಿಯಲ್ಲಿ ಹುಟ್ಟಿ ಅಮೆರಿಕದ ನ್ಯೂಯಾರ್ಕ್ ನಲ್ಲಿ ವ್ಯವಹಾರ ನಡೆಸುತ್ತಿರುವ ೯೨ ವರ್ಷದ ಬಿಲಿಯನೇರ್. ೧೯೯೨ ರಲ್ಲಿ ಇಂಗ್ಲೆಂಡಿನ ಷೇರು ಮಾರುಕಟ್ಟೆಯನ್ನು ತಲ್ಲಣಗೊಳಿಸಿ ಬಿಲಿಯನ್‌ಗಟ್ಟಲೆ ಹಣಗಳಿಸಿದವನೀತ. ಆ ಸಮಯದಲ್ಲಿ ಇಂಗ್ಲೆಂಡ್‌ನ ಆರ್ಥಿಕ ಸ್ಥಿತಿ ಸರಿಯಿರಲಿಲ್ಲ, ಅತಿಹೆಚ್ಚಿನ ನಿರುದ್ಯೋಗ, ಬಡತನ ವಿತ್ತು. ಕೈಗಾರಿಕೆಗಳಿಗೆ ಬಂಡವಾಳ ಹರಿದುಬರುತ್ತಿರಲಿಲ್ಲ.

ಇಂಥ ಪರಿಸ್ಥಿತಿಯಲ್ಲಿ ಅಲ್ಲಿನ ಕರೆನ್ಸಿ ಪೌಂಡ್ ಪಾತಾಳಕ್ಕೆ ಕುಸಿಯತೊಡಗಿತ್ತು. ಯುರೋಪಿನ ಇತರ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡ ಇಂಗ್ಲೆಂಡ್, ತನ್ನ ಕರೆನ್ಸಿಯನ್ನು ಹತೋಟಿಗೆ ತರಲೆಂದು ಒಂದಷ್ಟು ಆರ್ಥಿಕ ನೀತಿಗಳನ್ನು ಜಾರಿ ಮಾಡಿತ್ತು. ಆದರೆ ಮುಳುಗುತ್ತಿದ್ದ ಇಂಗ್ಲೆಂಡ್‌ನ
ಆರ್ಥಿಕತೆಯಲ್ಲಿ ಸೊರೋಸ್‌ಗೆ ಹಣಮಾಡುವ ಆಸೆ ಯಾಗಿತ್ತು. ಅಲ್ಲಿನ ಷೇರು ಮಾರುಕಟ್ಟೆಯನ್ನು ತಲ್ಲಣಗೊಳಿಸಿದ್ದ ‘Black Wednesday’ಯ ಹಿಂದಿನ ರೂವಾರಿ ಈತನೇ. ಮಾರುಕಟ್ಟೆಯಲ್ಲಿ ಪೌಂಡ್ ಕುಸಿಯುತ್ತಿದ್ದುದನ್ನು ಅವಕಾಶವಾಗಿ ಬಳಸಿಕೊಂಡ ಈತ, ಸುಮಾರು ಒಂದು ಬಿಲಿಯನ್ ಪೌಂಡ್ ಕರೆನ್ಸಿಯನ್ನು ಬ್ಯಾಂಕಿನಿಂದ ಸಾಲಪಡೆದು, ಷೇರು ಮಾರುಕಟ್ಟೆಯಲ್ಲಿ ಇಂಗ್ಲೆಂಡ್ ನಿಗದಿಪಡಿಸಿದ್ದ ಮಾರಾಟಬೆಲೆಯ ಮಿತಿಗಿಂತಲೂ ಕಡಿಮೆ ಬೆಲೆ ಯಲ್ಲಿ ಮಾರಿದ.

ಅಷ್ಟೊಂದು ದೊಡ್ಡ ಮಟ್ಟದ ಮಾರಾಟ ಕಂಡ ಇತರ ಹೂಡಿಕೆದಾರರು ಗಾಬರಿಗೊಂಡು ತಮ್ಮಲ್ಲಿದ್ದ ಅಷ್ಟೂ ಪೌಂಡ್ ಕರೆನ್ಸಿಯನ್ನು ಮಾರತೊಡಗಿ ದರು. ಮಾರಾಟ ಹೆಚ್ಚಿದಂತೆ ಪೌಂಡ್ ಮೌಲ್ಯ ಮತ್ತಷ್ಟು ಕುಸಿಯಿತು. ತಕ್ಷಣ ಸುಮಾರು ೧೦ ಬಿಲಿಯನ್‌ನಷ್ಟು ಕರೆನ್ಸಿ ಖರೀದಿಸಿದ ಸೊರೋಸ್, ಇಂಗ್ಲೆಂಡ್ ವಿಽಸಿದ್ದ ಮಾರಾಟಬೆಲೆ ಮಿತಿಗೆ ಮಾರಿ ಒಂದೇ ದಿನದಲ್ಲಿ ಒಂದು ಬಿಲಿಯನ್ ಪೌಂಡ್‌ನಷ್ಟು ಲಾಭಮಾಡಿದ. ಈತ ಸೃಷ್ಟಿಸಿದ್ದ ಕರೆನ್ಸಿಯ
ಕೃತಕ ಅಭಾವದಿಂದಾಗಿ ಇಂಗ್ಲೆಂಡ್ ಮಾರುಕಟ್ಟೆಯೇ ಅಲುಗಾಡಿ, ಬ್ಯಾಂಕುಗಳು ಕರೆನ್ಸಿ ನೀಡಲಾಗದೆ, ವಿದೇಶಿ ವಿನಿಮಯ ಪಾತಾಳಕ್ಕೆ ಕುಸಿದಿತ್ತು.

ಈತನ ಹಗರಣದಿಂದ ತಲ್ಲಣಗೊಂಡಿದ್ದ ಐರೋಪ್ಯ ದೇಶಗಳ ಆರ್ಥಿಕತೆ ಮರಳಿ ಹಳಿಗೆ ಬರಲು ಸುಮಾರು ೧೫ ವರ್ಷಗಳೇ ಬೇಕಾದವು. ಸೊರೋಸ್‌ ನನ್ನು ‘ಬ್ಯಾಂಕ್ ಆಫ್ ಇಂಗ್ಲೆಂಡ್’ ಅನ್ನು ಮುಳುಗಿಸಿದಾತ ಎನ್ನುತ್ತಾರೆ. ಈತನ ಕುಕೃತ್ಯದಿಂದಾಗಿ, ೧೯ ವರ್ಷಗಳ ಕಾಲ ಇಂಗ್ಲೆಂಡನ್ನು ಆಳುತ್ತಿದ್ದ ಕನ್ಸರ್ವೇಟಿವ್ ಪಕ್ಷ ಅಧಿಕಾರ ಕಳೆದುಕೊಂಡು ಲೇಬರ್ ಪಕ್ಷ ಗದ್ದುಗೆಯೇರಿತ್ತು. ಈತನ ಕುಕೃತ್ಯಗಳು ಇಂಗ್ಲೆಂಡ್‌ಗಷ್ಟೇ ಸೀಮಿತವಾಗಿಲ್ಲ. ಫ್ರಾನ್ಸ್‌ನ ಷೇರು ಮಾರುಕಟ್ಟೆಯಲ್ಲಿ ಕಂಪನಿಗಳ ಒಳಮಾಹಿತಿ ಬಳಸಿಕೊಂಡು ಹಣ ಮಾಡಿದ ಆರೋಪದ ಮೇಲೆ ಫ್ರೆಂಚ್ ನ್ಯಾಯಾಲಯ ಈತನನ್ನು ದೋಷಿಯೆಂದು ಘೋಷಿಸಿತ್ತು.

ಇಂಥದೇ ಕುತಂತ್ರದ ಮೂಲಕ ಈತ ಥೈಲ್ಯಾಂಡ್, ಮಲೇಷ್ಯಾ, ರಷ್ಯಾಗಳಲ್ಲೂ ಹಣಮಾಡಿ ಪರಾರಿಯಾಗಿದ್ದುಂಟು. ಹೀಗೆ ಮಾಡಿದ ಹಣವನ್ನು ವಿವಿಧ ದೇಶಗಳ ಆರ್ಥಿಕ ನೀತಿಗಳ ಮೇಲೆ, ಅಲ್ಲಿನ ಜನರ ಮೇಲೆ ಪ್ರಭಾವ ಬೀರುವುದಕ್ಕೆ ಬಳಸುವ ಹಾಗೂ ಸಮಾಜದಲ್ಲಿ ವಿಷಕಾರಿ ಅಂಶಗಳನ್ನು ಬಿತ್ತುವ ಕೆಲಸವನ್ನು ಈತ ನಿರಂತರವಾಗಿ ಮಾಡುತ್ತಾ ಬಂದಿದ್ದಾನೆ. ದೇಶಗಳ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂಥ ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿರುವವರ
ಪರವಾಗಿ ನಿಂತು ಧನಸಹಾಯ ಮಾಡುವ ಮೂಲಕ ಆಯಾ ದೇಶಗಳಲ್ಲಿ ಅರಾಜಕತೆ ಸೃಷ್ಟಿಸುತ್ತಾ ಬಂದಿದ್ದಾನೆ.

ತಾಯ್ನೆಲ ಹಂಗರಿ ಇವನನ್ನು ಉಚ್ಚಾಟಿಸಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಅರಾಜಕತೆ ಸೃಷ್ಟಿಸಬಲ್ಲ ದೊಡ್ಡ ತಂಡವೇ ಇವನ ಬಳಿಯಿದೆ. ವಿಶ್ವ ವಿದ್ಯಾಲಯಗಳು, ಎನ್ ಜಿಒ, ಸಂಶೋಧನಾ ಸಂಸ್ಥೆಗಳ ಹೆಸರಲ್ಲಿ ದೇಣಿಗೆ ನೀಡಿ ದೇಶ ವಿರೋಧಿ ಕೃತ್ಯಗಳನ್ನು ಪ್ರಚೋದಿಸಿ ಅಲ್ಲಿನ ಸರಕಾರ ಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಈತ, ನಂತರ ಆ ದೇಶದ ಆರ್ಥಿಕ ವೇಗಕ್ಕೆ ಬ್ರೇಕ್ ಬೀಳುವಂತೆ ಮಾಡಿ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಾನೆ. ‘ಓಪನ್ ಸೊಸೈಟಿ ಫೌಂಡೇಷನ್’ ಎಂಬ ಎನ್‌ಜಿಒ ಮೂಲಕ ಜಗತ್ತಿನ ವಿವಿಧ ದೇಶಗಳ ಸಂಶೋಧನಾ ಸಂಸ್ಥೆ, ವಿವಿ, ಎನ್‌ಜಿಒ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುತ್ತಾನೆ. ನಂತರ ಆಯಾ ದೇಶಗಳ ರಾಜಕೀಯದಲ್ಲಿ ಮೂಗುತೂರಿಸಿ ಅಸ್ಥಿರತೆ ಸೃಷ್ಟಿಸುತ್ತಾನೆ.

ಭಾರತದಲ್ಲೂ ಕೆಲ ಮಾಧ್ಯಮಗಳಿಗೆ ಧನಸಹಾಯ ನೀಡುವ ಮೂಲಕ ಸರಕಾರದ ವಿರುದ್ಧ ಸುಳ್ಳು ನಿರೂಪಣೆಗಳನ್ನು ಸೃಷ್ಟಿಸಿದ್ದಾನೆ.

‘SCROLL.IN’ ಎಂಬ ಮಾಧ್ಯಮಕ್ಕೆ ಈತ ತನ್ನ ಎನ್ ಜಿಒ ಮೂಲಕ ಧನಸಹಾಯ ಮಾಡಿದ್ದ. ಎಡಚರರು ನಿರ್ವಹಿಸುತ್ತಿರುವ ಈ ಮಾಧ್ಯಮ ವಸ್ತುನಿಷ್ಠ ವಾಗಿ ಕಾರ್ಯ ನಿರ್ವಹಿಸದೆ ಪ್ರಧಾನಿ ಮೋದಿಯವರ ವಿರುದ್ಧದ ಸುದ್ದಿಯನ್ನು ಸದಾ ಪ್ರಕಟಿಸುತ್ತಿರುತ್ತದೆ. ಅದಾನಿಯನ್ನು ಎಳೆ ತಂದು ಮೋದಿಯವರ ವಿರುದ್ಧ ಕಥೆಕಟ್ಟುವಲ್ಲಿ ಈ ಮಾಧ್ಯಮದ ಮುಖ್ಯಪಾತ್ರವಿತ್ತು. ತನ್ನ ಓಪನ್ ಸೊಸೈಟಿ ಫೌಂಡೇಷನ್‌ನ ಫೆಲೋಶಿಪ್ ವಿಭಾಗದಲ್ಲಿ ಭಾರತದ ಹಲವು ಪತ್ರಕರ್ತ ರನ್ನು ನೇಮಿಸಿಕೊಂಡಿರುವ ಸೊರೋಸ್, ದೇಶ ವಿರೋಧಿ ನಿರೂಪಣೆಗಳನ್ನು ಪ್ರಚಾರ ಮಾಡುತ್ತಿದ್ದಾನೆ.

ಈ ಫೌಂಡೇಷನ್‌ನಲ್ಲಿ ೨೦೦೯-೧೦ರ ನಡುವೆ ಫೆಲೋಶಿಪ್ ಮಾಡಿದ್ದ ಕಾಶ್ಮೀರಿ ಮೂಲದ ಬಷರತ್ ಪೀರ್ ಎಂಬ ಪತ್ರಕರ್ತ, ನಂತರ ಕಾಶ್ಮೀರ ದಲ್ಲಿದ್ದು ಕೊಂಡು ಪಾಕಿಸ್ತಾನದ ಪರ ನಿರೂಪಣೆಯನ್ನು ಪ್ರಚಾರ ಮಾಡಿ ಅಲ್ಲಿನ ಮುಸಲ್ಮಾನರ ದಿಕ್ಕುತಪ್ಪಿಸಿದ್ದ. ‘ಕರ್ಫ್ಯೂ ನೈಟ್’ ಎಂಬ ಪುಸ್ತಕದ ಮೂಲಕ ಕಾಶ್ಮೀರಿ ಉಗ್ರರನ್ನು ಅಮಾಯಕರೆಂದು ಬಿಂಬಿಸಿದ್ದ. ಭಾರತದೊಳಗಿನ ಬುದ್ಧಿವಂತ ಪ್ರಭಾವಿಗಳಿಗೆ ಧನಸಹಾಯ ಮಾಡಿ ಸರಕಾರದ ವಿರುದ್ಧ ಸುಳ್ಳು ನಿರೂಪಣೆ ಸೃಷ್ಟಿಸಿರುವ ಸೊರೋಸ್, ಇಂದಿರಾ ಜೈಸಿಂಗ್ ಎಂಬ ವಕೀಲೆಯ ‘ಲಾಯರ‍್ಸ್ ಕಲೆಕ್ಟಿವ್’ ಎಂಬ ಎನ್‌ಜಿಒಗೆ ತನ್ನ ಫೌಂಡೇಷನ್ ಮೂಲಕ ಸುಮಾರು ೪.೧೦ ಕೋಟಿ ಹಣ ನೀಡಿದ್ದಾನೆ ಎನ್ನಲಾಗುತ್ತದೆ. ಈ ಸಂಸ್ಥೆಯು ದೇಶವಿರೋಧಿ ನಿರೂಪಣೆಗಳನ್ನು ಪ್ರಚುರಪಡಿಸುವಲ್ಲಿ ಮುಂಚೂಣಿ ಯಲ್ಲಿದ್ದು, ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ ಹಲವು ನಿಯಮಗಳನ್ನು ಗಾಳಿಗೆ ತೂರಿರುವ ಕಾರಣ ಇದರ ಪರವಾನಗಿಯನ್ನು ರದ್ದುಗೊಳಿಸ ಲಾಗಿತ್ತು.

ವಿದೇಶಿ ಮೂಲದ ದೇಣಿಗೆಯು ಭಾರತದಲ್ಲಿ ರಾಜಕೀಯ ಉದ್ದೇಶಗಳಿಗೆ ಬಳಕೆಯಾಗುತ್ತಿರುವುದನ್ನು ಅಧಿಕಾರಿಗಳು ಕಂಡು ಹಿಡಿದಿದ್ದರು. ಈ ಸಂಸ್ಥೆ ಯಲ್ಲಿದ್ದ ವಕೀಲರಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿ ಹಾಜರಾಗುವಂತೆ ಸೂಚಿಸಿತ್ತು. ನಂತರ ೨೦೧೮ರಲ್ಲಿ ಕೇಸನ್ನು ದಾಖಲಿಸಿಕೊಂಡ ಸಿಬಿಐ ತನಿಖೆಗೆ ಚಾಲನೆನೀಡಿ, ಇಂದಿರಾರ ಮನೆ-ಕಚೇರಿಗಳ ಮೇಲೆ ದಾಳಿ ಮಾಡಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ದೇಶವಿರೋಧಿಗಳ ಜತೆ ಕೈಜೋಡಿಸುವ ಕಾಂಗ್ರೆಸ್, ಸಿಬಿಐನ ದಾಳಿಗೆ ರಾಜಕೀಯದ ಲೇಪನೀಡಿತ್ತು. ಜವಾಹರಲಾಲ್ ನೆಹರು ವಿವಿಯಲ್ಲಿನ ಭಾಷಣವೊಂದರಲ್ಲಿ ಇಂದಿರಾ
ಜೈಸಿಂಗ್, ‘ಭಾರತದಲ್ಲಿ ರಾಜಕೀಯ ಹಕ್ಕುಗಳ ಅಗತ್ಯವಿದ್ದು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇಲ್ಲಿ ಎಲ್ಲರಿಗೂ ಸಮಾನವಾದ ಸಾಮಾಜಿಕ ನ್ಯಾಯ ಸಿಗುವುದಿಲ್ಲ’ ಎಂಬ ಸುಳ್ಳು ನಿರೂಪಣೆಯನ್ನು ಪ್ರಚುರಪಡಿಸಿದ್ದರು.

ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿರುವ ಅಮರ್ತ್ಯ ಸೇನ್ ಮತ್ತು ಜಾರ್ಜ್ ಸೊರೋಸ್, ‘ನಾಮತಿ’ ಎಂಬ ಎನ್‌ಜಿಒ ನಲ್ಲಿ ಸಲಹೆಗಾರ ರಾಗಿದ್ದಾರೆ. ಈ ಸಂಸ್ಥೆಯ ಹಣದ ಮೂಲ ಮತ್ತದೇ ‘ಓಪನ್ ಸೊಸೈಟಿ ಫೌಂಡೇಷನ್’. ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯಡಿ ಪಾಕಿಸ್ತಾನ ಮತ್ತುಅಫ್ಘಾನಿಸ್ತಾನದ ಹಿಂದೂಗಳಿಗೆ ಪೌರತ್ವ ನೀಡುವ ವಿಷಯವನ್ನು ರಾಜಕೀಯೀಕರಣಗೊಳಿಸಿದ್ದ ಅಮರ್ತ್ಯ ಸೇನ್, ‘ಭಾರತದಲ್ಲಿ ಅಲ್ಪ ಸಂಖ್ಯಾತರ ಪಾತ್ರವನ್ನು ನಿಯಂತ್ರಿಸಲೆಂದು ಈ ಕಾಯ್ದೆಯ ಜಾರಿಯಾಗಲಿದೆ’ ಎಂದು ಸುಳ್ಳು ಹೇಳಿದ್ದರು. ಇವರ ಬಹುತೇಕ ಅಂಕಣಗಳು ಸೊರೋಸ್ ಬೆಂಬಲಿತ ‘”SCROLL.IN’ ಮತ್ತು ‘THE WIRE’ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು.

ತೃಣಮೂಲ ಕಾಂಗ್ರೆಸ್‌ನ ಸಂಸದೆ ಮಹುವ ಮೊಯಿತ್ರಾ, ಹೀರಾನಂದನ್‌ನಿಂದ ಹಣ ಪಡೆದು ಸಂಸತ್‌ನಲ್ಲಿ ಅದಾನಿ ವಿರುದ್ಧ ಮಾತಾಡಿರುವ ವಿಷಯ ಭಾರಿ ಚರ್ಚೆಯಾಗುತ್ತಿದೆ. ಅದಾನಿ ವಿರುದ್ಧ ‘ಹಿಂಡೆನ್‌ಬರ್ಗ್’ ಸಂಶೋಧನಾ ಸಂಸ್ಥೆ ನೀಡಿದ್ದ ವರದಿಯ ಹಿಂದೆಯೂ ಸೊರೋಸ್ ಕೈವಾಡವಿದೆ
ಯೆನ್ನಲಾಗುತ್ತಿದೆ. ಹಣ ಮಾಡಲೆಂದು ಇಂಗ್ಲೆಂಡ್ ಷೇರು ಮಾರುಕಟ್ಟೆಯನ್ನೇ ಹಾಳುಮಾಡಿದ್ದವನಿಗೆ ಇಂಥ ವರದಿ ತಯಾರಿಸಿ ಭಾರತೀಯ ಷೇರು ಮಾರುಕಟ್ಟೆಯನ್ನು ಹಾಳು ಮಾಡುವುದು ಕಷ್ಟವೇನಲ್ಲ. ಇಸ್ರೇಲ್‌ನಲ್ಲಿನ ಅನೇಕ ದೇಶ ವಿರೋಧಿ ಎನ್‌ಜಿಒಗಳಿಗೆ ಈತನ ಫೌಂಡೇಷನ್‌ನಿಂದ ಹಣ
ನೀಡಲಾಗುತ್ತಿದೆ. ಅಮೆರಿಕ ಮತ್ತು ಐರೋಪ್ಯ ದೇಶಗಳು ಉಗ್ರಸಂಘಟನೆ ಎಂದು ಕರೆದಿರುವ ‘ಪಾಪ್ಯುಲರ್ ಫ್ರಂಟ್ ಫಾರ್ ಲಿಬರೇಷನ್ ಆಫ್ ಪ್ಯಾಲೆ ಸ್ತೀನ್’ ಸಂಘಟನೆಯೊಂದಿಗೆ ನೇರಸಂಬಂಧವಿರುವ ವ್ಯಕ್ತಿಗಳಿಗೆ ಸೊರೋಸ್ ನಿಂದ ಧನಸಹಾಯವಾಗುತ್ತಿದೆ.

ಭಾರತದಲ್ಲಿ ‘ಪೆಗಾಸಿಸ್’ ತಂತ್ರಾಂಶದ ವಿಷಯದಲ್ಲಿ ನಡೆದ ರಾಜಕೀಯದ ಹಿಂದಿದ್ದುದು, ಈತನಿಂದ ಹಣ ಪಡೆಯುವ ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್, ಅಸೋಸಿಯೇಟೆಡ್ ಪ್ರೆಸ್‌ನಂಥ ಅಂತಾರಾಷ್ಟ್ರೀಯ ಮಾಧ್ಯಮಗಳು. ಕಳೆದ ಮಾರ್ಚ್‌ನಲ್ಲಿ ಭಾರತದ ವಿಷಯದಲ್ಲಿ ಮೂಗು
ತೂರಿಸಿದ ಸೊರೋಸ್, ‘ಭಾರತ ಪ್ರಜಾಪ್ರಭುತ್ವ ದೇಶ, ಆದರೆ ಅದರ ನಾಯಕ ಮೋದಿ ಪ್ರಜಾಪ್ರಭುತ್ವವಾದಿಯಲ್ಲ. ಹಿಂದೂಗಳ ರಾಷ್ಟ್ರವಾಗಿರುವ ಭಾರತದಲ್ಲಿ ಅಲ್ಪಸಂಖ್ಯಾತ ರನ್ನು ಕಡೆಗಣಿಸಲಾಗುತ್ತಿದೆ’ ಎಂದಿದ್ದ. ಚೀನಾದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಮೇಲಾಗುತ್ತಿರುವ ದೌರ್ಜನ್ಯಗಳ
ಬಗ್ಗೆ ದನಿಯೆತ್ತದ ಈತ, ಭಾರತದಲ್ಲಿ ಸುಖವಾಗಿರುವ ಮುಸ್ಲಿಮರನ್ನು ಎತ್ತಿಕಟ್ಟುವಲ್ಲಿ ನಿರತನಾಗಿದ್ದಾನೆ!

ಸೊರೋಸ್ಅಪಾಯಕಾರಿ ವ್ಯಕ್ತಿಯೆಂಬುದು ಜಗತ್ತಿಗೇ ತಿಳಿದ ವಿಷಯ. ರಾಜಕೀಯ ಲಾಭಕ್ಕಾಗಿ ಭಾರತದ ಸಾರ್ವಭೌಮತ್ವವನ್ನು ಬಲಿ ಕೊಟ್ಟು ಇಂಥವನ ಜತೆ ರಾಹುಲ್ ಗಾಂಧಿ ಕೈಜೋಡಿಸುತ್ತಿರುವ ವಿಷಯ ಸದ್ಯ ಚರ್ಚೆಯಲ್ಲಿದೆ. ರಾಹುಲ್ ಅಮೆರಿಕಕ್ಕೆ ಭೇಟಿಯಿತ್ತ ವೇಳೆ ಸೊರೋಸ್‌ನ ಸಂಸ್ಥೆ ಯೊಂದಿಗೆ ನೇರಸಂಪರ್ಕವಿರುವ ಸುನಿತಾ ವಿಶ್ವನಾಥ್ ಎಂಬಾಕೆಯ ಜತೆ ಸಭೆ ನಡೆಸಿದ್ದಾರೆ. ರಫೆಲ್ ಯುದ್ಧವಿಮಾನ ಖರೀದಿಯಲ್ಲಿ ಹಗರಣವಾಗಿಲ್ಲ ವೆಂದು ಸುಪ್ರೀಂ ಕೋರ್ಟೇ ಹೇಳಿದ ಮೇಲೂ, ಮೋದಿಯವರನ್ನು ‘ಚೋರ್’ ಎಂದು ಕರೆದಿದ್ದರು ರಾಹುಲ್.

ಸದರಿ ಖರೀದಿಯ ಕಡತಗಳನ್ನು ಪರಿಶೀಲಿಸಲಾಗಿದೆಯೆಂದಿದ್ದ ಸೊರೋಸ್‌ನ ಫೌಂಡೇಷನ್‌ನ ವರದಿ ಯನ್ನಾಧರಿಸಿ ರಾಹುಲ್ ಆರೋಪಿಸಿದ್ದರು. ಹಾಗಾದರೆ, ಜಗತ್ತಿನ ಅತ್ಯಂತ ಅಪಾಯಕಾರಿ ವ್ಯಕ್ತಿಯ ಮಾತನ್ನು ರಾಹುಲ್ ಕೇಳಿದ್ದಾರೆಂಬುದು ಸಾಬೀತಾಯಿತಲ್ಲ. ಶಾಹೀನ್ ಬಾಗ್‌ನಲ್ಲಿ ನಡೆದ ಹಿಂಸಾಚಾರ-ಪ್ರತಿಭಟನೆಯ ಹಿಂದಿದ್ದ ವ್ಯಕ್ತಿ ‘ಹರ್ಷ ಮಂದೆರ್’ನ ಸಂಸ್ಥೆಗೆ ಸೊರೋಸ್ ನೇರವಾಗಿ ಧನಸಹಾಯ ಮಾಡುತ್ತಿದ್ದ. ಈ ಹರ್ಷ ಮಂದೆರ್ ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ಸೋನಿಯಾ ಗಾಂಧಿಯ ವರ ಅತ್ಯಾಪ್ತನಾಗಿದ್ದ. ‘ಓಪನ್ ಸೊಸೈಟಿ ಫೌಂಡೇಷನ್’ನ ಅಂತಾರಾಷ್ಟ್ರೀಯ ಉಪಾಧ್ಯಕ್ಷ ಸಲೀಲ್ ಶೆಟ್ಟಿ, ರಾಹುಲ್ ನಡೆಸಿದ ‘ಭಾರತ್‌ಜೋಡೋ’ ಯಾತ್ರೆಯಲ್ಲಿ ಕರ್ನಾಟಕದಲ್ಲಿ ಭಾಗವಹಿಸಿದ್ದ. ಭಾರತದ ಆರ್ಥಿಕ ವೇಗಕ್ಕೆ ಕಡಿವಾಣ ಹಾಕಲೆಂದು ಮೋದಿಯವರ ವಿರುದ್ಧ ಹಲವು ಸುಳ್ಳು ನಿರೂಪಣೆಗಳನ್ನು ಮಾಡುವ ದೊಡ್ಡ ತಂಡವನ್ನೇ ನಿರ್ಮಿಸಿದ್ದಾನೆ ಸೊರೋಸ್.

ಕೇವಲ ಅಧಿಕಾರಕ್ಕಾಗಿ ಇಂಥವನ ಜತೆ ಕೈಜೋಡಿಸಿ, ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂಥ ದೊಡ್ಡ ಷಡ್ಯಂತ್ರ ನಡೆಯುತ್ತಿದೆ.

Leave a Reply

Your email address will not be published. Required fields are marked *