ಅವಲೋಕನ
ರಮಾನಂದ ಶರ್ಮಾ
ಸಂಸತ್ತಿನಲ್ಲಿ ದಕ್ಷಿಣದವರಿಗೆ ಭಾಷೆ-ಸಂಖ್ಯೆಯ ದೃಷ್ಟಿಯಲ್ಲಿ ದನಿಯಿಲ್ಲ. ಕೇಂದ್ರ ಸರಕಾರದ ನೀತಿ ನಿರೂಪಣೆಯಲ್ಲಿ ದಕ್ಷಿಣದವರ ಮಾತಿಗೆ ಕಿಮ್ಮತ್ತಿಲ್ಲ ಎನ್ನುವ ಆರೋಪ ಬಹಳ ಕಾಲದಿಂದಲೂ ಇದೆ. ಕ್ಷೇತ್ರ ಮರುವಿಂಗಡಣೆ ಜಾರಿ ಯಾದಲ್ಲಿ ಉತ್ತರದವರಿಗೆ ಸಂಸತ್ತಿನಲ್ಲಿ ಆನೆಬಲ ಬಂದು ತಮ್ಮನ್ನು ಹತ್ತಿಕ್ಕಲಾಗುತ್ತದೆ ಎನ್ನುವ ಭಯ ದಕ್ಷಿಣ ದವರನ್ನು ಕಾಡುತ್ತಿದೆ.
ದೇಶವೊಂದರ ಸಂಸತ್ತಿನಲ್ಲಿ ಎಷ್ಟು ಜನ ಸಂಸದರಿರಬೇಕು ಎನ್ನುವುದು ಸಾಮಾನ್ಯವಾಗಿ ಆಯಾ ದೇಶದ ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ ಮತ್ತು ಅದನ್ನು ‘ಸೀಮಾ ನಿರ್ಣಯ ಆಯೋಗ’ (Delimitation Commission) ನಿರ್ಧರಿಸು ತ್ತದೆ. ಭಾರತದ ಸಂವಿಧಾನದ ೮೧ನೇ ವಿಧಿಯು, ‘ಪ್ರತಿ ೧೦ ಲಕ್ಷ ಜನಸಂಖ್ಯೆಗೆ ಒಬ್ಬರು ಸಂಸದ ರಿರಬೇಕು ಮತ್ತು ಲೋಕಸಭೆಯ ಸಂಸದರ ಸಂಖ್ಯೆ ೫೫೦ರ ಮಿತಿಯನ್ನು ದಾಟಬಾರದು’ ಎನ್ನುವ ನಿರ್ಬಂಧವನ್ನು ವಿಧಿಸಿದೆ.
೧೯೫೧ರಲ್ಲಿ ನಡೆದ ಜನಗಣತಿಯ ಪ್ರಕಾರ, ಅಂದು ದೇಶದ ಜನಸಂಖ್ಯೆ ೩೬ ಕೋಟಿ ಇದ್ದು, ೧೯೫೨ರಲ್ಲಿ ಮೊದಲ ಲೋಕಸಭಾ ಚುನಾವಣೆ ನಡೆದಾಗ ಸಂಸದರ ಬಲ ೪೮೯ರಷ್ಟಿತ್ತು. ಸದ್ಯ ಈ ಸಂಖ್ಯೆ ೫೪೫ ಇದ್ದು, ೧೯೫೨, ೧೯೬೩, ೧೯೭೩ ಮತ್ತು ೨೦೦೨ ರಲ್ಲಿ ಸೀಮಾನಿರ್ಣಯ ಆಯೋಗ ನೇಮಕವಾದರೂ, ಇಂದಿಗೂ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಾಗಿಲ್ಲ. ಜನಸಂಖ್ಯಾ ನಿಯಂತ್ರಣ ಮತ್ತು ಮಿತಪರಿವಾರದ ಉದ್ದೇಶದೊಂದಿಗೆ ೭೦ರ ದಶಕದಲ್ಲಿ ಜಾರಿಗೆ ತರಲಾದ ‘ಆರತಿಗೊಬ್ಬ ಮಗ, ಕೀರ್ತಿಗೊಬ್ಬ ಮಗಳು’ ಅಜೆಂಡಾದ ಕುಟುಂಬ ಯೋಜನೆ ಅನುಷ್ಠಾನದಲ್ಲಿ, ಉತ್ತರ ಮತ್ತು ದಕ್ಷಿಣ ಭಾರತದ ಮಧ್ಯೆ ಜನಸಂಖ್ಯಾ ಬೆಳವಣಿಗೆ ಯಲ್ಲಿ ಸಮಾನತೆ ಕಾಣದೆ, ಉತ್ತರದಲ್ಲಿ ಜನಸಂಖ್ಯೆ ತೀವ್ರವಾಗಿ ಬೆಳೆದು ದಕ್ಷಿಣದಲ್ಲಿ ಅದು ಕುಂಠಿತವಾಗಲು, ಜನಸಂಖ್ಯಾ ಆಧರಿತ ಲೋಕಸಭಾ ಕ್ಷೇತ್ರದ ಮರು ವಿಂಗಡಣೆಗೆ ದಕ್ಷಿಣದಲ್ಲಿ ಭಾರಿ ವಿರೋಧ ವ್ಯಕ್ತವಾಯಿತು.
ಚಾಣಾಕ್ಷ ರಾಜಕಾರಣಿ ಇಂದಿರಾ ಗಾಂಧಿಯವರು ಇದರ ದೂರಗಾಮಿ ಪರಿಣಾಮವನ್ನು ಸೂಕ್ಷ್ಮವಾಗಿ ಗಮನಿಸಿ, ೧೯೭೬ರ ತುರ್ತು ಪರಿಸ್ಥಿತಿಯ ಅವಕಾಶವನ್ನು ಬಳಸಿಕೊಂಡು ಸಂವಿಧಾನವನ್ನು ತಿದ್ದುಪಡಿ ಮಾಡಿ, ಡಿಲಿಮಿಟೇಷನ್ ಅನ್ನು ೨೦೨೬ರವರೆಗೆ ನಿರ್ಬಂಽಸಿದ್ದರು. ೨೦೨೬ರ ಹೊತ್ತಿಗೆ ದೇಶದ ಎಲ್ಲಾ ರಾಜ್ಯಗಳಲ್ಲಿ ಜನಸಂಖ್ಯೆಯ ಬೆಳವಣಿಗೆ ಏಕರೀತಿ ಇರುತ್ತಿದ್ದು, ಕ್ಷೇತ್ರಗಳ ಮರುವಿಂಗಡಣೆಗೆ ವಿರೋಧ ಬರಲಾರದು ಎಂದು ಅವರು ವಾದಿಸಿದ್ದರಂತೆ.
Read E-Paper click here
ದೇಶದಲ್ಲಿ ಜನಗಣತಿಯು ಹತ್ತು ವರ್ಷಕ್ಕೊಮ್ಮೆ ನಡೆಯುತ್ತಿದ್ದು, ೨೦೧೧ರ ನಂತರ ೨೦೨೧ರಲ್ಲಿ ಅದು ನಡೆಯಬೇಕಾಗಿತ್ತು. ಆದರೆ, ಕೋವಿಡ್ ಪಿಡುಗಿನ ಕಾರಣದಿಂದಾಗಿ ಅದನ್ನು ೨೦೨೪-೨೫ಕ್ಕೆ ಮುಂದೂಡಲಾಗಿದೆ. ಈ ಗಣತಿಯ ಆಧಾರದ ಮೇಲೆ
ಒಂದು ಅಂದಾಜಿನ ಪ್ರಕಾರ ೨೦೨೬ರಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಾದರೆ, ಸಂಸದರ ಸಂಖ್ಯೆ ೮೪೫ನ್ನು ಮೀರುತ್ತದೆ.
ಕಾಕತಾಳೀಯವೋ ಎಂಬಂತೆ ನೂತನ ಸಂಸತ್ ಭವನದಲ್ಲಿ ಸಂಸದರ ಆಸನ ವ್ಯವಸ್ಥೆಯಲ್ಲಿ ೮೮೮ ಸೀಟುಗಳಿದ್ದು ಈ ನಿಟ್ಟಿ ನಲ್ಲಿ ಪೂರ್ವತಯಾರಿ ನಡೆದಂತೆ ಕಾಣುತ್ತದೆ! ಈ ಮರುವಿಂಗಡಣೆಯ ಪ್ರಕಾರ ಬಹುತೇಕ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳು ಹೆಚ್ಚಾಗುತ್ತವೆ. ಆದರೆ ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ ಯಾವುದೇ ಬದಲಾವಣೆ ಕಾಣದಿರ ಬಹುದು. ಕೇರಳದಲ್ಲಿ ಸದ್ಯ ೨೦ ಸ್ಥಾನಗಳಿದ್ದು ಅಷ್ಟರಲ್ಲೇ ತೃಪ್ತಿ ಪಡೆಯಬೇಕಾಗಬಹುದು. ಇದಕ್ಕೆ ಮುಖ್ಯಕಾರಣ ಅಲ್ಲಿನ ಜನಸಂಖ್ಯೆ ಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ.
ಯಶಸ್ಸು ಗಳಿಸುವುದು ಕಷ್ಟವಲ್ಲ, ಆದರೆ ಇಟ್ಟುಕೊಳ್ಳುವುದು ! click the link
http://vishwavani.news/ankanagalu/keepingsuccessdifficult/
ಸಾಕ್ಷರತೆಯ ಪ್ರಮಾಣ ತೃಪ್ತಿಕರ ಮಟ್ಟದಲ್ಲಿರುವ ಈ ರಾಜ್ಯದಲ್ಲಿ ಕುಟುಂಬ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಿದೆ
ಮತ್ತು ಬಹುತೇಕ ಕೇರಳಿಗರು ಜೀವನೋ ಪಾಯವನ್ನು ಅರಸಿ ಹೊರರಾಜ್ಯ-ಹೊರ ದೇಶಗಳಿಗೆ ವಲಸೆಹೋಗಿದ್ದಾರೆ ಎನ್ನಲಾ ಗುತ್ತದೆ. ಉತ್ತರ ಪ್ರದೇಶದಲ್ಲಿ ಪ್ರಸ್ತುತ ೮೦ ಲೋಕಸಭಾ ಸ್ಥಾನಗಳಿದ್ದು, ಮಾಧ್ಯಮ ವರದಿಗಳ ಪ್ರಕಾರ ಅದು ೧೪೩ಕ್ಕೆ ಏರಲಿದೆ. ನಂತರದ ಸ್ಥಾನ ಬಿಹಾರಕ್ಕೆ (೭೯) ಲಭಿಸಲಿದ್ದರೆ, ಕರ್ನಾಟಕದಲ್ಲಿ ಇದು ೨೮ರಿಂದ ೪೧ಕ್ಕೆ ಏರಲಿದೆ.
ಭಾರತದಲ್ಲಿ ಪ್ರತಿ ೧೦ ಲಕ್ಷ ಜನಸಂಖ್ಯೆಗೆ ಒಬ್ಬರು ಸಂಸದರಿರಬೇಕು. ಆದರೆ ದೇಶದ ಇಂದಿನ ಜನಸಂಖ್ಯೆ ಸುಮಾರು ೧೪೦ ಕೋಟಿ ಇದ್ದು, ೫೪೫ ಸಂಸದರಿದ್ದಾರೆ. ಅಂದರೆ, ಆ ಲೆಕ್ಕದಲ್ಲಿ ೨೫.೬೮ ಲಕ್ಷದಷ್ಟು ಜನಸಂಖ್ಯೆಗೆ ಒಬ್ಬರು ಸಂಸದರಿದ್ದು, ಇದು ನಿಗದಿತ ಮಾನದಂಡಕ್ಕಿಂತ ಭಾರಿ ಕೆಳಗಿದೆ. ಅಂತೆಯೇ ದೇಶದಲ್ಲಿ ಅಭಿವೃದ್ಧಿಯ ವೇಗ ನಿರೀಕ್ಷಿತ ಮಟ್ಟದಲ್ಲಿಲ್ಲ ಎನ್ನಲಾಗುತ್ತದೆ. ಅಭಿವೃದ್ಧಿ ಹೊಂದಿದ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಈ ಅನುಪಾತ ತುಂಬಾ ಕಡಿಮೆ. ಚೀನಾದಲ್ಲಿ ೪.೫೦ ಲಕ್ಷ ಜನರಿಗೆ ಒಬ್ಬ ಸಂಸದರ ಅನುಪಾತದಂತೆ ಒಟ್ಟು ೩,೦೦೦ ಸಂಸದರಿದ್ದರೆ, ಅಮೆರಿಕದಲ್ಲಿ ಪ್ರತಿ ೭.೩೩ ಲಕ್ಷ ಜನರಿಗೆ ಒಬ್ಬರಂತೆ ೫೩೫ ಸಂಸದರಿದ್ದಾರೆ.
ಇಂಗ್ಲೆಂಡ್‌ನಲ್ಲಿ ಲಕ್ಷಕ್ಕಿಂತಲೂ ಕಡಿಮೆ ಜನಸಂಖ್ಯೆಗೆ ಒಬ್ಬರಂತೆ ೬೫೦ ಸಂಸದರಿದ್ದರೆ, ಪಾಕಿಸ್ತಾನದಲ್ಲಿ ೨೩.೩೭ ಕೋಟಿ ಜನಸಂಖ್ಯೆಗೆ ೨೪೮ ಮಂದಿ, ಶ್ರೀಲಂಕಾದಲ್ಲಿ ೨.೨೫ ಕೋಟಿ ಜನಸಂಖ್ಯೆಗೆ ೨೨೫ ಮಂದಿ ಸಂಸದರಿದ್ದಾರೆ. ೨೦೨೬ರ ನಂತರ ಈ ಡಿಲಿಮಿಟೇಷನ್ ಅಥವಾ ಮರುವಿಂಗಡಣೆ ನಡೆಯಲಿದೆ. ಇದು ಕಾರ್ಯಗತ ವಾದರೆ, ಜನಸಂಖ್ಯೆ ಕಡಿಮೆಯಿರುವ ರಾಜ್ಯಗಳಲ್ಲಿ
ಲೋಕಸಭಾ ಸ್ಥಾನಗಳು ಕಡಿಮೆಯಾದರೆ, ಹೆಚ್ಚಿರುವ ರಾಜ್ಯಗಳಲ್ಲಿ ಸ್ಥಾನಗಳ ಸಂಖ್ಯೆ ಏರುತ್ತದೆ.
ಒಂದು ಅಂದಾಜಿನ ಪ್ರಕಾರ, ಲೋಕಸಭಾ ಸ್ಥಾನಗಳ ಸಂಖ್ಯೆಯು ಈಗಿನ ೫೪೫ರಿಂದ ೮೮೫ಕ್ಕೆ ಏರುತ್ತದೆ. ಇದರಲ್ಲಿ ದಕ್ಷಿಣದ ರಾಜ್ಯಗಳ ಸ್ಥಾನಗಳ ಸಂಖ್ಯೆ ೧೩೨ರಿಂದ ೧೬೬ಕ್ಕೆ ಏರಿದರೆ, ದಕ್ಷಿಣೇತರ ರಾಜ್ಯಗಳ ಸ್ಥಾನಗಳ ಸಂಖ್ಯೆ ೪೧೩ರಿಂದ ೭೧೯ಕ್ಕೆ
ಏರುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಹಿಂದಿ ಭಾಷಿಕ ರಾಜ್ಯಗಳ ಲೋಕಸಭಾ ಸ್ಥಾನಗಳು ೨೨೬ರಿಂದ ೩೫೬ಕ್ಕೆ ಏರುತ್ತವೆ. ಇದು ದಕ್ಷಿಣ ಭಾರತಕ್ಕಾಗುವ ಭಾರಿ ಅನ್ಯಾಯ ಎಂಬ ಕೂಗು ಕೇಳಿಬರುತ್ತಿದೆ. ಈ ಅಸಮಾನತೆಯ ವಿರುದ್ಧ ದಕ್ಷಿಣದ ಪ್ರಾದೇಶಿಕ ಪಕ್ಷಗಳು ಜೋರಾಗಿ ದನಿಯೆತ್ತುತ್ತಿದ್ದು, ರಾಷ್ಟ್ರೀಯ ಪಕ್ಷಗಳ ದಕ್ಷಿಣ ಭಾರತದ ಘಟಕಗಳು ತಮ್ಮ ನಿಲುವನ್ನು ಇನ್ನೂ
ಬಹಿರಂಗವಾಗಿ ಪ್ರಕಟಿಸಬೇಕಾಗಿದೆ.
ಕುಟುಂಬ ಯೋಜನೆ ಮತ್ತು ಮಿತ ಪರಿವಾರದ ನಿಟ್ಟಿನಲ್ಲಿ ಕೇಂದ್ರ ಸರಕಾರದ ನಿರ್ದೇಶನವನ್ನು ಕಾಯಾ-ವಾಚಾ-ಮನಸಾ ಅನುಷ್ಠಾನಗೊಳಿಸಿದ್ದಕ್ಕೆ ಇದು ಶಿಕ್ಷೆಯಾಗಿದೆ ಎಂದು ಪ್ರಾದೇಶಿಕ ಪಕ್ಷಗಳು ದನಿಯೆತ್ತಿ ವಿರೋಧಿಸುತ್ತಿವೆ. ಸಂಸತ್ತಿನಲ್ಲಿ ದಕ್ಷಿಣ ದವರಿಗೆ ಭಾಷೆ ಮತ್ತು ಸಂಖ್ಯೆಯ ದೃಷ್ಟಿಯಲ್ಲಿ ಧ್ವನಿ ಇಲ್ಲ. ಕೇಂದ್ರ ಸರಕಾರದ ನೀತಿ ನಿರೂಪಣೆಯಲ್ಲಿ ದಕ್ಷಿಣದವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎನ್ನುವ ಆರೋಪ ಬಹಳ ಕಾಲದಿಂದಲೂ ಇದೆ. ಈ ಪ್ರಸ್ತಾವಿತ ಮರುವಿಂಗಡಣೆ ಜಾರಿಗೆ ಬಂದರೆ ಉತ್ತರದವರಿಗೆ ಸಂಸತ್ತಿನಲ್ಲಿ ಆನೆಬಲ ಬಂದು, ತಮ್ಮನ್ನು ಹತ್ತಿಕ್ಕಲಾಗುತ್ತದೆ ಎನ್ನುವ ಭಯ ದಕ್ಷಿಣ ದವರನ್ನು ಕಾಡುತ್ತಿದೆ. ಮೇಲ್ನೋಟಕ್ಕೆ ಕಾಣದಿದ್ದರೂ ದೇಶದಲ್ಲಿ ಉತ್ತರ ಮತ್ತು ದಕ್ಷಿಣದವರ ಮಧ್ಯೆ ನಾಡು-ನುಡಿ-ಸಂಸ್ಕೃತಿ, ಬದುಕಿನ ಪರಿ ಮುಂತಾದ ವಿಷಯಗಳಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ.
ಭಾಷೆಯ ವಿಷಯದಲ್ಲಂತೂ ಕಿಡಿ ಹೊತ್ತುತ್ತಲೇ ಇರುತ್ತದೆ. ಈ ವಿಷಯಗಳಲ್ಲಿ ಯಾವುದಾದರೂ ಮಸೂದೆಯನ್ನು ಸಂಸತ್ತಿನಲ್ಲಿ
ಮತಕ್ಕೆ ಹಾಕಿದರೆ, ಅದು ಧ್ವನಿಮತದಲ್ಲಿ ದಕ್ಷಿಣ ದವರ ವಿರುದ್ಧವಾಗಿ ಅನುಮೋದನೆಯಾಗಬಹುದು ಎನ್ನುವ ಸಂದೇಹ ಮತ್ತು ಚಿಂತೆ ದಕ್ಷಿಣ ದವರನ್ನು ಕಾಡುತ್ತಿದೆ. ಇಂಥ ಬೆಳವಣಿಗೆಯನ್ನು ಊಹಿಸಿಯೋ ಏನೋ ಚಕ್ರವರ್ತಿ ರಾಜಗೋಪಾಲಾಚಾರಿ ಮತ್ತು ಅಣ್ಣಾದೊರೈ ಅವರು ೬೦ರ ದಶಕದಲ್ಲಿ, ಎಲ್ಲಾ ವಿಷಯಗಳನ್ನು ಬಹುಮತದ ಮೇಲೆ ನಿರ್ಧರಿಸುವುದನ್ನು ಸಂಸತ್ತಿನಲ್ಲಿ ಬಲವಾಗಿ ವಿರೋಧಿಸಿದ್ದರು ಹಾಗೂ ‘ಸಂಖ್ಯೆಯಲ್ಲಿ ಕಾಗೆಗಳು ಹೆಚ್ಚಿರುವುದರಿಂದ ಕೋಗಿಲೆಯ ಬದಲಿಗೆ ಕಾಗೆಯನ್ನು ರಾಷ್ಟ್ರೀಯ ಪಕ್ಷಿ ಎನ್ನಲಾಗದು’ ಎಂದು ಮಾರ್ಮಿಕವಾಗಿ ವಾದಿಸಿದ್ದರು.
ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಸಡಿಲವಾಗುತ್ತಿರುವ ಬೆಳವಣಿಗೆ ಕಾಣುತ್ತಿರುವಾಗ, ಉತ್ತರ ಮತ್ತು ದಕ್ಷಿಣದ ರಾಜ್ಯಗಳೂ ಇತ್ತೀಚೆಗೆ ಬೇರೆ ಬೇರೆ ರಾಜಕೀಯ ಪ್ಲ್ಯಾಟ್-ರ್ಮ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವಾಗ, ಕಡಿಮೆ ಸಂಖ್ಯೆಯಲ್ಲಿರುವ ದಕ್ಷಿಣದ ಸಂಸದರು ನಿರ್ಲಕ್ಷಿಸಲ್ಪ ಡುವ ಸಂಭವ ಕಾಣುತ್ತದೆ. ಮೇಲ್ನೋಟಕ್ಕೆ ಸಮಾನತೆಯ ಭರವಸೆಗಳು ಭರಪೂರವಾಗಿ ಬಂದರೂ, ವಾಸ್ತವ ಬೇರೆಯೇ ಇದ್ದು ದಕ್ಷಿಣದ ಸಂಸದರು ಎರಡನೇ ದರ್ಜೆಯವರಾಗಬಹುದೇ ಎಂಬ ಸಂದೇಹ ಸುತ್ತಿಕೊಳ್ಳುತ್ತಿದೆ.
ದಕ್ಷಿಣೇತರರ ‘ಆನೆ-ಬಹುಮತ’ದಲ್ಲಿ ದಕ್ಷಿಣದ ಸಂಸದರು ಮೂಕಪ್ರೇಕ್ಷಕರಾಗಿ ಉಳಿಯುತ್ತಾರೆ. ಇಂಥ ಸನ್ನಿವೇಶದಲ್ಲಿ ಇವರು ಉತ್ತಮ ಸಂಸದೀಯ ಪಟುಗಳಾಗಿ ಹೊರಹೊಮ್ಮಬಹುದೇ? ತಮ್ಮ ಸಮಸ್ಯೆಗಳನ್ನು ಆಳುವ ದೊರೆಗಳ ಗಮನಕ್ಕೆ ತಂದು ತಮ್ಮ ರಾಜ್ಯಕ್ಕೆ, ತಮ್ಮ ಮತಕ್ಷೇತ್ರಗಳಿಗೆ ಅವರು ನ್ಯಾಯ ಒದಗಿಸಲು ಸಾಧ್ಯವೇ? ಸಂಸತ್ತಿನಲ್ಲಿ ದಕ್ಷಿಣದವರು ಉತ್ತಮ ಸಂಸದೀಯ
ಪಟುವಾಗಿ ಹೊರ ಹೊಮ್ಮಿದ ನಿದರ್ಶನಗಳು ಬಹಳ ವಿರಳ.
ಕರ್ನಾಟಕ ದಿಂದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ ಕುಮಾರರನ್ನು ಬಿಟ್ಟರೆ ಮತ್ತೊಂದು ಹೆಸರು ಅಷ್ಟಾಗಿ ಕೇಳಿ ಬರುವುದಿಲ್ಲ. ೭೦-೮೦ರ ದಶಕದಲ್ಲಿ ತುಮಕೂರಿನ ಸಂಸದ ಕೆ. ಲಕ್ಕಪ್ಪನವರ ಹೆಸರು ಮಾತ್ರ ಕೇಳುತ್ತಿತ್ತು. ಸ್ವಲ್ಪ ಮಟ್ಟಿಗೆ ಧ್ವನಿಯೆತ್ತುವ ಸಂದರ್ಭದಲ್ಲೇ ಕೈಚೆಲ್ಲುವ ದಕ್ಷಿಣದವರು, ಮರು ವಿಂಗಡಣೆ ನಂತರ ಉತ್ತರದವರ ಸುನಾಮಿಯಲ್ಲಿ ಧ್ವನಿ ಯೆತ್ತಲು ಸಾಧ್ಯವೇ? ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯ ನಂತರ ಸಂಸದರ ಸಂಖ್ಯೆಯು ಸ್ವಲ್ಪ ಹೆಚ್ಚು-ಕಡಿಮೆ ಈಗಿರುವ ಪ್ರಮಾಣದ ದುಪ್ಪಟ್ಟು ಆಗುತ್ತಿದ್ದು, ಅವರಿಗೆ ಮಾಡಬೇಕಾದ ವೆಚ್ಚವೂ ಅದೇ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.
ತೆರಿಗೆದಾರರ ಹಣವನ್ನು ಹೇಗೆ ಅನುತ್ಪಾದಕ ವಿಷಯಗಳಿಗೆ ವೆಚ್ಚಮಾಡಬಹುದು ಎಂಬುದಕ್ಕೆ ಇದು ಒಂದು ಉದಾಹರಣೆ. ಜನ
ಸಂಖ್ಯಾ ವ್ಯಾಪ್ತಿ ಮತ್ತು ಕಾರ್ಯಕ್ಷೇತ್ರ ಚಿಕ್ಕದಾದರೆ ಸಂಸದರ ಸೇವೆಯು ಪರಿಣಾಮಕಾರಿಯಾಗ ಬಹುದು ಎನ್ನುವ ತರ್ಕವನ್ನು ಒಪ್ಪಬಹುದಾದರೂ, ಸಂಸದರ ಹೆಸರಿನಲ್ಲಿ ‘ಹೊಸ ಮಹಾರಾಜರು’ ಹುಟ್ಟುತ್ತಾರೆ ಎನ್ನುವ ಟೀಕೆ ಜೋರಾಗಿ ಕೇಳಿಬರುತ್ತಿದೆ. ವಿಧಾನಸಭಾ ಸದಸ್ಯರಿರಲಿ ಅಥವಾ ಲೋಕಸಭಾ ಸದಸ್ಯರಿರಲಿ ಜನಪ್ರತಿನಿಧಿಗಳಿಗೆ ತೆರಿಗೆದಾರರ ಹಣದಿಂದ ನೀಡುವ ಸಂಬಳ,
ಸೌಲಭ್ಯ, ವಿನಾಯಿತಿಗಳು ಮತ್ತು ಪಿಂಚಣಿಯ ಬಗೆಗೆ ಸಾರ್ವಜನಿಕವಾಗಿ ಭಾರಿ ಆಕ್ರೋಶವಿದೆ.
ಅಂತೆಯೇ, ಈ ರೀತಿ ಅವರ ಸಂಖ್ಯೆಯನ್ನು ಹೆಚ್ಚಿಸಿ ದೇಶದ ಬೊಕ್ಕಸಕ್ಕೆ ಇನ್ನೂ ಆಳವಾಗಿ ಕೈಹಾಕುವುದಕ್ಕೆ ವಿರೋಧ ವ್ಯಕ್ತ ವಾಗುವುದರಲ್ಲಿ ಅರ್ಥವಿಲ್ಲದಿಲ್ಲ. ಇಂದಿರಾ ಗಾಂಧಿಯವರು ರಾಜಧನ ಪದ್ಧತಿಯನ್ನು ರದ್ದುಮಾಡಿ ಮಹಾರಾಜರ ಒಡ್ಡೋಲಗ ವನ್ನು ನಿಲ್ಲಿಸಿದ್ದರೆ, ಈಗ ಹೊಸ ಹೊಸ ಮಹಾರಾಜರನ್ನು ಹುಟ್ಟುಹಾಕಲಾಗುತ್ತದೆ ಎನ್ನುವ ಮಾತು ಕೇಳಿ ಬರುತ್ತಿರುವುದು ಈ ಕಾರಣಕ್ಕೇ!