Sunday, 15th December 2024

ಸ್ಪೆಲ್ಲಿಂಗ್ ಸ್ಪರ್ಧೆಯಲ್ಲಿ ಕನ್ನಡ ಕಣ್ಮಣಿಗಳು !

ಹೃತಿಕ್ ಕುಲಕರ್ಣಿ

ಇವರಿಬ್ಬರೂ ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠಾಗ್ರಣಿಗಳು. ಒಬ್ಬರು ಸಣ್ಣ ಕಥೆಗಳಿಂದಲೇ ಜನಮನಹೊಕ್ಕು ದೊಡ್ಡವರಾದವರು. ಇನ್ನೊಬ್ಬರಾದರೋ ಓದಲಿಕ್ಕೆ ಬಲ್ಲ ಪ್ರಾಥಮಿಕ ಶಾಲಾ ವಿದ್ಯಾರ್ಥಿಗೂ ತಿಳಿಯುವಂತೆ ಭಾರತ ಮಹಾಕಾವ್ಯವನ್ನು ಕನ್ನಡದಲ್ಲಿ ಕಥಾ ಶೈಲಿಯ ರೂಪದಲ್ಲಿ ಬರೆದವರು(‘ವಚನ ಭಾರತ’). ಇಬ್ಬರೂ ಅಭಿಜಾತ(ಪಂಡಿತ) ಕುಲಕ್ಕೆ ಸೇರಿದವರು.

ಮೈಸೂರಿನಲ್ಲಿ ಒಂದೇ ಶಾಲೆಯಲ್ಲಿ ಒಂದೇ ಕಾಲಘಟ್ಟದಲ್ಲಿ ಓದಿದವರು. ಅವರೇ- ಮಾಸ್ತಿ ವೆಂಕಟೇಶ ಅಯ್ಯಂಗಾರರು ಮತ್ತು ಅಂಬಾಳೆ ರಾಮಕೃಷ್ಣ ಕೃಷ್ಣಶಾಸ್ತ್ರಿ ಎ.ಆರ್ ಕೃಷ್ಣಶಾಸ್ತ್ರಿಗಳು ಎಂದರೆ ಥಟಕ್ಕನೆ ಹೊಳೆಯುತ್ತದೆ; ಅಲ್ಲವೆ? ಅವರೇ. ಮಾಸ್ತಿ ವೆಂಕಟೇಶ ಅಯ್ಯಂಗಾ ರರು ತಮ್ಮ ಜೀವನ ಚರಿತೆ ‘ಭಾವ’ ದಲ್ಲಿ- ತಮ್ಮ ಮತ್ತು ಎ. ಆರ್ ಕೃಷ್ಣಶಾಸ್ತ್ರಿ ಗಳ ಶಾಲಾ ದಿನದ ಒಂದು ಪ್ರಸಂಗವನ್ನು ಜ್ಞಾಪಿಸಿಕೊಂಡಿ ದ್ದಾರೆ. ಮಾಸ್ತಿ ಯವರಿಗಿಂತ ಶಾಸ್ತ್ರಿಗಳು ತರಗತಿಯಲ್ಲಿ ಒಂದು ವರ್ಷ ಕೆಳಕ್ಕೆ.

ಮೈಸೂರಿನ ವೆಸ್ಲಿ ಯನ್ ಶಾಲೆಯಲ್ಲಿ ಇವರಿಬ್ಬರ ಹೈಸ್ಕೂಲು ಅಭ್ಯಾಸ. ಶಾಲೆಯಲ್ಲಿ ಒಮ್ಮೆ ಒಂದು ಸ್ಪರ್ಧೆಯ ಏರ್ಪಾಡಾ ಯಿತು. ಹೆಸರು Spelling Bee. ಇಂಗ್ಲೀಷ್ ಭಾಷೆಯ ಸರಿಯಾದ ಅಕ್ಷರ ಸಂಯೋಜನೆ ಹೇಳುವುದು. ಎಂದರೆ ಕೇಳಿದ ಇಂಗ್ಲೀಷ್
ಪದದ ಸರಿಯಾದ ಸ್ಪೆಲ್ಲಿಂಗ್ ಹೇಳುವುದು. ಮಾಸ್ತಿಯವರು ಮತ್ತು ಕೃಷ್ಣಶಾಸ್ತ್ರಿಗಳನ್ನೂ ಒಳಗೊಂಡು ಒಟ್ಟು ೨೦ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿದ್ದರು. ಒಂದಿಂದು ತಪ್ಪು ಮಾಡಿ ಎಲ್ಲರೂ ಹೊರಹೋದರು.

ಕೊನೆಗೆ ಇವರಿಬ್ಬರೇ ಸ್ಪರ್ಧೆಗೆ ಬಿದ್ದರು; ಎದುರುಬದುರಾದರು. ಸಮಯ ದಾಟುತ್ತಿದೆ; ಇಬ್ಬರೂ ಸರಿಸಮನಾಗಿ ಯಾವ ಪದವನ್ನು ಕೇಳಿ ದರೂ ಸರಿಯೇ, ಅಕ್ಷರ ಸಂಯೋಜನೆಯಲ್ಲಿ ತಪ್ಪುತ್ತಿಲ್ಲ. ಇನ್ನೇನು ಸ್ಪರ್ಧೆಗೆ ಮೀಸಲಿದ್ದ ಕಾಲಾವಧಿ ಮುಗಿದು ಇಬ್ಬರಿಗೂ ಸಮಸ್ಥಾನ ಕೊಡಬೇಕು- ಪರೀಕ್ಷರು ಶಾಸ್ತ್ರಿಗಳಿಗೆ ‘Aeronaut’ ಪದದ ಅಕ್ಷರ ಸಂಯೋಜನೆ ಹೇಳಲು ಹೇಳಿದರು. ಶಾಸ್ತ್ರಿಗಳು ಗೊತ್ತಿಲ್ಲ ಎನ್ನಲಾಗಿ
ಮಾಸ್ತಿಯವರ ಕಡೆಗೆ ತಿರುಗಿದ ಪರೀಕ್ಷಕರಿಗೆ A e r o n a u t ಪದದ ಸರಿಯಾದ ಸ್ಪೆಲ್ಲಿಂಗ್ ಸಿಕ್ಕಿತ್ತು.

ಪರೀಕ್ಷಕರು right ಎಂದರು. ಮಾಸ್ತಿಯವರಿಗೆ ಮೊದಲ ಸ್ಥಾನ, ಶಾಸ್ತ್ರಿಗಳಿಗೆ ಎರಡನೇ ಸ್ಥಾನ ದಕ್ಕಿತು. ಮಾಸ್ತಿಯವರು ಈ ಪ್ರಸಂಗದ ಕುರಿತು ಹೇಳುವುದು ಹೀಗೆ: ಕೃಷ್ಣಶಾಸ್ತ್ರಿಗಳು ನನಗಿಂತ ಒಂದು ತರಗತಿ ಕೆಳಗೆ ಓದುತ್ತಿದ್ದರು. ಮೇಲಿನ ತರಗತಿಯ ಹುಡುಗ ಫಸ್ಟ್ ಆದದ್ದು ಅವರಿಗೇನೂ ಅವಮಾನವಲ್ಲ. ಅಲ್ಲದೆ ಇವರಿಗೆ ಆಗಲೇ ನನ್ನ ವಿಷಯಕ್ಕೆ ತುಂಬ ಮೆಚ್ಚಿಕೆ, ಪ್ರೀತಿ. ‘ನೀವಲ್ಲವೇ ಫಸ್ಟ್ ಆದದ್ದು.
ಬೇರೆ ಯಾರೂ ಅಲ್ಲವಲ್ಲ’, ಎನ್ನುವುದು ಅವರ ನಿಲುವು. ಎಂದೋ ನಡೆದ ಈ ಸಂಗತಿ.