Saturday, 14th December 2024

ಸ್ಪೈಡರ್ ಮ್ಯಾನ್‌’ನ ಸಮಸ್ಯೆಗಳ ಬಗ್ಗೆ ಒಂದಿಷ್ಟು

ಶಿಶಿರ ಕಾಲ

shishirh@gmail.com

ಸ್ಪೈಡರ್ ಮ್ಯಾನ್‌ಗೆ ಒಂದು ಸಮಸ್ಯೆ ಇದೆ. ಅವನಿಗೆ ಫಕ್ಕನೆ ಮೂತ್ರಕ್ಕೆ ಹೋಗಬೇಕು ಎಂದರೆ ಸಾಧ್ಯವೇ ಇಲ್ಲ. ಅವನ ದಿರಿಸು ಹಾಗಿದೆ. ಮೇಲಿಂದ ಕೆಳಕ್ಕೆ ಪ್ಯಾಂಟು ಶರ್ಟು ಸೇರಿ ಸಂಬಂದ್ ಒಂದೇ ಬಟ್ಟೆ. ಅವನಿಗೆ ಅರ್ಜೆಂಟಾಗಿ ನೀರು ಕುಡಿಯಲೂ ಸಾಧ್ಯವಿಲ್ಲ. ಅಪಾನ ವಾಯು ಬಂದುಬಿಟ್ಟರೆ ಅವನ ಪರಿಸ್ಥಿತಿ ಯಾರಿಗೂ ಬೇಡ, ಗಾಳಿಯಾಡದ ಬಟ್ಟೆ. ಒಳಗೇ ಉಸಿರುಗಟ್ಟಿ ಅವಸ್ಥೆ ಹರಡಿಹೋಗಬಹುದು. ಹೀಗೆ ಒಂದಿಷ್ಟು ತಮಾಷೆಗಳು ಸ್ಪೈಡರ್ ಮ್ಯಾನ್‌ನ ಬಗ್ಗೆ ಇವೆ. ಏನು ಗೊತ್ತಾ, ನಿಜವಾಗಿಯೂ ಈ ಎಲ್ಲ ಸಮಸ್ಯೆಗಳು ಮೊದಲು ಸ್ಪೈಡರ್ ಮ್ಯಾನ್ ಪಾತ್ರ ವಹಿಸಿದ ಟೊಬಿ ಮೆಗ್ವಾಯರ್‌ಗೂ ಇತ್ತು.

ಸ್ಪೈಡರ್ ಮ್ಯಾನ್ ಚಲನಚಿತ್ರದಲ್ಲಿ ಈ ಸೂಪರ್ ಹೀರೋನ ಆಕ್ಷನ್ ಸೀನ್‌ಗಳಲ್ಲಿ ಎಲ್ಲಿಯೂ ಆತನ ಚರ್ಮ ಕಾಣಿಸುವುದಿಲ್ಲ. ಅವನ ವೇಷಭೂಷಣವನ್ನು ಹೊಲಿಯುತ್ತಿದ್ದರು. ನಟ ಟೊಬಿ ಅದನ್ನು ಒಮ್ಮೆ ಧರಿಸಿದರೆ, ಹೊಲಿದ ಮೇಲೆ ಅದನ್ನು ಸಂಜೆ ಪ್ಯಾಕ್ ಅಪ್ ಅನ್ನುವವರೆಗೂ ತೆಗೆಯುವಂತಿಲ್ಲ. ನೀರು ಕುಡಿಯಬೇಕೆಂದರೆ ಬಟ್ಟೆಯ ರಂದ್ರದಿಂದ ಪೈಪ್ ನಲ್ಲಿ ಕುಡಿಯಬೇಕಿತ್ತು. ಮದ್ಯಾಹ್ನ ಊಟಕ್ಕೆ ಅವನ ರುಂಡದ ಭಾಗದ ಬಟ್ಟೆಯ ಹೊಲಿಗೆಯನ್ನಷ್ಟೇ ಬಿಚ್ಚಲಾಗುತ್ತಿತ್ತು. ಈ ಸ್ಪೈಡರ್ ಮ್ಯಾನ್ ಪಾತ್ರಕಲ್ಪನೆ ಸ್ಟ್ಯಾನ್ ಲೀ ಎಂಬ ನ್ಯೂಯೋರ್ಕ್‌ನ ಒಬ್ಬ ಕಾಮಿಕ್ ಬರಹಗಾರನದು. ಈ ಚಿತ್ರಕಥಾ ಸಾಹಿತ್ಯ ವಿಶೇಷವಾದದ್ದು.

ಸೀಮಿತ ಜಾಗದಲ್ಲಿ ಪಾತ್ರಗಳ ಚಿತ್ರ ಮತ್ತು ಅಕ್ಷರಗಳಲ್ಲಿ ಕಥೆಯೊಂದನ್ನು ಕಟ್ಟಿಕೊಡಬೇಕು. ಜೊತೆಯಲ್ಲಿ ಒಂದಿಷ್ಟು ಕಲ್ಪನೆಗೆ ಅವಕಾಶವಿರಬೇಕು.
ನಮ್ಮಲ್ಲಿ ಬಹುತೇಕ ಮಧ್ಯವಯಸ್ಕ ಸಾಹಿತ್ಯಾಸಕ್ತರೆಲ್ಲ ಪಠ್ಯೇತರ ಓದು ಶುರುಮಾಡಿದ್ದೇ ಈ ಪ್ರಕಾರದಿಂದ. ೧೯೬೨ ರ ಸಂಜೆ, ನ್ಯೂಯೋರ್ಕ್. ಅದಾಗಲೇ ಸೂಪರ್ ಮ್ಯಾನ್, ಬ್ಯಾಟ್‌ಮ್ಯಾನ್ ಜಾಗತಿಕ ಚಿತ್ರಕಥಾ ಪ್ರಪಂಚವನ್ನು ಆಳಲಿಕ್ಕೆ ಶುರು ಮಾಡಿ ಒಂದೂವರೆ ದಶಕವಾಗಿತ್ತು. ಸ್ಟ್ಯಾನ್
ಲೀ ಚಿತ್ರಕಥಾ ಸಾಹಿತಿ. ಅವನ ಪಬ್ಲಿಷರ್ ಯಾವುದಾದರೂ ಹೊಸತೊಂದು ಅದ್ಭುತ ಕಲ್ಪನೆಯ ಸೂರ್ಪ ಹೀರೋ ಸೀರೀಸ್ ಬಿಡುಗಡೆ ಮಾಡೋಣ.

ಅದಕ್ಕೆ ಯೋಚನೆ ಮಾಡಿ, ಪ್ರೊಟೋ ಟೈಪ್ (ಮೂಲಮಾದರಿ) ಸ್ಕೆಚ್ ಮಾಡಿಕೊಂಡು ಬಾ ಎಂದು ಹೊಸತೊಂದು ಜವಾಬ್ದಾರಿಯನ್ನು ವಹಿಸಿದ. ಸ್ಟ್ಯಾನ್ ಲೀ ಒಂದೆರಡು ದಿನ ತಲೆ ಕೆರೆದುಕೊಂಡು ಯೋಚಿಸುತ್ತ ಕೂತ. ಏನೇನೋ ಕಲ್ಪನೆಗಳು ಬಂದವು. ಕೋಣೆಯಲ್ಲಿ ಸೊಳ್ಳೆ ಹಾರುತ್ತಿತ್ತು. ಮೊಸ್ಕ್ಯೂಟೋ ಮ್ಯಾನ್ ಮಾಡಿದರೆ ಹೇಗೆಂದು ಯೋಚನೆ ಬಂತು. – ಮ್ಯಾನ್, ಕಾಕ್ರೌಚ್ ಮ್ಯಾನ್ ಇತ್ಯಾದಿ. ಆಗ ಹೊಳೆದದ್ದೇ ಸ್ಪೈಡರ್ ಮ್ಯಾನ್. ಒಂದಿಷ್ಟು ರೂಪುರೇಷೆ, ಗುಣವಿಶೇಷಗಳನ್ನೆಲ್ಲ ಬರೆದಿಟ್ಟುಕೊಂಡು ಮಾರನೇ ದಿನವೇ ತನ್ನ ಪಬ್ಲಿಷರ್ ಬಳಿ ಎ ಯೋಜನೆಯನ್ನು ವಿವರಿಸಿದ.
ಇದು ಪಬ್ಲಿಷರ್‌ಗೆ ಇಷ್ಟವಾಗಲೇ ಇಲ್ಲ. ಅಲ್ಲಯ್ಯಾ, ಸ್ಪೈಡರ್ ಮ್ಯಾನ್ ಅಂತೀಯಾ. ಮಕ್ಕಳಿಂದ ಮೂಗುಕರವರೆಗೆ ಈ ಜೀವಿ ಎಂದರೆ ಅಸಹ್ಯ.

ಕಂಡಲ್ಲಿ ಹೊಸಕಿ ಹಾಕುತ್ತಾರೆ. ಜನಮಾನಸದಲ್ಲಿ ಜೇಡ ಒಂದು ವಿಲನ್. ಛೇಛೇ – ಇದೂ ಒಂದು ಐಡಿಯಾನಾ? ಯಾರಯ್ಯಾ ಒಪ್ಕೊತಾರೆ? ಎಂದು ತಿರಸ್ಕರಿಸಿ ಬಿಟ್ಟ. ಆದರೆ ಸ್ಟ್ಯಾನ್ ಲೀ ತಲೆಯ ತುಂಬೆಲ್ಲ ಸ್ಪೈಡರ್ ಮ್ಯಾನ್ ಕಲ್ಪನೆಯೇ ಗಿರ್ಕಿ ಹೊಡೆಯುತ್ತಿದ್ದವು. ಅದೇ ಸಮಯದಲ್ಲಿ Amazing Fantasy ಎಂಬ ಚಿತ್ರಕಥಾ ಪ್ರಕಾಶನ – ಅದರ ಪ್ರಸಾರ ಸೊರಗಿ, ಕೊನೆಯ ಒಂದು ಸಂಚಿಕೆಯನ್ನು ಬಿಡುಗಡೆ ಮಾಡುವುದಿತ್ತು. ಸ್ಟ್ಯಾನ್ ಅವರಲ್ಲಿಗೆ ಸ್ಪೈಡರ್ ಮ್ಯಾನ್ ಕಥೆ ಮತ್ತು ಸ್ಕೆಚ್‌ಗಳನ್ನು ಕೊಂಡೊಯ್ದ. ಹೇಗಿದ್ದರೂ ಬಾಗಿಲು ಮುಚ್ಚುವವರಿದ್ದರು, ಇರಲಿ ಎಂದು ಒಪ್ಪಿದರು. ಯಾವಾಗ ಹೀಗೆ ಸ್ಪೈಡರ್ ಮ್ಯಾನ್ ಮೊದಲ ಬಾರಿ ಪ್ರಕಟವಾಯಿತು ನೋಡಿ. ಆ ಪ್ರಸಾರವೇ ಇಲ್ಲದ ಪ್ರಕಟಣೆಯ ಎಲ್ಲ ಪ್ರತಿಗಳೂ ಮಾರಾಟವಾಗಿ ಇನ್ನಷ್ಟು ಮುದ್ರಿಸ ಬೇಕಾಗಿ ಬಂತು. ಆ ಪತ್ರಿಕೆ ಅಲ್ಪ ಲಾಭವೇನೋ ಮಾಡಿಕೊಂಡಿತು, ಆದರೆ ಪ್ರಕಾಶಕನನ್ನು ದಿವಾಳಿಯಿಂದ ಮೇಲೆತ್ತಲಿಲ್ಲ. ಈ ಪ್ರಕಟಣೆಯ ಯಶಸ್ಸು ನೋಡುತ್ತಲೇ ಆತನ ಪಬ್ಲಿಷರ್ ಓಡೋಡಿ ಬಂದ, ನಂತರ Amazing Spider-Man ಆಗಿ ಇಂದಿಗೂ ಸ್ಪೈಡರ್ ಮ್ಯಾನ್ ಚಿತ್ರಕಥೆಗಳು ಪ್ರಿಂಟ್ ಆಗುತ್ತಿವೆ.

ಮಾರ್ವೆಲ್ ಚಿತ್ರಕಥಾ ನಿಯತಕಾಲಿಕೆಯಲ್ಲಿ ಸ್ಪೈಡರ್ ಮ್ಯಾನ್ ಶುರುವಾದಾಗಿನಿಂದ ಪ್ರತಿಗಳು ಕಚ್ಚಾಟ-ಮಾರಾಟವಾಗತೊಡಗಿತು. ಪುಸ್ತಕ ಪ್ರಕಾಶನ
ಸಂಸ್ಥೆಯಾದ ಮಾರ್ವೆಲ್ ಚಿತ್ರಕಥೆ, ಜತೆಯಲ್ಲಿ ಅಲ್ಲಿ ಬರುತ್ತಿದ್ದ ಪಾತ್ರಗಳ ಪ್ಲಾಸ್ಟಿಕ್ ಗೊಂಬೆಗಳನ್ನು ಮಾರಿಕೊಂಡಿತ್ತು. ಜತೆಯಲ್ಲಿ ತನ್ನ ಪಾತ್ರಗಳನ್ನು ಚಲನಚಿತ್ರವನ್ನು ಮಾಡಲು ಬೌದ್ಧಿಕ ಹಕ್ಕನ್ನು ಮಾರಾಟಮಾಡುತ್ತಿತ್ತು. ಇದೆ ರೀತಿ ಜಪಾನ್ ಮೂಲದ ಸೋನಿ ಎಂಟರ್‌ಟೈನ್ಮೆಂಟ್ ಮಾರ್ವೆಲ್ ಜತೆ ಒಡಂಬಡಿಕೆ ಮಾಡಿಕೊಂಡು ಸ್ಪೈಡರ್ ಮ್ಯಾನ್ ಚಲನ ಚಿತ್ರದ ಹಕ್ಕುಗಳನ್ನು ಪಡೆಯಿತು. ೨೦೦೦ ಇಸವಿಯ ಆಸುಪಾಸಿನಲ್ಲಿ ಮೊದಲ ಸ್ಪೈಡರ್ ಮ್ಯಾನ್ ಚಲನಚಿತ್ರ ಸೆಟ್ಟೇರಿತು.

ಆ ಕಾಲದಲ್ಲಿ ಹಾಲಿವುಡ್ಡಿನಲ್ಲಿ ಯಾವುದೇ ಹೊಸ ನಮೂನೆಯ ಚಲನಚಿತ್ರಗಳನ್ನು ಮಾಡಬೇಕೆಂದರೂ ಜನಪ್ರಿಯ ನಟರನ್ನು ಹಾಕಿಯೇ ಮಾಡು ವುದು ಸಾಮಾನ್ಯವಾಗಿತ್ತು. ಬಿಗ್ ಬಜೆಟ್ ಎಂದರೆ ಹೀರೋ ತೂಕದವನಿರಬೇಕಲ್ಲ. ಆದರೆ ಸೋನಿ ಅದೆಲ್ಲವನ್ನು ಮೀರಿ ಒಂದು ರಿಸ್ಕ್ ತೆಗೆದುಕೊಂಡಿತು. ಸ್ಟಾರ್ ಅಲ್ಲದ, ಚಿಕ್ಕ ಪುಟ್ಟ ಪಾತ್ರ ಮಾಡಿಕೊಂಡಿದ್ದ ಟೊಬಿ ಮೆಗ್ವೈರ್ ನನ್ನ ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿತು. ಟೊಬಿ ಕೆಲವು ಜನಪ್ರಿಯ ನಟರ ಜತೆ ಸಣ್ಣ ಪುಟ್ಟ ಚಲನಚಿತ್ರ ಪಾತ್ರಗಳನ್ನು ಮಾಡಿಕೊಂಡಿದ್ದ. ಈಗ ಸ್ಪೈಡರ್ ಮ್ಯಾನ್ ಆಗಿ ಪಾತ್ರವಹಿಸಲು ಆಯ್ಕೆಯಾಗಿದ್ದ. ಇದೊಂದು ಫ್ಲಾಪ್ ಚಿತ್ರ ಎಂದೇ ಎಲ್ಲರೂ ಅಂದಾಜಿಸಿದ್ದರು.

೨೦೦೨ರಲ್ಲಿ ಚಿತ್ರ ಬಿಡುಗಡೆಯಾಯಿತು ನೋಡಿ! ಅಭೂತಪೂರ್ವ ಯಶಸ್ಸು – ೮೦೦ ಮಿಲಿಯನ್ ಡಾಲರ್ (ಇಂದಿನ ಲೆಕ್ಕದಲ್ಲಿ ೬.೫ ಸಾವಿರ ಕೋಟಿ ರುಪಾಯಿ) ಸಂಪಾದನೆಯಾಯಿತು. ಇದು ಹಾಲಿವುಡ್ಡಿನ ಹಲವು ಹೊಸತುಗಳಿಗೆ ನಾಂದಿಯಾಯಿತು. ಅಲ್ಲಿಯವರೆಗೆ ಬಿಗ್ ಬಜೆಟ್ ಚಿತ್ರ ಗಳೆಂದರೆ ಲಿಯಾನಾರ್ ಡೋ ಡಿ ಕ್ಯಾಪ್ರಿಯೊ (ಟೈಟಾನಿಕ್ ಹೀರೋ) ಮೊದಲಲಾದವರನ್ನಷ್ಟೇ ಹಾಕಿಕೊಂಡು ನಿರ್ಮಿಸಲಾಗುತ್ತಿತ್ತು. ಅದೆಲ್ಲವನ್ನು ಮೀರಿ ಸ್ಪೈಡರ್ ಮ್ಯಾನ್ ನಿಂತಿದ್ದ.

ಸ್ಪೈಡರ್ ಮ್ಯಾನ್ ಮೂಲ, ಸ್ಟ್ಯಾನ್ ಲೀಯ ಕಥೆ ಬಹುತೇಕರಿಗೆ ಗೊತ್ತೇ ಇರುತ್ತದೆ. ಅದೇ ಮೊದಲ ಚಲನಚಿತ್ರವಾದದ್ದು. ಚಿಕ್ಕದಾಗಿ ಕಥೆ ಹೇಳಿ ಬಿಡುತ್ತೇನೆ. ಪೀಟರ್ ಪಾರ್ಕರ್ ಎಂಬ ಸಾಮಾನ್ಯ, ನಾಚಿಕೆಯ ಹೈಸ್ಕೂಲ್ ಹುಡುಗ. ಶಾಲೆಯಲ್ಲಿ ಗುಮ್ಮನಗುಸ್ಕನಂತೆ ಆತನ ಇರುವಿಕೆ ಅನ್ಯರಿಗೆ
ಗೊತ್ತೇ ಆಗದಂತಿರುವ ಸೌಮ್ಯ ಹುಡುಗ. ಓದಿನಲ್ಲಿ ಚುರುಕು. ಒಂದು ದಿನ ಜೇಡರಹುಳಿದ್ದ ಲ್ಯಾಬ್ ಗೆ ಅವುಗಳ ಬಗ್ಗೆ ತಿಳಿಯಲು ಅವನ ಕ್ಲಾಸ್ ಹೋಗಿರುತ್ತದೆ. ಲ್ಯಾಬ್‌ನಲ್ಲಿ ರೇಡಿಯೋ ಆಕ್ಟಿವ್ ವಿಷಪೂರಿತ ಜೇಡರ ಹುಳುವೊಂದು ಗಾಜಿನ ಡಬ್ಬಿಯಿಂದ ತಪ್ಪಿಸಿಕೊಂಡು ಛಾವಣಿಯಲ್ಲಿ ಬಲೆ
ಹೆಣೆದಿರುತ್ತದೆ. ಅದು ನಿಧಾನಕ್ಕೆ ಕೆಳಕ್ಕೆ ಬಂದು ಈ ಪೀಟರ್ ಪಾರ್ಕರ್‌ನಿಗೆ ಕಚ್ಚಿಬಿಡುತ್ತದೆ. ಅದು ಕಚ್ಚಿದ್ದೇ ಕಚ್ಚಿದ್ದು, ಪೀಟರ್ ಪಾರ್ಕರ್‌ನ ಡಿಎನ್‌ಎ ಹಂತದಲ್ಲ ಬದಲಾವಣೆಯಾಗಿ ಆತ ಸ್ಪೈಡರ್ ಮ್ಯಾನ್ ಆಗಿಬಿಡುತ್ತಾನೆ.

ಅಸಾಮಾನ್ಯ ಶಕ್ತಿ, ಸ್ಪೈಡರ್‌ನಂತೆ ದೇಹದಿಂದ ಬೇಕೆಂದಾಗ ಹೊರಬರುವ ಬಲೆಹೆಣೆಯುವ ಅಂಟು ದ್ರವ. ಅವನಿಗೆ ಮೊದಲು ಇದನ್ನೆ ಹೇಗೆ ಸ್ವೀಕರಿಸ ಬೇಕು ಎಂದೇ ತಿಳಿಯುವುದಿಲ್ಲ. ತಾನು ಪಡೆದ ತಾಕತ್ತಿನ ಅಂದಾಜು ಅವನಿಗಿರುವುದಿಲ್ಲ. ಅವನು ಸರ್ಕಸ್ ಮೊದಲಾದವುಗಳಲ್ಲಿ ವೇಷ  ಮರೆಸಿಕೊಂಡು ಹೋಗಿ ಭಾಗವಹಿಸಿ, ತನ್ನ ಚಮತ್ಕಾರಗಳನ್ನು ತೋರಿಸಿ ಒಂದಿಷ್ಟು ಹಣ ಮಾಡಲು ಶುರುಮಾಡುತ್ತಾನೆ. ಕಥೆಯಲ್ಲಿ ಅವನ ತಂದೆ ತಾಯಿ ಸೀಕ್ರೆಟ್ ಸ್ಪೈ ಗಳಾಗಿರುತ್ತಾರೆ ಮತ್ತು ವಿಮಾನ ಅಪಘಾತವೊಂದರಲ್ಲಿ ಇಬ್ಬರೂ ಸತ್ತಿರುತ್ತಾರೆ. ಮಾವ ಅತ್ತೆಯ ಜತೆ ಪೀಟರ್ ವಾಸವಾಗಿರುತ್ತಾನೆ. ಹೀಗಿರುವಾಗ ಒಂದು ದಿನ ಅವನ ಅಗಾಧ ಶಕ್ತಿಯ ಬಗ್ಗೆ ಅವನ ಮಾವ ಅಂಕಲ್ ಬೆನ್’ಗೆ ಅಂದಾಜಾಗುತ್ತದೆ.

ಅದೇ ಸಮಯದಲ್ಲಿ ಅಂಕಲ್ ಬೆನ್‌ನ ಕೊಲೆಯಾಗಿ ಹೋಗುತ್ತದೆ. ಇದೆಲ್ಲ ನಡೆಯುವುದು ಪೀಟರ್ ಪಾರ್ಕರ್ ಅಲಿಯಾಸ್ ಸ್ಪೈಡರ್ ಮ್ಯಾನ್‌ನ ಎದುರಿಗೆ. ಅಂಕಲ್ ಬೆನ್ ಸಾಯುವುದಕ್ಕಿಂತ ಮೊದಲು ಪೀಟರ್ ಪಾರ್ಕರ್‌ಗೆ ಒಂದು ಕಿವಿಮಾತು ಹೇಳುತ್ತಾನೆ: With Great power comes great responsibility’. ಸ್ಪೈಡರ್ ಮ್ಯಾನ್ ಪ್ರಿಯರಲ್ಲಿ, ಈ ಚಲನಚಿತ್ರವನ್ನು ನೋಡಿದವರಿಗೆ ಅತ್ಯಂತ ಕಾಡುವ ವಾಕ್ಯ ಇದು. ಅಷ್ಟು ಜನಪ್ರಿಯ. ಇದು ನಿತ್ಯಬದುಕಿನಲ್ಲಿ ಎಲ್ಲರಿಗೂ ಲಘುವಾಗುವ ವಾಕ್ಯ. ಹೆಚ್ಚಿನತಾಕತ್ತಿನ ಜತೆಯಲ್ಲಿಯೇ ದೊಡ್ಡ ಜವಾಬ್ದಾರಿಯೂ ಬರುತ್ತದೆ’.

ಸ್ಪೈಡರ್ ಮ್ಯಾನ್ ತನ್ನಲ್ಲಿ ಅಷ್ಟೆಲ್ಲಾ ಶಕ್ತಿಯಿದ್ದರೂ ತನ್ನ ಮಾವನನ್ನು ಬದುಕಿಸಿಕೊಳ್ಳಲಿಕ್ಕಾಗಲಿಲ್ಲ ಎಂದು ಕೊರಗುತ್ತಾನೆ. ಅಲ್ಲಿಂದ ಮುಂದೆ ನ್ಯೂಯೋರ್ಕ್‌ನ ದರೋಡೆಕೋರರನ್ನು, ಭಯೋತ್ಪಾದಕರನ್ನು, ಅತಿಮಾನುಷ ವಿಲನ್ ಗಳ ಜೊತೆ ಹೋರಾಡಿ ಆ ನಗರವನ್ನು ನಿರಂತರ ಸುರಕ್ಷಿತ ವಾಗಿ ನೋಡಿಕೊಳ್ಳುತ್ತಿರುತ್ತಾನೆ. ಇದೆಲ್ಲದರ ನಡುವೆ ಆತನೇ ಸ್ಪೈಡರ್ ಮ್ಯಾನ್ ಎಂಬುದನ್ನು ಗೌಪ್ಯವಾಗಿಟ್ಟಿರುತ್ತಾನೆ. ತನ್ನೆದುರು ಯಾರಿಗಾದರೂ ಸಮಸ್ಯೆಯಾದಾಗ ಮಾತ್ರ ಸ್ಪೈಡರ್ ಮ್ಯಾನ್ ಆಗಿ ಮರೆಯಲ್ಲಿ ವೇಷ ಬದಲಾಗುವುದು.

ಉಳಿದ ಸಮಯದಲ್ಲಿ ಅವನಿಗೆ ಹದಿಹರೆಯದವರ, ಸಾಂಸಾರಿಕ ಸಮಸ್ಯೆಗಳು, ಬಡತನ ಎಲ್ಲವೂ ಇರುತ್ತದೆ. ಈ ಕಾರಣಕ್ಕೇ ಸ್ಪೈಡರ್ ಮ್ಯಾನ್ ಇಷ್ಟ ವಾಗುವುದು. ನಮ್ಮೆಲ್ಲರಲ್ಲಿಯೂ ಒಬ್ಬ ಸ್ಪೈಡರ್ ಮ್ಯಾನ್ ಇದ್ದಾನೆ, ಅವನಿಗೆ ಸಹಜ ಸಮಸ್ಯೆಗಳಿವೆ ಆದರೆ ಒಂದು ಅಸಾಮಾನ್ಯ ತಾಕತ್ತಿದೆ. ಸ್ಪೈಡರ್ ಮ್ಯಾನ್ ಆ ತನ್ನ ವಿಶೇಷ ತಾಕತ್ತನ್ನು ಬಳಸಿಕೊಳ್ಳುವುದು ಕೇವಲ ಸಮಾಜದ ಒಳಿತಿಗೆ ಮಾತ್ರ. ಯಾವತ್ತೂ ಸ್ವಂತ ಸಮಸ್ಯೆಯ ಪರಿಹಾರಕ್ಕಲ್ಲ.
ನಮಗೆ ಸ್ಪೈಡರ್ ಮ್ಯಾನ್ ಚಲನಚಿತ್ರ ನೋಡುವಾಗ ಎಷ್ಟೋ ಬಾರಿ ಅನಿಸುತ್ತಿರುತ್ತದೆ – ಇವನು ಹೇಳಿ ಕೇಳಿ ಸ್ಪೈಡರ್ ಮ್ಯಾನ್, ಏನು ಬೇಕಾದರೂ ಮಾಡಬಹುದು, ಬ್ಯಾಂಕ್ ದರೋಡೆ ಮಾಡಿ ಹಣದ ಸಮಸ್ಯೆ ನೀಗಿಸಿಕೊಳ್ಳಬಹುದು, ಜೈಲಿಗೆ ಹಾಕಿದರೂ ಅಲ್ಲಿಂದ ಪರಾರಿಯಾಗಬಹುದು, ತಾನೇ
ಸ್ಪೈಡರ್ ಮ್ಯಾನ್ ಎಂದು ಹೇಳಿ ತಾನು ಪ್ರೀತಿಸುತ್ತಿದ್ದ ಹುಡುಗಿ ತನ್ನನ್ನೂ ಪ್ರೀತಿಸುವಂತೆ ಮಾಡಬಹುದು.

ಆದರೆ ಸ್ಪೈಡರ್ ಮ್ಯಾನ್ ತನ್ನ ತಾಕತ್ತನ್ನು ಎಂದಿಗೂ ತನಗಾಗಿ ಬಳಸಿಕೊಳ್ಳುವುದೇ ಇಲ್ಲ. ಅವನ ಶಕ್ತಿ ಏನಿದ್ದರೂ ನಾಲ್ಕು ಜನರ ಒಳಿತಿಗೆ ಮಾತ್ರ. ಇದೇ ಕೆಲವು ನೈತಿಕ ಮೌಲ್ಯದಿಂದಲೇ ಸ್ಪೈಡರ್ ಮ್ಯಾನ್ ಸೂಪರ್ ಹೀರೋಗಳಲ್ಲಿಯೇ ಭಿನ್ನ, ಶ್ರೇಷ್ಠ ಎಂದೆಲ್ಲ ಅನ್ನಿಸುವುದು. ೨೦೦೨ರಲ್ಲಿ ಸ್ಪೈಡರ್ ಮ್ಯಾನ್ ಚಲನಚಿತ್ರ ಸೂಪರ್ ಹಿಟ್ ಎಂದೇನಲ್ಲ. ಆ ಚಿತ್ರದಲ್ಲಿ ಬಂದ ಎಲ್ಲಾ ಲಾಭವೂ ಸೋನಿ ಕಂಪನಿಗೆ ಹೋಯಿತು. ಆ ಪಾತ್ರವನ್ನು ಸೃಷ್ಟಿಸಿ ಪೋಷಿಸಿದ
ಮಾರ್ವೆಲ್‌ಗೆ ಪುಡಿಗಾಸು ರಾಯಲ್ಟಿ.

ಹೀಗೆ ತನ್ನದೊಂದು ಪಾತ್ರ ಚಲನಚಿತ್ರವಾಗಿ ಇಷ್ಟೆ ಯಶಸ್ಸು ಪಡೆಯುತ್ತದೆ ಎಂದು ಮಾರ್ವೆಲ್ ಕಂಪನಿಗೆ ಅಂದಾಜಿದ್ದಂತಿರಲಿಲ್ಲ. ಅವರಿಗೆ ಕೊಡುವು ದರ ಬದಲು ತಾನೇ ಚಲನಚಿತ್ರ ಮಾಡಿ ದುಡ್ಡು ಸಂಪಾದಿಸಬಹುದ ಎಂದೆನಿಸಿತು. ಆದರೆ ಮಾರ್ವೆಲ್ ತಾನು ಸೋನಿಯ ಜತೆ ಮಾಡಿಕೊಂಡ ಒಡಂ
ಬಡಿಕೆಯಿಂದಾಗಿ ಅಸಹಾಯಕವಾಗಿತ್ತು. ಆ ಒಡಂಬಡಿಕೆ ಹೇಗಿತ್ತೆಂದರೆ ಸೋನಿ ಪ್ರತೀ ಎರಡು ವರ್ಷಕ್ಕೊಮ್ಮೆ ಸ್ಪೈಡರ್ ಮ್ಯಾನ್ ಚಲನಚಿತ್ರ ನಿರ್ಮಿಸಬೇಕು. ೫ ವರ್ಷ ೯ ತಿಂಗಳೊಳಗೆ ಕನಿಷ್ಠ ಒಂದು ಚಿತ್ರವನ್ನಾದರೂ ಬಿಡುಗಡೆ ಮಾಡಬೇಕು.

ಇದಕ್ಕೆ ತಪ್ಪಿದರೆ ಸ್ಪೈಡರ್ ಮ್ಯಾನ್ ಪಾತ್ರದ ಬೌದ್ಧಿಕ ಆಸ್ತಿ (Intellectual property) ಮಾರ್ವೆಲ್ ಗೆ ಮರಳಿ ಬಿಡುತ್ತದೆ. ಈ ಕಾರಣಕ್ಕೆ ಪ್ರತಿ ಐದು ವರ್ಷ ಕ್ಕೊಮ್ಮೆ ಸ್ಪೈಡರ್ ಮ್ಯಾನ್ ಚಿತ್ರ ನಿರ್ಮಿಸಿ ಬಿಡುಗಡೆ ಮಾಡಲೇಬೇಕು. ೨೦೦೨ ಯಶಸ್ಸಿನ ನಂತರ ೨೦೦೪, ೨೦೦೭ ರಲ್ಲಿ ಸ್ಪೈಡರ್ ಮ್ಯಾನ್ ತೆರೆಗೆ ಬಂದು ಇನ್ನಷ್ಟು ವಿಲನ್‌ಗಳನ್ನು ಕೊಂದು ಮುಗಿಸಿದ. ಆದರೆ ಆ ಎರಡೂ ಚಲನಚಿತ್ರಗಳು ಜಾಸ್ತಿ ದುಡ್ಡು ಮಾಡಲೇ ಇಲ್ಲ. ಸೋನಿ ಸ್ಪೈಡರ್ ಮ್ಯಾನ್ ನಿಂದಾಗಿಯೇ ಹಣ ಕಳೆದುಕೊಂಡಿತು. ಆದರೆ ಹಕ್ಕನ್ನು ಬಿಡಲು ಮಾತ್ರ ತಯಾರಿರಲಿಲ್ಲ. ೨೦೧೨ರಲ್ಲಿ ಹತ್ತು ವರ್ಷದ ಹಿಂದಿನ ಸ್ಪೈಡರ್ ಮ್ಯಾನ್ ಕಥೆಯನ್ನು ಯಥಾವತ್ತು ಇನ್ನೊಬ್ಬ ನಟನನ್ನು ಹಾಕಿಕೊಂಡು ನಿರ್ಮಿಸಿ ಬಿಡುಗಡೆ ಮಾಡಿತು.

ಪೀಟರ್ ಪಾರ್ಕರ್‌ನ ಸಾಮಾನ್ಯ ಬದುಕು, ಲ್ಯಾಬಿನಲ್ಲಿ ಜೇಡ ಕಚ್ಚುವುದು, ಅವನ್ನು ಸ್ಪೈಡರ್ ಮ್ಯಾನ್ ಆಗುವುದು, ಅವನೆದುರೇ ಅವನ ಮಾವ ಸಾಯುವುದು ಹೀಗೆ ಅದೇ ಕಥೆ. ಸೋನಿ ಈ ಚಲನಚಿತ್ರವನ್ನು ಮಾಡಲಿಕ್ಕೆ ಇದ್ದ ಏಕೈಕ ಕಾರಣ ಹಕ್ಕನ್ನು ತನ್ನಲ್ಲಿಯೇ ಇರಿಸಿಕೊಳ್ಳುವುದು. ಜನರು ಈ ಚಿತ್ರವನ್ನು, ಅದೇ ಕಥೆಯನ್ನು ಇನ್ನೊಬ್ಬ ಪಾತ್ರಧಾರಿ ಮಾಡುವುದನ್ನು ಕಂಡು ಉಗಿದರು, ತಿರಸ್ಕರಿಸಿದರು. ಆದರೂ ಸೋನಿ ಮಾತ್ರ ಸ್ಪೈಡರ್ ಮ್ಯಾನ್ ಚಿತ್ರವನ್ನು ಮಾಡುತ್ತಲೇ ಹೋಯಿತು.

೨೦೦೯ರಲ್ಲಿ ಡಿಸ್ನಿ ಮಾರ್ವೆಲ್ ಅನ್ನು ಖರೀದಿಸಿತು. ಇದರ ಜತೆಯ ಈ ವ್ಯಾಜ್ಯ ಈಗ ಡಿಸ್ನಿ ಮತ್ತು ಸೋನಿ ನಡುವೆ. ಈ ನಡುವೆ ಮಾರ್ವೆಲ್ ಪ್ರಕಾಶಕ ನಾಗಿದ್ದ ಮಾರ್ವೆಲ್ ಈಗ ಚಲನಚಿತ್ರ ನಿರ್ಮಾಪಕನಾಗಿತ್ತು. ತನ್ನ ಚಿತ್ರಕಥೆಯ ಹಲವಾರು ಯಶಸ್ವಿ ಸೂಪರ್ ಹೀರೋಗಳನ್ನು ತನ್ನದೇ ಬ್ಯಾನರ್ ಅಡಿಯಲ್ಲಿ ಚಲನಚಿತ್ರ ಮಾಡಿ ಯಶಸ್ವಿಯಾಗಿತ್ತು. ಮಾರ್ವೆಲ್ ಅವೆಂಜರ್ ಎಂಬ ಚಲನಚಿತ್ರದಲ್ಲಿ ತನ್ನ ಹತ್ತಾರು ಸೂಪರ್‌ ಹೀರೊಗಳನ್ನೆಲ್ಲ ಒಟ್ಟಿಗೆ ತೆರೆಗೆ ತಂದು ಯಶಸ್ವಿ ಯಾಗಿತ್ತು. ಆದರೆ ಅಲ್ಲಿ ಸ್ಪೈಡರ್ ಮ್ಯಾನ್ ಮಾತ್ರ ಇಲ್ಲ,  ಮಿಸ್ಸಿಂಗ್.

ಮಾರ್ವೆಲ್ ಅಂಗಲಾಚಿದರೂ ಸೋನಿ ಹಕ್ಕು ಬಿಟ್ಟುಕೊಡಲು ಬಿಲ್ಕುಲ್ ತಯಾರಿರಲಿಲ್ಲ. ಮಾರ್ವೆಲ್ ಬಿಡಲಿಲ್ಲ. ಕೇಸ್ ಹಾಕಿತು, ಕೋರ್ಟಿಗೆ ಹೋಯಿತು. ಏನೇನೋ ಆದವು. ಕೊನೆಗೆ ಒಂಇಬ್ಬರೂ ಒಪ್ಪಂದಕ್ಕೆ ಬಂದರು. ಅದರನು ಗುಣವಾಗಿ ಮಾರ್ವೆಲ್ ಸೂಪರ್ ಹೀರೋ ಚಿತ್ರಗಳಲ್ಲಿ ಮೊದಲ ಬಾರಿ ಸ್ಪೈಡರ್ ಮ್ಯಾನ್ ಪ್ರವೇಶವಾಯಿತು. ಅದಾದ ನಂತರ ಮಾರ್ವೆಲ್‌ನ ಸೂಪರ್ ಹೀರೋಗಳು ಸೋನಿ ಚಿತ್ರದಲ್ಲಿ, ಹೀಗೆ ಎರವಲು ಪಡೆಯುವ ವ್ಯವಸ್ಥೆಯಾಯಿತು. ಮಾರ್ವೆಲ್ ಚಿತ್ರ ಕ್ಯಾಪ್ಟನ್ ಅಮೆರಿಕಾದಲ್ಲಿ ಸ್ಪೈಡರ್ ಮ್ಯಾನ್ ಬರುತ್ತಾನೆ ಎಂಬುದು ಜಗತ್ತಿನಲ್ಲ ಸುದ್ದಿಯಾ
ಯಿತು, ೨೦೧೬ ರಲ್ಲಿ. ಅದು ಬಾಕ್ಸ್ ಆಫೀಸ್ ಹಿಟ್. ಹೇಗಿದೆ ಇದೆ ನೋಡಿ. ಇವತ್ತಿಗೂ ಸ್ಪೈಡರ್ ಮ್ಯಾನ್ ಜಗತ್ತಿನ ಅತ್ಯಂತ ಬೆಲೆಬಾಳುವ ಇಂಟಲೆಕ್ಚು ಯಲ್ ಪ್ರೊಪರ್ಟಿ ಯಲ್ಲಿ ಒಂದು.

ಒಬ್ಬ ವ್ಯಕ್ತಿಯ ಕಲ್ಪನಾ ಪಾತ್ರ. ಆ ಪಾತ್ರ ಚಿತ್ರಕಥೆಯ ರೂಪದಲ್ಲಿ ತಲೆಮಾರುಗಳ ಬಾಲ್ಯದ ಕಲ್ಪನೆಗಳ ಭಾಗವಾಗುವುದು, ನಂತರ ಅದು ಚಲನಚಿತ್ರ ವಾಗಿ ಯಶಸ್ಸು ಕಾಣುವುದು, ಪಾತ್ರವಹಿಸುವ ಹೀರೋಗಳು ಬದಲಾಗುವುದು, ನಂತರದಲ್ಲಿ ಚಿತ್ರಗಳು ಸೋಲುವುದು. ಕೋರ್ಟ್ ಕಚೇರಿ ಅಲೆಯುವುದು, ಆ ಪಾತ್ರದ ಮೇಲೆಯೇ ಮನುಷ್ಯ ಜಗತ್ತಿನ ವ್ಯವಸ್ಥೆಯ ಭಾಗವಾದ ಕೋರ್ಟಿನಲ್ಲಿ ವಾದ ವಿವಾದ ಗಳಾಗುವುದು. ನಂತರ ಕಾಲ್ಪನಿಕ ಪಾತ್ರಗಳನ್ನು ಕಂಪನಿಗಳು ಎರವಲು ಪಡೆಯುವುದು. ಇನ್ನಷ್ಟು ಸೂಪರ್ ಹೀರೋಗಳು ಆಚೀಚೆ ಹೋಗಿ ಚಿತ್ರಗಳ ಭಾಗವಾಗುವುದು. ಎರಡು ಬದ್ಧವೈರಿ ಕಂಪನಿ ಗಳು ಒಂದಾಗಿ ಕೋರ್ಟಿನಲ್ಲಿ ಸೆಣೆಸುತ್ತಲೇ ಜತೆಯಾಗಿ ಕೆಲಸಮಾಡುವುದು. ಇಂದಿಗೂ ಸ್ಪೈಡರ್ ಮ್ಯಾನ್ ಸೋನಿಯ ಸ್ವತ್ತು. ತನ್ನ ಕಥೆಯಲ್ಲಿ, ಕಥೆಯಾಚೆಯೂ ಸಮಸ್ಯೆಗಳಿರುವ ಸೂಪರ್ ಹೀರೋ ಈ ಸ್ಪೈಡರ್ ಮ್ಯಾನ್.

ಇದೆಲ್ಲ ಶುರುವಾಗಿದ್ದು ಸ್ಟ್ಯಾನ್ ಲೀ ಎಂಬ ಒಬ್ಬ ವ್ಯಕ್ತಿಯ ಕಲ್ಪನೆಯಿಂದ. ಮೊದಲು ನೋಡಿದ ವ್ಯಕ್ತಿ, ಪ್ರಕಾಶಕ ತಿರಸ್ಕರಿಸಿದ ಎಂಬ ಒಂದೇ ಕಾರಣಕ್ಕೆ ಸ್ಟ್ಯಾನ್ ಲೀ ಅದನ್ನು ಕೈಚೆಲ್ಲಿ ಬಿಟ್ಟಿದ್ದರೆ ಸ್ಪೈಡರ್ ಮ್ಯಾನ್ ಎಂಬ ಪಾತ್ರ, ಈ ಸಾಮ್ರಾಜ್ಯ ಯಾವುದೂ ಇವತ್ತು ಇರುತ್ತಿರಲಿಲ್ಲ. ಸ್ಪೈಡರ್ ಮ್ಯಾನ್ ಕಲ್ಪನೆಯ ಹುಟ್ಟಿನ ಕಥೆಯನ್ನು ಹೇಳುತ್ತಾ ಇಂಟರ್ ವ್ಯೂ ಒಂದರಲ್ಲಿ ಸ್ಟ್ಯಾನ್ ಲೀ ಹೀಗೆ ಹೇಳುತ್ತಾನೆ: : If you have an idea that you genuinely think is good, don’t let some idiot talk you out of it.. ನಿಮ್ಮ ಕಲ್ಪನೆ, ಯೋಚನೆಗಳು ನಿಜವಾಗಿಯೂ ಒಳ್ಳೆಯದೆಂದು ನಿಮಗೆ ಅನ್ನಿಸಿದಲ್ಲಿ ಯಾವನೋ ಒಬ್ಬ ಮೂರ್ಖ ಅದನ್ನು ಮಾತಿನಲ್ಲಿ ಹೊಸಕಿ ಹಾಕಲು ಬಿಡಬೇಡಿ!!