Sunday, 12th May 2024

ಕ್ರೀಡೆ ಎಂಬ ಭಾವೋದ್ರೇಕ ಹಾಗೂ ಕ್ರಿಕೆಟ್ ಎಂಬ ಧ್ಯಾನ

ನೂರೆಂಟು ವಿಶ್ವ

ಕ್ರಿಕೆಟ್ ಪಂದ್ಯಗಳನ್ನು ನಿಲ್ಲಿಸಕೂಡದು. ಯಾಕೆ ಗೊತ್ತಾ? ಇವನ್ನು ವೀಕ್ಷಿಸುತ್ತ ಜನರು ಹೊರಹಾಕುವ ಭಾವೋದ್ರೇಕ-ಹುಚ್ಚು ತನಗಳೆಲ್ಲ, ಇಂಥದೊಂದು ಅವಕಾಶವೇ ಸಿಗದೇ ಹಾಗೆಯೇ ಎದೆಗೂಡಿನಲ್ಲಿ ಉಳಿದುಬಿಟ್ಟಿದ್ದರೆ ಏನಾಗು ತ್ತಿತ್ತು ಹೇಳಿ. ಹಿಂಸೆ ಎಲ್ಲೆ ಮೀರುತ್ತಿತ್ತು. ಹೀಗಾಗಿ ಯಾವುದೇ ಆಟವಾಗಿರಬಹುದು, ಅವೆಲ್ಲವೂ ಹಿಂಸೆಯನ್ನು ಹೊರ ಹಾಕಲಿಕ್ಕೆ ಇರುವ ಸಂಸ್ಕರಿತ ಸಾಧನಗಳು. 

ಸೂರ್ಯ ಬೆಂಕಿಯ ಉಂಡೆಗಳನ್ನು ಕಕ್ಕುತ್ತಿದ್ದಾನೆ. ಬೇಸಿಗೆಯ ಝಳ ಹೇಗಿದೆಯೆಂದರೆ ಸ್ವತಃ ಸೂರ್ಯನೇ ಬಂದು ತಲೆ ಮೇಲೆ ಕುಟ್ಟಿದಂತಾಗುತ್ತಿದೆ. ಇನ್ನು ಎರಡು ತಿಂಗಳು ಕಳೆಯುವುದು ಹೇಗೋ? ಈ ಸಲದ ಬೇಸಿಗೆ ಬದುಕನ್ನು ಅಟ್ರಾಕಣಿ ಮಾಡುವ ಎಲ್ಲ ಸೂಚನೆಗಳಂತೂ ಸಿಗಲಾರಂಭಿಸಿವೆ. ಈ ಪಡಪೋಶಿ ಬೇಸಿಗೆಯ ಮಧ್ಯವೇ ಪರೀಕ್ಷೆಯ ಕಾವು ಬೇರೆ. ಜತೆಗೆ ಚುನಾವಣೆಯ ಕಾವು.
ಸಾಯಂಕಾಲವಾಗುತ್ತಿದ್ದಂತೆ ಮೊದಲಿನ ಎರಡು ಕಾವುಗಳಿಗೆ ಸಾಥಿಯಾಗುವ ಐಪಿಎಲ್ ಕ್ರಿಕೆಟ್ ಕಾವು ಬೇರೆ.

ಈ ಎಲ್ಲ ಕಾವುಗಳ ಜತೆ ನಮ್ಮ ಬದುಕಿನ ದೈನಂದಿನ ಆಸೆ, ಆಕಾಂಕ್ಷೆಗಳಿಗೆ ಕಾವು ಕೊಡಬೇಕಾದ ಕೆಲಸವಂತೂ ಇದ್ದೇ ಇದೆ. ಪರೀಕ್ಷೆ ಹಾಗೂ ಚುನಾವಣೆ ಕಾವು ಸಹನೀಯವಲ್ಲದಿರಬಹುದು. ಆದರೆ ಭಾರತದಲ್ಲಿ ಕ್ರಿಕೆಟ್ ಕೊಡುವ ಕಾವಿನ ಮುಂದೆ
ಯಾವುದೂ ಇಲ್ಲ. ಕ್ರಿಕೆಟ್‌ಗೆ ಭಾರತದಲ್ಲಿ ‘ರಿಲಿಜನ್’ ಸ್ಥಾನಮಾನ ಸಿಕ್ಕಿದೆ. ಇನ್ನು ಒಂದು ತಿಂಗಳು ಕುಂತಲ್ಲಿ, ನಿಂತಲ್ಲಿ, ಹೋದಲ್ಲಿ, ಬಂದಲ್ಲಿ ಇದೆ ಸುದ್ದಿ, ಚರ್ಚೆ.

ಇತ್ತೀಚೆಗೆ ಓಶೋ ಅವರ Seಛಿ ಈಜಿZಞಟ್ಞb ಖಡಿಟ್ಟb ಎಂಬ ಪುಸ್ತಕ ಓದುತ್ತಿದ್ದೆ. ಎರಡು ದಶಕಗಳ ಹಿಂದೆಯೇ ಓಶೊ ಈ ಬಗ್ಗೆ ಚಿಂತನೆಯ ಲಹರಿ ಹರಿಸಿದ್ದರು. ಇದೇನಪ್ಪಾ, ಕ್ರಿಕೆಟ್ ಹುಚ್ಚು ಅಂತ ಅವರು ನಮ್ಮಂತೆ ಕೇವಲ ಹುಬ್ಬೇರಿಸಿರಲಿಲ್ಲ ಅಥವಾ ಈ ಕ್ರಿಕೆಟ್‌ನ ಕ್ರೇಜ್ ದೇಶವನ್ನೇ ಹಾಳು ಮಾಡ್ತಿದೆ ಅಂತ ಸಿನಿಕರಾಗಿ ಗೊಣಗಿಕೊಳ್ಳಲೂ ಇಲ್ಲ. ಅದನ್ನೊಂದು ಆಟವಾಗಿ ನೋಡುತ್ತ ಅದನ್ನು ವಿಶ್ಲೇಷಿಸುವ ನೆಪದಲ್ಲಿ ಒಟ್ಟಾರೆ ಕ್ರೀಡೆಯ ಹಿಂದಿರುವ ಮನೋವ್ಯಾಪಾರವನ್ನು ತೆರೆದಿಡುವ ಕೆಲಸಕ್ಕೆ ಅವರು ಕೈ ಹಚ್ಚಿದ್ದರು.

ಆಟದ ಕಾವಿನ ಬಗ್ಗೆ ತುಂಬ ಕೂಲ್ ಆಗಿ ಚಿಂತನೆ ಹರಿ ಬಿಡುವುದು ಬಹುಶಃ ಓಶೋ ಅವರಂಥವರಿಗೆ ಮಾತ್ರ ಸಾಧ್ಯವೇನೋ? ಯಾರೋ ಓಶೋಗೆ ಪ್ರಶ್ನಿಸಿದ್ದರು: ‘ಓಶೋ ಅವರೇ, ಭಾರತದಲ್ಲಿ ಕ್ರಿಕೆಟ್ ಅನ್ನೋದು ಯಾವ ಪರಿ ಪ್ರಖ್ಯಾತವಾಗುತ್ತಿದೆ, ಜನರು ಅದ್ಯಾವ ಪರಿಯಲ್ಲಿ ಹುಚ್ಚು ಹತ್ತಿಸಿಕೊಂಡು ಈ ಆಟ ನೋಡಲು ಮುಗಿಬೀಳುತ್ತಿದ್ದಾರೆ ಎಂಬುದು ನಿಮಗೂ ಗೊತ್ತು. ಈ ವಿದೇಶಿ ಆಟದ ಜನಪ್ರಿಯತೆಯಿಂದಾಗಿ ನಮ್ಮದೇ ದೇಶದ ಅವೆಷ್ಟೋ ಬಗೆಯ ಆಟಗಳಿಗೆ ಬಯಲಲ್ಲಿ ಮಿಂಚುವ ಅವಕಾಶವೇ ಸಿಗದಂತಾ ಗಿದೆ. ಕ್ರಿಕೆಟ್‌ನ ಖದರು ಅದ್ಯಾವ ಮಟ್ಟ ತಲುಪಿದೆ ಅಂತಂದ್ರೆ, ಅನೇಕ ಟೆಸ್ಟ್ ಆಟಗಾರರನ್ನು ಸ್ಟಾರ್‌ಗಳಂತೆ ನೋಡುತ್ತ
ಅವರನ್ನು ಆರಾಧಿಸುವ ಹಂತಕ್ಕೂ ಜನ ತಲುಪಿದ್ದಾರೆ.

ಆದರೆ, ಈ ಆಟದ ಕಾರಣದಿಂದ ಸ್ವದೇಶಿ ಆಟಗಳಿಗೆ ನೆಲೆ ಕಂಡುಕೊಳ್ಳುವುದೇ ಕಷ್ಟವಾಗುತ್ತಿದೆ. ನೀವು ಈ ಕ್ರಿಕೆಟ್ ಕ್ರೇಜ್ ಅನ್ನು ಹೇಗೆ ವಿಶ್ಲೇಷಿಸುತ್ತೀರಿ?’. ಓಶೋ ಅಂದು ಹೇಳಿದ್ದರು- ‘ಈ ಕ್ರೇಜ್ ಅಥವಾ ಕಾವು ಅನ್ನೋದಕ್ಕೆ ಭಾರತದ ಒಳಗೆ-ಹೊರಗೆ ಎನ್ನುವ ಫರಕ್ ಲಾಗೂ ಆಗುವುದಿಲ್ಲ. ಜನರನ್ನು ಹುಚ್ಚೆಬ್ಬಿಸುವ ಅನೇಕ ಆಟಗಳು ಜಗತ್ತಿನಲ್ಲಿವೆ. ಆದರೆ ಅವೆಲ್ಲದರ ಉದ್ದೇಶ ಒಂದೇ.
ಕ್ಯಾಲಿ-ರ್ನಿಯಾದ ವಿಶ್ವವಿದ್ಯಾಲಯವೊಂದು ಒಂದಿಡೀ ವರ್ಷವನ್ನು ಸಮೀಕ್ಷೆಯೊಂದಕ್ಕೆ ಎತ್ತಿಟ್ಟಿತು.

ಫುಟ್ಬಾಲ್ ಪಂದ್ಯಗಳಿದ್ದಾಗಲೆಲ್ಲ ಜನರು ಎಷ್ಟರಮಟ್ಟಿಗೆ ಹುಚ್ಚೇಳುತ್ತಾರೆ ಎನ್ನುವ ವಿಷಯದ ನಾನಾ ಆಯಾಮಗಳನ್ನು ತಡಕಾಡುವ ಕೆಲಸ ಆ ಸಮೀಕ್ಷೆಯದಾಗಿತ್ತು. ಪಂದ್ಯಗಳು ಮುಕ್ತಾಯವಾಗಿ ವಾರಗಳುರುಳಿದರೂ ಅಪರಾಧದ ಪ್ರಮಾಣ ಶೇ.೧೪ರಷ್ಟು ಏರಿಕೊಂಡೇ ಇರುತ್ತಿತ್ತು. ಕಂಡಾಪಟ್ಟೆ ಹಿಂಸೆ, ಹೆಚ್ಚೆಚ್ಚು ಆತ್ಮಹತ್ಯೆ ಹಾಗೂ ಅತ್ಯಾಚಾರಗಳು ಸಂಭವಿಸುತ್ತಿದ್ದವು. ಅಷ್ಟಾಗಿಯೂ ಸರಕಾರ ಆಟ ಮುಂದುವರಿಯಲು ಅವಕಾಶ ನೀಡಿತ್ತು’.

ನನ್ನ ಅಭಿಪ್ರಾಯವೂ ಅದೇ! ಈ ಪಂದ್ಯಗಳನ್ನು ನಿಲ್ಲಿಸಕೂಡದು. ಯಾಕೆ ಗೊತ್ತಾ? ಈ ಪಂದ್ಯಗಳನ್ನು ವೀಕ್ಷಿಸುತ್ತ ಜನರು ಹೊರಹಾಕುವ ಭಾವೋದ್ರೇಕ-ಹುಚ್ಚುತನಗಳೆಲ್ಲ, ಇಂಥದೊಂದು ಅವಕಾಶವೇ ಸಿಗದೇ ಹಾಗೆಯೇ ಎದೆಗೂಡಿನಲ್ಲಿ ಉಳಿದು ಬಿಟ್ಟಿದ್ದರೆ ಏನಾಗುತ್ತಿತ್ತು ಹೇಳಿ. ಇನ್ನಷ್ಟು ಅತ್ಯಾಚಾರಗಳಾಗುತ್ತಿದ್ದವು, ಹಿಂಸೆ ಎಲ್ಲೆ ಮೀರುತ್ತಿತ್ತು. ಹೀಗಾಗಿ ಅದು ಕ್ರಿಕೆಟ್ಟೊ, ವಾಲಿವಾಲ್ ಅಥವಾ ಹಾಕಿ ಯಾವುದೇ ಆಟವಾಗಿರಬಹುದು. ಅವೆಲ್ಲವೂ ಹಿಂಸೆಯನ್ನು ಹೊರಹಾಕಲಿಕ್ಕೆ ಇರುವ ಸಂಸ್ಕರಿತ ಸಾಧನಗಳು. ಎಲ್ಲಿಯವರೆಗೆ ಮನುಷ್ಯನಲ್ಲಿ ಸಿಟ್ಟು ಮನೆ ಮಾಡಿಕೊಂಡಿರುತ್ತದೋ, ಹಿಂಸೆ ಹುತ್ತಗಟ್ಟಿರುತ್ತದೋ ಅಲ್ಲಿಯವರೆಗೆ ಆಟಗಳಿಂದ ಯಾವ ಅಪಾಯವೂ ಇಲ್ಲ.

ರಾಜಕೀಯ ನೇತಾರರು ಹಾಗೂ ಚಿತ್ರತಾರೆಗಳಂತೆ ಕ್ರಿಕೆಟ್ ಆಟಗಾರರಿಗೂ ಅನುಯಾಯಿಗಳು ಹುಟ್ಟಿಕೊಂಡರೆ ಅದಕ್ಕೂ ನನ್ನಿಂದ ಯಾವ ಆಕ್ಷೇಪಣೆಯೂ ಇಲ್ಲ. ನನಗಿರುವ ಒಂದೇ ಕಾಳಜಿ ಅಂತಂದ್ರೆ, ಈ ರಾಜಕೀಯ ನಾಯಕರನ್ನು ಯಾವತ್ತೂ ಕೆಳಗಿನ ಸ್ಥಾನದಲ್ಲೇ ಇಡಬೇಕು ಅನ್ನೋದು. ಎದೆಯಲ್ಲಿ ಬಿಗಿದಿಟ್ಟುಕೊಂಡ ಪ್ರೀತಿಯನ್ನು, ಹತ್ತೆಂಟು ಭಾವನೆಗಳನ್ನು ಹೊರ ಹಾಕಲು ಚಿತ್ರತಾರೆಗಳು ನೆರವಾಗುತ್ತಾರೆ. ಅದಕ್ಕಾಗಿ ಅವರಿಗೆ ಗೌರವ ಸಲ್ಲುವುದರಲ್ಲಿ ತಪ್ಪಿಲ್ಲ.

ದುರಂತ ಅಂದ್ರೆ, ಇತ್ತೀಚೆಗೆ ಬಹಳಷ್ಟು ಚಿತ್ರತಾರೆಯರಿಗೆ ರಾಜಕೀಯ ಪ್ರವೇಶಿಸುವ ತೆವಲು ಹತ್ತಿಬಿಟ್ಟಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಅವರು ಚಿತ್ರತಾರೆಯರಾಗಿದ್ದಾಗ ಕಲಾವಿದರಾಗಿದ್ದರು. ರಾಜಕೀಯಕ್ಕೆ ಪ್ರವೇಶಿಸಿದವರ ಬದುಕಿನಲ್ಲಿ ಕಲೆಗೆ ಜಾಗವಿರುವುದಿಲ್ಲ. ರಾಜಕೀಯದಲ್ಲಿರುವವರು ಎಂಥ ಜನ ಅಂದ್ರೆ, ಮತ್ತೇನೂ ಮಾಡಲಿಕ್ಕೆ ಸಾಮರ್ಥ್ಯ ಇಲ್ಲ ಅಂತ ಅಲ್ಲಿಗೆ ಜಮೆಯಾದವರು. ಹೀಗಾಗಿ ಚಿತ್ರತಾರೆಯರು ಮತ್ತೆ ಕಲಾವಿದರ ಸ್ಥಾನಕ್ಕೆ ಹಿಂತಿರುಗುವ ಅವಕಾಶವೇ ಇರುವುದಿಲ್ಲ. ಅವರು
ರಾಜಕೀಯವನ್ನು ಮೈಗೂಡಿಸಿಕೊಂಡುಬಿಡುತ್ತಾರೆ. ಆಟದ ವಿಷಯದಲ್ಲೂ ಅಷ್ಟೆ.

ಕ್ರಿಕೆಟ್, ಫುಟ್‌ಬಾಲ್ ಇಲ್ಲವೇ ಇತರ ಕ್ರೀಡೆಗಳ ಆಟಗಾರರು ನಮ್ಮೊಳಗಿನ ಭಾವಗಳನ್ನು ಹೊರಹೊಮ್ಮಿಸಲು ಸಹಾಯಕ್ಕೆ ಬರುತ್ತಾರೆ. ಅವರ ಆಟವನ್ನು ನೋಡುತ್ತ, ನೋಡುತ್ತ ನಿಮ್ಮೊಳಗಿನ ಎಂಥದೋ ಉದ್ವೇಗಗಳನ್ನೆಲ್ಲ ನೀವು ಹೊರಹಾಕಿರುತ್ತೀರಿ. ಈಗ ಭಾರತೀಯ ಆಟಗಳ ವಿಷಯಕ್ಕೆ ಬರೋಣ. ಕ್ರಿಕೆಟ್, ಫುಟ್‌ಬಾಲ್ ಇಲ್ಲವೇ ಹಾಕಿಯ ಸಮಾನವಾಗಿ ನಿಲ್ಲುವ ಒಂದೇ ಆಟವೂ ನಮ್ಮಲಿಲ್ಲ. ಅದು ಯಾರ ತಪ್ಪೂ ಅಲ್ಲ ಬಿಡಿ. ವಾಸ್ತವದ ನೆಲೆಯಲ್ಲಿ ನಿಂತು ಯೋಚನೆ ಮಾಡಿ.

ಕಬಡ್ಡಿ… ಕಬಡ್ಡಿ… ಅಂತ ನೀವೆಷ್ಟೇ ಒದರಿಕೊಂಡರೂ ಅದು ಒಂದು ಉತ್ಕರ್ಷವನ್ನು ಹುಟ್ಟುಹಾಕೀತಾ? ಅಲ್ಲ ಸ್ವಾಮೀ,
ಜನರು ದಿನನಿತ್ಯ ಆಡಿಕೊಂಡಿರುವ ಆಟವೇ ಅದಲ್ವೇ? ಮನೆ ಯಲ್ಲಿ ಎಲ್ಲರೂ ಮತ್ತೊಬ್ಬರ ಜತೆ ಕಬಡ್ಡಿ ಆಡಿಕೊಂಡಿರುವವರೇ. ಇಡೀ ದೇಶವೇ ಕಬಡ್ಡಿ ಆಟದ ಮೈದಾನವಾಗಿಬಿಟ್ಟಿದೆ. ಹೀಗಿರುವಾಗ ಮತ್ತಷ್ಟು ಕಬಡ್ಡಿ ಯಾರಿಗೆ ಬೇಕು ಹೇಳಿ? ಅದರಲ್ಲಿ ಯಾರಿ ಗಾದರೂ ಉಮೇದು ಉಳಿದುಕೊಂಡಿರುವುದು ಸಾಧ್ಯವಾ? ದಿನವೂ ನಡೆಯುವುದನ್ನು ಬಯಲಿಗೆ ಹೋಗಿ ನೋಡುವವ ರ‍್ಯಾರು? ಹತಾಶ ವಾಸ್ತವವೊಂದನ್ನು ನಾವೆಲ್ಲ ಒಪ್ಪಿಕೊಳ್ಳಲೇಬೇಕು.

ಏನಂದ್ರೆ, ಭಾರತದ ಆಟಗಳಲ್ಲಿ ಒಂದು ಗಟ್ಟಿತನ ಇಲ್ಲ. ನಮ್ಮ ಆಟಗಳಲ್ಲಿ ಯಾಕೆ ಗಟ್ಟಿತನವಿಲ್ಲ ಅನ್ನೋದಕ್ಕೂ ಕಾರಣಗಳಿವೆ.
ಎಲ್ಲವಕ್ಕೂ ಒಂದು ಕಾರಣವಿರುತ್ತದೆ. ಭಾರತದಲ್ಲಿ ಆಟಗಳು ಅಂತ ಏನಿವೆ, ಅವೆಲ್ಲ ಮಕ್ಕಳಾಟಗಳು! ಇಲ್ಲಿ, ಯುವಕರಿಗೆ ಮೀಸಲಾದ, ಅವರ ಭಾವನೆಗಳಿಗೆ ವೇದಿಕೆ ಒದಗಿಸುವ ಯಾವ ಆಟವೂ ಇಲ್ಲ. ಏಕೆಂದರೆ, ಚಿಕ್ಕ ವಯಸ್ಸಿಗೆ ಮದುವೆ ಮಾಡುವ ಪರಿಪಾಠವಿದ್ದ ಭಾರತದಲ್ಲಿ ತಾರುಣ್ಯದ ನಲಿವಿಗೆ ಸಮಯವೇ ಇರಲಿಲ್ಲ. ನನ್ನ ತಾಯಿಗೆ ಮದುವೆಯಾಗಿದ್ದು ಆಕೆಯ ಏಳನೇ ವರ್ಷದಲ್ಲಿ.

ಆಗ ತಂದೆಯ ವಯಸ್ಸು ೧೨ ವರ್ಷಗಳಿರಬಹುದು. ಹೀಗೆ ಹನ್ನೆರಡನೇ ವಯಸ್ಸಿನಲ್ಲಿ ಮದುವೆ ಯಾಗಿ ಸಂಸಾರದ ನೊಗ ಹೊರುವವರು ಬಯಲಿಗಿಳಿದು ಕ್ರಿಕೆಟ್, ಫುಟ್‌ಬಾಲ್ ಆಡುವುದನ್ನು ನಿರೀಕ್ಷಿಸಲಿಕ್ಕಾಗುತ್ತದಾ? ಪಶ್ಚಿಮದಲ್ಲಿ ಪರಿಸ್ಥಿತಿ ಭಿನ್ನ. ೨೫, ೨೮,೩೦ರ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಹುಡುಗರು ೧೪ಕ್ಕೆ ಹಾಗೂ ಹುಡುಗಿಯರು ೧೩ಕ್ಕೆಲ್ಲ ಮಗುವನ್ನು ಹೆರುವ
ಸಾಮರ್ಥ್ಯ ಪಡೆದಿರುತ್ತಾರೆ. ಆದರೂ ಮತ್ತೊಂದು ಹತ್ತು ವರ್ಷ ಅವರು ಕಾಯುತ್ತಾರೆ.

ಈ ಅವಧಿಯ ತಾರುಣ್ಯ ಎಲ್ಲೋ ಒಂದು ಕಡೆ ಅಭಿವ್ಯಕ್ತಗೊಳ್ಳಬೇಕಲ್ಲ? ಹೀಗಾಗಿಯೇ ಪಶ್ಚಿಮದ ಆಟಗಳಲ್ಲಿ ತಾರುಣ್ಯದ ಘಮ.
ಭಾರತದ ಆಟಗಳಲ್ಲಿ ಮಾತ್ರ ಬಾಲ್ಯದ್ದೇ ನವಿರು. ಅವು ಭಾರತದ್ದು ಎಂಬ ಒಂದೇ ಕಾರಣಕ್ಕೆ ಆ ಆಟಗಳನ್ನು ಸ್ವಾಗತಿಸುತ್ತೀರಿ ಎಂದಾದರೆ ಅದು ನಿಮ್ಮ ಆಯ್ಕೆಗೆ ಬಿಟ್ಟ ವಿಷಯ. ಆದರೆ ಯೌವನದ ಗರ್ಭದಲ್ಲಿ ಜನಿಸಿದ ಒಂದೇ ಒಂದು ಆಟವೂ ಭಾರತ ದಲ್ಲಿಲ್ಲ ಎಂಬುದು ಮಾತ್ರ ಖರೆ.

ನಿಮಗೆ ಗೊತ್ತಿರಬೇಕು, ಆಟಗಳಿಗೂ ಒಂದು ವಯಸ್ಸಿದೆ. ಹೆಚ್ಚಿನ ಆಯುಷ್ಯ ಹೊಂದಿರುತ್ತಿದ್ದ ದೇಶಗಳಲ್ಲಿ ಬೇರೆ ಥರದ ಆಟಗಳು ಚಾಲ್ತಿಯಲ್ಲಿರುವುದನ್ನು ಗಮನಿಸಬಹುದು. ಉದಾಹರಣೆಗೆ ಚೆಸ್. ಇಂಥ ಆಟಗಳು ವಯಸ್ಸಾದವರದ್ದೇ ಹೊರತು ಯುವಕ ರದ್ದಲ್ಲ. ಎಲ್ಲವನ್ನೂ ಮುಗಿಸಿ ಸಂಧ್ಯಾಕಾಲ ದಲ್ಲಿರುವ ನಿರ್ಲಿಪ್ತತೆ ಹೊರಗೆ ಹಾಕುವ ಆಟವದು. ಇಂಥ ದೊಂದು ಭಾವವನ್ನು ಹೊರಗೆ ಹಾಕಿದ ನಂತರ ಕಬಡ್ಡಿಯೂ ಬೇಕಾಗುವುದಿಲ್ಲ, ಚೆಸ್ ಕೂಡ ಬೇಕಾಗುವುದಿಲ್ಲ. ಯುವಕರ ಸರಾಸರಿಯೇ ಹೆಚ್ಚಿರುವ ದೇಶಗಳಲ್ಲಿ ಅಲ್ಲಿನ ಆಟಗಳಲ್ಲೂ ಯೌವನ ಹರಡಿಕೊಂಡಿರುತ್ತದೆ.

ಬೀಟಲ್ ಸಂಗೀತ ಜಗತ್ತಿನಾದ್ಯಂತ ಆಕರ್ಷಣೆ, ಗೌರವ ಪಡೆದುಕೊಳ್ಳುತ್ತಿದೆ. ಅದರರ್ಥ ಆ ಸಂಗೀತ ತುಂಬ ಗ್ರೇಟ್ ಅಂತೇನೂ ಅಲ್ಲ. ಅದು ಯುವಕರಿಗೆ ಸೇರಿದೆ ಅನ್ನೋದು ಆಕರ್ಷಣೆಗೆ ಕಾರಣ. ಕ್ಲಾಸಿಕಲ್ ಸಂಗೀತವನ್ನು ಅರ್ಥೈಸಿಕೊಳ್ಳಲು ನಿಮಗೆ ತುಂಬ ಸಮಯ ಬೇಕು. ಅಷ್ಟರಲ್ಲಿ ವಯಸ್ಸಾಗಿರುತ್ತದೆ. ಬೀಟಲ್ ಹಾಗೂ ಇತರ ಸಂಗೀತಗಳಿಗೆ ಸೇರಿದ ಜನ ಮೇಲೆ-ಕೆಳಗೆ ಹಾರಿ ಕೊಂಡಿರುತ್ತಾರೆ ಅನ್ನೋ ದನ್ನು ಬಿಟ್ಟರೆ ಅದೇನೂ ಅದ್ಭುತ ನೃತ್ಯವೂ ಅಲ್ಲ, ಭಾರಿ ಸಂಗೀತವೂ ಅಲ್ಲ. ಆದರದು ಯುವಕರಿಗೆ ಕನೆಕ್ಟ್ ಆಗುತ್ತದೆ ಎಂಬುದು ಮುಖ್ಯವಾಗುತ್ತದೆ. ಜನರಿಗೆ ಭಾವನೆಗಳನ್ನು ಹೊರಹಾಕುವುದಕ್ಕೆ ಶಾಲಾ ಹಂತದಲ್ಲೇ ವೇದಿಕೆ ಗಳನ್ನು ಒದಗಿಸಬೇಕು. ನಮ್ಮ ದೇಶದಲ್ಲಿ ಸಮಸ್ಯೆ ಇರುವುದು ಈ ಹಂತದಲ್ಲೇ.

ನಮ್ಮ ವಿದ್ಯಾರ್ಥಿಗಳು ರೊಚ್ಚಿಗೆದ್ದು ಪ್ರತಿಭಟನೆಗಳನ್ನು ಮಾಡುತ್ತಾರೆ, ಕಲ್ಲು ತೂರುತ್ತಾರೆ, ಶಿಕ್ಷಕರ ಮೇಲೆಯೇ ಮುರಿದು ಕೊಂಡು ಬೀಳುತ್ತಾರೆ, ಶಾಲೆಗೇ ಬೆಂಕಿ ಇಡುತ್ತಾರೆ. ಇದಕ್ಕೆ ಜವಾಬ್ದಾರರು ನಾವೇ. ಅವರ ಭಾವನೆಗಳ ಜ್ವಾಲೆಯನ್ನು ಹೊರ ಹಾಕುವುದಕ್ಕೆ ಸೂಕ್ತ ಮಾರ್ಗವನ್ನು ನಾವು ಮಾಡಿಕೊಟ್ಟಿಲ್ಲ. ಕಲ್ಲು ಎಸೆಯುವುದಕ್ಕೂ ಮುಂಚೆ ಈ ಯುವಕರ ಕೈಗೆ ವಾಲಿ ಬಾಲ್ ಸಿಕ್ಕರೆ, ಕಲ್ಲು ತೂರಾಟದಲ್ಲಿ ಸಿಕ್ಕ ತೃಪ್ತಿಯನ್ನು ಇದರಲ್ಲೇ ಅನುಭವಿಸಬಲ್ಲರು. ಶಾಲೆ, ಅಲ್ಲಿನ ಶಿಕ್ಷಕರು ಎಲ್ಲರೂ ಇದರಿಂದ ನಿರಾಳರಾಗಿರಬಹುದು. ಆಟಗಳ ಸೈಕಾಲಜಿಯೇ ಇಷ್ಟು. ನಮ್ಮೊಳಗೆ ನಾವು ಭಾವನೆಗಳ ಲಾವಾರಸವನ್ನು ಇಟ್ಟು ಕೊಂಡಿದ್ದೇವೆ. ಅವನ್ನು ಹೊರಗೆ ಚಿಮ್ಮಿಸಿ ಒಳಗಿನ ಕಾವನ್ನು ಉಪಶಮನ ಮಾಡುವುದೇ ಈ ಆಟಗಳ ಕೆಲಸ.

ಭಾರತದಲ್ಲಿ ಬಹಳ ಸಮಯದವರೆಗೂ ತಾರುಣ್ಯಕ್ಕೆ ಸ್ಥಾನವೇ ಇರಲಿಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಹುಡುಗ- ಹುಡುಗಿಯರು ಸಮಾಜದಲ್ಲಿ ಬೆರೆಯುವ ಮೊದಲೇ ಮದುವೆಗಳಾಗಿ ಬಿಟ್ಟಿರುತ್ತಿದ್ದವಾದ್ದರಿಂದ ಅಲ್ಲಿ ಪ್ರೇಮ ವಿವಾಹಗಳಿಗೆ ಜಾಗವಿರಲಿಲ್ಲ. ಗಂಡ-ಹೆಂಡತಿ ಆಟವಾಡುತ್ತ ಅಣ್ಣ-ತಂಗಿಯರಂತೆ ಬೆಳೆಯುತ್ತಿದ್ದರು. ಸಾವಿರಾರು ವರ್ಷಗಳವರೆಗೆ ತಾರುಣ್ಯ ಎಂಬುದು ಸಂವೇದನೆಗೇ ದಕ್ಕದಂತೆ ಕರಗಿಹೋಗುತ್ತಿತ್ತು. ಏಳೆಂಟು ವರ್ಷದವನಿದ್ದಾಗಲೇ ಅಪ್ಪನ ಕೆಲಸವನ್ನೇ ಮಗ ಅನುಸರಿಸಿ ಕೊಂಡು ಹೋಗುತ್ತಿದ್ದ.

ಹೊಲಕ್ಕೆ ಹೋಗುತ್ತಲೋ, ಚಪ್ಪಲಿ ಅಂಗಡಿಯಲ್ಲಿ ಜತೆ ಯಾಗುತ್ತಲೋ ಉದ್ಯೋಗಕ್ಕೆ ಧುಮುಕುತ್ತಿದ್ದ. ಬಾಲ್ಯ ಹಾಗೂ ವೃದ್ಧಾಪ್ಯದ ನಡುವೆ ತಾರುಣ್ಯಕ್ಕೆ ಸ್ಥಾನವೇ ಇರದಂತಾಗಿತ್ತು. ಯೌವನ ಬಂದಿದ್ದು ಪಶ್ಚಿಮದ ಆಧುನಿಕ ಶಿಕ್ಷಣದ ಮೂಲಕ. ಅದು ಯೂಥ್ ಎಂಬ ಹೊಸ ವರ್ಗವೊಂದನ್ನು ಸೃಷ್ಟಿಸಿತು. ಯೌವನಕ್ಕೆ ಬೇಕಾದ ಹಾಡು, ಸಾಹಿತ್ಯ ಹಾಗೂ ಸಿನಿಮಾಗಳು ಹುಟ್ಟಿದ್ದೇ ಅಲ್ಲಿಂದ. ಪ್ರತಿಯೊಂದಕ್ಕೂ ಒಳ್ಳೆಯ ಹಾಗೂ ಕೆಟ್ಟ ಮುಖಗಳಿರುತ್ತವೆ. ನಾವದನ್ನು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಅನ್ನೋದಷ್ಟೆ ಮುಖ್ಯವಾದದ್ದು.

ಆಟಗಳಿಗೂ ಈ ಮಾತು ಅನ್ವಯಿಸುತ್ತದೆ. ಸಾವಿರಾರು ವರ್ಷಗಳ ಧೂಳಿನ ಅವಶೇಷಗಳಲ್ಲಿ ಮುಚ್ಚಿಹೋದ ದೇಶದ ಆತ್ಮವನ್ನು ಈ ಮೂಲಕ ಕಂಡುಕೊಳ್ಳಬಹುದಾದ, ತೊಳೆದು ಹೊಳೆಸಬಹುದಾದ ಅವಕಾಶ ಇದ್ದೇ ಇದೆ. ಹೀಗಾಗಿ ದಿಲ್ಲಿಯಲ್ಲೋ, ಕೋಲ್ಕತ್ತಾ ದಲ್ಲೋ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದರೆ, ದೇಶಕ್ಕೆ ದೇಶವೇ ಕುಳಿತು ವೀಕ್ಷಿಸುತ್ತದೆ. ಈ ಭಾವನೆಗಳನ್ನು ಹೊರಹಾಕುವ ಪರಿ ಒಬ್ಬನದಲ್ಲ. ಇಡೀ ದೇಶವೇ ಅಂಥ ಒಂದು ಮನಸ್ಥಿತಿಗೆ ತನ್ನನ್ನು ರೂಪಿಸಿಕೊಳ್ಳುತ್ತದೆ.

ಭಾರತದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದರೆ, ಅತ್ಯಾಚಾರ, ಹಿಂಸಾಚಾರ ನಡೆಯುವುದಿಲ್ಲ. ಗಡಿಯಲ್ಲಿರುವ ಯೋಧ ಬಂದೂಕು ಕೆಳಗಿಟ್ಟು ಟಿವಿ ಸೆಟ್ ಮುಂದೆ ಕುಳಿತಿರುತ್ತಾನೆ. ಕ್ರಿಕೆಟ್ ಬಗ್ಗೆ ಗಂಧಗಾಳಿ ಗೊತ್ತಿರದವರೂ ಟಿವಿ ಮುಂದೆ ಕುಳಿತವರ ಹಾವಭಾವ ಗಳನ್ನು ನೋಡಿ ಮಜಾ ತೆಗೆದುಕೊಳ್ಳುತ್ತಿರುತ್ತಾರೆ. ಇಡೀ ದೇಶ ಒಂದು ಧ್ಯಾನಸ್ಥ ಸ್ಥಿತಿಗೆ ಕುಳಿತಿರುತ್ತದೆ. ಇದನ್ನು ಸಮೂಹಸನ್ನಿ ಎಂದು ಕರೆಯುವುದಿದ್ದರೆ ಬೇಕಾದರೆ ಕರೆಯಿರಿ. ಕ್ರೇಜಿ ಅಂತಾನೂ ಹೇಳಿ. ನನ್ನ ದೃಷ್ಟಿಯಲ್ಲಿ ಇದೊಂದು ಧ್ಯಾನ. ಕ್ರಿಕೆಟ್‌ಗೆ ಅಂಥ ಶಕ್ತಿಯಿದ್ದರೆ ಅದನ್ನು ಒಪ್ಪಿಕೊಳ್ಳೋಣ, ಅಪ್ಪಿಕೊಳ್ಳೋಣ. ಓಶೋ ಮಾತು ಎಷ್ಟು ಸತ್ಯ!

Leave a Reply

Your email address will not be published. Required fields are marked *

error: Content is protected !!