Thursday, 21st November 2024

ಸ್ಪೂರ್ತಿಪಥ ಅಂಕಣ: JOHARI Window: ವ್ಯಕ್ತಿತ್ವ ವಿಕಸನದ ಹಾದಿಯ ಮೈಲಿಗಲ್ಲು- ಜೋಹಾರಿ ಕಿಟಕಿ

johari window

Self Evaluation: ಸ್ವ ಅವಲೋಕನದ ಶಕ್ತಿಶಾಲಿಯಾದ ಮಾಪನ ಇದು

Rajendra Bhat K
  • ರಾಜೇಂದ್ರ ಭಟ್ ಕೆ.

ಪ್ರಸಿದ್ಧ ವಿಜ್ಞಾನಿಯಾದ ಬೆಂಜಮಿನ್ ಫ್ರಾಂಕ್ಲಿನ್ 1750ರಲ್ಲಿ ಹೇಳಿದ ಒಂದು ಮಾತು ತುಂಬಾನೇ ಅರ್ಥಪೂರ್ಣ.

3 Things are extremely HARD to break. Steel, Diamond and Self. ಅಂದರೆ ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳುವುದು ತುಂಬಾನೇ ಕಷ್ಟ! ವಿಕಸನದ ಹಾದಿಯಲ್ಲಿ ಅದು ತುಂಬಾ ಸವಾಲಿನ ಕೆಲಸವೇ ಹೌದು. ನಮ್ಮನ್ನು ನಾವೇ ರೀಡ್ ಮಾಡಲು ಹಲವು ಮಾದರಿಗಳು ಇಂದು ಲಭ್ಯ ಇದ್ದರೂ ಅದರಲ್ಲಿ ಅತ್ಯುತ್ತಮ ಮತ್ತು ನಂಬಿಕೆಗೆ ಅರ್ಹವಾದ ಮಾದರಿ ಎಂದರೆ ಜೋಹಾರಿ ಕಿಟಕಿ (JOHARI WINDOW).

ಏನಿದು ಜೋಹಾರಿ ಕಿಟಕಿ?

1955ರಲ್ಲಿ ಜೋಸೆಫ್ ಲುಫ್ಟ್ ಮತ್ತು ಹ್ಯಾರಿ ಇಂಘಮ್ ಎಂಬ ಇಬ್ಬರು ಮನಶ್ಶಾಸ್ತ್ರಜ್ಞರು ತುಂಬಾ ಸಂಶೋಧನೆಯನ್ನು ಮಾಡಿ ಈ ಮಾದರಿಯನ್ನು ಜಗತ್ತಿನ ಮುಂದೆ ಇಟ್ಟರು. ಅವರ ಹೆಸರಿನ ಮೊದಲ ಅಕ್ಷರಗಳನ್ನು ಜೋಡಿಸಿ ಅದನ್ನು ಮುಂದೆ ಜೋಹಾರಿ ಕಿಟಕಿ ಎಂದು ಜಗತ್ತು ಕರೆಯಿತು. ಪ್ರತಿಯೊಬ್ಬ ವಿಕಸನದ ತರಬೇತುದಾರನೂ ಈ ಮಾದರಿಯನ್ನು ಒಂದಲ್ಲ ಒಂದು ಕಡೆ ಬಳಸಿಯೇ ಬಳಸಿರುತ್ತಾರೆ.

ಅದರ ಪ್ರಕಾರ ಪ್ರತೀಯೊಬ್ಬನ ವ್ಯಕ್ತಿತ್ವವನ್ನು ನಾಲ್ಕು ಪ್ರಮುಖ ವಲಯಗಳಾಗಿ (ARENA) ವಿಂಗಡಿಸಲಾಗಿದೆ. ಅವುಗಳೆಂದರೆ…….

1) OPEN ARENA (ತೆರೆದ ಕಿಟಕಿ)

ಇದು ನಮ್ಮ ಬಗ್ಗೆ ನಮಗೆ ಗೊತ್ತಿರುವ ಮತ್ತು ನಮ್ಮ ಬಗ್ಗೆ ಇತರರಿಗೆ ಕೂಡ ಗೊತ್ತಿರುವ ಸಂಗತಿಗಳ ಒಟ್ಟು ಮೊತ್ತ. ಉದಾಹರಣೆಗೆ ನನ್ನ ಹೆಸರು, ನನ್ನ ಉದ್ಯೋಗ, ನನ್ನ ಕೆಲವು ಗುಣ ವಿಶೇಷಗಳು, ನನ್ನ ಕೆಲವು ಸಾಮರ್ಥ್ಯಗಳು, ನನ್ನ ಕೆಲವು ಪರಿಮಿತಿಗಳು ನನಗೆ ಚೆನ್ನಾಗಿ ಕನ್ವಿನ್ಸ್ ಆಗಿರುತ್ತವೆ ಮತ್ತು ಇತರರಿಗೆ ಕೂಡ ಅವುಗಳು ಗೊತ್ತಿರುತ್ತವೆ. ನನ್ನ ಕೆಲವು ಆಸಕ್ತಿಗಳು, ಕೆಲವು ಪ್ರತಿಭೆಗಳು, ಕೆಲವು ವಿಶೇಷವಾದ ಸ್ವಭಾವಗಳು ನನಗೆ ಮತ್ತು ಬೇರೆ ಎಲ್ಲರಿಗೂ ಗೊತ್ತಿರುತ್ತವೆ.

ಉದಾಹರಣೆಗೆ ನೀವು ಚೆನ್ನಾಗಿ ಹಾಡುತ್ತೀರಿ, ನೀವು ಚಂದವಾದ ಚಿತ್ರ ಬರೆಯುತ್ತೀರಿ ಎಂದು ನಿಮಗೆ ಗೊತ್ತಿರುತ್ತದೆ ಮತ್ತು ಎಲ್ಲರಿಗೂ ಗೊತ್ತಿರುತ್ತದೆ. ನಿಮ್ಮ ವ್ಯಕ್ತಿತ್ವದ ವಿಕಸನದ ಹಾದಿಯಲ್ಲಿ ಈ ಕಿಟಕಿಯು ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ನಾವು ಯಾವುದನ್ನು ಚೆನ್ನಾಗಿ ಮಾಡಬಲ್ಲೆವು, ಯಾವುದು ನನ್ನಿಂದ ಮಾಡಲು ಸಾಧ್ಯ ಇಲ್ಲ ಅನ್ನುವುದು ನನಗೆ ಸರಿಯಾಗಿ ಗೊತ್ತಾದರೆ ನಮ್ಮ ವಿಕಸನದ ಬೆಳವಣಿಗೆಯು ವೇಗ ಪಡೆಯುವುದು ಖಂಡಿತ.

2) BLIND ARENA (ಕುರುಡು ಕಿಟಕಿ)

ನನ್ನ ಬಗ್ಗೆ ಎಷ್ಟೋ ಸಂಗತಿಗಳು ನನ್ನ ಗಮನಕ್ಕೆ ಬಂದಿರುವುದಿಲ್ಲ. ಆದರೆ ಬೇರೆ ಎಷ್ಟೋ ಮಂದಿಗೆ ಅವುಗಳು ಗೊತ್ತಿರುತ್ತವೆ. ಉದಾಹರಣೆಗೆ ಕಪಿಲದೇವ್ ವೇಗದ ಬೌಲಿಂಗ್ ಚೆನ್ನಾಗಿ ಮಾಡುತ್ತಾರೆ ಎಂದು ಅವರಿಗೆ ಆರಂಭದಲ್ಲಿ ಗೊತ್ತೇ ಇರಲಿಲ್ಲ. ಆದರೆ ಅವರ ಕೋಚಗೆ ಗೊತ್ತಿತ್ತು! ರಾಮಾನುಜಂ ಗಣಿತದ ಶ್ರೇಷ್ಠ ಪ್ರತಿಭೆ ಎಂದು ಸ್ವತಃ ರಾಮಾನುಜಮ್ ಅವರಿಗೆ ಆರಂಭದಲ್ಲಿ ಗೊತ್ತೇ ಇರಲಿಲ್ಲ. ಆದರೆ ಇಂಗ್ಲೆಂಡನ ಟ್ರಿನಿಟಿ ಕಾಲೇಜಿನಲ್ಲಿ ಆಗ ಗಣಿತ ಪ್ರಾಧ್ಯಾಪಕರಾಗಿದ್ದ ಹಾರ್ಡಿ ಸರ್ ಅವರಿಗೆ ಆ ಪ್ರತಿಭೆಯು ಅರಿವಿಗೆ ಬಂದಿತ್ತು. ಮುಂದೆ ಅವರು ಮೆಂಟರಿಂಗ್ ಮಾಡಿ ಆ ಪ್ರತಿಭೆಯನ್ನು ಜಗತ್ತಿಗೆ ತೋರಿಸಿದರು.

ಈ ಕಿಟಕಿಯನ್ನು ತೆರೆಯಲು ಪ್ರತಿಯೊಬ್ಬರಿಗೂ ಸೂಕ್ತವಾದ ಮೆಂಟರ್(ಗುರು)ಗಳ ಅಗತ್ಯ ಇದೆ. ವಿಶೇಷವಾಗಿ ಹದಿಹರೆಯದ ಅವಧಿಯಲ್ಲಿ ಸೂಕ್ತವಾದ ಮೆಂಟರ್ ನಮಗೆ ದೊರೆತರೂ ಅಂತಾದರೆ ವ್ಯಕ್ತಿಯ ಪ್ರತಿಭೆ ಮತ್ತು ಸಾಮರ್ಥ್ಯಗಳು ಜಗತ್ತಿಗೆ ಗೊತ್ತಾಗುವುದು ಖಂಡಿತ. ಆದ್ದರಿಂದ ಕುರುಡು ಕಿಟಕಿಯ ಅಧ್ಯಯನ ತುಂಬ ಪ್ರಾಮುಖ್ಯ.

3) HIDDEN ARENA (ಅಡಗು ಕಿಟಕಿ)

ನಮಗೆ ಮಾತ್ರ ಗೊತ್ತಿರುವ , ಆದರೆ ಬೇರೆ ಯಾರ ಗಮನಕ್ಕೂ ಬಾರದ ನನ್ನ ಬದುಕಿನ ಸಂಗತಿಗಳು ಇಲ್ಲಿ ಸ್ಥಾನ ಪಡೆಯುತ್ತವೆ. ಪ್ರತಿಯೊಬ್ಬರ ಜೀವನದಲ್ಲಿ ಹಲವು ಟಾಪ್ ಮೋಸ್ಟ್ ರಹಸ್ಯಗಳು ಅಡಗಿರುತ್ತವೆ. ಯಾರ ಬದುಕೂ ಪೂರ್ತಿಯಾಗಿ ತೆರೆದ ಪುಸ್ತಕ ಆಗಿರಲು ಸಾಧ್ಯವೇ ಇಲ್ಲ!

ಉದಾಹರಣೆಗೆ ಯಾರಾದ್ರೂ ನಿಮ್ಮ ಮೊಬೈಲ್ ನಿಮ್ಮ ಗಮನಕ್ಕೆ ಬಾರದೆ ಕೈಗೆತ್ತಿಕೊಂಡರೆ? ಯಾರಾದ್ರೂ ನಿಮ್ಮ ವ್ಯಾನಿಟಿ ಬ್ಯಾಗ್ ನಿಮ್ಮ ಅನುಮತಿ ಇಲ್ಲದೆ ಸರ್ಚ್ ಮಾಡಲು ತೊಡಗಿದರೆ? ಅಥವಾ ನಿಮ್ಮ ಬ್ಯಾಂಕ್ ಪಾಸ್ ಪುಸ್ತಕ ಕೈ ತಪ್ಪಿ ಯಾರಿಗಾದರೂ ದೊರೆಯಿತು ಅಂತಾದರೆ?…ನೀವು ಒಮ್ಮೆಗೆ ಆತಂಕ ಪಡುತ್ತೀರಿ ಅಲ್ಲವೇ? ಅಂದರೆ ಅವುಗಳಲ್ಲಿ ನಿಮ್ಮ ಜೀವನದ ಟಾಪ್ ಮೋಸ್ಟ್ ರಹಸ್ಯಗಳು ಇರಬಹುದು! ಅವುಗಳನ್ನು ನೀವು ರಹಸ್ಯವಾಗಿ ಇಡಲು ಬಯಸುತ್ತೀರಿ ತಾನೇ? ಇಂತಹ ಸಂಗತಿಗಳು ನಮ್ಮ ಜೀವನದ ಚಿದಂಬರ ರಹಸ್ಯಗಳಾಗಿ ಉಳಿಯುವುದಕ್ಕಿಂತ ತೆರೆದ ಕಿಟಕಿಗೆ ವರ್ಗಾವಣೆ ಆದರೆ ನಮ್ಮ ಎದೆಯ ಭಾರ ಕಡಿಮೆ ಆಗಿ ನಮ್ಮ ವಿಕಸನ ಆಗುವುದು ಗ್ಯಾರಂಟಿ. ಇದು ನಿಧಾನಕ್ಕೆ ನಡೆಯಬೇಕಾದ ಪರಿವರ್ತನೆ.

4) UNKNOWN ARENA (ಅಜ್ಞಾತ ಕಿಟಕಿ)

ಇದುವರೆಗೆ ನಮ್ಮ ಗಮನಕ್ಕೆ ಬಾರದಿರುವ ಹಾಗೂ ಬೇರೆಯವರ ಗಮನಕ್ಕೂ ಬಾರದಿರುವ ನೂರಾರು ಸಂಗತಿಗಳು ನಮ್ಮಲ್ಲಿ ಇವೆ. ಇವೆಲ್ಲ ನಮ್ಮ ಸುಪ್ತ ಮನಸ್ಸಿನ ಶೂಟ್ ಔಟ್ ಆಗಿರಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಉದಾಹರಣೆಗೆ ಎಷ್ಟೋ ಬಾರಿ ನಮಗೆ ಕಾರಣವೇ ಇಲ್ಲದೆ ಸಿಟ್ಟು ಬರುತ್ತದೆ! ಎಷ್ಟೋ ಬಾರಿ ನಾವು ಕಾರಣವೇ ಇಲ್ಲದೆ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತೇವೆ. ಯಾಕೆಂದು ನಮಗೇ ಗೊತ್ತಿರುವುದಿಲ್ಲ! ಎಷ್ಟೋ ಬಾರಿ ನಂಬಿಕೆಗೆ ಅರ್ಹರೇ ಅಲ್ಲ ಎಂದು ಗೊತ್ತಿದ್ದರೂ ಅವರ ಮಾತು ನಾವು ನಂಬುತ್ತೇವೆ. ಯಾಕೆಂದು ನಮಗೇ ಗೊತ್ತಿರುವುದಿಲ್ಲ! ಇಂತಹ ಕೌತುಕದ ಸಂಗತಿಗಳು ಈ ಅಜ್ಞಾತ ಕಿಟಕಿಯ ಭಾಗವಾಗಿರುತ್ತವೆ.

ಜೋಹಾರಿ ಕಿಟಕಿಯ ಅಧ್ಯಯನದ ಒಟ್ಟು ತಾತ್ಪರ್ಯ

೧) ನಮ್ಮ ವಿಕಸನ ಅಥವಾ ಬೆಳವಣಿಗೆ ಆಗಬೇಕು ಅಂತಾದರೆ ನಮ್ಮ ತೆರೆದ ಕಿಟಕಿಯು ದಿನದಿಂದ ದಿನಕ್ಕೆ ಅಗಲ ಆಗ್ತಾ ಹೋಗಬೇಕು.

೨) ಒಳ್ಳೆಯ ಗುರುಗಳು (ಮೆಂಟರ್) ದೊರೆತು ನಮ್ಮ ಕುರುಡು ಕಿಟಕಿ ತೆರೆಯುತ್ತ ಹೋಗಬೇಕು. ನಮ್ಮ ಗಮನಕ್ಕೆ ಇನ್ನೂ ಬಾರದಿರುವ ನಮ್ಮ ನೂರಾರು ಪ್ರತಿಭೆಗಳು, ಸಾಮರ್ಥ್ಯಗಳು, ಕೌಶಲಗಳು ನಮಗೆ ಗೊತ್ತಾದರೆ, ಅವುಗಳಿಗೆ ಸೂಕ್ತ ತರಬೇತಿ ಮತ್ತು ವೇದಿಕೆಗಳು ದೊರೆಯುತ್ತ ಹೋದರೆ ನಾವು ಇನ್ನೂ ಶಕ್ತಿಶಾಲಿ ಆಗುತ್ತೇವೆ.

೩) ನಮ್ಮ ಜೀವನವು ತೆರೆದ ಪುಸ್ತಕ ಆಗಬೇಕು ಅಂತಾದರೆ ನಮ್ಮ ಅಡಗು ಕಿಟಕಿ ತೆರೆಯುತ್ತಾ ಅಲ್ಲಿದ್ದ ಸಂಗತಿಗಳು ಕೂಡ ತೆರೆದ ಕಿಟಕಿಗೆ ವರ್ಗಾವಣೆ ಆಗಬೇಕು.

೪) ನಾವು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟ ಹತ್ತಾರು ರಹಸ್ಯಗಳು ನಮಗೆ ಒತ್ತಡವನ್ನು ಕೊಡುತ್ತ
ನಮ್ಮ ನಿದ್ದೆಯನ್ನು ಕಸಿಯುತ್ತವೆ. ಅವುಗಳನ್ನು ನಮ್ಮ ಆತ್ಮೀಯರ ಜೊತೆಗೆ ಹಂಚಿಕೊಳ್ಳಲು ಆರಂಭಿಸಿ ಎದೆಯ ಭಾರ ಇಳಿಸಿ ನಿರಾತಂಕ ಆಗಿ ಬದುಕಬೇಕು ಅಲ್ವಾ?

೫) ನಮ್ಮ ಅಜ್ಞಾತ ವಲಯದಲ್ಲಿ ನಡೆದ ಅಥವಾ ನಡೆಯುತ್ತಿರುವ ಘಟನೆಗಳ ಬಗ್ಗೆ ಒಂದು ಶಕ್ತಿಶಾಲಿ ಅವಲೋಕನವು ನಮ್ಮಿಂದಲೇ ನಡೆಯಬೇಕು. ಅಥವಾ ಕೌನ್ಸೆಲಿಂಗ್ ನೆರವು ಪಡೆಯಬೇಕು. ಆಗ ನಮಗೆ ನಮ್ಮ ಒಳಗಿನ ಅನೇಕ ಕುತೂಹಲದ ಸಂಗತಿಗಳು ನಮ್ಮ ಗಮನಕ್ಕೆ ಬರುತ್ತವೆ ಮತ್ತು ನಾವು ಇನ್ನಷ್ಟೂ ಬಲಿಷ್ಟ ಆಗುತ್ತೇವೆ.

ಭರತ ವಾಕ್ಯ

ವಿಕಸನದ ಅತ್ಯುತ್ತಮವಾದ ಈ ಮಾದರಿಯನ್ನು ಜಗತ್ತಿಗೆ ನೀಡಿದ ಆ ಇಬ್ಬರು ಮನಶ್ಶಾಸ್ತ್ರಜ್ಞರಿಗೆ ಧನ್ಯವಾದ ಹೇಳೋಣ. ಹಾಗೆಯೇ ನಮ್ಮ ವಿಕಸನದ ಹಾದಿಯಲ್ಲಿ ಆತ್ಮವಿಶ್ವಾಸದಿಂದ ಮುಂದಡಿ ಇಡೋಣ.

ಇದನ್ನೂ ಓದಿ: Vidya Balan: ಸ್ಫೂರ್ತಿಪಥ ಅಂಕಣ: ‘ಬೆಂಕಿಯಲ್ಲಿ ಅರಳಿದ ಹೂವು’ ಬಾಲಿವುಡ್ ನಟಿ ವಿದ್ಯಾ ಬಾಲನ್