Friday, 20th September 2024

ಶ್ರೀ ಮಧ್ವರ ನೆನಪುಗಳೆಂಬ ಐತಿಹಾಸಿಕ ನಿಧಿಗಳು

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ನೆನಪುಗಳು, ಕನಸುಗಳು ಭಾವನಾ ಜೀವಿಗಳ ಆಸ್ತಿ. ಬಾಲ್ಯದ ನೆನಪುಗಳಂತೂ ಕಲ್ಲು ಸಕ್ಕರೆಯಂತಹ ರುಚಿ ನೀಡುವಂಥಹವುಗಳು. ಯೌವ್ವನದಲ್ಲಿ ಬಾಲ್ಯದ ನೆನಪು, ಇಳಿವಯಸ್ಸಿನಲ್ಲಿ ಯೌವ್ವನದ ನೆನಪು, ಒಂಟಿಯಾಗಿ ಕುಳಿತಾಗ, ಕುಳಿರ್ಗಾಳಿಗೆ ಮುಖ, ಮೈ ಕೊಟ್ಟಾಗ, ಅದ್ಭುತವಾದ ವಾದ್ಯಸಂಗೀತವನ್ನೋ, ಯಾರದಾದರೂ ಗಾಯನವನ್ನೋ ಕೇಳಿದಾಗಲೋ ಮೈ ಮರೆಯುವಂತಾಗಿ ಯಾವುದೋ ನೆನಪು ಬಂದು ಬಂದು ಹೋಗುತ್ತಿರುತ್ತದೆ.

ಹಸುಗೂಸುಗಳು ತೊಟ್ಟಿಲಲ್ಲಿ ಮಲಗಿ ಢನಿದ್ದೆಯಲ್ಲಿರುವಾಗ ಒಮ್ಮೊಮ್ಮೆ ಮುಗುಳ್ನಗುತ್ತಿರುತ್ತವೆ, ಒಮ್ಮೊಮ್ಮೆ ಅಳುತ್ತಿರುತ್ತವೆ. ಆದರೆ, ಅವಕ್ಕೆ ಎಚ್ಚರವಿರುವುದಿಲ್ಲ, ಹಾಗೆ ನಾನು ಆ ಕೂಸುಗಳನ್ನು ನೋಡುತ್ತಾ ಕುಳಿತಿದ್ದಾಗ ನಮ್ಮಜ್ಜಿ ಅಂಬಕ್ಕ, ಹೋದ ಜನ್ಮದ ನೆನಪು ಅವಕ್ಕೆ. ಬಿಟ್ಟು ಬಂದವರನ್ನ ನೆನಪಿಸಿಕೊಂಡು ಹೀಗೆ ಅಳೋದು, ನಗೋದು ಮಾಡ್ತವೆ ಎಂದು ಹೇಳುತ್ತಿದ್ದಳು. ಸಿಹಿ ನೆನಪುಗಳಷ್ಟು ಮುದಕೊಡುವ ವಸ್ತುಗಳು ಪ್ರಪಂಚದಲ್ಲೇ ಇಲ್ಲ. ನಮ್ಮ ಮನೆಯಲ್ಲಿ ಎಲ್ಲರೂ ಸೇರಿದೆವೆಂದರೆ ಹಳೆಯ ಬ್ಲಾಕ್ ಆಂಡ್ ವೈಟ್ ಸಿನಿಮಾ ನೋಡುತ್ತೇವೆ.

ಇಲ್ಲವೇ ಹಳೆ ಬಾಲ್ಯದ ಬಡತನದ ಎರಡೇ ಕೋಣೆಯ ಮನೆ ಯಲ್ಲಿನ ಜೀವನ ನೆನೆಸಿಕೊಂಡು ಸಿಹಿ-ಕಹಿ, ಸುಖ-ದುಃಖದ ಸಮ್ಮಿಶ್ರ ಭಾವನೆಗಳನ್ನು ಅನುಭವಿಸು ತ್ತಿರುತ್ತೇವೆ. ನಮ್ಮ ಬಂಧುಗಳೆಲ್ಲ ನಮಗೆ “ಬಲು ಹಳೇದು ನೆನಪಿಸಿಕೊಂಡು ಕಾಲ ಕಳೀತೀರಪಾ ನೀವೆಲ್ಲ, ಅದರಿಂದ ಏನು ಬರುತ್ತದೋ ಭಾಗ್ಯ ನಿಮಗೆ” ಎಂದೇ ಆಕ್ಷೇಪಿಸುತ್ತಿರುತ್ತಾರೆ. ನನ್ನದಂತೂ ತೀರಾ ಭಾವುಕ ಮನಸು. ಬಲುಬೇಗ ವಶವಾಗಿ ಬಿಡುತ್ತೇನೆ. ವಶಪಡಿಸಿ ಕೊಂಡವರು ನನ್ನನ್ನು ಶವವನ್ನಾಗಿ ಮಾಡಿದ ಉದಾಹರಣೆಗಳೂ ಇವೆ. ನಾನು ಈಗಲೂ ಬಿಡುವಿದ್ದಾಗ ನನ್ನೂರು ಗಂಗಾವತಿಯ ನಾನು ಓದಿದ ಶಾಲೆ, ಕಾಲೇಜು, ಬಾಲ್ಯ, ಯೌವ್ವನಗಳಲ್ಲಿ ಹೋಗುತ್ತಿದ್ದ ಗುಡಿ, ಮಠ, ಗುಡ್ಡ, ಕೆರೆ, ಹಳ್ಳ, ಹೊಲಗದ್ದೆ, ವಡ್ಡರಹಟ್ಟಿ ಎಂಬ ತೋಟಗಾರಿಕೆಯ ಇಲಾಖೆಯ ತೋಟಗಳಿಗೆ ಹೋಗುತ್ತಿರುತ್ತೇನೆ.

ಅವೆಲ್ಲ ಮಾರ್ಪಾಡು ಹೊಂದಿವೆ. ತೀರಾ ಶಿಥಿಲವಾಗಿವೆ. ಹೊಲಗದ್ದೆ, ತೋಟಗಳಿದ್ದ ಭೂಭಾಗಗಳೆಲ್ಲ ಸೈಟುಗಳಾಗಿ, ದೊಡ್ಡ ದೊಡ್ಡ ಕಟ್ಟಡಗಳೆದ್ದಿವೆ. ಸಂಜೆ ಯಾದರೆ ಹೋಗಲು ಅಂಜುತ್ತಿದ್ದ ಕೆಲವು ಭಾಗಗಳಲ್ಲಿ ಹೋಟಲ್, ಬಾರ್, ರೆಸ್ಟೋರೆಂಟ್‌ಗಳಾಗಿ ಹಗಲು, ರಾತ್ರಿಗಳ ವ್ಯತ್ಯಾಸವಿಲ್ಲದೇ ಜನಸಂದಣಿ, ಬೆಳಕು, ಆಕರ್ಷಣೆ ಕಾಣುತ್ತಿದ್ದರೂ ನನ್ನ ಭಾವುಕ ಮನಸು, ಮುನಿಯನ ಮಾದರಿ ಎಂಬ ಕನ್ನಡ ಸಿನಿಮಾದ ಇಂದಿಗಿಂತ ಅಂದೆನೇ ಚೆಂದವು, ಎಂಥ ಸೊಗಸು ಆ ನಮ್ಮ ಕಾಲವು, ಅಂಥ ವಯಸ್ಸು ಅಂಥ ಮನಸ್ಸು ಬಾರದು ಬಯಸಲು, ದೊರಕದು ಬೇಡಲು” ಎಂಬ ಎಂಭತ್ತರ ದಶಕದ ಹಾಡು ನೆನಪಾಗುತ್ತದೆ.

ಅಂದಿನ ಹಿರಿಯರೆಲ್ಲ ಕಣ್ಮರೆಯಾಗಿ ಹೋಗಿದ್ದಾರೆ, ಸಮವಯಸ್ಕರೆಲ್ಲ ಎಲ್ಲೆಲ್ಲಿದ್ದಾರೊ? ಹುಡುಗರೆಲ್ಲ ಈಗ ತಂದೆ, ತಾತ ಆಗಿದ್ದಾರೆ. ಆಗಿನ ಚೆಲುವೆಯರಾಗಿದ್ದ ಹುಡುಗಿಯರೆಲ್ಲ ಈಗ ಅಮ್ಮ, ಅಜ್ಜಿಯರಾಗಿದ್ದಾರೆ. ಕಾಲವೆಂಬುದು ರೋಡ್‌ರೂಲರ್, ದಿನ್ನೆ, ದಿಬ್ಬಗಳನ್ನು ಸಮ ಮಾಡುತ್ತದೆ. ಸಮ ಇದ್ದವುಗಳೆಲ್ಲ ನೆಲದೊಳಗೆ ಇದ್ದವೆನೋ ಎನ್ನುವಂತೆ ಎದ್ದು ನಿಂತಿವೆ. ಎಷ್ಟು ಬೇಗ ಬಾಲ್ಯ, ಯೌವನ ಕಳೆದು ಹೋಯಿತಲ್ಲ ಎಂದು ವಟಗುಟ್ಟುತ್ತಲೇ ವೃದ್ಧರಾಗಿಬಿಟ್ಟೆವು.

ಏಕೆ ಈ ಗತ ನೆನಪುಗಳ ವಿಷಯ ಈ ವಾರ ಬರೆದೆನೆಂದರೆ, ಸಂಸ್ಕೃತದಲ್ಲಿ ಶ್ರೀ ನಾರಾಯಣ ಪಂಡಿತಾಚಾರ್ಯರು ಬರೆದ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟಿರುವ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರ “ಸುಮಧ್ವ ವಿಜಯ” ಎಂಬ ಏಳುನೂರಾ ಐವತ್ತು ಪುಟಗಳ ಗ್ರಂಥ ವನ್ನು ನಾಲ್ಕು ದಿನಗಳ ಕಾಲ ಪಟ್ಟಾಗಿ ಕುಳಿತು ಓದಿದೆ. ಶ್ರೀ ಮಧ್ವಾಚಾರ್ಯರು (ಕ್ರಿ.ಶ 1200-1280) ಜಗತ್ತು ಕಂಡ ಅಪ್ರತಿಮ ತತ್ವಜ್ಞಾನಿಗಳು ಮಾತ್ರವಲ್ಲ ಶ್ರೀರಾಮನ ತ್ರೇತಾ
ಯುಗದಲ್ಲಿ ಆಂಜನೇಯನಾಗಿ, ದ್ವಾಪರಯುಗದಲ್ಲಿ ಪಾಂಡವರಲ್ಲಿ ಭೀಮಸೇನನಾಗಿ, ಈ ಕಲಿಯುಗದಲ್ಲಿ ಮಧ್ವಾಚಾರ್ಯರಾಗಿ ಅವತರಿಸಿದವರು.

ನಮ್ಮ ಕರ್ನಟಕದ ಪುಣ್ಯವೋ ಎಂಬಂತೆ ನಮ್ಮ ಉಡುಪಿಯ ಬಳಿಯ ಪಾಜಕ ಎಂಬ ಚಿಕ್ಕ ಹಳ್ಳಿಯಲ್ಲಿ ಜನಿಸಿದರು. ಸಂಚರಿಸಿದ್ದು ಮಾತ್ರ ಅಸೇತು ಹಿಮಾಲಯ ಪರ್ಯಂತ, ಬರೆದದ್ದು ಸಕಲ ಶಾಸ್ತ್ರಗಳ ಸಾರರೂಪವಾದ ಸರ್ವ ಮೂಲ ಗ್ರಂಥಗಳನ್ನು. ಸ್ಥಾಪಿಸಿದ್ದು ಒಂಭತ್ತು ಪೀಠಗಳನ್ನು, ಸಶರೀರವಾಗಿಯೇ ಉಡುಪಿಯಲ್ಲಿ ಅದೃಶ್ಯರಾಗಿ ಉತ್ತರಬದರಿಯ ವೇದವ್ಯಾಸರ ಸನ್ನಿಧಿಯಲ್ಲಿ ಇಂದಿಗೂ ನೆಲೆಸಿರುವವರು. ಕೇವಲ ಐವತ್ತು ಅರವತ್ತು ವರ್ಷಗಳ ನಮ್ಮ ನೆನಪುಗಳು, ಹೊಟ್ಟೆ ಪಾಡಿಗೆ ಸುತ್ತಿದ ಊರುಗಳು, ಬಸ್ಸು, ಕಾರು, ವಿಮಾನಗಳಲ್ಲೇ ಸುತ್ತಾಡಿ, ಕಾಲಕಾಲಕ್ಕೆ ಕಂಡಕಂಡಲ್ಲಿ ಸಿಕ್ಕದ್ದು ತಿಂದು, ಕುಡಿದು, ಎಲ್ಲರಿಗೂ ಗೊತ್ತಿರುವು ದನ್ನೇ ಸ್ವಲ್ಪ ಎತ್ತರದಲ್ಲಿ ನಿಂತು ಹೇಳಿ, ತಾಸೆರೆಡು ತಾಸು ಜನರನ್ನು ನಗಿಸಿದ್ದು ಬಿಟ್ಟರೆ, ಬೇರೇನೂ ನಾವು ಮಾಡಿಲ್ಲ, ಹಾಗೆ ತಿರುಗಾಡಿದ್ದನ್ನೇ ಬರೆದ ಪುಸ್ತಕಗಳೇ ನಮ್ಮ ಗ್ರಂಥಗಳು.

ನಾವು ಹೇಳಿಬಂದಿದ್ದನ್ನು ಕೇಳಿ ಉದ್ಧಾರವಾದವರೂ ಇಲ್ಲ, ಊರೂರು ಸುತ್ತಿದ ನಾವೂ ಸುಧಾರಣೆಯಾದ ಉದಾಹರಣೆಯೂ ಇಲ್ಲ, ನಮ್ಮ ದಾಖಲೆಗಳೆಂದರೆ ತೆಗೆಸಿಕೊಂಡ ಫೋಟೊಗಳು, ಸೆಲ್ಫಿಳು, ಇಷ್ಟಕ್ಕೇ “ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ” ಎಂದು ಹಾಡುತ್ತೇವೆ. ಆದರೆ ಮಧ್ವಾಚಾರ್ಯರು ನಮ್ಮಂತೆ ಭಾವುಕರಾಗಿ ನೆನೆಸಿಕೊಂಡರೆ ಅವರದೆಂತಹ ಅದ್ಭುತ ಜೀವನ, ಏಕೆಂದರೆ ರಾಮಾಯಣ, ಮಹಾಭಾರತಗಳು ನಡೆದೇ ಇಲ್ಲ, ರಾಮ, ಕೃಷ್ಣ ಎಂಬುವರು ಇಲ್ಲವೇ ಇಲ್ಲ ಎಂಬ ಜನ ಮುಂದೆ ಬರುತ್ತಾರೆಂದು ತಿಳಿದೋ ಏನೋ ಮಧ್ವಾಚಾರ್ಯರು ಮತ್ತೆ ಜನ್ಮವೆತ್ತಿ, ಸಾಕ್ಷ್ಯಗಳ ಸಮೇತ ಅವನ್ನು ಕಲಿಯುಗದ ಜನರಿಗೆ ತೋರಿಸಿದರು.

ಮೂವತ್ತೆರೆಡು ಸಲ್ಲಕ್ಷಣಗಳುಳ್ಳ ದೇಹ ಧರಿಸಿ ಬಂದ ಮಧ್ವಾಚಾರ್ಯರು ತಮ್ಮ ವಿದ್ಯೆ, ತೇಜಸ್ಸು, ಬಲ, ಜ್ಞಾನ, ಪವಾಡಗಳ ಮೂಲಕವೂ ಸಾರಿ ತೋರಿಸಿದರು. ತಾವು ತ್ರೇತಾಯುಗದ ಹನುಮನೆಂಬುವುದನ್ನು ಕೊರೆಯುವ ಹಿಮಾಲಯದ ಚಳಿ ಪ್ರದೇಶಗಳಲ್ಲಿ ಮಂಜುಗಡ್ಡೆಯ ಗುಡ್ಡಗಳ ಮೇಲೆ ನಡೆಯುತ್ತಾ ಹೋಗಿ
ಉತ್ತರ ಬದಿಯಯಲ್ಲಿದ್ದ ವೇದವ್ಯಾಸರನ್ನು ದರ್ಶಿಸಿ, ಅಷ್ಟೇ ವೇಗವಾಗಿ ಮತ್ತೆ ಪಾಮರರನ್ನು ಉದ್ಧರಿಸಲು ಭೂಮಿಗೆ ಬಂದು, ಮಧ್ವ ತತ್ವ ಜ್ಞಾನದ ಮೂಲಕ ಶಿಷ್ಯರಿಗೆ ಪಾಠ ಪ್ರವಚನಗಳನ್ನು ನೀಡಿದರು.

ಬಂಡಿ ಅನ್ನವನು ಉಂಡ ಬಕಾಸುರನಿಗಿಂತಲೂ ನಾನು ಹೆಚ್ಚು ಬಲಶಾಲಿ ಎಂಬುದನ್ನು ತೋರಿಸಲು ಭೀಮಸೇನನ ಅವತಾರಗಳಲ್ಲಿ ಅವನ ಪಾಲಿನ ಬಂಡಿ ಅನ್ನವನುಂಡು ಅವನನ್ನು ರೇಗಿಸಿ, ನೆಲಕ್ಕಪ್ಪಳಿಸಿ ಕೊಂದು ಏಕಚಕ್ರ ನಗರದ ಜನರನ್ನು ಅವನ ಪೀಡೆಯಿಂದ ಮುಕ್ತಗೊಳಿಸಿದವರು. ನಾನು ಭೀಮಸೇನನ ಅವತಾರ ಎಂದು ನಂಬದೇ ಕುಹಕ ವಾಡಿದ ಕಲಿಯುಗದ ಜನರಿಗೆ ಮಧ್ವನ ಅವತಾರಗಳಲ್ಲಿ ಪರಶುರಾಮ ಕ್ಷೇತ್ರವಾದ ಇಷುಪಾತವೆಂಬ ಸ್ಥಳದಲ್ಲಿ ರಾಜಕೇಲಿ ಎಂಬ ದೊಡ್ಡ ಗಾತ್ರದ, ಸಾವಿರ ಸಂಖ್ಯೆಯಲ್ಲಿ ಬಾಳೆಹಣ್ಣುಗಳನ್ನು ತಿಂದರು. ಇದನ್ನು ತಿಳಿದ ಶಂಕರ ಎಂಬ ಬ್ರಾಹ್ಮಣ ಸವಾಲು ಹಾಕಿದ್ದಕ್ಕಾಗಿ ಆ ಕಾಲದ ಗೋವೆ ಎಂಬ ಪ್ರದೇಶದಲ್ಲಿ (ಈಗಿನ ಗೋವಾ ಅಲ್ಲ) ನಾಲ್ಕು ಸಾವಿರ ಬಾಳೆಹಣ್ಣು ತಿಂದು, ಮೂವತ್ತು ಕೊಡ ಹಾಲು ಕುಡಿದರು.

ಇಷ್ಟು ಸೇವಿಸಿದರೂ ಅವರ ಹೊಟ್ಟೆ ಒಂದು ಇಂಚುಕೂಡಾ ಉಬ್ಬಿರಲಿಲ್ಲವಂತೆ. ಇವರನ್ನು ತಡೆದು ಹಿಡಿದಿಡಲು ನೋಡಿದ ಅಲ್ಲಿನ ರಾಜ ಹಾಗೂ ಅವನ ಭಟರಿಗೆ ಕಾಣದಂತೆ ಅದೃಶ್ಯರಾಗಿ ಅವರಿಗೆ ಭಯ ಹುಟ್ಟಿಸಿದರಂತೆ. ಇಷ್ಟಾದರೂ ನಂಬದ ಕೆಲವು ಕುಹಕಿಗಳ ಮಾತಿಗಾಗಿ, ಕುರುಕ್ಷೇತ್ರದ ಬಯಲಿನಲ್ಲಿ ಒಂದೆಡೆ ನೆಲವನ್ನು ಅಗೆಯಲು ಹೇಳಿ, ಅಲ್ಲಿದ್ದ ತಮ್ಮ ಕುರುಕ್ಷೇತ್ರ ಮಹಾ ಸಂಗ್ರಾಮದಲ್ಲಿ ಹಿಡಿದು ಶತ್ರುನಾಶ ಮಾಡಿದ ಸುವರ್ಣ ಖಚಿತ ಗದೆಯನ್ನು ತೋರಿಸಿದರಂತೆ. ಪಶುಪೆ ಎಂಬ ಊರಲ್ಲಿ ಬರಗಾಲ ಬಂದು ಅಲ್ಲಿನ ಅಡಿಕೆ ಹಾಗೂ ಇತರ ಗಿಡಗಳಲ್ಲಿ ಫಲ, ಪುಷ್ಪಗಳೇ ಇರದೇ ಬಡಕಲಾಗಿದ್ದವಂತೆ.

ಅಲ್ಲಿನ ಜನರ ಅಪೇಕ್ಷೆಯಂತೆ ಶ್ರೀ ಮಧ್ವಾಚಾರ್ಯರು ತಮ್ಮ ಅನುಪಮವಾದ ಗಾನ ಸಂಪತ್ತಿನಿಂದ ಹಾಡುವುದರ ಮೂಲಕ ಅಡಿಕೆ ಹಾಗೂ ಇತರ ಮರಗಳಲ್ಲಿ ಫಲಪುಷ್ಪಗಳನ್ನು ಮೂಡಿಸಿದರಂತೆ, ಇದರಿಂದ ಅವರು ಸಕಲವಿದ್ಯಾ ಪಾರಂಗತರು, ಜೊತೆಗೆ ಲೋಕಕಾರುಣ್ಯವುಳ್ಳ ವ್ಯಕ್ತಿಯಾಗಿದ್ದರು ಎಂಬುದು ಸುಸ್ಪಷ್ಟ.
ಅಲ್ಲಿನ ಜನರ ಬೇಡಿಕೆಯನ್ನು ಮನ್ನಿಸಲು ಗಾನಶಾಸವನ್ನೂ ಬರೆದು ಗಾನಲೋಕಕ್ಕೂ ತಮ್ಮ ಕಾಣಿಕೆ ನೀಡಿದರೆಂದು ಭಾವಪ್ರಕಾಶ ಎಂಬ ಗ್ರಂಥದಲ್ಲಿ ಉಲ್ಲೇಖ ವಿದೆ. ಆದರೆ, ದುರ್ದೈವಶಾತ್ ಆ ಕೃತಿ ಉಪಲಬ್ದವಿಲ್ಲ, ಪ್ರಾಯಶಃ ಪಂಡಿತರ ಊಹೆಯಂತೆ ಅದು ಶ್ರೀ ಪುರಂದರದಾಸರಂತಹ ಮಹನೀಯರಿಗೆ ದೊರೆತಿರಬಹು ದಾದ ಸಾಧ್ಯತೆಯನ್ನು ಊಹಿಸಿದ್ದಾರೆ. ಅದರಿಂದಲೇ ಪುರಂದರದಾಸರು ಸಂಗೀತ ಲೋಕದಲ್ಲಿ ಹೊಸ ಕ್ರಾಂತಿ ಮಾಡಿದರು.

ಕರ್ನಾಟಕ ಸಂಗೀತ ಪಿತಾಮಹ ಎಂಬ ಖ್ಯಾತಿಗೆ ಪಾತ್ರರಾದರು ಎನ್ನುವ ಅಭಿಪ್ರಾಯವಿದೆ. ಹೀಗಾಗಿದ್ದಲ್ಲಿ ಶ್ರೀ ಮಧ್ವಾಚಾರ್ಯರು ಕರ್ನಾಟಕ ಸಂಗೀತ ಪ್ರಪಿ ತಾಮಹರು ಎಂಬ ಹಿರಿಮೆಗೂ ಪಾತ್ರರಾದರು. ಮತ್ತೊಂದು ಪ್ರಸಂಗದಲ್ಲಿ ಒಂದೂರಿನ ಒಬ್ಬರಾಜ ತನ್ನೂರಿನ ರಸ್ತೆ ಕಾಮಗಾರಿಗಳನ್ನು ತನ್ನ ಊರಿನ ಮೇಲೆ
ಹಾಯ್ದು ಹೋಗುವ ಜನರಿಂದಲೇ ಮಾಡಿಸುತ್ತಿದ್ದ. ಹಾಗೆ ಮಧ್ವಾಚಾರ್ಯರು ತಮ್ಮ ಶಿಷ್ಯರೊಂದಿಗೆ ಆ ಊರ ಮುಖಾಂತರ ಹೋಗುವಾಗ ದಷ್ಟಪುಷ್ಟವಾಗಿದ್ದ ಮಧ್ವಾಚಾರ್ಯರಿಗೆ ಕೈಗೆ ಗುದ್ದಲಿ, ಸಲಿಕೆ ಕೊಟ್ಟು ನೆಲ ಅಗೆಯಲು ಆಜ್ಞಾಪಿಸಿದ.

ಅವನ ಧಾರ್ಷ್ಟ್ಯ ಕಂಡ ಮಧ್ವರು “ನಾವು ಯತಿಗಳು ಸಲಿಕೆ, ಗುದ್ದಲಿಗಳನ್ನು ಹೇಗೆ ಉಪಯೋಗಿಸಬೇಕೆಂಬುದು ಗೊತ್ತಿಲ್ಲ, ನೀನೊಮ್ಮೆ ಅಗೆದು ತೋರಿಸು
ಅದರಂತೆ ಮಾಡುತ್ತೇನೆಂದರು.” ಆ ರಾಜ ಅವರಿಗೆ ಅಗೆಯುವುದನ್ನು ತೋರಿಸಲು ಗುದ್ದಲಿ ಹಿಡಿದದ್ದೆ ಬಂತು, ಸಮ್ಮೋಹಿನಿಗೆ ಒಳಗಾದವನಂತೆ ಇಡೀ ನೆಲವನ್ನೆಲ್ಲ ಅಗೆಯಲು ಶುರು ಮಾಡಿ ಸಂಜೆ ಸೂರ್ಯ ಮುಳುಗುವವರೆಗೂ ನೆಲ ಅಗೆಯುತ್ತಲೇ ಹೋಗಿ ದಣಿ ದಣಿದು ಸ್ಮತಿ ತಪ್ಪಿ ಬಿದ್ದ, ಅವನ ಜನ ಎಬ್ಬಿಸಿದ ಮೇಲೆ ಎದ್ದು, ತನ್ನ ಅಕಾರ್ಯಕ್ಕಾಗಿ ಶ್ರೀ ಮಧ್ವರನ್ನು ಕ್ಷಮೆ ಬೇಡಿ, ಗೌರವದಿಂದ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟ.

ದೈವಿ ಪುರುಷರು ಎಂದು ಗುರುತಿಸಲು ದೇಹದಲ್ಲಿ ಮೂವತ್ತೆರೆಡು ಲಕ್ಷಣಗಳಿರಬೇಕೆಂದು ಶಾಹೇಳುತ್ತದೆ. ಅಂಥ ಲಕ್ಷಣಗಳು ಶ್ರೀ ಮಧ್ವರಿಗೆ ಇದ್ದವು.
ಅವು ಯಾವುವು? ಗುರುತಿಸುವ ಪರಿ ಯಾವುದು? ವಿವರ ಹೀಗಿದೆ. ಭುಜ, ಕಣ್ಣು, ಗಲ್ಲ, ಜಾನು ಮತ್ತು ಮೂಗು-ಈ ಐದು ದೀರ್ಘವಾಗಿರಬೇಕು. ಚರ್ಮ, ಕೇಶ, ಬೆರಳು, ದಂತ ಮತ್ತು ಅಂಗುಲಿಪರ್ವ-ಈ ಐದು ಸೂಕ್ಷ್ಮವಾಗಿರಬೇಕು. ಅಂಗೈ, ಅಂಗಾಲು, ಕಣ್ಣುಗಳ ತುದಿ, ನಾಲಿಗೆ, ಕೆಳದುಟಿ, ಉಗುರು-ಇವು ಕೆಂಪಾಗಿರ ಬೇಕು. ಎದೆ, ಎದೆಗೂಡು, ಅಲಕ, ಭುಜ, ಕೈ, ಮುಖ-ಈ ಆರು ಉಬ್ಬಿರಬೇಕು. ಹಣೆ, ಎದೆ, ಸೊಂಟ-ಈ ಮೂರು ವಿಶಾಲವಾಗಿರಬೇಕು. ಜಂಘೆ, ಕತ್ತು, ಮೇಹನ-ಈ ಮೂರು ಚಿಕ್ಕದಿರಬೇಕು.

ಸ್ವರ, ನಾಭಿ ಮತ್ತು ಸತ್ವ-ಈ ಮೂರೂ ಗಂಭೀರವಾಗಿರಬೇಕು. ಇಂತಹ ಮಧ್ವರ ಚರಿತ್ರೆಯನ್ನು ಓದಿದಾಗ, ನೆನಪುಗಳೆಂದರೆ ಇವು, ಸಾಧನೆ ಎಂದರೆ ಇದು ಎನಿಸಿತು. ಎಂಥೆಂಥ ಮಹಾಮಹಿಮರಾಗಿ ಹೋಗಿದ್ದಾರೆ. ಇಂಥಹವರ ಚರಿತ್ರೆ ಗಳನ್ನು ಓದುವುದರ ಮೂಲಕ ಯುವ ಜನತೆ ಧರ್ಮ, ಸಂಸ್ಕೃತಿಗಳ ಉಳಿವಿಗಾಗಿ ಪ್ರತಿಜ್ಞೆ ತೊಡಬೇಕಿದೆ. ನಮ್ಮ ಶಾಲಾ ಪುಸ್ತಕ ತೆರೆದರೆ ಬಾಬರ್, ಅಕ್ಬರ್, ಖಿಲ್ಜಿ, ಶಹಜ ಹಾನ್, ಔರಂಗಜೇಬ್, ಕಾಲ್ ಮಾರ್ಕ್ಸ್‌ಗಳನ್ನು ಓದುವ ನಾವು, ನಮ್ಮ ಮಕ್ಕಳು, ಬರೀ ದಾಳಿ, ದೊಂಬಿ, ಆಕ್ರಮಣ, ಕೊಲೆ, ಮೋಸ, ಅನ್ಯಾಯಗಳಿಂದಲೇ ಹೆಸರು ಮಾಡುವವರಾಗಿದ್ದೇವೆ.

ಸಂತರ, ಸಾಧುಗಳ, ಜ್ಞಾನಿಗಳ ಚರಿತ್ರೆಯನ್ನು ಮನೆಗಳಲ್ಲಾದರೂ ಮಕ್ಕಳು, ಯುವಕರು ಓದುವಂತಾಗಬೇಕು. ಕೇವಲ ಐವತ್ತು, ಅರವತ್ತು ವರ್ಷಗಳ ನಮ್ಮ ಜೀವನ ನೆನಪುಗಳನ್ನೇ ನಾವು ಸಿಹಿ ನೆನಪುಗಳೆಂದು ಭಾವಿಸುತ್ತೇವೆ. ನಮ್ಮ ನೆನಪುಗಳು ಇತ್ತ ಇತಿಹಾಸವೂ ಅಲ್ಲ, ಮುಂದಿನವರಿಗೆ ನಿಧಿಯೂ ಅಲ್ಲ, ಆದರೆ ಶ್ರೀಮಧ್ವರಂತವರ ನೆನಪುಗಳು ಜನ್ಮಾಂತರದವು. ಐತಿಹಾಸಿಕ ನಿಧಿಗಳು.